ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಸಿ ಆಧ್ಮಾತ್ಮಿಕತೆ ಮತ್ತು ಮರಿಸಾಹಿತಿಗಳ ಹೊಸಚಾಳಿ

By Staff
|
Google Oneindia Kannada News
ಒಂದೂರಲ್ಲಿ ಹನ್ನೊಂದು ಮಂದಿ ಬುದ್ಧಿವಂತರಿದ್ದರು. ಆ ಹನ್ನೊಂದೂ ಮಂದಿ ಒಮ್ಮೆ ಪಕ್ಕದೂರಿಗೆ ಹೊರಟರು. ದಾರಿಯಲ್ಲೊಂದು ನದಿ ಅಡ್ಡ ಬಂತು. ಹನ್ನೊಂದೂ ಮಂದಿ ಈಜಿಕೊಂಡು ನದಿ ದಾಟಿದರು. ದಾಟಿದ ನಂತರ ಒಬ್ಬ ಬುದ್ಧಿವಂತನಿಗೆ ಅನುಮಾನ ಬಂತು. ಹನ್ನೊಂದೂ ಮಂದಿ ದಡಸೇರಿದ್ದಾರೋ ಇಲ್ಲವೋ? ಒಬ್ಬ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಏನು ಮಾಡುವುದು? ತಕ್ಪಣ ಆತ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಲೆಕ್ಕ ಹಾಕಿದ. ಹತ್ತೇ ಮಂದಿ ಇದ್ದರು. ಆತ ಪ್ರತಿಸಾರಿ ಲೆಕ್ಕ ಹಾಕುವಾಗಲೂ ತನ್ನನ್ನು ಬಿಟ್ಟೇ ಲೆಕ್ಕ ಹಾಕುತ್ತಿದ್ದ. ಪ್ರತಿಯಾಬ್ಬರೂ ಹೀಗೆ ಲೆಕ್ಕಹಾಕಿ ಒಬ್ಬ ಸತ್ತನೆಂದೇ ಭಾವಿಸಿ ಅಳತೊಡಗಿದರು. ಆಗ ಅಲ್ಲಿಗೊಬ್ಬ ಜಾಣ ಬಂದ. ಇವರ ಹುಚ್ಚಾಟ ಕಂಡು ಮರುಗಿ ಹನ್ನೊಂದನೆಯವನನ್ನು ತೋರಿಸುತ್ತೇನೆ ಎಂದ. ಎಲ್ಲರನ್ನೂ ಸಾಲಾಗಿ ನಿಲ್ಲಿಸಿದ ಒಬ್ಬೊಬ್ಬರ ತಲೆಯ ಮೇಲೆ ಒಂದೊಂದು ಏಟು ಹಾಕಿದಾಗಲೂ ಒಂದೊಂದು ಸಂಖ್ಯೆ ಕೂಗಬೇಕು ಅಂದ. ಹೀಗೆ ಆತ ಹನ್ನೊಂದನೆಯವನ ನೆತ್ತಿಗೆ ಕುಟ್ಟಿದಾಗ ಉಳಿದವರೆಲ್ಲ ಆತನನ್ನು ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ ಅಂತ ತರಾಟೆಗೆ ತೆಗೆದುಕೊಂಡರು..

ಕತೆ ಹೀಗೆ ಸಾಗುತ್ತದೆ. ಇದೊಂದು ಸರಳ ಕತೆ. ಮಕ್ಕಳನ್ನು ರಂಜಿಸಲಿಕ್ಕೋ ತಮಾಷೆಗೋ ಹೇಳುತ್ತಿರುತ್ತಾರೆ. ಈಗಿನ ಕಾಲಕ್ಕೆ ತುಂಬ ಔಟ್‌ಡೇಟೆಡ್‌ ಅನ್ನಿಸುವ ಕತೆಯೂ ಹೌದು. ಆದರೆ ನಮ್ಮ ‘ಗುರು’ಗಳು ಬುದ್ಧಿವಂತರು. ಅವರು ಇದೇ ಕತೆಯನ್ನು ಮುಂದಿಟ್ಟುಕೊಂಡು ಅದರ ಮೂಲಕ ನಮಗೆ ಆಧ್ಯಾತ್ಮಿಕತೆಯನ್ನು ಬೋಧಿಸುತ್ತಾರೆ. ತಾತ್ವಿಕತೆಯನ್ನು ತಿಳಿಹೇಳುತ್ತಾರೆ. ಎಲ್ಲವನ್ನೂ ಆಧ್ಯಾತ್ಮಿಕತೆಯ ಮಟ್ಟಕ್ಕೇರಿಸುತ್ತಾರೆ.

ಉದಾಹರಣೆಗೆ ಮೇಲಿನ ಕತೆಯನ್ನು ಹೇಳುತ್ತಾ ಗುರುಗಳು ಮುಂದುವರಿಯುತ್ತಾರೆ.

ಇಲ್ಲಿ ನಾವೆಲ್ಲರೂ ಹನ್ನೊಂದನೆಯ ಬುದ್ಧಿವಂತರೇ. ನಮ್ಮನ್ನು ನಾವು ಸುಲಭವಾಗಿ ಮರೆತುಬಿಡುತ್ತೇವೆ. ಇನ್ನೊಬ್ಬರನ್ನಷ್ಟೇ ಲೆಕ್ಕ ಹಾಕುತ್ತೇವೆ. ತಪ್ಪಿಗೆ ಹೊಣೆಗಾರರನ್ನಾಗಿ ಮಾಡುವುದಕ್ಕೆ ಇನ್ನೊಬ್ಬರಷ್ಟೇ ಕಾಣಿಸುತ್ತಾರೆ. ಕೊನೆಗೆ ಇನ್ಯಾರೋ ಬಂದು ತಲೆ ಮೇಲೆ ಮೊಟಕಿ ನೀನೇ ಹನ್ನೊಂದನೆಯವನು ಎಂದು ಹೇಳಿದಾಗಷ್ಟೇ ನಮಗೆ ನಮ್ಮ ತಪ್ಪಿನ ಅರಿವಾಗುತ್ತದೆ.

Neo writers, fake eternityಮನಸ್ಸು ತುಂಬ ವಿಚಿತ್ರ. ಹೀಗೆ ಅನೇಕ ಸಾರಿ ತನಗೇ ಮೋಸ ಮಾಡಿಕೊಳ್ಳುತ್ತದೆ. ತನ್ನನ್ನು ಕಾಪಾಡಿಕೊಳ್ಳುವ ಉಪಾಯಗಳನ್ನು ಕಂಡುಕೊಳ್ಳುತ್ತದೆ. ತಂದೆಯನ್ನು ಚೆನ್ನಾಗಿ ನೋಡಿಕೊಳ್ಳದೇ ಇರುವುದಕ್ಕೆ, ತಾಯಿಯನ್ನು ನಿರ್ಲಕ್ಪ್ಯಿಸುವುದಕ್ಕೆ, ಹೆಂಡತಿಯನ್ನು ಹೊಡೆಯುವುದಕ್ಕೆ ತನ್ನದೇ ಆದ ಕಾರಣಗಳನ್ನು ಕೊಟ್ಟುಕೊಳ್ಳುತ್ತಾ ಹೋಗುತ್ತದೆ....

ಹೀಗೆ ಆಧ್ಯಾತ್ಮದ ಉಪನ್ಯಾಸ ಸಾಗುತ್ತದೆ. ಇದನ್ನು ಕೇಳಿದಾಕ್ಪಣ ಅರೆ, ಆಧ್ಯಾತ್ಮ ಮತ್ತು ತತ್ವಜ್ಞಾನ ಎಷ್ಟು ಸರಳ ಅಂದುಕೊಳ್ಳುತ್ತೇವೆ. ಆದರೆ ಈ ಸರಳ ತತ್ವಜ್ಞಾನ ಸುಖದಲ್ಲಿರುವಾಗ ಕೇಳಿ ಚಪ್ಪರಿಸುವುದಕ್ಕೆ ಅನುಕೂಲಕ್ಕೆ ಬರುತ್ತದೆಯೇ ಹೊರತು, ಕಷ್ಟದಲ್ಲಿದ್ದಾಗ ನೆರವಿಗೆ ಬರುವುದಿಲ್ಲ.

ಯಾಕೆಂದರೆ ಇದು ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಹುಸಿ ಆಧ್ಯಾತ್ಮಿಕತೆ. ಬೇಕೋ ಬೇಡವೋ ಎಲ್ಲರೂ ತಮ್ಮ ಮಾತಿನೊಳಕ್ಕೆ ಕೃತಿಯಾಳಗೆ ತತ್ವಜ್ಞಾನವನ್ನು ಎಳೆದು ತರಲು ಯತ್ನಿಸುತ್ತಿದ್ದಾರೆ. ಅದು ತತ್ವಜ್ಞಾನ ಅಲ್ಲ ಅಂತ ಗೊತ್ತಿದ್ದವರೂ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿಲ್ಲ. ಮೇಲಿನ ಕತೆಯಲ್ಲಿ ನಮ್ಮನ್ನು ಥಟ್ಟನೆ ಹಿಡಿದಿಡುವುದು ತತ್ವಜ್ಞಾನ ಅಲ್ಲ, ಒಂದು ಸರಳ ಕತೆಯನ್ನು ಒಂದು ಫೇಬಲ್‌ ಆಗಿ, ಒಂದು ರೂಪಕವಾಗಿ ನಿರೂಪಿಸಿದ ರೀತಿ. ಅದು ತತ್ವಜ್ಞಾನ ಅಲ್ಲ, ಸಾಹಿತ್ಯ.

ಇತ್ತೀಚೆಗೆ ಬರೆಯುತ್ತಿರುವವರಿಗೆ ಅಕ್ಕಮಹಾದೇವಿಯನ್ನೋ ಅಲ್ಲಮನನ್ನೋ ಸಾಕ್ರೆಟಿಸ್‌ನನ್ನೋ ನೀಷೆಯನ್ನೋ ಕಡ ತೆಗೆದುಕೊಳ್ಳುವುದೊಂದು ಷೋಕಿ. ಅವರ ಕತೆಗೆ ಸಂಬಂಧವಿದೆಯೋ ಇಲ್ಲವೋ ಕತೆಯ ಆರಂಭದಲ್ಲಿ ಇಂಥದ್ದೊಂದು ಸಾಲು ಇರಬೇಕು. ಒಂದು ಕಥಾಸಂಕಲನದ ಆರಂಭದಲ್ಲಿ ‘ಕಳವಳದ ಮನ ತಲೆಕೆಳಗಾದುದವ್ವಾ.. ಚೆನ್ನಮಲ್ಲಿಕಾರ್ಜುನನಿಗೆ ಎರಡರ ಮುನಿಸವ್ವಾ’ ಎಂಬ ಸಾಲುಗಳಿದ್ದವು. ಅವಕ್ಕೂ ಆ ಕತೆಗಳಿಗೆ ಏನಕೇನ ಸಂಬಂಧವೂ ಇರಲಿಲ್ಲ. ಆಮೇಲೆ ನೋಡಿದರೆ ಬಹುತೇಕ ಕತೆಗಳ ಹಣೆಬರಹವೂ ಇದೇ ಅನ್ನುವುದು ಗೊತ್ತಾಯಿತು. ಯಾರದೋ ಒಂದು ಆಕರ್ಷಕ ಸಾಲುಗಳನ್ನು ಮುಂದಿಟ್ಟುಕೊಂಡು ತಮ್ಮ ಹಳಸಲು ಕತೆಗಳನ್ನೋ ಕವಿತೆಯಗಳನ್ನೋ ಉದ್ಧರಿಸುವ ವಿಫಲ ಯತ್ನವಲ್ಲದೆ ಇದು ಮತ್ತೇನೂ ಅಲ್ಲ.

ಇದರ ಜೊತೆಗೇ ಸಾಹಿತಿಗಳ ಮತ್ತೊಂದು ಗೀಳನ್ನೂ ನೀವು ಗಮನಿಸಬೇಕು. ಪ್ರತಿಯಾಂದು ಪುಸ್ತಕದ ಮುನ್ನುಡಿಯಲ್ಲೂ ಲೇಖಕ ‘ನನ್ನ ಎದೆಯಾಳದ ನೋವನ್ನು ಅಕ್ಪರದ ಮೂಲಕ ತೆರೆದಿಡಲು ಯತ್ನಿಸಿದ್ದೇನೆ’ ಎಂದೋ ಎದೆಯ ಬಿಕ್ಕಳಿಕೆಗಳಿಗೆ ಅಕ್ಷರ ರೂಪ ಕೊಟ್ಟಿದ್ದೇನೆ ಎಂದೋ ಅಂತರಾಳದ ಆಲಾಪಗಳನ್ನು ಪದಗಳಲ್ಲಿ ಮೂಡಿಸಲು ಯತ್ನಿಸಿದ್ದೇನೆ ಎಂದೋ ಬರೆದುಕೊಳ್ಳುತ್ತಾರೆ. ಅವರ ಪ್ರಕಾರ ಅವರೆಲ್ಲ ಬರೆಯುವುದು ಅವರ ಅತ್ಯಂತ ನೋವಿನ ಸಂಗತಿಗಳನ್ನು. ಆಮೇಲೆ ನೋಡಿದರೆ ತಾವು ಬರೆದ ಮುನ್ನುಡಿಗೂ ತಮ್ಮ ಜೀವನಕ್ಕೂ ಸಂಬಂಧವೇ ಇಲ್ಲ ಎಂಬಂತೆ ಅವರು ಬದುಕಿರುವುದನ್ನು ನಾನು ನೋಡಿದ್ದೇನೆ. ಮಹಾದುರಹಂಕಾರಿ ಎಂದು ಅನೇಕರಿಂದ ಬಿರುದು ಪಡಕೊಂಡ ಕವಿಯಾಬ್ಬ ವಿನಯದ ಬಗ್ಗೆ ಕವಿತೆಗಳನ್ನೇ ಬರೆದಿದ್ದ. ಕೊನೆಗೂ ಉಳಿಯುವುದು ನನ್ನ ವಿನಯ ಮತ್ತು ಸೌಜನ್ಯ ಎಂದು ಮುನ್ನುಡಿಯಲ್ಲಿ ಬರೆದುಕೊಂಡಿದ್ದ.

ಅದಕ್ಕೇ ಇಂಥ ಹುಸಿ ಆಧ್ಯಾತ್ಮಿಕತೆ ಮತ್ತು ಪೊಳ್ಳುತನದ ಮಾತುಗಳು ಬೇಸರ ತರಿಸುತ್ತವೆ. ಸಾಹಿತಿ ಆತ್ಮಾನುಕಂಪ ಬಯಸಬಾರದು, ಆತ್ಮವಿಶ್ವಾಸ ತುಂಬಬೇಕು ಎಂದು ಹೇಳುವುದು ಕೂಡ ರೂಢಿಯ ಮಾತಾಗುತ್ತದೆ. ಆದರೆ ನನ್ನ ಕಾವ್ಯವನ್ನು ಬಗೆಯುವವನಿಗೆ ಎಂಟೆದೆ ಇರಬೇಕು ಎಂದ ಕವಿ ನೆನಪಾಗುತ್ತಾನೆ. ಕಾವ್ಯ ಕವಿಯ ಅಂತರಂಗದ ಮಾತೇ ಇರಬಹುದು. ಆದರೆ ಅದು ಸಾರ್ವಕಾಲಿಕ ಆಗುವುದು ಸಾರ್ವತ್ರಿಕವಾದಾಗಲೇ.

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ।
ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ।
ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ...।।

ಎನ್ನುತ್ತಾ ಲಕ್ಪ್ಮೀಶ ಕವಿ ಕಾವ್ಯವನ್ನು ಜರೆಯುವವರನ್ನು ಛೇಡಿಸಿದ್ದಾನೆ. ಇಲ್ಲಿ ಆತ್ಮಾನುಕಂಪವಿಲ್ಲ, ಆತ್ಮವಿಶ್ವಾಸವಿದೆ.

ಕವಿತೆ ತತ್ವಜ್ಞಾನ, ಆತ್ಮರತಿ ಮತ್ತು ಸ್ವಾನುಕಂಪದಿಂದ ಪಾರಾಗಲಿ.

ಚಪ್ಪಾಳೆ

ಕಾಂತಾವರದ ಕವಿ ನಾ. ಮೊಗಸಾಲೆ ‘ಅರುವತ್ತರ ತೇರು’ ಕವನ ಸಂಕಲನ ತಂದಿದ್ದಾರೆ. ಅದು ಅವರ ಸಮಗ್ರ ಕಾವ್ಯವೂ ಹೌದು. ಮೊಗಸಾಲೆಯವರು ಇಷ್ಟೊಂದು ಬರೆದಿದ್ದಾರಾ ಎಂದು ಬೆರಗಾಗುವಷ್ಟು ಸಂಖ್ಯೆಯ ಕವಿತೆಗಳು ಇಲ್ಲಿವೆ. ಇಷ್ಟು ಚೆನ್ನಾಗಿ ಬರೆದಿದ್ದಾರಾ ಎಂದು ಬೆಚ್ಚಿಬೀಳುವಂಥ ಕವಿತೆಗಳು ಕೆಲವಿವೆ. ಏಳು ಕವಿತಾಸಂಕಲನಗಳನ್ನು ಬರೆದ ಮೊಗಸಾಲೆಯವರ ಅನೇಕ ಕವಿತೆಗಳಿಗಿಂತ ಅವರ ಕವನ ಸಂಕಲನದ ಹೆಸರೇ ಚೆನ್ನಾಗಿದೆ; ಮೊಗಸಾಲೆಯ ನೆನಪುಗಳು.

ಮೊಗಸಾಲೆ ಪದಗಳಲ್ಲಿ ನಂಬಿಕೆ ಇಟ್ಟ ಕವಿ. ಹೀಗಾಗಿ ಅವರ ಪ್ರತಿಯಾಂದು ಕವಿತೆಯಲ್ಲೂ ಅಕ್ಷರಗಳು ಕಿಕ್ಕಿರಿದಿರುತ್ತವೆ. ಕೆಲವೊಮ್ಮೆ ಜಾತ್ರೆ ಎನ್ನಿಸುವಷ್ಟು. ತುಂಬ ಸುದೀರ್ಘವಾಗಿ ಕವಿತೆ ಬರೆಯುವುದು ಎಷ್ಟೋ ಸಂದರ್ಭದಲ್ಲಿ ತೊಡಕೂ ಹೌದು.

ಅವರ ಆರಂಭದ ಕವಿತೆಗಳಿಗೆ ಲಂಕೇಶರ ಕವಿತೆ ಸ್ಪೂರ್ತಿ ಇದ್ದರೂ ಇರಬಹುದು ಎಂಬ ಅನುಮಾನ ಹುಟ್ಟಿಸುವಂತೆಯೂ ಅವರು ಬರೆದಿದ್ದಾರೆ. ಅವರ ಮೂರು ಸಾಲುಗಳನ್ನು ಓದಿ;

ನನ್ನಮ್ಮನ ತುರುಬೆಂದರೆ ನಮ್ಮನೆ ಹಿಂದಿನ ಕಾಡು
ಅಪ್ಪ ಇರುವಷ್ಟು ದಿವಸ ಮೂಡಿದ ಹಾಗೆ ಕೋಡು
ನಮ್ಮನೆ ಹಿಂದಿನ ಕಾಡಿನಲ್ಲೂ ಅಮ್ಮನ ತುರುಬಿನಲ್ಲೂ
ಎಂಥೆಂಥಾ ಹೂಗಳು ಅಂತೀರಿ!

ಮೊದಲ ಸಾಲೇ ನಂತರದ ಮೂರು ಸಾಲು ಹೇಳುವುದನ್ನೆಲ್ಲ ಹೇಳಿಬಿಟ್ಟಿದೆ ಅನ್ನುವುದರ ಹೊರತಾಗಿಯೂ ಮೊಗಸಾಲೆ ನಿಮಗಿಷ್ಟವಾದರೆ, ಮೊಗಸಾಲೆಯ ಮೊಗ ಅರಳುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌ !)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X