• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತರಾಗುವ ಹುಮ್ಮಸ್ಸಿನ ಹುಡುಗ ಹುಡುಗಿಯರಿಗೆ...

By Staff
|
  • ಜಾನಕಿ

jaanaki@india.com

ರಾತ್ರಿ ಹತ್ತೂವರೆ ಗಂಟೆಗೆ ಒಬ್ಬ ರಾಜಕಾರಣಿ ತೀರಿಕೊಳ್ಳುತ್ತಾನೆ. ಆಗ ಪತ್ರಿಕಾ ಕಚೇರಿ ಗಾಬರಿಯಾಗುವುದಿಲ್ಲ. ರಾಜಕಾರಣಿಗಳ ಬಗ್ಗೆ ಗೊತ್ತಿರುವ ಸಾಕಷ್ಟು ಹಿರಿಯ ವರದಿಗಾರರು ಪ್ರತಿಯಾಂದು ಪತ್ರಿಕಾ ಕಚೇರಿಯಲ್ಲೂ ಇರುತ್ತಾರೆ. ಅಲ್ಲದೇ ಒಬ್ಬ ರಾಜಕಾರಣಿಯ ಸಾವು ಯಾರ ಜೀವನವನ್ನೂ ಅಷ್ಟಾಗಿ ಕಲಕುವುದಿಲ್ಲ. ಅವರ ನಾಲ್ಕೈದು ಫೋಟೋಗಳನ್ನೂ ಹಿಂಬಾಲಕರ ಸಂತಾಪದ ನುಡಿಗಳನ್ನೂ ಪ್ರಕಟಿಸಿದರೆ ಬದುಕಿದವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಹಾಗೇ ಒಬ್ಬ ನಟ ತೀರಿಕೊಂಡಾಗಲೂ ಅಂಥ ದೊಡ್ಡ ಸಮಸ್ಯೆ ಕಾಡುವುದಿಲ್ಲ. ಸಿನಿಮಾ ವರದಿಗಾರರು ಆ ನಟನನ್ನು ಸಾಕಷ್ಟು ಸಾರಿ ಭೇಟಿಯಾಗಿರುತ್ತಾರೆ. ತೀರಿಕೊಂಡ ನಟ ದಡ್ಡನಾಗಿದ್ದರೆ ನಾಲ್ಕು ಸಾಲಿನ ನಿರ್ಲಿಪ್ತ ವರದಿ ಬರೆದು ಸುಮ್ಮನಾಗುತ್ತಾರೆ. ತುಂಬ ತೀವ್ರತೆಯಿಂದ ನಟಿಸುತ್ತಿದ್ದರೆ ಅಂತಾರಾಳದಿಂದ ಮೊಗೆದು ತೆಗೆದು ನಾಲ್ಕಾರು ಸಾಲು ಬರೆದು ಮನಸ್ಸು ಭಾರ ಮಾಡಿಕೊಂಡು ಮನೆಗೆ ಹೋಗುತ್ತಾರೆ.

ಆದರೆ ರಾಜಕಾರಣಿ ಅಥವಾ ಸಿನಿಮಾ ನಟ ಅಲ್ಲದ ವ್ಯಕ್ತಿ ತೀರಿಕೊಂಡಾಗ ಸಮಸ್ಯೆ ಎದುರಾಗುತ್ತದೆ. ಉದಾಹರಣೆಗೆ ನಿಟ್ಟೂರು, ಕೆಎಸ್‌ನ, ಶಂಕರ ಮೊಕಾಶಿ ಪುಣೇಕರ.

ನಿಟ್ಟೂರು ಶ್ರೀನಿವಾಸರಾಯರ ಬಗ್ಗೆ ಒಂದು ಆತ್ಮೀಯವಾದ, ಆಪ್ತವಾದ ಅಬಿಚುವರಿ ಎಲ್ಲೂ ಬರಲಿಲ್ಲ. ಶಂಕರ ಮೊಕಾಶಿ ಪುಣೇಕರರ ಕುರಿತು ಒಂದೊ ಎರಡೋ ಪತ್ರಿಕೆಗಳನ್ನು ಬಿಟ್ಟರೆ ಮತ್ತೆಲ್ಲೂ ಒಳನೋಟಗಳಿರುವ ವರದಿಗಳು ಪ್ರಕಟವಾಗಲಿಲ್ಲ. ತಾತ್ಪರ್ಯ ಇಷ್ಟೇ; ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ರಂಗಭೂಮಿಯ ಪ್ರತಿಭಾವಂತರ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ.

Todays Journalism...ಸತ್ತವರನ್ನು ಬಿಟ್ಟೇಬಿಡೋಣ. ಹೊಸದಾಗಿ ಬಂದಿರುವ ಎಷ್ಟು ಪತ್ರಕರ್ತರಿಗೆ ಬೆಂಗಳೂರು ಸಮಗ್ರವಾಗಿ ಗೊತ್ತಿದೆ ಹೇಳಿ? ಜಯನಗರದ ಮೇಲೊಂದು ಪ್ರಬಂಧ ಬರೆಯಿರಿ ಅಂದರೆ ಕುಳಿತಲ್ಲೇ ಕುಳಿತು ಮುನ್ನೂರು ವಾಕ್ಯಗಳ ಒಂದು ಫೀಚರ್‌ ತಯಾರಿಸಲಿ ನೋಡೋಣ. ಗಾಂಧೀಬಜಾರಿನ ಬೀದಿಗಳಲ್ಲಿ ಕನ್ನಡ ಸಾಹಿತ್ಯ ಮೆರವಣಿಗೆ ಹೋದ ಸಂಗತಿ ಈಗ ಬರೆಯುತ್ತಿರುವ ಎಷ್ಟು ಮಂದಿಗೆ ಗೊತ್ತಿದೆ?

ಆದರೆ ಒಂದು ತಲೆಮಾರಿನಷ್ಟು ಹಿಂದಕ್ಕೆ ಹೋಗಿ ನೋಡಿ. ಆಗಿನ ಪತ್ರಕರ್ತರಿಗೆ ವೈವಿಧ್ಯಮಯ ಆಸಕ್ತಿಗಳಿದ್ದವು. ಅವರಿಗೆ ಪತ್ರಿಕೋದ್ಯಮವೂ ಬದುಕೂ ಒಂದೇ ಆಗಿತ್ತು. ಅವರು ಈಗಿನ ಹುಡುಗರ ಹಾಗೆ ಪತ್ರಿಕೆ ಮುಗಿಸಿ ನೇರವಾಗಿ ಮನೆಗೆ ಹೋಗುತ್ತಿರಲಿಲ್ಲ. ಎಲ್ಲರೂ ಒಂದೆಡೆ ಸೇರಿ ಹರಟುತ್ತಿದ್ದರು. ಆ ಹರಟೆಯ ಕೇಂದ್ರವಾಗಿ ಹಿರಿಯ ಪತ್ರಕರ್ತರೊಬ್ಬರು ಇರುತ್ತಿದ್ದರು. ಅವರು ತಮ್ಮ ಸಂಪರ್ಕಕ್ಕೆ ಬಂದ ಪ್ರತಿಭಾವಂತರ, ರಾಜಕಾರಣಿಗಳ, ನಟರ, ಸಾಹಿತಿಗಳ ಕತೆಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಈ ಸರಸ ಮಾತುಕತೆಯಲ್ಲೇ ಅನೇಕ ವ್ಯಕ್ತಿಗಳ ಬಗ್ಗೆ ಒಂದು ಒಳ್ಳೆಯ ಒಳನೋಟ ಸಿಕ್ಕಿಹೋಗುತ್ತಿತ್ತು. ಅಲ್ಲಿ ಮನರಂಜನೆಯ ಜೊತೆಗೆ ಪತ್ರಿಕೋದ್ಯಮದ ಪಾಠವೂ ನಡೆದುಹೋಗುತ್ತಿತ್ತು.

ಅಂಥ ಹಿರಿಯ ಪತ್ರಕರ್ತರ ಜೊತೆಗೆ ಕೂರುವ ಹುಡುಗರಂತೂ ಈಗ ಇಲ್ಲವೇ ಇಲ್ಲ. ಪತ್ರಿಕೋದ್ಯಮ ಎಂದರೆ ಒಂಬತ್ತರಿಂದ ಐದರ ತನಕ ಮಾಡಿ ಮುಗಿಸುವ ಕೆಲಸ ಅನ್ನುವ ಭಾವನೆ ವ್ಯಾಪಕವಾಗುತ್ತಿದೆ. ಏನೋ ಒಂದು ವರದಿ ಮಾಡಿ ಹೋದರಾಯಿತು ಅನ್ನುವುದಾಗಿಬಿಟ್ಟಿದೆ. ಅದಕ್ಕಿಂತ ಹೆಚ್ಚಾಗಿ ಜನ ಮೆಚ್ಚುವ ವರದಿ ಅನ್ನುವ ಹೊಸತೊಂದು ವಿಭಾಗ ಸೃಷ್ಟಿಯಾಗಿದೆ.

***

ಇವತ್ತು ಇಂಗ್ಲಿಷ್‌ ಪತ್ರಿಕೆಗಳನ್ನು ತೆರೆದು ನೋಡಿ. ಅಲ್ಲಿ ಬರೇ ಮಾಹಿತಿಗಳಷ್ಟೇ ಇರುತ್ತವೆ. ಒಳನೋಟಗಳಾಗಲೀ ವಿಶ್ಲೇಷಣೆಗಳಾಗಲೀ ನಿಮಗೆ ಕಾಣಿಸದು. ಹಾಗೇ ತಾವು ಯಾರ ಬಗ್ಗೆ ಬರೆದಿರುತ್ತೇವೋ ಅವರ ಬಗ್ಗೆ ಬರೆದವರಿಗೆ ಕೇವಲ ಮಾಹಿತಿಯಷ್ಟೇ ಇರುತ್ತದೆ.

ಹೀಗೆ ಅವಜ್ಞತೆಗೆ ಗುರಿಯಾದ ಎರಡು ವಿಭಾಗಗಳೆಂದರೆ ಕಾವ್ಯ ಮತ್ತು ಕಲೆ. ಇವತ್ತಿಗೂ ಯಾವುದು ಒಳ್ಳೆಯ ಕಾವ್ಯ ಅನ್ನುವುದನ್ನು ನಿರ್ಧರಿಸುವ ಶಕ್ತಿ ಯಾರಿಗೂ ಇಲ್ಲ. ಯಾಕೆಂದರೆ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡುವವನು ಕನ್ನಡ ಸಾಹಿತ್ಯವನ್ನು ಓದಿ ಕೊಂಡವನಾಗಿರುವುದಿಲ್ಲ. ಇಂಗ್ಲಿಷ್‌ ಪತ್ರಿಕೆಗಳವರ ಪಾಡು ಅದಕ್ಕಿಂತ ನಾಚಿಕೆಗೇಡು. ಅವರಿಗೆ ಇಂಗ್ಲಿಷ್‌ ಸಾಹಿತ್ಯವೂ ಗೊತ್ತಿರುವುದಿಲ್ಲ , ಕನ್ನಡವೂ ಗೊತ್ತಿರುವುದಿಲ್ಲ. ಅವರೊಂಥರ ಟೀವಿ ನಿರೂಪಕರಿದ್ದ ಹಾಗೆ. ‘ಉದಯ ಟೀವಿಯೆಂದರೆ ನನಗಿಷ್ಟ ; ಕರೆಂಟಿಲ್ಲದಿದ್ದರೆ ನೋಡಲು ಕಷ್ಟ ; ನೋಡದಿದ್ದರೆ ನಮಗಾಗುವುದು ನಷ್ಟ’ ಎಂದು ವೀಕ್ಷಕರು ಬರೆದು ಕಳುಹಿಸುವ ಪತ್ರದ ಸಾಲುಗಳನ್ನು ‘ನೀವು ತುಂಬ ಚೆನ್ನಾಗಿ ಕವಿತೆ ಬರೀತೀರಿ. ನಿಮಗೆ ಸಾಹಿತ್ಯ ಲೋಕದಲ್ಲಿ ಅಪಾರವಾದ ಜ್ಞಾನ ಇದೆ. ನಿಮಗೆ ನಮ್ಮ ನಮಸ್ಕಾರ’ ಎಂದು ಟೀವಿ ನಿರೂಪಕಿ ಹೇಳುವ ಹಾಗೆ ಪತ್ರಿಕೆಗಳೂ ವರ್ತಿಸೋದಕ್ಕೆ ಆರಂಭಿಸಿವೆ!

ಕಲೆಯ ವಿಚಾರದಲ್ಲಂತೂ ಎಲ್ಲರೂ ಅನಕ್ಷರಸ್ತರೇ. ಭಾರತೀಯ ಚಿತ್ರಕಲೆ ಬೆಳೆದು ಬಂದ ಹಾದಿ, ಯುರೋಪಿಯನ್‌ ಚಿತ್ರಕಲೆಯ ಇತಿಹಾಸಗಳ ಮಾತು ಬಿಡಿ, ಎರಡು ಪೇಂಟಿಂಗ್‌ಗಳನ್ನು ಮುಂದಿಟ್ಟರೆ ಅವುಗಳ ನಡುವಿನ ವ್ಯತ್ಯಾಸ ಗುರುತಿಸಲಾರರು ಕೂಡ. ಯಾವುದು ವರ್ಣರಂಜಿತವಾಗಿದೆಯೋ ಅದು ಒಳ್ಳೆಯ ಕಲೆ. ಯಾರು ಕಡಿಮೆ ಬಟ್ಟೆ ತೊಟ್ಟಿದ್ದಾರೋ ಅವರು ಮುಖಪುಟದಲ್ಲಿ ಬರಬೇಕು ಎಂಬಿತ್ಯಾದಿ ಸೂತ್ರಗಳೇ ಇವತ್ತಿನ ಪತ್ರಿಕೋದ್ಯಮವನ್ನು ಆಳುತ್ತಿವೆ.

***

ಹಿಂದೆ ಹುಬ್ಬಳ್ಳಿಯ ವರದಿಗಾರರೆಲ್ಲ ರಾತ್ರಿ ಕೂತು ಬೇಂದ್ರೆ ಮತ್ತು ಶಂಬಾಜೋಷಿ ನಡುವಣ ಜಗಳದ ಬಗ್ಗೆ ಮಾತಾಡುತ್ತಿದ್ದರು. ಈಶ್ವರ ಸಣಕಲ್ಲರಿಗೆ ಸನ್ಮಾನ ಮಾಡಲು ಹೋದ ಬೇಂದ್ರೆ ‘ನಾನು ಸನ್ಮಾನ ಮಾಡಿದರ ಸಣಕಲ್ಲ ದೊಡ್ಡಕಲ್ಲ ಆಗ್ತಾನೇನು’ ಎಂದು ಗೇಲಿ ಮಾಡಿದ್ದನ್ನು ಹೇಳಿಕೊಳ್ಳುತ್ತಿದ್ದರು. ಇಲ್ಲೂ ಅಷ್ಟೇ, ವೈಯನ್ಕೆ, ಸದಾಶಿವ, ಟೀಯೆಸ್ಸಾರ್‌, ವೈಕುಂಠರಾಜು, ಶ್ರೀನಿವಾಸರಾವ್‌ ಮುಂತಾದವರೆಲ್ಲ ಒಟ್ಟಾಗಿ ಕೂತು ರಾಮಾನುಜನ್‌ ಕಾವ್ಯದ ಬಗ್ಗೆ ಮಾತಾಡುತ್ತಿದ್ದರು. ಸಾಹಿತಿಗಳ ದೊಡ್ಡತನ ಸಣ್ಣತನಗಳೆಲ್ಲ ಮಾತಲ್ಲಿ ಬಂದುಹೋಗುತ್ತಿದ್ದವು. ಯಾರೋ ‘ನಿಸಾರ್‌ ಈಸ್‌ ನಾಟ್‌ ಎ ಗುಡ್‌ ಪೊಯೆಟ್‌’ ಅಂದಾಗ ವೈಯನ್ಕೆ ‘ಗುಡ್‌ ಈಸ್‌ ಅನ್‌ನೆಸಸರಿ’ ಅಂದಿದ್ದಕ್ಕೆ ನಿಸಾರ್‌ ಸಿಟ್ಟಾದ ಕತೆ ಹೇಳುತ್ತಿದ್ದರು. ರಾಮಚಂದ್ರ ಶರ್ಮ ಕ್ರಿಸ್ತಪೂರ್ವ ವರ್ಮ ಎಂದಿದ್ದನ್ನೂ ಪುತಿನ ಅಂದರೆ ಪುಟ ತಿರುಗಿಸಿ ನಡಿ ಅಂದಿದ್ದೂ ಸುದ್ದಿಯಾಗುತ್ತಿತ್ತು.

ಈಗ ಸಾಹಿತಿಗಳು ಮಾತಾಗುತ್ತಿಲ್ಲ , ಕತೆಯಾಗುತ್ತಿಲ್ಲ , ಹೀಗೆ ತಮಾಷೆಯಾಗಿ ಹರಟೆಯಲ್ಲಿ ಬಂದು ಹೋಗುತ್ತಿಲ್ಲ. ಪತ್ರಕರ್ತರು ದ್ವೀಪಗಳಾದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.

ಕನ್ನಡದ ಒಳ್ಳೆಯ ಮತ್ತು ದೊಡ್ಡ ದೊಡ್ಡ ಪತ್ರಿಕೆಗಳನ್ನು ಕಟ್ಟಿದ ಪತ್ರಕರ್ತರು ಯಾರೂ ಪತ್ರಿಕೋದ್ಯಮದಲ್ಲಿ ಪದವಿ ಗಳಿಸಿದವರೇ ಅಲ್ಲ. ಟೀಯೆಸ್ಸಾರ್‌ರಿಂದ ಖಾದ್ರಿ ಶಾಮಣ್ಣರ ತನಕ. ಲಂಕೇಶರಿಂದ ಹಿಡಿದು ವೈಕುಂಠರಾಜು ತನಕ ಯಾರೂ ಪತ್ರಿಕೋದ್ಯಮ ಓದಲಿಲ್ಲ. ಆದರೆ ಪ್ರತಿಯಾಬ್ಬರೂ ಒಂದೊಂದು ಯೂನಿವರ್ಸಿಟಿಯೇ ಆಗಿದ್ದರು.

***

ಪತ್ರಕರ್ತರಾಗುವ ಮುನ್ನ ಇಡೀ ಜಗತ್ತನ್ನು ನಿಮ್ಮೊಳಗೆ ಆವಾಹಿಸಿಕೊಳ್ಳಿ. ಇಡೀ ಜಗತ್ತಿನ ಗೊಡವೆ ಮರೆತುಬಿಡಿ. ಮನೆ ಗೆಸ್ಟ್‌ಹೌಸ್‌ ಆಗಲಿ!

ಅದು ಸಾಧ್ಯವಾಗದೆ ಹೋದಾಗ ಪತ್ರಕರ್ತರಾಗುವುದಿಲ್ಲ, ಗುಮಾಸ್ತರಾಗುತ್ತೀರಿ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more