• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುರುಸೊತ್ತಿಲ್ಲದ ಪೂರ್ಣಪ್ರಜ್ಞರ ಎದುರು ಹೀಗೊಂದು ಕಿನ್ನರಿ!

By Staff
|
  • ಜಾನಕಿ

jaanaki@india.com

ಬಹುಶಃ ವೀರಪ್ಪ ಮೊಯಿಲಿಯಾಬ್ಬರನ್ನು ಬಿಟ್ಟರೆ ಈ ಕಾಲದಲ್ಲಿ ಮತ್ಯಾರೂ ಮಹಾಕಾವ್ಯ ಬರೆಯುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಕಾಣುತ್ತದೆ. ಮೊಯಿಲಿಯವರದ್ದು ವಿರಾಮ ಪ್ರತಿಭೆ. ಅವರಿಗೆ ಬೇಕಷ್ಟು ಪುರುಸೊತ್ತಿದೆ ಎಂದು ಬರೆಯುತ್ತಾರೆ. ಓದುಗರಿಗೂ ಅಷ್ಟು ವಿರಾಮ ಮತ್ತು ಸಹನೆ ಇದೆಯೋ ಎಂದು ನೋಡುವುದಕ್ಕೆ ಅವರು ಹೋಗುವುದಿಲ್ಲ. ನಮ್ಮ ಸಾಹಿತ್ಯ ವಿಮರ್ಶಕರಿಗೋ ಮೊಯಿಲಿ ಬರೆದದ್ದು ಮಹಾಕೃತಿ. ಕನ್ನಡ ಸಾಹಿತ್ಯದಲ್ಲೊಂದು ಮೊಯಿಲಿಗಲ್ಲು !

ಮೌಲಿಕವಾದದ್ದನ್ನು ಬರೆದಿಲ್ಲ ಅನ್ನುವ ತಕರಾರಿನಷ್ಟು ವಿಸ್ತುತವಾಗಿ ಬರೆದಿದ್ದಾರೆ ಅನ್ನುವ ತಕರಾರು ಮೌಲಿಕವಲ್ಲ. ಒಬ್ಬ ಹುಡುಗ ಮತ್ತು ಹುಡುಗಿ ಭೇಟಿಯಾಗಿ ಪರಸ್ಪರರನ್ನು ಪ್ರೀತಿಸಿ ಎಲ್ಲ ವಿರೋಧಗಳ ನಡುವೆ ಮದುವೆಯಾಗಿ ಮುಂದಿನ ತಲೆಮಾರಿನ ಸೃಷ್ಟಿಗೆ ಕಾರಣವಾಗುವ ನೂರಾರು ಪುಟಗಳ ಕತೆಯನ್ನು ಡುಂಡಿರಾಜ್‌ ಥರ ‘ಅವಳು ಅಕಸ್ಮಾತ್‌ ಸಿಕ್ಕಳು, ನನ್ನನ್ನು ನೋಡಿ ನಕ್ಕಳು, ನಮಗೀಗ ಇಬ್ಬರು ಮಕ್ಕಳು’ ಎಂದು ಒಂಬತ್ತು ಪದಗಳಲ್ಲಿ ಮುಗಿಸಿದರೆ ನವರಸಗಳ ಗತಿಯೇನಾಗಬೇಡ?

‘Busy Life and Literature’ಆದರೆ ಇವತ್ತಿನ ಓದುಗರ ಪ್ರಮುಖ ದೂರು ‘ಪುರುಸೊತ್ತಿಲ್ಲ’ ಅನ್ನುವುದು. ಈ ಪುರುಸೊತ್ತಿಲ್ಲ ಎಂಬ ವಾದಕ್ಕೆ ಇವತ್ತು ಅರ್ಥವೇ ಇಲ್ಲ. ಬೆಂಗಳೂರಿನಲ್ಲಿರುವ ಬಹುತೇಕ ಓದುಗರಿಗೆ ಖಂಡಿತ ಓದುವುದಕ್ಕೆ ಬೇಕಾದ ಕಾಲಾವಕಾಶ ತಾನಾಗಿಯೇ ಸಿಗುತ್ತದೆ. ಮೂವತ್ತೋ ಐವತ್ತೋ ವರುಷಗಳ ಹಿಂದೆ ಹೋಗಿ ನೋಡಿ. ಆಗ ಮಿಕ್ಸಿ ಇರಲಿಲ್ಲ, ವಾಷಿಂಗ್‌ ಮೆಷೀನು ಇರಲಿಲ್ಲ, ಈಮೇಲು, ಫೋನುಗಳು ಬಹುತೇಕರಿಗೆ ಇರಲಿಲ್ಲ. ಎಲ್ಲರ ಬಳಿಯೂ ಸ್ಕೂಟರಿರಲಿಲ್ಲ. ಬಸ್ಸಿನಲ್ಲೇ ಓಡಾಡಿದರೂ ಎಲ್ಲರಿಗೂ ಓದುವುದಕ್ಕೆ ಬಿಡುವಿತ್ತು. ಮನೆ ಕೆಲಸ ತಾವೇ ಮಾಡಿಕೊಂಡರೂ ಹೆಣ್ಣುಮಕ್ಕಳು ಓದುತ್ತಿದ್ದರು.

ಈಗ ಆಧುನಿಕತೆಯಿಂದ ಉಳಿಸಿದ ಎಲ್ಲ ಸಮಯವನ್ನೂ ಆಧುನಿಕತೆಯೇ ನುಂಗುತ್ತಿದೆ. ದಿನಕ್ಕೆ ಕನಿಷ್ಠ ಮೂರು ಗಂಟೆಯನ್ನು ಟೀವಿ, ಒಂದು ಗಂಟೆಯನ್ನು ಟೆಲಿಫೋನು ಕಸಿದುಕೊಳ್ಳುತ್ತದೆ. ನಗರದ ಷೋಕಿಗಳು ಮತ್ತೊಂದೆರಡು ಗಂಟೆಗೆ ಕತ್ತರಿ ಹಾಕುತ್ತವೆ. ಆಫೀಸು ಬಿಟ್ಟು ನೇರವಾಗಿ ಮನೆಗೆ ಹೋಗುವುದು ಗಂಡನಿಗೂ ಶೋಭೆಯಲ್ಲ, ಹೆಂಡತಿಗೂ ರುಚಿಸುವುದಿಲ್ಲ. ಹೀಗಾಗಿ ಕ್ಲಬ್ಬಿಗೊಂದು ಭೇಟಿ ಅನಿವಾರ್ಯ ಕರ್ಮವಾಗಿದೆ.

ಇಂಥ ದಿನಗಳಲ್ಲಿ ಯಾರನ್ನಾದರೂ ‘ಭೈರಪ್ಪನವರ ಹೊಸ ಕಾದಂಬರಿ ಓದಿದ್ರಾ’ ಎಂದು ಕೇಳಿನೋಡಿ. ನಿಮ್ಮನ್ನು ಅವರು ವಿಚಿತ್ರವಾಗಿ ನೋಡುತ್ತಾರೆ. ‘ನಾನು ಕಾದಂಬರಿಯೆಲ್ಲ ಓದೋಲ್ಲ’ ಅಂದುಬಿಡುತ್ತಾರೆ. ಕೆಲವೇ ವರುಷಗಳ ಹಿಂದೆ ಹೊಸದೊಂದು ಕಾದಂಬರಿ ಓದಿಲ್ಲ ಅನ್ನುವುದನ್ನು ತಪ್ಪೊಪ್ಪಿಗೆಯ ಧಾಟಿಯಲ್ಲಿ ಹೇಳುತ್ತಿದ್ದವರು ಈಗೀಗ ಹೆಮ್ಮೆಯಿಂದ ಹೇಳಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಏನು?

ಈ ಪ್ರಶ್ನೆಯನ್ನು ಜಾರ್ಜ್‌ ಆರ್ವೆಲ್‌ ಅರ್ಧ ಶತಮಾನದ ಹಿಂದೆಯೇ ಎತ್ತಿದ್ದ. ಕಾದಂಬರಿಯನ್ನು ಓದುಗ ಹೀಗೆ ಏಕಾಏಕಿಯಾಗಿ ನಿರಾಕರಿಸುವುದಕ್ಕೆ ಕಾರಣ ಅವುಗಳ ಗುಣಮಟ್ಟವಲ್ಲ. ಅಷ್ಟೇ ಕಳಪೆಯಾದ ಬೇರೆ ಕೃತಿಗಳನ್ನು ಜನ ಓದುತ್ತಿದ್ದಾರೆ. ಹೀಗಾಗಿ ಸಾಹಿತ್ಯವನ್ನು ಜನ ನಿರಾಕರಿಸುತ್ತಿದ್ದರೆ ಅದಕ್ಕೆ ಓದುಗರ ತಿಳುವಳಿಕೆ ಅಗಾಧವಾಗಿ ಹೆಚ್ಚಾಗಿದೆ ಅನ್ನುವಂತಿಲ್ಲ. ಸಾಕಷ್ಟು ಒಳ್ಳೆಯ ಕಾದಂಬರಿಯಾಂದನ್ನು ಬರೆಯುವ ವ್ಯಕ್ತಿಗಿಂತ ಇವತ್ತು ‘ಸುಮತಿ’ಯಂಥ ಕಳಪೆ ಧಾರಾವಾಹಿಗೆ ಸಂಭಾಷಣೆ ಬರೆಯುವವನು ಶ್ರೇಷ್ಠ ಅನ್ನಿಸಿಕೊಂಡು ಬಿಡುತ್ತಾನೆ. ತುಂಬ ಒಳ್ಳೆಯ ಸಿನಿಮಾ ಮಾಡುವ ವ್ಯಕ್ತಿಗಿಂತ ಟೀವಿಯಲ್ಲಿ ದಿನಕ್ಕೊಂದು ಕಸದಂಥ ಎಪಿಸೋಡು ಕೊಡುವವನೇ ದೊಡ್ಡವನಾಗುತ್ತಾನೆ. ನಮ್ಮ ಶ್ರೇಷ್ಠತೆಯ ಮಾನದಂಡವೇ ಬದಲಾಗಿದೆ. ಶ್ರೇಷ್ಠತೆ ಅನ್ನುವುದು ಇವತ್ತು ಬಿಡುವು, ಸುಲಭವಾಗಿ ಸಿಗುವುದು ಮತ್ತು ಪುನರಾವರ್ತನೆಗೆ ಸಂದ ಸಂಗತಿ. ನಾವು ಬಿಡುವಿದ್ದಾಗ ತುಂಬ ಸುಲಭವಾಗಿ ನೋಡುವುದಕ್ಕೋ ಓದುವುದಕ್ಕೋ ಸಿಗುವ ಏನೇ ಆದರೂ ಶ್ರೇಷ್ಠ . ದುರ್ಲಭವಾದದ್ದರ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ.

ಇತ್ತೀಚೆಗೆ ಕಾದಂಬರಿಗಳನ್ನು ಬರೆಯುವವರಿಲ್ಲ ಅನ್ನುತ್ತಾರೆ. ವಾರಪತ್ರಿಕೆಗಳಲ್ಲಿ ಅದೇ ಹಳೆಯ ‘ಮಹಿಳಾ ಲೇಖಕಿ’ಯರ ಮತ್ತು ‘ಪುರುಷ ಲೇಖಕಿ’ಯರ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗುತ್ತವೆ. ಅವು ಪುಸ್ತಕ ರೂಪದಲ್ಲಿ ಹೊರಬಂದಾಗ ಖಾತ್ರಿಯಾಗಿ ಓದುವುದು ಇಬ್ಬರು; ಮುನ್ನುಡಿ ಬರೆಯುವ ಅನಾಮಿಕ ಮತ್ತು ಪತ್ರಿಕೆಗಳಲ್ಲಿ ವಿಮರ್ಶೆ ಬರೆಯುವ ನಿಷ್ಪಾಪಿ. ಸ್ನೇಹಿತರೇ ಈಗ ಕಾದಂಬರಿಗಳನ್ನು ಓದುವುದಿಲ್ಲ. ಕೊಟ್ಟ ಕಾದಂಬರಿಗಳನ್ನು ಮನೆಯಲ್ಲಿಟ್ಟು ಸಿಕ್ಕಾಗೆಲ್ಲ ಅವರ ಗೆಳೆಯರಿಗೆ ‘ಮೈ ಫ್ರೆಂಡ್‌. ಲಿಟರರಿ ಮ್ಯಾನ್‌. ರೈಟ್ಸ್‌ ಗುಡ್‌ ಬುಕ್ಸ್‌’ ಅಂತ ಪರಿಚಯಿಸುತ್ತಾರೆ ಅಷ್ಟೇ.

ಒಳ್ಳೆ ಕಾದಂಬರಿಗಳು ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೂ ಸುಲಭ. ಒಳ್ಳೆಯ ಕಾದಂಬರಿಗಳನ್ನು ಬರೆಯುವವರಿಗೆ ತಮ್ಮ ಓದುಗರು ಯಾರೆಂಬುದೇ ಗೊತ್ತಿಲ್ಲ. ಹೀಗಾಗಿ ಅಡ್ರೆಸ್ಸಿಲ್ಲದ ವ್ಯಕ್ತಿಗೆ ಪತ್ರ ಬರೆದಂತೆ, ಕಾದಂಬರಿ ಬರೆಯುವುದೂ ಒಂದು ನಿಷ್ಫಲ ಕ್ರಿಯೆ ಅನ್ನುವುದು ಲೇಖಕರಿಗೂ ಗೊತ್ತಾಗಿಬಿಟ್ಟಿದೆ. ಹೀಗೆ ಓದುಗರೂ ಲೇಖಕರೂ ಕೈಬಿಟ್ಟಿದ್ದರಿಂದ ಕಾದಂಬರಿ ಅನಾಥವಾಗಿದೆ ಅಷ್ಟೇ ಅಲ್ಲ, ತನ್ನ ಘನತೆಯನ್ನೂ ಕಳಕೊಂಡುಬಿಟ್ಟಿದೆ.

ಕಾದಂಬರಿಗಳು ತಾವಾಗಿಯೇ ಸತ್ತವೋ ಅವನ್ನು ಯಾರಾದರೂ ಕೊಲೆಮಾಡಿದರೋ ಅನ್ನುವುದೂ ಪತ್ತೆಯಾಗಬೇಕಿದೆ. ಕಾದಂಬರಿಗಳ ಬೆನ್ನುಡಿ ಬರೆಯುವವರು ಅವುಗಳ ಬೆನ್ನಿಗೆ ಚೂರಿ ಹಾಕುತ್ತಾರೆ ಅನ್ನುವುದನ್ನು ನಿರಾಕರಿಸುವುದು ಕಷ್ಟ. ಮೊನ್ನೆ ಒಂದು ಕಾದಂಬರಿ ಕೈಗೆ ಸಿಕ್ಕಿತು. ಆಮೇಲೆ ಅದು ಆತ್ಮ ಕಥನ ಎನ್ನುವುದು ಗೊತ್ತಾಯಿತು. ಅದರ ಬೆನ್ನುಡಿಯಲ್ಲಿದ್ದ ಬರಹ ಹೀಗಿತ್ತು. ಇದನ್ನು ಎಲ್ಲ ಅಚ್ಚಿನ ತಪ್ಪುಗಳೊಂದಿಗೆ ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ;

‘ನಮ್ಮ ಲಕ್ಪ್ಮಣ್‌ಜಿ ಬಹು ಸವೇದನಾಶೀಲ ಬರೆಹಗಾರ. ಅವರು ಬದುಕು ಮತ್ತು ಬರೆಹವನ್ನು ಒಂದರ ಪಕ್ಕ ಮತ್ತೊಂದನ್ನು ಇಟ್ಟುಕೊಂಡು ಬದುಕುತ್ತಿದ್ದಾರೆ. ಇದು ಬದುಕಿನ ವಿಶೇಷ. ಅವರ ‘ಸಂಬೋಳಿ’ ಆತ್ಮಕಥನ ಸಹಸ್ರಾರು ವರ್ಷಗಳ ಆದಿದ್ರಾವಿಡ ಜನಾಂಗದ ಪೂರ್ವಸ್ಮೃತಿಯನ್ನೂ ಸಹಸ್ರಾರು ವರ್ಷಗಳ ನಂತರ ಪಡೆದುಕೊಳ್ಳುತ್ತಿರುವ ಬದುಕನ್ನು ಏಕಕಾಲಕ್ಕೆ ತನ್ನ ಮುಷ್ಟಿಯಲ್ಲಿ ಹಿಡಿದು ನೋಡುತ್ತದೆ. ಸಂಬೋಳಿ ಓದುತ್ತಿರುವಾಗ ಎಲ್ಲರ ಮನಸ್ಸಿನ ಕನ್ನಡಿಯಲ್ಲೂ ಇದು ಊರುತ್ತದೆ.

ಆತ್ಮಕಥನವೆಂದರೆ ಅದೊಂದು ಬೆಂಕಿಯ ಉಂಡೆ. ಅದೊಂದು ಅಪಾರ ಹಸಿವು. ಇಷ್ಟು ಮಾತ್ರವಲ್ಲ ಅದೊಂದು ತಲ್ಲಣದ ಪರ್ವ ಕೂಡಾ. ಸಂಬೋಳಿ ಆತ್ಮಕಥನ ಇದನ್ನೆಲ್ಲ ತನ್ನ ಬೊಗಸೆಯಲ್ಲಿ ಹಿಡಿದುಕೊಳ್ಳುತ್ತದೆ. ನಾವೂ ನೀವೂ ಈ ಕೃತಿಯಾಳಗೆ ಕೂಡೋಣ. ಕೂಡಿ ಕೂಡುವ ಬದುಕಿನಲ್ಲಿ ನಾವು ಲಯಗೊಳ್ಳೋಣ. ಅಲ್ಲವೇ?’

ಇದನ್ನು ಓದಿದ ನಂತರವೂ ಯಾರಾದರೂ ಪುಸ್ತಕ ಕೊಳ್ಳುವ ಮನಸ್ಸು ಮಾಡಿದರೆ ಅದು ಶತಮಾನದ ಅಚ್ಚರಿ. ಸವೇದನಾಶೀಲ ಬರೆಹಗಾರ ಅನ್ನುವ ಪದವೇ ಓದುವುದರಿಂದ ಆಗುವ ವೇದನೆಯನ್ನು ಸೂಚಿಸುತ್ತದೆ.‘ಮನಸ್ಸಿನ ಕನ್ನಡಿಯಲ್ಲಿ ಊರುತ್ತದೆ’ ಅನ್ನುವ ಪ್ರಯೋಗವನ್ನೇ ನೋಡಿ. ಮನಸ್ಸಿನಲ್ಲಿ ಊರುತ್ತದೆ ಅಂದರೆ ಸಾಕಿತ್ತು. ಕನ್ನಡಿಯಲ್ಲಿ ಯಾವುದೂ ಊರುವುದಿಲ್ಲ , ಮೂಡಿ ಮರೆಯಾಗುತ್ತದೆ ಅಷ್ಟೇ. ಕೊನೆಯಲ್ಲಿ ಬರುವ ‘ಕೂಡಿ ಕೂಡುವ ಬದುಕಿನಲ್ಲಿ ನಾವು ಲಯಗೊಳ್ಳೋಣ’ದ ನಂತರ ಅಲ್ಲವೇ? ಎಂದು ಕೇಳಲಾಗಿದೆ. ಲಯಗೊಳ್ಳೋಣ ಅನ್ನುವುದು ಆಹ್ವಾನ. ಅದಾದ ನಂತರ ಅಲ್ಲವೇ ಎಂಬ ಅನುಮಾನ ಯಾಕೆ ಬೇಕಿತ್ತು?

ಈ ಬೆನ್ನುಡಿಯ ಹಿಂಸೆಯನ್ನು ಮರೆತು ನೋಡಿದರೆ ಲಕ್ಷ್ಮಣ್‌ ಅವರ ಪುಸ್ತಕ ನಿಜಕ್ಕೂ ಚೆನ್ನಾಗಿದೆ. ಈ ಭಾಷೆಯೇ ಎಷ್ಟು ನವಿರಾಗಿದೆ ನೋಡಿ;

‘ನಾನು ದಿನಾಲೂ ಎದ್ಕೂಡ್ಲೆ ಕರೇಗುಟ್ಟಿಗೆ ಹೋಗ್ತಿದ್ದೆ. ಆ ಹೊತ್ತು ಚಡ್ಡೀ ಬಿಚ್ಕೊಂಡು ಕಲ್ಬಂಡೆ ಮರೆಯಾಗೆ ಕುಂತಿದ್ದೆ. ಒಂದ್ಮೊಲ ಕುಣ್ಕಂಡು ಕುಣ್ಕಂಡು ನನ್ನೆದ್ರುಗೇನೆ ಬರ್ತಿತ್ತು. ಎದ್ದು ಒಂದ್ಕಲ್ನ ತಕ್ಕೊಂಡು ಬೀಸ್ದೆ. ಆ ಮೊಲ ಚಂಗ್‌ ಚಂಗ್‌ನೆ ಎಗರ್ಕೊಂಡು ಓಡ್ತು. ಅದ್ರಿಂದೇನೆ ಅಷ್ಟು ದೂರ ಓಡ್ದೆ. ಮೊಲ ಮಂಗಮಾಯವಾಯ್ತು.

ಯಾದಾನಾ ಗಿಡ್ದಾಗೆ ತೂರ್ಕಂಡಿರ್ಬೋದಾ ಅನ್ಕೊಂಡು ಮೆಲ್ಲಮೆಲ್ಲಗೆ ಹೆಜ್ಜೆ ಹಾಕ್ತಾ ಹದ್ದಿನ್ಕಣ್ಣಾಗಿದ್ದೆ.

ಅಲ್ಲೊಂದು ಕೊರಕಲ್ನಾಗೆ ನಮ್ಮಟ್ಟಿ ತೋಟಿ ಬೈರಣ್ಣ ಎಮ್ಮೆಕರ್ದ ಚರ್ಮ ಸುಲೀತಿದ್ದ. ನಾನು ಬೆರಗಾಗಿ ಅವುನ್ನೇ ನೋಡ್ತಿದ್ದೆ. ಬೈರಣ್ಣ ಯಾಕೋ ಕತ್ತೆತ್ತಿ ಸುತ್ತಮುತ್ತ ನೋಡ್ದ. ನಾನು ಅವನ ಕಣ್ಗೆ ಬಿದ್ಕೂಡ್ಳೆ ಕೈ ಸನ್ನೆ ಮಾಡ್ದ. ನಾನು ಅವ್ನತ್ರಿಕೆ ಹೋದೆ. ಎಮ್ಮೆ ಕರ್ದ ಕಾಲ್ನ ತೋರಿಸ್ತಾ ಇದ್ನ ಹಿಡ್ಕೋ ಆಜ್ಞಾಪಿಸ್ದ. ಹಿಡ್ಕಂಡೆ. ಒಂದ್ಕಡೆಯಿಂದ ನಾಜೂಕಾಗಿ ಚರ್ಮ ಸುಲೀತಿದ್ದ. ಬೈರಣ್ಣನ ಕೈಚಳಕಕ್ಕೆ ನಾನು ಬೆರ್ಗಾಗಿದ್ದೆ. ಎಲ್ಲಿದ್ವೋ ರಣಹದ್ದುಗಳು ನಮ್ಮ ತಲೆಮೇಲೆ ಕೀಯ್‌ ಕೀಯ್‌ ಅಂತ ಹಾರಾಡ್ತಿದ್ದೋ. ಬೈರಣ್ಣ ಕತ್ತೆತ್ತಿ ಅವ್ಗುಳ್ನ ನೋಡಿ ಇವ್ರಮ್ಮುನ್‌ ಹದ್ಗುಳ್ನಾ...’

ಇದನ್ನು ಓದಿ ಸುಖಿಸುವವರಿಗೆ ಸ್ಪಂದಿಸುವವರಿಗೆ ಅನುಭೂತಿ ಹೊಂದುವವರಿಗೆ ‘ಬದುಕು ಮತ್ತು ಬರೆಹವನ್ನು ಒಂದರ ಪಕ್ಕ ಮತ್ತೊಂದನ್ನು ಇಟ್ಟುಕೊಂಡು...’ ಇತ್ಯಾದಿಗಳು ಬೇಕಾ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X