• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತು ಯಾತನೆಯ ದಿಡ್ಡಿ ಬಾಗಿಲು !

By Staff
|
 • ಜಾನಕಿ
 • ‘ಸುಮಾರು ಮುವ್ವತ್ತು ದಿನಗಳ ಕಾಲ ಈ ಕಾದಂಬರಿ ನನ್ನಿಂದ ಬರೆಸಿಕೊಂಡಿದೆ. ಪ್ರತಿದಿನದ ಕಂತನ್ನೂ ದಾನವೆಂಬಂತೆ ಪಡೆಯುತ್ತ ನಾನು ಬರೆದ ಕ್ರಿಯೆ ನನಗೆ ಕೊಟ್ಟ ಸುಖದಲ್ಲಿ ಸ್ವಲ್ಪವಾದರೂ ನಿಮಗೆ ಸಿಕ್ಕರೆ ನಾನು ಕೃತಾರ್ಥನಾದಂತೆ’.

  ಯು. ಆರ್‌. ಅನಂತಮೂರ್ತಿ, ಅವಸ್ಥೆ ಕಾದಂಬರಿಯ ಆರಂಭದಲ್ಲಿ ಓದುಗರಿಗೆ ಬರೆದ ಕಿರುಟಿಪ್ಪಣಿ ಇದು.

  ಲಂಕೇಶ್‌ 45 ವರುಷ ಬರೆದ ಪದ್ಯಗಳ ಸಂಕಲನದ ಆರಂಭದಲ್ಲಿ ಅರಿಕೆ ಮಾಡಿಕೊಳ್ಳುವುದು ಹೀಗೆ;

  ‘ಎಲ್ಲರೂ ಕವನವೆಂದು ವರ್ಣಿಸುವ ರೀತಿಯ ನನ್ನ ಬರೆವಣಿಗೆಗಳು ಇಲ್ಲಿವೆ; ನನ್ನ ನೂರಾರು ಪುಟ್ಟ ಪದ್ಯಗಳು ಇಲ್ಲಿ ಸೇರಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಬ್ಬನ ವ್ಯಕ್ತಿತ್ವ ಕಾವ್ಯಕ್ಕೆ ಇಡಿಯಾಗಿ ಬೇಕು. ಅದು ಪ್ರಬಂಧ, ವರದಿ, ತಮಾಷೆ ಇತ್ಯಾದಿಯಲ್ಲಿ ಹರಿದು ಹಂಚಿಹೋಗಬಾರದು ಎನ್ನುವವರಿದ್ದಾರೆ; ಎಲಿಯಟ್‌ ಹಾಗೆ ನಂಬಿದ್ದ. ಆದರೆ ನನ್ನ ಬದುಕನ್ನು ಸಾಗಿಸಲು ನನ್ನ ಕಾಲಕ್ಕೆ ಸ್ಪಂದಿಸಿ ಎಲ್ಲ ರೀತಿಯದನ್ನೂ ಬರೆಯಬೇಕಾಯಿತು. ಅದರಿಂದ ನನ್ನ ಬರೆಯುವ ಸಂತೋಷ ಕಡಿಮೆಯಾಗಲಿಲ್ಲ. ಟೆನಿಸನ್‌, ಸ್ಪಿನ್‌ಬರ್ಗ್‌ ತರಹದ ಪ್ರಸಿದ್ಧ ಕಾವ್ಯಜೀವಿಗಳೇ ಮಂಕಾಗಿದ್ದಾರೆ; ಗದ್ಯ, ಪದ್ಯ ಎಲ್ಲ ಬರೆದ ಪುಷ್ಕಿನ್‌ ಇವತ್ತಿಗೂ ಜೀವಂತವಾಗಿ ಅರ್ಥ ಹೊಮ್ಮಿಸುತ್ತಾನೆಯ ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳಲ್ಲಿ ಪರಿಶುದ್ಧತೆ ಅಲ್ಲ ಅನ್ನಿಸುತ್ತದೆ .

  How to write a prelude?ಸಾಹಿತ್ಯ ಕೊನೆಗೂ ಸಾಹಿತಿಗಳಿಂದ ನಿರೀಕ್ಪಿಸುವುದು ನ್ಯಾಯವಂತಿಕೆ, ನಿಷ್ಠುರತೆಯನ್ನು; ಅದು ಇದ್ದಾಗ ನಿರೂಪಣೆ, ವರ್ಣನೆ ಇತ್ಯಾದಿಗಳೆಲ್ಲ ತಾವಾಗಿಯೇ ಬರುತ್ತವೆ ’.

  ಎ.ಕೆ. ರಾಮಾನುಜನ್‌, ಮತ್ತೊಬ್ಬನ ಆತ್ಮಚರಿತ್ರೆಯ ಆರಂಭದಲ್ಲಿ ಬರಕೊಂಡರು;

  ‘ನನಗಾಗ 17 ವಯಸ್ಸು. ನಮ್ಮಪ್ಪನ ಜೊತೆ ಮದರಾಸಿಗೆ ಹೋಗಿದ್ದೆ. ಮೂರೇ ದಿನ. ನಾನು ನಮ್ಮಪ್ಪ ಇಬ್ಬರೇ ಹೋಗಿದ್ದು. ಅದೇ ಮೊದಲು, ಅದೇ ಕೊನೆ.

  ಆ ಮೂರು ದಿನದಲ್ಲಿ ನಡೆದ ಸಣ್ಣಪುಟ್ಟ ಸಂಗತಿ ಕೂಡ ಯಾಕೋ ಈ ಐದಾರು ತಿಂಗಳು, ಇಪ್ಪತ್ತು ವರುಷವಾದ ಮೇಲೆ, ಇಲ್ಲಿ ಈ ದೂರದಲ್ಲಿ, ನನ್ನ ಮನಸ್ಸಿಗೆ ಮತ್ತೆ ಮತ್ತೆ ಬರುತ್ತಾ ಇದೆ. ಅವರ ಜಾರ್ಜ್‌ಟೌನ್‌ ಮನೆಯಾಳಗಿನ ಕತ್ತಲೊಳಗಿಂದ ನಮ್ಮತ್ತೆಯ ಮುಖ, ಮೂಗು ಕಿವಿ ಕುತ್ತಿಗೆಯಲ್ಲೆಲ್ಲ ಹೊಳೆದ ವಜ್ರ ಒಡವೆ; ಮದ್ರಾಸಿನ ಸಮುದ್ರದ ಸದ್ದು, ವಾಸನೆ, ಅಲೆ, ನೊರೆ ಇತ್ಯಾದಿ. ಇಲ್ಲಿ, ಮಿನಸೋಟದ ಮಾಗಿಯಲ್ಲಿ, ಒಂದು ಬೀದಿ ಒಂದು ಮರ ಪಕ್ಷಿ ಮುಖ ತಿಂಡಿ ಮಾತು ಯಾವೊಂದೂ ನಮ್ಮ ದೇಶದ್ದಲ್ಲದ ಈ ಊರಿನಲ್ಲಿ. ಆ ಮೂರು ದಿನದ ಆ ಜನದ ನೆನಪು. ವಿಚಿತ್ರ. ಈ ದೆವ್ವ ಬಿಡಿಸಬೇಕಾದರೆ ಬರೆಯಬೇಕೇನೋ ಅಂತ ಕೂಡ ಅನ್ನಿಸಿತು. ಇಂಥದ್ದೆಲ್ಲ ಬರೆದು, ಅದೂ ಕನ್ನಡದಲ್ಲಿ ಬರೆದು, ಅಭ್ಯಾಸವಿಲ್ಲ. ಯಾಕೋ ಕೈಬರಲಿಲ್ಲ ಹಿಡಿಯಿತು. ನೆನ್ನೆ ಮೊನ್ನೆಯವರೆಗೆ.. ’

  ಕನ್ನಡದ ಮೊಟ್ಟ ಮೊದಲನೆಯ ಮನೋವೈಜ್ಞಾನಿಕ ಕಾದಂಬರಿ ಎಂಬ ಹೆಗ್ಗಳಿಕೆಯಾಂದಿಗೆ ಬಂದ ದೇವುಡು ಅವರ ಅಂತರಂಗ ಕಾದಂಬರಿಗೆ ಬರೆದ ಪ್ರಸ್ತಾವನೆಯಲ್ಲಿ ದೇವುಡು ಹೇಳುತ್ತಾರೆ;

  ‘ಇದು ಸಂಸ್ಕೃತಿ ಸಂಘಟನೆಗಳ ಕಾಲ. ಪುರಾತನ ನೂತನ ಯುಗಗಳ ಸಂಕಾಲ. ಈಗ ಇನ್ನುಳಿದ ರೀತಿಗಳಲ್ಲಿ ಆಗಿರುವಂತೆ ಸಾಹಿತ್ಯ ಪ್ರಪಂಚದಲ್ಲೂ ಹೊಸ ರೀತಿನೀತಿಗಳ ಆವಿರ್ಭಾವವಾಗಿದೆ. ನಮ್ಮ ತರುಣರು ಆಂಗ್ಲ ಸಾಹಿತ್ಯವಾಹಿನಿಗೆ ಸಿಕ್ಕಿ ಮನುಷ್ಯನ ಮನೋದೌರ್ಬಲ್ಯಗಳನ್ನು ಚಿತ್ರವಿಚಿತ್ರವಾಗಿ ಚಿತ್ರಿಸುವ ಆಟದಲ್ಲಿದ್ದಾರೆ. ಇಂತಹ ಕಾಲದಲ್ಲಿ ಈ ಹೊಸ ಅಂಗಡಿಯ ಹರದದಲ್ಲಿ ಪ್ರೇಯಸ್ಸನ್ನು ಹದ್ದಿನಲ್ಲಿಟ್ಟು ಮನಸ್ಸನ್ನು ಶ್ರೇಯಸ್ಸಿನ ಕಡೆಗೆ ತಿರುಗಿಸಬೇಕು ಎಂದು ಹೇಳಹೊರಟ ನನ್ನ ಪುಸ್ತಕಕ್ಕೆ ಎಷ್ಟು ಮಾನ್ಯತೆ ಬರುವುದೋ ಎಂದು ನಾನು ಹೇಳಲಾರೆ. ಹಿರಿಯರೊಪ್ಪಿದರೆ ಕಿರಿಯರು ಅಂಗೀಕರಿಸಿದರೆ ಅದು ನನ್ನ ಭಾಗ್ಯ ’.

  ***

  ನಿಮ್ಮ ಊಹೆ ನಿಜ. ಕತೆಯ ಆರಂಭಕ್ಕೆ ಲೇಖಕ ನೀಡುವ ಪುಟ್ಟದೊಂದು ಟಿಪ್ಪಣಿ ಹೇಗೆ ಓದುವ ಆಸೆ ಹುಟ್ಟಿಸುತ್ತಿತ್ತು? ಓದುಗನಲ್ಲಿ ಎಷ್ಟೊಂದು ಸ್ಫೂರ್ತಿ ತುಂಬುತ್ತಿತ್ತು? ಲಂಕೇಶರು ಮುಸ್ಸಂಜೆಯ ಕಥಾಪ್ರಸಂಗಕ್ಕೆ ಬರೆದ ಮೊದಲ ಮಾತುಗಳನ್ನು ಕೆಲವರಾದರೂ ಮರೆತಿರಲಿಕ್ಕಿಲ್ಲ. ಹಾಗೇ ಆಲನಹಳ್ಳಿ, ಶಾಂತಿನಾಥ ದೇಸಾಯಿ, ಕೆಎಸ್‌ನ ಮುಂತಾದವರ ಅರಿಕೆಗಳು ಕೂಡ. ಗೋಪಾಲಕೃಷ್ಣ ಅಡಿಗ, ಯಶವಂತ ಚಿತ್ತಾಲ ಮೊದಲಾದವರು ಬರೆದುಕೊಂಡ ಮುನ್ನುಡಿಗಳೆಲ್ಲ ಸಾಹಿತ್ಯ ಚರಿತ್ರೆಯ ಅಧ್ಯಾಯಗಳಂತಿವೆ. ಕಾರಂತರು ಬರೆಯುತ್ತಿದ್ದ, ಓದುವುದಕ್ಕೂ ಕಷ್ಟವಾಗುತ್ತಿದ್ದ ಮೊದಲ ಮಾತುಗಳಲ್ಲೂ ಎಂಥ ಬಿಸುಪು ಇರುತ್ತಿತ್ತು ಅನ್ನುವುದನ್ನು ನೋಡಬಹುದು.

  ಲೇಖಕನ ಮಾತು ಕಾದಂಬರಿಗೊಂದು ಅಥೆಂಟಿಸಿಟಿ ತಂದುಕೊಡುತ್ತದೆ. ಒಬ್ಬ ಲೇಖಕ ಒಂದು ಕಾದಂಬರಿಯನ್ನು ಯಾವ ಮನಸ್ಥಿತಿಯಲ್ಲಿ ಬರೆದ ಅನ್ನುವುದನ್ನು ಹೇಳುತ್ತದೆ. ಸಹೃದಯನು ಒಂದು ಕೃತಿಯನ್ನು ಓದುವಾಗ ಲೇಖಕನ ಎತ್ತರಕ್ಕೆ ಏರಬೇಕಾಗುತ್ತದಲ್ಲ , ಹಾಗೆ ಏರುವುದಕ್ಕೆ ಏಣಿಯಾಗಿ ಈ ಮೊದಲ ಮಾತುಗಳು ಉಪಯೋಗಕ್ಕೆ ಬರುತ್ತವೆ. ಹಾಗೇ ಒಬ್ಬ ಲೇಖಕನನ್ನು ಆಪ್ತವಾಗಿಸುವುದು ಅವನ ಕೃತಿಯಾಂದೇ ಅಲ್ಲ , ಕೃತಿಪ್ರವೇಶಕ್ಕೆ ಮುನ್ನ ಅವನು ಆಡುವ ಮಾತು ಕೂಡ.

  ಒಂದು ಕೃತಿಗೆ ಮತ್ತೊಬ್ಬ ಬರಹಗಾರನೋ ಮಿತ್ರನೋ ಮುನ್ನುಡಿ ಬರೆಯುವುದು ಬೇರೆ. ಹಾಗೆ ಬರೆದಾಗ ಅದು ವಿಮರ್ಶೆಯೋ ಮೆಚ್ಚುಗೆಯೋ ಅನಿವಾರ್ಯಕ್ಕೆ ಸಂದ ಪ್ರತಿಕ್ರಿಯೆಯೋ ಆಗಿರುತ್ತದೆ. ಎಷ್ಟೋ ಸಂದರ್ಭದಲ್ಲಿ ಅದು ಓದುಗನನ್ನು ಒಳಗೆ ಹೋಗುವುದಕ್ಕೇ ಬಿಡುವುದಿಲ್ಲ.

  ಬಿಡುವಾಗಿದ್ದಾಗ ಒಮ್ಮೆ ಎಲ್ಲ ಲೇಖಕರ ಮುನ್ನುಡಿಗಳನ್ನು ಓದುತ್ತಾ ಬನ್ನಿ. ಮತ್ತೊಂದು ರೀತಿಯಲ್ಲಿ ಸಾಹಿತ್ಯ ಚರಿತ್ರೆಯನ್ನು ಓದಿದಂತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆಯಾ ಕಾಲಮಾನದ ಗುಣವಿಶೇಷಗಳು ತಿಳಿಯುತ್ತಾ ಹೋಗುತ್ತವೆ. ಇಂಥ ಮುನ್ನುಡಿಗಳ ಪೈಕಿ ಇವತ್ತಿಗೂ ನೆನಪಲ್ಲಿ ಉಳಿಯುವುದು ಮತ್ತು ಹೊಸಹಾದಿ ಹಾಕಿಕೊಟ್ಟದ್ದು ತೇಜಸ್ವಿ ಅಬಚೂರಿನ ಪೋಸ್ಟಾಫೀಸು ಕಥಾಸಂಕಲನದ ಆರಂಭದಲ್ಲಿ ಬರಕೊಂಡ ‘ಹೊಸ ದಿಗಂತದೆಡೆಗೆ’, ಯಶವಂತ ಚಿತ್ತಾಲರು ಸಮಗ್ರ ಕತೆಗಳಿಗೆ ಬರೆದುಕೊಂಡ ‘ಹೃದಯವುಳ್ಳ ಹಾದಿಯಲ್ಲಿ’ ಸುದೀರ್ಘ ಮುನ್ನುಡಿ ಮತ್ತು ಅಡಿಗರು ತಮ್ಮ ಸಮಗ್ರ ಕಾವ್ಯಕ್ಕೆ ಬರೆದ ಹದಿನೈದು ಪುಟಗಳ ಮೊದಲ ಮಾತು.

  ***

  ಅಡಿಗರು ಬರೆಯುತ್ತಾರೆ;

  ಕವಿಯಾದವನು ತನ್ನ ಕೃತಿಯನ್ನು ತಾನೇ ವಿವರಿಸಹೊರಡಬಾರದು. ಕವಿಯ ಮನಸ್ಸಿನಲ್ಲಿ ಇರುವ ಭಾವವಾಗಲೀ ಅನುಭವವಾಗಲೀ ಭಾಷೆಯಲ್ಲಿ ಪ್ರತಿಮೆಗಳ ಮೂಲಕ ವ್ಯಕ್ತಗೊಂಡಾಗ ಅದು ಏನಾಗುತ್ತದೆಂಬುದು ಪೂರ್ವನಿಶ್ಚಿತವಲ್ಲ.

  ಒಂದು ಕಲೆ ಅಥವಾ ಕವನ ಸಫಲವಾಗುವುದು ಅದರಲ್ಲಿ ಕಲೆಗಾರ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ ಭವಿಷ್ಯತ್ತು ವರ್ತಮಾನಗಳನ್ನು ಒಂದೇ ಬಿಂದುವಿನಲ್ಲಿ ತಂದು ಕೇಂದ್ರೀಕರಿಸಿದಾಗ. ಇಂಥ ಕವನಗಳು ತೀರ ಅಪೂರ್ವವಾದಂಥವು.

  ***

  ಅಂಥ ಅಪೂರ್ವ ಕವಿತೆಗಳನ್ನು ಅಡಿಗರು ಬರೆದಿದ್ದರು ಅನ್ನುವುದು ಕುತೂಹಲಕಾರಿ. ಉದಾಹರಣೆಗೆ ಇದೊಂದು ಸಾಲು;

  ತುಟಿದಡಕ್ಕಂಟಿ ಮೊಲೆಬಳಿ ಲಂಗರಿಟ್ಟಾಡಿ ಹೊಕ್ಕುಳಿನ ಸುಳಿಯಲ್ಲಿ ಹೊಕ್ಕು ಜಾರಿ

  ಸೊಂಟಸುಂಟರಗಾಳಿಯಲ್ಲಿ ಗಿರಗಿರ ಬುಗುರಿ; ತೊಡೆಬಂಡೆಗಪ್ಪಳಿಸಿ ಭಗ್ನನೌಕೆ ;

  (ಸ್ನೇಹಸೇತು : ಹಾಯ್‌ ಬೆಂಗಳೂರ್‌)

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more