ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೆಂಬುದು ಯಾತನೆಯ ದಿಡ್ಡಿಬಾಗಿಲು ಎಂದವರನ್ನು ಸ್ಮರಿಸುತ್ತಾ...

By Staff
|
Google Oneindia Kannada News
ನಿಮಗೆ ನೆನಪಿರಬಹುದು.

1980ರ ಸುಮಾರಿಗೆ ಕನ್ನಡದಲ್ಲಿ ಫಿಲಾಸಫಿಗಳ ಕಾಯಿಲೆ ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್‌, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಕೃಷ್ಣಮೂರ್ತಿ ಮುಂತಾದವರು ಪ್ರಚಾರಕ್ಕೆ ಬಂದರು. ಜಿಡ್ಡು ಕೃಷ್ಣಮೂರ್ತಿ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೂ ಆ ಹೆಸರು ಕೇಳಿದರೆ ಹಿಂಸೆಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು. ಅದಕ್ಕಿಂತ ಮುಂಚೆ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಹೀಗೇ ತಮ್ಮ ಸಾಹಿತ್ಯಕ್ಕೆ ಬೆನ್ನೆಲುಬಾಗಿಟ್ಟುಕೊಂಡರು. ಅಂಥ ಸಾಹಿತ್ಯ ಶಾಶ್ವತವಾಗಿ ನಿಲ್ಲಲಿಲ್ಲ. ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳಂತೆ ಅವು ಕೂಡ ಕಣ್ಮರೆಯಾದವು.

ಅದೇ ಸುಮಾರಿಗೆ ಶುರುವಾದ ಮತ್ತೊಂದು ಕಾಯಿಲೆ ಝೆನ್‌. ಎಲ್ಲರೂ ಇದ್ದಕ್ಕಿದ್ದ ಹಾಗೆ ಝೆನ್‌ ಬುದ್ಧಿಸಮ್‌ ಬಗ್ಗೆ ಅಕೃತ ಮಾಹಿತಿ ಉಳ್ಳವರ ಥರ ಮಾತಾಡತೊಡಗಿದರು. ದುರದೃಷ್ಟವಶಾತ್‌ ಅದೇ ಹೊತ್ತಿಗೆ ಕೆ ವಿ. ಸುಬ್ಬಣ್ಣ ಝೆನ್‌ ಎಂಬೊಂದು ಪುಸ್ತಕವನ್ನೂ ಹೊರತಂದರು. ನ್ಯೂಯಾರ್ಕಿನ ಪೀಟರ್‌ ಪಾಪರ್‌ ಪ್ರೆಸ್‌ ಪ್ರಕಟಿಸಿದ ಝೆನ್‌ ಕುರಿತ ಪಾಕೆಟ್‌ ಬುಕ್‌ ಓದದೇ ಇದ್ದವರಿಗೆ ಸುಬ್ಬಣ್ಣ ಅವರ ಪುಸ್ತಕ ಅದ್ಭುತ ಎನ್ನಿಸಿತು. ಅದೇ ಮೊದಲ ಬಾರಿಗೆ ಅಷ್ಟು ವಿವರವಾಗಿ ಝೆನ್‌ ಕನ್ನಡಕ್ಕೆ ಬಂದಿತ್ತು ಎನ್ನುವ ಕಾರಣಕ್ಕೂ ಅದು ಕುತೂಹಲ ಕೆರಳಿಸಿತ್ತು. ಎಂದಿನಂತೆ ಸುಬ್ಬಣ್ಣ ತುಂಬ ಅಚ್ಚುಕಟ್ಟಾಗಿ ಅದನ್ನು ಅನುವಾದಿಸಿದ್ದರು.

ಅಲ್ಲಿಂದ ಶುರುವಾದದ್ದು ಝೆನ್‌ ರಗಳೆ. ಝೆನ್‌ ಬಗ್ಗೆ ನೂರೆಂಟು ಪುಸ್ತಕಗಳು ಬಂದವು. ಝೆನ್‌ ನಮ್ಮ ಜೀವನಕ್ರಮಕ್ಕೆ ಹತ್ತಿರವಾಗಿದೆ ಎಂದರು. ಝೆನ್‌ ಒಗಟು, ಝೆನ್‌ ಕಾವ್ಯ, ಝೆನ್‌ ಕತೆಗಳನ್ನು ಪುಂಖಾನುಪುಂಖವಾಗಿ ಬರೆದು ಪ್ರಕಟಿಸಿದರು.

Janaki discusses Zen philosophyಅಷ್ಟಕ್ಕೂ ಝೆನ್‌ ಅಂದರೇನು?

ಅದರ ಅರ್ಥ ಧ್ಯಾನ ಎನ್ನುತ್ತಾರೆ. ನವ್ಯದ ಸಾಹಿತಿಗಳಿಗೆ ಧ್ಯಾನ ಎನ್ನುವುದು ತುಂಬ ಪ್ರೀತಿಯ ಪದ. ಕತೆಗಾರನ ಧ್ಯಾನವನ್ನು ಕವಿಯ ಧ್ಯಾನವನ್ನು ಕುರಿತು ಅವರು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತಾರೆ. ಒಂದು ರೀತಿಯ ಆತ್ಮಸ್ತುತಿಯೂ ಆತ್ಮರತಿಯೂ ಇದರಲ್ಲಿದೆ ಎಂದೂ ನಮಗೆ ಅನ್ನಿಸುತ್ತದೆ. ಯಾಕೆಂದರೆ ನವ್ಯರಿಗಿಂತ ಗಾಢವಾಗಿ ಬರೆದ ಮಾಸ್ತಿ , ಕಾರಂತ ಎಂದೂ ಧ್ಯಾನದ ಬಗ್ಗೆ ಹೇಳಲಿಲ್ಲ. ನಾನು ಇದನ್ನು ಧ್ಯಾನಿಸಿ ಬರೆದೆ ಎಂದು ಬೊಗಳೆ ಬಿಡಲಿಲ್ಲ. ಧೇನಿಸುವುದನ್ನೇ ರೂಪಕವಾಗಿ ಕಟ್ಟಿಕೊಡಲಿಲ್ಲ. ಅದೆಲ್ಲ ಇತ್ತೀಚಿನ ತರಲೆ.

ಹೀಗೆ ಧ್ಯಾನದ ಮಾತು ಬಂದಾಗ ಝೆನ್‌ ಅವರ ನೆರವಿಗೆ ಬಂತು. ಎಲ್ಲರ ಹುಸಿವಾದಗಳನ್ನೂ ಸಮರ್ಥಿಸಿಕೊಳ್ಳುವುದಕ್ಕೆ ಝೆನ್‌ ಒಳ್ಳೆಯ ಅಸ್ತ್ರವೂ ಆಯಿತು. ನಮ್ಮ ಆಧ್ಯಾತ್ಮಿಕತೆ ನಮ್ಮ ಕ್ಷುಲ್ಲಕತೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಳಕೆಯಾದಾಗ ಆಗುವ ಅಪಾಯ ಅಷ್ಟಿಷ್ಟಲ್ಲ. ನಾವಂತೂ ನಮ್ಮ ಸೋಮಾರಿತನವನ್ನೂ ಹೇಡಿತನವನ್ನೂ ನಿರುತ್ಸಾಹವನ್ನೂ ಸಮರ್ಥಿಸಿಕೊಳ್ಳುವುದಕ್ಕೆ ನಮ್ಮ ಧಾರ್ಮಿಕ ತತ್ವಗಳನ್ನು ದಂಡಿಯಾಗಿ ಬಳಸಿಕೊಂಡಿದ್ದೇವೆ.

ಝೆನ್‌ ಇವತ್ತು ಎಷ್ಟು ರೇಜಿಗೆ ಹುಟ್ಟಿಸುವ ಪಂಥವಾಗಿದೆ ಎಂದರೆ ಅದು ಒಂದು ಪೊಳ್ಳು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದೆಯೇನೋ ಅನ್ನುವ ಅನುಮಾನ ಬರುತ್ತದೆ. ಭಾರತದಷ್ಟು ವಿಸ್ತಾರವಾದ ಮತ್ತು ಆಳವಾದ ಧರ್ಮಶ್ರದ್ಧೆ ಇಲ್ಲದ ಚೀನಾಕ್ಕೆ ಸಾವಿರದೈನೂರು ವರುಷಗಳ ಹಿಂದೆ ಬುದ್ಧಧರ್ಮ ಕಾಲಿಟ್ಟಾಗ ಝೆನ್‌ ಹುಟ್ಟಿಕೊಂಡಿತು ಎನ್ನುತ್ತಾರೆ. ಅದಕ್ಕಿಂತ ಮುಂಚೆ ಚೀನಾದಲ್ಲಿದ್ದದ್ದು ಟಾವೋ ಪಂಥ. ಇದನ್ನೂ ನಾವು ಸಾಕಷ್ಟು ದುರ್ಬಳಕೆ ಮಾಡಿಕೊಂಡಿದ್ದಾಗಿದೆ. ಟಾವೋ ಆಫ್‌ ಫಿಸಿಕ್ಸ್‌ , ಟಾವೋ ಆಫ್‌ ಇಕನಾಮಿಕ್ಸ್‌ ಮುಂತಾದ ಪುಸ್ತಕಗಳು ಬಂದಿವೆ. ಝೆನ್‌ ಅಂಡ್‌ ಮೊಟರ್‌ಸೈಕಲ್‌ ಮೇಂಟೆನೆನ್ಸ್‌ ಎಂಬ ಕೃತಿ ಈಗಲೂ ಚೆನ್ನಾಗಿ ಮಾರಾಟವಾಗುತ್ತಿದೆ. ನಮ್ಮ ಲಹರಿಗಳಿಗೆ ಹೊಂದುವಂಥ ತತ್ವಗಳನ್ನು ಹೇಳುತ್ತದೆ ಅನ್ನುವುದೂ ವ್ಯಕ್ತಿಯನ್ನು ಎಲ್ಲ ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತದೆ ಎನ್ನುವುದೂ ಝೆನ್‌ಗಿರುವ ಹೆಗ್ಗಳಿಕೆ.

ಏನು ಹೇಳಿದರೂ ಅದು ಝೆನ್‌. ಅರ್ಥವಾಗದೆ ಇದ್ದರೆ ಅದು ಅಪ್ಪಟ ಝೆನ್‌. ಅರ್ಥವಾದವನಿಗೆ ಜ್ಞಾನೋದಯವಾಗಿದೆ ಎಂದು ಅರ್ಥ. ಜ್ಞಾನೋದಯವಾದವನು ಅದನ್ನು ಮತ್ತೊಬ್ಬನಿಗೆ ಅರ್ಥ ಮಾಡಿಸುವ ಅಗತ್ಯವೇ ಇಲ್ಲ. ಹೀಗೆ ಝೆನ್‌ಗೆ ಹಲವು ಅನುಕೂಲಗಳಿವೆ. ಚೀನಾದ ಶತಮೂರ್ಖರಿಗೆ ಅದು ಹೇಳಿಮಾಡಿಸಿದ ಧರ್ಮ ಎಂದು ಗೇಲಿಮಾಡಿದವರೂ ಇದ್ದಾರೆ. ಯಾಕೆಂದರೇ ಚೀನಾದ ಮಂದಿ ಮೂಲತಃ ಸೋಮಾರಿಗಳು. ಅದಕ್ಕೆ ತಕ್ಕಂತಿದೆ ಝೆನ್‌ನ ಒಂದು ಸೂತ್ರ;

Sitting quitely doing nothing
And the Grass grows by itself.

ಝೆನ್‌ ಕತೆಗಳಲ್ಲಿ ಬಹಳಷ್ಟು ನಮಗೆ ಪರಿಚಿತ. ಉದಾಹರಣೆಗೆ ಗುರುಶಿಷ್ಯ ನಡೆದುಹೋಗುತ್ತಿದ್ದಾರೆ. ದಾರಿಯಲ್ಲಿ ನದಿ ಎದುರಾಗುತ್ತದೆ. ಸುಂದರಿಯಾಬ್ಬಳು ದಾಟಲು ಭಯವಾಗಿ ನಿಂತಿದ್ದಾಳೆ. ಆಕೆಯನ್ನು ಗುರು ಹೆಗಲ ಮೇಲೆ ಹೊತ್ತು ನದಿ ದಾಟಿಸುತ್ತಾನೆ. ತುಂಬ ದೂರ ಸಾಗಿದ ನಂತರ ಶಿಷ್ಯ ಕೇಳುತ್ತಾನೆ. ‘ಗುರುವೆ, ಸುಂದರವಾದ ಹೆಣ್ಣನ್ನು ಮುಟ್ಟಬಾರದು ಅಂತಾರಲ್ಲ. ಅಂಥದ್ದರಲ್ಲಿ ನೀವು ಅವಳನ್ನು ಹೆಗಲ ಮೇಲೆ ಹೊತ್ತು ಬಂದದ್ದು ತಪ್ಪಲ್ಲವೇ?’ ಗುರು ಉತ್ತರಿಸುತ್ತಾನೆ;‘ನಾನು ಅವಳನ್ನು ಆಗಲೇ ಕೆಳಗಿಳಿಸಿದೆ. ನೀನು ಇನ್ನೂ ಹೊತ್ತುಕೊಂಡಿದ್ದೀಯಲ್ಲ ?’

ಇದೇ ಝೆನ್‌ ಹುಟ್ಟುವುದು ಮಾತಲ್ಲಿ. ಮೌನವನ್ನು ಸೂಚಿಸಬೇಕಾದರೂ ಝೆನ್‌ಗೆ ಮಾತೇ ಬೇಕು. ಬುದ್ಧ ಯಾರು ಎನ್ನುವುದನ್ನು ಹೇಳುತ್ತೇನೆ. ಆದರೆ ಮಾತು ಯಾತನೆಯ ದಿಡ್ಡಿಬಾಗಿಲು ಎನ್ನುತ್ತದೆ ಒಂದು ಝೆನ್‌ ಪ್ರಸಂಗ.

ಅಷ್ಟಕ್ಕೂ ಝೆನ್‌ ಅಂದರೇನು?

ಒಬ್ಬ ಹೇಳುತ್ತಾನೆ. ಊಟವಾಯಿತಾ? ಆಗಿದ್ದರೆ ನಿನ್ನ ತಟ್ಟೆಯನ್ನು ತೊಳೆದಿಡು. ಅದೇ ಝೆನ್‌.

ಇನ್ನೊಬ್ಬ ಕೇಳುತ್ತಾನೆ; ಬುದ್ಧ ಭಾರತವನ್ನು ಬಿಟ್ಟು ಚೀನಾಕ್ಕೆ ಬಂದದ್ದು ಯಾಕೆ?

ಗುರು ಗುಡ್ಡದ ಬದಿಗೆ ಕರೆದುಕೊಂಡು ಹೋಗಿ ಎರಡು ಬಿದರಿನ ಮೆಳೆಗಳನ್ನು ತೋರಿಸುತ್ತಾನೆ; ನೋಡಲ್ಲಿ ಈ ಬಿದಿರಿಗಿಂತ ಆ ಬಿದಿರು ಉದ್ಧವಾಗಿದೆಯಲ್ಲವೇ. ಅದಕ್ಕೇ ಬುದ್ಧ ಚೀನಾಕ್ಕೆ ಬಂದದ್ದು.

ಹೀಗೆ ಅಸಂಗತದ ಮೂಲಕ ಅರ್ಥ ಹುಡುಕುವ ಪ್ರಯತ್ನವನ್ನು ಝೆನ್‌ ಮಾಡುತ್ತದೆ. ಆದರೆ ಇದು ಅಸಂಗತದ, ಅರ್ಥರಾಹಿತ್ಯದ, ಅತಾರ್ಕಿಕತೆಯ ನೆಲೆಯಿಂದ ಮೇಲೇರಬೇಕಾದರೆ ಏನು ಮಾಡಬೇಕು? ಪ್ರತಿಯಾಂದು ಒಗಟೂ ಕೇವಲ ಒಗಟಿನ ನೆಲೆಯಲ್ಲೇ ನಿಂತುಬಿಟ್ಟರೆ ?

ಇಲ್ಲಿ ಆಗಿರುವುದೂ ಅದೇ. ಝೆನ್‌ ನಮಗೆ ಒಂದು ತತ್ವಜ್ಞಾನವಲ್ಲ. ಓದಿಸಿಕೊಂಡು ಹೋಗುವ ರುಚಿಕಟ್ಟಾದ ಕತೆ ಅಷ್ಟೇ.

ಈ ಝೆನ್‌ ಕತೆಗಳನ್ನು ಜಿ. ಎನ್‌. ರಂಗನಾಥರಾವ್‌ ಅನುವಾದಿಸಿದ್ದಾರೆ. ಹಾಗೆ ಅನುವಾದಿಸುವಾಗ ಅವರ ಮನಸ್ಸಿನಲ್ಲಿ ಏನಿತ್ತು ಅನ್ನುವುದು ಮತ್ತೊಂದು ಒಗಟು.

**

ಝೆನ್‌ನಷ್ಟೇ ಸವಕಲಾದ ಮತ್ತೊಂದು ತತ್ವವೆಂದರೆ ಸೂಫಿಯಿಸಮ್‌. ಇದು ಕೂಡ ಕತೆಗಳ ಮೂಲಕವೇ ಸಾಗುತ್ತದೆ. ಜಲಾಲುದ್ದೀನ್‌ ರೂಮಿಯಿಂದ ಹಿಡಿದು ಮುಲ್ಲಾ ನಸ್ರುದ್ದೀನನ ತನಕ ಅನೇಕರು ಇಲ್ಲಿ ಬಂದುಹೋಗುತ್ತಾರೆ. ಝೆನ್‌ ಕತೆಗಿಂತ ಇದು ಸರಳವಾದದ್ದು. ಇಲ್ಲಿ ಝೆನ್‌ನಲ್ಲಿರುವ ತೋರಿಕೆಯಿಲ್ಲ, ಮುಚ್ಚುಮರೆಯೂ ಇಲ್ಲ. ಜಾಣತನ ಮೊದಲೇ ಇಲ್ಲ. ಎಲ್ಲವನ್ನೂ ನೇರವಾಗಿಯೇ ಇಲ್ಲಿ ಹೇಳುತ್ತಾರೆ.

ಉದಾಹರಣೆಗೆ ‘ನಾನು ಒಂಟೆಯನ್ನು ಕೇಳಿದೆ. ನಿನಗೆ ಮೇಲೇರುವ ಹಾದಿ ಇಷ್ಟವೋ ಕೆಳಗಿಳಿಯುವ ಹಾದಿ ಇಷ್ಟವೋ?

ಒಂಟೆ ಹೇಳಿತು; ನನಗೆ ದಾರಿ ಮುಖ್ಯವಲ್ಲ, ಹೊರುವ ಭಾರ ಎಷ್ಟೆಂಬುದು ಮುಖ್ಯ.’

‘ಆತ್ಮವೊಂದು ಕನ್ನಡಿ; ದೇಹ ಅದನ್ನು ಮುಚ್ಚಿರುವ ಧೂಳು.
ಮುಚ್ಚಿರುವ ತನಕ ಧೂಳು, ಕಾಣಿಸದು ಒಳಗಿನ ಚೆಲುವು’

ರೋಗಿಯ ಹಾಸಿಗೆಯೆದುರು
ಅವನು ರಾತ್ರಿಯಿಡೀ ಅತ್ತ
ಬೆಳಗಾಗೆದ್ದು ನೋಡಿದರೆ
ರೋಗಿ ಬದುಕಿದ್ದ ಅತ್ತವನು ಸತ್ತಿದ್ದ.

ಇಂಥ ಸಣ್ಣಪುಟ್ಟ ಸಂಗತಿಗಳ ಮೂಲಕವೇ ಪರಮಸತ್ಯಗಳನ್ನು ಹೇಳುವುದಕ್ಕೆ ಹೊರಡುತ್ತದೆ ಸೂಫಿ ಪಂಥ. ಆದರೆ ಇದು ಕೂಡ ನಮ್ಮನ್ನು ಎಲ್ಲಿಗೂ ತಲುಪಿಸುವುದೇ ಇಲ್ಲ. ನಾವು ಒಂದು ಜಾಣ್ಮೆಯ ಮಾತನ್ನು ಕೇಳಿದ ಸಂತೋಷ ಅನುಭವಿಸುತ್ತೇವೆ ಅಷ್ಟೇ.

ಜ್ಞಾನೋದಯದ ಮೂಲ ಸಿದ್ಧಾಂತವೇ ಅದು. ಅದು ಪ್ರತಿಯಾಬ್ಬನಿಗೂ ಸ್ವಂತ ಪ್ರಯತ್ನದಿಂದಲೇ ದಕ್ಕಬೇಕು. ಅದಕ್ಕೇ ಜ್ಞಾನೋದಯದ ಸ್ಥಿತಿಯನ್ನು orgasmಗೆ ಹೋಲಿಸುತ್ತಾರೆ. ಪ್ರತಿಯಾಬ್ಬನೂ ಅದನ್ನು ತಾನಾಗಿಯೇ ಪಡೆಯಬೇಕು. ಇನ್ನೊಬ್ಬನಿಂದ ಕೇಳಿ ತಿಳಿದುಕೊಳ್ಳುವಂಥದ್ದಲ್ಲ ಅದು. ಹೀಗಾಗಿ ಕಲಿಸುವುದು, ಕಲಿಯುವುದು ಕೇವಲ ನೆಪಮಾತ್ರ.

ಒಂದು ಪುಟ್ಟ ಪ್ರಸಂಗದೊಂದಿಗೆ ಮುಗಿಸೋಣ;

ಸೂಫಿ ಸಂತ ದೀಪ ಹಿಡಕೊಂಡಿದ್ದ ಮಗುವನ್ನು ಕೇಳಿದನಂತೆ;

ಈ ಬೆಳಕು ಎಲ್ಲಿಂದ ಬಂತು ಮಗೂ ?

ಮಗು ಉಫ್‌ ಎಂದು ಊದಿ ದೀಪ ಆರಿಸಿ ಕೇಳಿತಂತೆ;

‘ಈಗ ಬೆಳಕು ಎಲ್ಲಿಗೆ ಹೋಯ್ತು ಹೇಳಿ. ಆಮೇಲೆ ಅದೆಲ್ಲಿಂತ ಬಂತು ಅಂತ ಹೇಳುತ್ತೇನೆ’

ಇದನ್ನು ಕೇಳುವುದಕ್ಕೆ ಖುಷಿಯಾಗುತ್ತದೆ. ಆದರೆ ಇದು ಕತೆಯಾಗಿ ನಮ್ಮನ್ನು ತಲುಪುವ ಬದಲು, ಅನುಭವವಾಗಿ ತಲುಪಿದ್ದರೆ.

ಅದು ಜ್ಞಾನೋದಯ.

ಅಂದ ಹಾಗೆ ಮೇಲೆ ನಡೆದ ಮಾತುಕತೆಯಲ್ಲಿ ನಿಜಕ್ಕೂ ಜ್ಞಾನೋದಯವಾದದ್ದು ಯಾರಿಗೆ? ಪ್ರಶ್ನೆ ಕೇಳಿದ ಸಂತನಿಗೋ ಉತ್ತರಿಸಿದ ಕಂದನಿಗೋ?

ಅಥವಾ ಇದನ್ನು ಕೇಳಿಸಿಕೊಂಡ ನಮಗೋ?

ಮಾತು ಯಾತನೆಯ ದಿಡ್ಡಿಬಾಗಿಲು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X