ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀವಿ ಎಂಬ ಮಾಯಾಮೃಗಕ್ಕೆ ಮರುಳಾದ ವೈದೇಹಿಯರಿಗೆ !

By Staff
|
Google Oneindia Kannada News
ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತಾ...
ಆದೇವೆ ಬಂಧಮುಕ್ತಾ...

ಹಾಗಂತ ಅಶ್ವಥ್‌ ದನಿ ಅತ್ಯಂತ ಆರ್ತವಾಗಿ ಬೇಡಿಕೊಳ್ಳುತ್ತದೆ. ನಾವೂ ಕೇಳಿಕೊಳ್ಳುತ್ತೇವೆ; ಆದೇವೇ ಬಂಧಮುಕ್ತ ? ಆದರೆ ಟೀವಿಯ ಮಾಯೆಯೆಂಬುದು ಬಿಸ್ಸೆನ್ನೆಲ್‌ ಟೆಲಿಫೋನ್‌ ಕನೆಕ್ಷನ್ನಿನ ಹಾಗೆ; ಎಲ್ಲಿಗೆ ಹೋದರೂ ಹಿಂಬಾಲಿಸುತ್ತದೆ. ಹಳ್ಳಿಯಾಂದಕ್ಕೆ ಹೋಗಿ ಅಡಗಿ ಕುಳಿತರೂ ದೂರದಿಂದಲೇ ಜೀವ ಹಿಂಡುತ್ತದೆ.

ಹಾಗಂತ ಏನೋ ಅನಾಹುತ ಆಗಿದೆ ಎಂದು ಕೊರಗಬೇಕಾಗಿಲ್ಲ. ಒಂದು ಮಾಧ್ಯಮ ಎಷ್ಟು ಪ್ರಭಾವಶಾಲಿ ಅನ್ನುವುದಕ್ಕೆ ಟೀವಿ ಸಾಕ್ಷಿ. ಅದು ಎಂಥ ಕುಗ್ರಾಮಕ್ಕೂ ವಿಂಬಲ್ಡನ್‌ನಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದನ್ನು ಏಕಾಏಕಿ ತೋರಿಸಬಲ್ಲದು. ಅಲ್ಲೆಲ್ಲೋ ದೂರದಲ್ಲಿ ಇರಾಕಿನ ಮಂದಿಯನ್ನು ಅಮೆರಿಕನ್‌ ಸೈನಿಕರು ಸದೆಬಡಿಯುತ್ತಿರುವುದನ್ನೂ ಇಲ್ಲೆಲ್ಲೋ ಹಳ್ಳಿಯಲ್ಲಿ ಕುಂತವರು ನೋಡಬಹುದು!

Challenges of TV media and Kannada writers...ಪ್ರಶ್ನೆ ಅದಲ್ಲ. ಇಷ್ಟೊಂದು ಪ್ರಭಾವಶಾಲಿ ಮಾಧ್ಯಮವನ್ನು ನಮ್ಮ ಲೇಖಕರು ಯಾಕೆ ಕಡೆಗಣಿಸಿದ್ದಾರೆ? ನಮ್ಮ ಸರ್ಕಾರ ಯಾಕೆ ಮೂಲೆಗುಂಪು ಮಾಡಿದೆ? ನಮ್ಮ ಬುದ್ಧಿಜೀವಿಗಳು ಯಾಕೆ ಹೀಗಳೆದು ಛೀಮಾರಿ ಹಾಕುತ್ತಾರೆ? ಹಿಂದೆ ಪತ್ರಿಕೆಗಳು ಬಂದಾಗ ಆದ ಕ್ರಾಂತಿಯನ್ನು ನೆನಪಿಸಿಕೊಳ್ಳಿ. ಹಳ್ಳಿಹಳ್ಳಿಗೂ ಸುದ್ದಿ ತಲುಪಿ, ಜನ ಎಷ್ಟೊಂದು ಮಾಹಿತಿಪೂರ್ಣರಾದರು ಎನ್ನುವುದು ಇತಿಹಾಸ ಬಲ್ಲವರಿಗೆಲ್ಲ ಗೊತ್ತು. ಅದೇ ಅಕ್ಷರಗಳು ಅವರನ್ನು ಬಂಧನದಿಂದ ಬಿಡುಗಡೆಯತ್ತ ಒಯ್ಯಲು ನೆರವಾದದ್ದೂ ಈಗ ಇತಿಹಾಸ.

ಆದರೆ ಈಗ ಟೀವಿಯಂಥ ಪ್ರಭಾವಶಾಲಿ ಮಾಧ್ಯಮದಿಂದ ಅಂಥ ಕೆಲಸ ಯಾಕೆ ಸಾಧ್ಯವಾಗುತ್ತಿಲ ್ಲ? ನಿರಕ್ಷರಕುಕ್ಷಿ ಕೂಡ ಅರ್ಥಮಾಡಿಕೊಳ್ಳಬಹುದಾದ ಟೀವಿಯ ಮೂಲಕವೇ ಸರ್ಕಾರ ತನ್ನ ಪ್ರಜೆಗಳ ಕೂಡ ಮಾತಾಡಬಹುದಲ್ಲ ? ಅಂಥದ್ದೆಲ್ಲ ಯಾಕೆ ನಡೆಯುತ್ತಿಲ್ಲ ? ಟೀವಿಯೆಂಬುದು ಯಾಕೆ ಕೇವಲ ಸಿನಿಮಾ ಹಾಡುಗಳ ಸಂತೆಯಾಗಿದೆ?

ಅದಕ್ಕೆ ನಮ್ಮ ಲೇಖಕರೂ ಕಾರಣ ಇರಬಹುದಾ? ಯೋಚಿಸಿ ನೋಡಿ. ಸತ್ವಶಾಲಿ ಲೇಖಕರ ಒಂದು ದೊಡ್ಡ ಗುಂಪು ಟೀವಿಯಿಂದ ದೂರವೇ ಉಳಿದುಬಿಟ್ಟಿದೆ. ಟೀವಿ ನಮ್ಮ ಮಾಧ್ಯಮ ಅಲ್ಲ ಅನ್ನುವುದೂ ಅದು ಯುವಕರನ್ನು ಹಾಳು ಮಾಡುತ್ತದೆ ಅನ್ನುವುದೂ ಅವರೆಲ್ಲರ ದೂರು. ಟೀವಿಯಂಥ ಮಾಧ್ಯಮವನ್ನು ಮುಂದಿಟ್ಟುಕೊಂಡೂ ಜನ ಪುಸ್ತಕ ಓದಬೇಕು ಅಂತ ನಿರೀಕ್ಷಿಸುವುದು ತಪ್ಪು. ಅಷ್ಟಕ್ಕೂ ಎಲ್ಲರಿಗೂ ಬೇಕಾಗಿರೋದು ಕತೆ. ಆ ಕತೆಯನ್ನು ಟೀವಿಯೇ ಹೇಳಿದರೆ ಪುಸ್ತಕವನ್ನೇಕೆ ಓದಬೇಕು?

ಐದಾರು ವರುಷಗಳ ಹಿಂದೆ ಮಧ್ಯಾಹ್ನ ಊಟವಾದ ಮೇಲೋ ಸಂಜೆಯ ಬಿಡುವಿನ ವೇಳೆಯಲ್ಲೋ ವಾರಪತ್ರಿಕೆಗಳ ಧಾರಾವಾಹಿಯನ್ನು ಓದಿಕೊಂಡು ಕಾಲಕಳೆಯುವುದು ಹೆಂಗಳೆಯರಲ್ಲಿ ಸಾಮಾನ್ಯವಾಗಿತ್ತು. ಇವತ್ತು ಆ ಪತ್ರಿಕೆಯ ಜಾಗವನ್ನು ಟೀವಿ ಆಕ್ರಮಿಸಿಕೊಂಡಿದೆ. ಟೀವಿಯಲ್ಲೇ ಅಡುಗೆಯಿಂದ ಹಿಡಿದು ಆರೋಗ್ಯದ ತನಕ ಎಲ್ಲ ಮಾಹಿತಿಯೂ ಸಿಗುತ್ತದೆ. ಮನರಂಜನೆಗೆ ಅವೇ ಧಾರಾವಾಹಿಗಳು ಇಲ್ಲಿವೆ. ಓದುವುದರಿಂದ ನೋಡುವುದಕ್ಕೆ ಕನ್ನಡದ ಮನಸ್ಸುಗಳು ಶಿಫ್ಟಾಗಿವೆ ಅನ್ನುವುದನ್ನು ಬಿಟ್ಟರೆ ಅಂಥ ಅನಾಹುತಕಾರಿ ಬದಲಾವಣೆಯೇನೂ ಆಗಿಲ್ಲ.

ಆದರೆ ನಮ್ಮ ಲೇಖಕರೇಕೆ ಟೀವಿಯನ್ನು ದೂರುತ್ತಾ ಓಡಾಡುತ್ತಿದ್ದಾರೆ ?

ಸಿಂಪಲ್‌. ಅವರಿಗೆ ಹೊಸ ಮಾಧ್ಯಮಕ್ಕೆ ದಾಟುವುದಕ್ಕೇ ಸಾಧ್ಯವಾಗಿಲ್ಲ. ಟೀವಿಯೆಂಬ ದೃಶ್ಯಮಾಧ್ಯಮದ ಸವಾಲುಗಳನ್ನು ಸ್ವೀಕರಿಸುವಷ್ಟು ಅವರು ಬೆಳೆದಿಲ್ಲ. ಅಲ್ಲದೇ ಓದುಗರ ಮೇಲೆ ಹೇರಿದಂತೆ ವೀಕ್ಷಕರ ಮೇಲೂ ತಮಗಿಷ್ಟ ಬಂದದ್ದನ್ನೆಲ್ಲ ಹೇರುವುದಕ್ಕೆ ಲೇಖಕರಿಗೆ ಖಂಡಿತಾ ಸಾಧ್ಯವಾಗುವುದಿಲ್ಲ.

ಉದಾಹರಣೆ ಕವಿತೆ! ಹೊಸ ಕವಿಗಳು ಬರೆಯುತ್ತಿರುವ ಕವಿತೆಗಳು ಟೀವಿ ಸೀರಿಯಲ್ಲುಗಳ ಟೈಟಲ್‌ ಸಾಂಗ್‌ ಆಗುವುದಕ್ಕೂ ನಾಲಾಯಕ್ಕು. ಅದು ಟೀವಿಯ ಕಳಪೆ ಗುಣಮಟ್ಟವನ್ನು ತೋರಿಸುತ್ತದೋ ಹೊಸ ಕವಿಗಳ ಕವಿತೆಯ ಮೇಲ್ಮಟ್ಟವನ್ನು ತೋರಿಸುತ್ತದೋ ಆಮೇಲೆ ನಿರ್ಧರಿಸೋಣ. ಹಾಗೇ ಅರ್ಥವಾಗದ ವಿಮರ್ಶೆಗಾಗಲೀ, ವಿಶ್ಲೇಷಣೆಗಾಗಲಿ ಅಲ್ಲಿ ಜಾಗವಿಲ್ಲ. ಅದು ಬರಹಗಾರರ ಕಸದ ಬುಟ್ಟಿ ಅಲ್ಲವೇ ಅಲ್ಲ. ವೀಕ್ಷಕ ಸ್ವೀಕರಿಸದೇ ಹೋದರೆ ಎಂಥವರೂ ಅಲ್ಲಿ ರಿಜೆಕ್ಟ್‌ ಆಗುತ್ತಾರೆ. ಸಮುದ್ರ ಬೇಡದ ವಸ್ತುಗಳನ್ನು ದಡಕ್ಕೆಸೆಯುವ ಹಾಗೆ ವೀಕ್ಷಕ ಮೆಚ್ಚದ ಕಾರ್ಯಕ್ರಮಗಳು ದಡಕ್ಕೆ ಬಂದು ಬೀಳುತ್ತವೆ!

***

ಹೀಗೆ ಅಪ್‌ಡೇಟ್‌ ಆಗದಿರುವುದು ತಪ್ಪು. ಟೀವಿ ಸೀರಿಯಲ್‌ ಚೆನ್ನಾಗಿಲ್ಲ ಅನ್ನುವ ಯಾವ ಲೇಖಕ ಒಂದು ಒಳ್ಳೆಯ ಚಿತ್ರಕತೆಯನ್ನು ಬರೆದು ಸೀರಿಯಲ್‌ ಮುಂದಿಟ್ಟಿದ್ದಾನೆ? ಕೆಟ್ಟ ಕತೆಗಳು ಬರುತ್ತವೆ ಅನ್ನುವ ಯಾವ ಬರಹಗಾರ ‘ತಗೊಳ್ಳಿ ಒಂದು ಕತೆ’ ಅಂತ ಚಾನಲ್ಲಿಗೆ ಕೊಟ್ಟಿದ್ದಾನೆ. ಒಬ್ಬ ಟಿ.ಕೆ .ರಾಮರಾವ್‌, ಒಬ್ಬ ಭೈರಪ್ಪ, ಒಬ್ಬ ಭಾರತೀಸುತ, ಒಬ್ಬ ಆಲನಹಳ್ಳಿ- ಕಿರುತೆರೆಯೆಂಬ ಅವಕಾಶದಲ್ಲಿ ಯಾಕೆ ಕಾಣಿಸಿಕೊಳ್ಳಲಿಲ್ಲ ಹೇಳಿ? ಸಂಭಾಷಣೆಗಳನ್ನು ಕೇಳೋಕ್ಕಾಗಲ್ಲ ಅನ್ನುವ ಲೇಖಕರೇಕೆ ‘ಇಲ್ನೋಡಿ, ಹೀಗಿರಬೇಕು ಸಂಭಾಷಣೆ’ ಅನ್ನಿಸುವಂತೆ ಯಾಕೆ ಬರೆದುಕೊಟ್ಟಿಲ್ಲ?

ಅದು ಸಾಮರ್ಥ್ಯದ ಪ್ರಶ್ನೆ. ಟೀವಿಯೆನ್ನುವುದು ದಿನಪತ್ರಿಕೆಯ ಹಾಗೆ. ಇವತ್ತಿನದು ನಾಳೆಗಿಲ್ಲ. ಪತ್ರಿಕಾ ಕಛೇರಿಯಲ್ಲಷ್ಟೇ, ಹಳೆಯ ಪತ್ರಿಕೆಗಳು ಸಿಗುತ್ತವೆ. ಟೀವಿ ಕಾರ್ಯಕ್ರಮಗಳೂ ಅಷ್ಟೇ. ಅವು ಟೀವಿ ಚಾನಲ್ಲುಗಳಲ್ಲಷ್ಟೇ ಇರುತ್ತವೆ. ಒಂದು ಪತ್ರಿಕೆಯನ್ನು ಓದಿ ಮುದುರಿ ಮೂಲೆಗೆಸೆಯುವ ಹಾಗೇ ಒಂದು ಸೀರಿಯಲ್ಲನ್ನೂ ನೋಡಿ ಆನಂದಿಸಿ ಟೀವಿ ಮುಚ್ಚಿ ಮಲಗಿಬಿಡಬಹುದು. ಆದರೂ ಪತ್ರಿಕೆಗೆ ಇರುವ ಮರ್ಯಾದೆ ಟೀವಿಗಿಲ್ಲ. ಯಾಕೆಂದರೆ ಅಲ್ಲಿ ಒಳ್ಳೆಯ ಲೇಖಕರಿಲ್ಲ. ಟೀವಿಗಾಗಿ ಕೆಲಸ ಮಾಡುವುದು ತನ್ನ ಘನತೆಗೆ ಕಮ್ಮಿ ಅಂತ ತಿಳಿಯುವ ಮಹಾನ್‌ ಲೇಖಕರು ನಮ್ಮಲ್ಲಿದ್ದಾರೆ.

ಅಷ್ಟೇ ಅಲ್ಲ. ವೀಕ್ಷಕರಿಗೆ ಅರ್ಥವಾಗುವಂತೆ ಬರೆಯುವುದಕ್ಕೆ ಅನೇಕ ಲೇಖಕರಿಗೆ ಸಾಧ್ಯವೂ ಆಗುತ್ತಿಲ್ಲ. ರಾಮಚಂದ್ರ ಶರ್ಮರ ಕವಿತೆಗಳನ್ನು ಓದುವ ಒಂದು ಸೆಷನ್‌ ಟೀವಿ ಚಾನಲ್ಲಿನಲ್ಲಿ ಇಟ್ಟುಕೊಂಡರೆ ಏನಾಗುತ್ತೆ ಊಹಿಸಿ. ಅದೇ ಶರ್ಮರು ಇದಕ್ಕಿಂತ ಬೇರೆಯಾದದ್ದನ್ನು ಬರೆಯೋಲ್ಲ ಅನ್ನುತ್ತಾರೆ. ಅಲ್ಲಿಗೆ ಶರ್ಮ ಮತ್ತು ವೀಕ್ಷಕರ ನಡುವಿನ ಕೊಂಡಿ ಕಳಚಿಕೊಳ್ಳುತ್ತದೆ. ನಿಧಾನವಾಗಿ ವೀಕ್ಷಕರನ್ನು ಬದಲಾಯಿಸೋಣ ಅನ್ನುವ ಸಂಯಮ ನಮ್ಮ ಲೇಖಕರಿಗೆ ಇಲ್ಲವೇ ಇಲ್ಲ!

***

ವೀಕ್ಷಕರ ಪಾಡೂ ಕಷ್ಟವೇ. ಅವರಿಗೆ ಚಾಯ್ಸೇ ಇಲ್ಲ ಅಂದುಕೊಳ್ಳುತ್ತಾರೆ ಚಾನಲ್ಲಿನ ಮಂದಿ. ಆದರೆ ಈ ಜಗತ್ತಿನಲ್ಲಿ ಟೀವಿ ಸೀರಿಯಲ್ಲಿನ ವೀಕ್ಷಕನಿಗೆ ಇರುವಷ್ಟು ಸ್ವಾತಂತ್ರ ಇನ್ಯಾರಿಗೂ ಇಲ್ಲ. ಒಂದು ಸಿನಿಮಾ ನೋಡಲು ಥಿಯೇಟರ್‌ಗೆ ಹೋದವನು ಪೂರ್ತಿ ನೋಡದೇ ಬರೋದಿಲ್ಲ. ಒಂದು ಪತ್ರಿಕೆ ಕೊಂಡವನು ಒಂದಷ್ಟು ಪುಟಗಳನ್ನಾದರೂ ಓದಿಯೇ ಓದುತ್ತಾನೆ. ಆದರೆ ಸೀರಿಯಲ್‌ ಒಂದಿಷ್ಟು ಬೋರು ಹೊಡೆಸಿದರೂ ಸಾಕು, ರಿಮೋಟು ಆ ಚಾನಲ್ಲಿನ ಆಯಸ್ಸನ್ನು ಮೊಟಕುಗೊಳಿಸುತ್ತದೆ.

ದೂರದಿಂದಲೇ ಜೀವ ಹಿಂಡುವವರನ್ನು ಹತ್ತಿರದಲ್ಲೇ ನಿವಾರಿಸುವ ಮಾರ್ಗ ನಮಗೆಲ್ಲರಿಗೂ ಗೊತ್ತಿದೆ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X