• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಮಾರಿತನಕ್ಕೊಂದು ಬೆಚ್ಚಗಿನ ಬಿನ್ನಹ

By Staff
|
  • ಜಾನಕಿ
ನಾವೊಂದು ವೇಳೆ ಸೋಮಾರಿಗಳಾಗದೇ ಹೋಗಿದ್ದರೆ ಏನಾಗುತ್ತಿತ್ತು ಊಹಿಸಿಕೊಳ್ಳಿ. ಅಲ್ಲಾವುದ್ದೀನನ ಅದ್ಭುತ ದೀಪದ ಹೊಗೆಯಿಂದ ಬಂದ ಧೂಮಾಸುರನ ಹಾಗೆ ಎಲ್ಲ ಕೆಲಸಗಳನ್ನು ಚಕಚಕನೆ ಮಾಡಿ ಮುಗಿಸಿ ಮತ್ತೇನು ಕೆಲಸವಿದೆ ಅಂತ ಹುಡುಕುತ್ತಾ ಹೊರಟುನಿಲ್ಲುತ್ತಿದ್ದೆವು. ಅದರಿಂದ ಅಂತಿಮವಾಗಿ ಲಾಭ ಆಗುತ್ತಿದ್ದದ್ದು ಬಂಡವಾಳಶಾಹಿಗಳಿಗೆ. ಪ್ರತಿ ಆಫೀಸು ಕೂಡ ಈಗಿರುವ ನೌಕರರಿಗಿಂತ ಅರ್ಧದಷ್ಟು ಸಿಬ್ಬಂದಿಗಳ ನೆರವಿನಿಂದ ನಡೆಯುತ್ತಿತ್ತು. ಹಗಲೂ ಇರುಳೂ ಜನ ಮೈಮುರಿದು ದುಡಿಯುವುದನ್ನು ನೋಡಬಹುದಾಗಿತ್ತು. ಇಸ್ಪೀಟು, ಕುಡಿತ, ಮನರಂಜನೆಯಂಥ ಚಟಗಳಾಗಲೀ ಬೆಳಬೆಳಗ್ಗೆ ಉತ್ತಿಷ್ಠೋತ್ತಿಷ್ಠ ಗರುಡಧ್ವಜ ಎಂಬ ವಿಚಿತ್ರ ಸಂಭ್ರಮದ ಅರಚಾಟವಾಗಲೀ ಇರುತ್ತಿರಲಿಲ್ಲ.

ಆದರೆ ಜನ ನಿಜಕ್ಕೂ ಸುಖವಾಗಿರುತ್ತಿದ್ದರೇ ಅನ್ನುವ ಬಗ್ಗೆ ಅನುಮಾನಗಳಿವೆ. ತುಂಬ ದುಡಿದು, ತುಂಬ ಸಂಪಾದಿಸಿ, ತುಂಬ ಕೂಡಿಟ್ಟ ಮನುಷ್ಯ ಸುಖಿಯಲ್ಲ. ಆತ ಕೊನೆಕೊನೆಗೆ ಕೇವಲ ಕಾವಲುಗಾರ ಆಗಿಬಿಡುತ್ತಾನೆ. ಬಾಲ್ಯದ ಉಡಾಫೆ, ಭಂಡಧೈರ್ಯ, ನಿರ್ಲಕ್ಷ ್ಯ ಮತ್ತು ಇರ್ರೆವರೆನ್ಸು- ಎಲ್ಲವನ್ನೂ ಸಿರಿವಂತಿಕೆ ಪೊರೆ ಕಳಚಿದಂತೆ ಕಳಚುತ್ತದೆ. ಬೆಳೆಯುತ್ತಾ ಹೋದ ಹಾಗೆ ನಾವು ಚಿಕ್ಕವರಾಗುತ್ತಾ ಹೋಗುತ್ತೇವೆ.

The joy of Laziness : Kannada essay by Janakiನಮ್ಮ ಅನಿಸಿಕೆಗಳು ಎಷ್ಟೊಂದು ಸುಳ್ಳಾಗಿರುತ್ತವೆ ಯೋಚಿಸಿ. ಎಂಟೊಂಬ್ಬತ್ತು ವಯಸ್ಸಿನಲ್ಲಿ ನಾವು ಯೋಚಿಸುವ ಧಾಟಿಯೇ ಬೇರೆ. ಹಿರಿಯರ ಆತಂಕ ನಮಗೆ ತಮಾಷೆಯಾಗಿ ಕಾಣಿಸುತ್ತದೆ. ಇಪ್ಪತ್ತೆರಡರ ತನಕವೂ ಇದೇ ಭಾವ ಮುಂದುವರಿಯುತ್ತದೆ. ಮೂವತ್ತೆೈದರ ಹೊತ್ತಿಗೆ ನಿಧಾನವಾಗಿ ಬೆಟ್ಟದ ಮೇಲೆ ಶೇಖರವಾಗುವ ಮೋಡದ ಹಾಗೆ ಚಿಂತೆ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ. ನಲುವತ್ತು ದಾಟುತ್ತಿದ್ದಂತೆ ಚಿಂತೆಯಾಂದೇ ಉಳಿಯುತ್ತದೆ.

ಇದಕ್ಕೂ ಸೋಮಾರಿತನಕ್ಕೂ ಸಂಬಂಧವಿದೆ. ಬಾಲ್ಯದಲ್ಲಿ ಸೋಮಾರಿಗಳು ಖುಷಿ ಕೊಡುತ್ತಾರೆ. ಕೆಲಸ ಮಾಡದೇ ಮನೆಯ ಮೂಲೆಯಲ್ಲಿ ಕೂತು ಬೀಡಿ ಸೇದುವ ಆಳು, ತುಳಸಿಕಟ್ಟೆಯ ಬುಡದಲ್ಲಿ ಬೆಚ್ಚಗೆ ಬಿಸಿಲು ಕಾಯಿಸಿಕೊಳ್ಳುತ್ತಾ ಕುಕ್ಕರುಗಾಲಲ್ಲಿ ಕೂತ ಅಕ್ಕ, ಸೋಮಾರಿತನವೇ ಮೈವೆತ್ತಂತೆ ಮೆಲುಕು ಹಾಕುತ್ತಾ ನಿಂತುಕೊಂಡ ಕಪಿಲೆಹಸು, ಹಾಡುವುದನ್ನೂ ಮರೆತಂತೆ ಚಳಿಗೆ ಮುದುರಿ ಕುಳಿತ ಕೋಗಿಲೆ, ಮೈಯನ್ನು ಬಿಲ್ಲಾಗಿಸಿಕೊಂಡು ಆಕಳಿಸುವ ಬೆಕ್ಕು- ಎಲ್ಲವೂ ಇಷ್ಟವಾಗುತ್ತದೆ. ಕ್ರಮೇಣ ಇವನ್ನೆಲ್ಲ ನೋಡುವ ಕಣ್ಣಿಗೆ ಪೊರೆ ಬರುತ್ತದೆ. ಸೌಂದರ್ಯದ ಕಲ್ಪನೆ ಕೂಡ ಬದಲಾಗುತ್ತದೆ. ಬಾಲ್ಯದಲ್ಲಿ ಯಾವುದು ಸುಂದರವಾಗಿ ಕಂಡಿತ್ತೋ ಅದು ಮಾಸಲಾಗುತ್ತಾ ಹೋಗುತ್ತದೆ. ಹಳೆಯ ಅಂಗಿಯ ಹಾಗೆ ಬೇಸರ ಹುಟ್ಟಿಸುತ್ತದೆ.

ಸೋಮಾರಿತನ ನಮ್ಮೆಲ್ಲ ಚಿಂತೆಗಳಿಗೆ, ಸಮಸ್ಯೆಗಳಿಗೆ, ಆತಂಕಗಳಿಗೆ ಪರಿಹಾರ ಅನ್ನುವುದರ ಬಗ್ಗೆ ಯಾರೂ ಅನುಮಾನ ಇಟ್ಟುಕೊಳ್ಳಬೇಕಿಲ್ಲ. ತುಂಬ ಚುರುಕಾಗಿ, ಇಪ್ಪತ್ತನಾಲ್ಕು ಗಂಟೆಗಳೂ ಸಾಲದೆಂಬಂತೆ ಕೆಲಸ ಮಾಡುವ ವ್ಯಕ್ತಿ ಸದಾ ಚಿಂತಾಕ್ರಾಂತನಾಗಿಯೇ ಓಡಾಡುತ್ತಿರುತ್ತಾನೆ. ಅಂಥ ಚುರುಕುಜೀವಿಗಳ ದುರದೃಷ್ಟವೆಂದರೆ ಅವರು ಎಷ್ಟು ಕೆಲಸ ಮಾಡಿದರೂ ಮುಗಿಯದಷ್ಟು ಕೆಲಸ ಇರುತ್ತದೆ ಮತ್ತು ಆ ಕೆಲಸಗಳನ್ನು ಅವರು ಮಾಡದೇ ಹೋದರೂ ಜಗತ್ತಿನಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ! ಅದು ಗೊತ್ತಿಲ್ಲದವರಂತೆ ಅವರು ದುಡಿಯುತ್ತಲೇ ಇರುತ್ತಾರೆ.

ನಾಳೆ ಮಾಡುವುದನ್ನು ಇಂದೇ ಮಾಡು; ಇಂದು ಮಾಡುವುದನ್ನು ಈಗಲೇ ಮಾಡು ಅನ್ನುವ ನಾಣ್ಣುಡಿ ಮಾಲೀಕರ ಮಗಳನ್ನು ಹಾರಿಸಿಕೊಂಡು ಹೋಗುವಂಥ ರೋಚಕ ಕ್ರಿಯೆಗಷ್ಟೇ ಹೊಂದಿಕೊಳ್ಳುತ್ತದೆ. ಉಳಿದಂತೆ ಅದೊಂದು ಅಸ್ಪಷ್ಟ ಹೇಳಿಕೆ. ನಾಳೆ ಮಾಡುವುದನ್ನು ಇಂದೇ ಮಾಡಿದರೆ, ನಾಳೆ ಏನು ಮಾಡೋಣ ಹೇಳಿ ಅಂತ ಇಂಥ ಮಾತುಗಳನ್ನು ಹೇಳುವವರನ್ನು ನಿಲ್ಲಿಸಿ ಕೇಳಬೇಕು. ಹೀಗೆ ನಾಳೆಯದನ್ನು ಇಂದೇ ಮಾಡುತ್ತಾ ಹೋದರೆ ಅರುವತ್ತು ವರುಷ ಹತ್ತೊಂಬತ್ತು ದಿನ ಬದುಕಿರುವವನು ಅರುವತ್ತು ವರುಷ ಇಪ್ಪತ್ತು ದಿನದ ಕೆಲಸ ಮಾಡಿರುತ್ತಾನೆ. ಅಲ್ಲಿಗೆ ಒಂದು ದಿನದ ಸಂಬಳ ಖೋತಾ!

ಸೋಮಾರಿತನ ನಮ್ಮನ್ನು ಹೇಗೆ ಬಿಟ್ಟು ಹೋಗುತ್ತದೆ ಅನ್ನುವುದನ್ನು ನೆನೆದರೆ ಭಯವಾಗುತ್ತದೆ. ಮುಗ್ಧತೆಯ ಹಾಗೆ, ಬೆರಗಿನ ಹಾಗೆ, ಸೋಮಾರಿತನ ಕೂಡ ಹುಟ್ಟಿನಿಂದಲೇ ಪಡಕೊಂಡು ಬರುವ ಒಂದು ಮೂಲಗುಣ. ಅದನ್ನು ಉಳಿಸಿಕೊಳ್ಳದೇ ಹೋದರೆ ಕಷ್ಟಪಡಬೇಕಾಗುತ್ತದೆ. ಸೋಮಾರಿತನ ಅಭ್ಯಾಸವಾಗದೇ ಹೋದವರು ಕೊನೆಗೇ ಏನೇನೋ ಮಾಡಲು ಹೊರಡುತ್ತಾರೆ. ಅಗತ್ಯವಿಲ್ಲದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ದುಡಿಮೆ ನಮ್ಮನ್ನು ಚಿರಾಯುಗಳನ್ನಾಗಿಸುತ್ತದೆ ಎಂದು ನಂಬುತ್ತಾರೆ.

ಅದೆಲ್ಲ ಬರೀ ಬೊಗಳೆ. ಕೆಲಸ ಮಾಡಬೇಕು ಅನ್ನುವುದು ನಿಜ; ಆದರೆ ಎಷ್ಟು ಮಾಡಬೇಕು ಅನ್ನುವುದು ಗೊತ್ತಿರಬೇಕು. ಕೆಲಸ ಮಾಡುವುದರಲ್ಲೇ ಸುಖ ಕಾಣುತ್ತೇನೆ ಅನ್ನುವುದು ಮತ್ತೊಂದು ಆತ್ಮವಂಚನೆ. ಯಾವುದೇ ಕೆಲಸವಾದರೂ ಕ್ರಮೇಣ ಯಾಂತ್ರಿಕವಾಗುತ್ತದೆ. ಯಾಂತ್ರಿಕವಾಗುತ್ತಾ ಹೋದ ಹಾಗೆ ಅದು ಮಾಂತ್ರಿಕತೆ ಕಳೆದುಕೊಳ್ಳುತ್ತದೆ. ಮಾಂತ್ರಿಕತೆ ಕಳಕೊಂಡ ಮೇಲೂ ಅದನ್ನು ಮಾಡುತ್ತಾ ಸುಖ ಕಂಡುಕೊಳ್ಳುವುದು ಆಗದ ಮಾತು. ಆದರೂ ಜನ ಕೆಲಸ ಮಾಡುತ್ತಲೇ ಇರುತ್ತಾರೆ! ಯಾಕೆಂದರೆ ದುಡಿಯುತ್ತಾ ದುಡಿಯುತ್ತಾ ಬೇರೆ ಚಿಂತೆಗಳನ್ನು ನಾವು ಮರೆಯುತ್ತೇವೆ. ಅದು ನಮ್ಮನ್ನು ಅಷ್ಟೂ ಹೊತ್ತು ಒಂದು ಕಡೆ ಕಟ್ಟಿಹಾಕುತ್ತದೆ. ವಾಸ್ತವದಿಂದ ಪಲಾಯನ ಮಾಡುವುದಕ್ಕೆ ಅದು ನೆರವಾಗುತ್ತದೆ.

***

ಏನು ಮಾಡಬೇಕೆಂದು ಹೇಳುವುದಕ್ಕೆ ಹೆಂಡತಿ, ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿ ಮುಗಿಸುವುದಕ್ಕೊಬ್ಬ ಸೇವಕ ಇದ್ದರೆ ಬಾಳು ಬಂಗಾರ ಅನ್ನುತ್ತಾರೆ. ನಮ್ಮಲ್ಲಿ ಅನೇಕರ ಕಷ್ಟ ಇದು; ಏನು ಮಾಡಬೇಕೆಂದು ಹೇಳುವ ಹೆಂಡತಿ ಇರುತ್ತಾಳೆ. ಅದನ್ನು ಚಾಚೂ ತಪ್ಪದೆ ಮಾಡುವ ಸೇವಕ ಇರುವುದಿಲ್ಲ!

ಸೋಮಾರಿತನ ಎಂಬುದು ಬೆಂಗಳೂರಿಗೆ ಹೇಳಿಮಾಡಿಸಿದ್ದಲ್ಲ. ಈ ಊರಿನ ಗುಣವೇ ಅಂಥದ್ದು. ಇದು ಸುಮ್ಮನೆ ನಿಂತವರನ್ನೂ ತಳ್ಳಿಕೊಂಡು ಹೋಗುತ್ತದೆ. ಹೀಗಾಗಿ ಚಲನೆ ಅನಿವಾರ್ಯ. ಸೋಮಾರಿಗಳಿಗಿದು ತಕ್ಕ ನಾಡಲ್ಲ.

ನೀವು ನಿಜಕ್ಕೂ ಸೋಮಾರಿಗಳಾಗಬೇಕಿದ್ದರೆ ತೀರ್ಥಹಳ್ಳಿ, ಕಳಸ, ಸಕಲೇಶಪುರ, ಕೊಡಗಿನಂಥ ಊರುಗಳಲ್ಲಿರಬೇಕು. ಅಲ್ಲಿಯ ಸೋಮಾರಿತನದ ಸೊಗಡೇ ಬೇರೆ. ಬೆಳಗ್ಗೆ ಸೂರ್ಯ ಮೂಡುವುದು ಕೂಡ ತಡವಾಗಿಯೇ. ಮೈಮುರಿದೆದ್ದು ಮಂಜು ಕರಗುವುದೂ ತಡವಾಗಿಯೇ. ಹಾಗೇ ಕೊಂಚ ತಡವಾಗಿಯೇ ಬೆಳಕು ಬೇಟೆಗಾರ ಬಲೆಬೀಸುತ್ತಾನೆ. ಹಕ್ಕಿಗಳೂ ಸ್ಲೋಮೋಷನ್‌ನಲ್ಲಿ ಹಾರುತ್ತವೆ.

ಸೋಮಾರಿತನದ ಸೊಗಡು ಹೇಳಿ ತಿಳಿಯುವಂಥದ್ದಲ್ಲ. ನಿಮಗೆ ಪುರುಸೊತ್ತಿದ್ದರೆ ಸುಮ್ಮನೆ ಕಣ್ಣಮುಂದೆ ತಂದುಕೊಳ್ಳಿ;

ಆಗುಂಬೆಯಲ್ಲೊಂದು ಮನೆ. ರಾತ್ರಿ ಹೊಗೆಯಾಡುವ ಬಿಸಿಬಿಸಿ ಅನ್ನಕ್ಕೆ ಆಗಷ್ಟೇ ಕುದಿಸಿ ಇಳಿಸಿದ ಹಾಲು ಮತ್ತು ಎರಡು ಹನಿ ಮಜ್ಜಿಗೆ ಬೆರೆಸಿಕೊಂಡು, ಕರಿದ ಮೆಣಸಿನ ಹಪ್ಪಳ, ಮೆಂತ್ಯಹಿಟ್ಟಿನ ಮೆಣಸಿನಕಾಯಿ ನೆಂಚಿಕೊಂಡು ಊಟ ಮಾಡಿ, ತೊಳೆ ಬಿಡಿಸಿಟ್ಟ ಕಿತ್ತಳೆ ಹಣ್ಣನ್ನು ನಾರು ಸಹಿತ ತಿಂದು ಒಂದು ಗ್ಲಾಸು ಬಿಸಿಹಾಲು ಕುಡಿದು ಬೆಚ್ಚಗೆ ಹೊದ್ದು ಮಲಗುತ್ತೀರಿ. ಬೆಳಗ್ಗೆ ಎದ್ದಾಗ ಇನ್ನೂ ಒಂಬತ್ತು ಗಂಟೆಯ ನಸುನಸುಕು.

ಹಾಸಿಗೆಯಲ್ಲೇ ಕುಳಿತು ಇಪ್ಪತ್ತು ಪರ್ಸೆಂಟು ಚಿಕೋರಿ ಬೆರೆಸಿದ ಕಾಫಿ ಕುಡಿದು ಹೊರಬಂದರೆ ದೂರದಲ್ಲಿ ಧವಳಕೇಶಿ ಕಾಡು. ಕಾಡಿನ ನಡುವೆ ಅನಂತಶಯನ ಕಾಲುಹಾದಿ. ಕೊರೆದಿಟ್ಟಂತೆ ಕೇಳುವ ಚಿಲಿಪಿಲಿ. ನಿಧಾನಕ್ಕೆ ಮೈಬೆಚ್ಚಗಾಗಿಸುವ ಎಳೆಬಿಸಿಲು. ಮಂಜಿನ ಹನಿ ತೊಟ್ಟಿಕ್ಕುತ್ತಾ ನಿಂತ ಮಾವಿನ ಮರ, ನೆಲದಲ್ಲಿ ರಾತ್ರಿಯೆಲ್ಲ ಕಷ್ಟಪಟ್ಟು ಜೇಡ ಕಟ್ಟಿದ ಸೈನಿಕರ ಡೇರೆಗಳಂತೆ ಕಾಣುವ ಜೇಡರಬಲೆಯ ಮೇಲೆ ಮಂಜು!

ಆ ಕ್ಷಣ ಯಾಕೆ ಚಿರಂತನ ಆಗಬಾರದು!

ಬೆಂಗಳೂರು ಎಂಬ ಈ ಊರು ಯಾಕಾದರೂ ಇರಬೇಕು!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more