ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂಸಾ ಸಾಹಿತ್ಯಚರಿತೆ ಮತ್ತು ನಮ್ಮ ಲೇಖಕರ ಹಳೇ ಕತೆ!

By Staff
|
Google Oneindia Kannada News
ವಚನ ಸಾಹಿತ್ಯ ಬಿಟ್ಟರೆ ಉಳಿದೆಲ್ಲ ಸಾಹಿತ್ಯವೂ ಬೂಸಾ ಅಂತ ದೇ.ಜವರೇಗೌಡರು ಹೇಳಿಕೆ ಕೊಟ್ಟಿದ್ದಾರೆ. ಆಮೇಲೆ ಅದನ್ನು ತಿದ್ದಿಕೊಂಡು ವಚನ ಸಾಹಿತ್ಯ ಬಿಟ್ಟರೆ ಉಳಿದಂತೆ ಹೆಚ್ಚಿನ ಸಾಹಿತ್ಯವೆಲ್ಲ ಬೂಸಾ ಎಂದು improve ಮಾಡಿದ್ದಾರೆ. ಏನೇ ಆದರೂ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳಲೇ ಬೇಕು. ಅವರಂತೆ ಆತ್ಮವಿಮರ್ಶೆ ಮಾಡಿಕೊಳ್ಳುವ ಮತ್ತು ತಮ್ಮ ಕೃತಿಯನ್ನು ತಾವೇ ಮೌಲ್ಯಮಾಪನ ಮಾಡಿಕೊಂಡು ತೀರ್ಮಾನ ನೀಡುವ ಸಜ್ಜನಿಕೆ ಎಲ್ಲರಿಗೂ ಬರಲಿ.

ದೇ. ಜವರೇಗೌಡರು ಅಜ್ಞಾನಿಗಳೆಂದೂ ಅದೇ ಸ್ಥಿತಿಯಲ್ಲಿ ಇಂಥದ್ದೊಂದು ಹೇಳಿಕೆ ನೀಡಿದ್ದಾರೆಂದೂ ಕೆಲವರು ಪ್ರತಿಕ್ರಿಯಿಸಿದ್ದಾರೆ. ಅದನ್ನು ಒಪ್ಪುವುದು ಕಷ್ಟ. ಅವರು ಶಿಕ್ಷಕರಾಗಿ, ಸಂಶೋಧಕರಾಗಿ, ಗ್ರಂಥ ಸಂಪಾದಕರಾಗಿ, ಅನುವಾದಕರಾಗಿ ಹೆಸರು ಮಾಡಿದ್ದಾರೆ. ಮಕ್ಕಳ ಸಾಹಿತ್ಯ ಬರೆದಿದ್ದಾರೆ. ಪಂಪ ಮತ್ತು ನಾಡೋಜ ಪ್ರಶಸ್ತಿ ಪಡಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿಸಿದ್ದು ಅವರೇ. ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ಸದ್ಯಕ್ಕೆ ತಮ್ಮ ಮಗನನ್ನು ಕುಲಪತಿ ಮಾಡುವುದಕ್ಕೆ ಓಡಾಡುತ್ತಿದ್ದಾರೆ ಅನ್ನುವುದು ಅವರ ಕುರಿತ ಲೇಟೆಸ್ಟ್‌ ಮಾಹಿತಿ. ಅದನ್ನು ತಪ್ಪು ಅಂತ ಹೇಳುವಂತಿಲ್ಲ. ಎಷ್ಟಿದ್ದರು ಅವರದು ‘ಹೋರಾಟದ ಬದುಕು’.

De. Javaregowdaಪುನರುತ್ಥಾನ, ತೆನೆ, ಹೋರಾಟದ ಬದುಕು, ಮುನ್ನುಡಿಗಳು, ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ ಮುಂತಾದ ಕೃತಿಗಳನ್ನು ರಚಿಸಿದ ದೇಜಗೌ ಕವಿಯೋ ಕತೆಗಾರರೋ ಸಂಶೋಧಕರೋ ಪ್ರಬಂಧಕಾರರೋ ಅನ್ನುವುದು ಸದ್ಯಕ್ಕಂತೂ ನಿಗೂಢ ರಹಸ್ಯ! ಅದನ್ನು ಪತ್ತೆ ಮಾಡಿ ಹೇಳಿದವರಿಗೆ ಒಂದು ಪ್ರತಿ ರಾಮಾಯಣ ದರ್ಶನಂ ಉಚಿತ!

ದೇಜಗೌ ಅವರು ದಲಿತರನ್ನೋ ಲಿಂಗಾಯತರನ್ನೋ ಮೆಚ್ಚಿಸಲಿಕ್ಕೆ ಹೀಗೊಂದು ಹೇಳಿಕೆ ಕೊಟ್ಟಿರಬಹುದು. ಅವರ ಉದ್ದೇಶವನ್ನು ನಾವು ಪ್ರಶ್ನಿಸುವುದು ಬೇಡ. ಅವರಿಗೀಗ ಎಂಬತ್ತೆೈದು. ಈ ಎಂಟೂವರೆ ದಶಕಗಳ ಅವರ ಅನುಭವವನ್ನೂ ಸಹಿಷ್ಣತೆಯನ್ನು ಗೌರವಿಸೋಣ. ಅವರು ಹಾಗೆ ಹೇಳಿದ್ದರಿಂದ ಇವತ್ತಿನ ಸಾಹಿತ್ಯವನ್ನು ಕೊಂಚ ನಿರಾಳವಾಗಿ ಗಮನಿಸುವುದಕ್ಕೊಂದು ಅವಕಾಶ ಸಿಕ್ಕಿತು ಅಂದುಕೊಳ್ಳೋಣ. ಅಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಅವರಿಗೊಂದು ಥ್ಯಾಂಕ್ಸ್‌ ಹೇಳೋಣ.

***

ಕನ್ನಡ ಸಾಹಿತ್ಯ ಯಾಕೆ ಬೂಸ ಅಲ್ಲ ಅನ್ನುವುದನ್ನು ನಾವು ಮೊದಲು ನೋಡಬೇಕು. ಹಾಗೇ ಅದು ಬೂಸಾ ಅಲ್ಲ ಅನ್ನುವವರು ಯಾರನ್ನು ಉದಾಹರಿಸುತ್ತಾರೆ ಅನ್ನುವುದನ್ನೂ ಗಮನಿಸಬೇಕು. ದೇ.ಜವರೇಗೌಡರು ಕನ್ನಡ ಸಾಹಿತ್ಯ ಬೂಸಾ ಅಂದ ತಕ್ಷಣವೇ ಅನೇಕರು ಹಾಗಿದ್ದರೆ ಕುವೆಂಪು ಸಾಹಿತ್ಯವೂ ಬೂಸಾನ ಎಂದು ಹೌಹಾರಿದರು. ಅದನ್ನು ಪ್ರತ್ಯೇಕವಾಗಿ ಹೇಳಬೇಕೇ? ಎಂಬ ತುಂಟತನ ದೇಜಗೌ ಮಾತಿನಲ್ಲಿ ಇರಲಿಲ್ಲ ಅನ್ನೋದು ಬೇರೆ ಮಾತು!

ಮತ್ತೆ ಕೆಲವರು ಬೇಂದ್ರೆ ಬೂಸಾನಾ, ಕುಮಾರವ್ಯಾಸ ಬೂಸಾನಾ, ಅಡಿಗರು ಬೂಸಾನಾ ಎಂದು ತಮತಮಗೆ ತೋಚಿದ ಕವಿಗಳ ಹೆಸರು ಹಿಡಿದು ಕೇಳತೊಡಗಿದರು. ಅದು ಅವರವರು ಕನ್‌ಫರ್ಮ್‌ ಮಾಡಿಕೊಳ್ಳುವ ಕ್ರಮ ಇದ್ದರೂ ಇರಬಹುದು. ಚನ್ನವೀರ ಕಣವಿ, ಜಿ. ಎಸ್‌. ಶಿವರುದ್ರಪ್ಪ ಮುಂತಾದವರು ಗೌಡರ ಮಾತು ಕೇಳಿದರೂ ಕೇಳದವರಂತೆ ಬಿಮ್ಮಗಿದ್ದರೆ, ಆಧುನಿಕ ಕವಿಗಳಾದ ಎಚ್‌. ಎಸ್‌. ಶಿವಪ್ರಕಾಶ್‌ ಥರದವರು ಬೂಸಾ ಆದರೂ ಪರವಾಗಿಲ್ಲ. ಮೊದಲು ಬಿಕರಿಯಾಗಲಿ ಎಂದು ತಮ್ಮ ಅರೆಬರೆ ಆತ್ಮಚರಿತ್ರೆ ಹಿಡಿದು ಹಾಜರಾದರು.

ಅಷ್ಟಕ್ಕೂ ಬೂಸಾ ಅಂದರೆ ಏನು? ಸಾರ ಕಳಕೊಂಡು ಹೊಟ್ಟಿನಂತಾಗಿರುವ ವಸ್ತು ಎಂದಷ್ಟೇ ಅದರ ಅರ್ಥ. ದೇಜಗೌ ಈ ಮಾತನ್ನು ಹೇಳಿದ್ದು ಅಷ್ಟೇನೂ ತಪ್ಪೆಂದು ಕಾಣಿಸುವುದಿಲ್ಲ. ಇದಕ್ಕೆ ಉದಾಹರಣೆ ಕೊಡಬೇಕಿದ್ದರೆ ಎರಡು ವರುಷಗಳ ಹಿಂದೆ ಬಂದಿರುವ ಕನ್ನಡ ಕವಿತೆಗಳನ್ನು ಸಂಕಲಿಸಿದ ಸಾಹಿತ್ಯ ಅಕಾಡೆಮಿಯ ಪುಸ್ತಕವೇ ಸಾಕು. ಅಲ್ಲಿರುವ ಕೆಲವು ಕವಿತೆಗಳು ಹೀಗಿವೆ;

ಉರುಳುವ ಚಕ್ರದಲ್ಲಿ ನರಳುವ ಕರುಳು
ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ
ವಂದಿಮಾಗಧರು ನಂದಿಹೋದ ಹಾದಿಯಲ್ಲಿ
ಬರಿತಲೆಯ ಬರಿಗಾಲ ನಿಜಮಾನವ

(ಬರಗೂರು ರಾಮಚಂದ್ರಪ್ಪ)

ಮಗು
ಮನುಜನ ತಂದೆ
ತಾಯಿಯಾದವಳು
ಬದುಕ ಕಾಯುವ
ನಿಯತ್ತಿನ ನಾಯಿ
ತಾಯಿ ನಿಷ್ಠೆಗೆ
ಶರಣೆನ್ನುವುದು ಕವಿತೆ.

(ಮಲ್ಲಿಕಾ ಘಂಟಿ)

ಬದುಕು ನಿರವಯಾಗಿಲ್ಲ
ಪ್ರಿಯ ಕವಿ
ಕಾಲ ನಿರವಯಾಗಿದೆ
ಸೆಕೆಂಡಿನ ಮುಳ್ಳು ಓಡುತ್ತಿದೆ
ಜಂಗಮಕ್ಕಳಿವಿದೆ

(ಸ. ಉಷಾ)

ಕಾಡುತ್ತಿದೆ ನನ್ನೊಳಗಿನ ಭೂತ
ವರ್ತಮಾನಕ್ಕೆ ಲಗ್ಗೆ ಹಾಕುತ್ತ
ನಾನಾ ವರ್ತುಲಗಳಲ್ಲಿ ಜೀವದ
ಬೆನ್ನತ್ತಿ ಮಾತಿಗೆ ಮೀರಿದ
ಮರ್ಮಗಳನ್ನು ಎಲ್ಲಿಂದಲೋ ತರುತ್ತದೆ.

(ಶೂದ್ರ ಶ್ರೀನಿವಾಸ)

ಇಂಥ ಅಸಂಖ್ಯ ಕವಿತೆಗಳನ್ನು ಉದಾಹರಿಸಬಹುದು. ವರುಷಕ್ಕೆ ಆರು ಪ್ರಮುಖ ಪತ್ರಿಕೆಗಳಲ್ಲಿ ವಾರಕ್ಕೊಂದರಂತೆ ಪ್ರಕಟವಾಗುವ ಮುನ್ನೂರು ಕವಿತೆಗಳ ಜೊತೆಗೆ ಸಣ್ಣಪುಟ್ಟ ಪತ್ರಿಕೆಗಳಲ್ಲಿ ಬರುವ ಇನ್ನೂರು ಕವಿತೆಗಳೂ ಎಲ್ಲೂ ಪ್ರಕಟಣೆ ಕಾಣದ ಇನ್ನೂರು ಕವಿತೆಗಳೂ ಪ್ರಕಟಣೆಗೂ ಅರ್ಹವಲ್ಲದ ಇನ್ನೊಂದಷ್ಟು ಕವಿತೆಗಳೂ ಸೇರಿ ವರುಷಕ್ಕೆ ಏನಿಲ್ಲವೆಂದರೂ ಸಾವಿರ ಕವಿತೆಗಳು ಹುಟ್ಟುತ್ತವೆ. ನಿಂತ ನಿಲುವಿಗೆ ಹೇಳಿ; ನೀವು ಕಳೆದ ವರುಷ ಓದಿದ ಯಾವ ಕವಿತೆ ನೆನಪಿದೆ? ಹೋಗಲಿ ಕಳೆದ ತಿಂಗಳು ಓದಿದ ಒಂದೇ ಒಂದು ಕವಿತೆಯನ್ನು ನೆನಪಿಸಿಕೊಂಡು ಅದರ ಒಂದು ಸಾಲು ಹೇಳಿ? ಹಾಳಾಗಿ ಹೋಗಲಿ, ಒಂದು ಕವಿತೆಯ ಹೆಸರು ಹೇಳಿ?

ನೆನಪಾಗುವುದಿಲ್ಲ . ಆದರೆ ಯಾವತ್ತೋ ಓದಿದ ಬೇಂದ್ರೆಯ ಸಣ್ಣ ಸೋಮವಾರ, ಅಡಿಗರ ಭೂಮಿಗೀತ ಮನಸ್ಸಲ್ಲಿ ಉಳಿದೇ ಉಳಿದಿದೆ. ಕೆ. ಎಸ್‌. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆಯ ಕೆಲವು ಕವಿತೆಗಳಾದರೂ ಆಗಾಗ ನೆನಪಾಗುತ್ತವೆ. ನವ್ಯದ ಪ್ರಮುಖ ಕವಿಗಳು ಎಂದು ಕರೆಸಿಕೊಂಡ ರಾಮಚಂದ್ರ ಶರ್ಮರ ಒಂದೇ ಒಂದು ಕವಿತೆ ಇವತ್ತು ಬದುಕಿ ಉಳಿದಿಲ್ಲ. ಹಾಗೆ ನೋಡಿದರೆ ನವ್ಯದಲ್ಲೂ ನವೋದಯದಲ್ಲೂ ಒಟ್ಟಾರೆಯಾಗಿ ಜೀವಂತವಾಗಿರುವುದು ಬೆರಳೆಣಿಕೆಯ ಕವಿಗಳು.

ಇನ್ನು ಕತೆಗಳ ವಿಚಾರಕ್ಕೆ ಬನ್ನಿ. ಕವಿತೆಗಳು ಸಾವಿರ ಪ್ರಕಟವಾದರೆ ಕತೆಗಳು ಎರಡು ಸಾವಿರ ಪ್ರಕಟವಾಗುತ್ತವೆ. ಆ ಕತೆಗಳ ಪೈಕಿ ನೆನಪಾಗುವ ಒಂದು ಕತೆಯನ್ನು ಸೂಚಿಸಿ. ಇತ್ತೀಚಿನ ಭರವಸೆಯ ಕತೆಗಾರ ಎಂದು ಹೇಳಲಾಗುತ್ತಿರುವ ಯಾರ ಕತೆ ನೆನಪಿದೆ ನಿಮಗೆ? ಯಾವ ಕತೆ ಓದಿದ ನಂತರ ಆಹಾ ಚೆನ್ನಾಗಿದೆ ಅಂತ ಅನ್ನಿಸಿದೆ. ಇದನ್ನು ಕೇವಲ ಓದುಗರಿಗಷ್ಟೇ ಕೇಳುವುದು ಬೇಡ. ಸಾಹಿತ್ಯದ ವಿದ್ಯಾರ್ಥಿಗಳಿಗೂ ಕೇಳೋಣ. ಅವರಿಗಾದರೂ ಯಾವುದು ನೆನಪಿದೆ. ಕೊನೆಗೂ ನೆನಪಲ್ಲಿ ಉಳಿಯುವುದು ಲಂಕೇಶ, ಅನಂತಮೂರ್ತಿ, ಆಲನಹಳ್ಳಿ. ತೀರಾ ಈಚೆಗೆ ಬಂದರೆ ಒಂದಿಬ್ಬರು ತರುಣ ಕತೆಗಾರರು. ಉಳಿದಂತೆ ಬರೆದದ್ದೆಲ್ಲ ತುಂಗೆಯಲ್ಲಿ ಹೆಣ!

ಅಂದಮೇಲೆ ಸಾಹಿತ್ಯ ಬೂಸಾ ಅಲ್ಲದೆ ಇನ್ನೇನು?

***

ಕ್ಷಮಿಸಿ. ಇದು ಆತುರದ ತೀರ್ಮಾನ ಏನಲ್ಲ. ನಮ್ಮ ವಿಮರ್ಶಕರು ಎಷ್ಟು ಬೇಜವಾಬ್ದಾರಿಯ ಮಂದಿ ಅನ್ನುವುದನ್ನು ಸೂಚಿಸುವುದಕ್ಕೆ ಹೇಳಲೇಬೇಕಾಗಿದೆ. ಇತ್ತೀಚೆಗೆ ಕತೆಗಾರರೊಬ್ಬರ ಸಂಕಲನದ ಬಗ್ಗೆ ಒಂದು ವಿಮರ್ಶೆ ಪ್ರಕಟವಾಗಿತ್ತು. ಅತ್ಯಂತ ನಿರ್ಲಕ್ಷ್ಯದಿಂದ ಬರೆದ ವಿಮರ್ಶೆ ಅದು. ಅದನ್ನು ಕತೆಗಾರರ ಗಮನಕ್ಕೆ ತಂದಾಗ ಅಂಥವರು ವಿಮರ್ಶೆ ಬರೆದದ್ದೇ ಪುಣ್ಯ ಎಂಬಂತೆ ಪ್ರತಿಕ್ರಿಯಿಸಿದರು. ಅದೃಷ್ಟವಶಾತ್‌ ಆ ಕತೆಗಾರರ ಕುರಿತಾಗಲೀ ವಿಮರ್ಶಕರ ಕುರಿತಾಗಲೀ ಓದುಗರಿಗೆ ಅಂಥ ಪ್ರೀತಿಯೇನಿಲ್ಲ. ಹೀಗಾಗಿ ಅವರು ಎರಡನ್ನೂ ಓದಿರುವ ಸಾಧ್ಯತೆ ಇಲ್ಲ.

ಪ್ರಶ್ನೆ ಅದಲ್ಲ. ಇವತ್ತಿಗೂ ಜನ ಕೊಂಡು ಓದುವುದು ಹಳೆಯ ಲೇಖಕರನ್ನೇ. ಬೀಚಿಯನ್ನೂ ತರಾಸುವನ್ನೂ ಭೈರಪ್ಪರನ್ನೂ ಜನ ಓದುತ್ತಾರೆ. ಇಂಗ್ಲಿಷ್‌ ಪುಸ್ತಕದಂಗಡಿಗೆ ಹೋದರೆ ತರುಣಿಯರು ಬಂದು ಫಾರ್ಸ್ಟರ್‌ನ ಕಾದಂಬರಿಗಳನ್ನು ಕೇಳಿ ಕೊಳ್ಳುತ್ತಾರೆ. ಕೊಂಡು ಓದುತ್ತಾರೆ. ಆದರೆ ಸಲ್ಮಾನ್‌ ರಶ್ದಿಯ ಪುಸ್ತಕಗಳಿಗೆ ಆ ಬೇಡಿಕೆ ಇಲ್ಲ. ಉಪಮನ್ಯು ಚಟರ್ಜಿ ಮೂರನೆಯ ಕಾದಂಬರಿಯ ಹೊತ್ತಿಗೆ ಬೇಡಿಕೆ ಕಳಕೊಂಡಿರುತ್ತಾನೆ. ಮೊನ್ನೆ ಮೊನ್ನೆ ಬಿಡುಗಡೆಯಾದ ಜುಂಪಾ ಲಾಹಿರಿಯ ಸಣ್ಣಕತೆಗಳ ಸಂಕಲನ ಖುಷ್‌ವಂತ್‌ಸಿಂಗ್‌ ಪುಸ್ತಕದ ಎದುರೂ ನಿಲ್ಲುವುದಿಲ್ಲ.

ಸಾಹಿತ್ಯದಲ್ಲಿ ಶ್ರೇಷ್ಠತೆಯ ಮಾತಾಡುವುದು ಸುಲಭ. ಶ್ರೇಷ್ಠತೆಯನ್ನು ವ್ಯಸನ ಎಂದು ಹಳಿಯುವವರೂ ಮೌಲ್ಯ ಎಂದು ಮೆಚ್ಚುವವರೂ ಓದುಗರಲ್ಲ , ವಿಮರ್ಶಕರು. ಪುಣ್ಯವಶಾತ್‌ ಈ ಕಾಲದ ಮಂದಿ ವಿಮರ್ಶಕರನ್ನು ನಂಬುತ್ತಿಲ್ಲ. ತಮಗಿಷ್ಟ ಬಂದ ಕಾದಂಬರಿಗಳನ್ನು ಕೊಂಡು ಓದುತ್ತಾರೆ.

ಇತ್ತೀಚೆಗೊಂದು ಪುಸ್ತಕ ಪ್ರಕಟವಾಗಿದೆ. ಇ. ಎಫ್‌. ಷೂಮಾಕರ್‌ನ ‘ಸ್ಮಾಲ್‌ ಈಸ್‌ ಬ್ಯೂಟಿಫುಲ್‌’ ಎಂಬ ಕೃತಿಯ ಅನುವಾದ ಅದು. ಅದು ಹೀಗೆ ಶುರುವಾಗುತ್ತದೆ;

‘ಉತ್ಪಾದನೆಯ ಸಮಸ್ಯೆ’ಯನ್ನು ಬಿಡಿಸಲಾಗಿದೆಯೆಂಬ ನಂಬಿಕೆಯು ನಮ್ಮ ಯುಗದ ಅತ್ಯಂತ ದೌರ್ಭಾಗ್ಯಪೂರ್ಣ ತಪ್ಪುಗಳಲ್ಲಿ ಒಂದು. ಎಲ್ಲ ಬಗೆಯ ಜನರೂ ಈ ನಂಬಿಕೆಯನ್ನು ಹೊಂದಿದ್ದಾರೆ. ಅವರು ಹೇಳುತ್ತಾರೆ ಶ್ರೀಮಂತ ರಾಷ್ಟ್ರಗಳಿಗೆ ‘ವಿರಾಮಕ್ಕಾಗಿ ಶಿಕ್ಷಣ’ವು ಕಾರ್ಯಭಾರವಾದರೆ ಬಡರಾಷ್ಟ್ರಗಳಿಗೆ ಅದು ‘ತಾಂತ್ರಿಕ ವರ್ಗಾವಣೆ’ಯಾಗಿದೆ.’

ಇಂಥ ಸಾಲುಗಳನ್ನು ಬರೆದ ಮಹನೀಯರು ಈಗಿಲ್ಲ. ಹೀಗಾಗಿ ಅವರ ಬಗ್ಗೆ ಕಟುವಾಗಿ ಮಾತಾಡುವ ಅಗತ್ಯವೂ ಇಲ್ಲ. ಆದರೆ ಸದ್ಯಕ್ಕಂತೂ ಅಪ್ರಸ್ತುತವಾಗಿರುವ ಇಂಥದ್ದೊಂದು ಪುಸ್ತಕವನ್ನು ಹೊರ ತಂದ ಸಪ್ನ ಇದನ್ನು ನೂರಿಪ್ಪತ್ತೆೈದು ರುಪಾಯಿಗಳಿಗೆ ಮಾರುತ್ತದೆ. ಲೈಬ್ರರಿಗಳಲ್ಲಿ ಇದರ ಪ್ರತಿಗಳು ರಾರಾಜಿಸಲಿವೆ. ಇದನ್ನು ಆಸಕ್ತಿಯಿಂದ ಓದಲೆತ್ನಿಸುವ ತರುಣ ಓದುಗ, ಮೊದಲ ಪ್ಯಾರಾ ಓದುತ್ತಿದ್ದಂತೆ ಕನ್ನಡದ ಬಗ್ಗೆಯೇ ಆಸಕ್ತಿ ಕಳೆದುಕೊಳ್ಳುತ್ತಾನೆ.

ಕಾವ್ಯದ ಗತಿ ಹಾಗಾದರೆ, ವಿಚಾರ ಸಾಹಿತ್ಯದ ಸ್ಥಿತಿ ಹೀಗಿದೆ. ಕ್ರಿಯೇಟಿವ್‌ ಅನ್ನಬಹುದಾದ ಯಾವ ಬರಹಗಳೂ ಪ್ರಕಟಗೊಳ್ಳುತ್ತಿಲ್ಲ. ಲಂಕೇಶ್‌ ಬರೆಯುತ್ತಿದ್ದಾಗ ಕನಿಷ್ಠ ಅವರು ತಾವು ಓದಿದ ಪುಸ್ತಕಗಳ ಕುರಿತಾದರೂ ಬರೆದು ನಮ್ಮನ್ನು ಕೊಂಚವಾದರೂ ಅಪ್‌ಡೇಟ್‌ ಮಾಡುತ್ತಿದ್ದರು. ಅವರಿಲ್ಲದ ಮೇಲಂತೂ ಪ್ರಕಟವಾಗುವುದೆಲ್ಲ ಬೂಸಾ ಅನ್ನುವಂಥ ಸ್ಥಿತಿ ಬಂದಿದೆ. ಕೆಟ್ಟ ಪುಸ್ತಕಗಳನ್ನು ನಾನಾ ಕಾರಣಕ್ಕೆ ಹೊಗಳುವವರು ಹೆಚ್ಚಾಗುತ್ತಿದ್ದಾರೆ. ಒಂದಷ್ಟು ದಿನ ಕವಿತೆ ಬರೆಯುವುದನ್ನು ಯಾಕೆ ನಿಷೇಧಿಸಬಾರದು?

***

ನಿಜಕ್ಕೂ ಹೊಸತನ ತುಂಬಿ ಬರೆಯುವವರನ್ನು ಇವತ್ತು ವಿಮರ್ಶಕರೇ ಕಡೆಗಣಿಸುತ್ತಿದ್ದಾರೆ. ಸಾವಿರವೋ ಐನೂರೋ ಖರ್ಚಾಗುವ ಸಾಹಿತ್ಯಿಕ ಪತ್ರಿಕೆಗಳಿಂದ ಅಪರೂಪಕ್ಕೆ ಬೆರಳೆಣಿಕೆಯ ಮಂದಿಯಿಂದ ಓದಿಸಿಕೊಳ್ಳುವ ಕಾವ್ಯದಿಂದ ಲೇಖಕ ಮತ್ತು ವಿಮರ್ಶಕ- ಈ ಇಬ್ಬರನ್ನು ಬಿಟ್ಟರೆ ಮತ್ಯಾರೂ ಓದದ ವಿಮರ್ಶೆಯಿಂದ ಸಾಹಿತ್ಯ ಬೂಸಾ ಹೌದೋ ಅಲ್ಲವೋ ತೀಮಾನಿಸೋದು ಕಷ್ಟ. ಬೂಸಾ ಎಂದು ಕರೆದಾಕ್ಷಣ ತಮ್ಮ ಕುಲಕ್ಕೆ ಅವಮಾನವಾಯಿತು ಎಂದು ಲೇಖಕರು ಹಾರಾಡುತ್ತಾರೆ. ಬೂಸಾ ಎಂದು ಕರೆಯದೇ ನಿರ್ಲಕ್ಷಿಸಿದರೆ ಸುಮ್ಮನಿರುತ್ತಾರೆ. ನಿಜಕ್ಕೂ ಬೂಸಾ ಯಾವುದು ಅನ್ನುವುದನ್ನು ಕಾಲ ತೀರ್ಮಾನಿಸುತ್ತದೆ. ಒಂದು ಕೃತಿ ಪ್ರಕಟವಾದ ಆರೇ ತಿಂಗಳಲ್ಲಿ ಹತ್ತು ಸಾವಿರ ಖರ್ಚಾಗುವ ಲೇಖಕರೂ ನಮ್ಮಲ್ಲಿದ್ದಾರೆ. ಅವರು ನಮ್ಮ ವಿಮರ್ಶಕರ ಕಣ್ಣಿಗೆ ಬೀಳುವುದಿಲ್ಲ. ಯಾಕೆಂದರೆ ವಿಮರ್ಶಕರು ಓದುವುದು ತಮಗೆ ತಂದುಕೊಟ್ಟ ಪುಸ್ತಕಗಳನ್ನು ಮಾತ್ರ!

***

ಬೂಸಾದ ಬಗ್ಗೆ ಶುರುಮಾಡಿ ಇಷ್ಟೆಲ್ಲ ಹೇಳಬೇಕಾಯಿತು. ಇತ್ತೀಚೆಗೆ ಲೇಖಕರೊಬ್ಬರು ದೇಜಗೌ ಹಾಗೆ ಹೇಳಿರಲಿಕ್ಕಿಲ್ಲ. ಹೇಳಿದ್ದರೂ ಬೇರೆ ಥರ ಹೇಳಿರಬಹುದು. ಪತ್ರಿಕೆಗಳಲ್ಲಿ ವರದಿಯಾಗುವುದನ್ನು ನಂಬುವುದು ಕಷ್ಟ ಎಂಬರ್ಥ ಬರುವ ಮಾತಾಡಿದ್ದಾರೆ.

ಈ ಸಾಹಿತಿಗಳ ದರಿದ್ರ ತರಲೆಗಳು ಒಂದೆರಡಲ್ಲ. ಅವರು ತಮ್ಮ ಓದುಗರನ್ನೂ ಗೌರವಿಸುವುದಿಲ್ಲ , ಪತ್ರಿಕೆಗಳನ್ನೂ ಒಪ್ಪುವುದಿಲ್ಲ. ಒಬ್ಬ ಸಾಹಿತಿಗೆ ತಾನು ಮೂರು ಗಂಟೆ ಹೊತ್ತು ಮಾತಾಡಿದ್ದೂ ಮುಖ್ಯವಾಗಿರುತ್ತದೆ. ಅಷ್ಟೂ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂದು ಆತ ನಿರೀಕ್ಷಿಸುತ್ತಾನೆ. ಕೆಲವರಂತೂ ‘ಮಂತ್ರಿ ಹೇಳಿದ್ದನ್ನು ದೊಡ್ಡದಾಗಿ ಹಾಕ್ತೀರಿ. ಸಾಹಿತಿ ಹೇಳಿದ್ದನ್ನೂ ಹಾಕ್ರೀ’ ಎಂದು ಜಗಳಕ್ಕೇ ಬರುತ್ತಾರೆ.

ಒಬ್ಬ ಮಂತ್ರಿ ಹೇಳಿದ್ದು ಒಬ್ಬ ಸಾಹಿತಿಯ ಹೇಳಿಕೆಗಿಂತ ಜನರ ಮಟ್ಟಿಗೆ ಮುಖ್ಯ. ಆತ ಅವರೆಲ್ಲ ಚುನಾಯಿಸಿ ಕಳುಹಿಸಿದ ಪ್ರತಿನಿಧಿ. ಆತ ತಮಗೆ ಏನು ಒಳ್ಳೆಯದು ಮಾಡುತ್ತಾನೆ, ಏನು ಮಾತಾಡುತ್ತಾನೆ ಅನ್ನುವುದನ್ನು ಜನ ಆಸಕ್ತಿಯಿಂದ ಗಮನಿಸುತ್ತಾರೆ. ಆದರೆ ಸಾಹಿತಿ ಹೇಳುವುದು ಕೇವಲ ಹೇಳಿಕೆಯ ಮಟ್ಟದಲ್ಲೇ ಇರುತ್ತದೆ. ಉದಾಹರಣೆಗೆ ಮೊನ್ನೆ ಎಸ್‌. ಎಲ್‌. ಭೈರಪ್ಪ ಬೌದ್ಧ ಧರ್ಮ ಜೀವ ವಿರೋಧಿ ಅಂದರು.

ಬೌದ್ಧ ಧರ್ಮ ತನ್ನ ಉಚ್ಛ್ರಾಯ ಸ್ಥಿತಿಯನ್ನು ಕಂಡದ್ದೂ ಆಯ್ತು , ಅವನತಿಯನ್ನು ಅನುಭವಿಸಿದ್ದೂ ಆಯ್ತು. ಈಗ ಅದನ್ನು ಜೀವ ವಿರೋಧಿ ಅಂತ ಕರೆಯೋದರಿಂದ ಭೈರಪ್ಪ ಏನು ಸಾಧಿಸಿದ ಹಾಗಾಯಿತು.

ನಿಜಕ್ಕೂ ಅವರಿಗೆ ಏನಾದರೂ ಹೇಳಬೇಕು ಅನ್ನಿಸಿದ್ದರೆ, ಇವತ್ತಿನ ಸಾಮಾಜಿಕ ಕಷ್ಟಗಳು ಗೊತ್ತಿದ್ದರೆ, ಎಸ್‌. ಎಂ. ಕೃಷ್ಣ ಜೀವ ವಿರೋಧಿ ಅನ್ನಬಹುದಿತ್ತು.

ಕನಿಷ್ಠ ಅವರ ನಿಲುವನ್ನಾದರೂ ಮೆಚ್ಚಿಕೊಳ್ಳಬಹುದಿತ್ತು!

(ಸ್ನೇಹಸೇತು : ಹಾಯ್‌ ಬೆಂಗಳೂರ್‌)


ಪೂರಕ ಓದಿಗೆ-
ಬೂಸಾದಿಂದ ಬೂರಾ ಸಕ್ಕರೆ !


ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X