• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಣದ ಕಾನನದಾಚೆಯ ಕಾಕನ ಕೋಟೆಯಿಂದ..

By Staff
|
  • ಜಾನಕಿ

jaanaki@india.com

ನಾವು ಅಕ್ಷರಶಃ ಅಕ್ಷರ ಮೋಹಿತರು. ನಿಜವಾದ ಅರ್ಥದಲ್ಲಿ ‘ಪದ’ವೀಧರರು. ನಮಗೆ ಅನ್ನಿಸಿದ್ದೆಲ್ಲ ಅಕ್ಷರಗಳಾಗಿ ಮನಸ್ಸಿನ ತುಂಬ ಮೆರವಣಿಗೆ ಹೊರಡುತ್ತವೆ. ನಮ್ಮ ತವಕ ತಲ್ಲಣಗಳನ್ನೂ ಸಂಭ್ರಮ ಉಲ್ಲಾಸಗಳನ್ನೂ ನಾವು ಅಕ್ಷರಗಳ ಮೂಲಕವೇ ಗ್ರಹಿಸುತ್ತೇವೆ ಮತ್ತು ವ್ಯಕ್ತಪಡಿಸುತ್ತೇವೆ. ಬೇಸರವಾದಾಗಲೂ ಖುಷಿಯಾದಾಗಲೂ ಓದುತ್ತೇವೆ. ಓದುವ ಮೂಲಕ ದೊಡ್ಡವರಾಗುತ್ತೇವೆ.

ಹಾಗೆ ನೋಡಿದರೆ ಕವಿಗಿಂತ ಓದುಗನೇ ಅದೃಷ್ಟಶಾಲಿ. ಕವಿ ಏಕಾಕಿ; ಓದುಗ ಬಹುಮುಖಿ. ಕವಿ ತಾನು ಬರೆದದ್ದನ್ನು ಓದಿ ಸಂಭ್ರಮಿಸಲಾರ. ಕವಿಗೆ ಸದಾ ವಿಮರ್ಶಕನ ಕಾಟಕೋಟಲೆ. ಓದುಗರಿಲ್ಲದ ಚಿಂತೆ. ಓದುಗನನ್ನು ಯಾವತ್ತೂ ಕವಿಯಿಲ್ಲದ ಚಿಂತೆ ಕಾಡಿಲ್ಲ. ಮದುವೆಯಾದ ಗಂಡಸಿನ ಪಾಡು ಕವಿಯದಾದರೆ, ಬ್ರಹ್ಮಚಾರಿಯ ಸ್ವಚ್ಛಂದ ನೋಟ ಓದುಗನದು. ಅವನು ಒಂದು ಅರ್ಥದಲ್ಲಿ ಸರ್ವಋತು ಬಂದರು.

Good Reading is a breath of Fresh airಒಬ್ಬೊಬ್ಬ ಓದುಗನ ಮನದೊಳಗೂ ಕಾವ್ಯಕನ್ನಿಕೆಯ ನಿತ್ಯೋತ್ಸವ. ಬೆಳಗಾಗೆದ್ದರೆ ಮೂಡಲಮನೆಯ ಮುತ್ತಿನ ನೀರಿನ ಬೇಂದ್ರೆ, ಮಧ್ಯಾಹ್ನಕ್ಕೆ ಹೊರಗೆ ರಣರಣ ಬಿಸಿಲು, ಒಳಗೆ ಮಾರಣಬೆಂಕಿ, ಮಲಗಿತ್ತು ಮನ ಚಿತೆಯ ಮೇಲೆ ಆಫೀಸಿನಲಿ.. ಅಡಿಗ, ಸಂಜೆಗೆ ಮತ್ತದೇ ಬೇಸರ, ಅದೇ ಸಂಜೆಯ ನಿಸಾರ್‌, ರಾತ್ರಿಗೆ ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದು ಬೆಳ್ಳಿಹಸುಗಳ ಹಾಲು ಕರೆಯುವ ನರಸಿಂಹಸ್ವಾಮಿ, ಹೊತ್ತು ಗೊತ್ತಿಲ್ಲದೆ ಬಾ ಇಲ್ಲಿ ಸಂಭವಿಸುವ ಕುವೆಂಪು. ಹೊಳೆಸಾಲಿನ ಮರದ ತುಂಬ ಪಂಚವರ್ಣದ ಗಿಳಿಗಳೋ ಗಿಳಿಗಳು. ಕಾಣದ ಕಾನನದಲ್ಲಿರುವ ಕಾಕನ ಕೋಟೆಯಾಳಗಿನ ರಾಜಕುಮಾರಿಯ ನವದರ್ಶನ.

ಎಷ್ಟೊಂದು ವರುಷದ ಓದು ನಮ್ಮನ್ನು ರೂಪಿಸಿದೆ ಎಂದು ನೆನದಾಗ ಅಚ್ಚರಿಯಾಗುತ್ತದೆ. ಯಾವತ್ತೋ ಎಲಿಯಟ್‌ ಬರೆದ ಪ್ರಿಲ್ಯೂಡ್ಸ್‌ನಿಂದ ಆಡೆನ್ನಿನ ರೆಫ್ಯೂಜೀ ಬ್ಲೂಸ್‌ ಎಂಬ ನಿರಾಶ್ರಿತರ ಗದ್ಯಗೀತೆಯಿಂದ ಬಿಎಂಶ್ರೀ ಇಂಗ್ಲಿಷ್‌ ಗೀತಗಳಿಂದ ಯಾವುದೋ ಅಂಕಣ ಬರಹದಿಂದ- ಕೊಟ್ಟುದೆಷ್ಟೋ ಪಡೆದುದೆಷ್ಟೊ ನಮ್ಮ ನಂಟೇ ಹೇಳಲಿ!

ಪ್ರತಿಯಾಬ್ಬನಿಗೂ ಮೂರು ರೀತಿಯ ಓದು ಬೇಕು. ಮೊದಲನೆಯದು ವಿದ್ಯಾಭ್ಯಾಸಕ್ಕೆ, ನೌಕರಿ ಹಿಡಿಯುವುದಕ್ಕೆ ಅಗತ್ಯವಾಗುವ ಓದು. ಎರಡನೆಯದು ಮಾಹಿತಿಗೆ, ಲೋಕಜ್ಞಾನಕ್ಕೆ ಅಗತ್ಯವಾಗುವ ವರ್ತಮಾನ ಪತ್ರಿಕೆಯ ಓದು, ಮೂರನೆಯದು ಆತ್ಮಸಾಕ್ಪಾತ್ಕಾರಕ್ಕೆ, ಖುಷಿಗೆ, ಬ್ರಹ್ಮಾನಂದಕ್ಕೆ ನೆರವಾಗುವ ಸಾಹಿತ್ಯದ ಓದು. ಇವುಗಳ ಪೈಕಿ ಇವತ್ತು ಮುಖ್ಯವಾಗಿರುವುದು ಮೊದಲ ಎರಡು ಬಗೆಯ ಓದು ಮಾತ್ರ. ‘ಸಾಹಿತ್ಯ ಯಾರ್ರೀ ಓದ್ತಾರೆ, ಕಿತ್ತೆಸೆಯಿರಿ ಕತೆ, ಕಾದಂಬರಿಗಳನ್ನು’ ಅನ್ನುವ ಪತ್ರಿಕಾ ಸಂಪಾದಕರೂ ನಮ್ಮಲ್ಲಿದ್ದಾರೆ. ಆದರೆ ಒಬ್ಬ ವ್ಯಕ್ತಿಯ ಒಳಗನ್ನು ರೂಪಿಸುವುದು ಸಾಹಿತ್ಯದ ಓದೇ ಹೊರತು, ಪತ್ರಿಕೆಯಲ್ಲ.

ದಿನಪತ್ರಿಕೆಗಳನ್ನು ಓದುವುದು ಸಿಗರೇಟಿನ ಹಾಗೆ ಕೇವಲ ಚಟ. ಎಷ್ಟೋ ಮಂದಿ ದಿನ ಪತ್ರಿಕೆಗಳಲ್ಲೂ ಓದುವುದು ಕ್ರೆೃಮ್‌ ವರದಿಗಳನ್ನೋ ಮನಸ್ಸಿಗೆ ತಟ್ಟುವ ವರದಿಗಳನ್ನೋ ಮಾತ್ರ. ರಾಜಕೀಯ ಮುಖಪುಟದಲ್ಲೇ ಇದ್ದರೂ ಅದರತ್ತ ಅನೇಕರು ಕಣ್ಣು ಹಾಯಿಸುವುದಿಲ್ಲ. ಪೆಟ್ರೋಲು ಬೆಲೆ ಏರುತ್ತಿದೆ, ನಾಳೆ ಕರೆಂಟಿಲ್ಲ , ನಾಡಿದ್ದು ಭಾರತ ಬಂದ್‌, ಹಸಿರು ಕಾರ್ಡು ವಿತರಣೆಯಾಗುತ್ತಿದೆ, ಮೂರು ದಿನ ನಗರದಲ್ಲಿ ನೀರಿಲ್ಲ ಮುಂತಾದ ಸುದ್ದಿಗಳಿಗೆ ದಿನಪತ್ರಿಕೆ. ಅದರಿಂದ ನಿಮ್ಮ ವ್ಯಕ್ತಿತ್ವ ಹೇಗ್ರೀ ಬೆಳೆಯತ್ತೆ ಅಂತ ಕೇಳಿದರೆ ಅವರ ಬಳಿ ಉತ್ತರ ಇರುವುದಿಲ್ಲ.

ಅಂಥ ವ್ಯಕ್ತಿತ್ವವನ್ನು ನೀಡುವುದು ವಾರಪತ್ರಿಕೆಗಳೇ. ಇಪ್ಪತ್ತೆೈದು ವರುಷದ ಹಿಂದೆ ಲಂಕೇಶ್‌ ಪತ್ರಿಕೆಯನ್ನು ಓದುತ್ತಾ ಓದುತ್ತಾ ಸಾವಿರಾರು ಹುಡುಗರು ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಂಡರು. ಹತ್ತು ವರುಷಗಳಿಂದ ಹಾಯ್‌ ಬೆಂಗಳೂರು ಓದುತ್ತಾ ಒಂದು ರೀತಿಯ ನಿರ್ಭೀತ ವ್ಯಕ್ತಿತ್ವವನ್ನು ಲಕ್ಷಾಂತರ ಹುಡುಗರು ಕಟ್ಟಿಕೊಂಡಿದ್ದಾರೆ.

ಅಷ್ಟಕ್ಕೂ ನಮ್ಮ ಓದು ನಮ್ಮಲ್ಲಿ ಆತ್ಮಾಭಿಮಾನವನ್ನು ತುಂಬಬೇಕು. ಸರಿತಪ್ಪುಗಳ ಬಗ್ಗೆ ಸ್ವಷ್ಪವಾಗಿರಬೇಕು. ಇದು ನನ್ನ ನಿಲುವು ಅಂತ ದಿಟ್ಟವಾಗಿ ಹೇಳುವವರು ಬೇಕು. ಭೈರಪ್ಪನವರ ಪುಸ್ತಕ ಬಿಡುಗಡೆಯಾಗಿದೆ ಅಂತ ದಿನಪತ್ರಿಕೆ ಹೇಳುತ್ತದೆ. ಆ ಪುಸ್ತಕವನ್ನು ಓದಬೇಕೇ ಬೇಡವೇ ಅನ್ನುವುದನ್ನು ವಾರಪತ್ರಿಕೆಯೇ ಹೇಳಬೇಕು.

ಇವತ್ತಿನ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಅಖಂಡವಾದ ವಿನಯ ಮತ್ತು ಅದನ್ನು ಮೀರಿಸುವಂಥ ಇರ್ರೆವರೆನ್ಸ್‌. ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ. ಯಾವುದನ್ನೂ ಪರೀಕ್ಷಿಸದೇ ಒಪ್ಪಿಕೊಳ್ಳಲಾರೆ ಎಂಬ ಮಾತು. ಎಲ್ಲವನ್ನೂ ಒಂದು ಆರೋಗ್ಯವಂತ ಅನುಮಾನದಿಂದ ನೋಡುವುದನ್ನು ಕಲಿಯಬೇಕಿದೆ. ಇತಿಹಾಸ ಪ್ರಜ್ಞೆ ಮತ್ತು ವರ್ತಮಾನದ ಸ್ವಷ್ಟ ಕಲ್ಪನೆ ಇಲ್ಲದ ನಮ್ಮನ್ನು ನಾಶಗೊಳಿಸುವುದಕ್ಕೆ ಆಧುನಿಕತೆ ಕಾಯುತ್ತಿದೆ. ಆಧುನಿಕತೆ ಶಾಪವಲ್ಲ , ಜಾಗತೀಕರಣವೇ ನಮ್ಮ ಶತ್ರು ಅಂತ ಅನೇಕರು ವಾದಿಸುತ್ತಿದ್ದಾರೆ. ಅದೇ ಹೊತ್ತಿಗೆ, ಜಾಗತೀಕರಣಕ್ಕಿಂತ ಅಮೇರಿಕೀಕರಣ ಹೆಚ್ಚು ಅಪಾಯಕಾರಿ ಎಂದೂ ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾವಿಲ್ಲಿ, ದೇಶೀಕರಣವನ್ನು ಕೂಡ ತಡೆದುಕೊಳ್ಳಲಾರದ ಸ್ಥಿತಿಯಲ್ಲಿದ್ದೇವೆ. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಪ್ರದರ್ಶನ ಕಾಣಬೇಕೇ ಬೇಡವೇ ಅನ್ನುವ ಬಗ್ಗೆ ಕೇವಲ ನಾಯಕರಷ್ಟೇ ಮಾತಾಡುತ್ತಿದ್ದಾರೆ. ಜನ ತಮಗಿಷ್ಟ ಬಂದ ಸಿನಿಮಾದ ಸೀಡಿ ತಂದು ಮನೆಯಲ್ಲೇ ನೋಡಿ ಆನಂದಿಸುತ್ತಾರೆ.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮನ್ನು ಕಾಪಾಡಬಲ್ಲ ಶಕ್ತಿ ನಮ್ಮ ಗಾಢವಾದ ಓದು ಮತ್ತು ಪ್ರಖರ ಚಿಂತನೆಗಷ್ಟೇ ಇರುತ್ತದೆ. ಜನಪ್ರಿಯವಾದ ಒಂದು ವಾದದಲ್ಲಿ ನಾವು ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳದಂತೆ ಕಾಯ್ದುಕೊಂಡು ಬರಬೇಕಾದರೆ ಇರಬೇಕಾದರೆ ಅದಕ್ಕೆ ಪ್ರಶ್ನಿಸುವ ಮನೋಭಾವದ ಪತ್ರಿಕೆಗಳು ಬೇಕು. ಒಪ್ಪಿಕೊಳ್ಳುವುದಕ್ಕೂ ಜಗಳಾಡುವುದಕ್ಕೂ ಒಂದು ಹಂತದ ಪ್ರೀತಿ ಬೇಕಾಗುತ್ತದೆ. ಅಂಥ ಪ್ರೀತಿ ದಿನಪತ್ರಿಕೆಗಳ ಜೊತೆ ಸಾಧ್ಯವಿಲ್ಲ.

ಸುಮ್ಮನೆ ಯೋಚಿಸಿ; ಪತ್ರಿಕೆಗಳ ಬೆಲೆ ಕಡಿಮೆಯಾದಾಗ ಓದುಗರು ಒಂದರಿಂದ ಮತ್ತೊಂದಕ್ಕೆ ಶಿಫ್ಟ್‌ ಆಗುತ್ತಾರೆ. ಅದರ ಅರ್ಥ ಇಷ್ಟೇ, ಸುದ್ದಿಯೆಂದರೆ ತರಕಾರಿಯ ಹಾಗೆ. ಎಲ್ಲಿ ಕಡಿಮೆಗೆ ಸಿಗುತ್ತದೋ ಅಲ್ಲಿ ಕೊಳ್ಳುತ್ತಾರೆ. ಆದರೆ ಗೋಪಾಲಕೃಷ್ಣ ಅಡಿಗರ ಕವನ ಸಂಕಲನಕ್ಕಿಂತ ಕಡಿಮೆ ಬೆಲೆಗೆ ಸುಮತೀಂದ್ರ ನಾಡಿಗರ ಕವನ ಸಂಕಲನ ಸಿಗುತ್ತದೆ ಎಂಬ ಕಾರಣಕ್ಕೇ ಯಾರೂ ನಾಡಿಗರನ್ನು ಓದುವುದಕ್ಕೆ ಹೋಗುವುದಿಲ್ಲ !

ಪತ್ರಿಕೆಯೂ ಅಷ್ಟೇ. ಅದು ಬೆಳೆಸುತ್ತಾ ಹೋಗುತ್ತದೆ. ಕ್ರಮೇಣ ನಮ್ಮ ನಿಲುವು, ಒಲವು, ಪ್ರತಿಕ್ರಿಯೆ, ಸಿಟ್ಟು, ಮುಜುಗರ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.

ಆದ್ದರಿಂದಲೇ ಒಳ್ಳೆಯ ಬರಹ, ಒಳ್ಳೆಯ ಓದು ತಾಯಿಯ ಹಾಗೆ.

ಪೊರೆಯುತ್ತಲೇ ಇರುತ್ತದೆ; ಅನವರತ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more