• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಜು ಕವಿದ ಸಂಜೆಯಲ್ಲಿ ಕಂಡದ್ದು ಕಂಡಷ್ಟು

By Staff
|
  • ಜಾನಕಿ
ಲಂಕೇಶರ ಕೊನೆಯ ಕತೆಗಳ ಸಂಕಲನ ಕಣ್ಣಮುಂದಿದೆ. ಸಂಕಲನದ ಹೆಸರೇ ಸಾಂಕೇತಿಕವಾಗಿದೆ; ಮಂಜು ಕವಿದ ಸಂಜೆ ಮತ್ತು ಇತರ ಕತೆಗಳು. ಎಂಬತ್ತಮೂರು ಪುಟಗಳ ಈ ಸಂಕಲನದಲ್ಲಿ ಹನ್ನೆರಡು ಕತೆಗಳಿವೆ ಅನ್ನುವುದೇ ಅಚ್ಚರಿ ಹುಟ್ಟಿಸುತ್ತದೆ. ಯಾಕೆಂದರೆ ಎರಡು ಮೂರು ಪುಟಗಳ ಕತೆಯನ್ನೂ ಲಂಕೇಶರು ಬರೆದಿದ್ದಾರೆ. ಕೆಲವೊಮ್ಮೆ ಯಾವುದೋ ಕತೆಯನ್ನು ಓದಿ ಅದರ ಕುರಿತು ಬರೆಯುತ್ತಾ ಹೋಗಿ, ಅದೂ ಕತೆಯಾಗಿ ರೂಪಾಂತರ ಹೊಂದಿದ್ದನ್ನೂ ನೋಡಬಹುದು. ಅವರು ನೋಡಿದ ಸಿನಿಮಾ, ಓದಿದ ಸಣ್ಣಕತೆಯ ಕುರಿತ ಟಿಪ್ಪಣಿ ಕೂಡ ಕತೆಯಾಗಿ ಇಲ್ಲಿ ಸೇರಿಕೊಂಡಿದೆ. ಲಂಕೇಶ್‌ ಬದುಕಿದ್ದರೆ ಅವನ್ನೆಲ್ಲ ಅವರು ಕತೆಯೆಂದು ಪರಿಗಣಿಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ.

ಒಬ್ಬ ಕತೆಗಾರನ ಕೊನೆಯ ದಿನಗಳು ಹೇಗಿರುತ್ತವೆ ಅನ್ನುವುದು ನಿಗೂಢ. ಮಾಸ್ತಿ ತಮ್ಮ ಕೊನೆಯ ದಿನಗಳನ್ನು ಹೇಗೆ ಕಳೆದರು ಅಂತ ಯೋಚಿಸಿದಾಗ ಆಶ್ಚರ್ಯವಾಗುತ್ತದೆ. ಕತೆಗಾರ ಎಲ್ಲರಂಥಲ್ಲ. ಅದರಲ್ಲೂ ತೀವ್ರವಾಗಿ ಬರೆಯುವ ಲೇಖಕ ಎಲ್ಲವನ್ನೂ ಬೇರೆಯೇ ರೂಪದಲ್ಲಿ ಗ್ರಹಿಸುತ್ತಿರುತ್ತಾನೆ. ತನ್ನ ಸುತ್ತಲಿನ ಮಂದಿಯ ಪ್ರತಿಕ್ರಿಯೆ ಮತ್ತು ಕ್ರಿಯೆ ಅವನ ಮನಸ್ಸಿನೊಳಗೆ ಕತೆಯಾಗಿ ಇಳಿಯುತ್ತಾ ಹೋಗುತ್ತದೆ. ಇನ್ನೊಬ್ಬರ ಬದುಕನ್ನೂ ಕತೆಗಾರ ಒಂದು ಕ್ಷಣವಾದರೂ ತನ್ನದೆಂಬಂತೆ ಬದುಕುತ್ತಾನೆ. ಇನ್ನೊಬ್ಬರ ಸುಖವನ್ನೂ ದುಃಖವನ್ನೂ ತನ್ನೊಳಗೆ ಆವಾಹಿಸಿಕೊಳ್ಳುತ್ತಾನೆ.

Book Talk : P. Lankeshs Manju Kavida Sanje...ಅದು ಅಪಾಯಕಾರಿ. ನಾವು ಇನ್ನೊಬ್ಬರನ್ನು ಒಳಗೆ ಬಿಟ್ಟುಕೊಂಡಾಗಲೆಲ್ಲ ಸಮಸ್ಯೆ ಶುರುವಾಗುತ್ತದೆ. ಗೆಳೆಯನೊಬ್ಬ ಆಸ್ಪತ್ರೆಯಲ್ಲಿದ್ದಾಗ ಆತನಿಗೆ ಮಾನವೀಯ ಕಾರಣಗಳಿಗೆ ಸಹಾಯ ಮಾಡುವುದನ್ನೂ ಅವನನ್ನು ಒಬ್ಬ ಲೇಖಕನಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಮಾನವೀಯತೆಯಲ್ಲಿ ಅನುಕಂಪ ಇರುತ್ತದೆ; ಲೇಖಕರಲ್ಲಿ ಸಹಾನುಭೂತಿ ಇರುತ್ತದೆ. ಅನುಕಂಪದಿಂದ ಅಂಥ ಅಪಾಯವೇನಿಲ್ಲ, ಸಹಾನುಭೂತಿ ಮಾತ್ರ ಯಾವತ್ತೂ ಅಪಾಯಕಾರಿ.

ಲೇಖಕ ಊಹಿಸುತ್ತ ಹೋಗುವ ವ್ಯಕ್ತಿ. ತನ್ನ ಮುಂದೆ ಮಲಗಿದ ರೋಗಿಷ್ಠನ ಮನಸ್ಸು ಕೂಡ ಒಬ್ಬ ಬರಹಗಾರನಿಗೆ ತಿಳಿಯುತ್ತದೆ. ಅವನ ಸಾವಿನ ಸೂಚನೆಯೂ ಸಿಗುತ್ತದೆ. ಅದನ್ನೆಲ್ಲ ಹೇಳದೇ ಉಳಿಯಬೇಕಾದ ಅನಿವಾರ್ಯತೆಯೂ ಅವನದಾಗಿರುತ್ತದೆ.

ಉದಾಹರಣೆಗೆ ಒಬ್ಬ ದಿಟ್ಟ ಮನುಷ್ಯ ಅನ್ನುವ ಕತೆಯನ್ನೇ ತೆಗೆದುಕೊಳ್ಳಿ. ಅದು ಒಂದು ಕವಿತೆಯ ಹಾಗೆ ಪ್ರಿಸೈಸ್‌ ಆಗಿದೆ. ಹತ್ತು ವರುಷದಿಂದ ಕಾಯಿಲೆ ಬಿದ್ದ ಮನುಷ್ಯನೊಬ್ಬನ ದೃಷ್ಟಿಕೋನದಲ್ಲಿ ಶುರುವಾಗುವ ಈ ಕತೆಯ ಆರಂಭದಲ್ಲೇ ಮನುಷ್ಯನನ್ನು ಕಂಗಾಲಾಗಿಸುವ ವಿವರಗಳಿವೆ;

‘ಕಳೆದ ಹತ್ತು ವರುಷದಿಂದ ನನಗೆ ಕಾಯಿಲೆ. ಎಲ್ಲಿಗೂ ಹೋಗುವುದು ಸಾಧ್ಯವಿಲ್ಲದಿದ್ದರೂ ನೋಡಲು ಚೆಂದದ ಬಟ್ಟೆ ಹಾಕಿಕೊಳ್ಳಬೇಕು. ಮಲಗುವ ಹಾಸಿಗೆ, ಬೆಡ್‌ಶೀಟ್‌ ಸ್ವಚ್ಛವಾಗಿರಬೇಕು, ಇರುವ ಕೂದಲನ್ನು ಚೆನ್ನಾಗಿ ಬಾಚಿಕೊಂಡು ನುಣ್ಣಗೆ ಶೇವ್‌ ಮಾಡಿದ ಮುಖಕ್ಕೆ ವಿಶೇಷ ಆಪ್ಟರ್‌ಶೇವ್‌ ಚಿಮುಕಿಸಿಕೊಳ್ಳಬೇಕು, ನಡೆಯುವುದು ಸ್ವಲ್ಪ ಕಷ್ಟವಾದರೂ ನಡೆಯುವ ಶೈಲಿ ಆಕರ್ಷಕವಾಗಿದ್ದು ಕಾಯಿಲೆ ಯಾರಿಗೂ ಗೊತ್ತಾಗಕೂಡದು..’ ಎಂಬಿತ್ಯಾದಿ ಆಸೆಗಳನ್ನು ಇಟ್ಟುಕೊಂಡವನು. ಆತ ಬೆಡ್‌ಶೀಟ್‌ ಬೇಕಾಗಿ ಜಗನ್ನಾಥ ಎಂಬವನ ಅಂಗಡಿಗೆ ಫೋನ್‌ ಮಾಡುತ್ತಾನೆ.

ಅಲ್ಲಿಂದ ಬೆಡ್‌ಶೀಟು ಹೊತ್ತು ತರುವ ಸಣಕಲನೊಬ್ಬ ಬೆಡ್‌ಶೀಟುಗಳ ಕಟ್ಟು ಬಿಚ್ಚುತ್ತಾ ಮಾತಿಗಿಳಿಯುತ್ತಾನೆ. ‘ನೀವು ರಾಗಿಮುದ್ದೆ ತಿನ್ನಬೇಕು. ಒಂದು ಕಾಯಿಲೇನೂ ಹತ್ತಿರ ಬರೋಲ್ಲ’ ಅನ್ನುತ್ತಾನೆ.

ಅಲ್ಲಿಂದ ಕತೆಯ ನಿರೂಪಕ ಆತನನ್ನು ಗೇಲಿ ಮಾಡುತ್ತಾ ಹೋಗುತ್ತಾನೆ. ಒಂಥರ ವ್ಯಂಗ್ಯದಲ್ಲೇ ಅವನನ್ನು ಗಮನಿಸುತ್ತಾನೆ. ಅವನ ಪ್ರತಿಯಾಂದು ಮಾತನ್ನೂ ಸಣ್ಣದೊಂದು ಅನುಮಾನದಿಂದ ಮತ್ತು ತುಂಟತನದಿಂದ ನೋಡುತ್ತಾನೆ. ಅದನ್ನೇ ತನ್ನ ದಿಟ್ಟತನ ಎಂದೂ ಭಾವಿಸುತ್ತಾನೆ;

‘ನಿಮಗೀಗ ಎಷ್ಟು ವರ್ಷ’ ಅಂದೆ. ಆತ ಕುಳ್ಳ, ಸಣಕಲ. ಎದೆಯುಬ್ಬಿಸಿ ನಿಂತು ಸಣ್ಣದಾಗಿ ನಗುತ್ತಾ ಮಾತಾಡಿದ. ಆತ ರಾಗಿ ಮುದ್ದೆಯ ಪವಾಡದಿಂದ ತನ್ನ ಬಗ್ಗೆ ತುಂಬ ಕಲ್ಪಿಸಿಕೊಂಡಂತಿತ್ತು. ಆದ್ದರಿಂದ ‘ಅರುವತ್ತೆ? ಅರುವತ್ತೆೈದು?’ ಅಂದೆ. ಅವನು ಕೈಯಲ್ಲಿಯ ಬಟ್ಟೆಗಳನ್ನು ಕೆಳಕ್ಕೆ ಬೀಳಿಸಿ ಗಹಗಹಿಸಿದ. ನನ್ನ ಪೆದ್ದುತನ, ಮುದ್ದೆ ತಿನ್ನದೇ ಇರುವಿಕೆ ಇತ್ಯಾದಿಗಳನ್ನು ಪತ್ತೆ ಹಚ್ಚಿದವನಂತೆ ‘ನನಗೀಗ ಎಪ್ಪತ್ತೆೈದು ವರ್ಷ’ ಅಂದ. ಆತ ಅದಕ್ಕಿಂತ ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ.

ಹೀಗೆ ಹೇಳುತ್ತಾ ಆತ ತನ್ನ ಬಗ್ಗೆ ದಿಟ್ಟತನದಿಂದ ಮಾತಾಡುತ್ತಾ ಹೋಗುವುದು ನಿರೂಪಕನನ್ನು ಅಚ್ಚರಿಗೊಳಿಸುತ್ತದೆ. ಮುದ್ದೆ ತಿಂದ್ರೆ ಕಾಯಿಲೆ ಬರೋಲ್ಲ ಅಂತ ಪದೇ ಪದೇ ಹೇಳುವ ಆ ಬೆಡ್‌ಶೀಟ್‌ ರಂಗಣ್ಣ ಅಂಥ ಸುಖಿಯೇನಲ್ಲ. ಆದರೆ ಅತ್ಯಂತ ದುಃಖದ ಸಂಗತಿಯನ್ನೂ ಆತ ತೀರಾ ಸಹಜವೆಂಬಂತೆ ಹೇಳಬಲ್ಲ ;

‘ನನ್ನ ಇಬ್ಬರು ಗಂಡುಮಕ್ಕಳು ಜಗಳ ಆಡ್ತಿದ್ರು. ನಾನು ಲಕ್ಷಾಂತರ ಕೂಡಿಟ್ಟಿರೋದಾಗಿ ತಿಳಿದು ಕಿತ್ತಾಡ್ತಿದ್ರು. ನಿತ್ಯ ಅದೇ ಕತೆ. ಇಬ್ರನ್ನೂ ಕರೆದು ‘ನನ್ನತ್ರ ಒಂದು ಪೈಸೆ ಇಲ್ಲ. ಅಪ್ಪನಿಂದ ನನಗೆ ಬಂದಿರೋ ಮನೆ ಮಾತ್ರ ಉಂಟು. ಅದನ್ನು ಹಂಚಿಕೊಡ್ತೇನೆ, ತಗೊಂಡು ತೆಪ್ಪಗೆ ಹೋಗಿ’ ಅಂತ ಹೇಳಿ ಇಬ್ಬರನ್ನೂ ಕೂರಿಸಿಕೊಂಡು ಉಗಿದು ಮನೇನ ಡಿವೈಡ್‌ ಮಾಡಿಕೊಟ್ಟು, ನಾನು ನನ್ನ ಮಗಳು ಬಾಡಿಗೆ ಮನೆಗೆ ಬಂದ್ವಿ. ಅಳಿಯ ಆ ವರ್ಷವೇ ನನ್ನ ಮಗಳನ್ನು ಒಬ್ಬಂಟಿ ಮಾಡಿ ದೇಶಾಂತರ ಹೋದ. ಹೋದರೆ ಹೋಗಲಿ ಅಂತ ಮಗಳಿಗೆ ಸಮಾಧಾನ ಹೇಳಿ...’

ಹೀಗೆ ಮಾತಾಡುವ ಆತನೂ ಕಾಯಿಲೆಯ ಮನುಷ್ಯನೇ. ‘ಕಾಯಿಲೆ ಅಂದರೆ ಆಗಾಗ ನೀನೂ ಮನುಷ್ಯ ಅಂತ ದೇವರು ಪಿಸುಗುಟ್ಟೋದು’ ಎಂದು ನಂಬಿದ್ದಾನೆ. ಆತನಿಗೂ ಪ್ರಾಸ್ಟೇಟ್‌ ಗ್ಲಾಂಡ್‌, ಹರ್ನಿಯಾ, ಎಕ್ಸಿಮಾ ಹೀಗೆ ಹಲವಾರು ಸರ್ಜರಿಗಳು ನಡೆದಿವೆ. ‘ನಿತ್ಯ ಮುದ್ದೆ ತಿಂದರೂ ಏಕೆ ಇದೆಲ್ಲ ಅಂತ ಕೇಳುವ ಕಲ್ಲೆದೆ ನನ್ನದಲ್ಲ’ ಅನ್ನುತ್ತಾನೆ ನಿರೂಪಕ.

ಅಲ್ಲಿಂದಾಚೆ ಮತ್ತೊಂದು ದುರಂತವನ್ನು ಆತ ವಿವರಿಸುತ್ತಾನೆ. ಅಲ್ಲೂ ಆತ ದಿಟ್ಟನಂತೆಯೇ ವರ್ತಿಸುತ್ತಾನೆ. ಆ ದಿಟ್ಟತನ ಬಂದದ್ದು ಅವನ ಜೀವನ ಶೈಲಿಯಿಂದಲೋ ಪ್ರಾಮಾಣಿಕತೆಯಿಂದಲೋ ಯೋಚನಾಲಹರಿಯಿಂದಲೋ ಎಂದು ಯೋಚಿಸುವಂತಾಗುತ್ತದೆ.

‘ಏನಿಲ್ಲ ಸಾರ್‌. ನನ್ನ ನಸೀಬಾನಾಕ್ಯಾಯಾ...’ ಎಂದು ಪಕ್ಕಕ್ಕೆ ಉಗಿದು ನಿಧಾನಕ್ಕೆ ಹೇಳಿದ ‘ನಾನು ಇನ್ನೊಬ್ಬರಿಗೆ ಒಂದ್‌ ಅನ್ಯಾಯ ಮಾಡ್ಲಿಲ್ಲ. ಯಾರ ಕಾಸಿಗೂ ಕೈಹಾಕಿಲ್ಲ. ಪರರ ಹೆಂಗ್ಸರ ಕಡೆಗೆ ಕಣ್ಣೆತ್ತಿ ನೋಡಲಿಲ್ಲ. ಮೊನ್ನೆ ಮಧ್ಯಾಹ್ನ ಯಾಕೋ ಸುಸ್ತು ಅಂತ ಮನೆಗೆ ಹೋದರೆ ನನ್ನ ಮಗಳು ರೇವತಿ ಕೊಂಗರ ಮಣಿ ಜೊತೆ ನಗಾಡ್ತಿದ್ಲು. ಬಾಗಿಲು ತಟ್ಟಿದೆ. ತೆರೀಲಿಲ್ಲ. ಅರ್ಧಗಂಟೆ ಕಾದೆ. ನನ್ನ ಮನೆಯಿಂದ ನಾನು ಯಾಕೆ ಓಡಿಹೋಗಲಿ. ನಾನೇನು ತಪ್ಪು ಮಾಡಿದ್ದೇನೆ ಅಂತ. ರೇವತಿ ಬಾಗಿಲು ತೆಗೆದಳು. ಮಣಿ ಓಡಿ ಹೋದ. ಇರುವ ಒಬ್ಬಳು ಮಗಳಿಗೆ ಹ್ಯಾಗೆ ಹಿಂಸೆ ಕೊಡ್ಲಿ ?’

ಹೀಗೆ ಹೇಳಿದ ಆತ ಗಂಟು ತಲೆಯ ಮೇಲಿಟ್ಟುಕೊಂಡು ಹೊರಡುತ್ತಾನೆ. ಅದನ್ನು ನಮ್ಮ ಹುಡುಗ ತರ್ತಾನೆ ಅಂತ ನಿರೂಪಕ ಹೇಳಿದರೂ ಆತ ಕೇಳುವುದಿಲ್ಲ.

***

ಇಲ್ಲಿ ದಿಟ್ಟತನ ಯಾರದು? ನಿರೂಪಕನಿಗೆ ಎಲ್ಲಾ ಗೊತ್ತಿದ್ದರೂ ಆತನಿಗೆ ಅಷ್ಟೊಂದು ದಿಟ್ಟವಾಗಿ ಯೋಚಿಸುವುದು ಸಾಧ್ಯವಾಗುತ್ತಿತ್ತೇ? ಅಥವಾ ಆತ ಹೇಳಿದ್ದು ಕೂಡ ನಿರೂಪಕನ ಕತೆಯೆ? ಅಂಥ ಕತೆಯನ್ನು ಕೇಳಿಸಿಕೊಂಡ ನಂತರವೂ ನಿರೂಪಕ ಹೇಳುತ್ತಾನೆ. ‘ರಂಗಣ್ಣ ಅಲ್ಲಿಂದ ಇಳಿದು ಮೆಲ್ಲಗೆ ನಡೆಯತೊಡಗಿದ. ನಾನು ಅಪಾಯಕಾರಿ ಸದ್ದು ಬಂದೀತೆಂದು ಮೆಲ್ಲಗೆ ಬಾಗಿಲು ಮುಚ್ಚಿಕೊಂಡೆ’.

ಆ ಅಪಾಯಕಾರಿ ಸದ್ದು ಯಾವುದು?

***

ನಮ್ಮ ದಿಟ್ಟತನ ಮತ್ತು ಆತಂಕಕ್ಕೆ ಅಂಥ ವ್ಯತ್ಯಾಸವೇನೂ ಇಲ್ಲ. ನಾವೆಲ್ಲ ಭಯದಿಂದಲೇ ಕಾಯುತ್ತಾ ಕೂರುತ್ತೇವೆ. ಭಯವನ್ನು ಗೆದ್ದ ಒಂದೊಂದು ಕ್ಷಣವೂ ದಿಟ್ಟರಾದೆವೆಂದು ಮೆರೆಯುತ್ತೇವೆ. ಆ ದಿಟ್ಟತನ ಕೂಡ ಭಯದಿಂದಲೇ ಹುಟ್ಟಿದ್ದು ಅನ್ನುವುದು ನಮಗೆ ಗೊತ್ತಿರುವುದಿಲ್ಲ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more