ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗುವಾಗ ನಕ್ಕು ಅಳುವಾಗ ಅತ್ತು ನಡೆದ ದಾರಿಯ ಕುರಿತು...

By Staff
|
Google Oneindia Kannada News

*ಜಾನಕಿ

ಎಷ್ಟೋ ವರುಷಗಳ ನಂತರ ಹುಟ್ಟಿದೂರಿಗೆ ಹೋದಾಗಲೂ ಕಣ್ಣು ಮತ್ತೆ ಮತ್ತೆ ಬಾಲ್ಯದ ಗೆಳತಿಯ ಮನೆಯತ್ತ ಹೊರಳುವಂತೆ ಕೆಲವೊಮ್ಮೆ ಏನು ಯೋಚಿಸ ಹೊರಟರೂ ಮನಸ್ಸು ನಮಗೆ ತುಂಬ ಇಷ್ಟವಾದ ಕವಿಯತ್ತ ಸುಳಿಯುತ್ತದೆ. ಬಹಳಷ್ಟು ಕವಿಗಳು ಕತೆಗಾರರು ನಾವು ಬೆಳೆಯುತ್ತಾ ಹೋದ ಹಾಗೆ ಹಳಬರಾಗುತ್ತಾರೆ; ಸವಕಲಾಗುತ್ತಾರೆ. ನಾವು ಅವರನ್ನು ಮೀರಿಯೋ ದಾಟಿಯೋ ಮುಂದೆ ಹೋಗುತ್ತೇವೆ. ಹಾಗೆ ದಾಟಿ ಮುನ್ನಡೆದ ದಿನ ಖುಷಿಯಾಗಿರುತ್ತದೆ. ಆದರೆ ತುಂಬ ದೂರ ಹೋಗಿ ಹಿಂತಿರುಗಿ ನೋಡಿದಾಗ ಬೇಸರವೂ ಆಗುತ್ತದೆ. ಯಾಕೆಂದರೆ ನಾವು ಅಷ್ಟೊಂದು ಇಷ್ಟಪಟ್ಟ ಕವಿಯನ್ನೋ ಹಾಡುಗಾರನನ್ನೋ ಲೇಖಕನನ್ನೋ ನಟನನ್ನೋ ಹಿಂದೆ ಬಿಟ್ಟು ಬಂದಿರುತ್ತೇವೆ. ಆ ನಂತರ ನಮಗೆ ಅಂಥ ಜೊತೆಗಾರನೊಬ್ಬ ಸಿಕ್ಕಿರುವುದೇ ಇಲ್ಲ.

ಈ ಕಾಲದವರ ಸಮಸ್ಯೆ ಅದು. ನಲುವತ್ತರ ಸುಮಾರಿಗೆ ಡೈವೋರ್ಸು ಮಾಡಿಕೊಂಡವನ ಕಷ್ಟಗಳು ಅವನವು. ಜೊತೆಗಿದ್ದವಳು ಸವಕಲಾಗಿರುತ್ತಾಳೆ ನಿಜ. ಆದರೆ ನಂತರ ಬರುವಾಕೆ ಒಂದೋ ಅವನಿಗೆ ಅರ್ಥವಾಗುವುದಿಲ್ಲ ಅಥವಾ ಅವನಿಗೆ ಏನು ಬೇಕೆಂಬುದೇ ಆಕೆಗೆ ಗೊತ್ತಿರುವುದಿಲ್ಲ . ನಾವೆಲ್ಲ ಅಂಥದ್ದೊಂದು ತೊಳಲಾಟದಲ್ಲೇ ಇದ್ದೇವೆ. ವೀಸೀ, ಡಿವಿಜಿ, ಮಾಸ್ತಿ ತುಂಬ ಹಳೆಯ ಶೈಲಿಯಲ್ಲಿ ಬರೆಯುತ್ತಾರೆ ಅಂತ ಅವರನ್ನು ಓದುವುದನ್ನು ಬಿಟ್ಟಿದ್ದೇವೆ. ನಂತರ ಬಂದವರನ್ನು ದಾಟಿ ಮುಂದೆ ಬಂದಿದ್ದೇವೆ. ಹಳೆಯ ಕಾದಂಬರಿಕಾರರಿಗೂ ಕವಿಗಳಿಗೂ ಬಹಳ ದಿನ ಅಂಟಿಕೊಂಡಿರುವುದು ಕಷ್ಟ . ಆದರೆ ಮುಂದೆ ಯಾರೂ ಕಾಣಿಸುತ್ತಲೇ ಇಲ್ಲ.

ಹೀಗನ್ನಿಸುವುದಕ್ಕೆ ಮತ್ತೊಂದು ನೆಪ ಮತ್ತದೇ ಕೆ. ಎಸ್‌.ನರಸಿಂಹಸ್ವಾಮಿ ಬರೆದ ಒಂದು ಕವನ. ಅದನ್ನು ಅನಂತಸ್ವಾಮಿ ಹಾಡಿದ್ದಾರೆ. ಆ ಹಾಡು ಕೇಳುತ್ತಿದ್ದಂತೆ ಮನಸ್ಸು ತಲ್ಲಣಿಸುತ್ತದೆ. ಯಾವುದೋ ಪತ್ರಿಕೆಯಲ್ಲೋ ಸಂಕಲನದಲ್ಲೋ ಸುಮ್ಮಗೆ ಬಿದ್ದಿರುವ ಒಂದು ಹಾಡು ಹೀಗೆ ಕಾಡತೊಡಗಿದರೆ ಭಯವಾಗುತ್ತದೆ. ಪದಗಳಿಗೆ ನಿಜಕ್ಕೂ ಅಂಥ ಶಕ್ತಿ ಇದೆಯಾ? ಇದನ್ನು ಯಾರನ್ನು ಆವಾಹಿಸಿಕೊಂಡು ಕವಿ ಬರೆದಿರಬಹುದು. ಸ್ವತಃ ಅವರಿಗೇ ಹೀಗೆ ಅನ್ನಿಸಿತ್ತೇ ? ಅನ್ನಿಸಿದ್ದೇ ಅನುಭವಿಸಿದ್ದೇ ಕಂಡದ್ದೇ ಅಥವಾ ಕೇಳಿದ್ದೇ ? ಕೇಳಿದ್ದನ್ನೋ ಕಂಡಿದ್ದನ್ನೋ ಹೀಗೆ

ಬರೆಯುವುದು ಯಾರಿಗಾದರೂ ಸಾಧ್ಯವೇ?

-2-

ನಕ್ಕಹಾಗೆ ನಟಿಸಬೇಡ; ನಕ್ಕುಬಿಡು ಸುಮ್ಮನೆ
ಬೆಳಕಾಗಲಿ ನಿನ್ನೊಲವಿನ ಒಳಮನೆ.
K.S.Narasimha Swamy with his beloved wife Venkamma ಎನ್ನುತ್ತಾ ಹಾಡು ಶುರುವಾಗುತ್ತದೆ. ಮೊದಲ ಸಾಲಲ್ಲೇ ಎಲ್ಲ ನಾಟಕೀಯತೆಯನ್ನೂ ತೋರಿಕೆಯನ್ನೂ ಕಿತ್ತೆಸೆಯುವ ಮಾತಿದೆ. ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ.

ಹಾಗೆ ಸುಮ್ಮನೆ ನಗುವುದಕ್ಕೆ ಸಾಧ್ಯವೇ ? ಅಷ್ಟಕ್ಕೂ ಆಕೆ ನಕ್ಕಹಾಗೆ ನಟಿಸಿದ್ದು ಯಾಕೆ ? ಆ ನಟನೆಗೆ ಕಾರಣವಾದ ಘಟನೆ ಏನಿರಬಹುದು ? ಹೀಗೆ ದಾಂಪತ್ಯದ ಪ್ರಶ್ನೆಗಳನ್ನೇ ಅದು ಅಲೆಯಲೆಯಾಗಿ ಎಬ್ಬಿಸುತ್ತಾ ಹೋಗುತ್ತದೆ. ನಾವು ಅಧೀರರಾಗುತ್ತಾ ಹೋಗುತ್ತೇವೆ. ಮತ್ತೊಂದು ಪ್ರಶ್ನೆ ಅಚಾನಕ ಕಣ್ಣಮುಂದೆ ಮೂಡಿಬಂದು ಕಂಪಿಸುತ್ತೇವೆ;

ಹಾಗಿದ್ದರೆ ಅವಳೂ ನಕ್ಕಹಾಗೆ ನಟಿಸಿದ್ದಳೇ ? ಅವನ ನಗುವೂ ನಟನೆಯೇ ?

ಅಲ್ಲಿಂದ ಮುಂದಕ್ಕೆ ಬಂದರೆ ಎರಡು ಸುರಳೀತ ಸಾಲುಗಳು. ಯಾವ ಅಪಾಯವನ್ನೂ ಮಾಡದ ಸುಲಲಿತ ದ್ವಿಪದಿ;

ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ
ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ.

ಹೋಗಲಿ... ಯಾರು ಬೇಕಾದರೂ ಬರೆಯಬಹುದು ಇವನ್ನು. ಅಬ್ಬಬ್ಬಾ ಅಂದರೆ ಹಸಿರು ಕನಸಿನಲ್ಲಿ ಮಲ್ಲಿಗೆ ಅರಳಲಿ ಅಂದದ್ದನ್ನು ಮೆಚ್ಚಬಹುದು. ಹಸಿರಬಳ್ಳಿಯಲ್ಲಿ ಮಲ್ಲಿಗೆ ಅರಳುವುದಕ್ಕೆ ಸಂಕೇತ ಎಂದುಕೊಳ್ಳಬಹುದು. ಅದರ ಮುಂದಿನೆರಡು ಸಾಲುಗಳಲ್ಲೂ ಅಂಥದ್ದೇ ಹಾರೈಕೆ. ಆದರೆ ಅದರಾಚೆಗೆ ಮತ್ತೆರಡು ಮನಕದಡುವ ಸಾಲು;

ನೀನೆಲ್ಲೂ ನಿಲ್ಲಬೇಡ: ಹೆಜ್ಜೆ ಹಾಕು ಬೆಳಕಿಗೆ;
ಚಲಿಸು ನಲ್ಲೆ. ಸೆರಗ ಬೀಸಿ ಮೌನದಿಂದ ಮಾತಿಗೆ.

ಅಂದರೆ ಅವಳು ಮೌನವಾಗಿದ್ದಳು. ಅವರಿಬ್ಬರ ನಡುವೆ ಮಾತು ಮರೆಯಾಗಿದೆ. ಅಂಥದ್ದೇನೋ ನಡೆದಿದೆ. ಅಷ್ಟು ಗಾಢವಾದದ್ದೇನೋ ನಡೆಯದೇ ಹೋದರೆ ಅಲ್ಲಿ ಮೌನ ಹರಳುಗಟ್ಟುತ್ತಲೇ ಇರಲಿಲ್ಲ. ಯಾಕೆಂದರೆ ಅವನು ಹೇಳುವ ಪ್ರಕಾರ ಅವಳು ಭಾವಕಿ;

ನಿನ್ನ ಹಾಗೆ ನಿನ್ನೊಲವಿನ ಚಿಲುಮೆಯಂತೆ ಹನಿಗಳು;
ಹತ್ತಿರದಲೆ ಎತ್ತರದಲಿ ನನ್ನ ನಿನ್ನ ಮನೆಗಳು.
ನೀನು ಬಂದ ದಿಕ್ಕಿನಿಂದ ತಂಗಾಳಿಯ ಪರಿಮಳ;
ಹೂವರಳಿತು ಹಿಗ್ಗಿನಿಂದ ಹಾದಿಗುಂಟ ಎಡಬಲ.

ಈ ಸಾಲುಗಳನ್ನು ಓದುತ್ತಿದ್ದ ಹಾಗೆ ಅವರಿಬ್ಬರ ನಡುವೆ ಅಂಥದ್ದೇನೂ ನಡೆದಿರಲಾರದು ಅನ್ನಿಸುತ್ತದೆ. ಅಂಥ ಒಳ್ಳೆ ಮನಸ್ಸಿನ ಹುಡುಗಿ ಮುನಿಸಿಕೊಳ್ಳಬಾರದು!

ಆದರೆ ಮುಂದಿನ ಸಾಲುಗಳ ವೈರುದ್ಧ್ಯ ಬೆಚ್ಚಿ ಬೀಳಿಸುತ್ತದೆ;

ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ, ತಿಳಿಯದು:
ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು.

ಇಲ್ಲಿ ಶೋಕ ಢಾಳಾಗಿ ಕಾಣಿಸುತ್ತದೆ. ಅವನು ತಪ್ಪು ಮಾಡಿದ್ದಾನೆ. ಅವಳನ್ನು ದಾಟಿ ಮುಂದಕ್ಕೆ ಹೋಗಿದ್ದಾನೆ. ಆಕೆಯೂ ಜೊತೆಗೆ ಬರುತ್ತಿದ್ದಾನೆ ಅಂದುಕೊಂಡಿದ್ದಾನೆ. ಆದರೆ ಅವಳು ಯಾಕೋ ಹಿಂದಕ್ಕೆ ಬಿದ್ದಿದ್ದಾಳೆ. ಹಾಗೆ ಹಿಂದಕ್ಕೆ ಬಿದ್ದದ್ದು ಉದ್ದೇಶಪೂರ್ವಕವಾಗಿ ಅನ್ನುವುದಕ್ಕೆ ಸಾಕ್ಷಿ ; ಅವಳು ಉಟ್ಟ ಬಿಳಿಯ ಸೀರೆ. ಮುಡಿದ ಮಲ್ಲಿಗೆ. ಆರಂಭದಲ್ಲಿ ಹಸಿರು ಕನಸಲ್ಲಿ ಮಲ್ಲಿಗೆ ಅರಳಲಿ ಅಂದಿದ್ದ ಕವಿ, ಇಲ್ಲಿ ಬಣ್ಣಗಳಲ್ಲೇ ವಿಷಾದದ ಸೂಚನೆ ಕೊಡುತ್ತಾನೆ.

ಇಲ್ಲಿ ಅರೆಕ್ಷಣ ನಿಲ್ಲಿ . ಒಬ್ಬ ಕವಿಯನ್ನು ಒಮ್ಮೆಯಾದರೂ ಸಮಗ್ರವಾಗಿ ಓದಿದಾಗಷ್ಟೇ ಅವನು ಪೂರ್ತಿ ಅರ್ಥವಾಗುತ್ತದೆ. ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ ತಿಳಿಯದು ಅನ್ನುವ ಕವಿ ತನ್ನ ಹಿಂದಿನ ಒಂದು ಪದ್ಯದಲ್ಲಿ ಹೇಳಿದ ಮಾತು ಗಮನಿಸಿ;

ಬೆಟ್ಟಗಳ ನಡುವೆ ಸಾಗುವ ದಾರಿ ಸುಖವಲ್ಲ ;
ಸೀಗೆ ಮೆಳೆಯಲಿ ಸದ್ದು ; ಹಾವು ಹರಿದು.
ಗೋಮೇಕದ ಕೆನ್ನೆ-ಬೆಳಕು ತಣ್ಣಗೆ ಹೊಳೆದು
ನನ್ನ ಹಿಡಿಯಾಳಗಿತ್ತು ನಿನ್ನ ಬೆರಳು.

ಹಾಗಿದ್ದರೆ ಆ ಬೆರಳನ್ನು ಅವನೆಲ್ಲಿ ಬಿಟ್ಟ. ಅವಳೇಕೆ ಹಿಂದಕ್ಕುಳಿದಳು. ಮತ್ತೆ ಅವರು ಒಂದಾಗುತ್ತಾರಾ ? ಎಷ್ಟು ದಿನ ಈ ಒಂಟಿ ಪಯಣ ? ಮುಂದಿನ ಸಾಲಲ್ಲೇ ಉತ್ತರವೂ ಇದೆ ;

ಬಾ ಹತ್ತಿರ, ಬೆರಳ ಹಿಡಿದು, ಮುಂದೆ ಸಾಗು ಸುಮ್ಮನೆ.
ನಕ್ಕುಬಿಡು, ನೋಡುತ್ತಿದೆ ಲೋಕವೆಲ್ಲ ನಮ್ಮನೆ.

ಹಾಗಿದ್ದರೆ ಒಂದು ಹಂತ ಕಳೆದ ನಂತರ ಒಂದಾಗುವುದು ಲೋಕದ ಕಣ್ಣಿಗೆ ಸುಖಿಗಳಾಗಿ ಕಾಣುವುದಕ್ಕಷ್ಟೇ ಇರಬಹುದಾ ? ಇಲ್ಲದೇ ಹೋದರೆ ಕವಿ ಹಾಗೇಕೆ ಹೇಳಿದ ? ಆರಂಭದಲ್ಲೇ ಹೇಳಿದ ಸಾಲಿಗೂ ಇದಕ್ಕೂ ಅದೆಂಥ ವಿರೋಧಾಬಾಸ. ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ ಅಂದವನು ಈಗ ನಕ್ಕುಬಿಡು ಲೋಕವೆಲ್ಲ ನೋಡುತ್ತಿದೆ ನಮ್ಮನೆ ಅನ್ನುತ್ತಿದ್ದಾನಲ್ಲ. ಲೋಕದ ಕಣ್ಣಿಗಷ್ಟೇ ನಗುವುದಾಗಿದ್ದರೆ ನಕ್ಕಹಾಗೆ ನಟಿಸಿದರೆ ಸಾಕಲ್ಲ ?
ಮತ್ತೆ ಹಿಂದಕ್ಕೆ ಹೋಗಬೇಕು;

ಕೆನ್ನೆಕೆನ್ನೆಯಾಂದು ಮಾಡಿ
ನಗುವ ನನ್ನ ನಿನ್ನ ನೋಡಿ
ಕನ್ನಡಿಯಲಿ ಒಂದು ಜೋಡಿ
ನಕ್ಕುಬಿಡಲಿ. ಒಮ್ಮೆ ನಗು

ಎಂದಿದ್ದ ಕವಿಯ ಭಾವ ಈಗ ಹೀಗೇಕೆ ಬದಲಾಯಿತು ?

-3-

ಒಬ್ಬ ಕವಿಯನ್ನು ಇಟ್ಟುಕೊಂಡು ನಮ್ಮ ನಡವಳಿಕೆಗಳಿಗೆ ವರ್ತನೆಗಳಿಗೆ ಅರ್ಥ ಹುಡುಕುತ್ತಾ ಹೋಗಬಹುದು. ಅದು ಕಷ್ಟದ ಕೆಲಸವೇನಲ್ಲ . ಕನ್ನಡದಲ್ಲೂ ಇಂಗ್ಲಿಷಿನಲ್ಲೂ ಅಂಥ ಅನೇಕ ಕವಿಗಳು ಸಿಗುತ್ತಾರೆ. ಷೇಕ್ಸ್‌ಪಿಯರ್‌ನ ಸಾನೆಟ್ಟುಗಳನ್ನೂ ವರ್ಡ್ಸ್‌ವರ್ತನ ಪದ್ಯಗಳನ್ನೂ ಇಟ್ಟುಕೊಂಡು ನೋಡಿದರೆ ಅವರ ಕವಿತೆಗಳು ಅವರ ಜೀವನಚರಿತ್ರೆಯ ಪುಟಗಳಂತೆ ಇರುವುದು ಗೋಚರವಾಗುತ್ತದೆ. ಶೆಲ್ಲಿ ಕೂಡ ಕೇಳುವುದು ಅದೇ ಪ್ರಶ್ನೆಯನ್ನು ;

Nothing in the world is single
All things by a law devine
In one anothers being mingle
Why not I with thine?

ಮತ್ತೆ ಕೆ. ಎಸ್‌.ನ. ಬರೆದ ಮೇಲಿನ ಪದ್ಯಕ್ಕೇ ವಾಪಸ್ಸು ಬಂದರೆ, ಅವರದೇ ಮತ್ತೊಂದು ಕವಿತೆ ಇದ್ದಕ್ಕಿದ್ದಂತೆ ನೆನಪಾಗುತ್ತದೆ. ಈ ನಕ್ಕಹಾಗೆ ನಟಿಸಿದ್ದಕ್ಕೆ ಕಾರಣ ಅದೇ ಇರಬಹುದಾ ಅನ್ನುವ ಅನುಮಾನ ಮೂಡುತ್ತದೆ. ಈ ಸಾಲುಗಳನ್ನು ನೋಡಿ;

ಹಾರಿತೆನ್ನ ಹೃದಯಭಂಗ ಬೇರೆ ಹೂವ ನೆರಳಿಗೆ.
ಜ್ವಲಿಸಿತೆನ್ನ ಅಂತರಂಗ ಬೇರೆ ಕಣ್ಣ ಹೊರಳಿಗೆ.
ಬೇರೆ ಹೂವೆ ಕಣ್ಣತುಂಬ ಭಾರವಾಗಿ ಅರಳಿದೆ
ಬೇರೆ ಬಾನ ಚಂದ್ರಬಿಂಬ ನನ್ನ ದಾರಿಗುರುಳಿದೆ.

ತೆಂಗುಗರಿಗಳ ನಡುವೆ ತುಂಬಚಂದಿರ ಬಂದು ಬೆಳ್ಳಿಹಸುಗಳ ಹಾಲ ಕರೆಯುವಂದು ಅಂಗಳದ ನಡುವೆ ಬೃಂದಾವನದ ಬಳಿ ನಿಂತು ಹಾಡಿದ ಜೋಡಿಗೆ ಇವತ್ತು ಇಬ್ಬರು ಚಂದ್ರಮರು. ಅವಳ ಚಂದಿರನೇ ಬೇರೆ; ಇವನದೇ ಬೇರೆ. ಅವನ ಒಳಪುಟದಲ್ಲಿ ಅವಳ ಸುದ್ದಿಯೇ ಇಲ್ಲ.

ಬೇರೆ ದನಿಯೇ ಓಗೊಡುತಿದೆ ನಿನ್ನ ಮಾತಿನ ಮರೆಯಲಿ
ನಿನ್ನ ಹೆಸರೇ ಅಳಿಸಿಹೋಗಿದೆ ಯಾವ ಪುಟವನೇ ತೆರೆಯಲಿ.

ಯಾಕೆ ಹೀಗಾಯಿತು ? ಅದೇ ಪ್ರಶ್ನೆಯನ್ನು ಅವನು ಕೇಳಿಕೊಳ್ಳುತ್ತಾನೆ. ಇಡೀ ಪದ್ಯದಲ್ಲಿ ಗಮನಿಸಿ ನೋಡಿದರೂ ಆಕೆ ಒಂದು ಮಾತನ್ನೂ ಆಡುವುದಿಲ್ಲ . ಇಲ್ಲಿ ಮುನಿಸಿಕೊಳ್ಳುವವನೂ ಅವನೇ, ಒಲಿಸಿಕೊಳ್ಳುವವನೂ ಅವನೇ. ಬೆರಳ ಕೊಟ್ಟವನೂ ಅವನೇ, ಕೊರಳ ಕೊಯ್ದವನೂ ಅವನೆ ? ಕೇಳುತ್ತಾನೆ; ನಗೆಯ ಬದಲು ನಾಳೆಯಿಂದ ಕಂಬನಿಯ ತರಂಗವೇ ?

ಆಕೆಗೆ ಬೇಸರವಾಗಿದ್ದಕ್ಕೂ ಅವನಿಗೆ ಖುಷಿಯಾಗಿದೆಯೇ ? ಕವಿತೆಯ ಸಾಲುಗಳಲ್ಲಿರುವ ಲವಲವಿಕೆ ಕಂಡಾಗ ಹಾಗನ್ನಿಸುತ್ತದೆ. ಬೇಂದ್ರೆಯ ವಿಷಾದಗೀತೆಗಳ ಆರ್ದ್ರತೆ ಇಲ್ಲಿಲ್ಲ . ಇಲ್ಲಿ ನೇರವಾಗಿಯೇ ಕೇಳುತ್ತಾನೆ ಆತ;

ಕುಡಿದು ಬಿಡುವೆಯ ಕಣ್ಣಿನಿಂದಲೆ ?
ನಿನ್ನ ಪ್ರೀತಿಗೆ ದಾಹವೆ ?
ನಕ್ಕು ಸರಿವೆಯ ಸ್ನೇಹದಿಂದಲೇ ?
ನಕ್ಕು ವರುಷಗಳಾಗಿವೆ !

ಅಂದರೆ ಈ ಜಗಳ ತೀರ ಹಳೆಯದೇ. ನಕ್ಕು ವರುಷಗಳಾಗಿದೆ ಅನ್ನಬೇಕಿದ್ದರೆ ಅದಕ್ಕೊಂದು ಹಿನ್ನೆಲೆ ಇರಲೇಬೇಕು. ಅದಲ್ಲಿದೆ ಅಂತ ಹುಡುಕಿಕೊಂಡು ಹೊರಟರೆ ಮತ್ತೊಂದು ಕವಿತೆ ಸಿಕ್ಕೀತೇ ? ಅದನ್ನು ಇನ್ನೊಮ್ಮೆ ನೋಡಬೇಕು. ಅದಕ್ಕೂ ಮುಂಚೆ ಈ ಜಗಳ ಮುಗಿಸಬೇಕು. ಆದರೆ ಅದು ಮುಗಿಯುವ ಹಾಗೆ ಕಾಣುತ್ತಿಲ್ಲ;

ನಿನ್ನ ಜೊತೆಗೂ ನಾನು ನಗಲೆ, ಯಾರೋ ಕರೆದಂತಾಗಿದೆ.
ಬೆರಳನಿಟ್ಟು ತುಟಿಯ ಮೇಲೆ ಯಾರೊ ತಡೆದಂತಾಗಿದೆ.
ನಗುವೆಯಲ್ಲೆ ನಲ್ಲೆ ನೀನು ಮುಡಿಯ ತುಂಬ ಮಲ್ಲಿಗೆ
ಹೋಗಿಬರಲೆ ಈಗ ನಾನು, ಕೇಳಬೇಡ, ಎಲ್ಲಿಗೆ ?

-4-

ಸಮಗ್ರವಾಗಿ ಒಳಗೊಳ್ಳುವುದು ಒಂದು ಕ್ರಮ. ಅಷ್ಟಷ್ಟನ್ನೇ ಮೆಚ್ಚಿಕೊಳ್ಳುವುದು ಮತ್ತೊಂದು ಕ್ರಮ. ಕನ್ನಡದ್ದು ಸಮಗ್ರವಾಗಿ ಒಳಗೊಳ್ಳುವ ಮನಸ್ಸು. ಕುಮಾರವ್ಯಾಸನೇ ಇರಲಿ, ಪಂಪನೇ ಇರಲಿ ನಮಗೆ ಆತ ಇಷ್ಟವಾಗುವುದು ಸಮಗ್ರವಾಗಿಯೇ. ಒಬ್ಬ ಕವಿಯ ಬಗ್ಗೆ ಇಬ್ಬಗೆಯ ಅಭಿಪ್ರಾಯ ಹೊರಹೊಮ್ಮಿದ ಉದಾಹರಣೆ ಹಳೆಗನ್ನಡದಲ್ಲಂತೂ ಇಲ್ಲ . ಹಾಗೆ ಒಬ್ಬ ಕವಿಯ ಜೀವನಕ್ರಮವನ್ನೂ ನಮ್ಮವರು ಗಮನಿಸಲಿಲ್ಲ . ಇವತ್ತಿಗೂ ಕುಮಾರವ್ಯಾಸ ಏನು ತಿನ್ನುತ್ತಿದ್ದ ? ಅವನಿಗೆ ಎಷ್ಟು ಮಂದಿ ಹೆಂಡಿರಿದ್ದರು ? ಅವನ ಶತ್ರುಗಳು ಯಾರಿದ್ದರು ಎಂಬುದು ನಮಗ್ಯಾರಿಗೂ ಗೊತ್ತಿಲ್ಲ . ಬಹುಶಃ ಸಂಶೋಧಕರಿಗೆ ಗೊತ್ತಿರಬಹುದು.

ಮೇಲಿನ ಎರಡು ಕವಿತೆಗಳಲ್ಲೂ ಅಷ್ಟೇ. ಅದನ್ನು ಕೆಎಸ್‌ನ ಅನುಭವಿಸಿ ಬರೆದರೋ ಅನ್ನುವುದು ಮುಖ್ಯವಾಗುವುದಿಲ್ಲ. ನಮಗೆ ಅಂಥದ್ದೊಂದು ಅನುಭವ ಎದುರಾದಾಗ ಆ ಕವಿತೆ ನೆನಪಾಗುತ್ತದೆ. ಮನಸ್ಸು ಹಗುರಾಗುತ್ತದೆ. ದಾಂಪತ್ಯದ ನಡುಹಗಲಿಗೆ ಒಡ್ಡಿಕೊಂಡಾಗ;

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿಬಿಳಿಯ ಹಕ್ಕಿ ಹಾರಿ!

ಎಂಬ ಸಾಲು ಎಲ್ಲೋ ಕೇಳಿದ್ದು ಮನಸ್ಸಿಗಷ್ಟೇ ಮತ್ತೆ ಕೇಳಿಸುತ್ತದೆ. ನಡೆದ ದಾರಿಯ ತಿರುಗಿ ನೋಡಬಾರದು ಏಕೆ ಅನ್ನುವುದು ಹೊಳೆಯುತ್ತದೆ. ಲೋಕವೆಲ್ಲ ನೋಡುತ್ತಿದೆ ನಮ್ಮನೆ ಅಂತ ನಗುವುದಕ್ಕಿಂತ ಸುಮ್ಮನೆ ನಗುವುದೆ ಪ್ರೀತಿ ಅನ್ನುವುದು ತಿಳಿಯುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X