• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಕಥೆ ಹೇಳಲು ಹೊರಟಾಗ....

By Staff
|
  • ಜಾನಕಿ

jaanaki@india.com

‘ನಿಮ್ಮ ಜೊತೆ ಮಾತಾಡ್ತಿರೋದು ನಿಮ್ಮ ಪ್ರೀತಿಯ ಗೆಳತಿ ನಮ್ರತಾ. ಎಲ್ಲರೂ ಪ್ರೀತಿಯಿಂದ ನಮಿ ಅಂತ ಕರೀತಾರೆ. ಕೇಳುಗರೇ.. ನೀವೂ ಹಾಗೆ ಕರೀಬಹುದು. ನಿಮ್ಮ ಜೊತೆ ಇವತ್ತು ಮಾತಾಡೋಕೆ ತುಂಬ ಸಂತೋಷ ಆಗುತ್ತೆ. ಇನ್‌ಫ್ಯಾಕ್ಟ್‌ ಇವತ್ತು ನೂರಕ್ಕೂ ಹೆಚ್ಚು ಪತ್ರಗಳು ಬಂದಿವೆ. ಕೊಳ್ಳೇಗಾಲದಿಂದ ಶ್ಯಾಮ್‌ ಒಂದು ಸೊಗಸಾದ ಗ್ರೀಟಿಂಗ್‌ ಕಳಿಸಿದ್ದಾರೆ. ’ನನ್ನ ಒಲವಿನ ನಮಿಗೆ ನೂರು ವಂದನೆ. ನಿಮ್ಮ ಸ್ವರ ಅಂದರೆ ನಂಗೆ ತುಂಬ ಇಷ್ಟ. ಅದಕ್ಕಾಗಿ ಕಾಯ್ತಾ ಇರ್ತೀನಿ. ಅದನ್ನು ರೆಕಾರ್ಡ್‌ ಮಾಡಿಟ್ಟುಕೊಂಡು ರಾತ್ರಿಯೆಲ್ಲ ಕೇಳ್ತಿರ್ತೀನಿ ಅಂತ ಬರೆದಿದ್ದಾರೆ. ವಾವ್‌.. ದಟ್ಸ್‌ ರಿಯಲಿ ನೈಸ್‌ ಆಫ್‌ ಯೂ ಶ್ಯಾಮ್‌. ಯೂ ಮೇಡ್‌ ಮೈ ಡೇ. ಥ್ಯಾಂಕ್ಯೂ ವಿತ್‌ ಎ ಬಂಚ್‌ ಆಫ್‌ ಲವ್‌. ಹಾಗೇ ಅರಸೀಕೆರೆಯಿಂದ...’

ನಿರಂಜನ ರೇಡಿಯೋವನ್ನು ಜಾಡಿಸಿ ಒದ್ದ. ಮೂರು ಕಾಸಿನ ಎಫ್ಪೆಮ್‌ ರೇಡಿಯೋ. ಹ್ಯಾಗೆ ಬಿದ್ದರೂ ಒದರುತ್ತಲೇ ಇರುತ್ತದೆ. ಗೋಡೆಗೆ ಬಡಿದು ಮತ್ತೂ ಮಾತಾಡುತ್ತಿದ್ದ ರೇಡಿಯೋವನ್ನು ಕಾಲಲ್ಲೇ ಆಫ್‌ ಮಾಡಿದ.

Anumanam Pedda rOgam!!ನಿರಂಜನನಿಗೆ ಹಾಗನ್ನಿಸಿದ್ದು ಅದೇ ಮೊದಲಲ್ಲ. ನಮ್ರತಾ ಮಾತಾಡುವ ಶೈಲಿಯೇ ಅವನನ್ನು ಇರಿಟೇಟ್‌ ಮಾಡುತ್ತಿತ್ತು. ಅವಳ್ಯಾಕೆ ಎಲ್ಲರ ಹತ್ತಿರವೂ ಅಷ್ಟು ಆತ್ಮೀಯವಾಗಿ ಮಾತಾಡಬೇಕು? ಯಾರೋ ಬರೆಯುವ ಪತ್ರಗಳನ್ನು ತನಗೆ ಬಂದ ಪ್ರೇಮ ಪತ್ರಗಳೇನೋ ಎಂಬಷ್ಟು ತೀವ್ರತೆಯಿಂದ ಓದಬೇಕು. ಅದ್ಯಾಕೆ ಹಾಗೆ ಮಿಣಿಮಿಣಿ ಮಣಕ ಮಾಡಿಕೊಂಡು ಮಿದುವಾಗಿ ನಾದಿ ನರಳಬೇಕು. ಗಂಭೀರವಾಗಿ ಓದಿದರೆ ಅವಳ ಗಂಟೇನು ಹೋಗುತ್ತದೆ.

ನಮ್ರತಾ ಮಾತಲ್ಲೇ ತನ್ನ ಇರವನ್ನು ತೋರಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದಾಳಾ? ಅವನ್ಯಾವನೋ ತಲೆಕೆಟ್ಟವನು. ಇವಳ ಸ್ವರವನ್ನು ರೆಕಾರ್ಡ್‌ ಮಾಡಿಕೊಂಡು ಕೇಳುತ್ತಾನಂತೆ. ಸ್ವರಸಂಸಾರಿ. ಸ್ವರ ಕೇಳಿಯೇ ಪ್ರೀತಿಸುತ್ತಾನೋ ಏನೋ? ನಮಿಯ ಬಗ್ಗೆ ಕನಸೂ ಕಾಣುತ್ತಿರಬೇಕು. ನಾಳೆಯಿಂದ ಕೆಲಸ ಬಿಟ್ಟುಬಿಡುವಂತೆ ಖಡಾಖಂಡಿತ ಹೇಳಿಬಿಡಬೇಕು.

ನಿರಂಜನನಿಗೆ ಮತ್ತಷ್ಟು ಸಿಟ್ಟು ಬಂತು. ಇದನ್ನೆಲ್ಲ ಅವಳ ಹತ್ತಿರ ಹೇಳಿಕೊಳ್ಳುವ ಹಾಗೂ ಇಲ್ಲ. ಶುದ್ಧ ಅನುಮಾನದ ಪ್ರಾಣಿ ಎಂದುಬಿಡುತ್ತಾಳೆ. ನಾಲ್ಕು ಮಾತಾಡಿದರೆ ಏನು ಹೋಗುತ್ತೋ ಮಾರಾಯ. ನೀನೊಂದು ಶುದ್ಧ ಗುಗ್ಗು ಅನ್ನುತ್ತಾಳೆ. ನಾನು ಯಾರ ಜೊತೆಗೆ ಮಾತಾಡುತ್ತೇನೆ ಅನ್ನುವುದೂ ಗೊತ್ತಿಲ್ಲ. ಅವರು ನನ್ನನ್ನು ಯಾವತ್ತೂ ನೋಡಿಲ್ಲ. ಅಷ್ಟಕ್ಕೇ ಅನುಮಾನಿಸ್ತೀಯಲ್ಲೋ ಅಂತ ಕಿಚಾಯಿಸುತ್ತಾಳೆ.

ಆದರೆ ಸೈಬರ್‌ಚಾಟ್‌ ಕೂಡ ಅದೇ ಅಲ್ಲವೇ? ಹೆಸರು ಗುರುತಿಲ್ಲದವನ ಜೊತೆ ಹರಟುವುದು. ಅವನು ಚಾಟ್‌ ಮಾಡುತ್ತಾ ರವಾನಿಸುವ ಪೋಲಿ ಜೋಕುಗಳಿಗೆ ಪುಳಕಗೊಳ್ಳುವುದು. ಕಂಪ್ಯೂಟರ್‌ ಮುಂದಿಟ್ಟುಕೊಂಡು ಪರಸ್ಪರ ನೋಡದೇನೇ ಏಕೋಭಾವದಲ್ಲಿ ತಲ್ಲೀನರಾಗುವುದು. ದೇಹದ ಹಂಗಿಲ್ಲದೆ ಸ್ಪರ್ಶವಿಲ್ಲದೆ ಮಾತಿಲ್ಲದೆ ಪಂಚೇಂದ್ರಿಯಗಳ ಗೋಜೇ ಇಲ್ಲದೇ ಆರ್ಗಾಸಮ್‌ ಅನುಭವಿಸುವುದು...

ಹಾಗಿದ್ದರೆ ನಮ್ರತಾ ಇದನ್ನು ಏಕಕಾಲಕ್ಕೆ ಸಾವಿರಾರು ಮಂದಿಯಾಂದಿಗೆ ಅನುಭವಿಸುತ್ತಾಳಾ? ಅವಳು ಆಡುವ ಮಾತು ಕೇವಲ ನಾಟಕವಾ? ಒಂದು ಗಡಸು ಸ್ವರ, ಒಂದು ಆತ್ಮೀಯ ಮಾತು, ಒಂದು ನಾದದ ನಿನಾದ, ಒಂದು ಬೆಚ್ಚನೆಯ ಹಲೋ ಅವಳನ್ನು ಒಂದು ಕ್ಪಣವಾದರೂ ಕೆರಳಿಸಿರಲಿಕ್ಕಿಲ್ಲವೇ? ಆ ಮಾತಿನಲ್ಲೇ ಅದರ ಒಡೆಯ ಅವಳ ಮುಂದೆ ಅವಳಿಗಿಷ್ಟವಾಗುವ ರೂಪದಲ್ಲಿ ಪ್ರತ್ಯಕ್ಪನಾಗಿ ಅವಳನ್ನು ಅವಳಿಗೇ ಗೊತ್ತಾಗದ ಹಾಗೆ ಸ್ಪರ್ಶಿಸಿ ರೋಮಾಂಚಗೊಳಿಸಲಿಕ್ಕಿಲ್ಲ ಎಂದು ನಂಬುವುದಾದರೂ ಹೇಗೆ?

ಮಾತಿಗೆ ಅಂಥ ಶಕ್ತಿ ಇಲ್ಲವೇ? ಅದೊಂದು ರಿಸೆಪ್ಷನಿಸ್ಟ್‌ ಹುಡುಗಿಯ ಸ್ವರ ಕೇಳಲಿಕ್ಕೆಂದೇ ಗೆಳೆಯರೆಲ್ಲ ಎಷ್ಟೊಂದು ಸಾರಿ ಅದ್ಯಾವುದೋ ಕಂಪೆನಿಗೆ ಫೋನ್‌ ಮಾಡುತ್ತಿರಲಿಲ್ಲ. ಆ ಸ್ವರ ಹುಟ್ಟಿಸುವ ರೋಮಾಂಚನದಲ್ಲೇ ಅವರೆಲ್ಲ ಖುಷಿಯಾಗುತ್ತಿದ್ದರಲ್ಲ. ನಮ್ರತಾಳೂ ಹೀಗೆ ಎಫ್ಪೆಮ್‌ ಕೇಳುವ ಅಸಂಖ್ಯ ಹುಡುಗರಿಗೆ ಖುಷಿ ಕೊಡುತ್ತಿರಬಹುದಾ? ಇಲ್ಲಿ ಮಾತಾಡುತ್ತಿದ್ದಂತೆಯೇ ನಮ್ರತಾ ಸ್ವರರೂಪಿಯಾಗಿ ಸಂಚರಿಸಿ ಅವರ ಮುಂದೆ ಅವರಿಗಷ್ಟ ಬಂದ ರೂಪಗಳಲ್ಲಿ ಆವಿರ್ಭವಿಸಿ ಅವರನ್ನು ತಣಿಸಲಿಕ್ಕಿಲ್ಲ ಎಂದು ನಂಬುವುದು ಹೇಗೆ?

ನಮ್ರತಾ ಮಾತಾಡುವುದಕ್ಕೆ ಕಲಿತಿದ್ದಾದರೂ ಯಾಕೆ? ಅವಳ ಸ್ವರ ಅಷ್ಟು ಇಂಪಾಗಿರುವುದಾದರೂ ಯಾಕೆ? ಸತ್ತು ಹಾಳುಬಿದ್ದುಹೋದ ರೇಡಿಯೋ ಮತ್ತೆ ಹುಟ್ಟಿಕೊಂಡಿದ್ದಾದರೂ ಯಾಕೆ?

ಒಂದು ವೇಳೆ ನಮ್ರತಾ ಟೀವಿಯಲ್ಲಿ ನಿರೂಪಕಿಯಾದರೆ? ನಿರಂಜನ ಒಮ್ಮೊಮ್ಮೆ ಯೋಚಿಸುತ್ತಾನೆ. ಟೀವಿಯಲ್ಲಾದರೆ ಪರವಾಗಿಲ್ಲ. ವೀಕ್ಪಕರ ಕಣ್ಣಿಗವಳು ಬೀಳುತ್ತಾಳೆ. ಕಣ್ಣಿಗೆ ಬಿದ್ದವಳು ಪೂರಾ ಇಷ್ಟವಾಗುವುದಿಲ್ಲ. ಕೆಲವರಿಗಷ್ಟೇ ಅವಳ ಸೌಂದರ್ಯ ಮೆಚ್ಚುಗೆಯಾಗಬಹುದು. ಆದರೆ ನೋಡನೋಡುತ್ತಿದ್ದಂತೆ ಅದೂ ಬೇಸರಾಗುತ್ತದೆ. ಬೇರೆ ಹುಡುಗಿಯರ ಜೊತೆ ಹೋಲಿಸಿ ನೋಡಿದಾಗ ನಮ್ರತಾಳ ದೌರ್ಬಲ್ಯಗಳು ತಿಳಿದು ವೀಕ್ಪಕರ ಕಣ್ಣಲ್ಲಿ ನಮ್ರತಾ ನಿಧಾನವಾಗಿ ಮರೆಯಾಗುತ್ತಾ ಹೋಗುತ್ತಾಳೆ. ಎದುರಿಗಿದ್ದೂ ಎದುರಿಗಿಲ್ಲದೆ ಹೋಗುತ್ತಾಳೆ. ಆದರೆ ಸ್ವರರೂಪಿ ಸುಂದರಿ ಹಾಗಲ್ಲ. ಅವಳು ಇಷ್ಟದೇವತೆಯ ರೂಪದಲ್ಲೇ ಮನಸಿನಂಗಳದಲ್ಲಿ ನೆಲೆಯೂರುತ್ತಾಳೆ. ಸಾವಿರ ಸಾವಿರ ಲಕ್ಪೋಪಲಕ್ಪ ರೂಪಗಳನ್ನು ಪಡಕೊಳ್ಳುತ್ತಾಳೆ. ಸ್ವರ ಒಂದೇ ಆದರೂ ಅವಳ ರೂಪಿಗೆ ಮಿತಿಯಿಲ್ಲ.

ಹಾಗೆ ಯೋಚಿಸುತ್ತಾ ನಿರಂಜನ ಆವತ್ತು ಅವಳಿಗೆ ಹೇಳಿಬಿಡಬೇಕು ಅಂದುಕೊಂಡ. ‘ನಾಳೆಯಿಂದ ನೀನು ಎಪ್ಪೆ-ಮ್‌ನಲ್ಲಿ ಮಾತಾಡಕೂಡದು. ಅದನ್ನು ತಡಕೊಳ್ಳುವ ಶಕ್ತಿ ನನಗಿಲ್ಲ’.

*****

ಸಂಜೆ ನಮ್ರತಾ ಮನೆಗೆ ಬಂದಳು. ನಿರಂಜನ ಆಗಷ್ಟೇ ಮರಳಿ ಬಂದಿದ್ದ. ಮಧ್ಯಾಹ್ನ ಆತ ಒದ್ದು ಹೋದ ರೇಡಿಯೋ ಗೋಡೆಗೊರಗಿ ನಿದ್ದೆ ಹೋಗಿತ್ತು. ಅದನ್ನು ಎತ್ತಿಡುವುದಕ್ಕೂ ಹೋಗದೆ ನಿರಂಜನ ತನ್ನ ನಿರ್ಲಕ್ಪ್ಯ ಆಕೆಗೆ ತಿಳಿಯಲಿ ಅಂತ ಸುಮ್ಮನಿದ್ದ.

ಅನ್ನ ಬಡಿಸಿಕೊಳ್ಳುತ್ತಾ ನಮ್ರತಾ ಹೇಳಿದಳು. ‘ಯಾಕೆ ತುಂಬ ಬೇಜಾರು ಕಣ್ರೀ. ನಾಳೆಯಿಂದ ಮಾತಾಡೋದು ನಿಲ್ಲಿಸಿಬಿಡಬೇಕು ಅಂತ ಮಾಡಿದ್ದೀನಿ. ಬಹುಶಃ ಟೀವಿ ಸೇರಿಕೊಳ್ತೀನಿ ಅಂತ ಕಾಣತ್ತೆ. ಆಫರ್‌ ಬಂದಿದೆ’.

****

ಅದಾದ ಒಂದು ತಿಂಗಳ ನಂತರ ನಿರಂಜನ ಟೀವಿ ನೋಡುತ್ತಾ ಕೂತಿದ್ದ. ನಮ್ರತಾ ತೆರೆಯ ಮೇಲೆ ಮೂಡಿದಳು. ಅಷ್ಟೇ ಉಲ್ಲಾಸದಿಂದ ಹುರುಪಿನಿಂದ ಮಾತಾಡಿದಳು. ನಿರಂಜನನನ್ನು ಮತ್ತೊಮ್ಮೆ ಕೀಳರಿಮೆ ಕಾಡಿತು. ಟೀವಿಗಿಂತ ಮಾತೇ ಒಳ್ಳೆಯದಿತ್ತು ಅಂದುಕೊಂಡ. ನಮ್ರತಾಳ ಮಾದಕ ಮಾತು ಕೇಳುವವರ ಕಣ್ಮುಂದೆ ಅವರಿಗಿಷ್ಟವಾದವರ ರೂಪ ಮೂಡುತ್ತಿತ್ತು. ಈಗ ಥೇಟ್‌ ನಮ್ರತಾಳೇ ಮೂಡುತ್ತಿದ್ದಾಳೆ. ಅವಳ ಸೌಂದರ್ಯ ಯಥವತ್ತಾಗಿ ಏಕಕಾಲಕ್ಕೆ ಅಖಂಡವಾಗಿ ಎಲ್ಲರೊಳಗೆ ಇಳಿಯುತ್ತಿದೆ.

ನಿರಂಜನನಿಗೆ ಕಣ್ಮುಂದಿನ ಟೀವಿಯನ್ನು ಒಡೆಯಬೇಕು ಅನ್ನಿಸಿತು. ಆದರೆ ಒಡೆಯಲಿಲ್ಲ. ಇತ್ತೀಚೆಗಷ್ಟೇ ಕೊಂಡು ತಂದ ಮೂವತ್ತೆಂಟು ಸಾವಿರದ ಟೀವಿಯ ಕಂತುಗಳಿನ್ನೂ ತೀರಿರಲಿಲ್ಲ.

*****

ಮತ್ತಷ್ಟು ವರುಷಗಳು ಸಂದಿವೆ. ಈಗ ನಮ್ರತಾ ಟೀವಿಯಲ್ಲಿ ಮಾತಾಡುವುದನ್ನು ನಿಲ್ಲಿಸಿದ್ದಾಳೆ. ರೇಡಿಯೋದಲ್ಲೂ ಆಕೆ ಮಾತಾಡುವುದಿಲ್ಲ. ರೇಡಿಯೋದಲ್ಲಿ ಬೇರೊಬ್ಬ ಸುಂದರಿಯ ಸ್ವರ ಕೇಳಿಬರುತ್ತಿದೆ. ಆಕೆ ಸುಂದರಿ ಇರಬಹುದು ಎಂದು ನಿರಂಜನ ಊಹಿಸುತ್ತಾನೆ. ಟೀವಿಯಲ್ಲಿ ಚಿಕ್ಕಪ್ರಾಯದ ತುಂಡುಲಂಗದ ಚೆಲುವೆಯರು ಕಾಣಿಸಿಕೊಂಡು ಮಾತುಮಾತಿಗೂ ಪಲುಕುತ್ತಾರೆ, ಬಳುಕುತ್ತಾರೆ. ನಿರಂಜನ ನೋಡುತ್ತಾನೆ.

*****

ನಮ್ರತಾ ನಿರಂಜನನೊಂದಿಗೆ ಮಾತಾಡುವುದನ್ನೂ ನಿಲ್ಲಿಸಿದ್ದಾಳೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌ !)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more