• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ...

By Staff
|
  • ಜಾನಕಿ

jaanaki@india.com

ತರುಣ ಓದುಗರ ಮತ್ತು ಹೊಸ ಬರೆಹಗಾರರ ಗೊಂದಲಗಳು ಹಲವಾರು. ಇದ್ದಕ್ಕಿದ್ದ ಹಾಗೆ ಸಾಹಿತ್ಯ ವಿಮರ್ಶೆಯ ಮಾನದಂಡದ ಕುರಿತು ಅನೇಕ ಪ್ರಶ್ನೆಗಳು ಅವರನ್ನು ಕಾಡುವುದುಂಟು. ಅವು ಹೊಸದಾಗಿ ಬರೆಯಹೊರಡುವ ಎಲ್ಲರನ್ನೂ ಒಂದಲ್ಲ ಒಂದು ವಯಸ್ಸಿನಲ್ಲಿ ಕಾಡಿದ ಪ್ರಶ್ನೆಗಳೂ ಹೌದು.

ಅವು ಇವು;

ಜನಪ್ರಿಯ ಸಾಹಿತ್ಯ ಮತ್ತು ಗಂಭೀರ ಸಾಹಿತ್ಯದ ನಡುವಿನ ವ್ಯತ್ಯಾಸಗಳೇನು? ಗಂಭೀರ ಸಾಹಿತ್ಯಕ್ಕೆ ಸಿಗುವ ಗೌರವ, ಜನಪ್ರಿಯ ಸಾಹಿತಿಗೆ ಯಾಕೆ ಸಿಗುವುದಿಲ್ಲ. ಲಕ್ಷಾಂತರ ಓದುಗರು ಮೆಚ್ಚಿಕೊಂಡ ಲೇಖಕ ಸಾಹಿತ್ಯ ಚರಿತ್ರೆಯಲ್ಲಿ ಯಾಕೆ ದಾಖಲಾಗುವುದಿಲ್ಲ. ಯಾವುದೋ ಯೂನಿವರ್ಸಿಟಿಯಲ್ಲಿ ಕುಳಿತು ದಶಕದ ಸಣ್ಣಕತೆಗಳನ್ನೋ, ದಶಕದ ಕಾದಂಬರಿಗಳನ್ನೋ ಪಟ್ಟಿಮಾಡುವವನ ಕಣ್ಣಿಗೆ ಹತ್ತಾರು ಸಣ್ಣಕತೆಗಳನ್ನು ಬರೆದ ಟಿ.ಕೆ. ರಾಮರಾವ್‌ ಯಾಕೆ ನೆನಪಾಗುವುದಿಲ್ಲ. ಬೊಳುವಾರು ಮಹಮ್ಮದ್‌ ಕುಂಙ್ಞಗೆ ಸಿಕ್ಕ ಮನ್ನಣೆ ನಾ.ಡಿಸೋಜಾರಿಗೆ ಯಾಕೆ ಸಿಗಲಿಲ್ಲ ?

ಇದರ ಜೊತೆಗೇ ಹುಟ್ಟುವ ಮತ್ತೊಂದಷ್ಟು ಪ್ರಶ್ನೆಗಳು ಹೀಗಿವೆ;

ನಾನೇನು ಓದಬೇಕು? ಯಾವ ಕೃತಿಯನ್ನು ಹೇಗೆ ಓದಬೇಕು? ಒಂದು ಕೃತಿ ಕೇವಲ ಖುಷಿಕೊಟ್ಟರೆ ಸಾಕೆ? ಸಾಹಿತ್ಯದಲ್ಲಿ ಅದಕ್ಕಿಂತ ಹೆಚ್ಚಿನದೇನನ್ನಾದರೂ ನಾವು ನಿರೀಕ್ಷಿಸಬೇಕೇ? ಯಾರು ಎಷ್ಟೇ ಬಡಕೊಂಡರೂ ಅಂತಿಮವಾಗಿ ಓದುಗ ಒಂದು ಕೃತಿಯನ್ನು ಕೈಗೆತ್ತಿಕೊಳ್ಳುವುದು ತನ್ನ ಸಂತೋಷಕ್ಕಾಗಿ ತಾನೆ ?

ಇವಕ್ಕೆ ಉತ್ತರಿಸುವುದು ಕಷ್ಟವೇನಲ್ಲ. ನಾವೆಲ್ಲರೂ ಓದುವುದು ಅಂತಿಮವಾಗಿ ಆತ್ಮಸಂತೋಷಕ್ಕೆ, ಹಗುರಾಗುವುದಕ್ಕೆ ಮತ್ತು ಬಿಡುಗಡೆ ಪಡೆಯುವುದಕ್ಕೆ. ಯಾವುದರಿಂದ ಬಿಡುಗಡೆ ಪಡೆಯಬೇಕು ಅನ್ನುವುದು ಗೊತ್ತಿಲ್ಲದವರು ಕೂಡ ಒಂದು ಒಳ್ಳೆಯ ಕೃತಿ ಓದಿದಾಗ ಮುಕ್ತಿಯ ಆನಂದ ಅನುಭವಿಸುತ್ತಾರೆ. ಅದೆಲ್ಲ ಮುಖ್ಯವಲ್ಲ.

Reading with a purpose !ಇದನ್ನು ಅರ್ಥಮಾಡಿಕೊಳ್ಳುವ ಮೊದಲು ನಾವು ನಮ್ಮ ಓದುವ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಪ್ರತಿಯಾಬ್ಬನಿಗೂ ಎರಡು ಥರದ ಓದು ಬೇಕಾಗುತ್ತದೆ. ಮೊದಲನೆಯದು ವೈಯಕ್ತಿಕ ಓದು, ಮತ್ತೊಂದು ಸಾಮಾಜಿಕ ಓದು. ವೈಯಕ್ತಿಕ ಓದಿನ ಉದ್ದೇಶ ಕೇವಲ ಖುಷಿ. ಸಾಮಾಜಿಕ ಓದಿನ ಉದ್ದೇಶ ನಮ್ಮ ಕಾಲದ ಸ್ಥಿತ್ಯಂತರಗಳನ್ನೂ ವ್ಯವಸ್ಥೆಯ ಸ್ವರೂಪವನ್ನೂ ತಿಳಿದುಕೊಳ್ಳುವುದು. ಹಾಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದು ಗಂಭೀರ ಕೃತಿಗಳಿಂದ. ತುಂಬ ತಮಾಷೆಯಾಗಿ ಓದಿಸಿಕೊಳ್ಳುವ ಕೃತಿಗಳ ಆಳದಲ್ಲೂ ಗಂಭೀರ ಚಿಂತನೆ ಇದ್ದಾಗ ಅದು ಏಕಕಾಲಕ್ಕೆ ಜನಪ್ರಿಯವೂ ಶ್ರೇಷ್ಠವೂ ಆಗುತ್ತದೆ. ಅದಕ್ಕೆ ಒಳ್ಳೆಯ ಉದಾಹರಣೆ ತೇಜಸ್ವಿ. ಕರ್ವಾಲೋ ಕಾದಂಬರಿಯನ್ನು ಒಂದೇ ಏಟಿಗೆ ಓದಿ ಮುಗಿಸಿದರೂ ಮನಸ್ಸಿನಲ್ಲಿ ಮತ್ತೂ ಲೆಕ್ಕಾಚಾರ ನಡೆಯುತ್ತಲೇ ಇರುತ್ತದಲ್ಲ , ಹಾಗೆ.

ಉದಾಹರಣೆಗೆ ಮಾಸ್ತಿಯವರ ಕತೆಗಳನ್ನೇ ತೆಗೆದುಕೊಳ್ಳಿ. ಅವರು ಬರೆದ ಸಣ್ಣಕತೆಗಳು, ಕಾದಂಬರಿಗಳು ಈಗಿನ ಓದುಗರಿಗೆ ಅಷ್ಟಾಗಿ ಇಷ್ಟವಾಗದೇ ಹೋಗಬಹುದು. ಮಾಯಣ್ಣನ ಕನ್ನಡಿ, ಶ್ರೀಕೃಷ್ಣನ ಅಂತಿಮ ಸಂದರ್ಶನ ಮುಂತಾದ ಕತೆಗಳು ಸಪ್ಪೆಯಾಗಿ ಕಾಣಿಸಬಹುದು. ಆದರೆ ಆ ಕಾಲದ ಸಣ್ಣಕತೆಗಳ ಮಾತು ಬಂದಾಗ ಈ ಕತೆಗಳಷ್ಟೇ ನೆನಪಾಗುತ್ತವೆ. ಹಾಗೇ ಪ್ರಬಂಧಗಳಿಗೆ ಮೂರ್ತಿರಾಯರು, ಕಾದಂಬರಿಗೆ ಕಾರಂತರು, ಕಾವ್ಯಕ್ಕೆ ಕುವೆಂಪು, ಅನುವಾದಕ್ಕೆ ಬಿಎಂಶ್ರೀ.. ಹೀಗೆ ಒಬ್ಬೊಬ್ಬರೇ ನೆನಪಾಗುತ್ತಾರೆ. ಸಿದ್ಧಲಿಂಗಯ್ಯ ಬರೆದಂಥ ಕವಿತೆಗಳನ್ನು ಕಾರಂತರು ಬರೆದಿದ್ದರೆ ಅಂಥ ಪರಿಣಾಮ ಆಗುತ್ತಿತ್ತು ಎಂದು ಹೇಳುವುದು ಕಷ್ಟ. ದೇವನೂರು ಮಹಾದೇವರ ಕಾದಂಬರಿಗಳ ಪಾತ್ರಗಳ ಜೊತೆ ಚೋಮನನ್ನು ಹೋಲಿಸಿ ನೋಡುವುದೂ ತಪ್ಪು.

ಇದನ್ನು ಇನ್ನಷ್ಟು ಸರಳವಾಗಿಸೋಣ. ಈಗ ಕಾರಂತರ ಕಾದಂಬರಿಗಳನ್ನೂ ಕುವೆಂಪು ಕಾದಂಬರಿಗಳನ್ನೋ ಓದುವುದಕ್ಕೆ ಶುರುಮಾಡಿ. ಕಾರಂತರ ಕಾದಂಬರಿಗಳಲ್ಲಿ ಕಾಣುವುದು ದಕ್ಷಿಣ ಕನ್ನಡದ ಮಧ್ಯಮ ವರ್ಗದ ಬ್ರಾಹ್ಮಣರ ಬದುಕು. ಅದು ಒಂದು ರೀತಿಯಲ್ಲಿ ವ್ಯಕ್ತಿ ಚಿತ್ರಣ. ಟಿಪಿ ಅಶೋಕ ಮುಂತಾದವರು ಕಾರಂತರ ಕಾದಂಬರಿಗಳಲ್ಲಿ ಏನನ್ನು ಬೇಕಾದರೂ ಹುಡುಕಿಕೊಳ್ಳಲಿ. ಆದರೆ ಆ ಕಾದಂಬರಿಗಳಲ್ಲಿ ಕಾಣಿಸುವ ಜನಜೀವನ ಸಾಹಿತ್ಯಲೋಕಕ್ಕೆ ತೀರಾ ವಿಶಿಷ್ಟವೂ ಅಪರಿಚಿತವೂ ಆದದ್ದೇನಲ್ಲ. ಅದಕ್ಕಿಂತ ಹೆಚ್ಚಾಗಿ ಕಾರಂತರದು ದಕ್ಷಿಣ ಕನ್ನಡದ ಬ್ರಾಹ್ಮಣ ಕುಟುಂಬಗಳಲ್ಲಿ ಕಾಣಸಿಗುವ ಲೋಕ. ಅದು ಸಾಹಿತ್ಯದೊಳಕ್ಕೆ ಬಂದಾಗ ಅದನ್ನು ಓದುವವರಿಗೆ ಇದು ನಮ್ಮದೇ ಕತೆ ಅನ್ನಿಸುತ್ತದೆ. ನಮ್ಮದೇ ನೋವು ನಲಿವುಗಳನ್ನು ಕಾರಂತರು ಚಿತ್ರಿಸಿದ್ದಾರೆ ಅನ್ನಿಸುತ್ತದೆ. ಅದನ್ನಷ್ಟೇ ಓದುತ್ತಿದ್ದರೆ ಇಡೀ ಜಗತ್ತೇ ಐತಾಳರ ಮನೆಯಂತಿದೆ ಅನ್ನಿಸುವುದಕ್ಕೆ ಶುರುವಾಗಬಹುದು.

ಆದರೆ ಕುವೆಂಪು ಜಗತ್ತು ಹಾಗಲ್ಲ. ಅವರ ಎರಡು ಕಾದಂಬರಿಗಳಲ್ಲಿ ಕಾಣಸಿಗುವ ವಿವರಗಳು ಅನೇಕ ಕಾರಣಗಳಿಂದ ವಿಶಿಷ್ಟ. ಕುವೆಂಪು ಎದುರಿಸಬೇಕಾಗಿದ್ದ ಸವಾಲುಗಳು ಕೇವಲ ಭಾಷೆಯದ್ದಷ್ಟೇ ಅಲ್ಲ ; ಭಾವದ್ದು ಕೂಡ. ಒಕ್ಕಲಿಗರ ಜಗತ್ತನ್ನು ಆಗಿನ ಕಾಲದ ಸಾಕ್ಷರರು ಓದುವಂತೆ ಮಾಡಬೇಕಾದ ತುರ್ತು ಅವರಿಗಿತ್ತು. ಅದನ್ನು ಅವರು ತುಂಬ ಶಿಷ್ಟಭಾಷೆಯಲ್ಲೇ ಹೇಳಬೇಕಾಗಿತ್ತು. ತುಂಬ ಸರಳವಾಗಿ ಬರೆದಾಗ ಅವೆಲ್ಲವೂ ತಮಾಷೆಯಾಗಿ ತೇಲಿಹೋಗುವ ಅಪಾಯವಿತ್ತು. ಅವರು ರಾಮಾಯಣ ದರ್ಶನಂ ಬರೆದದ್ದೂ ಅದೇ ಕಾರಣಕ್ಕೆ ಇರಬಹುದು. ಒಂದು ಘನವಾದ ಕೃತಿ ಹೊರಬಂದಾಗಲೇ ಒಬ್ಬ ಲೇಖಕನ ಅಷ್ಟೂ ಬರಹಗಳಿಗೊಂದು ಘನತೆ ಬರುತ್ತದೆ.

ಹೀಗಾಗಿ ಕಾರಂತರನ್ನು ಖುಷಿಗೆ ಓದಿಬಿಡಬಹುದು. ಕುವೆಂಪು ಅವರನ್ನು ಅಷ್ಟು ಸುಲಭವಾಗಿ ಓದಿ ಪಕ್ಕಕ್ಕಿಡುವುದು ಸಾಧ್ಯವೇ ಇಲ್ಲ. ನಾ. ಡಿಸೋಜರನ್ನು ಓದಿ ಖುಷಿಪಡಬಹುದು. ಬೊಳುವಾರು ಹಾಗಲ್ಲ. ಸಾಹಿತ್ಯದೊಳಗೆ ಮತ್ತೊಂದು ಸಂಸ್ಕೃತಿ ಮತ್ತೊಂದು ನಂಬಿಕೆ ಮತ್ತೊಂದು ಮನಸ್ಥಿತಿ ಹರಿದು ಬಂದಾಗ ಅದರ ಪರಿಣಾಮವೇ ಬೇರೆ.

ಒಂದು ಸರಳವಾದ ಉದಾಹರಣೆ ತೆಗೆದುಕೊಳ್ಳಿ; ಪುರಂದರದಾಸ ಮತ್ತು ಕನಕದಾಸರ ಕೀರ್ತನೆಗಳನ್ನು ನೋಡಿ. ಪುರಂದರದಾಸರು ಶ್ರೀಮಂತರಾಗಿದ್ದು ಎಲ್ಲವನ್ನೂ ತೊರೆದು ದಾಸರಾದವರು. ಕನಕದಾಸರು ತುಂಬ ಕೆಳಗಿದ್ದವರು ಮೇಲೇರಿ ದಾಸರಾದರು. ಇದನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಕನಕದಾಸರ ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’ ಅನ್ನುವ ಸಾಲಿಗೆ ಚಾರಿತ್ರಿಕ ಮಹತ್ವ ಬರುತ್ತದೆ. ಪುರಂದರದಾಸರು ಬರೆದ ‘ವ್ಯಾಪಾರ ನಮಗಾಯಿತು. ಶ್ರೀಪತಿ ಪಾದಾರವಿಂದ ಸೇವೆಯೆಂಬೋ..’ ಎಂಬ ಸಾಲಿಗೆ ಹೊಸ ಅರ್ಥ ಬರುತ್ತದೆ.

ಹೀಗೆ..

ಸಾಹಿತ್ಯ ಯಾವಾಗ ಒಬ್ಬನಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಅನ್ನುವುದನ್ನೂ ಯಾವಾಗ ಅದು ಒಂದು ಅಪರಿಚಿತ ಜಗತ್ತಿನ ದರ್ಶನ ಮಾಡಿಸುತ್ತದೆ ಅನ್ನುವುದನ್ನೂ ನಾವು ಅಷ್ಟೇನೂ ಮುಖ್ಯವಲ್ಲ ಅಂತ ನಿರ್ಲಕ್ಪಿಸಿದ್ದನ್ನು ಇಲ್ಲೂ ಏನೋ ಇದೆ ಅನ್ನುವಂತೆ ಮಾಡಿಸುತ್ತದೆ ಅನ್ನುವುದನ್ನೂ ಕಂಡುಕೊಂಡಾಗ ಯಾವುದನ್ನು ಗಂಭೀರವಾಗಿ ಓದಬೇಕು, ಯಾವುದನ್ನು ಮನರಂಜನೆಗಾಗಿ ಓದಬೇಕು ಅನ್ನುವುದು ತಿಳಿಯುತ್ತದೆ.

ಕೊನೆಗೂ ಅದು ಅವರವರಿಗೇ ತಿಳಿಯಬೇಕು; ಜ್ಞಾನೋದಯವಾದ ಹಾಗೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more