ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಆ ಊರಿನಲ್ಲಿ ತರುಣರೇ ಇಲ್ಲ

By Staff
|
Google Oneindia Kannada News
ಕರಾವಳಿ ತೀರದ ಹೆಸರಿಲ್ಲದ ಒಂದು ಹಳ್ಳಿ. ಇಡೀ ಹಗಲು ಸಮದ್ರದ ಮೇಲಿನಿಂದ ಬೀಸಿ ಬರುವ ಗಾಳಿಯಿಂದಾಗಿ ಧಗೆ. ಸಂಜೆ ಹೊತ್ತಿಗೆ ಅದೇ ಗಾಳಿ ತಂಪಾಗುತ್ತದೆ. ಹಗಲಿಡೀ ದುಡಿದ ಜನ ಸಂಜೆ ಹೊತ್ತಿಗೆ ನಿಸೂರಾಗುತ್ತಾರೆ. ಹೆಗಲಿಗೊಂದು ಬೈರಾಸ ಹಾಕಿಕೊಂಡು ಗಡಂಗಿನ ಮುಂದೆ ಕೂರುತ್ತಾರೆ. ಹೊಟ್ಟೆ ತುಂಬ ಕಳ್ಳು ಕುಡಿದು, ತೂರಾಡುತ್ತಾ, ಬೈಯುತ್ತಾ ರಾತ್ರಿ ಹೊತ್ತಿಗೆ ಮನೆ ತಲುಪುತ್ತಾರೆ. ಮತ್ತೆ ಬೆಳಗ್ಗೆ ಏನೂ ಆಗಿಲ್ಲವೆಂಬಂತೆ ಕೆಲಸ ಶುರುಮಾಡುತ್ತಾರೆ. ಕಣ್ಣಲ್ಲಿ ಆಯಾಸದ ಸುಳಿವೇ ಇರುವುದಿಲ್ಲ. ವಯಸ್ಸಾಗಿದ್ದು ಸುಕ್ಕುಗಟ್ಟಿದ ಹಣೆಯಿಂದಷ್ಟೇ ಗೊತ್ತಾಗುತ್ತದೆ.

ಇದು ನಡುವಯಸ್ಕರ ಕತೆ. ಇನ್ನು ಹದಿಹರೆಯದ ಹುಡುಗರಿಗೆ ಕೆಲಸವೇ ಇಲ್ಲ. ಅವರು ಯಥಾಶಕ್ತಿ ವಾಲಿಬಾಲ್‌, ಕ್ರಿಕೆಟ್‌, ಚೆನ್ನೆಮಣೆ, ಚದುರಂಗ- ಮುಂತಾದ ಆಟಗಳಲ್ಲಿ ತೊಡಗಿಕೊಂಡಿದ್ದವರು. ಬೇಸಗೆಯ ಸಂಜೆಗಳಲ್ಲಿ ಯಕ್ಷಗಾನವೋ ನಾಟಕವೋ ಸಂಗೀತ ಸಂಜೆಯೋ ಏನಾದರೊಂದು ಹತ್ತಿರದ ಪಟ್ಟಣದಲ್ಲಿ ನಡೆದರೆ ಅಲ್ಲಿ ಇವರೆಲ್ಲ ಹಾಜರು. ಅದಾದ ಮೇಲೆ ಸಮೀಪದ ಚಿತ್ರಮಂದಿರದ ಮುಂದೆ ಇವರ ಪಾಳಿ. ಅಂತೂ ಸಂಜೆಯ ಹೊತ್ತು ಊರಿಗೆ ಕಾಲಿಟ್ಟರೆ ತರುಣರೋ ತರುಣರು.

ಅಂಥ ಊರುಗಳು ಈಗ ಹೇಗಾಗಿವೆ ಗೊತ್ತೇ? ಆ ಊರುಗಳಲ್ಲಿ ತರುಣರೇ ಇಲ್ಲ. ಯೌವನ ಆ ಬೀದಿಗಳಲ್ಲಿ ಮೆರವಣಿಗೆ ಹೊರಟು ದಶಕಗಳೇ ಕಳೆದಿವೆ. ಯುವ ತಲೆಮಾರು ಹಲವಾರು ಹಳ್ಳಿಗಳಲ್ಲಿ ಕಾಣಸಿಗುವುದೇ ಇಲ್ಲ. ನೆರಿಗೆ ಚಿಮ್ಮಿಸುತ್ತಾ ನಡೆಯುವ ಹುಡುಗಿಯರಿಲ್ಲದ, ಹುಸಿ ಗಾಂಭೀರ್ಯದಿಂದ ಚಿಗುರುಮೀಸೆ ತಿರುವಿಕೊಳ್ಳುತ್ತಾ ತುಟಿಯಂಚಲ್ಲೇ ನಗುವ ಹುಡುಗರಿಲ್ಲದ ಹಳ್ಳಿಯನ್ನು ಊಹಿಸಿಕೊಳ್ಳಿ. ಅದೊಂದು ಘಟನೆಗಳೇ ಇಲ್ಲದ ದಿನದಂತೆ ನೀರಸವಾಗಿರುತ್ತದೆ. ಅಂಥ ವಾತಾವರಣ ಪ್ರತಿ ಹಳ್ಳಿಯಲ್ಲೂ ಇದೆ.

Effects of Globalization on Rural Youthಅಷ್ಟೆ ಅಲ್ಲ, ಮೊದಲೆಲ್ಲ ಒಂದು ಹಳ್ಳಿಯನ್ನು ಅಲ್ಲಿ ಕೂತು ಬರೆಯುತ್ತಿರುವ ಲೇಖಕರ ಹೆಸರಿನಿಂದಲೇ ಗುರುತಿಸುವಷ್ಟು ಎಲ್ಲರೂ ಓದಿಕೊಂಡಿರುತ್ತಿದ್ದರು. ಬೀರಣ್ಣ ನಾಯಕ ಮೊಗಟಾ, ಗೋಪಾಲಕೃಷ್ಣ ವಂಡ್ಸೆ, ನಿರಂಜನ ವಾನಳ್ಳಿ.. ಹೀಗೆ ಹಂದ್ರಾಳ, ಬಳ್ಳಾರಿ, ಚೊಕ್ಕಾಡಿ, ಬರಗೂರು, ನಾಗತಿಹಳ್ಳಿಯಂಥ ಊರುಗಳೆಲ್ಲ ಅಲ್ಲಿ ಕೂತು ಬರೆಯುತ್ತಿದ್ದ ಲೇಖಕರಿಂದಾಗಿಯೇ ಪ್ರಸಿದ್ಧವಾಗಿದ್ದವು. ಒಂದೊಂದು ಹಳ್ಳಿಯಲ್ಲೇ ಹತ್ತಾರು ಲೇಖಕರು ಸಿಗುತ್ತಿದ್ದರು. ಅವರೆಲ್ಲ ವಾರಪತ್ರಿಕೆಗಳಿಗೆ, ಮಾಸಪತ್ರಿಕೆಗಳಿಗೆ, ದಿನಪತ್ರಿಕೆಗಳ ದೂರುಗಂಟೆ, ವಾಚಕರವಾಣಿ ವಿಭಾಗಕ್ಕೆ ಬರೆಯುತ್ತಿದ್ದರು. ಕತೆ ಚೆನ್ನಾಗಿದೆ ಎಂದೋ ಆತ್ಮಕ್ಕೆ ಸಾವಿಲ್ಲ ಎಂದೋ ಪತ್ರ ಬರೆಯುತ್ತಿದ್ದರು. ಒಬ್ಬೊಬ್ಬ ಸಂಪಾದಕನ ಮುಂದೆಯೂ ಅಕ್ಷರಶಃ ನೂರ ತೊಂಬತ್ತೆಂಟು ಲೇಖನಗಳಿರುತ್ತಿದ್ದವು. ಆ ಲೇಖನಗಳನ್ನು ಪ್ರಕಟಿಸಿ ಎಂದು ಪತ್ರಗಳನ್ನು ಬರೆಯುವವರಿದ್ದರು. ಪತ್ರಿಕಾ ಸಂಪಾದಕರೋ ಸಹಲೇಖಕರೋ ಮತ್ತೊಂದು ಹಳ್ಳಿಗೆ ಹೋದರೆ ಅಲ್ಲಿಯ ಪತ್ರಿಕಾ ಏಜಂಟನ ಮೂಲಕ ಆ ಹಳ್ಳಿಯ ಲೇಖಕನ ಮನೆ ಪತ್ತೆ ಮಾಡಬಹುದಾಗಿತ್ತು. ಹಲವಾರು ಗೆಳೆಯರು ಹುಟ್ಟಿಕೊಳ್ಳುತ್ತಿದ್ದುದು ಹಾಗೆಯೇ.

ಆದರೆ ಇವತ್ತು ಪತ್ರಿಕೆಗಳಿಗೆ ಹಳ್ಳಿಗಳಿಂದ ಲೇಖನಗಳು ಬರುತ್ತಿಲ್ಲ. ಹೊಸ ಹೊಸ ಲೇಖಕರು ಬರೆಯುತ್ತಿಲ್ಲ. ಹೊಸ ಹೆಸರುಗಳು ಕಾಣಿಸುತ್ತಿಲ್ಲ. ಅದೇ ಹಳೆಯ ಲೇಖಕರೇ ಹೊಸ ಥರ ಬರೆಯಲು ಯತ್ನಿಸುತ್ತಾರೆ. ಅದನ್ನು ಯುವಕರು ಓದುವುದಿಲ್ಲ. ಅದರ ಬಗ್ಗೆ ಚರ್ಚಿಸುವುದಿಲ್ಲ. ಲೋಹಿಯಾ ವಾದ ಯಾವತ್ತೋ ಸತ್ತು ಹೋಗಿದೆ. ಮಾರ್ಕ್ಸನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಹಿಟ್ಲರ್‌ ಮೇಲೆ ಯಾರಿಗೂ ಸಿಟ್ಟಿಲ್ಲ. ಗಾಂಧೀವಾದ ಶೂದ್ರನ ಸೊತ್ತಾಗಿಬಿಟ್ಟಿದೆ.

ಇದು ಸಾಮಾಜಿಕ ಸ್ಥಿತ್ಯಂತರದ ಮಾತಾದರೆ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿಯೂ ಇಂಥದ್ದೇ ಶೂನ್ಯ ಎಲ್ಲೆಲ್ಲೂ ಇದೆ. ಆಧ್ಯಾತ್ಮಿಕವಾಗಿಯೂ ಅದರ ಪ್ರಭಾವಗಳನ್ನು ನೋಡಬಹುದು. ಒಂದು ಕಾಲದಲ್ಲಿ ಲೇಖಕರನ್ನು ಗಾಢವಾಗಿ ಪ್ರಭಾವಿಸಿದ್ದ ಜಿಡ್ಡು ಕೃಷ್ಣಮೂರ್ತಿ, ರಜನೀಶ್‌, ವಿವೇಕಾನಂದ, ಪರಮಹಂಸ ಮುಂತಾದವರು ಕಣ್ಮರೆಯಾಗಿದ್ದಾರೆ. ಯಾವ ಹುಡುಗನೂ ತನ್ನ ಓದುವ ಕೋಣೆಯಲ್ಲಿ ಇವತ್ತು ವಿವೇಕಾನಂದರ ಫೋಟೋ ಅಂಟಿಸಿಕೊಳ್ಳುವುದಿಲ್ಲ. ಕಣ್ಮುಂದೆ ವಿವೇಕಾನಂದರನ್ನು ಇಟ್ಟುಕೊಂಡು ಟೀವಿಯಲ್ಲಿ ಮಲ್ಲಿಕಾ ಶೆರಾವತ್‌ಳ ನಗ್ನಾವತಾರವನ್ನು ನೋಡುವಾಗ ಆತನನ್ನು ದ್ವಂದ್ವ ಕಾಡುತ್ತದೆ.

ಇದು ಒಂದು ಮುಖ. ಇನ್ನೊಂದು ಕಡೆ ಪುಟ್ಟ ಹಳ್ಳಿಗಳಲ್ಲಿ ಒಂದಷ್ಟು ಹರಟೆ ಕೇಂದ್ರಗಳಿದ್ದವು. ಅವು ಹಳೆಯ ಕಾಲದ ಸೇತುವೆ, ಟೈಲರ್‌ ಅಂಗಡಿ, ಪತ್ರಿಕಾ ಏಜಂಟನ ಪುಟ್ಟ ಸ್ಟಾಲು, ನಾಲ್ಕಾಣೆಗೆ ಒಂದು ಟೀ ಮಾರುತ್ತಿದ್ದ ಶೆಟ್ಟರ ಹೊಟೆಲ್ಲು, ಹೊಳೆತೀರದ ಬಂಡೆಗಲ್ಲು. ಇವತ್ತು ಇವೆಲ್ಲ ಅನಾಥವಾಗಿವೆ. ಟೈಲರ್‌ ಅಂಗಡಿಗೆ ಕಾಲಿಡುವುದನ್ನೇ ಹಳ್ಳಿ ಮತ್ತು ಪಟ್ಟಣದ ಹುಡುಗರು ಮರೆತಿದ್ದಾರೆ. ಶೇಡೆಡ್‌ ಜೀನ್ಸ್‌ಗೆ ಹುಡುಗಿಯರು ಮಾರು ಹೋಗಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಒಂದೂರಿಗೂ ಇನ್ನೊಂದೂರಿಗೂ ಇರುವ ವ್ಯತ್ಯಾಸ ಬದಲಾಗಿದೆ. ಅರೇಅಂಗಡಿಯಲ್ಲಿರುವ ರಾಮತೀರ್ಥಕ್ಕೂ ದರ್ಬೆಯಲ್ಲಿರುವ ಲಕ್ಷ್ಮಣ ತೀರ್ಥಕ್ಕೂ ಏನು ಫರಕು ಎಂದು ಕೇಳಿದರೆ ಆಯಾ ಊರಿನ ಮಂದಿಯೇ ನಿಬ್ಬೆರಗಾಗುತ್ತಾರೆ. ಯಾವುದೇ ಊರಿಗೆ ಹೋದರೂ ಅದೇ ತಿಂಡಿ ತೀರ್ಥ ಸಿಗುತ್ತದೆ. ಅದೇ ರುಚಿಯ ಕೋಕಾಕೋಲಗಳು ಎಲ್ಲೆಲ್ಲೂ ಇವೆ. ಎಲ್ಲರೂ ಒಂದೇ ಥರದ ಬಟ್ಟೆ ತೊಟ್ಟುಕೊಂಡು ಓಡಾಡುತ್ತಾರೆ. ಎಲ್ಲ ಊರಿನ ಮಕ್ಕಳೂ ಒಂದೇ ಥರ ಮಾತಾಡುತ್ತವೆ. ಒಂದೇ ನರ್ಸರಿ ರೈಮನ್ನು ಒಂದೇ ರಾಗದಲ್ಲಿ ಹಾಡುತ್ತವೆ. ಜಾನಿ ಜಾನಿ ಯೆಸ್‌ ಪಪ್ಪಾ...

ಜಾಗತೀಕರಣದ ಬಗ್ಗೆ ಮಾತಾಡುವವರು ಇದನ್ನೆಲ್ಲ ಗಮನಿಸುವುದು ಒಳ್ಳೆಯದು. ಒಂದು ಊರು ಅಲ್ಲಿಯ ಜೀವನ ಅಲ್ಲಿಯ ತರುಣತರುಣಿಯರು ಆ ಊರಲ್ಲಿ ಮಳೆಗಾಲದಲ್ಲಿ ಅಗಲವಾಗಿ ಬೇಸಗೆಯಲ್ಲಿ ಕಿರಿದಾಗಿ ಹರಿಯುವ ನದಿ, ಅಲ್ಲಲ್ಲಿಯ ಮಂದಿ ತೊಡುವ ಉಡುಪು- ಎಲ್ಲವೂ ವಿಶಿಷ್ಟವಾಗಿರುತ್ತಿತ್ತು. ಜಾಗತೀಕರಣಕ್ಕಿಂತ ಮೊದಲೇ ಶಿಕ್ಷಣ ಇದನ್ನೆಲ್ಲ ಬದಲಾಯಿಸಿತು. ಓದಿದವರ ಹವ್ಯಾಸಗಳೂ ಓದದವರ ಹವ್ಯಾಸಗಳೂ ಬೇರೆಬೇರೆಯಾದವು. ಹಳ್ಳಿಗಳಿಂದ ತರುಣರೆಲ್ಲ ದೊಡ್ಡ ಊರುಗಳಿಗೆ ವಲಸೆ ಹೋದರು. ಪ್ರತಿಯಾಂದು ಹಳ್ಳಿಯೂ ನಡುವಯಸ್ಕರ ನಿಲ್ದಾಣದಂತೆ ಕಾಣಿಸತೊಡಗಿತು. ಆ ನಡುವಯಸ್ಕರು ಯಾವ ನಿರ್ಧಾರವನ್ನೂ ಕೈಗೊಳ್ಳಲಾರದೆ, ಕಿರುಚಲಾರದೆ, ತೊಂದರೆಯಾದಾಗ ದೊಡ್ಡ ದನಿಯಲ್ಲಿ ಹೇಳಿಕೊಳ್ಳಲಾರದೆ ವಿಚಿತ್ರ ದಿಗ್ಭ್ರಾಂತಿಯಲ್ಲಿ ಬದುಕತೊಡಗಿದರು.

ಈಗ ಅವರಿಗೆಲ್ಲ ವಯಸ್ಸಾಗಿದೆ.

***

ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪುಟ್ಟ ಪ್ರಸಂಗವನ್ನು ಹೇಳಬೇಕಿದೆ. ಇತ್ತೀಚೆಗೆ ಗೆಳೆಯರೊಬ್ಬರು ಅಮಾಸೆಗೌಡ ಎಂಬ ವ್ಯಕ್ತಿಯಾಬ್ಬನ ಕತೆ ಹೇಳಿದರು. ಈ ಅಮಾಸೆಗೌಡ ಗಜಾನನ ಹೆಗಡೆಯವರ ಮನೆಯಲ್ಲಿ ದುಡಿಯುತ್ತಿದ್ದ. ಆತನ ಸುಂದರಿ ಹೆಂಡತಿಯನ್ನು ಗಜಾನನ ಹೆಗಡೆ ತನ್ನವಳನ್ನಾಗಿ ಮಾಡಿಕೊಂಡಿದ್ದ. ಅದನ್ನು ಪ್ರತಿಭಟಿಸುವ ಆರ್ಥಿಕವಾದ ಮತ್ತು ಸಾಮಾಜಿಕವಾದ ತಾಕತ್ತು ಅಮಾಸೆ ಗೌಡನಿಗೆ ಇರಲಿಲ್ಲ. ಆದರೆ ಅವರ ಪ್ರತಿಭಟನೆ ವ್ಯಕ್ತವಾಗದೇ ಇರುತ್ತಿರಲಿಲ್ಲ. ಅದಕ್ಕೆ ಆತ ಒಂದು ಉಪಾಯ ಕಂಡುಕೊಂಡಿದ್ದ.

ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವ ಅವಳನ್ನು ಯಾವ ಕಾರಣಕ್ಕೂ ನೋಯಿಸಲು ಇಚ್ಛಿಸದ ಆತ ರಾತ್ರಿ ಕಂಠಪೂರ್ತಿ ಕುಡಿಯುತ್ತಿದ್ದ. ಕುಡಿದ ಮತ್ತಿನಲ್ಲಿ ಮನೆಗೆ ಬಂದು ಹೆಂಡತಿಯನ್ನು ಜಪ್ಪುತ್ತಿದ್ದ. ಮನೆಗೆ ಬರುವ ಹಾದಿಯಲ್ಲಿ ಗಜಾನನ ಹೆಗಡೆಯವರ ಮನೆ ಮುಂದೆ ನಿಂತು ‘ಏನೋ.. ಗಜಾನನ ಹೆಗಡೆ... ನಿನಗೆ ಮಜಾ ಮಾಡೋದಕ್ಕೆ ನನ್ನ ಹೆಂಡ್ತೀನೇ ಬೇಕೇನೋ... ಸೂ..ಮಗನೇ.. ನನಗೂ ನಿನ್ನ ಹೆಂಡ್ತೀನ ಕೊಡೋ... ಮಾನಗೆಟ್ಟೋನೆ’ ಎಂದು ಏರುದನಿಯಲ್ಲಿ ಬೈಯುತ್ತಿದ್ದ. ಅದನ್ನು ಕೇಳಿಸಿಕೊಂಡ ನಂತರವೇ ಗಜಾನನ ಹೆಗಡೆಯ ಕುಟುಂಬ ಮಲಗುತ್ತಿದ್ದುದು.

ಮಾರನೆಯ ಬೆಳಗ್ಗೆ ಎಂಟೂವರೆಗೆಲ್ಲ ನಿಯತ್ತಾಗಿ ಅದೇ ಗಜಾನನ ಹೆಗಡೆಯ ಮನೆ ಮುಂದೆ ಹಾಜರಾಗಿ ದೇಹವನ್ನು ಹಿಡಿಯಾಗಿಸಿ ಅವರ ಮುಂದೆ ನಿಲ್ಲುತ್ತಿದ್ದ. ಅವರು ಗಂಭೀರವಾಗಿ ರಾತ್ರಿ ಜಾಸ್ತಿಯಾಯ್ತೇನೋ ಅನ್ನುತ್ತಿದ್ದರು. ಆತ ಅಬೋಧ ಮುಗ್ಧತೆಯ ನಗು ನಕ್ಕು ‘ಕಳ್ಳಮುಂಡೇದು ಸೋಮಿ. ಕುಡಿದದ್ದೂ ಗೊತ್ತಾಗಲ್ಲ , ಮನೆಗೆ ಹೋಗಿದ್ದೂ ಗೊತ್ತಾಗಲ್ಲ’ ಅನ್ನುತ್ತಿದ್ದ.

ಪ್ರತಿಭಟನೆ, ವಿರೋಧ ಹೇಗೆಲ್ಲ ವ್ಯಕ್ತವಾಗುತ್ತದೆ ನೋಡಿ. ಬಹುಶಃ ಅಮಾಸೆಗೌಡನ ಹೆಂಡತಿಯ ಹಾದರ ಕೂಡ ಆಕೆಯ ಪ್ರತಿಭಟನೆಯ ಅಸ್ತ್ರವೇ ಇದ್ದೀತೋ ಏನೋ? ಆದರೆ ಸಾಮಾಜಿಕವಾಗಿ ಆಕೆ ತನ್ನ ಗಂಡನನ್ನು ಶೋಷಿಸುತ್ತಿರುವವನ ಜೊತೆ ಸೇರಿ ಗಂಡನ ಅನ್ಯಾಯವನ್ನು ವಿರೋಧಿಸುತ್ತಿದ್ದಳಾ ಅನ್ನುವುದನ್ನು ನೆನೆದಾಗ ಗೊಂದಲವಾಗುತ್ತದೆ.

***

ಈಗ ಹೇಳಿ!

ಜಾಗತೀಕರಣವನ್ನಾಗಲೀ ಬದಲಾದ ಕಾಲಮಾನವನ್ನಾಗಲೀ ಅಷ್ಟು ಸುಲಭವಾಗಿ ಹಿಡಿದಿಡುವುದು ಸಾಧ್ಯವೇ?

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X