ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಮಾಲಿಕೆ-3

By Staff
|
Google Oneindia Kannada News
ಜನ ಸಾಲಾಗಿ ಮೆರವಣಿಗೆಯಲ್ಲಿ ಹೋಗುತ್ತಿದ್ದಾರೆ. ಅದೊಂದು ಕೊನೆಯಿಲ್ಲದ ಮೆರವಣಿಗೆ. ಅವರೆಲ್ಲ ನಿಧಾನವಾಗಿ ದಾರಿ ಕ್ರಮಿಸುತ್ತಿದ್ದಾರೆ. ಈ ಮೆರವಣಿಗೆ ಹೇಗೆ ಮುಂದೆ ಸಾಗುತ್ತದೆ ಅಂದುಕೊಂಡಿದ್ದೀರಿ? ಮುಂದಕ್ಕೆ ಸಾಗಬೇಕು ಅನ್ನುವುದು ಸಾಲಲ್ಲಿ ನಿಂತವರ ಪ್ರಜ್ಞಾಪೂರ್ವಕ ಪ್ರಯತ್ನವೇನಲ್ಲ. ಹಿಂದೆ ನಿಂತವನು ಮುಂದಿರುವವನನ್ನು ಮುಂದಕ್ಕೆ ಜರುಗುವಂತೆ ತಳ್ಳುತ್ತಿರುತ್ತಾನೆ. ಅವನು ಹಾಗೆ ತಳ್ಳುವುದು ಕೂಡ ಪ್ರಜ್ಞಾಪೂರ್ವಕವಾದ ಕ್ರಿಯೆ ಏನಲ್ಲ. ಅದೆಲ್ಲವೂ ಸಹಜವಾಗಿ ನಡೆಯುತ್ತಿರುತ್ತದೆ.

ಹೀಗಂದದ್ದು 1903ರಲ್ಲಿ ನೊಬೆಲ್‌ ಪ್ರಶಸ್ತಿ ಪಡಕೊಂಡ ನಾರ್ವೆಯ ನಾಟಕಕಾರ ಜಾನ್ಸನ್‌. ಈ ಮಾತುಗಳು ಇಡೀ ಮನುಷ್ಯ ಚರಿತ್ರೆಗೆ ಬರೆದ ಭಾಷ್ಯದಂತಿದೆ. ನಮ್ಮ ವಿಕಾಸ, ಬೆಳವಣಿಗೆ, ಅಭಿವೃದ್ಧಿಗೆ ಹಿಡಿದ ಕನ್ನಡಿಯಂತಿದೆ. ಇದನ್ನು ಕೊಂಚ ವಿವರವಾಗಿ ನೋಡಬೇಕು.

Bjornstjerne Bjornsonಸಾಲಿನಲ್ಲಿ ನಿಂತವರ ಪೈಕಿ ಹಿಂದಿರುವವನ ಆತಂಕ ನಿಮಗೆ ಅರ್ಥವಾಗುತ್ತದೆ. ತನ್ನ ಮುಂದಿರುವವನು ಮುಂದಕ್ಕೆ ಹೋಗದೆ, ಈತ ಮುಂದಕ್ಕೆ ಹೋಗಲಾರ. ಹೀಗಾಗಿ ಹಿಂದಿರುವವನು ಮುಂದಕ್ಕೆ ಹೋಗಬೇಕಾದರೆ ಮುಂದಿರುವವನೂ ಮುಂದಕ್ಕೆ ಹೋಗಬೇಕು. ಆದರೆ ಮುಂದಿರುವ ವ್ಯಕ್ತಿ ಕೂಡ ಇನ್ನೊಂದು ಅರ್ಥದಲ್ಲಿ ಹಿಂದಿದ್ದಾನೆ. ಹಿಂದಿರುವವನು ಕೂಡ ಇನ್ನೊಂದು ರೀತಿಯಲ್ಲಿ ಮುಂದಿದ್ದಾನೆ. ಭಾವಿಸಿ ನೋಡಿದರೆ ಎಲ್ಲರೂ ಹಿಂದಿದ್ದಾರೆ ಮತ್ತು ಮುಂದಿದ್ದಾರೆ. ಆದ್ದರಿಂದ ಮುಂದೆ ಮುಂದೆ ಸಾಗುವುದು ಮೆರವಣಿಗೆಯೇ ಹೊರತು ವ್ಯಕ್ತಿಗಳಲ್ಲ. ಒಬ್ಬ ವ್ಯಕ್ತಿ ತನ್ನ ಮಟ್ಟಿಗೆ ತಾನು ಮುಂದೆ ಚಲಿಸುತ್ತಿದ್ದೇನೆ ಅಂದುಕೊಳ್ಳುತ್ತಾನೆ. ತಾನು ಮುಂದಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾನೆ. ಆದರೆ ಇಡೀ ಮನುಕುಲವೇ ಚಲನಶೀಲವಾಗಿರುತ್ತದೆ.

ನಾವು ಪ್ರತಿಯಾಂದು ಬೆಳವಣಿಗೆಯನ್ನೂ ಹೀಗೇ ನೋಡಬೇಕು. ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ನಾವೆಲ್ಲ ಚಲಿಸುತ್ತಲೇ ಇರುತ್ತೇವೆ. ಬದಲಾವಣೆಯ ಭಾಗವಾಗುತ್ತೇವೆ. ಏನಾದರೂ ಬದಲಾಗದಿದ್ದರೆ ಅದಕ್ಕೆ ನಾವೆಲ್ಲರೂ ಕಾರಣರಾಗುತ್ತೇವೆ.

ಜಾನ್ಸನ್‌ ಪ್ರಕಾರ ಇಷ್ಟೇ ಅಲ್ಲ, ನಮ್ಮ ಕ್ರಿಯೆಗಳನ್ನು ನಿಯಂತ್ರಿಸಬೇಕಾದದ್ದು, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಸ್ಪಷ್ಟ ಕಲ್ಪನೆ. ಈ ಪ್ರಜ್ಞೆ ಇರುವ ಯಾವ ವ್ಯಕ್ತಿಯೂ ಇವತ್ತಿನ ಸಮಾಜದಲ್ಲಿ ನೆಮ್ಮದಿಯಿಂದ ಬಾಳಲಾರ. ಯಾಕೆಂದರೆ ಅವನ ಮುಂದೆ ಸಮಸ್ಯೆಗಳ ಸಾಗರವಿದೆ. ಅದರೊಳಗೆ ಹುದುಗಿದ ಪರಿಹಾರವಿಲ್ಲದ ಪ್ರಶ್ನೆಗಳ ಜ್ವಾಲಾಮುಕಿಯಿದೆ. ಒಳ್ಳೆಯದು ಮತ್ತು ಕೆಟ್ಟದ್ದು ಕಲಸಿಹೋದ ಅಸ್ಪಷ್ಟ ಚಿತ್ರವಿದೆ.

ಆದರೆ ಲೇಖಕರಿಗೆ ಒಳಿತು ಕೆಡುಕಿನ ಕಲ್ಪನೆ ಇರಕೂಡದು. ಲೇಖಕನ ಕೆಲಸ ದಾಖಲಿಸುವುದು. ಆತ ಯಾರ ಪರವಾಗಿಯೂ ಮಾತಾಡಕೂಡದು. ಕೇವಲ ವಾಸ್ತವವನ್ನು ಚಿತ್ರಿಸಬೇಕು ಎನ್ನುವ ವಾದವನ್ನು ಜಾನ್ಸನ್‌ ಒಪ್ಪುವುದಿಲ್ಲ. ಅದನ್ನು ಮಾಡುವುದಕ್ಕೆ ಕಲೆ ಯಾಕೆ ಬೇಕು? ಚಂದ್ರೋದಯವನ್ನು ಸುಂದರ ಶಬ್ದಗಳಲ್ಲಿ ವರ್ಣಿಸಿದರೆ ಸಾಕೆ? ವರ್ಣಿಸಬೇಕೆ? ಚಂದ್ರೋದಯ ಎಲ್ಲರಿಗೂ ಸುಂದರವಾಗಿಯೇ ಕಾಣಿಸುವುದಿಲ್ಲವೆ? ಅದು ಕಾವ್ಯ ಅಲ್ಲವೆ ಅಲ್ಲ. ಕಾವ್ಯವೆಂದರೆ ಒಳಿತು ಕೆಡುಕನ್ನು ಬೇರ್ಪಡಿಸುವಂಥದ್ದು. ಒಂದು ರೀತಿಯಲ್ಲಿ ದಂಡ ಸಂಹಿತೆ.

ವರ್ತಮಾನದಲ್ಲಿ ಬದುಕುತ್ತಿರುವ ಹೊತ್ತಿಗೆ ನಮ್ಮ ಕರುಳು ಬಳ್ಳಿಯನ್ನು ಇತಿಹಾಸದ ನೆನಪಿಗೆ ತಳುಕು ಹಾಕಿಕೊಂಡಿರಬೇಕೇ? ನಮಗೊಂದು ಪರಂಪರೆ ಬೇಕಾ? ನಾವು ಹಳೆಯದನ್ನು ನೆಚ್ಚಿಕೊಂಡು ಇವತ್ತಿನ ಬದುಕನ್ನು ರೂಪಿಸಿಕೊಳ್ಳಬೇಕಾ? ಹಳೆಯ ನೆನಪುಗಳ ಚಾದರವನ್ನು ಕೊಡವಿಕೊಂಡು ಎದ್ದು ನಿಲ್ಲಬಾರದೇಕೆ? ಯಾರೋ ಕಾಲದ ಕಾಲು ಹಾದಿಯಲ್ಲಿ ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಯಾಕೆ ಕೂರುತ್ತೀರಿ?

ಅವನ ಮಾತಿನ ಒಳ ಅರ್ಥ ಇದು. ಇದನ್ನು ನೇರವಾಗಿ ಹೇಳಲು ಆತ ಕೊಂಚ ಹಿಂಜರಿದವನಂತೆ ಬರೆಯುತ್ತಿದ್ದ. ಹಿಂದಿನ ಕಾಲದವರಿಂತ ನಾವು ಕ್ರಾಂತಿಕಾರಿಗಳು. ಇವತ್ತು ಪ್ರತಿಯಾಂದನ್ನೂ ನಾವು ಪ್ರಶ್ನಿಸುತ್ತೇವೆ. ಪ್ರಶ್ನಿಸದೆ ಒಪ್ಪಿಕೊಳ್ಳುವ ಔದಾರ್ಯ ನಮಗಿಲ್ಲ. ಆದರೆ ಅನೈತಿಕ ಎನಿಸುವುದೆಲ್ಲ ನಿಜಕ್ಕೂ ಅಷ್ಟೊಂದು ಅನೈತಿಕ ಇರುವುದಿಲ್ಲ. ನೈತಿಕತೆಯನ್ನು ಕಂದಾಚಾರಗಳಿಂದ ಎರವಲು ತರುವ ಅಗತ್ಯವೂ ಇಲ್ಲ.

ಆದರೆ ಶ್ರೇಷ್ಠ ಲೇಖಕರೆಲ್ಲ ಸತ್ತವರ ಜೊತೆಗೆ ಸುಗಮವಾದ ಸಂಬಂಧವನ್ನು ಇಟ್ಟುಕೊಂಡಿದ್ದರು. ‘ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ’ ಸಾಲು ನೆನಪಿಸಿಕೊಳ್ಳಿ. ನಾವು ಕಣ್ಣ ಮುಂದಿದ್ದವರಿಗಿಂತ ಹೆಚ್ಚಾಗಿ ಕಣ್ಮರೆಯಾದವರ ಜೊತೆಗೇ ಇರುತ್ತೇವೋ ಏನೋ? ಲೆಖಕರೆಲ್ಲ ಹಾಗೇ. ಷೇಕ್ಸ್‌ಪಿಯರ್‌, ಕಾರ್ನಾಡ್‌, ಕಾರಂತರೆಲ್ಲ ಬರೆದದ್ದು ಅಳಿದವರ ಮೇಲೆ, ಅಳಿದ ಮೇಲೆ.

ಆದರೆ ಅಲ್ಲೊಂದು ವ್ಯತ್ಯಾಸವಿತ್ತು. ಶ್ರೇಷ್ಠರು ಚರಿತ್ರೆಯನ್ನು ವರ್ತಮಾನಕ್ಕೆ ತರಬಲ್ಲರು. ಕಾರ್ನಾಡರ ತುಘಲಕ್‌, ಲಂಕೇಶರ ಬಸವಣ್ಣ ಆ ಕಾಲದವರು ಅಂತನ್ನಿಸುವುದಿಲ್ಲ. ಅವರು ನಮ್ಮ ಬಗ್ಗೆ ಮಾತಾಡುತ್ತಿರುತ್ತಾರೆ. ಯಾವತ್ತೋ ಸತ್ತವರು ಆಡುವ ಮಾತು ಕೂಡಾ ನಮ್ಮ ಕಷ್ಟಸುಖಗಳ ಕುರಿತಾದದ್ದು ಅಂತ ನಮಗನ್ನಿಸುವ ಹಾಗೆ ಬರೆಯಬಲ್ಲವನು ಮಹಾಕವಿ. ಆತ ಭೂತ ಮತ್ತು ವರ್ತಮಾನಗಳನ್ನು ಒಂದು ಬಿಂದುವಿಗೆ ತಂದು ನಿಲ್ಲಿಸುತ್ತಾನೆ. ಆ ಕಾವ್ಯ ಮತ್ತಷ್ಟು ಪ್ರಭೆಯುಳ್ಳದ್ದಾಗಿದ್ದರೆ ಅದರೊಳಗೆ ಭವಿಷ್ಯವೂ ಅಡಕವಾಗಿರುತ್ತದೆ.

ಜಾನ್ಸನ್‌ ಬರೆದದ್ದು ಅದನ್ನೇ. ನಾವು ಬದುಕು ಮೂಲತಃ ಒಳ್ಳೆಯದನ್ನೇ ನೀಡುವಂಥದ್ದು ಎಂಬ ಭರವಸೆಯಲ್ಲಿ ಬದುಕಬೇಕು. ನಮ್ಮ ಮುಂದೆ ರಕ್ತಪಾತವಾಗಿ, ನೂರಾರು ಮಂದಿ ಸತ್ತು, ಸರ್ವನಾಶ ಆಗಿ ಹೋದರೂ ಒಳ್ಳೆಯದಾಗುತ್ತದೆ ಎಂದು ಕಾಯಬೇಕು. ರಕ್ತ ನೆಂದ ನೆಲದಿಂದ ಮೊಳೆ ಒಡೆಯುವ ಚಿಗುರು ಹಸಿರಾಗಿಯೇ ಇರುತ್ತದೆ !

ಸಾಹಿತಿಗಳು ಯಾವತ್ತೂ ನಕರಾತ್ಮಕ ಧೋರಣೆ ಹೊಂದಿರಕೂಡದು. ನೆಲಕ್ಕೆ ಬಿದ್ದವನಿಗೂ ಮೇಲೆದ್ದು ನಿಲ್ಲುವ ಸಾಮರ್ಥ್ಯ ಉಂಟು ಎಂದು ಹೇಳುವುದು ನಿಜವಾದ ಸಾಹಿತ್ಯ. ಆದರೆ ನಮ್ಮ ಸಾಹಿತಿಗಳಿಗೆ ಬೇಕಾದದ್ದು ಸೆನ್ಸೇಷನ್‌ ! ವಿಚಿತ್ರವಾದದ್ದನ್ನು ಯೋಚಿಸುತ್ತಾರೆ, ವಿಕಾರವಾದದ್ದನ್ನು ಬರೆಯುತ್ತಾರೆ. ಬದುಕನ್ನು ಮತ್ತೊಂದು ಥರ ನೋಡುತ್ತಾರೆ.

ಆತ ಹೇಳಿದ : ಸಾಹಿತಿಗೆ ಜವಾಬ್ದಾರಿ ಇಲ್ಲ ಅನ್ನುವುದನ್ನು ನಾನು ಒಪ್ಪುವುದಿಲ್ಲ. ಆತ ಮೆರವಣಿಗೆಯ ಮುಂಚೂಣಿಯಲ್ಲಿರುವವನು. ನಾವು ಎಲ್ಲಿಗೆ ತಲುಪಬೇಕು ಅನ್ನುವುದನ್ನು ಆತನೇ ನಿರ್ಧರಿಸಿರುತ್ತಾನೆ.

ಈ ಜಾನ್ಸನ್‌ (BJORNSTERNE BJORNSON) ಹುಟ್ಟಿದ್ದು ನಾರ್ವೆಯಲ್ಲಿ. ಪ್ರಸಿದ್ಧ ನಾಟಕಕಾರ ಇಬ್ಸೆನ್‌ ಇವನ ಸಹಪಾಠಿಯಾಗಿದ್ದ. ನಾರ್ವೆಯ ರಾಷ್ಟ್ರೀಯ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಜಾನ್ಸನ್‌, ಕಾವ್ಯಮಯವಾದ ನಾಟಕಗಳನ್ನೂ ಬರೆದ. ವಿಮರ್ಶಕನೂ ಆಗಿದ್ದ ಈತ, ಸ್ವಲ್ಪ ಕಾಲ ಪತ್ರಕತಂನಾಗಿಯೂ ಕೆಲಸ ಮಾಡಿದ. ‘ಯುದ್ಧಗಳ ನಡುವೆ’ ಎಂಬ ಐತಿಹಾಸಿಕ ನಾಟಕದಿಂದ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದ ಜಾನ್ಸನ್‌, ನಂತರ ರಂಗ ನಿರ್ದೇಶಕನಾಗಿಯೂ ಹೆಸರಾದ. ರಾಜಕಾರಣದಲ್ಲಿ ಆಸಕ್ತಿ ಬೆಳೆಸಿಕೊಂಡು ರಾಜಕೀಯ, ನಾಟಕಗಳನ್ನೂ ಬರೆದ ಜಾನ್ಸನ್‌, ಗ್ರೀಕ್‌ ಶಿಲ್ಪಕಲೆಯಿಂದಲೂ ಪ್ರಭಾವಿತನಾಗಿದ್ದ.

ಸಾಮಾಜಿಕ ಸಂಕೀರ್ಣತೆಗಳನ್ನು ಪ್ರತಿನಿಧಿಸುವ ನಾಟಕಗಳನ್ನೂ ಜಾನ್ಸನ್‌ ಬರೆದಿದ್ದಾನೆ. ಆತನ ಹನ್ನೆರಡು ನಾಟಕಗಳು ಪ್ರಸಿದ್ಧವಾಗಿವೆ.

ನಾಟಕದ ಇಬ್ಬರು ಶ್ರೇಷ್ಠ ಸಮಕಾಲೀನರು ಇಬ್ಸೆನ್‌ ಮತ್ತು ಜಾನ್ಸನ್‌. ಇಬ್ಬರಲ್ಲಿ ಯಾರಿಗೆ ಬೇಕಾದರೂ ನೊಬೆಲ್‌ ಬರಬಹುದಾಗಿತ್ತು. ಲಂಕೇಶ್‌ ಮತ್ತು ಅನಂತಮೂರ್ತಿ ಪೈಕಿ ಯಾರಿಗೆ ಬೇಕಾದರೂ ಜ್ಞಾನಪೀಠ ಬರಬಹುದಾಗಿತ್ತು ಅಂದ ಹಾಗೆ. ಇಬ್ಸೆನ್‌- ಜಾನ್ಸನ್‌ ಸಂಬಂಧವೂ ಹಾಗೇ ಇತ್ತು ಅನ್ನೋದು ಕೇವಲ ಊಹೆ !

(ಸ್ನೇಹಸೇತು- ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X