• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಮಾಲಿಕೆ-2

By Staff
|
  • ಜಾನಕಿ

jaanaki@india.com

ಕ್ರಿಶ್ಚಿಯನ್‌ ಮಥಿಯಾಸ್‌ ಥಿಯಾಡಾರ್‌ ಮಾಮ್‌ಸೆನ್‌ಗೆ 1903ರ ನೊಬೆಲ್‌ ಬಂತು. ಅದು ಆತನ ಸಾಧನೆಗೆ ಸಂದದ್ದು ಹೌದೋ ಅಲ್ಲವೋ ಎಂಬ ಬಗ್ಗೆ ಇವತ್ತಿಗೂ ಅನುಮಾನಗಳಿವೆ. ಸಾಹಿತ್ಯಿಕವಾಗಿ ಮಾಮ್‌ಸೆನ್‌ ಸಾಧನೆ ಅಷ್ಟೇನಿಲ್ಲ. ಆದರೆ ಇತಿಹಾಸಕಾರನಿಗೆ ನೊಬೆಲ್‌ ಕೊಡಬೇಕು ಎಂದು ಹಿಂದಿನ ವರುಷದ ಸಮಿತಿ ಬಲವಾಗಿ ಪ್ರತಿಪಾದಿಸಿತ್ತು. ಹಿಂದಿನ ವರುಷದ ಪಟ್ಟಿಯಲ್ಲಿ ಮಾಮ್‌ಸೆನ್‌ ಹೆಸರೂ ಇತ್ತು ಮತ್ತು ಅವರಿಗೆ ಮುಂದಿನ ವರುಷ ಕೊಟ್ಟರಾಯಿತು ಅನ್ನುವುದೂ ತೀರ್ಮಾನವಾಗಿತ್ತು ಎನ್ನುವ ವಿವರಗಳು ಎರಡೂ ವರುಷದ ನೊಬೆಲ್‌ ಸಮಿತಿಯ ಟಿಪ್ಪಣಿಗಳಿಂದ ಗೊತ್ತಾಗುತ್ತದೆ.

ಹಾಗಿದ್ದರೂ ಮಾಮ್‌ಸೆನ್‌ ತನ್ನ ಜೀವಿತಾವಧಿಯಲ್ಲೇ ಬೇರೆ ಬೇರೆ ಕಾರಣಕ್ಕೆ ದಂತಕತೆಯಾಗಿದ್ದ. ದೃಷ್ಟಿದೋಷದ ಮಾಮ್‌ಸೆನ್‌ ಸದಾ ಹಣೆಯ ಮೇಲೆ ಕನ್ನಡ ಇಟ್ಟುಕೊಂಡಿರುತ್ತಿದ್ದದ್ದು. ಓದಬೇಕಾಗಿ ಬಂದಾಗ ಅದನ್ನು ಥಟ್ಟನೆ ಕಣ್ಣಿಗೆ ಜಾರಿಸಿ ಓದುತ್ತಿದ್ದದ್ದು- ಇವನ್ನೆಲ್ಲ ಅವನ ಮನೆಯವರೂ ಅವನ ಕಾಲದ ಜನರೂ ಬಹಳ ಮೆಚ್ಚಿಕೊಂಡಿದ್ದರು. ಸಾಹಿತ್ಯಿಕವಾಗಿ ಏನೂ ಬರೆಯದೇ ಹೋದರೂ ಆತ ಬರೆದ ದಿ ಹಿಸ್ಟರಿ ಆಫ್‌ ರೋಮ್‌ ಇವತ್ತಿಗೂ ಅಭಿಜಾತ ಕೃತಿಯಾಗಿ ಉಳಿದುಕೊಂಡಿದೆ ಅನ್ನುವವರಿದ್ದಾರೆ. ಚರಿತ್ರೆಯ ಜೊತೆ ಮಾಮ್‌ಸೆನ್‌ ತತ್ವಜ್ಞಾನವನ್ನೂ ಧಾರಾಳವಾಗಿ ಬಳಸಿಕೊಂಡಿದ್ದನ್ನು ಅನೇಕ ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಅಂಥ ಸಾಲುಗಳಿಗೆ ಉದಾಹರಣೆಯಾಗಿ ಇವೆರಡನ್ನು ನೋಡಬಹುದು; The morally noble will always overcome the less noble and will persist longer than the mean ಅನ್ನುವುದು ಆತನ ಪ್ರಸಿದ್ಧ ಹೇಳಿಕೆಗಳಲ್ಲಿ ಒಂದು. ಇಂಥದ್ದೇ ಇನ್ನೊಂದು ನೀತಿವಾಕ್ಯ ಹೀಗಿದೆ;

ಪ್ರಾಮಾಣಿಕವಾಗಿ ಒಪ್ಪಿಕೊಂಡ ಅಜ್ಞಾನ ಕಂದಾಚಾರದ ಜ್ಞಾನಕ್ಕಿಂತ ಉತ್ತಮ. ಇದನ್ನೆಲ್ಲ ಆತ ಚರಿತ್ರೆಯ ಸಾಲುಗಳ ನಡುವೆಯೇ ಬರೆದಿದ್ದ ಅನ್ನುವುದೊಂದು ವಿಶೇಷ.

Theodor Mommsemಪ್ರಾಟೆಸ್ಟಂಟ್‌ ಪುರೋಹಿತನೊಬ್ಬನ ಮಗನಾಗಿ ಹುಟ್ಟಿದ ಮಾಮ್‌ಸೆನ್‌. ಕಾಲೇಜು ವಿದ್ಯಾಭ್ಯಾಸದ ಹೊತ್ತಿಗೇ ಆತ ರೋಮನ್‌ ಲಾ ಓದಿದ್ದು ಕೇವಲ ಕಾಕತಾಳೀಯ. ಅದು ಮುಂದೆ ನೆರವಾಗುತ್ತದೆ ಅನ್ನುವ ಕಲ್ಪನೆ ಆತನಿಗೆ ಅಷ್ಟಾಗಿ ಇರಲಿಲ್ಲ. ಆದರೆ ಯಾವಾಗ ಚರಿತ್ರೆ ಮತ್ತು ಕಾನೂನಿನ ನಡುವೆ ತುಂಬ ಹತ್ತಿರದ ಸಂಬಂಧ ಇದೆ ಅನ್ನುವುದು ಗೊತ್ತಾಯಿತೋ ಆಗ ಆತನ ಮನಸ್ಸು ಅತ್ತ ವಾಲಿತು. ಆತನಿಗೆ ಅಷ್ಟು ಹೊತ್ತಿಗಾಗಲೇ ಡೆನ್ಮಾರ್ಕ್‌ ಸರ್ಕಾರ ಮೂರು ವರುಷಗಳ ಕಾಲ ಇಟಲಿಯಲ್ಲಿದ್ದು ಶಿಕ್ಷಣ ಪಡೆಯುವುದಕ್ಕೆ ವಿದ್ಯಾರ್ಥಿವೇತನ ನೀಡಿತು. ಇಪ್ಪತ್ತೇಳನೆ ವಯಸ್ಸಿಗೇ ಮಾಮ್‌ಸೆನ್‌ ಇಟಲಿ ಮತ್ತು ರೋಮ್‌ ನಡುವೆ ಗಿರಕಿ ಹೊಡೆಯುತ್ತಾ ಕಾನೂನು ಮತ್ತು ಚರಿತ್ರೆಯನ್ನು ಒಟ್ಟಾಗಿ ಕಲಿತ. ಈ ನಡುವೆ ಯಾವ್ಯಾವುದೋ ಶಾಸನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡ. ಆ ಮೂಲಕ ಹಿಂದಿನ ಜಗತ್ತು ಹೇಗಿತ್ತು ಅನ್ನುವುದು ಅವನಿಗೆ ತಿಳಿಯತೊಡಗಿತು.

ಇಟಲಿಯಿಂದ ಮರಳಿದಾಗ ಅವನಿಗೆ ತನ್ನ ನಾಡು ತಲ್ಲಣದ ಕುಲುಮೆಯಲ್ಲಿ ಬೇಯುತ್ತಿದ್ದಂತೆ ಕಂಡಿತು. ಆತನ ಹುಟ್ಟಿದ ಊರು ಡೆನ್ಮಾರ್ಕ್‌ಗೆ ಸೇರಿದ್ದರಿಂದ ಆತ ಡೆನ್ಮಾರ್ಕ್‌ ಪ್ರಜೆಯಾಗಿದ್ದ. ಆದರೆ ಕೊನೆಯ ತನಕವೂ ಆತ ಜರ್ಮನ್‌ ಪ್ರಜೆಯಾಗಿ, ಜರ್ಮನ್‌ ಪಕ್ಷಪಾತಿಯಾಗಿ ಉಳಿಯಲು ನಿರ್ಧರಿಸಿದ. ಜರ್ಮನ್‌ ರಾಷ್ಟ್ರಗಳು ಪರದೇಶಗಳ ಪ್ರಭಾವದಿಂದ ಮುಕ್ತವಾಗಬೇಕು ಎನ್ನುವುದು ಅವನ ಕನಸಾಗಿತ್ತು. ಅರಾಜಕತೆಗಿಂತ ಏಕಚಕ್ರಾಧಿಪತ್ಯವೇ ಮೇಲು ಎಂದು ನಂಬಿದ್ದ ಮಾಮ್‌ಸೆನ್‌ ಕ್ರಮೇಣ ಪತ್ರಿಕೋದ್ಯಮದಲ್ಲೂ ತೊಡಗಿಸಿಕೊಂಡ. ಆ ಮೂಲಕ ತನ್ನ ರಾಜಕೀಯ ಐಡಿಯಾಲಜಿಗಳನ್ನು ಜನರ ಮನಸ್ಸಿಗೆ ತುಂಬತೊಡಗಿದ. ಆದರೆ ಪತ್ರಿಕೋದ್ಯಮದ ರುಚಿ ಆತನಿಗೆ ಹತ್ತಲಿಲ್ಲ. ಕೊನೆಗೂ ಆತ ತೃಪ್ತನಾದದ್ದು ಯೂನಿವರ್ಸಿಟಿಯಲ್ಲಿ ಉಪನ್ಯಾಸಕ ವೃತ್ತಿ ಸಿಕ್ಕಾಗ. ಆಗ ಅವನ ವಯಸ್ಸು ಮೂವತ್ತೊಂದು ವರುಷ.

ತನ್ನ ಕಾಲದ ರಾಜಕೀಯ ಸ್ಥಿತ್ಯಂತರಗಳ ಟೀಕಾಕಾರನಾಗಿದ್ದ ಮಾಮ್‌ಸೆನ್‌, ತನ್ನ ರಾಜಕೀಯ ಆಸಕ್ತಿಯಿಂದಲೆ ಕೆಲಸ ಕಳೆದುಕೊಂಡದ್ದೂ ಉಂಟು. ಕೆಲಸ ಸಿಕ್ಕ ಎಂಟು ವರುಷಗಳ ನಂತರ ಆತ ರಾಜಕೀಯ ಕಾರಣಗಳಿಗೆ ಜೈಲು ಸೇರಬೇಕಾಗಿ ಬಂತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ ಆತ ಹೋಗಿ ಸೇರಿದ್ದು ಜ್ಯೂರಿಚ್‌ಗೆ. ಅಲ್ಲಿಂದಾಚೆ ಮತ್ತೆ ಪ್ರೊಫೆಸರ್‌ ಹುದ್ದೆಗೆ ಸೇರಿದ ಮಾಮ್‌ಸೆನ್‌ ಪುಸ್ತಕ ವ್ಯಾಪಾರಿಯಾಬ್ಬನ ಮಗಳನ್ನು ಮದುವೆಯಾದ.

ಸುದೀರ್ಘ ಸುಖೀದಾಂಪತ್ಯ ನಡೆಸಿದ ಮಾಮ್‌ಸೆನ್‌ 16 ಮಕ್ಕಳ ತಂದೆಯಾದ. ಇವತ್ತು ಅವನ ಕುಟುಂಬದವರೇ ಮಾಮ್‌ಸೆನ್‌ಗೊಂದು ವೆಬ್‌ಸೈಟ್‌ ಮಾಡಿಕೊಂಡಿದ್ದಾರೆ. ಅಲ್ಲಿ ಆತನ ವಂಶವೃಕ್ಷವೇ ಸಿಗುತ್ತದೆ.

ಇತಿಹಾಸದ ಶೈಲಿಯನ್ನು ಬದಲಾಯಿಸಿದ ಖ್ಯಾತಿ ಮಾಮ್‌ಸೆನ್‌ಗೆ ಸಲ್ಲಬೇಕು. ಸಾಹಿತ್ಯಿಕವಾಗಿ ಮತ್ತು ಕಾವ್ಯಾತ್ಮಕವಾಗಿ ಬರೆಯುತ್ತಿದ್ದ ಆತ ಷೇಕ್ಸ್‌ಪಿಯರ್‌ ಮತ್ತು ಗಯಟೆಯನ್ನು ಓದಿಕೊಂಡಿದ್ದ. ತನ್ನ ಪತ್ರಗಳಲ್ಲಿ ಅವರ ಪ್ರಸ್ತಾಪ ಕೂಡ ಮಾಡುತ್ತಿದ್ದ.

ಜೂಲಿಯಸ್‌ ಸೀಸರ್‌ನನ್ನು ವೈಭವೀಕರಿಸಿ, ಆತನ ವಿರೋಧಿಗಳಾದ ಪಾಂಪೆ ಮತ್ತು ಸಿಸೆರೋರನ್ನು ಹೀಗಳೆದದ್ದು ಮಾಮ್‌ಸೆನ್‌ ರಾಜಕೀಯ ಆದರ್ಶಕ್ಕೆ ತಕ್ಕುದಾಗಿರಲಿಲ್ಲ ಎಂಬಿತ್ಯಾದಿ ಅಪವಾದಗಳು ಆತನ ವಿರುದ್ಧ ಕೇಳಿಬಂದವು. ದೇಶವನ್ನು ಉಳಿಸುವ ಏಕೈಕ ಶಕ್ತಿ ಸೀಸರ್‌ ಎಂಬ ಕಾರಣಕ್ಕೆ ಆತನ ಬಗ್ಗೆ ನಾಲ್ಕು ಒಳ್ಳೆಯ ಮಾತಾಡಿದೆ ಎಂದು ಹೇಳಿ ತನ್ನನ್ನು ಟೀಕಿಸುವವರ ಬಾಯಿಮುಚ್ಚಿಸಲಿಕ್ಕೆ ಮಾಮ್‌ಸೆನ್‌ ಯತ್ನಿಸಿದ. ಸೀಸರನ ಪಾಳೇಗಾರಿಕೆಯನ್ನು ಮಾಮ್‌ಸೆನ್‌ ಮೆಚ್ಚಿಕೊಂಡಿದ್ದಕ್ಕೊಂದು ಕಾರಣವಿತ್ತು. ಸ್ವತಃ ಮಾಮ್‌ಸೆನ್‌ ಕೂಡ ಪಾಳೇಗಾರನಂತೆ ವರ್ತಿಸುತ್ತಿದ್ದ. ಆತನ ಈ ವರ್ತನೆಯನ್ನು ವಿರೋಧಿಗಳು ‘ಸೀಸರಿಸಮ್ಮು’ ಎಂದು ಟೀಕಿಸಿದ್ದರು. ಆದರೆ ಸ್ನೇಹದ ವಿಚಾರ ಬಂದಾಗ ಆತನನ್ನು ಮೀರಿಸುವವರೇ ಇರಲಿಲ್ಲ. ಆತ ಎಲ್ಲರ ಪಾಲಿಗೆ ಜೀವದ ಗೆಳೆಯನಾಗಿದ್ದ. ವೈಯಕ್ತಿಕ ಸಂಬಂಧಕ್ಕಿಂದ ಶ್ರೇಷ್ಠವಾದದ್ದು ಯಾವುದೂ ಇಲ್ಲವೆಂದು ಹೇಳುತ್ತಿದ್ದ. ಆದರೆ ಯಾವ ಸ್ನೇಹವೂ ಸುದೀರ್ಘ ಕಾಲ ಬಾಳುತ್ತಿರಲಿಲ್ಲ.

ಇತಿಹಾಸಕಾರನಾಗಿ ಮಾಮ್‌ಸೆನ್‌ ಅನುಭವ ಅಪಾರ. ಆತ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸ್ಥಾನಗಳಲ್ಲಿ ರಾರಾಜಿಸಿದ್ದಾನೆ. ಚರಿತ್ರೆಯ ಪುಟಪುಟಗಳನ್ನೂ ಬಿಡಿಬಿಡಿಸಿ ನೋಡಿದ್ದಾನೆ. ಕಲ್ಲುಗಳಲ್ಲಿ ಶಾಸನಗಳ ಹುಡುಕಿದ್ದಾನೆ. ಯಾವುದೋ ಮೂಳೆಯ ಚೂರಲ್ಲಿ ಯಾರದೋ ಜೀವನಕತೆಯನ್ನು ಓದಲು ಹವಣಿಸಿದ್ದಾನೆ.

ರೋಮನ್‌ ಇತಿಹಾಸವನ್ನು ಮಾಮ್‌ಸೆನ್‌ ಹೊರತು ಮತ್ಯಾರಿಗೂ ಬರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಅನ್ನುವ ಮಾತನ್ನು ನೊಬೆಲ್‌ ಪ್ರಶಸ್ತಿ ಕೊಟ್ಟವರೇ ಹೇಳಿದ್ದಾರೆ. ಅಷ್ಟೇ ಮಹತ್ವದ ಇನ್ನೊಂದು ಕಾರ್ಯವೆಂದರೆ ಆತ ಬರೆದ ರೋಮನ್‌ ಸಂವಿಧಾನ. ತನ್ನನ್ನು ಈ ಕೃತಿಗಾಗಿ ಜನ ನೆನಪಿಟ್ಟುಕೊಳ್ಳಬೇಕು ಎಂದಾತ ಆಶಿಸಿದ್ದ ಕೂಡ. ರೋಮನ್ನರಿಗೊಂದು ಸಂವಿಧಾನವೇ ಇರಲಿಲ್ಲ. ಮಾಮ್‌ಸೆನ್‌ ಅದನ್ನು ಮಾಡಿಕೊಟ್ಟ. ಹೀಗಾಗಿ ಆತ ರೋಮನ್ನರ ಪಾಲಿಗೆ ಸಂವಿಧಾನ ಶಿಲ್ಪಿ. ಇದಾದ ನಂತರ ಆತ ರೋಮನ್‌ ಅಪರಾಧ ಕಾನೂನನ್ನೂ ಬರೆದುಕೊಟ್ಟ.

ತನ್ನ ಎಂಬತ್ತಾರನೇ ಹುಟ್ಟುಹಬ್ಬಕ್ಕೆ ನಾಲ್ಕೇ ನಾಲ್ಕು ದಿನಗಳ ಮುನ್ನ ಮಾಮ್‌ಸೆನ್‌ ತೀರಿಕೊಂಡ. ಅಷ್ಟು ಹೊತ್ತಿಗಾಗಲೇ ಸಾಕಷ್ಟು ಬರೆದು ಮುಗಿಸಿದ್ದಾಗಿತ್ತು. ಅಂದುಕೊಂಡದ್ದೆಲ್ಲ ಅಕ್ಷರಗಳಲ್ಲಿ ಮೂಡಿಯಾಗಿತ್ತು. ರಾಕ್ಷಸನಂತೆ ದುಡಿಯುತ್ತಿದ್ದ ಆತ, ತಾನಂದುಕೊಂಡ ಕೆಲಸಗಳನ್ನು ಬಹುಪಾಲು ಮುಗಿಸಿದ್ದೂ ಆಗಿತ್ತು.

ಇವತ್ತು ಮಾಮ್‌ಸೆನ್‌ ನೊಬೆಲ್‌ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾನೆ. ಆತ ಬರೆದದ್ದೇನೂ ಇಂಗ್ಲಿಷಿಗೆ ಅನುವಾದ ಆಗಿಲ್ಲ. ಆತನ ಶಕ್ತಿಯನ್ನು ಅಳೆಯುವುದಕ್ಕೆ ಆತನನ್ನು ಪೂರ್ತಿಯಾಗಿ ಓದುವುದೂ ಕಷ್ಟವೇ. ನಮ್ಮಲ್ಲಿ ಸಂಶೋಧಕರಿಗೆ ಪ್ರಶಸ್ತಿ ಕೊಡುವ ಹಾಗೆ, ಮಾಮ್‌ಸೆನ್‌ಗೆ ನೊಬೆಲ್‌ ಬಂತು.

ಮಾಮ್‌ಸೆನ್‌ ತೀರಿಕೊಂಡಾಗ ಅವನ ಕಾಲದ ಮಂದಿ ಅಕ್ಷರ ಬ್ರಹ್ಮ ತೀರಿಕೊಂಡ ಎಂದು ಕಂಬನಿ ಮಿಡಿದರು. ಆದರೆ ಅವರ್ಯಾರೂ ಆತನ ಕೃತಿಗಳನ್ನು ಓದಿರಲಿಲ್ಲ. ತಾನು ಬರೆದ ಒಂದು ಸಾಲನ್ನೂ ಓದದೇ ಜನರ ಪಾಲಿಗೆ ಶ್ರೇಷ್ಠ ಲೇಖಕ ಅನ್ನಿಸಿಕೊಂಡ ಮಾಮ್‌ಸೆನ್‌ ಇವತ್ತಿಗೂ ಒಂದು ವಂಡರ್‌.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more