• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಮಾಲಿಕೆ-5

By Staff
|
  • ಜಾನಕಿ
ಕವಿಗಳನ್ನು ಕಂಡರೆ ಕಾದಂಬರಿಕಾರರಿಗೆ, ನಾಟಕಕಾರರಿಗೆ ಮತ್ತು ಇತಿಹಾಸಕಾರರಿಗೆ ಸಿಟ್ಟೋ ಸಿಟ್ಟು. ಕವಿಗಳಲ್ಲಿ ಪ್ರಶಸ್ತಿ ಬಂದರಂತೂ ಇತರರು ಕ್ರುದ್ಧರಾಗಿ ಕುಣಿದು ಕುಪ್ಪಳಿಸುವುದೂ ಉಂಟು. ಆ ಸಿಟ್ಟಿಗೆ ಕಾರಣ ಸರಳ; ಕಾದಂಬರಿಕಾರ ಸಾವಿರಾರು ಪುಟಗಳಲ್ಲಿ ಜೀವನದ ಸಾರ ಸರ್ವಸ್ವವನ್ನೂ ಕೊರೆದಿಡುತ್ತಾನೆ. ಆತ ಅಷ್ಟೂ ಪುಟಗಳಲ್ಲಿ ಹೇಳಿದ್ದನ್ನು ಕವಿ ಎರಡೇ ಸಾಲಲ್ಲಿ ಹೇಳಿರುತ್ತಾನೆ. ಆದರೆ ಪ್ರಶಸ್ತಿ ಕವಿಗೆ ಸಲ್ಲುತ್ತದೆ.

ಗಾತ್ರ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಾಹಿತ್ಯಕ್ಷೇತ್ರದಲ್ಲೂ ಇರುವ ಆದರೆ ಯಾರೂ ಬಹಿರಂಗವಾಗಿ ಚರ್ಚಿಸದ ಸಂಗತಿ ಇದು. ಕಾದಂಬರಿಕಾರನ ವಾದ ಮುಖ್ಯವಾಗಿ ಎರಡು; ಬದುಕಿನ ಸೂಕ್ಷ್ಮಗಳನ್ನೆಲ್ಲ ವಿವರವಾಗಿ ದಾಖಲಿಸುವ ಕಾದಂಬರಿಕಾರ ಒಂದು ಜನಾಂಗದ ಚಿತ್ರಣ ನೀಡುತ್ತಾನೆ. ಕಾದಂಬರಿಯನ್ನು ಲಕ್ಷಾಂತರ ಮಂದಿ ಓದುತ್ತಾರೆ. ಆದ್ದರಿಂದ ನಿಜವಾದ ಸಾಹಿತ್ಯ ಅಂದ್ರೆ prose. ಆದರೆ ಕವಿಗಳ ಪ್ರಕಾರ ಕಾದಂಬರಿಕಾರರು ಅಷ್ಟೊಂದು ಪುಟ ಬರೆಯುವುದು ದಂಡ. ಜೀವನದ ಸಾರವನ್ನೆಲ್ಲ ನಾಲ್ಕೇ ಸಾಲುಗಳಲ್ಲಿ ಹೇಳಬಹುದು. ಹಾಗೆ ಹೇಳಲು ಸಾಧ್ಯವಾಗುವುದು ಕವಿತೆಯಲ್ಲಿ. ಆದ್ದರಿಂದ ಕವಿತೆಯೇ ಶ್ರೇಷ್ಠ. ಕಾದಂಬರಿಯನ್ನೂ ಅನೇಕ ಸಲ ಕಾವ್ಯಾತ್ಮಕವಾಗಿದೆ ಎಂದು ಕರೆಯುತ್ತಾರಲ್ಲ. ಆದರೆ ಯಾರೂ ಕವಿತೆಯನ್ನು ಕಾದಂಬರಿ ಥರ ಇದೆ ಅನ್ನೋದಿಲ್ಲ. ಹೀಗಾಗಿ ಕವಿಯೇ ಶ್ರೇಷ್ಠ.

Carducci Giosueಈ ವಿಚಾರಗಳು ಒಳಗೊಳಗೇ ತುಂಬ ಬಿರುಸಾಗಿ ಚರ್ಚೆಯಾದದ್ದು ಗಿಯಾಸ್‌ ಕಾರ್ದೂಚಿ ಎಂಬ ಇಟೆಲಿಯ ಕವಿಗೆ 1906ರಲ್ಲಿ ನೊಬೆಲ್‌ ಪ್ರಶಸ್ತಿ ಬಂದಾಗ. ಆತ ತನ್ನ ಕಾಲದ ಅತ್ಯಂತ ಪ್ರಭಾವಶಾಲಿ ಸಾಹಿತಿ ಅನ್ನಿಸಿಕೊಂಡಿದ್ದ. ಆಧುನಿಕ ಇಟಲಿಯ ಅನಭಿಷಿಕ್ತ ರಾಷ್ಟ್ರಕವಿ ಎಂದೂ ಕರೆಸಿಕೊಂಡಿದ್ದ. ಕಾಲೇಜು ಓದುತ್ತಿರುವಾಗಲೇ ರೋಮನ್‌ ಮತ್ತು ಗ್ರೀಕ್‌ ಶೈಲಿಯ ಪದ್ಯಗಳನ್ನು ಬರೆದು ಪ್ರಸಿದ್ಧನಾಗಿದ್ದ.

ಕಾರ್ದೂಚಿಯ ಅಪ್ಪ ಮೈಕೆಲ್‌ ಕಾರ್ದೂಚಿ ವೈದ್ಯ. ದೇಶಭಕ್ತಿಯ ಧೀಮಂತ ವಾತಾವರಣದಲ್ಲಿ ಬೆಳೆದ ಕಾರ್ದೂಚಿ ಸಣ್ಣವಯಸ್ಸಲ್ಲೇ ಕವಿತೆ ಗೀಚಲು ಶುರುಹಚ್ಚಿಕೊಂಡ. ತಂದೆಯಿಂದಾ ಕ್ಲಾಸಿಕ್‌ಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡ. ಹೋಮರನ ಇಲಿಯಡ್‌ನ ಅನುವಾದಕ್ಕೂ ಆತ ಕೈಹಾಕಿದ್ದ.

ಧಾರ್ಮಿಕ ನಿಲುವು ಮತ್ತು ಸ್ಥಾನಮಾನ, ಇಟಲಿಯಲ್ಲಿ ಆಗ ತುಂಬ ಮುಖ್ಯವಾಗಿತ್ತು. ಕಾರ್ದೂಚಿಯ ತಂದೆ ರಾಜ್ಯಾಧಿಕಾರಕ್ಕೆ ಮಣಿದು ಮತ್ತೆ ಕೆಥೋಲಿಕ್‌ ಆದ. ಹಳ್ಳಿಹಳ್ಳಿಗಳಲ್ಲಿ ಕಾರ್ದೂಚಿ ಅಧಿಕಾರವನ್ನು ಹೊಗಳಿ ಹಾಡತೊಡಗಿದ. ಮತ್ತೊಮ್ಮೆ ರಾಷ್ಟ್ರಾಧಿಕಾರದ ಕೆಂಗಣ್ಣಿಗೆ ಸಿಕ್ಕಿ ಕೆಲಸ ಕಳಕೊಂಡ ಅಪ್ಪನನ್ನು ಕೊನೆಕೊನೆಗೆ ಪೋಷಿಸಿದ್ದು ಮಗನ ಹಾಡುಗಳು.

1835ರಲ್ಲಿ ಹುಟ್ಟಿದ ಕಾರ್ದೂಚಿ ತನ್ನ ಮೊದಲನೆಯ ಸಂಕಲನ ‘ರೈಮ್ಸ್‌’ ಹೊರತಂದದ್ದು 22ನೆಯ ವಯಸ್ಸಿನಲ್ಲಿ. ಅದೇ ಸುಮಾರಿಗೆ ಆತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಕಾರ್ದೂಚಿಯ ಅಪ್ಪ ತೀರಿಕೊಂಡರು. ಸೋದರ ಆತ್ಮಹತ್ಯೆ ಮಾಡಿಕೊಂಡ. ಕಠೋರ ಏಕಾಂತದಿಂದ ಪಾರಾಗಲೋ ಎಂಬಂತೆ ಕಾರ್ದೂಚಿ ಮದುವೆಯಾದ. ನಾಲ್ಕು ಮಕ್ಕಳ ತಂದೆಯಾದ.

ಓತಪ್ರೋತ ಮಾತುಗಾರನೂ ಅಷ್ಟೇ ಪ್ರಚಂಡ ಬರಹಗಾರನೂ ಆಗಿದ್ದ ಕಾರ್ದೂಚಿ ಪ್ರಸಿದ್ಧನಾದದ್ದು ತನ್ನ ಭಾಷಣಗಳಿಂದ. ತನ್ನ ಮಾತಿನಿಂದಾಗಿಯೇ ಆತ ಕೆಲಸ ಕಳೆದುಕೊಂಡದ್ದೂ ಉಂಟು. ಹೀಗೆ ಅಧಿಕಾರದ ವಿರುದ್ಧ ಹೋರಾಟ ಮಾಡುತ್ತಾ ಮತ್ತೊಮ್ಮೆ ಅದನ್ನು ಒಪ್ಪಿಕೊಳ್ಳುತ್ತಾ ಬಂದ ಕಾರ್ದೂಚಿ ಕೊನೆಗೂ ರಾಜಕೀಯ ನಿಲುವುಗಳ ಜೊತೆ ರಾಜಿಮಾಡಿಕೊಂಡ. ಆತ ತೀರಿಕೊಂಡಾಗ ಅವನ ವಯಸ್ಸು 72.

ಕಾರ್ದೂಚಿಯ ಸಮಗ್ರ ಕವನ ಸಂಕಲನ Opere Complete - ಆತನ ನಾಲ್ಕು ಸಂಕಲಗಳನ್ನಷ್ಟೇ ಒಳಗೊಂಡಿದೆ.

Rudyard Kipling1907ರ ನೊಬೆಲ್‌ ಪ್ರಶಸ್ತಿ ವಿಜೇತ ನಮಗೆ ತುಂಬ ಪರಿಚಿತ. ಆತ ಹುಟ್ಟಿದ್ದು ಮುಂಬಯಿಯಲ್ಲಿ. ಓದಿದ್ದು ಇಂಗ್ಲೆಂಡಿನಲ್ಲಿ. ಮತ್ತೆ ಆತ ಭಾರತಕ್ಕೆ ಮರಳಿ ಕೆಲವು ಆಂಗ್ಲೋಇಂಡಿಯನ್‌ ಪತ್ರಿಕೆಗಳಿಗೆ ಕೆಲಸ ಮಾಡಿದ್ದ. ಆತ ರುಡ್ಯರ್ಡ್‌ ಕಿಪ್ಲಿಂಗ್‌. ಅವನ ತಂದೆ ಜಾನ್‌ ಲಾಕ್‌ವುಡ್‌ ಕಿಪ್ಲಿಂಗ್‌ ಕಲಾವಿದ ಮತ್ತು ಶಿಲ್ಪಕಲೆಯ ಶಿಕ್ಷಕ.

ಐದನೇ ವಯಸ್ಸಿಗೆ ಇಂಗ್ಲೆಂಡಿಗೆ ಮರಳಿದ ಕಿಪ್ಲಿಂಗ್‌ ಅಲ್ಲಿನ ದಿನಗಳನ್ನು ತುಂಬ ಅಸಂತೋಷದಿಂದ ಕಳೆದ ಎನ್ನುತ್ತದೆ ಆತನ ಆತ್ಮಚರಿತ್ರೆ ‘ಸಮ್‌ಥಿಂಗ್‌ ಆಫ್‌ ಮೈಸೆಲ್ಪ್‌’. ಹದಿನಾರನೆಯ ವಯಸ್ಸಿಗೆ ಲಾಹೋರ್‌ಗೆ ಮರಳಿದ ಕಿಪ್ಲಿಂಗ್‌ ಅಲ್ಲಿ ‘ಸಿವಿಲ್‌- ಮಿಲಿಟರಿ ಗಜೆಟ್‌’ನ ವರದಿಗಾರನಾಗಿ ಕೆಲಸ ಮಾಡಿದ. ನಂತರದ ದಿನಗಳಲ್ಲಿ ದಿ ಪಯನಿಯರ್‌ ಪತ್ರಿಕೆಗೆ ದುಡಿದ. ಜೊತೆಗೆ ಕತೆಗಳನ್ನೂ ಕವಿತೆಗಳನ್ನೂ ಬರೆಯುತ್ತಿದ್ದ.

ಮತ್ತೆ ಇಂಗ್ಲೆಂಡಿಗೆ ಮರಳಿದ ಕಿಪ್ಲಿಂಗ್‌ ಪ್ರಸಿದ್ಧನಾದದ್ದು ಬ್ಯಾರಕ್‌ರೂಮ್‌ ಬ್ಯಾಲಡ್ಸ್‌ ಸಂಕಲನದಿಂದ. ಜೊತೆಗೊಂದಷ್ಟು ಸಣ್ಣಕತೆಗಳನ್ನೂ ಬರೆದ ಕಿಪ್ಲಿಂಗ್‌ ಮಕ್ಕಳಿಗೋಸ್ಕರ ಬರೆದ ಜಂಗಲ್‌ ಬುಕ್‌ ಇವತ್ತಿಗೂ ಮಕ್ಕಳಿಗೆ ಪ್ರಿಯವಾದ ಕೃತಿ.

ತನ್ನ ಅಮೆರಿಕನ್‌ ಸಾಹಿತ್ಯಮಿತ್ರನ ತಂಗಿಯನ್ನೇ ಮದುವೆಯಾದ ಕಿಪ್ಲಿಂಗ್‌ ಆಕೆಯ ನಿಧನಾನಂತರ ತುಂಬ ಕುಸಿದುಹೋಗಿದ್ದ. ಆದರೆ ಅಷ್ಟರಲ್ಲಾಗಲೇ ಆತನಿಗೆ ರಾಷ್ಟ್ರಕವಿಯೆಂಬ ಮನ್ನಣೆ ಸಿಕ್ಕಿತ್ತು. ಜನರಿಂದ ಪಾರಾಗಲು ಆತ ಹದಿನೇಳನೇ ಶತಮಾನದ ಹಳೆಯ ಮನೆಯಾಂದನ್ನು ಕೊಂಡುಕೊಂಡು ಅಲ್ಲೇ ವಾಸಿಸತೊಡಗಿದ. ತನ್ನ ಕೊನೆಯ ದಿನಗಳನ್ನು ಆತ ಕಳೆದದ್ದು ಅದೇ ಮನೆಯಲ್ಲಿ.

ಕಿಪ್ಲಿಂಗನ ಪ್ರಸಿದ್ಧ ಕವನಗಳ ಪೈಕಿ ಆಬ್ಸೆಂಟ್‌ ಮೈಂಡೆಡ್‌ ಬೆಗ್ಗರ್‌ ಕೂಡ ಒಂದು. ಈ ಕವಿತೆಯಿಂದಾಗಿ ಬ್ರಿಟಿಷ್‌ ಸೈನ್ಯದ ನೆರವಿಗಾಗಿ ದೊಡ್ಡ ಮೊತ್ತದ ಸಂಗ್ರಹಣೆಯೂ ಸಾಧ್ಯವಾಯಿತು.

ಕಿಪ್ಲಿಂಗ್‌ಗೆ ಅಗಾಧವಾದ ರಾಜಕೀಯ ಪ್ರಜ್ಞೆಯಿತ್ತು. ಮೊದಲನೆಯ ಮಹಾಯುದ್ಧ ನಡೆಯುವುದಕ್ಕೆ ತುಂಬ ವರುಷಗಳ ಹಿಂದೆಯೇ ಆತ ಅಂಥದ್ದೊಂದು ಯುದ್ಧ ನಡೆಯುವ ಬಗ್ಗೆ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ್ದ. ಯುದ್ಧಸನ್ನದ್ಧರಾಗುವಂತೆ ಮನವಿ ಮಾಡಿಕೊಂಡಿದ್ದ.

ತನಗೆ ಸಂದಾಯವಾದ ಬಹಳಷ್ಟು ಪ್ರಶಸ್ತಿಗಳನ್ನು ಕಿಪ್ಲಿಂಗ್‌ ಸ್ವೀಕರಿಸಲಿಲ್ಲ. ಆದರೆ 1907ರಲ್ಲಿ ಕೊಟ್ಟ ನೊಬೆಲ್‌ ಪ್ರಶಸ್ತಿಯನ್ನಾತ ನಿರಾಕರಿಸಲಿಲ್ಲ. ಕಿಪ್ಲಿಂಗ್‌ ನೊಬೆಲ್‌ ಪ್ರಶಸ್ತಿಯನ್ನು ತೆಗೆದುಕೊಳ್ಳುತ್ತಾನೋ ಇಲ್ಲವೋ ಎನ್ನುವುದೇ ಆಗ ಚರ್ಚೆಯ ಸಂಗತಿಯಾಗಿತ್ತು.

ಆತ್ಮಚರಿತ್ರೆಯ ಮಾತಿಗೆ ಬಂದಾಗ ಕಿಪ್ಲಿಂಗ್‌ ಪರಿಪೂರ್ಣ. ಆತ ಆತ್ಮಚರಿತ್ರೆ ಬರೆದು ಮುಗಿಸಿದ್ದು 1936ರಲ್ಲಿ. ಅದೇ ವರುಷ ಆತ ತೀರಿಕೊಂಡ. ಆತ ಸತ್ತ ನಂತರ ಅವನ ಆತ್ಮಚರಿತ್ರೆ ಪ್ರಕಟವಾಯಿತು.

ಆತನ ಪ್ರಸಿದ್ಧ ಕವಿತೆ IF. ಇದು ಜೀವನದ ತತ್ವವನ್ನೆಲ್ಲ ಸೊಗಸಾಗಿ ಬಿಚ್ಚಿಡುತ್ತದೆ ಅನ್ನುವವರಿದ್ದಾರೆ. ಕೊಂಚ ಭಾವಗೀತಾತ್ಮಕವೂ ನೀತಿಬೋಧಕವೂ ಆಗಿರುವ ಕವಿತೆಯಲ್ಲಿ ಬರುವ ಎರಡು ಸೊಗಸಾದ ಸಾಲುಗಳೆಂದರೆ;

ಗುಂಪಿನಲ್ಲಿ ಮಾತಾಡಿಯೂ ಉಳಿಸಿಕೊಂಡರೆ ಘನತೆ

ರಾಜರ ಜೊತೆ ಓಡಾಡಿಯೂ ಕಳೆದುಕೊಳದಿದ್ದರೆ ಸರಳತೆ

ಅಂಥ ಸ್ಥಿತಿಯೇ ಸುಖದಾಯಕ ಎಂದು ಕರೆಯುತ್ತಾ ಹತ್ತಾರು ಇಂಥ ಸ್ಥಿತಿಗಳನ್ನು ಕಿಪ್ಲಿಂಗ್‌ ಕವಿತೆಯಲ್ಲಿ ಹೇಳುತ್ತಾನೆ. ಮಂಕುತಿಮ್ಮನ ಕಗ್ಗ ಇದಕ್ಕಿಂತ ಚೆನ್ನಾಗಿದೆ ಅನ್ನಿಸಿದರೆ ಅದು ಕನ್ನಡದ ಶಕ್ತಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more