• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಮಾಲಿಕೆ-4

By Staff
|
 • ಜಾನಕಿ
 • ಎಲ್ಲಾ ಪ್ರಶಸ್ತಿಗಳೂ ಅರ್ಹರಿಗೇ ಸಿಕ್ಕಿರುವುದಿಲ್ಲ ಮತ್ತು ಪ್ರಶಸ್ತಿ ಸಿಗದವರು ಅರ್ಹರಲ್ಲ ಎಂದೇನೂ ಅಲ್ಲ . ಈ ಮಾತಿಗೆ ಸಾಕ್ಷಿ ನೊಬೆಲ್‌ ಪ್ರಶಸ್ತಿ ಮತ್ತು ನಮ್ಮ ಜ್ಞಾನಪೀಠ. ಸತ್ತವರಿಗೆ ಪ್ರಶಸ್ತಿ ಕೊಡಬಾರದು ಎಂಬ ಕಾರಣಕ್ಕೆ ಷೇಕ್ಸ್‌ಪಿಯರ್‌ಗೆ ನೊಬೆಲ್‌ ಬರಲಿಲ್ಲ . ಅದೇ ಕಾರಣಕ್ಕೆ ಅಡಿಗರಿಗೆ ಜ್ಞಾನಪೀಠ ಬರಲಿಲ್ಲ . ಅರ್ಹರಿಗೆ ಬಾರದೇ ಇದ್ದಾಗ ಆಗುವ ದುಃಖದಷ್ಟೇ, ಅನರ್ಹರಿಗೆ ಪ್ರಶಸ್ತಿ ಬಂದಾಗ ಆಗುವ ನೋವೂ ದೊಡ್ಡದು. ಅಂಥದ್ದೊಂದು ಸಂಕಟವನ್ನು 1904ರ ಸಾಹಿತ್ಯ ಕ್ಷೇತ್ರ ಅನುಭವಿಸಿತು.

  ಫ್ರಾನ್ಸ್‌ನ ಫ್ರೆಡೆರಿಕ್‌ ಮಿಸ್ಟ್ರಲ್‌ ಮತ್ತು ಸ್ಪೇನ್‌ನ ಜೋಸ್‌ ಇಚೆಗಾರೆ 1904ರಲ್ಲಿ ನೊಬೆಲ್‌ ಪ್ರಶಸ್ತಿ ಹಂಚಿಕೊಂಡರು. ಇವರಿಬ್ಬರ ಸಾಹಿತ್ಯಿಕ ಸಾಧನೆ ಇವತ್ತು ಅಷ್ಟಾಗಿ ಪರಿಚಿತವಲ್ಲ. ಇವರಿಬ್ಬರೂ ಶ್ರೀಮಂತ ಸಾಹಿತಿಗಳಾಗಿದ್ದರು ಅನ್ನುವುದನ್ನು ಗಮನಿಸಿದರೆ ನೊಬೆಲ್‌ ಪ್ರಶಸ್ತಿ ಸಂದದ್ದರ ಕುರಿತು ಅನುಮಾನಿಸದಿರಲು ಸಾಧ್ಯವೇ ಇಲ್ಲ ಎಂದು ಆ ಕಾಲದ ವಿಮರ್ಶಕರೇ ಅಪಸ್ವರ ಎಬ್ಬಿಸಿದ್ದಾರೆ. ಈ ಫ್ರೆಡರಿಕ್‌ ಮಿಸ್ಟ್ರಲ್‌ ಜೀವನವನ್ನೇ ನೋಡಿ. ಈತ ಭೂಮಾಲೀಕನೊಬ್ಬನ ಮಗ. ಆರಂಭದ ದಿನಗಳನ್ನು ಆತ ತನ್ನ ತಂದೆಯ ಹೊಲದಲ್ಲಿ ಐಷಾರಾಮದಿಂದ ಕಳೆದ. ಕಾನೂನು ಪದವೀಧರನಾದ ನಂತರ ಈತ ಕವಿತೆ ಬರೆಯೋಕೆ ಶುರು ಮಾಡಿದ. ಜೋಸೆಫ್‌ ರುಮಾನಿಲೆಯೆಂಬ ಗುರುವಿನಿಂದ ತಾನು ಪ್ರೇರಣೆ ಪಡೆದೆ ಎಂದು ಹೇಳಿಕೊಂಡಿರುವ ಮಿಸ್ಟ್ರಲ್‌ ಬರೆದದ್ದೆಲ್ಲ ಗುರುವಿನ ಶೈಲಿಯಲ್ಲೇ. ಕಾವ್ಯ ಪರಿಶುದ್ಧವಾಗಿರಬೇಕು ಎನ್ನುವ ಬೊಗಳೆ ಮತ್ತು ಕಾವ್ಯಸ್ತರಗಳನ್ನು ಜನಸಾಮಾನ್ಯರಿಂದ ಎತ್ತರಕ್ಕೇರಿಸಬೇಕು ಎಂಬ ಹಟದಿಂದೆಂಬಂತೆ ಬರೆಯತೊಡಗಿದ ಈತನನ್ನು ಕಾಡಿದ್ದು ಪದ ಸಂಪತ್ತು. ಈತ ಒಂದು ಕಾವ್ಯಕೋಶವನ್ನೂ ಸಂಪಾದಿಸಿದ್ದ.

  Frederic Mistralಮಹಾಕಾವ್ಯ ಮತ್ತು ಭಾವಗೀತೆ ಎರಡನ್ನೂ ಬರೆದವನು ಮಿಸ್ಟ್ರೆಲ್‌. ಆತನ ಕವಿತೆಗಳಲ್ಲಿ ಆತನ ಊರೇ ನಾಯಕ. ಮಿರಿಯೋ ಆತನ ಮೊದಲ ಯಶಸ್ವಿ ಪ್ರೇಮಕಾವ್ಯ. ಆತ ತನ್ನ ಆತ್ಮಚರಿತ್ರೆಯನ್ನೂ ಬರೆದಿದ್ದ. ಸ್ಪೇನಿನ ಜೋಸ್‌ ಕೂಡ ಓದಿದ್ದು ಅರ್ಥಶಾಸ್ತ್ರ . ಸ್ಪೇನ್‌ ಸರ್ಕಾರದ ಹುದ್ದೆಯಲ್ಲಿದ್ದ . ಅರ್ಥಸಚಿವನೂ ಆಗಿದ್ದ . ಬಾಲ್ಯದಲ್ಲಿ ತನ್ನನ್ನು ಸೆಳೆದಿದ್ದ ರಂಗಭೂಮಿಗೆ ತುಂಬ ತಡವಾಗಿ ಜೋಸ್‌ ಮರಳಿದಾಗ ಆತನಿಗೆ ಅದ್ಭುತ ಸ್ವಾಗತ ಸಿಕ್ಕಿತು. ಅದಕ್ಕೆ ಕಾರಣವಾದದ್ದು ಆತನ ಸ್ಥಾನಮಾನ. ಹೀಗಾಗಿ ಒಬ್ಬ ಸಾಹಿತಿ ಪಡಬಹುದಾದ ಪಾಡು, ಒಬ್ಬ ರಂಗಕರ್ಮಿಯ ಸಂಕಷ್ಟಗಳು ಈತನನ್ನು ಕಾಡಲೇ ಇಲ್ಲ . ತಾನು ತನ್ನ ವೃತ್ತಿ ಮತ್ತು ರಾಜಕೀಯ ಜೀವನದಲ್ಲಿ ಕಂಡುಂಡ ಘಟನೆಗಳನ್ನೇ ನಾಟಕವಾಗಿ ಬರೆದಿದ್ದೇನೆ ಎಂದು ಆತ ಹೇಳಿಕೊಂಡ. ರಾಜಕೀಯಕ್ಕೆ ಅತ್ಯಂತ ಸಮೀಪ ಇದ್ದುದರಿಂದ ರಾಷ್ಟ್ರೀಯ ನಾಟಕಕಾರ ಅನ್ನುವ ಅಗ್ಗಳಿಕೆಯೂ ಈತನಿಗೆ ಸುಲಭವಾಗಿ ಪ್ರಾಪ್ತವಾಯಿತು.

  ಕರ್ತವ್ಯ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಎದುರಾಗುವ ಅಡೆತಡೆಗಳೇ ಈತನ ನಾಟಕಗಳ ಮೂಲವಸ್ತು . ಈತ ಬರೆದಿರುವ ನಾಟಕಗಳ ಪೈಕಿ ತುಂಬ ಹೆಸರು ಮಾಡಿದವು, ಹುಚ್ಚನೋ ಸಂತನೋ, ಕರ್ತವ್ಯದ ಕರೆ, ಕತ್ತಿಯ ಹಿಡಿ ಮುಂತಾದವು. ಅವು ಇವತ್ತು ಅನುವಾದದಲ್ಲಿ ಲಭ್ಯವಿಲ್ಲ. ನಮ್ಮ ಪುರಾತನ ನಾಟಕಕಾರರ ಕೃತಿಗಳಂತೆ ಅವೂ ಲೈಬ್ರರಿಗಳಲ್ಲಿವೆ.

  Henryk Sienkiewicz1905ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆದದ್ದು ಪೋಲೆಂಡಿನ ಕಾದಂಬರಿಕಾರ ಹೆನ್ರಿ ಸೀನ್‌ ಕೀವಿಜ್‌. ಈತ ಶತದಡ್ಡನೂ ಅವಿವೇಕಿಯೂ ಆಗಿದ್ದ ಕಾದಂಬರಿಕಾರ ಎಂದು ಆತನ ಸಮಕಾಲೀನರೇ ಗೇಲಿ ಮಾಡಿದ್ದಾರೆ. ನೊಬೆಲ್‌ ಪ್ರಶಸ್ತಿ ಸ್ವೀಕರಿಸಲು ಸ್ಟಾಕ್‌ಹೋಮ್‌ನ ಗ್ರಾಂಡ್‌ ಹೋಟೆಲ್ಲಿನ ನೊಬೆಲ್‌ ಬ್ಯಾಂಕ್ವೆಟಿನಲ್ಲಿ ಈತ ಮಾಡಿದ ಭಾಷಣ ಇಂತಿದೆ.

  ನೊಬೆಲ್‌ ಪಡೆಯುವುದಕ್ಕೆ ವಿವಿಧ ದೇಶಗಳನ್ನು ಆಯಾ ದೇಶಗಳ ಕವಿಗಳೂ ಲೇಖಕರೂ ಪ್ರತಿನಿಧಿಸುತ್ತಾರೆ. ನೊಬೆಲ್‌ ಪ್ರಶಸ್ತಿ ಕೇವಲ ಪ್ರಶಸ್ತಿ ಪಡೆದವನಿಗಷ್ಟೇ ಸಂದ ಮನ್ನಣೆ ಅಲ್ಲ . ಅಂಥ ಪುತ್ರರತ್ನವನ್ನು ಹೆತ್ತವರಿಗೂ ಆತ ಗೌರವ ತರುತ್ತಾನೆ. ಜಾಗತಿಕ ಸಾಧನೆಯಲ್ಲಿ ತಮಗೂ ಒಂದು ಸ್ಥಾನ ಸಿಕ್ಕಿದೆ ಎಂದು ಆ ದೇಶ ಭಾವಿಸುತ್ತದೆ. ಪೋಲೆಂಡ್‌ ಸತ್ತುಹೋಗಿದೆ ಎಂದು ಭಾವಿಸುವವರಿಗೆ ಇದು ಉತ್ತರ.............

  ಹೆನ್ರಿ ಹುಂಬ. ಆ ಹುಂಬತನದಲ್ಲೇ ಆತ ಎಲ್ಲರನ್ನೂ ಗೆಲ್ಲುತ್ತಿದ್ದ . ಆತನ ಬದುಕಿನ ಘಟನೆಗಳಲ್ಲಿ ಆತನಿಗೇ ಗೊತ್ತಿಲ್ಲದಂತೆ ಹಲವು ಸ್ವಾರಸ್ಯಗಳು ಸೇರಿಕೊಂಡಿದ್ದವು. ಆತನ ಜೀವನದಲ್ಲಿ ಐವರು ಮಹಿಳೆಯರು ಬಂದುಹೋಗಿದ್ದಾರೆ. ಆವರ ಹೆಸರೂ ಮರಿಯಾ ಎಂದು ಶುರುವಾಗುತ್ತದೆ. ಈ ಐವರು ಮರಿಯಾರಲ್ಲಿ ಮೊದಲನೆಯಾಕೆಯನ್ನು ಆತನೇ ಪ್ರೀತಿಸಿದ. ಎರಡನೆಯಾಕೆ ತಾನಾಗಿಯೇ ಅವನನ್ನು ಪ್ರೀತಿಸಿದಳು. ಮತ್ತೊಬ್ಬಳು ಆತ ಲೈಂಗಿಕವಾಗಿ ತುಂಬ ದುರ್ಬಲ ಎಂದು ಹೇಳಿ ಹೊರಟುಹೋದಳು.

  ಸ್ಕೂಲಿನಲ್ಲಿದ್ದಾಗ ಆತ ಓದಿದ್ದು ಪಠ್ಯವನ್ನಲ್ಲ , ಸಾಹಿತ್ಯ ಕೃತಿಗಳನ್ನು. ಹೀಗಾಗಿ ಆತ ಅತ್ಯಂತ ಕಡಿಮೆ ಅಂಕ ಪಡೆದು ತೇರ್ಗಡೆಯಾದವನು. ಒಂದೊಂದು ತರಗತಿಯಲ್ಲಿ ನಾಲ್ಕು ವರ್ಷ ಕಳೆದದ್ದೂ ಇದೆ. ಆತ ಮೊದಲ ಹಂತದ ಶಿಕ್ಷಣ ಮುಗಿಸಿದ್ದು ಇಪ್ಪತ್ತನೆಯ ವಯಸ್ಸಿನಲ್ಲಿ . ಒಂದೇ ಜಾಗದಲ್ಲಿ ಆರು ವಾರಗಳ ಕಾಲ ಸತತವಾಗಿ ನೆಲೆಯೂರದ ಸಾಹಿತಿ ಈತ. ಸದಾ ಮನಸ್ಸು ಬಂದ ಕಡೆ ಎದ್ದೋಡುತ್ತಿದ್ದ ಹೆನ್ರಿಗೆ ಮದುವೆಯಾಗುವ ಸಂದರ್ಭದಲ್ಲಿ ಈ ಸಂಚಾರದಿಂದಾಗಿ ತೊಂದರೆಯಾಯಿತು. ಮದುವೆಗೆ ಬೇಕಾದ ಕಾನೂನಿನ ಅಗತ್ಯಗಳಲ್ಲಿ ಒಂದೇ ಕಡೆ ಆರು ವಾರಗಳಿಗಿಂತ ಜಾಸ್ತಿ ವಾಸಿಸಿರಬೇಕು ಎನ್ನುವ ನಿಯಮವೂ ಇತ್ತು . ಆದರೆ ಅದನ್ನು ಹೆನ್ರಿಗೆ ಪೂರೈಸುವುದು ಸಾಧ್ಯವಾಗಲೇ ಇಲ್ಲ .

  Jose Echegarayಆತನ ಖಡ್ಗ ಮತ್ತು ಬೆಂಕಿ- ಕಾದಂಬರಿ ಪ್ರಕಟವಾದಾಗ ಜನ ಅದೊಂದು ಕಲ್ಪಿತ ಕತೆ ಎಂದು ನಂಬಲಿಲ್ಲ . ಕಾದಂಬರಿಯಲ್ಲಿ ಬರುವ ಜಾಗಗಳಲ್ಲಿ ಆ ಪಾತ್ರಗಳಿಗಾಗಿ ಹುಡುಕಿಕೊಂಡು ಹೊರಟವರಿದ್ದರು. ಹೆನ್ರಿಯನ್ನು ಹುಡುಕಿಕೊಂಡು ಬಂದು ಆ ಪಾತ್ರಗಳನ್ನು ಹುಡುಕಿ ತೋರಿಸು ಎಂದು ದುಂಬಾಲು ಬಿದ್ದವರೂ ಇದ್ದರು.

  ರಷ್ಯದ ಅಧೀನದಲ್ಲಿದ್ದ ಪೋಲೆಂಡಿನಲ್ಲಿ ಹುಟ್ಟಿದ ಹೆನ್ರಿ, ಬಾಲ್ಯದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾನೆ. ಆರ್ಥಿಕ ಸಂಕಷ್ಟಗಳಿಂದ ಅವನ ತಂದೆ ಹಳ್ಳಿಯ ಮನೆಯನ್ನು ಮಾರಿ ನಗರಕ್ಕೆ ವಲಸೆ ಹೋದರು. ಕಾನೂನು, ವೈದ್ಯಕೀಯ, ಚರಿತ್ರೆ ಮತ್ತು ಸಾಹಿತ್ಯವನ್ನು ನಂತರದ ಹಂತದಲ್ಲಿ ಓದಿದ ಹೆನ್ರಿ ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ . ಕೊನೆಕೊನೆಗೆ ವಿದ್ಯಾಭ್ಯಾಸ ಮುಂದುವರಿಸುವ ಆರ್ಥಿಕ ಶಕ್ತಿಯಿಲ್ಲದೆ ಓದು ಅರ್ಧಕ್ಕೇ ನಿಲ್ಲಿಸಿದ.

  ಐತಿಹಾಸಿಕ ಕಾದಂಬರಿಗಳಿಂದ ಪ್ರೇರಿತನಾಗಿ ಹೆನ್ರಿ ತುಂಬ ರೋಚಕ ಕಾದಂಬರಿಗಳನ್ನು ಬರೆದಿದ್ದಾನೆ. ಅವು ಜನಪ್ರಿಯವೂ ಆಗಿವೆ.

  ದಡ್ಡತನ ಮತ್ತು ಪ್ರತಿಭೆ ಮೇಳೈಸಿದಂತಿದ್ದ ಹೆನ್ರಿಯ ಕುರಿತು ಆತನ ಸಮಕಾಲೀನ ವಿಮರ್ಶಕರು ಹೇಳಿದ ಮಾತು ಕನ್ನಡದ ಅನೇಕ ಸಾಹಿತಿಗಳಿಗೂ ಹೊಂದುತ್ತದೆ:

  ಅವನು ತುಂಬ ಚೆನ್ನಾಗಿ ಬರೆಯುತ್ತಿದ್ದ . ಅವನ ನಿರೂಪಣಾ ಶೈಲಿ ಅದ್ಭುತ. ಆದರೆ ಅಷ್ಟೇ ಅವಿವೇಕಿಯೂ ಆಗಿದ್ದ . ಹೀಗಾಗಿ ಅವನನ್ನು ಶ್ರೇಷ್ಠ ಎನ್ನುವುದು ಕಷ್ಟ .

  (ಸ್ನೇಹಸೇತು : ಹಾಯ್‌ ಬೆಂಗಳೂರ್‌)

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more