ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಮಾಲಿಕೆ-6

By Staff
|
Google Oneindia Kannada News
ಅವನೊಬ್ಬ ಫ್ಲಾಗ್‌ಮನ್‌. ರೇಲುಹಾದಿಯ ಬದಿಯಲ್ಲಿ ಕುಳಿತು ಪ್ರತಿದಿನ ಹಾದುಹೋಗುವ ಒಂದೋ ಎರಡೋ ರೇಲುಗಳಿಗೆ ಬಾವುಟ ಬೀಸುವುದು ಅವನ ಕೆಲಸ. ತನಗೆ ಬುದ್ಧಿ ಬಂದಾಗಿನಿಂದ ಆತ ಅದೇ ಕೆಲಸ ಮಾಡಿಕೊಂಡು ಬಂದಿದ್ದಾನೆ. ಊರಿನ ಮಂದಿಗೂ ಅವನ ಕೆಲಸವೇನು ಅನ್ನುವುದು ಗೊತ್ತಿದೆ. ಅವನು ಯಾವಾಗ ಎಲ್ಲೆಲ್ಲಿರುತ್ತಾನೆ ಅನ್ನುವುದೂ ಜನಕ್ಕೆ ಗೊತ್ತಿದೆ. ಉದಾಹರಣೆಗೆ ಭಾನುವಾರ ಅವನು ದೇವಸ್ಥಾನದ ಮುಂದಿರುವ ಕಲ್ಲುಬೆಂಚಿನ ಮೇಲೆ ಕೂತಿದ್ದು ಕಾಣಿಸದೇ ಇದ್ದರೆ ಆತ ಕಾಯಿಲೆ ಬಿದ್ದಿದ್ದಾನೆ ಎಂದು ಜನ ಸುಲಭವಾಗಿ ಊಹಿಸುತ್ತಿದ್ದರು. ಒಮ್ಮೆ ರೇಲಿನಿಂದ ಸಿಡಿದ ಹೊತ್ತಿ ಉರಿಯುವ ಕಲ್ಲಿದ್ದಲ ತುಂಡು ಕಾಲಿಗೆ ಬಡಿದದ್ದು, ಇನ್ನೊಮ್ಮೆ ಯಾರೋ ರೇಲಿನಿಂದ ಎಸೆದ ಬಾಟಲಿಯಾಂದು ಎದೆಗೆ ಬಡಿದದ್ದು ಬಿಟ್ಟರೆ ಅವನು ಅಪಘಾತಕ್ಕೆ ಈಡಾದದ್ದೇ ಇಲ್ಲ.

ಅವನ ಹೆಸರು ಕೇಶು ಎಂದಿಟ್ಟುಕೊಳ್ಳಿ. ತಾನು, ತನ್ನ ಉದ್ಯೋಗ ; ಅವನು ಇರುವುದೇ ಹಾಗೆ ಎಂದರು ಜನ. ಯಾವತ್ತೂ ಬದಲಾಗದ ಸ್ಮಶಾನದ ರಸ್ತೆಯ ಹಾಗೆ. ಅವನ ಬದುಕು ಎಷ್ಟು ನೀರಸವಾಗಿತ್ತೆಂದರೆ ಜನರಿಗೇ ಅದು ಬೋರಾಗಲು ಶುರುವಾಗಿತ್ತು. ಇಷ್ಟೊಂದು ನೀರಸವಾಗಿ ಈಗ ಹೇಗೆ ಬದುಕುತ್ತಿದ್ದಾನೆ ಎಂದು ಎಲ್ಲರೂ ರೇಜಿಗೆ ಪಟ್ಟುಕೊಳ್ಳುತ್ತಿದ್ದ ಒಂದು ದಿನ ಅವನೊಂದು ಸಣಕಲು ಹೆಣ್ಣಿನೊಂದಿಗೆ ಪ್ರತ್ಯಕ್ಷನಾದ.

ಜನರಿಗೆ ಕೇಶು ಬಗ್ಗೆ ಆಸಕ್ತಿ ಮೂಡಿತು. ಮಾತಾಡುವುದಕ್ಕೊಂದು ವಿಷಯ ಸಿಕ್ಕಂತಾಯಿತು. ಕೇಶು ಕರಕೊಂಡು ಬಂದ ಹುಡುಗಿ ಅವನಿಗೆ ತಕ್ಕವಳಲ್ಲ. ಇವನೋ ಕಟ್ಟುಮಸ್ತಾದ, ತುಂಬುತೋಳಿನ ದೃಢಕಾಯ. ಆಕೆಯೋ ಪೀಚಲು ಹುಡುಗಿ ಎಂದು ಮಾತಾಡಿಕೊಂಡರು. ಅವರಿಬ್ಬರು ಜೊತೆಗಿರುವ ಕ್ಷಣಗಳನ್ನು ಊಹಿಸಿ ಗುಟ್ಟಾಗಿ ನಕ್ಕರು. ನೋಡನೋಡುತ್ತಿದ್ದಂತೆ ದೇವಸ್ಥಾನಕ್ಕೆ ಕೇಶು ಮತ್ತು ಅವನ ಹೆಂಡತಿ ಬರತೊಡಗಿದರು. ಕ್ರಮೇಣ ಜನರು ಅವರಿಬ್ಬರ ವಿಪರ್ಯಾಸದ ಗಾತ್ರಕ್ಕೆ ಹೊಂದಿಕೊಂಡುಬಿಟ್ಟರು. ಅವರಿಗೆ ಮಾತಾಡುವುದಕ್ಕೆ ಮತ್ತೊಂದು ವಿಷಯವನ್ನು ಒದಗಿಸಿದ ಕೇಶು. ಅವನಿಗೊಂದು ಮಗುವಾಗಿತ್ತು. ಮಾತಿಗೆ ಸಿಕ್ಕ ಸುದ್ದಿ ಅದಲ್ಲ. ಹೆರಿಗೆಯಲ್ಲಿ ಅವನ ಹೆಂಡತಿ ತೀರಿಕೊಂಡಿದ್ದಳು.

Gerhart Hauptmann, Germanyಹೆಂಡತಿ ಸತ್ತ ಸುದ್ದಿಗೆ ಅಂಥ ರೋಚಕತೆ ಇರುವುದಿಲ್ಲ. ಅದರಲ್ಲಿ ಒಂಥರದ ಅನುಕಂಪ ಮತ್ತು ನಿರಾಳತೆ ಬೆರೆತುಕೊಂಡಿರುತ್ತದೆ. ಎರಡನ್ನೂ ಬೇರ್ಪಡಿಸಿ ಮಾತಾಡುವುದು ಕಷ್ಟವಾಗುತ್ತದೆ. ಹೀಗಾಗಿ ಜನ ಆ ಸುದ್ದಿಯನ್ನು ಜಾಸ್ತಿ ಹಿಂಜಲಿಲ್ಲ. ಆದರೆ ಹೆಂಡತಿ ಸತ್ತ ತಿಂಗಳಿಗೇ ಕೇಶು ಮತ್ತೊಬ್ಬ ಹುಡುಗಿಯನ್ನು ಮದುವೆಯಾದ. ಕೇಶುವಿನಂತೆಯೇ ದಷ್ಟಪುಷ್ಟಳಾಗಿದ್ದ ಹೊಸ ಹೆಂಡತಿಯ ಜೊತೆಗೇ ಮನೆಗೆ ಕಾಲಿಟ್ಟ ಮೂರು ಸಂಗತಿಗಳೆಂದರೆ ; ಅಹಂಕಾರ, ಜಗಳಗಂಟಿತನ ಮತ್ತು ಕೆಂಡಾಮಂಡಲ ಸಿಟ್ಟು.

ಇಡೀ ಊರಿಗೆ ಒಂದು ಶತಮಾನಕ್ಕಾಗುವಷ್ಟು ಮಾತಿಗೆ ವಸ್ತು ಸಿಕ್ಕಿತು. ಇಬ್ಬರೂ ಮೊದಲ ವರುಷ ಭೀಕರವಾಗಿ ಜಗಳ ಆಡುವುದನ್ನು ಜನ ಕೇಳಿಸಿಕೊಂಡರು. ಎರಡನೆಯ ವರುಷ ಕೇಶುವಿನ ಧ್ವನಿ ಕೇಳಿಸುತ್ತಿರಲಿಲ್ಲ; ಹೆಂಡತಿ ರಂಭಾರೋಟಿ ಕಿರುಚುತ್ತಿದ್ದಳು. ಮೂರನೆ ವರುಷ ಅವಳಿಗೊಂದು ಮಗುವಾಯಿತು. ಆಗ ಕೇಶುವಿನ ಮೊದಲ ಮಗುವಿಗೆ ಮೂರು ವರುಷ.

ತನ್ನ ಮಗುವಿಗೆ ಕೇಶು ಇಟ್ಟ ಹೆಸರು ಶಂಕು. ಶಂಕುವಿನ ಬಗ್ಗೆ ಹೆಂಡತಿ ರೇಗಾಡಿದಾಗೆಲ್ಲ ಕೇಶುವಿನ ರಕ್ತ ಕುದಿಯುತ್ತಿತ್ತು. ಅವಳನ್ನು ಜೋರಾಗಿ ಗದರಿಸಿಬಿಡುತ್ತಿದ್ದ. ಹೀಗಾಗಿ ಶಂಕುವಿನ ಬಗ್ಗೆ ಆಕೆ ಮಾತಾಡುವುದಕ್ಕೇ ಹೋಗುತ್ತಿರಲಿಲ್ಲ. ಕ್ರಮೇಣ ಕೇಶು ಇಲ್ಲದ ಹೊತ್ತಲ್ಲಿ ಆಕೆ ಶಂಕುವನ್ನು ಬೈಯುವುದಕ್ಕೆ ಶುರುಮಾಡಿದಳು. ಜನಕ್ಕೆ ಮತ್ತೊಂದು ಸುದ್ದಿ ಸಿಕ್ಕಿತು. ಕೇಶುವಿನ ಎರಡನೆಯ ಹೆಂಡತಿ ರಾಕ್ಷಸಿ ಅನ್ನುವ ವಿಚಾರವನ್ನು ಅವರೆಲ್ಲ ಮನಸೋ ಇಚ್ಛೆ ಜಗ್ಗಾಡಿದರು.

ಅವರವರ ನಡುವೆಯೇ ಬಣಗಳಾದವು. ಶಂಕುವನ್ನು ಹೊಡೆದರೆ ಕೇಶು ಸಿಟ್ಟಾಗುತ್ತಾನೆ. ಹೆಂಡತಿಯನ್ನೇ ಹೊಡೆದಟ್ಟುತ್ತಾನೆ ಎಂದು ಒಂದು ಬಣವೂ ಅವನು ಹಾಗೆಲ್ಲ ಮಾಡೋಲ್ಲ ಎಂದು ಇನ್ನೊಂದು ಬಣವೂ ಮಾತಾಡಿಕೊಂಡಿತು. ಹೀಗಿರುವಾಗ ಒಂದು ದಿನ ಆತ ರಾತ್ರಿ ಬಂದಾಗ ಶಂಕು ಅಳುತ್ತಾ ಮಲಗಿದ್ದ. ಕತ್ತಲಲ್ಲೇ ಅವನ ಕೆನ್ನೆಯ ಮೇಲೆ ಕಂಬನಿ ಧಾರೆಯಾಗುವುದನ್ನು ಕೇಶು ಕಂಡುಕೊಂಡ.

ಆವತ್ತು ಕೇಶುವಿಗೆ ಸಿಟ್ಟು ಬಂದಿತ್ತು. ಸಿಟ್ಟಿನಲ್ಲಿ ಆತ ಮುಷ್ಟಿ ಕಟ್ಟಿ ಹೆಂಡತಿಯನ್ನು ಗುದ್ದಿ ಸಾಯಿಸಬೇಕು ಅಂದುಕೊಂಡ. ಆದರೆ ಬಂದ ಸಿಟ್ಟನ್ನು ಹಾಗೇ ತಡೆದುಕೊಂಡ. ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ‘ಶಂಕುವಿನ ಮೇಲೂ ಸ್ವಲ್ಪ ಕನಿಕರವಿರಲಿ’ ಎಂದು ಗದ್ಗದಿತನಾಗಿ ಹೇಳಿದ್ದನ್ನು ಪಕ್ಕದ ಮನೆಯವಳು ಅಳುತ್ತಾ ಹಲವರಿಗೆ ಹೇಳಿದಳು.

ಇದಾದ ಎರಡು ವಾರಗಳ ನಂತರ ಕೇಶು ಡ್ಯೂಟಿಗೆ ಹೋದ. ಅಲ್ಲಿಗೆ ಹೋದ ನಂತರ ರಾತ್ರಿಯ ತಿಂಡಿಯನ್ನು ಮರೆತೇ ಬಂದಿದ್ದೇನೆ ಅನ್ನೋದು ಅವನಿಗೆ ನೆನಪಾಯಿತು. ಮಧ್ಯಾಹ್ನವೂ ಆತ ಏನೂ ತಿಂದಿರಲಿಲ್ಲ. ತಿಂಡಿಯಿಲ್ಲದೇ ಚಳಿಯಲ್ಲಿ ಇಡೀ ರಾತ್ರಿ ಕಳೆಯುವುದು ಕಷ್ಟ ಎನ್ನಿಸಿ ಮನೆಗೆ ವಾಪಸ್ಸು ಮರಳಿದ ; ಮನೆಗೆ ಹತ್ತಿರವಾಗುತ್ತಿದ್ದಂತೆ ಯಾರೋ ಜೋರಾಗಿ ಕಿರುಚುವ ಸದ್ದು ಕೇಳಿಸಿತು. ಅದು ತನ್ನ ಮಗ ಶಂಕುವಿನ ಅಳು ಅನ್ನುವುದೂ ಅರಿವಾಯಿತು. ಸಿಟ್ಟಿನಿಂದ ಬೀಸ ಬೀಸ ಹೆಜ್ಜೆಹಾಕಿ ಮನೆ ಹತ್ತಿರ ಬಂದ. ಅಲ್ಲಿ ಹೆಂಡತಿ ಶಂಕುವನ್ನು ಬಾಯಿಗೆ ಬಂದ ಹಾಗೆ ಬೈಯುವುದು ಕೇಳಿಸಿತು. ಅವಳನ್ನು ಹಿಡಕೊಂಡು ಜಪ್ಪಬೇಕು ಅಂದುಕೊಂಡು ವೇಗವಾಗಿ ಒಳಗೆ ನುಗ್ಗಿದ.

ಕೇಶುವಿನ ಎರಡನೆಯ ಹೆಂಡತಿ ಈತ ಥಟ್ಟನೆ ನುಗ್ಗಿದ ಅಚ್ಚರಿಯಿಂದ ಪಾರಾಗಲೆಂಬಂತೆ ತಾನು ದಬದಬ ಗುದ್ದುತ್ತಿದ್ದ ಶಂಕುವನ್ನು ಪಕ್ಕಕ್ಕೆ ಬಿಟ್ಟು ತನ್ನ ಪುಟ್ಟ ಮಗುವಿನ ಬಾಟಲಿಗೆ ಹಾಲು ತುಂಬಿಸತೊಡಗಿದಳು. ಅವಳನ್ನೇ ಕೇಶು ಸಿಟ್ಟಿನಿಂದ ನೋಡಿದ. ಅವಳ ತುಂಬಿದ ಮೈ ತನ್ನನ್ನು ನಡುಗಿಸುತ್ತಿದೆ ಅನ್ನಿಸಿತು. ಅದನ್ನು ಮೀರುವ ಶಕ್ತಿ ತನಗಿಲ್ಲ ಅನ್ನಿಸಿತು.

ಕೇಶು ಮೌನವಾಗಿ ಬೆಂಚಿನ ಮೇಲಿಟ್ಟಿದ್ದ ತಿಂಡಿಯ ಕಟ್ಟನ್ನೆತ್ತಿಕೊಂಡು ತಾನು ಬಂದಿದ್ದು ಇದಕ್ಕೋಸ್ಕರವೇ ಎಂಬಂತೆ ಕತ್ತು ಕೊಂಕಿಸಿ ಸೂಚಿಸಿ, ತಾನು ಏನನ್ನೂ ನೋಡಿಲ್ಲ ಎಂಬಂತೆ ನಿಧಾನವಾಗಿ ಮೆಟ್ಟಿಲಿಳಿದು ಹೊರಟು ಹೋದದ್ದನ್ನು ಪುಟ್ಟ ಶಂಕು ನೋವಿನಿಂದ ಆಳಕ್ಕಿಳಿದ ಕಣ್ಣುಗಳಿಂದ ನೋಡಿದ.

ಈ ಕತೆ ಬರೆದವನು ಜರ್ಮನಿಯ ಗೆರ್‌ಹಾರ್ಟ್‌ ಹಾಪ್ಟ್‌ಮನ್‌. ಈತ ನೊಬೆಲ್‌ ಪ್ರಶಸ್ತಿ ಪಡೆದದ್ದು 1912ರಲ್ಲಿ. ಹಾಗೆ ನೋಡಿದರೆ 1910ರಲ್ಲಿ ಪ್ರಶಸ್ತಿ ಪಡೆದ ಪಾಲ್‌ ಹೇಸೆ, 1911ರಲ್ಲಿ ನೊಬೆಲ್‌ ಪಡಕೊಂಡ ಮೌರೀಸ್‌ ಮ್ಯಾಟರ್‌ಲಿಂಕ್‌ ಕೂಡ ಬರೆದದ್ದು ಜರ್ಮನ್‌ ಭಾಷೆಯಲ್ಲೇ. ಬೆಲ್ಜಿಯಂನವನಾಗಿದ್ದ ಮೌರೀಸ್‌ ಕೊನೆಕೊನೆಯಲ್ಲಿ ಅನಾಥನಾಗಿ ಬದುಕಿದ್ದ, ಅಬ್ಬೇಪಾರಿಯಾಗಿ ಸತ್ತಿದ್ದ ಅನ್ನುವುದು ಆತನ ಪಟ್ಟ ಪಾಡನ್ನು ವರ್ಣಿಸುತ್ತದೆ.

ಇದಾದ ಮರುವರ್ಷವೇ ನೊಬೆಲ್‌ ಗಳಿಸಿದ್ದು ರವೀಂದ್ರನಾಥ ಠಾಗೋರ್‌. ಅದು ಭಾರತಕ್ಕೆ ಸಿಕ್ಕ ಮೊದಲ ನೊಬೆಲ್‌.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X