ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಫ್ಟ್‌

By Staff
|
Google Oneindia Kannada News
ಅವನು ಒಳಗೆ ಕಾಲಿಡುವುದೂ ಲಿಫ್ಟ್‌ ಬಾಯಿತೆರೆಯುವುದೂ ಸರಿಹೋಯಿತು. ಸದ್ಯ ಕಾಯುವ ರಗಳೆ ತಪ್ಪಿತು ಅಂದುಕೊಂಡು ಲಿಫ್ಟಿನೊಳಗೆ ತೂರಿಕೊಂಡ. ಆಶ್ಚರ್ಯವೆಂಬಂತೆ ಆವತ್ತು ಅವನನ್ನು ಬಿಟ್ಟರೆ ಲಿಫ್ಟಿನಲ್ಲಿ ಯಾರೂ ಇರಲಿಲ್ಲ . ಇನ್ನೇನು ಬಾಗಿಲು ಮುಚ್ಚಿಕೊಳ್ಳಬೇಕು ಅನ್ನುವಷ್ಟರಲ್ಲಿ ಅವಳು ಓಡಿ ಬರುವುದು ಕಾಣಿಸಿತು. ಆತ ಬಾಗಿಲು ತೆರೆಯುವುದು ಹೇಗೆಂದು ಸ್ವಿಚ್‌ಗಾಗಿ ತಡಕಾಡುತ್ತಿದ್ದಂತೆ ಆಕೆಯೇ ಹೊರಗಿನಿಂದ ಸ್ವಿಚ್‌ ಒತ್ತಿದಳು. ಮುಚ್ಚಿಕೊಳ್ಳುತ್ತಿದ್ದ ಬಾಗಿಲು ಒಮ್ಮೆ ಪಟಪಟಿಸಿ ತೆರೆದುಕೊಂಡಿತು.

ಆಕೆ ಒಳಗೆ ಬಂದಳು. ತನ್ನ ಕೆಲಸ ಮುಚ್ಚುವುದು ಮತ್ತು ತೆರೆಯುವುದು ಮಾತ್ರ ಎಂಬ ವಿಷಾದದಲ್ಲಿ ಲಿಫ್ಟಿನ ಎರಡು ಬಾಗಿಲುಗಳು ಮತ್ತೆ ಒಂದಾದವು!

ಅವನು ಅವಳನ್ನು ನೋಡಿದ. ಆ ಮಹಾನಗರದ ಕಷ್ಟಸುಖಗಳನ್ನು ಮೈಗೂಡಿಸಿಕೊಂಡ ಹುಡುಗಿ. ತೊಟ್ಟ ಜೀನ್ಸ್‌ ಪ್ಯಾಂಟು ಮತ್ತು ತಿಳಿಹಳದಿ ಬಣ್ಣದ ಟೀಶರ್ಟಿನಲ್ಲಿ ಯೌವನ ಜಿನುಗುತ್ತಿತ್ತು. ಟೀಶರ್ಟಿನ ಮೇಲೊಂದು ಜರ್ಕಿನ್‌ ಹಾಕಿಕೊಂಡ ಹುಡುಗಿಯ ಮುಂಭಾಗ ಆತನಿಗೆ ಕಾಣಿಸುತ್ತಿರಲಿಲ್ಲ. ಪ್ರೊಫೈಲಿನ ಹಾಗೆ ಅರ್ಧ ಮುಖ ಮಾತ್ರ ಕಾಣಿಸುತ್ತಿತ್ತು. ಯಾಕೋ ಅವನಿಗೆ ಸತ್ಯಂ ಶಿವಸುಂದರಂ ನೆನಪಾಯಿತು.

ತನ್ನ ಹಿಂದೆ ನಿಂತ ಹುಡುಗ ತನ್ನನ್ನೇ ನೋಡುತ್ತಿದ್ದಾನೆ ಅನ್ನುವ ಬಗ್ಗೆ ಆಕೆಗೆ ಯಾವ ಅನುಮಾನವೂ ಇರಲಿಲ್ಲ. ಆಕೆ ಅಯಾಚಿತವಾಗಿ ಜೀನ್ಸ್‌ಪ್ಯಾಂಟಿನ ಹಿಂಭಾಗವನ್ನೊಮ್ಮೆ ಸವರಿಕೊಂಡಳು. ಬೆರಳುಗಳಿಗೆ ಪ್ಯಾಂಟಿಯ ಅಂಚುಗಳು ದಕ್ಕಿದವು. ಹೊಸ ಬಗೆಯ ರಿಮ್‌ಲೆಸ್‌ ಪ್ಯಾಂಟಿ ಕೊಳ್ಳಬೇಕು ಅಂದುಕೊಂಡದ್ದು ಮತ್ತೆ ನೆನಪಾಯಿತು.

ಹುಡುಗನಿಗೆ ಅವಳನ್ನೊಮ್ಮೆ ಇಡಿಯಾಗಿ ನೋಡಿಬಿಡಬೇಕು ಅನ್ನಿಸಿತು. ನಿಂತಲ್ಲೇ ಕೊಂಚ ಜರುಗಿದ. ಒಮ್ಮೆ ಕೆಮ್ಮಿದ. ತನ್ನಷ್ಟಕ್ಕೆ ತಾನೆ ಎಂಬಂತೆ ‘ಸಾರಿ’ ಎಂದ. ಆಕೆ ಅದು ಕೇಳಿಸಿದರೂ ಕೇಳಿಸದವಳಂತೆ ನಿಂತಿದ್ದಳು. ಆತ ಲಿಫ್ಟಿನ ಫ್ಲೋರ್‌ ಇಂಡಿಕೇಟರ್‌ನತ್ತ ಕಣ್ಣು ಹಾಯಿಸಿದ. ಎಲ್‌ಸಿಡಿ ಮಸಕುಮಸುಕಾಗಿ ಯಾವ ಫ್ಲೋರ್‌ನಲ್ಲಿದ್ದೇವೆ ಅನ್ನುವುದೇ ಗೊತ್ತಾಗುತ್ತಿರಲಿಲ್ಲ.

ಅವಳು ಕೂಡ ಅವನ ಮುಖವನ್ನು ಸರಿಯಾಗಿ ನೋಡಿರಲಿಲ್ಲ. ಅವಳಿಗೂ ತಿರುಗಿ ನೋಡಬೇಕು ಅನ್ನಿಸಿತು. ಆ ಆಸೆಯನ್ನು ಅದುಮಿಟ್ಟುಕೊಂಡು ಹಾಗೇ ನಿಂತಳು. ಹಾಗೆ ತಿರುಗಿ ನೋಡುವುದು ತನ್ನ ವ್ಯಕ್ತಿತ್ವಕ್ಕೆ ಕುಂದು ಅನ್ನಿಸಿತು. ಬೇಕಿದ್ದರೆ ಅವನೇ ಮಾತಾಡಲಿ, ನಾನ್ಯಾಕೆ ಮೇಲೆ ಬಿದ್ದು ತಿರುಗಿ ನೋಡಬೇಕು ಅಂದುಕೊಂಡು ಬಿಮ್ಮನೆ ನಿಂತಳು.

ಲಿಫ್ಟು ಅಲ್ಲಲ್ಲಿ ಸದ್ದು ಮಾಡುತ್ತಾ ಸಾಗುತ್ತಿತ್ತು. ಈ ಕಟ್ಟಡಕ್ಕೆ ಇಪ್ಪತ್ತನಾಲ್ಕು ಮಹಡಿಗಳು ಅಂತ ಓದಿದ್ದು ನೆನಪಾಯಿತು. ಇದನ್ನು ಮಾರುತ್ತಾರೆ ಅಂತ ಪತ್ರಿಕೆಯಲ್ಲಿ ಓದಿದ್ದೂ ನೆನಪಿಗೆ ಬಂತು. ಈ ಕಟ್ಟಡವನ್ನು ಯಾರು ಯಾಕಾದರೂ ಕೊಳ್ಳುತ್ತಾರೋ? ಕೊಂಡವರು ಏನು ಮಾಡುತ್ತಾರೆ? ಬಹುಶಃ ಇದೇ ಕಛೇರಿಗಳು ಮುಂದುವರಿಯುತ್ತವೋ ಏನೋ? ಯೋಚಿಸುತ್ತಿದ್ದ ಅವಳ ಬೆನ್ನಿಗೆ ಏನೋ ತಾಕಿದಂತಾಯಿತು. ಒಂದು ಕ್ಷಣ ಭಯ ನಖಶಿಖಾಂತ ಚಲಿಸಿ, ಎದೆಯ ನಡುಭಾಗದಲ್ಲಿ ನೆಲೆಯಾಯಿತು. ಮರುಕ್ಷಣವೇ ತಾಕಿದ್ದು ಅವನ ಕೈಯಲ್ಲಿದ್ದ ಬ್ಯಾಗು ಅನ್ನುವುದು ಹೊಳೆಯಿತು. ಅದು ಆಕಸ್ಮಿಕ ಇರಲಾರದು, ಬಹುಶಃ ಆತ ತನ್ನನ್ನು ಪರೀಕ್ಷಿಸಲಿಕ್ಕೋಸ್ಕರ ತಾಕಿಸಿರಲೂ ಬಹುದು. ಆಕೆ ಕಾಲು ಹೆಜ್ಜೆ ಮುಂದೆ ಸರಿದಳು.

ಲಿಫ್ಟು ನಿಂತಿತು!

ಅದರ ಬಾಗಿಲು ಸಿನಿಮಾದ ಕೊನೆಯ ದೃಶ್ಯದಲ್ಲಿ ವಿಚ್ಛೇದನಗೊಂಡ ಗಂಡ ಹೆಂಡಿರು ವಿರುದ್ಧ ದಿಕ್ಕಿಗೆ ಸಾಗುವಂತೆ ಅತ್ತಿತ್ತ ತೆರೆದುಕೊಂಡವು. ಹೊರಗೆ ನಿಂತಿದ್ದ ಸಣಕಲನೊಬ್ಬ ‘ಡೌನ್‌’ ಅಂತ ಹೆಬ್ಬೆರಳು ಕೆಳಗೆ ಮಾಡಿ ಕೇಳಿದ. ಹುಡುಗಿ ತಲೆಯಾಡಿಸಿದಳು. ಆತ ಕ್ಯಾರಿಆನ್‌ ಎಂಬಂತೆ ಭುಜ ಕುಣಿಸಿದ. ಬಾಗಿಲು ತೆರೆದ ಆ ಅರೆಗಳಿಗೆಯಲ್ಲೇ ಅವಳ ಮೇಲಿಂದ ಹಾದು ಬಂದ ಗಾಳಿ ಅವಳು ಮೈಗೆ ಸಿಂಪಡಿಸಿಕೊಂಡಿದ್ದ ಫರ್‌ಫ್ಯೂಮನ್ನೂ ಅವನ ಮೈಗೆ ತಾಕಿಸಿತು. ಅವನು ಉಲ್ಲಸಿತನಾದ.

ಅವಳು ನಿಂತ ಭಂಗಿಯನ್ನೊಮ್ಮೆ ಆತ ನೋಡಿದ. ಅದೇ ಭಂಗಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರೆ ಅದು ಕ್ಯಾಟ್‌ವಾಕ್‌ ಆಗುತ್ತದೆ ಅನ್ನುವ ಬಗ್ಗೆ ಅನುಮಾನ ಉಳಿಯಲಿಲ್ಲ. ಕೈಯಲ್ಲೊಂದು ಸುಂದರವಾದ ಫೈಲು ಹಿಡಕೊಂಡಿದ್ದಳು. ಅದರ ಮೇಲ್ಭಾಗದಲ್ಲಿ ಕರ್ರಗಿನ ಪ್ಲಾನರ್‌ ಇತ್ತು. ಅದರ ಮೇಲೆ ಜೆ. ಎಸ್‌. ಎಂಬ ಎರಡು ಅಕ್ಪರಗಳು ಮಾಸಿದ ಬಂಗಾರದ ಬಣ್ಣದಲ್ಲಿ ಹೊಳಪು ಕಳಕೊಂಡು ಕೂತಿದ್ದವು. ಇದೀಗ ಸೆಪ್ಟೆಂಬರ್‌. ಒಂಬತ್ತು ತಿಂಗಳಿಂದ ಆ ಪ್ಲಾನರ್‌ ಬಳಸುತ್ತಿರಬೇಕು. ಅದಕ್ಕೇ ಅಕ್ಷರ ಮಾಸಿಹೋಗಿದೆ. ಈಕೆ ಯಾರಿರಬಹುದು. ಯಾವುದೋ ಕಂಪೆನಿಯ ಸೆಕ್ರೆಟರಿ. ರಿಸೆಪ್ಷನಿಸ್ಟು , ಜರ್ನಲಿಸ್ಟು. ಜಾಹೀರಾತು ಸಂಸ್ಥೆಯ ಎಕ್ಸಿಕ್ಯೂಟಿವ್‌!

ಅವಳನ್ನು ಮುಂಭಾಗದಿಂದ ನೋಡಬೇಕು ಅನ್ನಿಸಿತು. ಈಗ ಆಕೆ ಏನು ಯೋಚಿಸುತ್ತಿರಬಹುದು? ಹಿಂದೆ ನಿಂತಿರುವ ನನ್ನ ಬಗ್ಗೆಯೇ? ನಾನು ಮಾತಾಡಲಿ ಅಂತ ಆಕೆಗೆ ಅನ್ನಿಸಿರಬಹುದೇ? ಆಕೆಯೇ ಮಾತಾಡಿಸಲಿಕ್ಕೆ ಕಾಯುತ್ತಿರಬಹುದೇ? ಅಥವಾ ಅವಳು ಈಗಷ್ಟೇ ಮುತ್ತಿಟ್ಟು ಬಂದ ನಲ್ಲನ ಗುಂಗಿನಲ್ಲಿರಬಹುದೆ? ಸಂಜೆಯಾದ ಮೇಲೆ ಈ ಹುಡುಗಿ ಎಲ್ಲಿಗೆ ಹೋಗುತ್ತಾಳೆ. ಯಾವುದಾದರೂ ಲೇಡೀಸ್‌ ಬಾರ್‌ಗೆ ಹೋಗಿ ಅಲ್ಲಿ ಒಂದು ಪೆಗ್‌ ವೋಡ್ಕಾ ಕುಡಿದು, ಒಂದೆರಡು ದಮ್‌ ಸಿಗರೇಟು ಸೇದುತ್ತಾಳಾ? ಬರಿಶ್ತಾ ಕಾಫಿ ಶಾಪ್‌ನಲ್ಲಿ ಕೂತು ಬರಿದೇ ಸಿಗರೇಟು ಸೇದುತ್ತಾ ಅವನಿಗಾಗಿ ಕಾಯುತ್ತಾಳಾ? ಕೋಶಿಶ್‌ನಲ್ಲಿ ಮೈಗೆಲ್ಲ ಸಿಗರೇಟು ಹೊಗೆ ಮೆತ್ತಿಸಿಕೊಂಡು ಬಿಯರ್‌ ಹೀರುತ್ತಾ ಕೂತಿರುತ್ತಾಳಾ?

ಅವಳೂ ಅದನ್ನೇ ಯೋಚಿಸುತ್ತಿದ್ದಳು. ಈತ ಏನು ಕೆಲಸ ಮಾಡುತ್ತಿರಬಹುದು? ಯಾವುದೋ ಕಂಪೆನಿಯ ಪಿಆರ್‌ಓ. ಮತ್ತಾವುದೋ ಸಂಸ್ಥೆಯಲ್ಲಿ ಅಕೌಂಟೆಂಟು. ಒಳಗೆ ನುಗ್ಗುವ ಕ್ಷಣದಲ್ಲಿ ಅವನು ತೊಟ್ಟ ಬಟ್ಟೆಯನ್ನು ಅವಳು ನೋಡಿದ್ದಳು. ಅರೆ ಕ್ಷಣ ನೋಡಿದ್ದ ಅವನ ಮುಖವಂತೂ ನೆನಪಾಗಲೇ ಇಲ್ಲ. ಕಣ್ಣನ್ನು ಭರತನಾಟ್ಯದ ಭಂಗಿಯಲ್ಲಿ ಮಾಡುವಂತೆ ಆದಷ್ಟೂ ಬದಿಗೆ ತಂದು ಹಿಂದೆ ಹಾಯಿಸಲು ಯತ್ನಿಸಿದಳು. ಅವನು ತೊಟ್ಟ ಪೀಟರ್‌ ಇಂಗ್ಲೆಂಡ್‌ ಶರಟಿನ ತೋಳಷ್ಟೇ ಕಾಣಿಸಿತು. ಕಣ್ಣು ಕೆಳಗೆ ಹಾಯಿಸಿದರೆ ಕಾಲಲ್ಲಿ ವುಡ್‌ಲ್ಯಾಂಡ್‌ ಷೂ ಮಿನುಗುತ್ತಿತ್ತು.

ಅವಳನ್ನು ಮಾತಾಡಿಸಬೇಕು ಅನ್ನುವ ಆಸೆ ಅದಮ್ಯವಾಗುತ್ತಿತ್ತು. ಅವಳು ಕೂಡ ಏನಾದರೊಂದು ನೆಪ ಮಾಡಿ ಅವನ ಮುಖ ನೋಡೋಣ ಅಂದುಕೊಂಡಳು. ಆತ ಬೇಕಂತಲೇ ಕೊಂಚ ಮುಂದಕ್ಕೆ ಸರಿದ. ಆಕೆ ಬಲಗೈಯಲ್ಲಿ ಹಿಡಕೊಂಡಿದ್ದ ಕೀಚೈನು ನೆಲಕ್ಕೆ ಜಾರಿಸಿದಳು. ಅದನ್ನು ಹೆಕ್ಕಲೆಂಬಂತೆ ಆಕೆ ಬಾಗುವ ಹೊತ್ತಿಗೆ ಅವನು ಅವಳ ಮುಖ ನೋಡಲೆಂದು ಮುಂದೆ ಬಂದಿದ್ದ.

ಇದ್ದಕಿದ್ದಂತೆ ಲಿಫ್ಟು ನಿಂತಿತು. ಬಾಗಿಲು ತೆರೆದುಕೊಂಡಿತು. ಲಿಫ್ಟಿಗಾಗಿ ಕಾಯುತ್ತಿದ್ದ ಹತ್ತಾರು ಮಂದಿ ಸರಬರ ಒಳಗೆ ನುಗ್ಗಿದರು. ಅವನು ಅವರ ನಡುವೆ ಬಿಡಿಸಿಕೊಂಡು ಹೊರಗೆ ಬಂದ.

ಸ್ವಲ್ಪ ಹೊತ್ತು ಅಲ್ಲೇ ನಿಂತುಕೊಂಡ. ಅವಳು ಹೊರಗೆ ಬರಲಿಲ್ಲ !

ಅಷ್ಟು ಹೊತ್ತಿಗೆ ಅವನ ಮೊಬೈಲು ಸದ್ದು ಮಾಡಿತು. ಆತ ಮತ್ತೆ ಈ ಜಗತ್ತಿಗೆ ಬಂದ. ಫೋನ್‌ ಮಾಡಿದ ಹೆಂಡತಿಗೆ ‘ನಾನು ನಿನ್ನದೇ ಯೋಚನೆಯಲ್ಲಿದ್ದೇನೆ ಡಿಯರ್‌. ಬೇಗ ಬಂದುಬಿಡುತ್ತೇನೆ, ಸಂಜೆ ನಿಮ್ಮಮ್ಮನ ಮನೆಗೆ ಹೋಗಿಬರೋಣ’ ಅಂದ.

ಯಾಕೋ ಮೂವತ್ತು ವರುಷಗಳ ಹಿಂದೆ ತನ್ನೂರಿನ ಹಸಿರು ಗದ್ದೆಗಳ ನಡುವೆ ನಡೆಯುತ್ತಿದ್ದಾಗ ಗಾಳಿಯಲ್ಲಿ ತೇಲಿ ಬಂದ ಕೇದಗೆಯ ಪರಿಮಳ ಮತ್ತೊಮ್ಮೆ ಮೂಗಿಗೆ ಅಡರಿದಂತಾಯಿತು.

ಆತ ಸುಮ್ಮನೆ ನಕ್ಕ.

ಅದೇ ಹೊತ್ತಿಗೆ ಆಕೆ ಲಿಫ್ಟಿನಿಂದ ಹೊರಗೆ ಬಂದು ಒಮ್ಮೆ ಸುತ್ತಲೂ ನೋಡಿದಳು. ಅವಳಿಗೋಸ್ಕರ ಕಾಯುತ್ತಿದ್ದ ಏಜಂಟು ‘ನಾನು ಇಲ್ಲಿದ್ದೀನಿ ಮೇಡಂ’ ಅಂತ ಕೆಟ್ಟ ಇಂಗ್ಲಿಷ್‌ನಲ್ಲಿ ಹೇಳಿದ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X