ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿರಲಾರೆ ; ಅಲ್ಲಿಗೆ ಹೋಗಲಾರೆ!

By Staff
|
Google Oneindia Kannada News
  • ಜಾನಕಿ
ನೀವು ತುಳಸೀಪೂಜೆ ಮಾಡೋಲ್ವಾ?

ಹಾಗೊಂದು ಪ್ರಶ್ನೆ ಎದುರಾಯಿತು. ‘ತುಳಸೀ’ ಅಂದರೇನು? -ಮರುಪ್ರಶ್ನೆ ಬಂತು. ನಿಮ್ಮ ಮನೆ ಮುಂದೆ ತುಳಸೀಕಟ್ಟೆಯೂ ಇಲ್ವಾ? ಗಾಬರಿಯ ಪ್ರಶ್ನೆ ಎದುರಾಯಿತು. ತುಳಸೀಗೆ ಕಟ್ಟೇನಾ? ಇಲ್ಲಿ ಅಚ್ಚರಿಯಿತ್ತು. ತುಳಸಿ, ಯೂ ನೋ, ಇಟ್ಸ್‌ ಎ ಪ್ಲಾಂಟ್‌. ವೆರಿ ಆಸ್ಪೀಶಿಯಸ್‌ ಅಂತ ಉದ್ಗಾರವಾಯಿತು. ದೂರದಲ್ಲೆಲ್ಲೋ ವಿದ್ಯಾಭೂಷಣರು ಹಾಡಿದ ಹಾಡು ಅನುರಣಿಸುತ್ತಿತ್ತು ; ಒಂದು ದಳ ಶ್ರೀತುಳಸಿ। ಬಿಂದು ಗಂಗೋದಕವು। ಇಂದಿರಾರಮಣಗೆ ಅರ್ಪಿತವೆನುತ। ಒಂದೇ ಮನಸಿನಲಿ। ಸಿಂಧುಶಯನ ಮುಕುಂದನ। ನೆನದರೆ ಎಂದೆಂದೂ ವಾಸಿಸುವ ಮಂದಿರದೊಳಗೆ।।

ಮನಸ್ಸು ಗೊಂದಲಪುರಿ!

Conflict between Tradition and modernityತುಳಸೀಪೂಜೆ ಮಾಡಬೇಕಾ? ಮನೆಮುಂದೆ ತುಳಸೀಕಟ್ಟೆ ಇರಬೇಕಾ? ಇನ್ಫೋಸಿಸ್‌ನಲ್ಲಿ ಕೆಲಸ ಮಾಡುವವನು ಗೋಪೂಜೆ ಯಾಕೆ ಮಾಡಬೇಕು? ಅದಕ್ಕೋಸ್ಕರ ಒಂದು ದಿನದ ಮಟ್ಟಿಗೆ ಅದೆಲ್ಲಿಂದಲೋ ಗೋವುಗಳನ್ನು ಕರೆಸಿಕೊಂಡು ಪೂಜೆ ಮಾಡೋದರಿಂದ ಏನು ಪ್ರಯೋಜನ? ಯಾವುದೋ ಪತ್ರಿಕೆಯಲ್ಲಿ ಕೆಲಸ ಮಾಡುವ ಗಂಡ, ಬ್ಯಾಂಕಿನಲ್ಲಿ ದುಡಿಯೋ ಹೆಂಡತಿ, ಕಾನ್ವೆಂಟಿನಲ್ಲಿ ಓದೋ ಹುಡುಗನಿಗೆ ದೀಪಾವಳಿ ಯಾಕೆ? ಜೊತೆಗೇ ಕ್ಲಬ್ಬಿಗೆ ಹೋಗಿ ಬರುವ ಹೆಂಡತಿಗೆ ಭೀಮನ ಅಮಾವಾಸ್ಯೆ ಬೇಕೆ?

ನಮಗೆ ಅಲ್ಲೂ ಇರುವ, ಇಲ್ಲೂ ಇರುವ ಆಸೆ! ಅದನ್ನು ಬಿಡುವ ಧೈರ್ಯವಿಲ್ಲ; ಇದರ ಮೇಲೆ ನಂಬಿಕೆಯಿಲ್ಲ. ಅದು ಅಪ್ಪನ ಆಸ್ತಿಯಂತೆ ಪಿತ್ರಾರ್ಜಿತ; ಇದು ಸ್ವಂತ ದುಡಿಮೆಯ ಸ್ವಯಾರ್ಜಿತ. ಸ್ವಯಾರ್ಜಿತದ ಜೊತೆಗೆ ಪಿತ್ರಾರ್ಜಿತವೂ ಇರಲಿ ಎಂಬ ಆಸೆ. ಅಲ್ಲಿಂದ ಬಂದಿದ್ದನ್ನೆಲ್ಲ ಒಂದು ಕೋಣೆಯಲ್ಲಿಟ್ಟು ಬೀಗ ಜಡಿದು ವರುಷಕ್ಕೊಮ್ಮೆ ಬಾಗಿಲು ತೆರೆದು ನೋಡಿ ‘ಆಹಾ’ ಎಂದು ಹಳೆಯ ಕಮಟು ವಾಸನೆಗೆ ಬೆರಗಾಗಿ, ಇಂಥ ವಾಸನೆ ಈಗೆಲ್ಲಿ ಹೋಯಿತು ಅಂತ ಮೂಗನ್ನು ವಿಸ್ಕಿ ಬಾಟಲಿಗೆ ತಿಕ್ಕಿ ಹೊಳಪು ಮಾಡಿಕೊಂಡು ಹೊರಟುಬಿಡುತ್ತೇವೆ ನಮ್ಮದೇ ಆದ ರೂಟಿಗೆ, ಬೇಟೆಗೆ! ಬದುಕು ಮಾಯೆಯ ಮಾಟ; ಮಾತು ‘ನೆರೆತೊರೆ’ಯಾಟ!

***

ಹಬ್ಬಕ್ಕೆ ಇವತ್ತಿಗೂ ರಜೆ; ಸ್ವಾತಂತ್ರ ದಿನಾಚರಣೆಯ ಹಾಗೆ. ನಾಗರಪಂಚಮಿಯಿಂದ ತುಳಸೀಪೂಜೆಯ ತನಕ ನಡುವೆ ಹತ್ತಾರು ಹಬ್ಬಗಳು. ಬಲಿಪಾಡ್ಯ, ಸೋಮನ ಬಿದಿಗೆ, ಅಕ್ಷಯ ತದಿಗೆ, ಗಣೇಶನ ಚೌತಿ, ನಾಗರಪಂಚಮಿ, ಕುಕ್ಕೆ ಷಷ್ಠಿ, ರಥಸಪ್ತಮಿ, ಕೃಷ್ಣಾಷ್ಟಮಿ, ಮಹಾನವಮಿ, ವಿಜಯದಶಮಿ, ಪ್ರಥಮ ಏಕಾದಶಿ, ಉತ್ಥಾನ ದ್ವಾದಶಿ.. ಹೀಗೆ ಹನ್ನೆರಡು ನಿಗದಿತ ಹಬ್ಬಗಳ ನಡುವೆ ಮತ್ತಷ್ಟು ಸಂಭ್ರಮ. ನರಕ ಚತುರ್ದಶಿ, ದೀಪಾವಳಿ, ಗೋಪೂಜೆ, ಲಕ್ಷ್ಮೀಪೂಜೆ.. ಹೀಗೆ.

ಅದನ್ನೆಲ್ಲ ಇವತ್ತೂ ಎಲ್ಲರೂ ಆಚರಿಸಬೇಕೇ? ಅಂಥದ್ದೊಂದು ಭಾಷಣ ಸಾಗುತ್ತಿತ್ತು; ನಾವು ನಮ್ಮ ಆಚರಣೆಗಳನ್ನು, ಹಬ್ಬಗಳನ್ನು ಮರೆತುಬಿಟ್ಟಿದ್ದೇವೆ. ಹಬ್ಬಗಳಿಗೆ ವಿಶೇಷವಾದ ಅರ್ಥವಿದೆ. ಅವುಗಳು ಕೇವಲ ಸಂಭ್ರಮದ ಆಚರಣೆಗಳಲ್ಲ. ಅದಕ್ಕೊಂದು ಸಾಮಾಜಿಕ ಮಹತ್ವವಿದೆ. ಅವುಗಳನ್ನು ನಾವು ಮರೆಯುತ್ತಿರುವುದು ವಿಷಾದನೀಯ!

ಹೌದಾ?

ಸುಮ್ಮನೆ ಯೋಚಿಸೋಣ; ಈ ಹಬ್ಬಗಳಿಗೂ ನಮ್ಮ ಜೀವನಕ್ರಮಕ್ಕೂ ಏನಾದರೂ ಸಂಬಂಧ ಇದೆಯೆ? ಇವತ್ತು ನಗರಗಳಲ್ಲಿ ವಾಸಿಸುತ್ತಿರುವ ನಮ್ಮ ಜೀವನ ಶೈಲಿಯೇ ಬೇರೆಯಾಗಿಲ್ಲವೆ? ನಮ್ಮ ಜೀವನಶೈಲಿ ಬೇರೆಯಾಗಿದ್ದರೂ ನಾವು ಯಾಕೆ ನಮಗೆ ಅರ್ಥವೇ ಆಗದ, ಕಾರ್ಯಕಾರಣ ಸಂಬಂಧವೇ ಇಲ್ಲದ ಹಬ್ಬಗಳನ್ನು ಆಚರಿಸಬೇಕು?

ಬಲಿಪಾಡ್ಯದಿಂದ ಹಿಡಿದು ನರಕ ಚತುರ್ದಶಿ ತನಕದ ಎಲ್ಲ ಹಬ್ಬಗಳೂ ಕೃಷಿಪ್ರಧಾನವಾದ ಸಮಾಜಕ್ಕೆ ಹೊಂದಿಕೊಳ್ಳುವಂಥ ಆಚರಣೆಗಳು. ಪ್ರಕೃತಿಗೆ ಹತ್ತಿರಾಗಿರುವವರ ಸಂಭ್ರಮ ಅದು. ಬಲಿಪಾಡ್ಯದ ದಿನ ಪಾತಾಳದಲ್ಲಿ ಅಡಗಿ ಕುಳಿತು ಒಳ್ಳೆಯ ಬೆಳೆ ಕೊಟ್ಟ ಬಲಿಚಕ್ರವರ್ತಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಇವತ್ತು ಬಲಿ ಚಕ್ರವರ್ತಿ ಯಾರು ಅನ್ನುವುದನ್ನು ತಿಳಿಸಿ ಹೇಳುವುದಕ್ಕೆ ಮೂರು ತಿಂಗಳ ಡಿಪ್ಲೊಮಾ ಕೋರ್ಸ್‌ ಬೇಕು. ವಿಷ್ಣು ಎಂಬ ಎಟಿಎಂ ಅರ್ಥಾತ್‌ ಎನಿಟೈಮ್‌ ಮ್ಯಾನ್‌ ವಾಮನ ರೂಪದಲ್ಲಿ ಬಂದು ಬಲಿಚಕ್ರವರ್ತಿಯ ಬಳಿ ಮೂರು ಅಡಿ ದಾನ ಬೇಡಿದ್ದು. ಎರಡೇ ಅಡಿಯಲ್ಲಿ ಇಡೀ ಜಗತ್ತನ್ನೇ ಅಳೆದದ್ದು. ಮೂರನೆ ಅಡಿಯನ್ನು ಬಲಿಯ ತಲೆಮೇಲಿಟ್ಟು ಪಾತಾಳಕ್ಕೆ ತಳ್ಳಿದ್ದು- ಇವೆಲ್ಲ ಇವತ್ತಿನ ಹ್ಯಾರಿಪಾಟರ್‌ ಮುಂದೆ ಹಳೇ ಐಡಿಯಾಗಳಂತೆ ಕಾಣಿಸಬಹುದು. ಕಾರ್ಟೂನುಗಳಿಗೂ ಪುರಾಣಗಳಿಗೂ ಇರುವ ವ್ಯತ್ಯಾಸ ಅದೇ. ಪುರಾಣ ಎಲ್ಲವನ್ನೂ ಘನವಾಗಿ ತೋರಿಸುತ್ತದೆ. ಕಾರ್ಟೂನು ಅದನ್ನೇ ತಮಾಷೆಯಾಗಿ ತೋರಿಸುತ್ತದೆ. ಪುರಾಣದಿಂದ ಒಂದು ರೀತಿಯ ನಂಬಿಕೆ ಸೃಷ್ಟಿಯಾಗುತ್ತದೆ, ಕಾರ್ಟೂನಿಗೆ ಆ ಶಕ್ತಿಯಿಲ್ಲ. ರಂಜಿಸುವ ಶಕ್ತಿ ಎರಡಕ್ಕೂ ಸಮಾನ.

ಇದೊಂದೇ ಅಲ್ಲ, ಎಲ್ಲಾ ಹಬ್ಬಗಳೂ ಕೃಷಿ ಪ್ರಧಾನ, ಪರಿಸರಕ್ಕೆ ಹತ್ತಿರಾದದ್ದು. ಹಳ್ಳಿಗಳಲ್ಲಿ ಸದಾ ಕಾಡಿನ ನಡುವೆ ಇರೋದರಿಂದ ಹಾವನ್ನು ನೋಡುವುದು ಸರ್ವೆಸಾಮಾನ್ಯ. ಅದಕ್ಕೊಂದು ನಾಗರಪಂಚಮಿ. ಬೆಳೆ ಬೆಳೆದು ಫಸಲು ಬಿಡುವ ಹೊತ್ತಲ್ಲಿ ಕ್ರಿಮಿಕೀಟಗಳ ಕಾಟ; ಅವನ್ನು ಓಡಿಸಲು ದೀಪಾವಳಿಯ ಸದ್ದು ಮತ್ತು ಪಟಾಕಿಯಿಂದ ಬರುವ ಗಂಧಕದ ಹೊಗೆ. ಮನೆಯಲ್ಲೇ ಹತ್ತಾರು ಗೋವುಗಳು. ಅವುಗಳಿಗೆ ಕೃತಜ್ಞತೆ ಸಲ್ಲಿಸೋದಕ್ಕೆ ಗೋಪೂಜೆ. ಭತ್ತ ತೆನೆಬಿಟ್ಟಾದ ಹೊಸ ಅಕ್ಕಿ ಊಟ. ಬತ್ತ ಮನೆಗೆ ಬಂದಾಗ ಮತ್ತೊಂದು ಸಂಭ್ರಮ. ಏನೂ ಇಲ್ಲದಿದ್ದಾಗ ಸತ್ಯನಾರಾಯಣ ಪೂಜೆ.

ನಗರದಲ್ಲಿರುವ ನಮ್ಮ ವೃತ್ತಿ ಕೃಷಿ ಅಲ್ಲ. ಹಿಂದೆ ಮನುಷ್ಯ ತನ್ನ ಅಗತ್ಯಗಳಿಗಲ್ಲದೆ ಬೇರೇನಕ್ಕೂ ದುಡಿಯುತ್ತಿರಲಿಲ್ಲ. ಉದಾಹರಣೆಗೆ ಹಳೆಯ ವೃತ್ತಿಗಳನ್ನೇ ತೆಗೆದುಕೊಳ್ಳಿ. ಹೊಟ್ಟೆಗಿಕ್ಕುವುದಕ್ಕೆ ರೈತ, ಕೃಷಿಗೆ ಬೇಕಾದ ಉಪಕರಣ ಮಾಡುವುದಕ್ಕೆ ಕಮ್ಮಾರ, ಬಟ್ಟೆ ನೇಯ್ದು ಕೊಡುವುದಕ್ಕೆ ನೇಕಾರ, ಹೊಲಿದು ಕೊಡುವುದಕ್ಕೆ ದರ್ಜಿ, ಕಾಲ್ಮೆಟ್ಟುವಿಗೆ ಚಮ್ಮಾರ- ಇಂಥ ವೃತ್ತಿಗಳೇ ಇದ್ದದ್ದು. ಇಂಥ ಜೀವನೋಪಾಯಗಳನ್ನು ಬಿಟ್ಟು ಯಾರೂ ಕೂಡ ಯಾವುದೋ ಕಂಪ್ಯೂಟರ್‌ ಪ್ರೋಗ್ರಾಮ್‌ ಬರೆದುಕೊಂಡೋ, ತಮಗೇ ಗೊತ್ತಿಲ್ಲದ ಯಂತ್ರವೊಂದರ ಬಿಡಿಭಾಗಗಳನ್ನು ತಯಾರಿಸಿಕೊಂಡೋ ಬದುಕುತ್ತಿರಲಿಲ್ಲ. ಇವತ್ತು ನಾವು ಮಾಡುವ ಅಸಂಖ್ಯಾತ ಉದ್ಯೋಗಗಳ ಪೈಕಿ ತೊಂಬತ್ತರಷ್ಟು ನಮಗೆ ಸಂಬಂಧವೇ ಇಲ್ಲದ್ದು!

***

ವೃತ್ತಿ ಬದಲಾಗಿದೆ; ಪರಿಸರ ಬದಲಾಗಿದೆ; ಪದ್ಧತಿ ಬದಲಾಗಿದೆ. ಆದರೂ ನಾವು ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಅಂದುಕೊಳ್ಳುತ್ತೇವೆ. ಬೆಂಗಳೂರು ಹಬ್ಬ ಮಾಡುತ್ತೇವೆ; ನಾಟಕ ಮಾಡುತ್ತೇವೆ; ರಂಗಶಂಕರ ಮಾಡುತ್ತೇವೆ. ಯಾವುದೂ ನಮಗೆ ಹತ್ತಿರ ಅನ್ನಿಸುವುದಿಲ್ಲ. ಕಲೆಗೂ ಬದುಕಿಗೂ ಈಗ್ಗೆ ಅಷ್ಟೊಂದು ಅಂತರ ಆಗಿಬಿಟ್ಟಿದೆ. ಅದೇ ‘ಫಿಲ್ತ್‌’ ಎಂಬ ನಾಟಕವನ್ನು ಈ ಕಾಲದ ತರುಣರು ಮುಗಿಬಿದ್ದು ನೋಡುತ್ತಾರೆ. ಅದು ಅವರಿಗೆ ಹತ್ತಿರವಾಗಿದೆ.

ಯಕ್ಷಗಾನ, ನಾಗಮಂಡಲ, ದೊಡ್ಡಾಟ, ಭೂತಾರಾಧನೆ- ಇವನ್ನೆಲ್ಲ ಇವತ್ತು ಮತ್ತೆ ನೋಡಿ ಮೆಚ್ಚಬೇಕಾದರೆ ಅವು ನಮ್ಮನ್ನು ಬೇರೆಯೇ ರೂಪದಲ್ಲಿ ಪ್ರವೇಶಿಸಬೇಕು. ಆ ರೂಪ ಯಾವುದು ಅನ್ನುವುದನ್ನು ಕಾಲ ಒಂದೇ ನಿರ್ಧರಿಸಬಲ್ಲದು. ಅದಕ್ಕಾಗಿ ಕಾಯುವುದು ಬಿಟ್ಟು ; ಹಳೆಯದೆಲ್ಲ ಸಾಯುತ್ತಿದೆ ಅಂತ ಹಪಹಪಿಸುವುದರಲ್ಲಿ ಅರ್ಥವಿಲ್ಲ.

ಅಡಿಗರು ಯಾವತ್ತೋ ಬರೆದರಲ್ಲ ; ಹೊಸ್ತಿಲಾಚೆಗೆ ನಿಂತು ಹಿಂದೆಮುಂದೆ ನೋಡುವಗತ್ಯ ಇಲ್ಲ ; ಇದು ಹೊಸ್ತಿಲೇ ಅಲ್ಲ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X