ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರಿನ ಹಾದಿಯಲ್ಲಿ ಕಣ್ತೆರೆಸುವ ಕವಿತೆ

By Staff
|
Google Oneindia Kannada News
ರಾಮಾಯಣದಲ್ಲಿ ಸೀತೆ ಪಡುವ ಪಾಡನ್ನು ನಾವು ಅತ್ಯಂತ ಆಸಕ್ತಿಯಿಂದ ಓದುತ್ತೇವಲ್ಲ ? ಮಹಾಭಾರತದಲ್ಲಿ ದ್ರೌಪದಿಗೆ ಎದುರಾಗುವ ಕಷ್ಟಗಳನ್ನು ಓದಿ ಆನಂದಪಡುತ್ತೇವಲ್ಲ ? ಸಾಹಿತ್ಯಕೃತಿಗಳಲ್ಲಿ ಬರುವ ದಾರುಣವಾದ ನೋವು ಕೂಡ ನಮ್ಮನ್ನು ಮುದಗೊಳಿಸುವ ಶಕ್ತಿ ಹೊಂದಿದೆಯಲ್ಲ ? ಹಾಗಿದ್ದರೆ ಮಾನವೀಯತೆ, ದಯೆ, ಕರುಣೆಗೆ ಅವಕಾಶವೆಲ್ಲಿ ?

ಕವಿ ಕೆಎಸ್‌ನ ಕೇಳಿದರು;

ನೊಂದ ನೋವನ್ನಷ್ಟೆ ಹಾಡಲೇಬೇಕೇನು?
ಬೇಡವೇ ಯಾರಿಗೂ ಸಿರಿಮಲ್ಲಿಗೆ?

ಅದೇ ಸರಿಯಲ್ಲವೇ? ನೋವಿನ ಕತೆಯನ್ನೋ ಕವಿತೆಯನ್ನೋ ಯಾರಾದರೂ ಯಾಕೆ ಬರೆಯಬೇಕು? ಜೀವನದಲ್ಲಿ ಎದುರಾಗುವ ದಾರುಣವಾದ ದುಃಖಗಳನ್ನು ನಾವು ಎಂದಾದರೂ ಸವಿದಿದ್ದೇವೆಯೇ? ಅವನ್ನು ಸುಂದರ ಎಂದು ಕರೆದಿದ್ದೇವಾ? ಹಾಗಿರುವಾಗ ಅದೇ ಕತೆಯಾಗಿ ಬಂದಾಗ ಯಾಕೆ ಸುಂದರಕಾಂಡ ಆಗುತ್ತದೆ?

ಅದು ಸಾಹಿತ್ಯಕ್ಕಿರುವ ಶಕ್ತಿ. ಸತ್ಯಕ್ಕಿರುವ ಶಕ್ತಿ. ಒಂದು ಸಾಹಿತ್ಯಕೃತಿಯಲ್ಲಿ ನಮ್ಮನ್ನು ತಟ್ಟುವುದು, ಮುದಗೊಳಿಸುವುದು ಅಲ್ಲಿ ಗೋಚರವಾಗುವ ಸತ್ಯ. ಸತ್ಯ ಸಂತೋಷ ಕೊಟ್ಟಷ್ಟು ಇನ್ಯಾವುದೂ ಸಂತೋಷ ಕೊಡಲಾರದು. ಅಪ್ರಾಮಾಣಿಕ ಕೃತಿಗಳು ನಮ್ಮನ್ನು ಅಷ್ಟಾಗಿ ಕಾಡದೇ ಇರುವುದಕ್ಕೆ ಅದೇ ಕಾರಣ. ಲೇಖಕ ಬರೆಯುತ್ತಿರುವುದು ಸುಳ್ಳು ಅಂತ ಅನ್ನಿಸಿದ ತಕ್ಷಣವೇ ಒಂದು ಸಾಹಿತ್ಯ ಕೃತಿ ಬಿದ್ದು ಹೋಗುತ್ತದೆ.

ಹಾಗಿದ್ದರೆ ಲೇಖಕ, ಕವಿ, ಸಾಹಿತಿ ಹೇಳುತ್ತಿರುವುದು ನಿಜವಾ? ಅದೂ ಅಲ್ಲ. ಆತ ಬರೆಯುವುದೇ ಕತೆಯನ್ನು, ಅದು ಫ್ಯಾಕ್ಟ್‌ ಅಲ್ಲ, ಫಿಕ್ಷನ್‌. ಅಂದರೆ ಕಲ್ಪನೆ. ಆ ಕಲ್ಪನೆಯಲ್ಲೂ ಪ್ರಾಮಾಣಿಕತೆ ಇರಬೇಕು ಅಂತ ಬಯಸುವುದು ಎಂಥ ವಿರೋಧಾಭಾಸ.

ಆ ಕಾರಣಕ್ಕೆ ಸಾಹಿತ್ಯ ಎನ್ನುವುದು ಅತ್ಯಂತ ಸಂಕೀರ್ಣವಾದದ್ದು. ಒಂದು ಕತೆಯಲ್ಲೋ ಕಾದಂಬರಿಯಲ್ಲೋ ಪಾತ್ರಗಳನ್ನು ಮೀರಿ ಲೇಖಕ ಮಾತಾಡಲು ಯತ್ನಿಸಿದಾಗ ಅಲ್ಲಿ ಅಪ್ರಾಮಾಣಿಕತೆ ಕಂಡೀತು. ಅದು ಹೇಗೋ ಏನೋ ಓದುತ್ತಾ ಓದುತ್ತಾ ಒಂದು ಪಾತ್ರ ಸಹಜವಾಗಿಯೇ ನಮಗೆ ಇಷ್ಟವಾಗುತ್ತದೆ. ನಿಜ ಜೀವನದಲ್ಲಿ ಆದ ಹಾಗೆ.

ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಶಶಿಕುಮಾರ ಸೈಕಲ್ಲಿನಿಂದ ಬಿದ್ದು ಗಾಯಮಾಡಿಕೊಂಡ ಎನ್ನುವುದು ಶಶಿಕುಮಾರನನ್ನು ಬಲ್ಲವರಿಗೆ ಮಾತ್ರ ಕೆಟ್ಟ ಸುದ್ದಿ. ಉಳಿದವರ ಪಾಲಿಗೆ ಅದು ಸುದ್ದಿಯೇ ಅಲ್ಲ. ಎಲ್ಲೋ ಬದುಕಿರುವ ಶಶಿಕುಮಾರ ಎಂಬ ವ್ಯಕ್ತಿ ಸೈಕಲ್ಲಿನಿಂದ ಬಿದ್ದು ಮೊಣಕಾಲು ಮುರಿಸಿಕೊಂಡದ್ದನ್ನು ನಾವು ತುಂಬ ನಿರ್ಲಿಪ್ತ ಭಾವದಿಂದಲೇ ನೋಡಬಲ್ಲೆವು.

ಆದರೆ, ನಾವು ನೋಡುತ್ತಿರುವ ಯಾವುದೋ ಒಂದು ಸೀರಿಯಲ್ಲಿನ ಪಾತ್ರಕ್ಕೆ ಏನಾದರೂ ಆದರೆ ಮನಸ್ಸು ಮಿಡಿಯುತ್ತದೆ. ಓದುತ್ತಿರುವ ಕಾದಂಬರಿಯ ನಾಯಕಿ ಕಣ್ಣೀರು ಮಿಡಿದರೆ ನಾವೂ ಕಣ್ಣೀರು ಹಾಕುತ್ತೇವೆ. ಬದುಕಿರುವ ಒಬ್ಬ ವ್ಯಕ್ತಿಗಿಂತ ಕಾಲ್ಪನಿಕ ಪಾತ್ರವೊಂದು ಇಷ್ಟವಾಗುವುದು ಯಾಕೆ ?

ಸಿಂಪಲ್‌!

ಆ ಪಾತ್ರ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿಬಿಟ್ಟಿರುತ್ತದೆ. ಒಂದು ವೈರುದ್ಧ್ಯ ಗಮನಿಸಿ. ನಾವು ನಮಗಿಂತ ತುಂಬ ದೂರದಲ್ಲಿರುವ, ರಕ್ತಮಾಂಸಗಳಿಂದ ಕೂಡಿರದ, ಎಂದೂ ನಮ್ಮ ಮುಂದೆ ಧುತ್ತೆಂದು ಹಾಜರಾಗದ ವ್ಯಕ್ತಿಗಳ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯನ್ನು ನಮ್ಮ ಕಣ್ಮುಂದಿರುವ ವ್ಯಕ್ತಿಗಳ ಮೇಲೆ ಇಟ್ಟುಕೊಂಡಿರುವುದಿಲ್ಲ. ಬಂಗಾರದ ಮನುಷ್ಯ ಚಿತ್ರದ ನಾಯಕನನ್ನು ಪ್ರೀತಿಸಿದಷ್ಟು ಗಾಢವಾಗಿ ಪಕ್ಕದ ಮನೆಯ ರೈತನನ್ನು ಪ್ರೀತಿಸಲಾಗುವುದಿಲ್ಲ. ಕರ್ವಾಲೋ ಕಾದಂಬರಿಯ ಮಂದಣ್ಣನಂಥ ಹತ್ತಾರು ಮಂದಿ ಸುತ್ತಮುತ್ತ ಇದ್ದರೂ ಅವರನ್ನು ನಾವು ನಮ್ಮೊಳಗೆ ಕರೆದುಕೊಳ್ಳುವುದಿಲ್ಲ.

ಯಾಕಿರಬಹುದು ಅಂತ ಯೋಚಿಸಿದ್ದೀರಾ?

ಅದಕ್ಕೂ ನಮ್ಮ ಮನಸ್ಸೇ ಕಾರಣ. ನಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳಿಗೆ ನಮ್ಮಂತೆಯೇ ಅಹಂಕಾರವಿದೆ. ಕಾದಂಬರಿಯ ಪಾತ್ರಗಳಿಗೆ ಅಹಂಕಾರ ಇರುವುದಿಲ್ಲ. ಅವು ನಮ್ಮ ಯೋಚನೆಗೆ ವಿರುದ್ಧವಾಗಿ ವರ್ತಿಸುತ್ತವೆ ಎಂಬ ಭಯವಿರೋದಿಲ್ಲ. ಅವುಗಳು ಯಾವತ್ತೂ ನಮ್ಮ ಅಹಂಕಾರವನ್ನು ಚಿಂದಿಮಾಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಒಂದು ಪಾತ್ರದ ಅಹಂಕಾರ, ನಮ್ಮ ಅಹಂಕಾರವೇ ಆಗಿಬಿಡುತ್ತದೆ. ಈ ಪರಕಾಯ ಪ್ರವೇಶ ಮತ್ತೊಬ್ಬ ಜೀವಂತ ವ್ಯಕ್ತಿಯ ಜೊತೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವನನ್ನು ನಾವು ಪ್ರೀತಿಸದಷ್ಟೇ ಅನುಮಾನದಿಂದ ನೋಡುತ್ತೇವೆ. ಅವನು ನಮ್ಮ ಊಹೆ ಮತ್ತು ಲೆಕ್ಕಾಚಾರಗಳನ್ನು ಮೀರಬಲ್ಲ ಎಂಬ ಗುಮಾನಿ ಇರುತ್ತದೆ. ಪಾತ್ರಗಳು ಹಾಗಲ್ಲ , ಅವು ತಮ್ಮ ಪರಿಯನ್ನು ದಾಟಿ ಯಾವತ್ತೂ ಆಚೆ ಬರುವುದಿಲ್ಲ.

ಕಲೆಯೆಂದರೆ ಹಾಗೇ. ಅದು ಮಾನವ ಸಹಜವಾದ ಎಲ್ಲ ಕ್ಷುದ್ರತೆಗಳನ್ನೂ ಮೀರುತ್ತದೆ. ಒಂದು ಕ್ಷಣವಾದರೂ ನಮ್ಮನ್ನು ನಮ್ಮ ವರ್ತಮಾನದಿಂದ ಆಚೆಗೆ ಕರೆದೊಯ್ಯುತ್ತದೆ. ಹಾಗೆ ಪೂರ್ತಿಯಾಗಿ ಕರೆದೊಯ್ಯುವುದು ಕೂಡ ಒಳ್ಳೆಯದಲ್ಲ. ಅದು ಪಲಾಯನವಾದ. ಪೂರ್ತಿ ಇಲ್ಲೇ ಉಳಿಯುವುದೂ ಒಳ್ಳೆಯದಲ್ಲ ; ಅದು ರಿಯಲಿಸಂ. ಮನೆಯಾಳಗೆ ಮನೆಯಾಡೆಯ ಇದ್ದಾನೋ ಇಲ್ಲವೋ ಎಂಬ ದ್ವಂದ್ವವೇ ಜೀವಂತಿಕೆಯ ಲಕ್ಷಣ.

ಹೊಸ ಹುಡುಗರು ಸಾಹಿತ್ಯದ ಉಪಯೋಗ ಏನು ಎಂದು ಕೇಳುತ್ತಾರೆ. ಸಾಹಿತ್ಯಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ ಎಂದು ಭಾವಿಸುತ್ತಾರೆ. ಶ್ರೀಲಂಕಾಕ್ಕೆ ಸ್ವಾತಂತ್ರ ಬಂದಿದ್ದು ಯಾವಾಗ ಎಂದು ತಿಳಿದುಕೊಂಡಿರುವವನಿಗಿಂತ ಶ್ರೀಲಂಕಾದ ಸಾಗರತೀರದ ಗಾಳಿಗೆ ಎಂಥ ಪರಿಮಳವಿರುತ್ತೆ ಅನ್ನುವುದರ ಬಗ್ಗೆ ಆಸಕ್ತಿ ಇಟ್ಟುಕೊಳ್ಳುವುದು ಒಳ್ಳೆಯದು.

ಇಡೀ ಜಗತ್ತೇ ನಮ್ಮೊಳಗೆ ತುಂಬಿಕೊಳ್ಳುವುದು ಮಾಹಿತಿಯಿಂದಲ್ಲ , ಸಾಹಿತ್ಯದಿಂದ. ನೇಪಾಳದ ಮೇಲೊಂದು ಪುಟ್ಟ ಟಿಪ್ಪಣಿ ಬರೆ ಎಂದಾಗ ನೇಪಾಳದ ರಾಜಧಾನಿ ಯಾವುದು? ಅಲ್ಲಿಯ ಜನಸಂಖ್ಯೆ ಎಷ್ಟು ? ಅಲ್ಲಿನ ಪ್ರಧಾನಿ ಯಾರು ಎಂದು ಬರೆದರೆ ಯಾರಿಗೂ ಆಸಕ್ತಿಯಿಲ್ಲ. ‘ನೇಪಾಳದ ಚಹದಂಗಡಿಯಲ್ಲಿ ಕಂಪಿಸುವ ಕೈಗಳಿಂದ ಚಹಾ ತಂದುಕೊಟ್ಟ ಹುಡುಗಿಯ ಹೆರಳಲ್ಲಿದ್ದದ್ದು ನಮ್ಮಕ್ಕ ಮುಡಿಯುತ್ತಿದ್ದ ನಂದಬಟ್ಟಲ ಹೂವು’ ಎಂದಾಗಲೇ ಅದು ನಮ್ಮ ನೇಪಾಳವಾಗುತ್ತದೆ.

ಇದನ್ನು ಯಾವ ಶಿಕ್ಷಣ ನೀಡಬಲ್ಲದು?

***

ಚಪ್ಪಾಳೆ

ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಹೇಮಾ ಪಟ್ಟಣಶೆಟ್ಟಿ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಮೊನ್ನೆ ಅಚಾನಕ್‌ ಅವರು ಸಂಪಾದಿಸಿದ ‘ಸಂಕಲನ’ ಸಿಕ್ಕಿತು. ವರುಷಕ್ಕೆ ನೂರೈವತ್ತು ಕೊಟ್ಟರೆ ಇದು ಎರಡು ತಿಂಗಳಿಗೊಮ್ಮೆ ಮನೆಗೇ ಬಂದು ಬೀಳುತ್ತದೆ.

ಕೈಗೆ ಸಿಕ್ಕ ಹನ್ನೊಂದನೆಯ ಸಂಚಿಕೆಯಲ್ಲಿ ಗಮನ ಸೆಳೆದದ್ದು ಭಾರತೀಸುತರ ಕುರಿತ ಒಂದು ಟಿಪ್ಪಣಿ. ಭಾರತೀಸುತ ನಿಮಗೆ ನೆನಪಾಗಬೇಕಿದ್ದರೆ ಅವರ ಎರಡು ಕಾದಂಬರಿಗಳನ್ನು ಓದಬೇಕು. ಪುಟ್ಟಣ್ಣ ಕಣಗಾಲರು ಚಿತ್ರಿಸಿರುವ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ ನೋಡಿದರೆ ನಿಮಗೆ ಸಿಗುವುದು ಭಾರತೀಸುತರ ಪ್ರತಿಭೆಯ ಒಂದು ಕಣ ಮಾತ್ರ. ಆದರೆ ಆ ಕಾದಂಬರಿ ಓದಿದರೆ ಅವರ ಕಲ್ಪನಾಶಕ್ತಿ ಮತ್ತು ಬರವಣಿಗೆಯ ಓಘ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ.

ಭಾರತೀಸುತರ ಹೆಸರು ಎಸ್‌. ಆರ್‌. ನಾರಾಯಣರಾವ್‌ ಎಂಬ ಮೂಲಭೂತ ಮಾಹಿತಿಯಿಂದ ಹಿಡಿದು ಅವರ ಮಗಳು ಕುಸುಮ ಶಾನಭಾಗ ಎಂಬ ಖುಷಿಕೊಡುವ ಸಂಗತಿಯೂ ಸಂಕಲನದಲ್ಲಿದೆ. ಅಪ್ಪನ ಬಗ್ಗೆ ಕುಸುಮಾ ಬರೆದ ‘ನನ್ನ ಅವ್ವ ಅಪ್ಪ’ ಎಂಬ ನೆನಪಿನ ಮಾಲಿಕೆಯ ಲೇಖನವೂ ಇದೆ. ಭಾರತೀಸುತರ ಹುಲಿಯ ಹಾಲಿನ ಮೇವು ಕಾದಂಬರಿಯನ್ನು ಮತ್ತೊಮ್ಮೆ ಓದುವಂತೆ ಪ್ರೇರೇಪಿಸಿದ್ದಕ್ಕೆ ಸಂಕಲನಕ್ಕೂ ಕುಸುಮಾರಿಗೂ ಥ್ಯಾಂಕ್ಸ್‌.

ಸಂಕಲನ ಹೀಗೆ ಅಚ್ಚರಿಗಳೊಂದಿಗೆ ಬರುತ್ತಿರಲಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌ !)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X