• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಕನಕೋಟೆ ಎಂಬ ಸಾಂಸ್ಕೃತಿಕ ಅಡಗುದಾಣ

By Staff
|

 • ಜಾನಕಿ
 • ಬೆಟ್ಟದಾ ತುದಿಯಲ್ಲಿ ಕಾಡುಗಳ ಎದೆಯಲ್ಲಿ

  ಕಪಿನೀಯ ನದಿಯೆಲ್ಲಿ ಉಗುತಿರುವುದಲ್ಲಿ ;

  ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ

  ಪಡೆಗೂಡುವುದು ಗಾಡ ಒಟ್ಟೊಟ್ಟಿ ಅಲ್ಲಿ ;

  ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿಬಳಗ

  ಬೆಳುತಿಂಗಳಿನ ತಳಗ ನಡೆಯುವುದು ಅಲ್ಲಿ ;

  ಯಾವಲ್ಲಿ ಸಾರಂಗ ಕೆಚ್ಚುಕೋಡಿನ ಸಿಂಗ

  ನೋಡುತ ನಿಂತ್ಹಂಗ ನಿಲ್ಲುವುದು ಅಲ್ಲಿ ;

  ಎಲ್ಲಿ ಎರಳೆಯ ಹಿಂಡು ಹುಲಿಯ ಕಣ್ಣನು ಕಂಡು

  ಹೆದರಿ ಹಾರುವ ದಂಡು ಚೆಲ್ಲುವುದು ಅಲ್ಲಿ ;

  ಗಿಳಿಗೊರವ ಕೋಗೀಲೆ ಹಾರು ಹಕ್ಕಿಯ ಮಾಲೆ

  ಹಾಡುತಿದೆ ದನಿಮೇಲೆ ದನಿಯೇರಿ ಎಲ್ಲಿ ;

  ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ

  ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ ;

  ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ

  ಕದ್ದೊಂದು ಮೇವಲ್ಲಿ ತಣಿದಿರುವುದಲ್ಲಿ ;

  ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ

  ಮೊಲ್ಲೆ ಅದರ ತಂಗಿ ಅರಳುವುದು ಎಲ್ಲಿ ;

  ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ

  ತನ್ನ ತಾಣವ ಸಾರಿ ಬಾ ಎಂಬುದಲ್ಲಿ ;

  ಯಾವಲ್ಲಿ ಹೆಬ್ಬಲವು ಕೈಗೆ ಕಾಲಿಗೆ ಗೊಲಸು

  ಅಂತ ಹಣ್ಣನು ಹುಲುಸು ಹೊತ್ತಿರುವುದಲ್ಲಿ

  ಎಲ್ಲಿ ಕರಿ ಸಿರಿಗಂಧ ಮರ ಬೆಳೆದು ತಾ ಮುಂದ

  ಮಾದೇಶ್ವರಗೆ ಚೆಂದ ಮೆಚ್ಚುವುದು ಅಲ್ಲಿ..

  Masti Venkatesh Iyengarಈ ಹಾಡು ಬರೆದದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರರು ಹೌದಾ? ಹಾಗೆ ಬೆರಗಾಗುವಂಥ ವೈವಿಧ್ಯ ಇದರಲ್ಲಿದೆ. ಮಾಸ್ತಿಯವರ ನವರಾತ್ರಿಯ ಪದ್ಯಗಳನ್ನೂ ಇತರ ಗೀತೆಗಳನ್ನೂ ಓದಿದವರಿಗೆ ಇದನ್ನೂ ಅವರೇ ಬರೆದಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತದೆ. ಮಾಸ್ತಿಯವರ ಕತೆಗಳನ್ನು ಓದಿದವರಿಗೆ ಪರಿಚಿತವಾಗಿರುವ ಸರಳತೆ ಮತ್ತು ಸ್ಪಷ್ಟತೆ ಅವರ ಈ ನಾಟಕದ ಗೀತೆಯಲ್ಲೂ ಕಾಣಿಸುತ್ತದೆ.

  ಇದು ‘ಕಾಕನಕೋಟೆ’ ನಾಟಕಕ್ಕೆ ಮಾಸ್ತಿಯವರು ಬರೆದ ಗೀತೆ. ನಾಟಕದ ಆರಂಭದಲ್ಲೇ ಬರುತ್ತದೆ. ಇದಕ್ಕೆ ಅಶ್ವತ್ಥ್‌ ಅಷ್ಟೇ ನಾಜೂಕಾಗಿ ಸಂಗೀತ ಸಂಯೋಜಿಸಿದ್ದಾರೆ. ಸಂಗೀತದ ಅಗತ್ಯವೇ ಇಲ್ಲ ಎನ್ನಿಸುವಂಥ ಲಯಬದ್ಧತೆಯೂ ಈ ಗೀತೆಯಲ್ಲಿದೆ. ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ- ಎಂಬ ಸಾಲುಗಳನ್ನು ಕಾಡಿನ ಬಗ್ಗೆ ವಿಶೇಷವಾದ ಮತ್ತು ಗಾಢವಾದ ತಿಳುವಳಿಕೆ ಇರದ ಹೊರತು ಬರೆಯುವುದು ಸುಲಭವಲ್ಲ. ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ ಎನ್ನುವ ಸಾಲಿನ ಜೊತೆಗೇ ಅಚ್ಚರಿಗೊಳಿಸುವಂಥ ಮೊಲ್ಲೆ ಅದರ ತಂಗಿ... ಎಂಬ ಸಾಲಿದೆ. ಒಂದು ಹೆಸರಿಲ್ಲದ ಮೊಲ್ಲೆಯಂಥ ಹೂವನ್ನು ಅದರ ತಂಗಿ ಎಂದು ಕರೆಯುವುದು ಅವರಿಗಷ್ಟೇ ಸಾಧ್ಯವಿತ್ತಾ? ಅದಾದ ತುಂಬ ವರುಷಗಳ ನಂತರ ಕೆ .ಎಸ್‌. ನರಸಿಂಹಸ್ವಾಮಿ ‘ ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು..’ ಎಂದು ಬಳಸಿದಾಗ ಥಟ್ಟನೆ ನೆನಪಾದದ್ದು ಮಾಸ್ತಿಯವರ ‘ಮೊಲ್ಲೆ... ಅದರ ತಂಗಿ’ ಪ್ರಯೋಗ.

  ನಮ್ಮಲ್ಲಿ ಅನೇಕರು ತುಂಬ ಕಡೆಗಣಿಸಿದ ಲೇಖಕರ ಪೈಕಿ ಪುತಿನರಂತೆ ಮಾಸ್ತಿ ಕೂಡ ಒಬ್ಬರು. ಮಾಸ್ತಿಯವರು ಕನ್ನಡದ ಆಸ್ತಿ ಎನ್ನುವುದು ಈಗ ಕೇವಲ ಸ್ಲೋಗನ್ನಷ್ಟೇ ಆಗಿ ಉಳಿದುಬಿಟ್ಟಿದೆ. ಟಾಲ್‌ಸ್ಟಾಯ್‌ ಕತೆಗಳನ್ನು ಮೀರಿಸಬಲ್ಲ ಒಳನೋಟ ಮತ್ತು ಬದುಕಿನ ಗಾಢ ಅರಿವು ಮಾಸ್ತಿ ಕತೆಗಳಲ್ಲಿ ಕಾಣಿಸುತ್ತದೆ. ಅವರು ಕತೆ ಬರೆದು ಎಪ್ಪತ್ತೆಂಬತ್ತು ವರುಷಗಳಾದ ನಂತರ ದೃಶ್ಯಮಾಧ್ಯಮವಾದ ಸಿನಿಮಾ ಅವರ ಶೈಲಿಯನ್ನು ಕಂಡುಕೊಳ್ಳಲು ತುಡಿಯುತ್ತಿದೆ. ಮಾಸ್ತಿಯವರಷ್ಟು ನಿರುಮ್ಮಳವಾಗಿ, ತಣ್ಣನೆಯ ದನಿಯಲ್ಲಿ ಮತ್ತು ಅಬ್ಬರವಿಲ್ಲದ ಧಾಟಿಯಲ್ಲಿ ಒಂದು ಕಥಾನಕವನ್ನು ಅರುಹುವುದು ಸಾಧ್ಯವಾದರೆ ಎಷ್ಟು ಚೆನ್ನ ಎಂದು ಈಗ ಎಲ್ಲರಿಗೂ ಅನ್ನಿಸತೊಡಗಿದೆ.

  ಮಾಸ್ತಿಯವರ ಕತೆಯಷ್ಟೇ ಬೆರಗುಗೊಳಿಸುವ ಕೆಲವು ನಾಟಕಗಳಿವೆ. ಅವರು ಬರೆದ ಆರೆಂಟು ನಾಟಕಗಳ ಪೈಕಿ ಇವತ್ತಿನ ಸಂದರ್ಭಕ್ಕೆ ತುಂಬ ಆಪ್ತ ಅನ್ನಿಸುವುದು ಕಾಕನಕೋಟೆ. ಇವತ್ತು ನಾವು ಹಿಡಿಯಲೆತ್ನಿಸುತ್ತಿರುವ ಜಾಗತೀಕರಣದ ವಿರುದ್ಧದ ರೂಪಕಕ್ಕೆ ಕಾಕನಕೋಟೆಗಿಂತ ಪ್ರಬಲವಾದ ಮತ್ತೊಂದು ದೃಷ್ಟಾಂತ ಸಿಗಲಾರದು. ನಮ್ಮ ರಾಜಕೀಯ ಸ್ಥಿತಿಯನ್ನು ತುಘಲಕ್‌ ಇವತ್ತಿಗೂ ಹೇಗೆ ಪ್ರತಿನಿಧಿಸುತ್ತದೆಯೋ ಅಷ್ಟೇ ಸಮರ್ಥವಾಗಿ ಕಾಕನಕೋಟೆ ನಮ್ಮ ಗ್ರಸ್ತ ಆರ್ಥಿಕ ಸ್ಥಿತಿಯನ್ನು ಹಿಡಿದಿಡುತ್ತದೆ.

  ಹಾಗೆ ನೋಡಿದರೆ ನಾವು ಸಂಸರನ್ನೂ ಶ್ರೀರಂಗರನ್ನೂ ನಾಟಕಕಾರರೆಂದು ಒಪ್ಪಿಕೊಂಡಷ್ಟು ಪುತಿನರನ್ನೂ ಮಾಸ್ತಿಯವರನ್ನೂ ಒಪ್ಪಿಕೊಳ್ಳುವುದಿಲ್ಲ. ಪುತಿನ ಕಾವ್ಯದಲ್ಲಿ ಮಾಸ್ತಿ ಸಣ್ಣಕತೆಯಲ್ಲಿ ಅಗಾಧವಾಗಿ ಸಾಧಿಸಿದ್ದರಿಂದ ಅವರ ಇತರ ಬರಹಗಳು ಮೂಲೆಗುಂಪಾಗಿರುವ ಸಾಧ್ಯತೆಯೂ ಇದೆ. ಆದರೆ ಬಿ.ವಿ. ಕಾರಂತರು ಗೋಕುಲ ನಿರ್ಗಮನವನ್ನು ಆಡಿಸದೇ ಹೋಗಿದ್ದರೆ ಅದರ ಅಂತಃಶಕ್ತಿ ಇವತ್ತಿಗೂ ಒಡೆದುಕೊಳ್ಳದೇ ಹೋಗುತ್ತಿತ್ತೋ ಏನೋ? ಹಾಗೇ, ಮಾಸ್ತಿಯವರ ಕಾಕನಕೋಟೆ ಕೂಡ.

  ಕಾಕನಕೋಟೆಯ ಕಥಾವಿಸ್ತರವೇ ಬೆಚ್ಚಿಬೀಳಿಸುವಂತಿದೆ. ಕಾಡುಕುರುಬರ ಹಟ್ಟಿಯ ಬುದ್ಧಿವಂತ ಕಾಕ, ತನ್ನ ಬೂಡನ್ನು ಪರಕೀಯರಿಂದ ಕಾಪಾಡುವುದಕ್ಕೆ ಯತ್ನಿಸುವುದು, ಆ ಹಂತದಲ್ಲಿ ಆತ ಸಂಸ್ಥಾನದ ವಿರುದ್ಧ ತಿರುಗಿನಿಲ್ಲದೆ ಅವರಿಗೆ ನಿಷ್ಠನಾಗಿದ್ದುಕೊಂಡೇ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಇದರ ವಸ್ತು. ಕುರುಬರು ಅರಸೊತ್ತಿಗೆಗೆ ಸಲ್ಲಿಸಬೇಕಾದ ಕಪ್ಪವನ್ನು ಸಲ್ಲಿಸದೇ ಹೋದಾಗ ಉಂಟಾಗುವ ಪರಿಸ್ಥಿತಿಯನ್ನು ಕಾಕ ನಿಭಾಯಿಸುವ ಶೈಲಿಯಲ್ಲೇ ಕಾಡಿನ ಮಕ್ಕಳಿಗೆ ಸಹಜವಾದ ಬುದ್ಧಿವಂತಿಕೆ ಮತ್ತು ಸ್ವಯಂಸ್ಪೂರ್ತಿ ಎದ್ದು ಕಾಣುತ್ತದೆ.

  ಇಲ್ನೋಡಿ;

  ಕಂದಾಯ ವಸೂಲಿ ಮಾಡುವ ಕರಣೀಕ ಹೇಳುತ್ತಾನೆ; ಅದೆಲ್ಲ ಆಗೋಲ್ಲ. ಇದೇ ಕೊನೇ ಮಾತು.

  ಅದಕ್ಕೆ ಕಾಕನ ಉತ್ತರ; ಅದ್ಯಾಕ ನನ್ನೊಡೆಯ ಹಂಗಂತೀರ? ಜೀವ ಇರಬೇಕಾದರೆ ಇದನ್ಯಾಕ ಕೊನೆ ಮಾತು ಅಂತೀರ?

  ಅದಕ್ಕೆ ಕರಣೀಕ ರೇಗುತ್ತಾನೆ. ಕಾಕ ಮತ್ತೂ ಮುಂದುವರಿಸುತ್ತಾನೆ; ಕೊನೇ ಮಾತಾಗಬ್ಯಾಡ ಅಂದಿ ಬುದ್ಧಿ. ಕೊನೇ ಮಾತಾಗೋದೆ ನಿಮಗೆ ಚಂದ ಅಂದರೆ ಹಂಗೆ ಆಗಲೇಳಿರ. ಅಮ್ಮಾವರ ತಾತಿಬಲ ಎಷ್ಟೊ ಅಷ್ಟೆ ಆಯಿತು.

  ನಾಟಕಕ್ಕೆ ಬೇಕಾದ ರೋಚಕತೆ, ಕ್ರಿಯೆ ಮತ್ತು ಘಟನೆಗಳ ಸರಮಾಲೆಯೇ ಈ ನಾಟಕದಲ್ಲಿದೆ. ಕಾಕ ತಾನು ಕಾಕ ಅಲ್ಲ ಎಂದು ಹೇಳಿಕೊಂಡು ಕಂದಾಯ ವಸೂಲಿಗೆ ಬರುವ ಹೆಗ್ಗಡೆಯನ್ನು ಭೇಟಿಯಾಗುತ್ತಾನೆ. ಹೆಗ್ಗಡೆಗೆ ಅವನೇ ಕಾಕ ಎಂದು ಗೊತ್ತಾಗಿ ಆತನನ್ನು ಬಂಧಿಸುವ ಯತ್ನ ಮಾಡುತ್ತಾನೆ. ಹಾಗೆ ಬಂಧಿಸುವ ಹುನ್ನಾರ ಮೊದಲೇ ಗೊತ್ತಾಗಿ ಕಾಕ ಅದರಿಂದ ತಪ್ಪಿಸಿಕೊಂಡು ಹೆಗ್ಗಡೆಯವರ ಮಗನನ್ನು ಕರಣೀಕರನ್ನು ಅಪಹರಿಸುತ್ತಾನೆ. ಹಾಗೆ ಅಪಹರಿಸಿಕೊಂಡು ಹೋದ ಹೆಗ್ಗಡೆಯವರ ಮಗ ಕಾಕನ ಮಗಳನ್ನು ಪ್ರೀತಿ ಮಾಡುತ್ತಾನೆ. ಕೊನೆಯಲ್ಲಿ ಕಾಕನ ಮಗಳು ಹೆಗ್ಗಡೆಯವರ ಮಗನನ್ನು ಮದುವೆಯಾಗುತ್ತಾಳೆ. ಕುರುಬರ ಬೂಡಿಗೆ ಮಹರಾಜನ ಆಗಮನವೂ ಆಗುತ್ತದೆ. ಕರಣೀಕರ ವಂಚನೆಯೂ ಬಯಲಾಗುತ್ತದೆ.

  ವಿಸ್ತಾರವಾದ ಹಾಗೂ ಪುನರ್‌ವ್ಯಾಖ್ಯಾನದ ಮರು ಓದನ್ನು ಬೇಡುವ ಕೃತಿಗಳ ಪೈಕಿ ಕಾಕನಕೋಟೆ ಕೂಡ ಒಂದು. ಇವತ್ತು ಓದಿದಾಗ ಅದರೊಳಗಿರುವ ಅನೇಕ ಹೊಸ ಅರ್ಥಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ತುಂಬ ಸರಳವಾದ ಒಂದು ಮಾತು ಇವತ್ತಿಗೆ ಹೇಗೆ ಹೊಂದಿಕೆಯಾಗುತ್ತದೆ ಅನ್ನುವುದನ್ನು ಗಮನಿಸಿ;

  ಕಾಕ ಹೇಳುತ್ತಾನೆ- ಹಿರಿಯರು ಅಂದಿದಾರೆ ಕಾಡು ನಾಡಾಗಬೇಡ ನಾಡು ಬಯಲಾಗಬೇಡ ಅಂತ. ಕಾಡು ದೇವರು ಒಲಿದಿರೋ ಮಂದಿ ಊರ ಕಟ್ಟತೀವಿ ಅನ್ನಬಾರದಂತೆ. ಈಗ ನಮ್ಮ ಹಕ್ಕಳು ಕಾಡಾಗೆ ನಡೀತಿರಲೀಕೆ ಹರಿದಾರೀಲಿರೋ ಆನೆ ಕಂಪು ಮೂಗಿಗೆ ತಿಳೀತದೆ. ತರಗಿನೊಳಗಿರೋ ತೆಕ್ಕೆ ಬಿದ್ದಿರೋ ಸರಪಾ ಕಣ್ಣಿಗೆ ಕಾಣುತದೆ. ಜಿಂಕೆ ಹಿಂದೆ ನಡಿಯೋ ಹುಲಿ ಹೆಜ್ಜೆ ಸಪ್ಪಳ ಕೊಂಬಿನ ದೂರದಲ್ಲಿ ಕಿವಿಗೆ ಕೇಳತದೆ. ಜೇನ ಹುಡುಕುತಾ ಹೋಗತಿದ್ರೆ ನೊಣ ಬಂದು ದಾರಿ ತೋರತದೆ. ಊರು ಕಟ್ಟಿ ನಿಂತಿವಿ, ಇದೊಂದೂ ಆಗಲ್ಲ.

  ಇವತ್ತಿಗೂ ನಾವು ಪ್ರೀತಿಯಂದ ಕೇಳುವ ನೇಸರ ನೋಡು.. ನೇಸರಾ ನೋಡು ಗೀತೆಯನ್ನೂ ಬರೆದವರು ಮಾಸ್ತಿ. ಇನ್ನೊಂದು ವಿಚಿತ್ರ ನೋಡಿ. ಕಂಬಾರ, ಮಾಸ್ತಿ, ಲಂಕೇಶ್‌ ಮುಂತಾದವರು ಸಿನಿಮಾ ಮಾಡುತ್ತಿದ್ದಾಗ ಅದಕ್ಕೆ ಹೊಂದುವ ಗೀತೆಗಳನ್ನೂ ತಾವೇ ಬರೀತಿದ್ದರು. ಅವು ಇವತ್ತಿಗೂ ಅಷ್ಟೇ ಹೊಸದಾಗಿ ಉಳಕೊಂಡಿವೆ. ಎಲ್ಲಿದ್ದೇ ಇಲ್ಲೀ ತನಕ, ಕೆಂಪಾದವೋ ಎಲ್ಲಾ ಕೆಂಪಾದವೋ, ಕರಿಯವ್ವನ ಗುಡಿತಾವ ಅರಳ್ಯಾವೆ ಬಿಳಿಹೂವು, ನೇಸರ ನೋಡು, ಸಂಗೀತಾ, ಕಾಡುಕುದುರೆ ಓಡಿಬಂದಿತ್ತಾ ಇವಿತ್ಯಾದಿ ಹಾಡುಗಳಿಗೆ ಸಾವಿಲ್ಲ.

  ಇಂಥದ್ದೇ ಇನ್ನೊಂದಷ್ಟು ಗೀತೆಗಳೂ ಇಲ್ಲಿವೆ. ಉದಾಹರಣೆಗೆ ಕಾಕ ಹಾಡುವ ಮತ್ತೊಂದು ಹಾಡು ಹೀಗಿದೆ;

  ಮಾದೇಶ್ವರ ನಿನ್ನ ನಂಬದ ಮಂದಿ

  ಬಾಳಲ್ಲ ಸಾಯಲ್ಲ ಬಾಡುವರು ಕಂದಿ

  ಮಾದೇಶ್ವರಾ ನನ್ನ ಸಲಹೆಂದ ಉಸುರು

  ಬಾಡಲ್ಲ ಬಳಲಲ್ಲ ಎಂದೆಂದು ಹಸುರು.

  ಹಾಗೇ ಆಶೀರ್ವಚನ ಗೀತದಂತಿರುವ ಈ ಸಾಲುಗಳನ್ನು ಓದಿ;

  ಕರಿಹೈದನವ್ವನಾ ಹೆಸರೆಂದು ನಿಲ್ಲಲಿ

  ಅವನ ಬಳಿಯೆಂದೆಂದು ಒಳ್ಳಿದನು ಮೆಲ್ಲಲಿ

  ಅವನ ಹೆತ್ತಾ ಕಾಡು ಎಂದೆಂದು ಚಿಗುರಲಿ

  ಅವನ ಬಳಿ ಎಂದೆಂದು ಮಿಕ್ಕಿರಲಿ ಹೊಗರಲಿ

  ಅವನ ಹಾಡಿಗಳಿರಲಿ ಎಂದೆಂದು ಸೊಗದಲಿ

  ಅವನ ಬಳಿಗೆಂದೆಂದು ನಗೆಯಿರಲಿ ಮೊಗದಲಿ

  ಅವನ ಹೊಗಳುವ ಹಾಡು ಎಂದೆಂದು ಹಾಡಲಿ

  ಅವನ ಬಳಿ ಎಂದೆಂದು ಹಬ್ಬವನು ಮಾಡಲಿ

  ***

  ಕಾಕನಕೋಟೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ನಾವು ನಮ್ಮನ್ನು ಆವರಿಸುವ ಆಧುನಿಕತೆ ಎಂಬ ಕಾಯಿಲೆಯನ್ನು ಹೇಗೆ ಎದುರಿಸಬೇಕು ಅನ್ನುವುದಕ್ಕೆ ಆಧುನಿಕತೆಯಲ್ಲಿ ಉತ್ತರವಿಲ್ಲ. ಉತ್ತರ ಹುಡುಕಬೇಕಾದರೆ ನಾವು ಮತ್ತೆ ನಮ್ಮ ಹಳೆಯ ಕಾಲಕ್ಕೆ ಮರಳಬೇಕು. ನಾಗರೀಕತೆಯ ಉತ್ತುಂಗಕ್ಕೆ ತಲುಪಿದ ಒಂದು ಸಂಸ್ಕೃತಿ ಮಾಡುವುದು ಅದನ್ನೇ. ಅದೇ ಕಾರಣಕ್ಕೆ ಪಾಶ್ಚಾತ್ಯ ದೇಶಗಳು ಪೂರ್ವದ ಒಡಪುಗಳಲ್ಲಿ, ಶ್ಲೋಕಗಳಲ್ಲಿ, ಮಾಂತ್ರಿಕತೆಯಲ್ಲಿ, ಪವಾಡದಲ್ಲಿ ಉತ್ತರ ಹುಡುಕಲು ಯತ್ನಿಸಿದ್ದು.

  ಆಧುನಿಕತೆ ಒಂದು ಸ್ಥಿತಿಯಲ್ಲ; ಅದೊಂದು ರೋಗ. ಅದು ರೋಗ ಅನ್ನುವುದು ನಮಗೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಸಮೂಹಸನ್ನಿಯಲ್ಲಿ ಅದೊಂದು ವರದಂತೆ ಕಾಣಿಸುವ ಸಾಧ್ಯತೆಯೇ ಹೆಚ್ಚು. ಆದರೆ ಏಕಾಂತದಲ್ಲಿ ಮುಂಜಾವದ ಒಂಟಿತನದಲ್ಲಿ ಆಧುನಿಕತೆಯ ಶಾಪ ನಮ್ಮನ್ನು ತಟ್ಟುತ್ತದೆ. ನಾವು ಜೀವಿಸಲು ತೀರ ಅಗತ್ಯವಾದ ‘ಚಾವಡಿ’ಯಂಥ ಜಾಗಗಳನ್ನು, ಜಗಲಿಯನ್ನು, ಹಿತ್ತಿಲನ್ನು ಅದು ನಾಶಮಾಡುತ್ತದೆ.

  ನಗರಗಳಲ್ಲಿ ಮನೆಗೆ ಜಗಲಿಗಳಿಲ್ಲ. ಜಗಲಿಯ ಮೇಲೆ ಕುಳಿತು ಮಾತಾಡುವ ಬಳೆಗಾರನಿಲ್ಲ, ಬಳೆಗಾರ ಹೊತ್ತು ತರುವ ಸುದ್ದಿಗಾಗಿ ಕಾಯುವ ರೋಮಾಂಚವಿಲ್ಲ. ಸುದ್ದಿಮೂಲಗಳೂ ಮಾಹಿತಿಕೇಂದ್ರಗಳು ಇವತ್ತು ಬದಲಾಗಿವೆ. ಅಅದಕ್ಕೆ ತಕ್ಕಂತೆ ನಮ್ಮ ನಿಲುವುಗಳೂ ಬದಲಾಗುತ್ತಿವೆ. ಮನೆ ತುಂಬ ಜನರಿಂದ ತುಂಬಿಕೊಂಡು ಕಲಕಲ ಅನ್ನುತ್ತಿದ್ದರೆ ಖುಷಿಯಾಗುತ್ತಿದ್ದ ದಿನಗಳು ಈಗಿಲ್ಲ. ಈಗ ಪ್ರತಿಯಾಬ್ಬರಿಗೂ ನೀರವ ಏಕಾಂತ ಬೇಕು.

  ಇದು ಜಾಗತೀಕರಣದ ಕೊಡುಗೆ ಎಂದು ಭಾವಿಸುವುದು ತಪ್ಪು. ಇದು ನಮ್ಮ ಆಧುನಿಕ ಶಿಕ್ಷಣದಿಂದ ಬಂದದ್ದು. ಐವತ್ತು ವರುಷಗಳ ಹಿಂದೆ ಇಂಗ್ಲಿಷ್‌ ಜ್ಞಾನ ಆ ಕಾಲದ ಲೇಖಕನ ಮತ್ತು ಓದುಗನ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿತ್ತು. ಇವತ್ತು ಅದಕ್ಕೆ ತದ್ವಿರುದ್ಧವಾದದ್ದು ನಡೆಯತ್ತಿದೆ.

  ಮೊನ್ನೆ ಗೋಪಾಲಕೃಷ್ಣ ಅಡಿಗ ಟ್ರಸ್ಟ್‌ ನಡೆಸಿದ ಅಡಿಗ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಿ.ರಂ. ನಾಗರಾಜ ಅಡಿಗರ ಕೆಲವು ಸಾಲುಗಳನ್ನು ಉದಾಹರಿಸಿದರು;

  ಮನೆಯ ಮಕ್ಕಳ ಕೂಡೆ ಆಡ ಬಂದರೆ ಊರ

  ಹುಡುಗ ಪಾಳೆಯ, ತಿಂಡಿ ಕೊಟ್ಟು ನಗಿಸು ;

  ಅಲ್ಲೆ ತಳವೂರಿಸಲು ಬಯಸಿ ತೆಳ್ಳಗೆ ಮಾಡ

  ಬೇಡ ಇರುವಷ್ಟು ತಂಭಾಲು ಗುಟುಕು.

  ಕಟ್ಟೆಯಾಳಗಡೆ ನೀರ ಹಣಿಸಿದರೆ ಬೆಳವ ಮರ

  ತಲೆಮೇಲೆ ತಳೆಯುವುದು ಗೂಡ ಮಾಲೆ

  ಅದರೊಳಗೆ ಬಂದಳಿಕೆ ಬೆಳೆವ ವಿಶ್ವವಿಶಾಲ

  ಭಾವವೇ ಬಿಡುಗಡೆಗೆ ಬಿಟ್ಟ ಕೂಳೆ.

  ಮೆಟ್ರೋ-ದಂಥ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಹೇಗೆ ನಿಭಾಯಿಸಬೇಕು ಅನ್ನುವುದಕ್ಕೆ ಉತ್ತರ ಈ ಕಾವ್ಯದಲ್ಲಿದೆ ಅನ್ನುವ ಕಾರಣಕ್ಕೆ ಅಡಿಗರನ್ನು ಎಲ್ಲ ಕಾಲಕ್ಕೂ ಸಲ್ಲುವ ಕವಿ ಎಂದು ಕರೆಯಬಹುದಲ್ಲ.

  ಅವರದೇ ಮತ್ತೊಂದು ಸಾಲು ನೋಡಿ;

  ಮಾಡಿ ಮಡಿಯದೆ ಬದುಕಿ ಉಳಿಯಬಾರದು, ಮಡ್ಡಿ ;

  ಕರ್ಪೂರವಾಗದೆ ಬೆಂಕಿ ಬಳಿಗೆ

  ಸುಳಿಯಬಾರದು ; ಹೊತ್ತಿ ಹೊಗೆವ ಮಡ್ಡಿಯ ಕಂಪು

  ಹೊರಗಡೆಗೆ ; ಒಳಗೆ ಕೊನೆಯಿಲ್ಲದ ಧಗೆ.

  ಇದು ಇವತ್ತಿನ ಸ್ಥಿತಿ. ನಾವೆಲ್ಲ ಕರ್ಪೂರವಾಗದೇ ಬೆಂಕಿ ಬಳಿಗೆ ಸುಳಿಯುತ್ತಿದ್ದೇವಾ?

  (ಸ್ನೇಹಸೇತು : ಹಾಯ್‌ ಬೆಂಗಳೂರ್‌)

  ಪೂರಕ ಓದಿಗೆ-

  ಸಣ್ಣ ಕತೆಯಾದ ದೊಡ್ಡವರು

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more