ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸ್ತಿಕರನ್ನು ದಯಾಮಯನಾದ ಭಗವಂತ ಕಾಪಾಡಲಿ ಎಂಬ ಮನವಿಯಾಂದಿಗೆ..

By Staff
|
Google Oneindia Kannada News
  • ಜಾನಕಿ
ನಿನ್ನಯ ತಾವರೆ ತೆರನಡಿಗಳಲಿ
ಎನ್ನದೆಂಬ ಈ ತನುಮನಗಳನು
ಚೆನ್ನಕೇಶವ ಇರಿಸುತ ಒಂದು
ಬಿನ್ನಹ ಕುಸುಮವನಿದ ನೀಡಿರುವೆನು..

ಬಹುಶಃ ಮಾಸ್ತಿಯವರದ್ದಿರಬೇಕು ಈ ಪದ್ಯ. ಇದನ್ನು ಓದಿದಾಗೆಲ್ಲ ನಮ್ಮ ಬಿನ್ನಹಗಳನ್ನೂ ಅರ್ಪಿಸುವುದಕ್ಕೆ ಯಾರಾದರೂ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ನಮಗೆ ಯಾರೂ ಇಲ್ಲವಲ್ಲ ಅನ್ನುವ ಅನಾಥಪ್ರಜ್ಞೆ ಕಾಡುತ್ತದೆ. ತುಂಬ ಗಾಢವಾಗಿ ಯಾರನ್ನು ನಂಬಬೇಕು ಅನ್ನುವ ಜಿಜ್ಞಾಸೆ ಎದುರಾಗುತ್ತದೆ.

ನಾಸ್ತಿಕರ ಸಂಕಷ್ಟಗಳಲ್ಲಿ ಇದೂ ಒಂದು. ಮೊದಲೇ ನಮ್ಮ ದೇಶದ ತುಂಬ ದೇವರು. ನಾಸ್ತಿಕರಿಗೆ ಹೇಳಿಮಾಡಿಸಿದ ದೇಶ ಇದಲ್ಲವೇ ಅಲ್ಲ. ಇಲ್ಲಿ ಯಾವ ಬೀದಿಗೆ ಹೋದರೂ ಅಲ್ಲೊಂದು ದೇವಸ್ಥಾನ. ಕಲೆಯನ್ನೂ ಸೌಂದರ್ಯವನ್ನೂ ಹುಡುಕಿಕೊಂಡು ಹೊರಟವನು ಕೊನೆಗೆ ತಲುಪುವುದು ದೇವಸ್ಥಾನಕ್ಕೇ. ಅಷ್ಟೇ ಯಾಕೆ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆ ಬೇಕಿದ್ದರೂ ದೇವಸ್ಥಾನವೇ ಗತಿ. ಯಾರನ್ನಾದರೂ ನಂಬಿಸಬೇಕಾದರೂ ಆ ದೇವರನ್ನೇ ಎಳೆದು ತರಬೇಕು. ‘ದೇವರಾಣೆ ನಾನು ಹಾಗೆ ಮಾಡಿಲ್ಲ ಮಾರಾಯ’ ಅಂದುಬಿಡುತ್ತಾರೆ. ಈತ ದೇವರನ್ನೇ ನಂಬುವುದಿಲ್ಲ. ಹೀಗಾಗಿ ಅವನ ಆಣೆಗೆ ಯಾವ ಲೆಕ್ಕ?

ಯಾರೋ ಬರುತ್ತಾರೆ; ತಿರುಪತಿಗೆ ಹೋಗಿ ಬಂದೆ ಅಂತ ಲಾಡು ಕೊಡುತ್ತಾರೆ. ತಿರುಪತಿ ತಿಮ್ಮಪ್ಪನಿಗೆ ಮುಡಿಯನ್ನೂ ಅದುವರೆಗೆ ಸಂಪಾದಿಸಿದ ದುಡ್ಡಿನ ಒಂದು ಭಾಗವನ್ನೂ ಕೊಟ್ಟು ಬಂದಿರುತ್ತಾರೆ. ಕೊಂಚ ಇಕನಾಮಿಕ್ಸು ಗೊತ್ತಿದ್ದವನಿಗೂ ಕರ್ನಾಟಕದ ಸಂಪತ್ತಿನ ಬಹುಪಾಲು ಹೋಗಿ ಸೇರುವುದು ಆಂಧ್ರದ ತಿರುಪತಿಗೆ, ಮಂತ್ರಾಲಯಕ್ಕೆ ಮತ್ತು ಮಹಾರಾಷ್ಟ್ರದ ಶಿರಡಿಗೆ ಅನ್ನುವುದು ಅರ್ಥವಾಗುತ್ತದೆ.

God please bless Atheistsನಾಸ್ತಿಕನ ನಿಜವಾದ ಸಮಸ್ಯೆ ಇದ್ಯಾವುದೂ ಅಲ್ಲ. ಅತ್ಯಂತ ದುಃಖದ ಗಳಿಗೆಗಳಲ್ಲಿ ಯಾರ ಹತ್ತಿರ ನೋವು ಹಂಚಿಕೊಳ್ಳಬೇಕು ಅನ್ನುವ ಪ್ರಶ್ನೆ ಕೇವಲ ನಾಸ್ತಿಕನನ್ನು ಮಾತ್ರ ಕಾಡಬಲ್ಲದು. ಪರಮ ಆಸ್ತಿಕನಾದವನು ‘ನೀನೇ ಅನಾಥ ಬಂಧು, ಕಾರುಣ್ಯ ಸಿಂಧು’ ಅಂತ ದೇವರ ಹತ್ತಿರ ತನ್ನ ಅಹವಾಲು ಹೇಳಿಕೊಳ್ಳಬಲ್ಲ. ನಾನೇಕೆ ಪರದೇಶಿ, ನಾನೇಕೆ ಬಡವನೋ, ಶ್ರೀನಿಧೇ ಹರಿಯೆನಗೆ ನೀನಿರುವ ತನಕ ಎಂದು ನೆಮ್ಮದಿಯಿಂದ ಇರಬಲ್ಲ. ಅಷ್ಟೇ ಯಾಕೆ ತೀರಾ ತಲೆಕೆಟ್ಟರೆ ‘ನಿನ್ನಂಥ ಸ್ವಾಮಿ ಎನಗುಂಟು, ನಿನಗಿಲ್ಲ. ನಿನ್ನಂಥ ದೊರೆ ಎನಗುಂಟು ನಿನಗಿಲ್ಲ. ನಿನ್ನಂಥ ತಂದೆ ಎನಗುಂಟು ನಿನಗಿಲ್ಲ. ನಿನ್ನರಸಿ ಲಕುಮಿ ಎನ್ನ ತಾಯಿ, ನಿನ್ನ ತಾಯಿಯ ತೋರೋ’ ಎಂದು ಹಾಡಬಲ್ಲ. ಅಲ್ಲ ಕಣಯ್ಯಾ, ನಾನು ಕಷ್ಟಬಂದರೆ ಬೇಡಿಕೊಳ್ಳೋದಕ್ಕೆ ನೀನಿದ್ದೀಯ. ನಿಂಗೇ ಕಷ್ಟಬಂದರೆ ಯಾರಿದ್ದಾರಪ್ಪಾ ಅನ್ನೋ ಲಾ ಪಾಯಿಂಟು ಹಾಕಿ ದೇವರನ್ನೇ ಅನಾಥಪ್ರಜ್ಞೆಯಲ್ಲಿ ಒದ್ದಾಡುವ ಹಾಗೆ ಮಾಡುವ ಕಿಲಾಡಿ ದಾಸರಿದ್ದಾರೆ. ಇಲ್ಲಿ ಗಮನಿಸಬೇಕಾದ್ದು ಇಷ್ಟು; ನಿನ್ನಂಥ ಸ್ವಾಮಿ ಎನಗುಂಟು ಅಂತ ಈ ದಾಸರು ನಂಬಿದ್ದಾರೆ.

ಎಷ್ಟೋ ಸಲ ದಾಸನಾಗಬೇಕು ಅನ್ನಿಸುತ್ತದೆ. ಒಡೆಯನಾಗುವುದಕ್ಕಿಂತ ದಾಸನಾಗುವುದೇ ಸುಖ. ದಾಸನಾದರೆ ಒಡೆಯನೊಬ್ಬ ಹೇಳಿದ ಕೆಲಸ ಮಾಡಿಕೊಂಡು ಇದ್ದರಾಯಿತು. ಅದೇ ಒಡೆಯನಾದರೆ ಎಲ್ಲರ ಕೆಲಸಗಳನ್ನೂ ಮಾಡಬೇಕು. ಈ ಹರಿದಾಸರು ಸಾಮಾನ್ಯರೇನಲ್ಲ. ದಾಸದಾಸರ ಮನೆಯ ದಾಸಾನುದಾಸ ಅಂತ ತಮ್ಮನ್ನು ಕರೆದುಕೊಳ್ಳುವ ನೆಪದಲ್ಲಿ , ದೇವರನ್ನೇ ಭಕ್ತರ ಮನೆಯ ದಾಸರನ್ನಾಗಿ ಮಾಡಿದ್ದಾರೆ. ದೇವರು ಭಕ್ತಿಯಿಂದ ಕೇಳಿದರೆ ಏನು ಬೇಕಾದರೂ ಮಾಡುತ್ತಾನಂತೆ. ಅಂಥ ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದರೆ ದೇವರ ಗತಿಯೇನಾಗಬೇಕು ಹೇಳಿ? ಈ ಭಕ್ತದಾಸರ ಬೇಡಿಕೆಗಳನ್ನು ಪೂರೈಸುತ್ತಾ ಅವನ ಆಯುಷ್ಯವೇ ಮುಗಿದುಹೋಗಬೇಕು. ಅದೃಷ್ಟವಶಾತ್‌ ದೇವರಿಗೆ ಆಯುಷ್ಯ ನಿಗದಿಯಾಗಿಲ್ಲ ಬಿಡಿ.

ಮೊನ್ನೆ ಯಾರೋ ದೊಡ್ಡ ದನಿಯಲ್ಲಿ ಹಾಡುತ್ತಿದ್ದರು; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ. ಬಾಗಿಲನ್ನೂ ಅವನೇ ತೆರೆಯಬೇಕು, ಸೇವೆಯನ್ನೂ ಅವನೇ ಕೊಡಬೇಕು ಎಂದರೆ ಹೇಗೆ? ಇದನ್ನೆ ಮುಂದಿಟ್ಟುಕೊಂಡು ಇನ್ಯಾರೋ ಉಡುಪಿಯಲ್ಲಿ ಕನಕನ ಕಿಂಡಿ ಮೊದಲೇ ಇತ್ತು. ಅಲ್ಲಿ ಕಿಂಡಿಯಿಲ್ಲದೇ ಹೋಗಿದ್ದರೆ ಆ ಕಿಂಡಿಗೊಂದು ಬಾಗಿಲು ಇಲ್ಲದೇ ಹೋಗಿದ್ದರೆ ಕನಕದಾಸರು ಬಾಗಿಲನು ತೆರೆದು ಅಂತ ಯಾಕೆ ಹಾಡುತ್ತಿದ್ದರು. ಅವರು ‘ಗೋಡೆಯನು ಒಡೆದು ಸೇವೆಯನು ಕೊಡೋ ಹರಿಯೇ’ ಅಂತ ಹಾಡಬೇಕಿತ್ತಲ್ಲ ಅಂತ ವಾದಿಸುತ್ತಿದ್ದರು. ಅದರಲ್ಲೂ ಒಂಥರದ ತರ್ಕಬದ್ಧತೆಯಿದೆ ಅಲ್ವೇ?

ಇನ್ನೊಂದು ಥರದ ಸಂವಾದಿಗಳಿದ್ದಾರೆ. ಅವರದು ದೇವರ ಹತ್ತಿರವೂ ಉಲ್ಟಾ ಥಿಯರಿ; ಕರುಣಾಕರ ನೀನೆಂಬುವುದ್ಯಾತಕೋ ಭರವಸೆ ಇಲ್ಲೆನೆಗೆ. ಕರುಣಾಕರ ನೀನಾದರೆ ಈಗಲೇ ಕರಪಿಡಿದೆನ್ನನು ನೀ ಕಾಯೋ. ಈ ಥರದ ಅವಸರದವರನ್ನು ಕಂಡು ಮತ್ತೊಂದಷ್ಟು ಮಂದಿ ಬೇರೆ ಥರದ ವಾದ ಶುರುಮಾಡಿದರು; ತಲ್ಲಣಿಸದಿರು ಕಂಡ್ಯ ತಾಳು ಮನವೆ. ಎಲ್ಲರನು ಸಲಹುವನು, ಇದಕೆ ಸಂಶಯವಿಲ್ಲ.

ಆದರೆ ಇವರೆಲ್ಲ ದೇವರನ್ನು ವರ್ಣಿಸುವುದನ್ನು ಕಂಡರೆ ದೇವರಾಗುವುದು ಎಷ್ಟು ಕಷ್ಟದ ಕೆಲಸ ಅಂತ ಯಾರಿಗಾದರೂ ಅನ್ನಿಸದೇ ಇರಲಿಕ್ಕಿಲ್ಲ; ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ ಅಲ್ಲಿಗಲ್ಲಿಗೆ ಆಹಾರ ಇತ್ತವರು ಯಾರು? ಎಂಬ ಪ್ರಶ್ನೆಗೆ ಉತ್ತರ; ದೇವರು. ಒಂಥರ ಪತ್ರಕರ್ತರು ಮತ್ತು ಪೊಲೀಸ್‌ ಡಿಪಾರ್ಟ್‌ಮೆಂಟಿನ ಕೆಲಸ ದೇವರದು.

ಪರಮಪದದೊಳಗೆ ವಿಷಧರನ ತಲ್ಪದಲಿ।
ಸಿರಿಸಹಿತ ಕ್ಪೀರವಾರಿಯಾಳಿರಲು।
ಕರಿರಾಜ ಕಷ್ಟದಲಿ ಆದಿಮೂಲಾ ಎಂದು।
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ।।

ಎನ್ನುತ್ತಲೇ ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ ಅನ್ನುತ್ತಾರೆ ದಾಸರು. ದೇವರು ಒಂಥರ ಎಟಿಎಂ ಇದ್ದ ಹಾಗೆ. ಎನಿ ಟೈಮ್‌ ಮ್ಯಾನ್‌! ಭಕ್ತವತ್ಸಲನೆಂಬ ಬಿರುದು ಪೊತ್ತಮೇಲೆ ಭಕ್ತರೋನನಾಗಿರಬೇಡವೇ ಸಾರ್‌!

ಇನ್ನೊಂದು ತಮಾಷೆ ಕೇಳಿ; ಇನ್ಫೋಸಿಸ್‌ನಲ್ಲಿ ಕೆಲಸ ಮಾಡುವವರನ್ನು ಕಂಡ ಖಾಸಗಿ ಕಂಪೆನಿಯ ಮಂದಿ ಮೆಚ್ಚಿ, ಬೆರಗಾಗುವುದಿತ್ತು. ಅಂಥ ಕೆಲಸ ನಮಗೂ ಸಿಗಬಾರದೇ ಅನ್ನುವುದಿತ್ತು. ಅಂಥ ಕಲ್ಪನೆಯನ್ನು ದೇವರಿಗೂ ಅನ್ವಯಿಸಿದರೆ?

‘ಏನು ಧನ್ಯಳೋ ಲಕುಮಿ, ಎಂಥ ಮಾನ್ಯಳೋ। ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು।। ಸಾನುರಾಗದಿಂದ, ವಿತ್‌ ಲವ್‌ ಸೇವೆ ಮಾಡುವುದೇ ಧನ್ಯತೆಯೇ ಹಾಗಿದ್ದರೆ?

***

ಸದ್ಯಕ್ಕೆ ಈ ತಮಾಷೆಯನ್ನೆಲ್ಲ ಬಿಟ್ಟು ನಾಸ್ತಿಕರ ಕಷ್ಟಗಳನ್ನು ಯೋಚಿಸೋಣ. ನಮಗೆ ನಂಬುವುದಕ್ಕೆ ದೇವರಿಲ್ಲ. ಮನುಷ್ಯರು ಈ ದೇವರ ಹಾಗೆ ಕರೆದ ತಕ್ಷಣ ಬಂದೊದಗುವುದಿಲ್ಲ. ಎಂಥ ಆತ್ಮೀಯ ಗೆಳೆಯನಿಗೂ ಸಮಯಾಸಮಯ ಇದ್ದೇ ಇರುತ್ತದೆ. ಕಟ್ಟಿಕೊಂಡ ಹೆಂಡತಿ ಕೂಡ ಸಾನುರಾಗದಿಂದ ಸೇವೆ ಮಾಡುತ್ತಾಳೆ ಅಂತ ನಿರೀಕ್ಷಿಸಿದರೆ ಅಂಥವರನ್ನು ಎಂಸೀಪಿಗಳು ಅನ್ನುತ್ತಾರೆ ಮಹಿಳಾವಾದಿಗಳು.

ಹಾಗಿದ್ದರೆ ನಾಸ್ತಿಕರು ಯಾರನ್ನು ನೆಚ್ಚಿಕೊಳ್ಳಬೇಕು? ಕರೆಂಟು ಹೋದ ನಡುರಾತ್ರಿಯಲ್ಲಿ ಧಿಗ್ಗನೆದ್ದು ಕೂತಾಗ, ದಾರಿಯ ತೋರೋ ಗೋಪಾಲ ಎಂದು ಯಾರನ್ನು ಕೇಳಬೇಕು? ಟೀವಿಯಲ್ಲೊಂದು ಅತ್ಯಂತ ಕೆಟ್ಟ ಕಾರ್ಯಕ್ರಮ ಬಂದಾಗ ‘ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ನನಗಿರಲಿ’ ಎಂದು ಯಾವ ಗೋವಿಂದನನ್ನು ನೆನೆಯಬೇಕು?

ನಾಸ್ತಿಕರ ಕಷ್ಟ ಒಂದೆರಡಲ್ಲ. ಅವರಿಗೆ ತಕ್ಷಣ ಬೇಕಾಗಿರುವುದು ನಂಬುವುದಕ್ಕೊಬ್ಬ ದೇವರು. ಯಾರೂ ನಂಬದ, ಯಾರನ್ನೂ ನಂಬದ ನಿಜದ ದೇವರು!

ಮತ್ತೆ ಮಾಸ್ತಿಯವರ ಹಾಡಿನತ್ತ ಮರಳಿದರೆ ಮತ್ತೆರಡು ಸಾಲು ಹೀಗಿದೆ;

ಬಿನ್ನಹವಿದು ನಿನ್ನಡಿಗಳಲಿರಲಿ
ಎನ್ನಯ ತನುಮನ ನಿನ್ನ ಅರಿಯಲಿ
ಎನ್ನದು ಎನ್ನುವುದೆಲ್ಲವು ಸಂತತ
ಚೆನ್ನಕೇಶವ ನಿನ್ನೊಳು ನಿಲಲಿ.

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X