ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಗಂಧಿಕಾ ಎಂಬ ಪರಿಮಳ ಮತ್ತು ಹನುಮಂತನ ಬಾಲ

By Staff
|
Google Oneindia Kannada News

ಜಾನಕಿ

ಮಹಾಭಾರತದಲ್ಲಿ ಬರುವ ಕತೆಗಳು ಒಮ್ಮೊಮ್ಮೆ ನಮ್ಮನ್ನು ಅಚ್ಚರಿಗೊಳಿಸುತ್ತವೆ. ರಾಮಾಯಣದ ಹಾಗೆ ಅದು ಸರಳವಾದ ಕತೆಯಲ್ಲ. ಮಹಾಭಾರತದ ಒಳಗೆ ಸಕಲವೂ ಹಾಸುಹೊಕ್ಕು. ಹಾಗೇ ಮಹಾಭಾರತದ ಪಾತ್ರಗಳು ಕೂಡ ವಿಚಿತ್ರ ಲವಲವಿಕೆಯಿಂದ ನಳನಳಿಸುತ್ತಿರುತ್ತವೆ.

ಪಾಂಡವರ ವನವಾಸದ ಪ್ರಸಂಗವನ್ನೇ ತೆಗೆದುಕೊಳ್ಳಿ. ನಾವೆಲ್ಲ ಈಗ ಪಾಂಡವರು, ಪಾಪ, ಕಾಡು ಮೇಡಲ್ಲಿ ಅಲೆದರು ಎಂದು ಮರುಗಿದರೂ, ಅವರ ಜೀವನದ ಅತ್ಯಂತ ಸುಖದಾಯಕ ದಿನಗಳು ಅವೇ ಆಗಿದ್ದಿರಬೇಕು. ಆ ಅವಧಿಯಲ್ಲಿ ಅವರು ಕಾಡಲ್ಲಿದ್ದರು. ಅಲ್ಲಿ ಋಷಿಗಳ ಆತಿಥ್ಯ ಸ್ವೀಕರಿಸುತ್ತಾ, ಅನೇಕ ತೀರ್ಥಕ್ಪೇತ್ರಗಳನ್ನು ಸಂದರ್ಶಿಸುತ್ತಾ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುತ್ತಾ ಹಲವು ವೈಚಿತ್ರಗಳನ್ನು ನೋಡುತ್ತಾ ಹಾಯಾಗಿದ್ದರು. ರಾಜ್ಯಭಾರದ ಹೊಣೆಯಿರಲಿಲ್ಲ ; ವನವಾಸ ಮುಗಿಸಿದ ಮೇಲಾದರೂ ರಾಜ್ಯ ಸಿಕ್ಕೀತು ಎಂಬ ಭರವಸೆಯಿತ್ತು.

Sougandhika flower and Tail of Hanumanವನವಾಸ ಮುಗಿಸಿದ ನಂತರ ನಡೆದ ಘಟನೆಗಳನ್ನೇ ನೋಡಿ. ನಾಡಿಗೆ ಕಾಲಿಟ್ಟ ತಕ್ಷಣ ಅವರು ಯುದ್ಧಸನ್ನದ್ಧರಾಗಬೇಕಾಯಿತು. ಬಂಧು ಮಿತ್ರರನ್ನು ಯುದ್ಧಕ್ಕೆ ಬಲಿಕೊಡಬೇಕಾಯಿತು. ಆಮೇಲೆ ಅದೆಷ್ಟೋ ವರುಷ ಪಾಂಡವರು ರಾಜ್ಯವಾಳಿದರು ಅನ್ನುವುದು ಮಹಾಭಾರತದಲ್ಲಿ ಮುಖ್ಯವಾಗಲೇ ಇಲ್ಲ. ನಮ್ಮ ಅತ್ಯುತ್ತಮ ಕತೆಗಳೆಲ್ಲ ನಾವು ಕಷ್ಟವನ್ನು ಎದುರಿಸಿ ನಿಂತದ್ದೇ ಆಗಿರುತ್ತದೆ. ಗೆಲುವಿನ ನಂತರ ಪಟ್ಟ ಸುಖಕ್ಕೆ ಕತೆಯಾಗುವ ಗುಣವೇ ಇರುವುದಿಲ್ಲ. ಟಾಲ್‌ಸ್ಟಾಯ್‌ ಹೇಳುವ ಹಾಗೆ; Happy families are all alike; Every unhappy family is unhappy in its own way.

ನೊಂದ ನೋವನ್ನಷ್ಟೆ ಹಾಡಲೇಬೇಕೇನು, ಬೇಡವೇ ಯಾರಿಗೂ ಸಿರಿಮಲ್ಲಿಗೆ ಅಂತ ಕೆಎಸ್‌ನ ಕೇಳಿದರೂ, ಸಿರಿಮಲ್ಲಿಗೆಯಲ್ಲಿ ಸುಖವಿಲ್ಲ, ನೊಂದ ನೋವಿನ ಕತೆಯಲ್ಲೇ ನಮ್ಮಸಂತೋಷವಿದೆ. ಹಗಲಿಡೀ ಬೆವರು ಹರಿಸಿ ದುಡಿದ ರೈತ, ರಾತ್ರಿ ಊಟ ಮಾಡುವ ಹೊತ್ತಿಗೆ ಹಗಲು ಪಟ್ಟ ಕಷ್ಟವನ್ನು ನೆನೆದು ಸುಖಿಸುತ್ತಾನೋ ಅಥವಾ ರಾತ್ರಿ ಮಾಡುತ್ತಿರುವ ಊಟವನ್ನು ಅನುಭವಿಸಿ ಸುಖಿಸುತ್ತಾನೋ ಹೇಳಿ ನೋಡೋಣ? ತುಂಬ ಬಡತನದಿಂದ ಎತ್ತರಕ್ಕೇರಿದ ವ್ಯಕ್ತಿಯ ಜೀವನಚರಿತ್ರೆಯನ್ನು ನಾವು ಓದುವುದು ಹೇಗಿದ್ದವನು ಹೇಗಾದ ಅಂತ ತಿಳಿದುಕೊಳ್ಳುವುದಕ್ಕೆ. ಎತ್ತರಕ್ಕೇರಿದ ನಂತರ ಆತ ಆರು ಕಾರು ಇಟ್ಟುಕೊಂಡಿದ್ದ, ದೊಡ್ಡ ಮನೆ ಕಟ್ಟಿಸಿಕೊಂಡಿದ್ದ ಅನ್ನುವುದರಲ್ಲಿ ಯಾರಿಗೂ ಕುತೂಹಲ ಇರುವುದು ಸಾಧ್ಯವೇ ಇಲ್ಲ.

ಮತ್ತೆ ಮಹಾಭಾರತಕ್ಕೆ ಮರಳಿದರೆ ಅರಣ್ಯಪರ್ವದಲ್ಲೊಂದು ಪುಟ್ಟ ಕತೆ ಬರುತ್ತದೆ. ದ್ರೌಪದಿ ಸೌಗಂಧಿಕಾ ಪುಷ್ಪಕ್ಕೆ ಮಾರು ಹೋದ ಕತೆಯಿದು. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ, ದಾಟಿ ಬಂತು ಬೇಲಿ ಸಾಲ, ಮೀಟಿ ಹಳೆಯ ಮಧುರ ನೋವ ಎಂಬಂತೆ ತೇಲಿ ಬಂದ ಪರಿಮಳಕ್ಕೆ ಸೋತ ದ್ರೌಪದಿ ಭೀಮನ ಬಳಿ ಹೇಳುತ್ತಾಳೆ;

ಹಿರಿದು ಸೊಗಸಾಯ್ತೆನಗೆ ಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋರಥ ವ್ಯಥೆಯ
ಪರಿಹರಿಪುದೆನಲಬುಜ ವದನೆಯ
ಕುರುಳನುಗರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ

ಇದು ಕುಮಾರವ್ಯಾಸನ ವರ್ಣನೆ. ಕುಮಾರವ್ಯಾಸನಿಗೆ ಸೌಗಂಧಿಕಾ ಪುಷ್ಪದ ಕಲ್ಪನೆಗಿಂತ ಅದನ್ನು ತರುವುದಕ್ಕೆ ಹೋಗುವ ಹಾದಿಯಲ್ಲಿ ಭೀಮ ಮತ್ತು ಆಂಜನೇಯರು ಭೇಟಿಯಾಗುವ ಕತೆಯೇ ರೋಚಕ ಅನ್ನಿಸಿಬಿಟ್ಟಿದೆ. ಆದ್ದರಿಂದ ಹೂವಿನ ಪ್ರಸಂಗವನ್ನು ಆತ ಎರಡೇ ಪದ್ಯಗಳಲ್ಲಿ ನಿವಾರಿಸುತ್ತಾನೆ. ಹಾಗಿದ್ದರೂ ಈ ವಿವರಣೆ ಎಂಥವರಿಗೂ ನಗು ತರಿಸುತ್ತದೆ.

ಆ ಹೂವಿನ ಪರಿಮಳವನ್ನು ದ್ರೌಪದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಪೂರ್ವದ ಪರಿಮಳದ ಕೇಳಿ ಅನ್ನುತ್ತಾಳೆ. ಅಂದರೆ ಆ ಹೂವಿನ ಪರಿಮಳವನ್ನು ಆಘ್ರಾಣಿಸಿದಾಗ ಪೂರ್ವಜನ್ಮದ ವಾಸನೆಯೇ ಹೊಡೆದಂತಾಯಿತು ಅನ್ನುವ ಭಾವ ಇದೆ. ಆ ಹೂವು ತಾವರೆಯನ್ನು ತಂದುಕೊಡು ಅಂತ ಆಕೆ ಕೇಳಿದಾಗ, ಆ ಕೆಂದಾವರೆ ಮೊಗದ ಹುಡುಗಿಯ ಮುಂಗುರಳನ್ನು ಬೆರಳಲ್ಲಿ ಬದಿಗೆ ಸರಿಸಿ, ತಾವರೆಯನ್ನು ತರುತ್ತೇನೆ ಅಂತ ಹೊರಡುತ್ತಾನೆ ಭೀಮ.

ಪ್ರಶ್ನೆ ಇಷ್ಟೇ; ಭೀಮ ಅಷ್ಟೆಲ್ಲ ರಸಿಕನಾದದ್ದು ಯಾವಾಗ? ಹೂವು ತಂದುಕೊಡು ಎಂದ ಹೆಂಡತಿಯ ಬೇಡಿಕೆಗೆ ಭೀಮ ಗದೆ ಹೆಗಲಿಗೇರಿಸಿ ಹೊರಟದ್ದು ಏನನ್ನು ಹೇಳುತ್ತದೆ. ಹೂವು ತರುವುದಕ್ಕೆ ಗದೆ ಯಾಕೆ?

ಆದರೆ ದ್ರೌಪದಿ ಹೇಳಿದ ಪೂರ್ವಜನ್ಮದ ವಾಸನೆ, ಭೀಮ ಥಟ್ಟನೆ ಹೊರಟು ನಿಂತದ್ದು, ಹೆಗಲಿಗೇರಿದ ಗದೆ ಎಲ್ಲದಕ್ಕೂ ವಿಶೇಷ ಅರ್ಥ ಬರುವುದು ಆತ ಹಾದಿಯಲ್ಲಿ ಆಂಜನೇಯನನ್ನು ಭೇಟಿಯಾದಾಗ. ಮಹಾಭಾರತದ ಬೆರಗೇ ಅದು. ಅಲ್ಲಿ ಪ್ರತಿಯಾಂದು ಘಟನೆಯೂ ಅನೂಹ್ಯ. ದ್ರೌಪದಿ ಹೂವು ಕೇಳಿದಾಗ ಆತ ಹೋಗಿ ಹೂವು ತಂದುಕೊಟ್ಟಿದ್ದರೆ ಅದು ಮಾಮೂಲು ಪ್ರಸಂಗ ಆಗುತ್ತಿತ್ತು. ಆದರೆ ಹಾಗಾಗುವುದಿಲ್ಲ. ಆಕೆ ಹೂವು ಕೇಳಿದ್ದಕ್ಕೂ ಭೀಮ ಹೋಗಿದ್ದಕ್ಕೂ ದಾರಿಯಲ್ಲಿ ಆಂಜನೇಯ ಸಿಕ್ಕಿದ್ದಕ್ಕೂ ಕುಬೇರನ ಕೊಳದಲ್ಲಿದ್ದ ಆ ಹೂವನ್ನು ಕೀಳುವಾಗ ಕ್ರೋಧರೆಂಬ ರಾಕ್ಷಸರು ಅಡ್ಡಿ ಮಾಡಿದ್ದಕ್ಕೂ ಸಂಬಂಧವಿದೆ ಅನ್ನಿಸುವ ಹಾಗೆ ಕತೆ ಬೆಳೆಯುತ್ತಾ ಹೋಗುತ್ತದೆ.

ಹೀಗೆ ಭೀಮ ಹೊರಟಾಗ ಆತನಿಗೆ ಹನುಮಂತ ಎದುರಾಗುತ್ತಾನೆ. ಆ ಕಾಡಲ್ಲಿ ಹನುಮಂತ ಏನು ಮಾಡುತ್ತಿರುತ್ತಾನೆ? ಕುಮಾರವ್ಯಾಸ ಹೇಳುತ್ತಾನೆ;

ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ..

ಒಮ್ಮೊಮ್ಮೆ ಕುಮಾರವ್ಯಾಸ ಅರ್ಥವಿಲ್ಲದೆ ಪದಗಳನ್ನು ಬಳಸಿದ್ದಾನೇನೋ ಅನುಮಾನ ಬರುತ್ತದೆ. ಅದಕ್ಕೆ ಕಾರಣ ನಮ್ಮ ಸೀಮಿತ ಪದಭಂಡಾರ.

ನಿಸ್ಸೀಮ ಕದಳೀಷಂಡ ಅನ್ನುವ ಪದದ ಅರ್ಥ ಹುಡುಕಿದರೆ ಮೇರೆಯಿಲ್ಲದ ಬಾಳೆಯ ಗಿಡಗಳ ಗುಂಪು ಅನ್ನುವ ಅರ್ಥ ಸಿಗುತ್ತದೆ. ಆ ತೋಟದೊಳಗೆ ರಾಮನಾಮ ಸುಧಾಭಿಷೇಕದಲ್ಲಿ ತೋಯುತ್ತಾ ಹನುಮಂತ ಸಮಗ್ರಸೌಖ್ಯದಲ್ಲಿದ್ದ ಅನ್ನುತ್ತಾನೆ ಕುಮಾರವ್ಯಾಸ. ಸಮಗ್ರ ಸೌಖ್ಯ ಎಂಬ ಪ್ರಯೋಗವೇ ಎಷ್ಟು ಸೊಗಸಾಗಿದೆ.

ದಾರಿಗೆ ಬಾಲ ಅಡ್ಡ ಇಟ್ಟು ಕೂತಿರುತ್ತಾನಂತೆ ಹನುಮ, ಬಾಲವನ್ನು ದಾಟಿ ಹೋಗಬಹುದಲ್ಲ ಭೀಮ ಅನ್ನುವುದು ನಮ್ಮ ಕಲ್ಪನೆ. ಆದರೆ ಆ ಬಾಲ ದಾಟಲಾರದಷ್ಟು ಹಿರಿದಾಗಿತ್ತೇ, ಬಾಲವನ್ನು ದಾಟಬಾರದು ಅನ್ನುವ ನಿಯಮಮಿತ್ತೇ ಗೊತ್ತಿಲ್ಲ. ಭೀಮ ಗರ್ಜಿಸಿ 'ಎತ್ತಯ್ಯ ಬಾಲ" ಎಂದಾಗ ಹನುಮಂತ ಉತ್ತರಿಸುವುದು ಕೇಳಿ;

ನಾವು ವೃದ್ಧರು ನಮ್ಮ ಬಾಲವ ನಾವು ಹದುಳಿಸಲಾರೆವೀಗಳು ನೀವು ತೊಲಗಿಸಿ ಬಿಜಯ ಮಾಡುವುದೆಂದನಾ ಹನುಮ..

ಆ ನಂತರ ಭೀಮ ಪಟ್ಟ ಪಾಡನ್ನು ಓದಿದರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ. ಮಿಡಕದು ಬಾಲ ಊರ್ಧ್ವಶ್ವಾಸ ಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ ಅನ್ನುತ್ತದೆ ವಿವರಣೆ. ಕೊನೆಗೆ ಸೋತ ಭೀಮನಿಗೆ ತಾನು ಯಾರು ಎನ್ನುವುದನ್ನು ಹನುಮಂತ ಹೇಳುತ್ತಾನೆ;

ನಾವು ಹಿಂದಣ ಯುಗದ ರಾಘವ ದೇವನೋಲೆಯಕಾರರು..

ರಾಘವನಿಗೆ ಅಂಚೆಯಣ್ಣ ಆಗಿದ್ದವನು ಎಂದು ತನ್ನನ್ನು ಪರಿಚಯಿಸಿಕೊಳ್ಳುತ್ತಾ ನಾವಿಬ್ಬರೂ ಅಣ್ಣತಮ್ಮಂದಿರು ಅನ್ನುವುದನ್ನು ಹನುಮ ಸೂಚಿಸುತ್ತಾನೆ.

ಒಂದು ಹೂವಿನ ಹುಡುಕಾಟ ಮತ್ತೊಂದು ಸಂಬಂಧದ ಹುಡುಕಾಟವೂ ಆಗಿ ಬಿಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X