ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಬ್ಬ

By Staff
|
Google Oneindia Kannada News
  • ಜಾನಕಿ
ಗೊರೂರಿನ ಪ್ರಜೆಗಳ ಪ್ರಕಾರ ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರೂ ಜೀವದ ಗೆಳೆಯರು. ಅವರು ಒಬ್ಬರನ್ನೊಬ್ಬರು ಬಿಟ್ಟು ಬದುಕಿದ್ದನ್ನು ನೋಡಿದವರು ಗೊರೂರಿನಲ್ಲೇ ಇಲ್ಲ. ಇಬ್ಬರೂ ಒಂದು ಸೈಕಲ್ಲಿನಲ್ಲಿ ದಿನಾ ಬೆಳಗ್ಗೆ ಕೆರೆಕಟ್ಟೆಯ ಮೇಲೆ ಅದೆಲ್ಲಿಗೋ ಹೋಗುತ್ತಿದ್ದರು; ಸಂಜೆ ಹೊತ್ತಲ್ಲಿ ಅದೆಲ್ಲಿಂದಲೋ ಬರುತ್ತಿದ್ದರು. ಗೊರೂರಿನ ಮಂದಿಗೆ ಅವರಿಬ್ಬರೂ ಹಾಗೆ ಹೋಗಿ ಹೀಗೆ ಬರುವುದು ಅಭ್ಯಾಸವಾಗಿಬಿಟ್ಟಿತ್ತು. ಸೂರ್ಯೋದಯ, ಚಂದ್ರೋದಯದಷ್ಟೇ ಸಹಜವಾಗಿ ಅವರೆಲ್ಲ ಅವರಿಬ್ಬರ ಈ ಓಡಾಟವನ್ನು ಒಪ್ಪಿಕೊಂಡುಬಿಟ್ಟಿದ್ದರು.

ಪ್ರತಿಯಾಂದು ಊರಿನ ಮಂದಿಗೂ ಇರುವಂತೆ ಗೊರೂರಿನ ಹತ್ತು ಸಮಸ್ತರಿಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ ಮತ್ತು ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರ ಬಗ್ಗೆ ಅಪಾರವಾದ ಅಜ್ಞಾನವಿತ್ತು. ಅವರಿಬ್ಬರೂ ಯಾಕೆ ಹಾಗೆ ಹೋಗುತ್ತಾರೆ, ಯಾಕೆ ಹಾಗೆ ಬರುತ್ತಾರೆ, ಊರಿಗೆ ಬಂದ ಮೇಲೆ ಅವರಿಬ್ಬರೂ ಯಾಕೆ ಒಂದೇ ಮನೆಯಲ್ಲಿರುತ್ತಾರೆ, ಅವರಿಬ್ಬರೂ ಗೆಳೆಯರಾ ಸಂಬಂಧಿಕರಾ ಅಣ್ಣತಮ್ಮಂದಿರಾ ಎನ್ನುವ ಯಾವ ಪ್ರಶ್ನೆಗೂ ಗೊರೂರಿನ ಮಂದಿಗೆ ಉತ್ತರ ಗೊತ್ತಿರಲಿಲ್ಲ. ಉತ್ತರ ಗೊತ್ತಿಲ್ಲದೇ ಹೋದರೂ ಹಗಲು ಇರುಳಾಗಿ, ಇರುಳು ಮತ್ತೊಂದು ಹಗಲಾಗಿ ಅರಳುತ್ತಾ, ಕಾಲಕಾಲಕ್ಕೆ ಮಳೆಯಾಗಿ ಬೆಳೆಯಾಗಿ ಬಿತ್ತಿದ ಬೀಜ ಫಸಲಾಗಿ ಎದ್ದು ನಿಂತು ಬಿಡದೇ ಬೀಸುವ ಭಾದ್ರಪದದ ಗಾಳಿಗೆ ತಲೆದೂಗುತ್ತದೆ ಅಂತ ನಂಬಿದ್ದ ಊರಮಂದಿ ಪ್ರಶ್ನಿಸುವುದಕ್ಕೂ ಹೋಗಲಿಲ್ಲ. ಅವರನ್ನೇ ನಿಲ್ಲಿಸಿ ಕೇಳಿಬಿಡಬೇಕು ಅಂದುಕೊಂಡಿದ್ದವರಿಗೆ ಅವರಿಬ್ಬರೂ ಅಷ್ಟು ಸುಲಭವಾಗಿ ಸಿಗಲೂ ಇಲ್ಲ.

ಹೀಗಿರುತ್ತಾ ಒಂದು ಬೆಳಗ್ಗೆ ಕೆರೆಕಟ್ಟೆಯ ಮೇಲೆ ಸೈಕಲ್ಲಿನಲ್ಲಿ ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರು ಒಬ್ಬರೇ ಹೋಗುತ್ತಿರುವುದನ್ನು ದನಕಾಯುವ ಹುಡುಗ ನೋಡಿದ. ಅವನು ಆ ವಿಚಿತ್ರವನ್ನು ಶಾಲೆಗೆ ಹೊರಟು ನಿಂತಿದ್ದ ಮೇಷ್ಟರಿಗೆ ತೋರಿಸಿದ. ಮೇಷ್ಟರಿಗೆ ಅದನ್ನು ನಂಬುವುದಕ್ಕೇ ಸಾಧ್ಯವಾಗಲಿಲ್ಲ. ಇಷ್ಟು ವರ್ಷ ಇಬ್ಬರೂ ಜೊತೆಗೇ ಹೋಗುತ್ತಿದ್ದವರು ಈಗ ಇದ್ದಕ್ಕಿದ್ದ ಹಾಗೆ ಒಬ್ಬರೇ ಯಾಕೆ ಹೋಗುತ್ತಿದ್ದಾರೆ ಅನ್ನುವ ಪ್ರಶ್ನೆ ಅವರ ತಲೆಯನ್ನು ಕೊರೆಯತೊಡಗಿತು. ಮೇಷ್ಟರ ಸ್ವಭಾವವೇ ಅದು; ಅವರು ಪ್ರಶ್ನೆಗಳನ್ನು ಯಾವತ್ತೂ ಒಳಗಿಟ್ಟುಕೊಳ್ಳುತ್ತಿರಲಿಲ್ಲ. ಸಂಜೆಯಾಳಗೆ ಊರಿನ ತುಂಬ ಸುದ್ದಿ ಹಬ್ಬಿತು. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬಲ್ಲ ಮೇಷ್ಟರು ಗೊರೂರು ರಾಮಸ್ವಾಮಿ ಅಯ್ಯಂಗಾರರು ತೀರಿಕೊಂಡಿದ್ದಾರೆ ಅನ್ನುವ ತೀರ್ಮಾನಕ್ಕೆ ಬಂದರು. ಆ ಸುದ್ದಿ ಊರಿನ ಮನೆಮನೆಗೂ ಹಬ್ಬಿತು. ಅವರ ಸಾವಿಗಿಂತ ಜನರನ್ನು ಗಾಢವಾಗಿ ಕಾಡಿದ್ದು ಅದರ ನಿಗೂಢತೆ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬದುಕಿದ್ದರು ಅನ್ನುವುದು ಕೂಡ ಗೊತ್ತಿಲ್ಲದ ಮಂದಿ, ಅವರು ಸತ್ತ ಸುದ್ದಿ ತಿಳಕೊಂಡು ಬೇಜಾರುಪಟ್ಟುಕೊಂಡರು.

ಅದಾದ ಮೇಲೆ ಕೆಲವು ದಿನಗಳ ಕಾಲ ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರು ಒಂಟಿಯಾಗಿ ಸೈಕಲ್ಲಿನಲ್ಲಿ ಹೋಗಿ ಒಂಟಿಯಾಗಿ ಸೈಕಲ್ಲಿನಲ್ಲಿ ಬರುವುದನ್ನು ಊರ ಮಂದಿ ನೋಡುತ್ತಿದ್ದರು. ಹಾಗೆ ನೋಡುತ್ತಿದ್ದಾಗೆಲ್ಲ ಅವರನ್ನು ಗಾಢವಾದ ವಿಷಾದ ಕಾಡುತ್ತಿತ್ತು. ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರು ಗೊರೂರು ರಾಮಸ್ವಾಮಿ ಅಯ್ಯಂಗಾರರಿಲ್ಲದೇ ಎಂಥ ಒಂಟಿತನ ಅನುಭವಿಸುತ್ತಿರಬಹುದು ಅನ್ನುವ ಯೋಚನೆ ಮೊದಲು ಬಂದದ್ದು ಮೇಷ್ಟರಿಗೆ. ಅವರು ಅದನ್ನು ತನ್ನ ಕಣ್ಣಿಗೆ ಬಿದ್ದವರಿಗೆಲ್ಲ ನಶ್ಯದ ಜೊತೆ ಹಂಚಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರಿಲ್ಲದ ಅನಾಥಪ್ರಜ್ಞೆಯನ್ನು ಆ ಸೈಕಲ್ಲು ಕೂಡ ಅನುಭವಿಸುತ್ತಿದೆ ಅಂತ ಕ್ರಮೇಣ ಮೇಷ್ಟರಿಗೆ ಅನ್ನಿಸತೊಡಗಿತು.

ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದು ನಮ್ಮ ಕರ್ತವ್ಯ ಎಂದು ಮೇಷ್ಟರು ಭಾವಿಸಿದರು. ಒಂದು ಮುಸ್ಸಂಜೆ ಹೊತ್ತಿಗೆ ಗೊರೂರಿನ ಹತ್ತು ಸಮಸ್ತರನ್ನು ಕಟ್ಟಿಕೊಂಡು ಮೇಷ್ಟರು ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರ ಮನೆಯ ಬಾಗಿಲು ತಟ್ಟಿದರು.

***

ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರ ಮನೆಗೆ ಹೋಗಿಬಂದ ನಂತರ ಎಲ್ಲರಿಗಿಂತ ಹೆಚ್ಚು ಕಂಗಾಲಾದವರು ಮೇಷ್ಟರು. ಅಲ್ಲಿ ನಡೆದ ಮಾತುಕತೆಯನ್ನು ನೆನಪಿಸಿಕೊಂಡಾಗೆಲ್ಲ ಅವರನ್ನು ಭಯ ಆವರಿಸುತ್ತಿತ್ತು. ಪಾಪಪ್ರಜ್ಞೆ ಕಾಡುತ್ತಿತ್ತು. ಅವನ್ನೆಲ್ಲ ಮೀರಿಸುವಂಥ ಅನುಮಾನ ಉದ್ಭವವಾಗುತ್ತಿತ್ತು.

ಆವತ್ತು ಮೇಷ್ಟರು ಬಾಗಿಲು ತಟ್ಟುತ್ತಿದ್ದಂತೆ ಬಾಗಿಲು ತೆರೆದುಕೊಂಡಿತ್ತು. ಬಾಗಿಲ ಹಿಂದೆ ತೆಳ್ಳಗಿನ ಬೆಳ್ಳಗಿನ ಕಿವಿತುಂಬ ಪೊದೆಕೂದಲು ಬೆಳೆದ ವ್ಯಕ್ತಿ ಪ್ರಶ್ನಾರ್ಥಕ ಚಿನ್ಹೆಯಲ್ಲಿ ನಿಂತಿತ್ತು. ತನ್ನ ಮನೆಯ ಮುಂದೆ ಹೀಗೆ ದಿಢೀರನೆ ಪ್ರತ್ಯಕ್ಷವಾದ ಮಂದಿಯನ್ನು ಹೇಗೆ ನಿಭಾಯಿಸಬೇಕು ಅನ್ನುವ ಗೊಂದಲ ಮತ್ತು ಗಾಬರಿ ಆ ವ್ಯಕ್ತಿಯ ಮುಖದಲ್ಲಿದ್ದಂತಿತ್ತು. ಅದನ್ನು ನೋಡುತ್ತಿದ್ದ ಹಾಗೇ ಮೇಷ್ಟ್ರಿಗೆ ಆ ಮನೆಗೆ ಅಪರಿಚಿತರು ಅದೇ ಮೊದಲು ಕಾಲಿಟ್ಟಿದ್ದು ಅಂತ ಖಾತ್ರಿಯಾಯಿತು. ಮೇಷ್ಟರೇ ‘ಬನ್ನಿ, ಸ್ವಲ್ಪ ಮಾತಾಡೋಣ’ ಎಂದು ಆ ವ್ಯಕ್ತಿಯನ್ನೂ ಕರೆದೊಯ್ದು ಕೂರಿಸಿ, ತಾನೂ ತನ್ನ ಪಟಾಲಂ ಜೊತೆ ಮಾತಿಗೆ ಕೂತರು.

ಉದ್ದಕ್ಕೂ ಮಾತಾಡಿದ್ದು ಮೇಷ್ಟರೊಬ್ಬರೇ. ಅವರ ಹಿಂದೆ ಕೂತ ಹತ್ತು ಸಮಸ್ತರು ಸುಮ್ಮನೆ ತಲೆಯಾಡಿಸಿದರು. ಅವರೆದುರು ಕೂತ ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರು ತಲೆಯಾಡಿಸಲೂ ಇಲ್ಲ ಮಾತಾಡಲೂ ಇಲ್ಲ. ಮೇಷ್ಟರು ತುಂಬ ಗಂಭೀರವಾದ ದನಿಯಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಅವರಿಬ್ಬರ ಸ್ನೇಹವನ್ನು ಹಾಡಿ ಹೊಗಳಿದರು. ಅದು ಗೊರೂರಿಗೇ ಮಾದರಿ ಅಂದರು. ಈಗ ಅವರೊಬ್ಬರೇ ಸೈಕಲ್ಲಿನಲ್ಲಿ ಹೋಗಿ ಬರುವ ದೃಶ್ಯ ಊರಿನ ಎಲ್ಲರಿಗೂ ಹಳೆಯ ನೆನಪುಗಳನ್ನು ತರುತ್ತದೆ ಅಂದರು. ಮಾತಾಡುತ್ತಾ ಆಡುತ್ತಾ ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರು ಒಂದು ಲೋಟ ಕಾಫಿಯನ್ನಾದರೂ ತಂದುಕೊಟ್ಟಾರೆಂದು ಕಾದರು. ಆದರೆ ಅಂಥದ್ದೇನೂ ನಡೆಯಲಿಲ್ಲ.

ಪಾಠ ಒಪ್ಪಿಸುವ ಧಾಟಿಯಲ್ಲಿ ಹೇಳಬೇಕಾದ್ದೆಲ್ಲವನ್ನೂ ಹೇಳಿಮುಗಿಸಿ ಮೇಷ್ಟರು ಹೊರಟು ನಿಂತರು. ಅಷ್ಟು ಹೊತ್ತಿಗೆ ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರು ಹೇಳಿದ್ದರು;

‘ನೀವೆಲ್ಲ ತಿಳಿದುಕೊಂಡ ಹಾಗೆ ತೀರಿಕೊಂಡದ್ದು ಗೊರೂರು ರಾಮಸ್ವಾಮಿ ಅಯ್ಯಂಗಾರರಲ್ಲ. ನಾನೇ ಗೊರೂರು ರಾಮಸ್ವಾಮಿ ಅಯ್ಯಂಗಾರ್‌.’

***

ಮೇಷ್ಟರೂ ಊರ ಹತ್ತು ಸಮಸ್ತರೂ ಹೊರಟು ಹೋದ ಮೇಲೆ ಗೊರೂರು ರಾಮಸ್ವಾಮಿ ಅಯ್ಯಂಗಾರರು ಯೋಚಿಸುತ್ತಾ ಕೂತರು. ಏಕಾಏಕಿ ಅವರನ್ನೊಂದು ಅನುಮಾನ ಕಾಡತೊಡಗಿತು. ಊರಿನವರೆಲ್ಲ ಗೊರೂರು ರಾಮಸ್ವಾಮಿ ಅಯ್ಯಂಗಾರರು ತೀರಿಕೊಂಡಿದ್ದಾರೆ ಅಂದುಕೊಂಡಿದ್ದಾರೆ. ಸತ್ತಿರೋದು ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರಿ ಅನ್ನುವುದು ತನಗೆ ಮಾತ್ರ ಗೊತ್ತಿದೆ. ಆದರೆ ತನಗೆ ಗೊತ್ತಿರುವುದು ಪೂರ್ತಿ ನಿಜವಾ ಅನ್ನುವ ಬಗ್ಗೆ ಅನುಮಾನವಿದೆ.

ಅಷ್ಟಕ್ಕೂ ನಮ್ಮಿಬ್ಬರಲ್ಲಿ ರಾಮಸ್ವಾಮಿ ಯಾರು, ಕೃಷ್ಣಸ್ವಾಮಿ ಯಾರು? ನಮ್ಮನ್ನು ಇದುವರೆಗೆ ಯಾರೂ ಹೆಸರು ಹಿಡಿದು ಕರೆದಿಲ್ಲ. ಎಲ್ಲರೂ ಅಯ್ಯಂಗಾರರೇ ಅನ್ನುತ್ತಿದ್ದರು. ಹಾಗೆ ಕರೆದಾಗ ಇಬ್ಬರೂ ತಿರುಗಿ ನೋಡುತ್ತಿದ್ದದ್ದುಂಟು. ಒಮ್ಮೊಮ್ಮೆ, ಒಬ್ಬರು ತಿರುಗಿ ನೋಡಿದರೆ, ಕರೆದವರು ಥಟ್ಟನೆ ‘ನೀವಲ್ಲ, ಅವರು’ ಅನ್ನುತ್ತಿದ್ದರು.

ಹಾಗಿದ್ದರೆ ಜನರಿಗೆ ನಮ್ಮಲ್ಲಿ ಯಾರು ರಾಮಸ್ವಾಮಿ, ಯಾರು ಕೃಷ್ಣಸ್ವಾಮಿ ಅನ್ನುವುದು ಗೊತ್ತಿತ್ತಾ? ಹೋಗಲಿ, ಅದು ನಮಗಾದರೂ ಗೊತ್ತಿತ್ತಾ? ನಾವಿಬ್ಬರೂ ಪರಸ್ಪರರನ್ನು ಹೆಸರಿನಿಂದ ಗುರುತಿಸಿಕೊಂಡವರೇ ಅಲ್ಲ. ನಮಗೇ ಗೊತ್ತಿಲ್ಲ ಅಂದ ಮೇಲೆ ಊರವರಿಗೆ ಹೇಗೆ ಗೊತ್ತಾಯಿತು. ಊರ ಮಂದಿಗೆ ಗೊತ್ತಿಲ್ಲ ಅಂದ ಮೇಲೆ ಗೊರೂರು ರಾಮಸ್ವಾಮಿ ಅಯ್ಯಂಗಾರರೇ ತೀರಿಕೊಂಡಿದ್ದಾರೆ ಅನ್ನುವ ತೀರ್ಮಾನಕ್ಕೆ ಅವರೇಕೆ ಬಂದರು? ಗೊರೂರು ರಾಮಸ್ವಾಮಿ ಅಯ್ಯಂಗಾರರು ಸಾಯುವುದು ಊರ ಮಂದಿಗೆ ಬೇಕಾಗಿತ್ತಾ? ಅವರನ್ನೇಕೆ ಅವರು ದ್ವೇಷಿಸುತ್ತಿದ್ದರು? ನಿಜವಾಗಿಯೂ ಗೊರೂರು ರಾಮಸ್ವಾಮಿ ಅಯ್ಯಂಗಾರರೇ ಸತ್ತಿರಬಹುದೇ? ಹಾಗಿದ್ದರೆ ನಾನು ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರಿಯೇ?

ಅದೇ ಸಂಜೆ ಗೊರೂರು ರಾಮಸ್ವಾಮಿ ಅಯ್ಯಂಗಾರರು ಗುಟ್ಟಾಗಿ ಮೇಷ್ಟರನ್ನು ಭೇಟಿಯಾದರು. ನೇರವಾಗಿ ‘ನಾನು ಯಾರು’ ಅಂತ ಕೇಳಿದರು.

ಅವರಿಬ್ಬರೂ ಹಳೆಯ ಗೆಳೆಯರಂತೆ ಕೂತು ಮಾತಾಡುವುದನ್ನೂ ಅದಾದ ಮೇಲೆ ಇಬ್ಬರೂ ಎದ್ದು ಸೈಕಲ್ಲು ಹತ್ತಿ ಹೊರಡುವುದನ್ನೂ ಊರಿನ ಅನೇಕರು ನೋಡಿದರು.

****

ಮಾರನೆಯ ದಿನ ಕೆರೆಕಟ್ಟೆಯ ಮೇಲೆ ಸೈಕಲ್ಲಿನಲ್ಲಿ ಅವರಿಬ್ಬರೂ ಹಾಗೆ ಹೋಗಿದ್ದನ್ನೂ ಹೀಗೆ ಬಂದಿದ್ದನ್ನೂ ಊರ ಮಂದಿ ನೋಡುತ್ತಿದ್ದರು. ಕ್ರಮೇಣ ಅವರಿಗೆ ಅದು ಅಭ್ಯಾಸವಾಗಿಬಿಟ್ಟಿತು. ಸೂರ್ಯೋದಯ ಚಂದ್ರೋದಯದಷ್ಟೇ ಸಹಜವೆಂಬಂತೆ ಈ ಓಡಾಟವನ್ನೂ ಅವರೆಲ್ಲ ಒಪ್ಪಿಕೊಂಡುಬಿಟ್ಟರು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X