ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿಯ ಹೆಜ್ಜೆ ಜಾಡು ಹುಡುಕುತ್ತಾ....

By Staff
|
Google Oneindia Kannada News
ಆಗಷ್ಟೇ ಕಳಚಿಬಿದ್ದಂತೆ ಕಾಣುವ ಮುಂಜಾನೆ. ತೆರೆಯಿಲ್ಲದ ಕೆರೆಯ ಮೇಲಿಂದ ಏಳುತ್ತಿರುವ ಚುಮುಚುಮು ಮಂಜಿನ ಮೋಡ, ಬರೆದಿಟ್ಟಂತೆ ಕಾಣುವ ಮಣ್ಣಿನ ರಸ್ತೆ, ಮುಟ್ಟಿದರೆ ನೀರಾಗಿ ಹರಿಯುವ ಹುಲ್ಲಿನ ದಳಗಳ ಮೇಲಿನ ಹಿಮದ ಹನಿ. ಇಷ್ಟೆಲ್ಲದರ ನಡುವೆ ಅದೆಲ್ಲಿಂದ ಬಂತು ಅನ್ನುವುದೇ ತಿಳಿಯದಂತೆ ಸರ್ರನೆ ಹಾರಿ ಬಂದು ನೀರೊಳಗೆ ಧುಮುಕಿ ತನ್ನ ಬ್ರೇಕ್‌ಫಾಸ್ಟ್‌ ಮುಗಿಸಿಹೋಗುವ ಕಿಂಗ್‌ಫಿಷರ್‌.

ಒಂದು ಹಕ್ಕಿಯನ್ನು ಹತ್ತಿರದಿಂದ ನೋಡುವುದು ಎಷ್ಟು ಕಷ್ಟ ಎಂದು ತಿಳಿಯಬೇಕಾದರೆ ನೀವು ಹಕ್ಕಿಗಳನ್ನು ನೋಡುವುದಕ್ಕೆ ಶುರುಮಾಡಬೇಕು. ಮರದೊಳಗೆಲ್ಲೋ ಅಡಗಿ ಕುಳಿತು ಕೇವಲ ಸದ್ದಿನಿಂದಲೇ ತನ್ನಿರವನ್ನು ಗೊತ್ತು ಮಾಡುವ ಹಕ್ಕಿಯನ್ನು ಹುಡುಕುವುದು ಕೂಡ ಒಂದು ಕಲೆ. ಅವು ಕಣ್ಣಿಗೆ ಬೀಳುವುದು ಆ ಹಕ್ಕಿಗಳನ್ನು ಪ್ರೀತಿಸುವವರಿಗೆ ಮಾತ್ರ. ಬಿಟ್ಟರೆ ಆ ಹಕ್ಕಿಗಳನ್ನು ಹೊಡೆದು ತಿನ್ನುವವರಿಗೆ. ಅದು ಹೇಗೋ ಏನೋ ನಮ್ಮ ಕಣ್ಣಿಗೆ ಬೀಳದ ಹಕ್ಕಿಗಳೆಲ್ಲ ಹಕ್ಕಿ ಹೊಡೆಯುವವರಿಗೆ ಥಟ್ಟನೆ ಕಾಣಿಸುತ್ತವೆ. ನಗರದಲ್ಲಿರುವ ನಾವು ಸಲೀಮ್‌ ಆಲಿಯ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಹುಡುಕಹೊರಟರೆ ಒಂದೇ ಒಂದು ಹಕ್ಕಿಯೂ ಕಣ್ಣಿಗೆ ಬೀಳುವುದಿಲ್ಲ. ದೂರದಲ್ಲೆಲ್ಲೋ ಕಂಡರೆ ಅದು ಯಾವ ಹಕ್ಕಿ ಎಂದು ಗುರುತಿಸುವಷ್ಟರಲ್ಲೇ ಅದು ಹಾರಿ ಹೋಗಿರುತ್ತದೆ. ಅದಕ್ಕೇ ಇರಬೇಕು ಬೇಂದ್ರೆ ತಕರಾರೇ ಬೇಡ ಅಂತ ‘ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು’ ಅಂತ ಬರೆದದ್ದು.

Amazing world of Birds !ಕನ್ನಡ ನಾಡಿನ ಹಕ್ಕಿಗಳ ಕುರಿತು ಪೂರ್ಣಚಂದ್ರ ತೇಜಸ್ವಿ ಒಂದು ಪುಸ್ತಕ ಬರೆದಿದ್ದಾರೆ. ಶಿವರಾಮ ಕಾರಂತರೂ ಒಂದು ಪುಸ್ತಕ ಬರೆದಿದ್ದಾರಾದರೂ ಅದನ್ನು ಮರುಮುದ್ರಿಸುವಾಗ ಸಾಕಷ್ಟು ತಪ್ಪುಗಳಾಗಿವೆ ಎಂದು ಓದಿದ ನೆನಪು. ತೇಜಸ್ವಿಯವರ ಪುಸ್ತಕದಲ್ಲಿ ಹಕ್ಕಿಗಳ ಕಲರ್‌ ಫೊಟೋಗಳಿವೆ. ಹೀಗಾಗಿ ಗಮನವಿಟ್ಟು ನೋಡಿದರೆ ತೇಜಸ್ವಿ ಪುಸ್ತಕವನ್ನಿಟ್ಟುಕೊಂಡು ಹಕ್ಕಿಗಳ ಪರಿಚಯ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಹಕ್ಕಿಗಳ ಫೋಟೊಗಳನ್ನು ತೆಗೆದು ಲೇಖನದ ಪಕ್ಕದಲ್ಲಿ ಮುದ್ರಿಸುವುದು ಕಷ್ಟದ ಕೆಲಸ ಅಲ್ಲ. ಆದರೆ ಹಕ್ಕಿಗಳನ್ನು ವಿವಿಧ ಭಂಗಿಗಳಲ್ಲಿ ತೋರಿಸದೇ ಇದ್ದರೆ ನಿಮಗೆ ಫಕ್ಕನೆ ಗುರುತು ಹತ್ತುವುದಿಲ್ಲ. ಹಳದಿ ಬಣ್ಣದ ಕೊಕ್ಕು ಮತ್ತು ಕಣ್ಣಿನ ಸುತ್ತ ಉಂಗುರ ಇರುತ್ತದೆ ಅಂತ ಓದಿಕೊಂಡವರಿಗೆ ಹಕ್ಕಿಗಳು ಕಣ್ಣಿಗೆ ಬಿದ್ದಾಗ ಅವುಗಳ ಕೊಕ್ಕನ್ನೂ ಕಣ್ಣಿನ ಸುತ್ತಲಿನ ಉಂಗುರವನ್ನೂ ಗಮನಿಸುವುದು ಕಷ್ಟವಾಗಬಹುದು. ಹೀಗಾಗಿ ಹಕ್ಕಿಗಳನ್ನು ಅಪರಿಚಿತವಾಗಿಯೇ ಇರಲು ಬಿಟ್ಟು , ನೋಡಿ ಸಂತೋಷಪಡುವುದನ್ನು ಮೊದಲು ಕಲಿಯುವುದು ಒಳ್ಳೆಯದು.

ಕನ್ನಡ ನಾಡಿನಲ್ಲಿ ನಾನಾ ಬಗೆಯ ಹಕ್ಕಿಗಳಿದ್ದರೂ ಸಾಮಾನ್ಯವಾಗಿ ಕಣ್ಣಿಗೆ ಬೀಳುವುದು ಒಂದೋ ಎರಡೋ ಜಾತಿಯ ಹಕ್ಕಿಗಳು ಮಾತ್ರ. ಕಾಗೆಯನ್ನು ನಾವು ಹಕ್ಕಿಯೆಂದು ಭಾವಿಸಿದಂತಿಲ್ಲ. ಅದು ಎಲ್ಲೆಡೆಯೂ ಇರುವುದರಿಂದ ಸಹಜವಾಗಿಯೇ ಒಂಥರದ ನಿರ್ಲಕ್ಪ್ಯಕ್ಕೆ ಗುರಿಯಾಗಿದೆ. ಗುಬ್ಬಿಗಳು ಎಲ್ಲಿ ಕಣ್ಮರೆಯಾದವು ಎಂಬ ಲೇಖನವನ್ನು ಪದೇ ಪದೇ ಓದುತ್ತೇವಾದರೂ ನಮ್ಮ ಮನೆಯಲ್ಲಿ ಗುಬ್ಬಿ ಗೂಡು ಕಟ್ಟಿದಾಗ ಅದನ್ನು ನಾವು ಸೂಕ್ಪ್ಮವಾಗಿ ಗಮನಿಸುವುದಕ್ಕೆ ಹೋಗಿರುವುದಿಲ್ಲ. ಅದು ಬಿಟ್ಟರೆ ನಮಗೆ ತೀರಾ ಪರಿಚಿತವಿರುವ ಹಕ್ಕಿಯೆಂದರೆ ಗಿಳಿ, ಬುಲ್‌ಬುಲ್‌, ಲವ್‌ಬರ್ಡ್ಸ್‌ ಎಂದು ಪಟ್ಟಿ ಅಂಟಿಸಿಕೊಂಡು ಝೂಗಳಲ್ಲಿ ಕಾಣಸಿಗುವ ಕೆಲವು ಹಕ್ಕಿಗಳು. ಹಳ್ಳಿಯಲ್ಲಿರುವವರಿಗೆ ಫಕ್ಕನೆ ಎದುರಾಗುವುದು ಸೊಪ್ಪುಕುಟುರ ಮತ್ತು ಕೆಂಬೂತ.

ಹಕ್ಕಿಗಳ ಹಿಂದೆ ಬೀಳುವುದು ಅದರ ಬಗ್ಗೆ ಆಸಕ್ತಿ ಇಲ್ಲದವರಿಗೆ ತಮಾಷೆಯಾಗಿ ಕಾಣಿಸಬಹುದು. ಆದರೆ ಒಮ್ಮೆ ಹಕ್ಕಿಗಳನ್ನು ಗುರುತಿಸಲು ಶುರುಮಾಡಿದರೆ ಅದೊಂದು ಚಟವೇ ಆಗಿಬಿಡುತ್ತದೆ. ನಾಗರಹೊಳೆಗೆ ಹೋದಾಗ ಎಲ್ಲರೂ ಜಿಂಕೆಗಳನ್ನೋ ಆನೆಗಳನ್ನೋ ಹುಡುಕುತ್ತಿದ್ದರೆ ನೀವು ಹಕ್ಕಿಗಳನ್ನು ಹುಡುಕಲು ಆರಂಭಿಸಿ. ಫಕ್ಕನೆ ಕಣ್ಣಿಗೆ ಬೀಳದ ಹಕ್ಕಿಗಳು ಇದ್ದಕ್ಕಿದ್ದಂತೆ ಕಾಣಿಸಿ ಅಚ್ಚರಿ ಮೂಡಿಸಬಹುದು. ಹೆಸರೇ ಗೊತ್ತಿಲ್ಲದ ಹಕ್ಕಿಯಾಂದರ ಚಲನವಲನಗಳನ್ನು ನೋಡುತ್ತಿರಿ. ಕ್ರಮೇಣ ಹಕ್ಕಿಗಳ ಜಗತ್ತೇ ವಿಚಿತ್ರ ಅನ್ನಿಸಲು ಶುರುವಾಗುತ್ತವೆ. ಗಾಳಿಯಲ್ಲಿ ಯಾವ ಶ್ರಮವೂ ಇಲ್ಲದೇ ಹಾರುವ, ನೋಡನೋಡುತ್ತಿದ್ದಂತೆ ಕೊಂಬೆಯಾಂದರ ಮೇಲೆ ಕೂರುವ, ಕೊಂಬೆಗೆ ಕೊಕ್ಕು ತೀಡಿಕೊಂಡು ಚೂಪು ಮಾಡಿಕೊಳ್ಳುವ, ಕೊಕ್ಕಿನಿಂದ ಪುಕ್ಕ ಕುಕ್ಕಿಕೊಳ್ಳುವ ನಿಸೂರಾಗುವ, ಇದ್ದಕ್ಕಿದ್ದಂತೆ ಹಾರಿಹೋಗಿ ನೀರಲ್ಲಿ ಮುಳುಗಿ ಮೈಕೊಡವಿಕೊಂಡು ಸ್ನಾನ ಮುಗಿಸುವ ಹಕ್ಕಿಗಳದ್ದು ವಿಚಿತ್ರ ಜಗತ್ತು.

ನಿಮ್ಮ ಮನೆಯ ಪಕ್ಕವೋ ಆಫೀಸಿನ ಪಕ್ಕವೋ ಯಾವುದಾದರೂ ಹಣ್ಣಿನ ಮರಗಳಿದ್ದರೆ ನಿಮಗೆ ಹಕ್ಕಿಗಳ ದರ್ಶನ ಖಂಡಿತಾ ಆಗಿರುತ್ತದೆ. ವಿವಿಧ ಬಗೆಯ ಹಕ್ಕಿಗಳು ಅಲ್ಲಿ ಕೂತು ಹಣ್ಣುಗಳನ್ನು ತಿನ್ನುವುದನ್ನು ನೋಡಿಯೇ ನೋಡುತ್ತೀರಿ.

ಹಕ್ಕಿಗಳು ಕೊಡುವ ಖುಷಿಯನ್ನು ನಿಮಗೆ ಬೇರೆ ಯಾರೂ ಕೊಡುವುದಕ್ಕೆ ಸಾಧ್ಯವಿಲ್ಲ. ಒಂದು ಹಕ್ಕಿಯನ್ನು ಸುಮ್ಮನೆ ಗಮನಿಸುತ್ತಿರಿ. ಅದು ಸುಮ್ಮನೆ ಧ್ಯಾನಸ್ಥವಾಗಿ ಕೂತಿದ್ದು ಕಂಡರೆ ಹೇಳಿ. ಪಾರಿವಾಳಕ್ಕೆ ಹಾಗೆ ಗಂಭೀರವಾಗಿ ಕೂರುವುದು ಗೊತ್ತಿರಬಹುದು. ಗೂಬೆ ಸದಾ ನಿದ್ರಿಸುವಂತೆ ಸ್ವಸ್ಥ ಕೂತಿದ್ದನ್ನು ನೋಡಿರಬಹುದು. ಆದರೆ ಸಣ್ಣಪುಟ್ಟ ಹಕ್ಕಿಗಳು ಮಕ್ಕಳ ಹಾಗೆ ಸದಾ ಗಲಾಟೆ ಮಾಡಿಕೊಂಡೇ ಇರುತ್ತವೆ. ಕೂತಲ್ಲಿ ಕೂರದೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಜಿಗಿಯುತ್ತವೆ. ಬೇಕಾದ್ದು ಬೇಡದ್ದನ್ನೆಲ್ಲ ಕುಕ್ಕುತ್ತವೆ. ಪುಕ್ಕಕ್ಕೆ ಕೊಕ್ಕು ಒರೆಸಿಕೊಂಡು ಪುಟ್ಟ ಕಂದಮ್ಮಗಳ ಹಾಗೆ ಮೌನವಾಗುತ್ತವೆ.

ಹಕ್ಕಿಗಳು ಅಳುವಾಗ ಹೇಗೆ ಕಾಣಿಸುತ್ತವೆ ಅಂತ ನೋಡಬೇಕು, ಹಕ್ಕಿಗಳಿಗೆ ಖುಷಿಯಾದಾಗ ಹೇಗೆ ಕಂಡೀತು ಗಮನಿಸಬೇಕು - ಹೀಗೊಂದೆರಡು ಆಸೆಗಳನ್ನು ಇಟ್ಟುಕೊಂಡು ಹಕ್ಕಿಗಳನ್ನು ಗಮನಿಸಲು ಶುರುಮಾಡಿ. ಹಕ್ಕಿಗಳಿಗೆ ಖುಷಿಯಾಗುತ್ತದಾ? ಆದರೆ ಯಾಕಾಗುತ್ತದೆ? ಖುಷಿಯಾದಾಗ ಅದು ಏನು ಮಾಡುತ್ತದೆ? ಹಕ್ಕಿಗಳು ಹೆದರಿದಾಗ ಅದರ ಮುಖ ಹೇಗಿರುತ್ತದೆ? ಮುಂದಿನ ಬಾರಿ ಹಕ್ಕಿಯಾಂದನ್ನು ಕಂಡಾಗ ಅದರ ಮುಖದಲ್ಲಿದ್ದ ಭಾವ ಯಾವುದು ಕಂಡುಹಿಡಿಯಲು ಯತ್ನಿಸಿ.

ನಾವೆಲ್ಲ ಕಂಡಹಾಗೆ ಹಕ್ಕಿಗಳು ಈ ಜಗತ್ತಿನ ಎಲ್ಲ ಜಂಜಡಗಳನ್ನೂ ಸುಖದುಃಖಗಳನ್ನೂ ಸಾವುನೋವುಗಳನ್ನೂ ಮೀರಿದ ಯೋಗಿಗಳಂತೆ ಕಾಣಿಸುತ್ತವೆ. ಮಳೆಗಾಲದ ಒಂದು ಮಧ್ಯಾಹ್ನ ಮಾವಿನ ಮರದಡಿ ಅಂಗಾತ ಬಿದ್ದು ಸಾಯುವ ಬಾಳೆಗುಬ್ಬಿಗಳ ಕಣ್ಣಲ್ಲಿ ವಿಷಾದ ಕೂಡ ಇರುವುದಿಲ್ಲ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಹಕ್ಕಿಗಿಲಕಿ-

ತೇಜಸ್ವಿಯವರ ‘ಹಾರಾಡುವ ಹಾಡುಗಳು’

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X