• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ಯಹರಿಶ್ಚಂದ್ರ ಮತ್ತು ಪ್ರಜಾಪ್ರಭುತ್ವ !

By Staff
|
  • ಜಾನಕಿ
ನಮ್ಮ ಸಂವೇದನೆಗಳೇ ವಿಚಿತ್ರ.

ನಮ್ಮ ಆಶೆಗಳೂ ವಿಚಿತ್ರ, ಅನುಕಂಪ ಎಲ್ಲಕ್ಕಿಂತ ವಿಚಿತ್ರ. ಯಾವ ಕಾರಣಕ್ಕೆ ನಮ್ಮಲ್ಲಿ ಸಿಟ್ಟು, ಅಸಹನೆ ವ್ಯಕ್ತವಾಗುತ್ತದೋ ಅದೇ ಕಾರಣಕ್ಕೆ ನಮ್ಮಲ್ಲಿ ಅನುಕಂಪವೂ ಹುಟ್ಟುತ್ತದೆ.

ಹಾಗಿದ್ದರೆ ನಾವೆಲ್ಲ ಬಯಸುವುದು ನಿರಂತರ ಬದಲಾವಣೆಯನ್ನಾ? ನೋಡನೋಡುತ್ತಿದ್ದಂತೆ ಎಲ್ಲವೂ ಬದಲಾಗಬೇಕೆಂಬುದೇ ಬಾಳಿನ ಗುರಿಯಾ? ಬೀಜ ಸಸಿಯಾಗಿ ಗಿಡವಾಗಿ ಮರವಾಗಿ ಎಲೆಯುದುರಿ ಚಿಗುರಿ ಮತ್ತೆ ವಸಂತನ ಪುಳಕ ತನ್ನೊಳಗೆ ರೂಪಿಸಿದ ಹೊಸ ಬದುಕನ್ನು ಪಲ್ಲವಿಸಿದ್ದೇ ನಮ್ಮನ್ನು ಸೆಳೆಯುತ್ತದೆಯೋ? ಹರಿವ ನದಿ ಒಮ್ಮೆ ತುಂಬಿತುಳುಕಿ ಮತ್ತೊಮ್ಮೆ ನೀರಗೆರೆಯಾಗಿ ತಳದೊಳೆಲ್ಲೋ ತಳುವಿ ಗುಪ್ತಗಾಮಿನಿಯಾಗುವ ವೈಚಿತ್ರವೇ ನಮ್ಮನ್ನು ಬೆರಗುಗೊಳಿಸುತ್ತದೆಯಾ?

Dr. Rajkumar in Sathya Harischandra Kannada filmಗೊತ್ತಿಲ್ಲ, ಆದರೆ ಈ ಹಾಡು ಕೇಳಿದಾಗ ಹಾಗನ್ನಿಸುತ್ತದೆ. ಸತ್ಯ ಹರಿಶ್ಚಂದ್ರ ಚಿತ್ರದ ಈ ಹಾಡು ಆ ಕಾಲಕ್ಕೂ ಜನಪ್ರಿಯ. ಈಗಲೂ ಕೇಳಿದರೆ ಕಲಿಯುವ ದ್ವಾಪರವಾಗುತ್ತದೆ! ಅಂದಹಾಗೆ ಹರಿಶ್ಚಂದ್ರ ಯಾವ ಯುಗದವನು? ದ್ವಾಪರದವನೇ?

ಹಾಡು ಕೇಳಿ;

ವಿಧಿ ವಿಪರೀತ ವಿಧಿ ಆಘಾತ।

ವಿಧಿ ವಿಲಾಸವೆನೆ ಇದೇನ ಹಾ।।

ಹಂಸತೂಲಿಕಾ ತಲ್ಪದಲ್ಲಿ ಹಾಯಿಗಾನದ ಇಂಪಿನಲ್ಲಿ।

ಪವಡಿಸುವ ಯುವರಾಜನಿಂದು ಮಲಗಿರುವನೇ ನೆಲದ ಮೇಲೆ।।

ಈ ನಾಲ್ಕು ಸಾಲುಗಳನ್ನಿಟ್ಟುಕೊಂಡು ನೋಡಿ. ಈ ಜಗತ್ತಿನ ಅತ್ಯುತ್ತಮ ಕತೆ, ಅತ್ಯುತ್ತಮ ಕಾವ್ಯ ಯಾವುದೆಂದು ಹೊಳೆಯುತ್ತದೆ. ಸತ್ಯಹರಿಶ್ಚಂದ್ರ ದೊಡ್ಡ ರಾಜನಾಗಿದ್ದವನು. ಅವನ ಮಡದಿ ಚಂದ್ರಮತಿ ಸುಖದ ಸುಪ್ಪತ್ತಿಗೆಯಲ್ಲಿ ಪವಡಿಸಿದ್ದವಳು. ಅವನ ಮಗ ಲೋಹಿತಾಶ್ವ, ಮೆತ್ತೆಯ ಮೇಲೆ ನಡೆದಾಡುತ್ತಿದ್ದವನು.

ಆದರೆ ವಿಧಿಯಾಘಾತಕ್ಕೆ ಸಿಕ್ಕಿ ಅವನು ಕಾಡಿಗೆ ಬಂದಿದ್ದಾನೆ. ಚಂದ್ರಮತಿ ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುತ್ತಿದ್ದಾಳೆ. ಹರಿಶ್ಚಂದ್ರ ಸ್ಮಶಾನದ ಕಾವಲುಗಾರನಾಗಿದ್ದಾನೆ. ಈ ದುಃಖದ ಕತೆಯನ್ನು ಕೇಳುತ್ತಾ ಜನಪದ ಕಣ್ಣೀರು ಸುರಿಸುತ್ತದೆ.

ಯಾಕೆ? ಇಲ್ಲಿ ಅವರನ್ನೆಲ್ಲ ಸೆಳೆದ ಅಂಶ ಯಾವುದು? ಹಂಸತೂಲಿಕಾತಲ್ಪದಲ್ಲಿ ಪವಡಿಸಿದ ಯುವರಾಜ ನೆಲದ ಮೇಲೆ ಮಲಗಿದ್ದಾನೆ ಅನ್ನುವುದು ಒಬ್ಬ ಬಡ ತಾಯಿಯನ್ನು ಯಾಕೆ ಕಾಡಬೇಕು? ಆ ಬಡ ತಾಯಿಯ ಮಗ ಯಾವತ್ತೂ ನೆಲದ ಮೇಲೇ ತಾನೇ ಮಲಗಿರುತ್ತಾನೆ. ಹಾಗಿದ್ದರೆ ಆಕೆ ‘ಅಯ್ಯೋ, ನೆಲದ ಮೇಲೆ ತಾನೆ. ಮಲಕ್ಕೊಳ್ಳಿ ಬಿಡ್ರೀ. ನಮ್ಮಕ್ಕಳಿಗೇನು ಸುಪ್ಪತ್ತಿಗೇನಾ ಇದೆ’ ಅಂದುಬಿಟ್ಟರೆ ಹರಿಶ್ಚಂದ್ರ ಕಾವ್ಯದಲ್ಲಿ ಯಾವ ಕರುಣಾರಸ ಉಕ್ಕುತ್ತದೆ ಹೇಳಿ?

ಆದರೆ ಕರುಣಾರಸ ಇವತ್ತಿಗೂ ಕೋಡಿಯಾಗುತ್ತದೆ. ತುಂಬ ಎತ್ತರದಲ್ಲಿದ್ದ ವ್ಯಕ್ತಿ ಕೆಳಗೆ ಬಿದ್ದಾಗ ಹೇಗಿದ್ದ, ಹೇಗಾದ ಅಂತ ಎಲ್ಲರೂ ನೊಂದುಕೊಳ್ಳುತ್ತಾರೆ. ಅದೊಂದು ವಿಚಿತ್ರ ಸ್ಥಿತಿ. ತಿಂಗಳಿಗೆ ಆರು ನೂರು ರುಪಾಯಿ ಸಂಬಳ ಪಡೆಯುವ ವ್ಯಕ್ತಿ, ಹತ್ತು ಸಾವಿರ ಸಂಬಳ ಪಡೆಯುತ್ತಿದ್ದ ವ್ಯಕ್ತಿ ಕೆಲಸ ಕಳಕೊಂಡು, ಮೂರು ಸಾವಿರ ಸಂಬಳದ ಮತ್ತೊಂದು ಕೆಲಸ ಹುಡುಕಿಕೊಳ್ಳಬೇಕಾಗಿ ಬಂದಿದ್ದನ್ನು ಶತಮಾನದ ದುರಂತವೇನೋ ಎಂಬಂತೆ ವರ್ಣಿಸುತ್ತಾನೆ. ತುಂಬ ಚೆನ್ನಾಗಿದ್ದರು ಕಣ್ರೀ, ಮನೆ ಮಾರಿಕೊಂಡು ಬಾಡಿಗೆ ಮನೇಲಿದ್ದಾರೆ ಅಂತ ಸಿಂಗಲ್‌ ಬೆಡ್‌ರೂಮು ಮನೆಯಲ್ಲಿರುವಾತ ಮರುಗುತ್ತಾನೆ.

ಹಾಗೆ ನೋಡಿದರೆ, ಬಂಡಾಯದ ದನಿಯಾಗಿ ಹರಿಶ್ಚಂದ್ರನ ಕಾವ್ಯ ಕೇಳಿಸಬೇಕಾಗಿತ್ತು. ಹರಿಶ್ಚಂದ್ರ ರಾಜ್ಯಬಿಟ್ಟು ಕಾಡಿಗೆ ಹೋದ ಅನ್ನುವುದು ಜನರನ್ನು ದುಃಖಿಗಳನ್ನಾಗಿ ಮಾಡುವ ಅಗತ್ಯವಿರಲಿಲ್ಲ.

ಹಾಗಿದ್ದರೂ ನಾವು ಮಮ್ಮಲ ಮರುಗುತ್ತೇವೆ!

ಯಾಕೆ?

ಅದನ್ನು ಮೌಲ್ಯ ಎಂದು ನಾವು ಗುರುತಿಸಿಕೊಂಡಿದ್ದೇವಾ? ಸಾಹಿತ್ಯದ ಮೌಲ್ಯ ಅಂದರೆ ಅದೇನಾ? ಒಬ್ಬ ಕ್ರೂರ ಜಮೀನ್ದಾರ, ಒಬ್ಬ ಜಿಪುಣ ಶ್ರೀಮಂತನ ಅವನತಿಯನ್ನು ಸಂತೋಷದಿಂದ ಸ್ವೀಕರಿಸುವ ನಾವು, ಒಬ್ಬ ಪರೋಪಕಾರಿ ರಾಜಕಾರಣಿ, ಒಬ್ಬ ಪ್ರಾಮಾಣಿಕ ಸ್ವಾಮೀಜಿ ಮುಂತಾದವರನ್ನು ಆದರಿಸುತ್ತೇವೆ.

ಆದ್ದರಿಂದ ನಮಗೆ ಮಹಾರಾಜನ ಐಷಾರಾಮಗಳು ತಪ್ಪು ಅನ್ನಿಸುವುದೇ ಇಲ್ಲ. ಮೈಸೂರು ಮಹಾರಾಜರು ಅಂಬಾರಿಯೇರಿ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ ಅನ್ನುವುದು ಒಂದು ಹಬ್ಬ ಎಂಬಂತೆ ಜನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಇವತ್ತು ಒಬ್ಬ ಸಚಿವ ಮೆರವಣಿಗೆ ಹೋದರೆ ಅದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಅದಕ್ಕೊಂದು ಪ್ರತಿಭಟನಾ ಸಭೆ ನಡೆದು ದೊಡ್ಡ ಗಲಭೆಯಾಗುತ್ತದೆ.

ಯಾಕೆ?

ಅದು ಪ್ರಜಾಪ್ರಭುತ್ವ ನಮಗೆ ಕೊಟ್ಟ ಶಕ್ತಿ. ಇಲ್ಲಿ ಎಲ್ಲರೂ ಸಮಾನರು ಅನ್ನುವುದೇ ಮೂಲಮಂತ್ರ. ಆದ್ದರಿಂದ ಯಾರೂ ಉನ್ನತವಾದ ಮೌಲ್ಯಗಳನ್ನು ಪ್ರತಿಪಾದಿಸುವ ಅಗತ್ಯವೇನಿಲ್ಲ ಅಂತಲೂ ಹೇಳಿದಂತಾಯಿತು. ಯಾರನ್ನೂ ಯಾರೂ ಬೆರಗುಗಣ್ಣಿನಿಂದ ನೋಡುವ ಅಗತ್ಯವೂ ಇಲ್ಲ. ಎಲ್ಲರೂ ಅವರವರ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ ಅಷ್ಟೇ.

ಆದ್ದರಿಂದ ಹಂಸತೂಲಿಕಾತಲ್ಪದಲ್ಲಿ ಹರಿಶ್ಚಂದ್ರನ ಮಗ ಮಲಗಿದ್ದೇ ಈಗಿನ ಕಾಲಕ್ಕೆ ಮಹಾಪರಾಧ. ಅವನು ನೆಲದ ಮೇಲೆ ಮಲಗಿದಾಗ ಅನುಕಂಪ ತೋರಿಸುವ ಅಗತ್ಯವೂ ಇಲ್ಲ.

ವಿಧಿ ವಿಪರೀತ ವಿಧಿಯಾಘಾತ ಎಂದು ಈಗ ಯಾರು ಹಾಡುವುದಿಲ್ಲ. ನಮ್ಮ ಹಾಡು ಪೂರ್ತಿ ಬದಲಾಗಿದೆ; ಮಾಡಿದ್ದುಣ್ಣೋ ಮಹರಾಯ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more