ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ...

By Staff
|
Google Oneindia Kannada News
ಇವತ್ತು ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ಅಂತ ಬರೆಯುವಾಗ ಸ್ವಲ್ಪ ಗೊಂದಲವಾಯಿತು. ನಾವು ಅನಾದಿಕಾಲದಿಂದ ಶೆಡ್ಯೂಲ್‌ ಅಂತ ಹೇಳಿಕೊಂಡು ಬಂದಿದ್ದನ್ನು ಈಗಿನ ಕಾಲದ ಹುಡುಗರು ಸ್ಕೆಡ್ಯೂಲ್‌ ಅನ್ನುತ್ತಾರೆ. ಅದು ಬಹುಶಃ ಅಮೆರಿಕನ್‌ ಉಚ್ಛಾರಣೆ ಇರಬಹುದು. ನಾವು ಕಲಿತದ್ದು ರೂಢಿಸಿಕೊಂಡದ್ದು ಬ್ರಿಟಿಷರ ಇಂಗ್ಲಿಷನ್ನು. ಆದರೆ ಪಿಜ್ಜಾ ಹಟ್‌, ಕೆಎಫ್‌ಸಿಗಳ ಜೊತೆಗೆ ಅಮೆರಿಕನ್‌ ಇಂಗ್ಲಿಷ್‌ ನಮಗೆ ಹತ್ತಿರವಾಗಿಬಿಟ್ಟಿತು. ಡೈರೆಕ್ಟರ್‌ ಅವರ ಪ್ರಕಾರ ಡಿರೆಕ್ಟರ್‌, ನಮ್ಮ ಫೈನಾನ್ಷಿಯಲ್‌ ಪ್ರಾಬ್ಲಮ್‌ ಅವರಿಗೆ ಕೇವಲ ಫಿನಾನ್ಷಿಯಲ್‌ ಪ್ರಾಬ್ಲಂ. ಅವರ ಹೊಸ ಶಬ್ದಭಂಡಾರವೂ ವಿಚಿತ್ರವಾಗಿದೆ. ಎಲ್ಲ ಸರಿಯಾಗಿದೆ ಅನ್ನುವುದಕ್ಕೆ ಅವರು Cool ಅಂತಾರೆ. ನಮಗಿದ್ದದ್ದು ಗುಡ್‌ ಮಾರ್ನಿಂಗು ಮತ್ತು ಗುಡೀವ್ನಿಂಗು ಮಾತ್ರ. ಈಗ ಗುಡ್ಡೇ ಕೂಡ ಶುರುವಾಗಿದೆ. ಆಲ್‌ದಿಬೆಸ್ಟ್‌ ಜೊತೆಗೆ ಟೇಕ್‌ಕೇರ್‌ ಕೂಡ ಅಂಟಿಕೊಂಡಿದೆ.

ಇಂಥ ನೂರೆಂಟು ಪದಗಳನ್ನು ಹುಡುಕಬಹುದು. ಸಿಕ್‌ ಅನ್ನುವುದು ಅಂಥದ್ದೇ ಮತ್ತೊಂದು ಪದ. ನಮಗಿಷ್ಟವಾಗದೇ ಹೋದದ್ದಕ್ಕೆಲ್ಲ ಈಗಿನ ಕಾಲದ ಹುಡುಗರು sick ಅನ್ನುವ ಪದ ಬಳಸುತ್ತಾರೆ. ನಾವು ದರಿದ್ರ, ಡಬ್ಬಾ, ಅಸಹ್ಯ ಅನ್ನುತ್ತಿದ್ದದ್ದಕ್ಕೆಲ್ಲ ಸಿಕ್‌ ಅನ್ನುವ ಒಂದೇ ಪದ ಬಳಸಬಹುದಾ?

Sweet memories of Kannada Film songsಮತ್ತೆ ಆರಂಭದ ಸಾಲಿಗೇ ಬಂದರೆ, ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ನಮಗಿರುವ ಏಕೈಕ ಖುಷಿಯೆಂದರೆ ಹಳೆಯ ಕಾಲಕ್ಕೆ ಮರಳುವುದು. ಅದು ಅತ್ಯಂತ ಅಗ್ಗದ ಮನರಂಜನೆ ಕೂಡ. ಎಲ್ಲೆಂದರಲ್ಲಿ ಕುಂತಲ್ಲಿ ನಿಂತಲ್ಲಿ ನಾವು ಯಾರ ಹಂಗೂ ಇಲ್ಲದೇ ಅವರವರ ಶಕ್ತ್ಯಾನುಸಾರ ಹತ್ತೋ ಇಪ್ಪತ್ತೋ ಮೂವತ್ತೋ ವರುಷ ಹಿಂದಕ್ಕೆ ಹೋಗಿಬಿಡಬಹುದು. ಕಾಲದಹೊಳೆಯಲ್ಲಿ ಹೀಗೆ ಹಿಂದಕ್ಕೆ ಹೋಗುವುದಕ್ಕೆ ನಮಗೊಂದು ಹಾಯಿದೋಣಿ ಬೇಕೆ ಬೇಕು ಅನ್ನುವ ಬಗ್ಗೆ ಬಹುಶಃ ತಕರಾರುಗಳಿಲ್ಲ. ಅಂಥ ಹಾಯಿದೋಣಿಯಾಗಿ ನೆರವಿಗೆ ಬರುವ ಸಂಗತಿಗಳು ಮೂರು; ಹಳೆಯ ಗೆಳೆಯರು, ಹಳೆಯ ಫೊಟೋ ಮತ್ತು ಹಳೆಯ ಹಾಡು.

ಸುಮ್ಮನೆ ಕೈಲೊಂದು ಕನ್ನಡ ಚಿತ್ರಗೀತೆಗಳು ಎಂಬ ಪುಸ್ತಕ ಹಿಡಿದುಕೊಂಡು ಕುಳಿತುಕೊಳ್ಳಿ. ಅದರ ಯಾವುದೋ ಒಂದು ಪುಟವನ್ನು ತಿರುವಿಹಾಕಿ. ಅಲ್ಲೊಂದು ಹಾಡು ಸಿಗುತ್ತದೆ;

ಬೆಡಗಿನ ಹೆಣ್ಣಾ ಅರಳಿದ ಕಣ್ಣಾ
ಸೊಗಸು ಕಂಡೆಯೇನೋ
ಜಿನ್‌ ಜಿನ್ನಾಕ್ಕಡಿ ಜಿನ್‌ ಜಿನ್ನಾ..

ಮತ್ತೊಂದು ಪುಟ ತೆರೆಯಿರಿ;

ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆಬಡಿದ ಸಂಭ್ರಮದ ನೆಪವೋ..
ರಾಮನ ಅವತಾರ ರಘುಕುಲ ಸೋಮನ ಅವತಾರ..

ಈ ಹಾಡುಗಳಿಗೂ ನಮ್ಮ ಬದುಕಿಗೂ ಸಂಬಂಧವೇ ಇರುವುದಿಲ್ಲ. ಅವು ನಮ್ಮ ಜೀವನದ ಕತೆಗಳನ್ನೇನೂ ಹೇಳುವುದಿಲ್ಲ. ಆದರೂ ಆ ಗೀತೆಗಳೊಂದಿಗೆ ಒಂದು ನೆನಪು ಬೆಸೆದುಕೊಂಡಿರುತ್ತದೆ. ಸುಮ್ಮನೆ ನೆನಪಿಸಿಕೊಳ್ಳಿ. ಒಲಿದ ಜೀವ ಜೊತೆಯಲಿರಲು ಬಾಳೂ ಸುಂದರ... ಎಂಬ ಗೀತೆ ಕೇಳಿದ ತಕ್ಷಣ ಮೂಡಿಗೆರೆಯ ಪುಟ್ಟ ಟೆಂಟಿನಲ್ಲಿ ಹಳೆಯ ಗೆಳೆಯ ವಿಶ್ವನ ಜೊತೆ ಕುಳಿತು ಬೆಂಕಿಯ ಬಲೆ ಸಿನಿಮಾ ನೋಡಿದ್ದು ನೆನಪಾಗುತ್ತದೆ. ಆ ಗೆಳೆಯ ವಿಶ್ವನಿಗೆ ಮದುವೆಯಾದದ್ದು, ಅವನ ಮೊದಲ ಮಗುವಿನ ನಾಮಕರಣಕ್ಕೆ ಶೃಂಗೇರಿಗೆ ಹೋಗಿದ್ದು, ಶೃಂಗೇರಿಯಿಂದ ಮರಳಿ ಬರುವಾಗ ಸೀಟಿನ ಪಕ್ಕದಲ್ಲೇ ನಿರಾಭರಣೆ ಸುಂದರಿಯಾಬ್ಬಳು ಕೂತಿದ್ದು, ಅಲ್ಲಿಂದ ಬಂದ ಮೂರೇ ದಿನಕ್ಕೆ ಹೊಸ ಕೆಲಸ ಸಿಕ್ಕಿದ್ದು.. ಹೀಗೆ ನೆನಪುಗಳು ಸುರುಳಿಬಿಚ್ಚುತ್ತಾ ಹೋಗುತ್ತವೆ.

ಇದೊಂದೇ ಅಲ್ಲ ; ಚಿತ್ರಗೀತೆಗಳ ಒಂದು ಪುಸ್ತಕ ಕೈಯಲ್ಲಿದ್ದರೆ ಹತ್ತಾರು ಕಷ್ಟದ ವರುಷಗಳನ್ನು ಕಳೆದುಬಿಡಬಹುದು. ಇವತ್ತಿಗೂ ನಾಗರಹೊಳೆ ಚಿತ್ರದ ‘ಇಲ್ಲೇ ಸ್ವರ್ಗ ಇಲ್ಲೇ ನರಕ, ಮೇಲೇನಿಲ್ಲ ಸುಳ್ಳು’ ಗೀತೆ ಕಣ್ಣಿಗೆ ಬಿದ್ದರೆ ನಲುವತ್ತರ ಆಸುಪಾಸಿನಲ್ಲಿರುವ ಎಲ್ಲರಿಗೂ ರೋಮಾಂಚವಾಗುತ್ತದೆ. ಆ ಹಾಡನ್ನು ನಾವೆಲ್ಲ ಕೇಳಬಾರದ ವಯಸ್ಸಲ್ಲಿ ಕೇಳಿರುತ್ತೇವೆ ಅನ್ನುವುದನ್ನು ನೆನಪಿಡಿ. ಸ್ವರ್ಗ ನರಕಗಳ ಬಗ್ಗೆ ಯೋಚಿಸುವ ವಯಸ್ಸೇ ಅಲ್ಲ ಹದಿನೆಂಟು. ಆದರೆ ಆ ವಯಸ್ಸಲ್ಲೇ ಹುಟ್ಟುಸಾವು ಎರಡರ ನಡುವೆ ಮೂರು ದಿನದ ಬಾಳು ಎಂಬ ಸಾಲು ಬೇರೊಂದು ಥರ ಖುಷಿ ಕೊಟ್ಟಿರುತ್ತದೆ.

ಅದಕ್ಕೆ ಕಾರಣಗಳೂ ಇವೆ; ನಡುವಯಸ್ಸು ದಾಟಿದ ಮೇಲೆ ಮೂರು ದಿನದ ಬಾಳು ಎಂಬ ಕಲ್ಪನೆ ಅಷ್ಟು ಸಹ್ಯವಾಗುವುದಿಲ್ಲ. ಆದರೆ ಬಾಲ್ಯದಲ್ಲಿ ನಮಗೆಲ್ಲ ಎಂಥ ಆತ್ಮವಿಶ್ವಾಸ ಮತ್ತು ಅಮರತ್ವದಲ್ಲಿ ಎಂಥ ನಂಬಿಕೆ ಇರುತ್ತದೆ ಅಂದರೆ ಜೀವನ ನಶ್ವರ ಅನ್ನುವುದೂ ತಮಾಷೆಯಾಗಿ ಕೇಳಿಸುತ್ತದೆ.

ಇದನ್ನು ಇಂಗ್ಲಿಷ್‌ನಲ್ಲಿ ನಾಸ್ಟಾಲ್ಜಿಯ ಅನ್ನುತ್ತಾರೆ. ಕನ್ನಡದಲ್ಲಿ ಅದಕ್ಕೆ ಹಳೆಯ ನೆನಪುಗಳ ಗೀಳು ಅನ್ನುವ ಅರ್ಥ. ಸವಿನೆನಪು ಅನ್ನುವ ಪದವನ್ನು ನಾವು ಬಳಸಬಹುದು. ಇದು ಒಬ್ಬ ಬರಹಗಾರನಲ್ಲಿ ಅತಿಯಾದಾಗ ಆತ ಸಮಕಾಲೀನತೆಯಿಂದ ದೂರ ಸರಿಯುತ್ತಾನೆ ಅನ್ನುವ ಆರೋಪಕ್ಕೆ ತುತ್ತಾಗುತ್ತಾನೆ. ಕುವೆಂಪು ಬರೆದ ‘ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ, ಮಲೆಯ ನಾಡಿಗೆ, ಮಳೆಯ ಬೀಡಿಗೆ.. ’ ಅನ್ನುವ ಹಾಡು ನಾಸ್ಟಾಲ್ಜಿಯಕ್ಕೆ ಅತ್ಯುತ್ತಮ ಉದಾಹರಣೆ.

ಆದರೆ ಹಾಡುಗಳಲ್ಲೋ ನೆನಪಲ್ಲೋ ಹಿಂದಕ್ಕೆ ಹೋದಷ್ಟು ಸುಲಭವಾಗಿ ನಿಜಜೀವನದಲ್ಲಿ ಹಿಂದಕ್ಕೆ ಹೋಗಲಾಗುವುದಿಲ್ಲ. ‘ತೋಟದಾಗೆ ಹೂವ ಕಂಡೆ, ಹೂವ ಒಳಗೆ ನಿನ್ನ ಕಂಡೆ. ನನ್ನ ರಾಜ ರೋಜ ಹಿಂಗೆ ನಗ್ತಾ ಇರ್ಲಿ ಯಾವತ್ತೂ..’ ಅನ್ನುವ ಹಾಡು ಕೇಳುತ್ತಾ ಹಿಂದಕ್ಕೆ ಹೋದಾಗ ಅಲ್ಲಿ ತೋಟವೂ ಇರುತ್ತದೆ, ಹೂವೂ ಇರುತ್ತದೆ. ರಾಜ ರೋಜಾ ನಗುತ್ತಲೇ ಇರುತ್ತದೆ. ಆದರೆ ನಿಜವಾಗಿಯೂ ಹೋಗಿ ನೋಡಿದರೆ ತೋಟವೇ ಇರುವುದಿಲ್ಲ !

ಬೇರೆ ಕವಿತೆಗಳಿಗೆ ಅರ್ಥ ಮಾತ್ರ ಇರುತ್ತದೆ. ಆದರೆ ಚಿತ್ರಗೀತೆಗಳ ಜೊತೆಗೆ ಪ್ರತಿಯಾಬ್ಬರಿಗೂ ಅವರದೇ ಆದ ಚಿತ್ರವೊಂದು ಇರುತ್ತದೆ. ಆ ಹಾಡು ಓದುತ್ತಿದ್ದಾಗ ಮಾತ್ರ ಆ ಚಿತ್ರ ನೆನಪಾಗುತ್ತದೆ. ಹಾಡು ಕೇಳುವ ಹೊತ್ತಿಗೆ ಸುತ್ತಮುತ್ತ ಯಾರೋ ಇರುತ್ತಾರೆ. ಅವರ ಮಾತು, ನಗು, ಗದ್ದಲದಲ್ಲಿ ಮನಸ್ಸು ಹಿಂದಕ್ಕೆ ಹೋಗುವುದಿಲ್ಲ. ಆದರೆ ಒಬ್ಬರೇ ಕೂತು ಚಿತ್ರಗೀತೆಗಳ ಪುಸ್ತಕ ಕೈಗೆತ್ತಿಕೊಂಡಾಗ ಒಂದೊಂದು ಹಾಡೂ ಒಂದೊಂದು ಘಟನೆಯಾಂದಿಗೆ ನೆನಪಿಗೆ ಬರುತ್ತದೆ.

ನೋಟದಾಗೆ ನಗೆಯ ಮೀಟಿ, ಮೋಜಿನಾಗೆ ಎಲ್ಲೆಯ ದಾಟಿ... ಅಂತ ಓದುತ್ತಿದ್ದ ಹಾಗೇ ತುಂಬುತೋಳಿನ ಉದ್ದಲಂಗದ ಮೀನಕಂಗಳ ಹೆಸರೇ ಗೊತ್ತಿಲ್ಲದ ಹುಡುಗಿ ಹಾಗೆ ಸುಳಿದು ಹೀಗೆ ಮರೆಯಾಗುತ್ತಾಳೆ.

ಜೀವಿಸುವುದಕ್ಕೆ ಮತ್ತೊಂದು ಕಾರಣ ಸಿಗುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X