• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲದ ಪಾವಟಿಗೆಯಿಂದ ಕಾಣದ ಕಾಲಸಪ್ಪಳ

By Staff
|
  • ಜಾನಕಿ

jaanaki@india.com

ನಾನು ಹುಟ್ಟಿದ್ದು ಶ್ರಮಿಕ ವರ್ಗದಲ್ಲಿ. ಜೀವನೋತ್ಸಾಹ, ಗುರಿ, ಆದರ್ಶ ಇವೆಲ್ಲ ನಮ್ಮಂಥವರ ಪಾಲಿಗೆ ಆಗಿಬಾರದ ಪದಗಳು ಅಂತ ಬಾಲ್ಯದಲ್ಲೇ ಅನ್ನಿಸಿತು. ಯಾಕೆಂದರೆ ನಾನು ಹುಟ್ಟಿಬೆಳೆದ ವಾತಾವರಣ ಅಷ್ಟೊಂದು ಜಡವೂ, ದರಿದ್ರವೂ ಆಗಿತ್ತು. ನಾನು ಜೀವನದ ಅತ್ಯಂತ ಕೆಳಸ್ತರದಲ್ಲಿದ್ದೆ. ಹೀಗಾಗಿ ನನಗೆ ಬದುಕು ಕೊಟ್ಟದ್ದು ಅತ್ಯಂತ ಅಸಹನೀಯವೂ ನೀಚವೂ ಆದದ್ದನ್ನು. ಅದನ್ನು ಮೀರುವ ಶಕ್ತಿ ಕೂಡ ನನಗಿರಲಿಲ್ಲ.

ನನ್ನ ಕಣ್ಮುಂದೆ ಉಳ್ಳವರ ಗೋಪುರವಿತ್ತು. ಕಣ್ಣೆತ್ತಿ ನೋಡಿದಾಗಲೆಲ್ಲ ನನಗೂ ಆ ಗೋಪುರ ಏರಬೇಕೆಂಬ ಆಸೆಯಾಗುತ್ತಿತ್ತು . ಅಲ್ಲಿ ಬಣ್ಣಬಣ್ಣದ ಬಟ್ಟೆತೊಟ್ಟ ಗಂಡಸರೂ ಉದ್ದುದ್ದ ಲಂಗ ತೊಟ್ಟ ಹುಡುಗಿಯರೂ ಇದ್ದರು. ಒಳ್ಳೆಯ ಊಟ ಪುಷ್ಕಳವಾಗಿ ಸಿಗುತ್ತಿತ್ತು. ಇದು ಹೊಟ್ಟೆ ಪಾಡಿಗಾದರೆ ಆತ್ಮಕ್ಕೆ ಬೇಕಾದದ್ದೂ ಆ ಗೋಪುರದಲ್ಲಿದೆ ಅಂದುಕೊಂಡಿದ್ದೆ. ಪರಿಶುದ್ಧತೆ, ಶಾಂತಿ, ನಿಸ್ವಾರ್ಥ ಮತ್ತು ಒಳ್ಳೆಯ ಆಲೋಚನೆಗಳು ಎತ್ತರದ ಮನೆಯಲ್ಲಿರುತ್ತವೆ ಅಂತ ಭಾವಿಸಿದ್ದೆ. ನನ್ನ ಈ ಯೋಚನೆಗೆ ಕಾರಣ ನಾನು ಓದುತ್ತಿದ್ದ ‘ಸಾಗರ ತೀರ’ದ ಕಾದಂಬರಿಗಳು. ಅವುಗಳ ಪ್ರಕಾರ ಕೆಟ್ಟವರನ್ನೂ ದುಷ್ಟರನ್ನೂ ಬಿಟ್ಟರೆ ಮೇಲಂತಸ್ತಿನಲ್ಲಿರುವ ಎಲ್ಲರೂ ಶುದ್ಧಚಾರಿತ್ರದ ಉದ್ಬೋಧ ಯೋಚನೆಗಳ ಘನವಂತರು. ಸದಾ ಸತ್ಕಾರ್ಯಗಳನ್ನು ಮಾಡುತ್ತಿರುವವರು. ನಾನಿದನ್ನು ಒಪ್ಪಿಕೊಂಡೇ ಬಿಟ್ಟಿದ್ದೆ. ಈ ಬದುಕನ್ನು ಸುಂದರವಾಗಿಸಿದವರು ಅವರೇ ಎಂದೂ ನಾನು ನಂಬಿದ್ದೆ.

Jack London : Successful working class writerಆದರೆ ಆದರ್ಶ ಮತ್ತು ಭ್ರಮೆಗಳ ವಿಕಲತೆಯನ್ನು ಜನ್ಮಕ್ಕಂಟಿಸಿಕೊಂಡು ಶ್ರಮಿಕ ವರ್ಗದಿಂದ ಮೇಲಕ್ಕೇರುವುದು ಅಷ್ಟೇನೂ ಸುಲಭವಾಗಿರಲಿಲ್ಲ. ನನಗೊಂದು ಏಣಿಯೂ ಸುಲಭದಲ್ಲಿ ಸಿಗಲಿಲ್ಲ. ಮೇಲೆರಲು ಹೋದ ನನಗೆ ಮೊದಲು ಎದುರಾದದ್ದು ಚಕ್ರಬಡ್ಡಿಯ ಲೆಕ್ಕ. ಎತ್ತರದಲ್ಲಿರುವ ಮನುಷ್ಯನ ಮೆದುಳು ಎಷ್ಟು ಜಾಣತನದ ಲೆಕ್ಕಾಚಾರ ಹಾಕಬಲ್ಲದು ಎಂಬುದು ನನಗೆ ಮೊದಲ ಬಾರಿಗೆ ಅರ್ಥವಾಯಿತು. ಆಮೇಲೆ ನನ್ನ ಓರಗೆಯ ಮಂದಿಯ ಸಂಬಳ, ಜೀವನಮಟ್ಟ, ಖರ್ಚುಗಳನ್ನೆಲ್ಲ ನಾನು ಲೆಕ್ಕ ಹಾಕಿದೆ. ಅದರ ಪ್ರಕಾರ ನಾನು ತಕ್ಷಣವೇ ಕೆಲಸ ಮಾಡಿ ಐವತ್ತು ವರುಷಗಳ ಕಾಲ ಎಡೆಬಿಡದೆ ದುಡಿದರೆ ಮಾತ್ರ ಎತ್ತರದಲ್ಲಿರುವವರು ಅನುಭವಿಸುವಂಥ ಐಷಾರಾಮದ ರುಚಿ ನೋಡಬಹುದು ಅನ್ನುವುದು ಗೊತ್ತಾಯಿತು. ಆಗಲೇ ನಾನು ಮದುವೆಯಾಗಬಾರದು ಎಂದು ತೀರ್ಮಾಸಿದ್ದು. ಆಗಷ್ಟೇ ಶ್ರಮಿಕ ವರ್ಗದ ಬಹುದೊಡ್ಡ ಅನಾಹುತಕಾರಿ ಸಂಗತಿಯಾದ ಕಾಯಿಲೆಯಿಂದ ಪಾರಾಗಲು ಸಾಧ್ಯ ಅನ್ನಿಸಿತು.

ಆದರೆ ಕೇವಲ ಬದುಕಿ ಉಳಿಯುವುದಕ್ಕಿಂತ, ಕಸವಾಗಿಯೋ ಧೂಳಾಗಿಯೋ ಬದುಕುವುದಕ್ಕಿಂತ ಹೆಚ್ಚಿನದನ್ನು ನನ್ನ ಬದುಕು ನನ್ನಿಂದ ಅಪೇಕ್ಷಿಸುತ್ತಿತ್ತು. ನಾನು ಆರಂಭದಲ್ಲಿ ಪೇಪರ್‌ ಹಂಚುವ ಹುಡುಗನಾಗಿ ಕಾಣಿಸಿಕೊಂಡೆ. ಆಗ ನನಗೆ ಹತ್ತು ವರುಷ. ನನ್ನ ಸುತ್ತಮುತ್ತಲ ಕ್ಷುದ್ರತೆ ಮತ್ತು ನನಗಿಂತ ಎತ್ತರದಲ್ಲಿರುವ ಸ್ವರ್ಗ. ಆ ಸ್ವರ್ಗಾರೋಹಣಕ್ಕೆ ಬೇರೆಯೇ ಏಣಿ ಬಳಸಬೇಕು ಅಂತ ನನಗೆ ಅನ್ನಿಸಿದ್ದು ಆಗಲೇ. ಅದು ವ್ಯಾಪಾರದ ಏಣಿ. ನೂರು ರುಪಾಯಿ ಸಂಪಾದಿಸಿ ವರುಷಕ್ಕೆ ಐದು ರುಪಾಯಿ ಬಡ್ಡಿಗೆ ಬ್ಯಾಂಕಿನಲ್ಲಿಡುವುದಕ್ಕಿಂತ ಐದು ರುಪಾಯಿಗೆ ಎರಡು ಪೇಪರ್‌ ಕೊಂಡುಕೊಂಡು ಏಳು ರುಪಾಯಿಗೆ ಅದನ್ನು ಮಾರುವುದು ಹೆಚ್ಚು ಲಾಭದ್ದು ಅನ್ನಿಸಿತು. ಹತ್ತೇ ವರುಷಕ್ಕೆ ನಾನೊಬ್ಬ ಬೋಳು ತಲೆಯ ಚಾಣಾಕ್ಷ ವ್ಯಾಪಾರಿಯಾಗುವ ಕನಸು ಕಂಡೆ.

ಹದಿನಾರನೇ ವಯಸ್ಸಿಗೇ ನಾನು ನಿಜಕ್ಕೂ ರಾಜಕುಮಾರ ಎಂದೇ ಕರೆಸಿಕೊಳ್ಳುತ್ತಿದ್ದೆ. ಆ ಬಿರುದು ಕೊಟ್ಟವರು ಕಳ್ಳರು. ಮುತ್ತುಕಳ್ಳರ ರಾಜಕುಮಾರ ಎಂದು ಅವರು ನನಗೆ ಬಿರುದು ಕೊಟ್ಟರು. ನಾನು ಒಂದು ಮೆಟ್ಟಿಲು ಮೇಲಕ್ಕೇರಿದ್ದೆ. ನಾನೂ ಬಂಡವಾಳಶಾಹಿಯಾಗಿದ್ದೆ. ಸಂಪಾದನೆಯಲ್ಲಿ ಮೂರನೆ ಎರಡನ್ನು ನಾನಿಟ್ಟುಕೊಂಡು ಮೂರನೇ ಒಂದರಷ್ಟನ್ನು ನನ್ನ ಜೊತೆಗಿದ್ದ ಹುಡುಗರಿಗೆ ಹಂಚುತ್ತಿದ್ದೆ. ಅವರು ನನ್ನಷ್ಟೇ ಕಷ್ಟಪಟ್ಟಿದ್ದರೂ ಅವರಿಗೆ ನನ್ನ ಅರ್ಧದಷ್ಟೂ ಸಿಗುತ್ತಿರಲಿಲ್ಲ.

ಇದಾದ ನಂತರ ಒಂದು ರಾತ್ರಿ ಚೀನೀ ಮೀನುಗಾರರ ಗುಡಿಸಲಿಗೆ ಹೋಗಿ ಅವರ ಬಲೆಗಳನ್ನೂ ಹಗ್ಗಗಳನ್ನೂ ಕದ್ದುಕೊಂಡು ಬಂದೆ. ಅವುಗಳು ತುಂಬ ದುಬಾರಿ. ಹೀಗೆ ಕದ್ದು ತಂದದ್ದನ್ನು ನಾನು ಕಳ್ಳತನ ಎಂದು ಕರೆಯಲಿಲ್ಲ. ಇದು ಕೂಡ ಬಂಡವಾಳಶಾಹಿಯ ಶೈಲಿ ಅಂದುಕೊಂಡೆ. ಬಂಡವಾಳಶಾಹಿ ಕೂಡ ತನ್ನ ಸುತ್ತಮುತ್ತಲಿನವರ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಾನೆ. ಒಂದು ರೀತಿಯಲ್ಲಿ ಅದೂ ದೋಚಿದಂತೆ ಅಲ್ಲವೇ? ಅವರು ವ್ಯವಸ್ಥೆಯನ್ನು ಬಳಸುತ್ತಿದ್ದರು, ನಾನು ಗನ್‌ ಬಳಸಿದೆ ಅಷ್ಟೇ.

***

ಹೀಗೆ ಬರೆದವನು ಜಾಕ್‌ ಲಂಡನ್‌. ಆತ ಸಮಾಜವಾದಿ, ಕೋಟ್ಯಧಿಪತಿ. ಬುದ್ಧಿವಂತ ಫಟಿಂಗ. ಅನುಪಮ ಜೀವನೋತ್ಸಾಹಿ. ಇವನಷ್ಟು ಕಾಂಟ್ರಡಿಕ್ಷನ್‌ಗಳನ್ನು ಇಟ್ಟುಕೊಂಡು ಬದುಕಿದವನು ಮತ್ತೊಬ್ಬ ಸಿಗಲಾರ. ನಲುವತ್ತನೆಯ ವಯಸ್ಸಿಗೆ ಅತಿಯಾಗಿ ಮಾರ್ಫಿನ್‌ ನುಂಗಿ ಪ್ರಾಣಬಿಟ್ಟ ಜಾಕ್‌ ಲಂಡನ್‌ನದ್ದು ವಿರೋಧಾಭಾಸಗಳ ಸರಮಾಲೆ. ಅವನು ಜಗತ್ತಿನ ಅತ್ಯಂತ ದೊಡ್ಡ ಮೊತ್ತದ ಸಂಭಾವನೆ ಪಡೆದ ಬರಹಗಾರ. ಅಷ್ಟೇ ಜನಪ್ರಿಯ ಕೂಡ. ಆತನ ಬರಹ, ಅದಕ್ಕೆ ಪ್ರೇರಣೆಯಾದ ಬದುಕು ಎರಡೂ ಅವನನ್ನು ಅಂತಾರಾಷ್ಟ್ರೀಯ ದಂತಕತೆಯನ್ನಾಗಿಸಿತು.

ಈ ವಿವಾದಾತ್ಮಕ ಜಾಣ ಸ್ವಲ್ಪ ಬುದ್ಧಿಯಿದ್ದರೆ ಸಾಕು, ಎಂಥವರನ್ನೂ ಮೋಸ ಮಾಡಬಹುದು ಎಂದೂ ಎಲ್ಲಾ ಸಿದ್ಧಾಂತಗಳನ್ನು ನಮಗೆ ಬೇಕಾದಂತೆ ತಿರುಚಿ ಬಳಸಿಕೊಳ್ಳಬಹುದು ಎಂದೂ ತೋರಿಸಿಕೊಟ್ಟವನು.

***

ಜಾಕ್‌ ಲಂಡನ್‌ ಬರೆಯುತ್ತಾನೆ;

ಎಲ್ಲಾ ಕಡೆಯೂ ಒಂದೇ. ಅಪರಾಧ, ವಂಚನೆ. ಬದುಕಿರುವವರೆಲ್ಲ ಪರಿಶುದ್ಧರೂ ಅಲ್ಲ, ಸಜ್ಜನರೂ ಅಲ್ಲ. ಪರಿಶುದ್ಧರೂ ಸಜ್ಜನರೂ ಆಗಿರುವವರು ಯಾರೂ ಬದುಕಿಲ್ಲ. ಈ ಮಧ್ಯೆ ಒಂದು ಹತಾಶ ಗುಂಪಿದೆ. ಅವರು ಸಜ್ಜನರೂ ಅಲ್ಲ, ಬದುಕಿಯೂ ಇಲ್ಲ ; ಕೇವಲ ಪರಿಶುದ್ದರು. ಯಾಕೆಂದರೆ ಅವರು ಉದ್ದೇಶಪೂರ್ವಕವಾಗಿಯೋ ಪ್ರತ್ಯಕ್ಷವಾಗಿಯೋ ಪಾಪ ಮಾಡುವುದಿಲ್ಲ. ಚಾಲ್ತಿಯಲ್ಲಿರುವ ಅನೈತಿಕತೆಯ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಗುಪ್ತವಾಗಿ ಪಾಪಗಳನ್ನು ಸಂಚಯಿಸಿಕೊಳ್ಳುತ್ತಿದ್ದಾರೆ. ಅವರು ನಿಜಕ್ಕೂ ಘನತೆಯುಳ್ಳವರೇ ಆಗಿದ್ದರೆ ಬದುಕಿರುತ್ತಿದ್ದರು. ವಂಚನೆಯ ಲಾಭದಲ್ಲಿ ತಮಗೂ ಒಂದು ಪಾಲು ಸಿಗಲಿ ಎನ್ನುತ್ತಿರಲಿಲ್ಲ.

ಬೌದ್ಧಿಕವಾಗಿ ನನಗೆ ಬೋರು ಹೊಡೆಯುವುದಕ್ಕೆ ಶುರುವಾಗಿದೆ. ನೈತಿಕವಾಗಿ, ಆಧ್ಯಾತ್ಮಿಕವಾಗಿ ನಾನು ಘಾಸಿಗೊಂಡಿದ್ದೇನೆ. ನನ್ನ ಬೌದ್ಧಿಕತೆ, ಆದರ್ಶ, ನಿರಿಗೆಗಟ್ಟದ ಉಪದೇಶಕರು, ಒಡೆದು ಹೋದ ಉಪನ್ಯಾಸಕರು, ಶುದ್ಧಮನಸ್ಸಿನ, ತಾನೆಲ್ಲಿದ್ದೇನೆ ಅನ್ನುವುದು ಸ್ಪಷ್ಟವಾಗಿ ಗೊತ್ತಿರುವ ಶ್ರಮಿಕರು ನೆನಪಾಗುತ್ತಿದ್ದಾರೆ. ಸೂರ್ಯತಾರೆಯರ ಬೆಳಕಲ್ಲಿ ಮಿಂದ ಸೋಜಿಗದ ಜಗ ಕಣ್ಮುಂದೆ ತೆರೆದುಕೊಳ್ಳುತ್ತಿದೆ.

ನಾನು ಮತ್ತೆ ನನ್ನ ಶ್ರಮಿಕ ವರ್ಗದತ್ತ ಮರಳುತ್ತಿದ್ದೇನೆ. ಮೇಲೇರುವ ಆಸೆ ನನಗಿಲ್ಲ. ಏರುವ ಉದ್ದೇಶವೂ ನನಗಿಲ್ಲ. ಉಪ್ಪರಿಗೆಯಲ್ಲಿರುವ ಮಂದಿ ನನಗೆ ಯಾವ ಆಶ್ಚರ್ಯವನ್ನೂ ಸಂತೋಷವನ್ನೂ ಕೊಡುತ್ತಿಲ್ಲ. ನಾನು ಇಲ್ಲಿಯೇ ಸುಖಿ. ಈ ಶ್ರಮವೇ ನನಗೆ ಸಾಕು.

ಇಂದಲ್ಲ ನಾಳೆ ಮತ್ತೊಂದಷ್ಟು ಮಂದಿ ನಮ್ಮೊಟ್ಟಿಗೆ ಬರುತ್ತಾರೆ. ನಾವು ಆಗ ಈ ಉಪ್ಪರಿಗೆಯನ್ನು ಅದರ ಕೊಳೆತ ಬದುಕಿನ ಜೊತೆ ಪೊಳ್ಳು ಆದರ್ಶದ ಜೊತೆ ಬುಡಮೇಲೆ ಮಾಡುತ್ತೇವೆ. ಅವರ ಸ್ವಾರ್ಥ ಮತ್ತು ಮೆಟೀರಿಯಲಿಸಮ್ಮು ಜೊತೆಗೇ ಮಣ್ಣಾಗುತ್ತದೆ. ನಾವು ಈ ಮಂದಿರವನ್ನು ಶುದ್ಧಗೊಳಿಸುತ್ತೇವೆ. ಆಗ ಅಲ್ಲಿಯ ಪ್ರತಿಯಾಂದು ಕೋಣೆಯಲ್ಲೂ ಹೊಸ ಬೆಳಕು, ಜೀವಂತಿಕೆ, ಘನತೆ ಮತ್ತು ಹೊಸ ಉಸಿರು.

ಇದು ನನ್ನ ಕನಸು. ಹೊಟ್ಟೆಪಾಡನ್ನು ಮೀರಿದ ಕನಸುಗಳು ಮನುಷ್ಯನ ಕಣ್ಣುತುಂಬಲಿ ಎನ್ನುವುದು ನನ್ನಾಸೆ. ಆದರೆ ಮೊದಲು ಹೊಟ್ಟೆ ತುಂಬಬೇಕು.

ಯಾರೋ ಹೇಳಿದ್ದು ನೆನಪಾಗುತ್ತಿದೆ; ಕಾಲದ ಪಾವಟಿಗೆಯಿಂದ ಬರಿಗಾಲ ಶ್ರಮಿಕರು ಮೇಲೇರುವ, ಪಾಲಿಷ್‌ ಹಾಕಿದ ಬೂಟುಗಳು ಕೆಳಗಿಳಿಯುವ ಸದ್ದು ಅನುರಣಿಸುತ್ತಲೇ ಇರುತ್ತದೆ, ಸದಾ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more