• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾವೆಂಬ ಪರಕೀಯನ ಜೊತೆಗೊಂದು ಮುಖಾಮುಖಿ

By Staff
|
  • ಜಾನಕಿ

jaanaki@india.com

ತಮ್ಮ ಸುತ್ತಮುತ್ತಲ ಮಂದಿ ಸಾಯುತ್ತಿರುವುದನ್ನೂ ದಿನನಿತ್ಯ ಕಾಣುತ್ತಲೇ ಇದ್ದರೂ ತನಗೆ ಸಾವಿಲ್ಲ ಎಂಬಂತೆ ಮನುಷ್ಯ ಬದುಕುತ್ತಾನಲ್ಲ. ಅದೇ ನನ್ನನ್ನು ಅತ್ಯಂತ ಅಚ್ಚರಿಗೊಳಿಸುತ್ತದೆ.

ಯಕ್ಷನ ಪ್ರಶ್ನೆಗೆ ಧರ್ಮರಾಯ ಹೀಗೆ ಉತ್ತರಿಸಿದ ಅನ್ನುತ್ತದೆ ಮಹಾಭಾರತದ ಒಂದು ಆಖ್ಯಾನ. ಸಾವಿನ ಕುರಿತು ನಮ್ಮ ಪುರಾಣಗಳು ಸಾಪೇಕ್ಷವಾಗಿಯಾಗಲೀ ಸಾಂಕೇತಿಕವಾಗಿ ಆಗಲೀ ಸ್ಪಷ್ಟವಾಗಿ ಆಗಲೀ ಹೆಚ್ಚು ಮಾತಾಡಿಲ್ಲ. ಭಾರತೀಯ ಕಲ್ಪನೆಗಳ ಪ್ರಕಾರ ಸಾವು ಎನ್ನುವುದು ಪಾಶ್ಚಾತ್ಯರಷ್ಟು ಅಸ್ಪಷ್ಟವಾದ ಸಂಗತಿಯೇನಲ್ಲ. ನಮ್ಮಲ್ಲಿ ಮೃತ್ಯುವಿಗೂ ಒಬ್ಬ ದೇವತೆ ಇದ್ದಾನೆ. ಅವನನ್ನೂ ನಾವು ಪೂಜಿಸುತ್ತೇವೆ. ಅವನನ್ನು ಕಾಲ ಎಂದು ಕರೆಯುತ್ತೇವೆ. ಮನುಷ್ಯರು ಕಾಲವಾಗುತ್ತಾರೆ. ಸತ್ತ ನಂತರವೂ ಅಲ್ಲಿ ಮತ್ತೊಂದು ಲೋಕವಿದೆ. ಆ ಲೋಕದಲ್ಲಿ ಮತ್ತೆ ಇಂಥದ್ದೋ ಇದಕ್ಕಿಂತ ಸುಖಕರವಾದದ್ದೋ ಕಷ್ಟಕರವಾದದ್ದೋ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಹೀಗೆ ನಮ್ಮ ಕಲ್ಪನೆ ಸಾಗುತ್ತದೆ. ಆದ್ದರಿಂದ ಸಾವು ಅನ್ನುವುದು ಪ್ರತಿಯಾಬ್ಬ ಭಾರತೀಯನ ಪ್ರಜ್ಞೆಯಲ್ಲೂ ಒಂದಲ್ಲ ಒಂದು ರೂಪದಲ್ಲಿ ನೆಲೆಯೂರುತ್ತಲೇ ಇರುತ್ತದೆ. ಕಠೋಪನಿಷತ್ತಿನಲ್ಲಿ ಬರುವ ಕತೆಯಲ್ಲಿ ನಚಿಕೇತ ಎಂಬ ಬಾಲಕ ಯಮನಲ್ಲಿಗೆ ಹೋಗಿ ಅವನನ್ನು ಮೆಚ್ಚಿಸಿ ಮರಳಿ ಬಂದ ಪ್ರಸಂಗವೂ ಇದೆ.

Face to face with Death !ಹೀಗೆ ನೋಡುತ್ತಾ ಹೋದರೆ ಸಾವು ಪುರಾತನರನ್ನು ಕಂಗೆಡಿಸುವ ಸಂಗತಿಯೇನೂ ಆಗಿರಲಿಲ್ಲ. ಅದು ಅನೇಕರ ಜ್ಞಾನೋದಯಕ್ಕೆ ಕಾರಣವಾಗಿದೆ. ಬುದ್ಧನ ಕತೆಯಲ್ಲಿ ಸಾವಿಲ್ಲದ ಮನೆಯ ಸಾಸಿವೆ ತರುವುದಕ್ಕೆ ಹೇಳಿ ಸಾವು ಸರ್ವಂತರ್ಯಾಮಿ ಎಂದು ತೋರಿಸಿಕೊಟ್ಟ ಪ್ರಸಂಗ ಬರುತ್ತದೆ. ಸತ್ಯವಾನ್‌ ಸಾವಿತ್ರಿ ಸಾವಿನ ದವಡೆಯಿಂದ ಗಂಡನನ್ನು ಬಿಡಿಸಿಕೊಂಡು ಬಂದ ದಿಟ್ಟ ಹೆಣ್ಣುಮಗಳಾಗಿ ಕಾಣಿಸುತ್ತಾಳೆ.

ಸಾವಿನ ಬಗ್ಗೆ ಅನೇಕರು ಬರೆದಿದ್ದಾರೆ. ನವೋದಯ ಸಾಹಿತ್ಯದ ಧಾಟಿಗೆ ಸಾವು ಅಷ್ಟಾಗಿ ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಸಾವು ಕೇವಲ ಪ್ರಾಸಂಗಿಕವಾಗಿ ಬಂದಿದೆ ಅಷ್ಟೇ; ಸರಸ ಜನನ, ವಿರಸ ಮರಣ ಸಮರಸವೇ ಜೀವನ ಎಂಬ ಸಾಲುಗಳಲ್ಲಿ ಸಾವು ಕಾಣಿಸಿಕೊಂಡಾಗ ಅದರ ದುರಂತ ಮತ್ತು ನೋವು ತಟ್ಟುವುದಕ್ಕೆ ಸಾಧ್ಯವೇ ಇಲ್ಲ. ಅದೊಂದು ಸಹಜ ಕ್ರಿಯೆ ಎಂಬಂತೆ ದಾಖಲಾಗುತ್ತದೆಯೇ ಹೊರತು ಅದಕ್ಕೆ ಇಲ್ಲದ ಮಹತ್ವ ಸಿಗುವುದು ಅದೊಂದು ರೂಪಕವಾಗಿ ಆವರಿಸಿಕೊಂಡಾಗ. ಫ್ರಾನ್ಸಿಸ್‌ ಬೇಕನ್‌ನಂಥ ಪ್ರಬಂಧಕಾರರು ಸಾವನ್ನು ಅತೀ ಕಡಿಮೆ ತೊಂದರೆ ಮಾಡುವ ಕೇಡು ಎಂದರೆ, ಇ. ಎಂ. ಫಾರ್ಸ್ಟರ್‌ ‘ಸಾವು ಮನುಷ್ಯನನ್ನು ನಾಶ ಮಾಡುತ್ತದೆ. ಆದರೆ ಸಾವಿನ ಕುರಿತ ಚಿಂತನೆ ಅವನನ್ನು ಅಮರನನ್ನಾಗಿಸುತ್ತದೆ’ ಎಂದು ಬರೆದ. ನಮ್ಮಲ್ಲಿ ಚಿತ್ತಾಲರಿಂದ ಹಿಡಿದು ಬಿಸಿ ದೇಸಾಯಿಯವರ ತನಕ ಪ್ರತಿಯಾಬ್ಬರನ್ನೂ ಸಾವು ಕಾಡಿದೆ. ಸಾವಿನ ಕುರಿತು ಬರೆದವರೆಲ್ಲರೂ ಅದನ್ನು ಮೀರುತ್ತೇವೆ ಎಂಬ ಹಮ್ಮಿನಲ್ಲೇ ಬರೆದಿದ್ದಾರೆ ಅನ್ನಿಸುತ್ತದೆ. ಸಾವಿನ ಎದುರು ವಿನೀತರಾದವರಿದ್ದಾರೆ. ಆದರೆ ಕನ್ನಡ ಸಾಹಿತ್ಯದಲ್ಲಿ ಸಾವು ರೂಪಕವಾಗಿ ಕಾಣಿಸಿಕೊಂಡದ್ದು ನವ್ಯ ಸಾಹಿತ್ಯದ ಹೊತ್ತಿಗೇ ಎಂದು ಕಾಣುತ್ತದೆ. ಅಲ್ಲಿಯ ತನಕ ಬದುಕೇ ಸಾಹಿತ್ಯಕ್ಕೆ ಮುಖ್ಯ ಪ್ರೇರಣೆಯಾಗಿತ್ತು. ಸಾವಿನ ಕುರಿತು ಹೇಳುತ್ತಲೇ ಬದುಕಿನ ಬೆರಗನ್ನು ಹೇಳುವುದಕ್ಕೆ ಯತ್ನಿಸಿದವರಿದ್ದರು.

ತಮಗೆ ಸಾವೇ ಇಲ್ಲ ಎಂಬಂತೆ ಬದುಕಿದವರೆಲ್ಲ ಅವರು ಹುಟ್ಟಿಯೇ ಇರಲಿಲ್ಲ ಎಂಬಂತೆ ಕಣ್ಮರೆಯಾಗಿ ಹೋಗಿದ್ದಾರೆ. ಸಾವು ದೇವರಿಗೆ ನಾವು ಕೊಡಬೇಕಾಗಿರೋ ಸಾಲ ಎಂಬಂತೆ ಬದುಕುವವರಿದ್ದಾರೆ. ದಾಸ ಸಾಹಿತ್ಯದಲ್ಲಿ ಭಕ್ತರು ಬೇಡುವುದು ಬದುಕನ್ನಲ್ಲ ಸಾವನ್ನು. ‘ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ’ ಎನ್ನುವಾಗ ಕಾಣಿಸುವ ಭಾವವೂ ಅಲ್ಪಮಟ್ಟಿಗೆ ಅದೇ. ‘ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ. ಮುಂದರಿತು ಹರಿಪಾದ ಸೇರುವುದು ಲೇಸು’ ಎಂಬ ದಾಸವಾಣಿಯಲ್ಲಿ ಈ ಬದುಕಿನ ಕುರಿತು ತುಂಬ ನಿಕೃಷ್ಟವಾದ ಭಾವನೆಯಿದ್ದಂತೆ ಸಾವಿನ ಕುರಿತು ಅಪಾರವಾದ ಗೌರವವೂ ಇದೆ.

ಭಾರತೀಯ ಕಲ್ಪನೆಗಳು ಬೆರಗುಗೊಳಿಸುವುದಕ್ಕೆ ಮತ್ತೊಂದು ಕಾರಣವೂ ಇದೆ. ಸಾವಿನ ನಂತರವೂ ಬದುಕಿದೆ ಅನ್ನುವ ಕಲ್ಪನೆ ಕೆಲವರಿಗೆ ವರ; ಮತ್ತೆ ಕೆಲವರಿಗೆ ಶಾಪ. ಮತ್ತೆ ಹುಟ್ಟದಂತೆ ಮಾಡೋ ತಂದೆ ಅನ್ನುವ ಪ್ರಾರ್ಥನೆಯನ್ನು ನಾವೆಲ್ಲ ಅಪ್ರಜ್ಞಾಪೂರ್ವಕವಾಗಿ ಹಾಡುತ್ತಲೇ ಇರುತ್ತೇವೆ. ಅದೇ ಹೊತ್ತಿಗೆ ಅಮರರಾಗಬೇಕು ಎಂದು ಆಶಿಸುತ್ತೇವೆ. ಈ ದ್ವಂದ್ವವಲ್ಲದ ದ್ವಂದ್ವದಲ್ಲಿ ಭಾರತೀಯ ತತ್ವಶಾಸ್ತ್ರ ಗೆಲ್ಲುತ್ತದೆ.

ಅಮರತ್ವ ಭಾರತೀಯ ಕಲ್ಪನೆ ಅಲ್ಲವೇ ಅಲ್ಲ. ಅದು ನಮ್ಮ ಪುರಾಣಗಳ ಪ್ರಕಾರ ರಾಕ್ಷಸ ಗುಣ. ಕೇವಲ ರಾಕ್ಷಸರು ಮಾತ್ರ ಪುರಾಣಗಳಲ್ಲಿ ಅಮರತ್ವ ಬಯಸುತ್ತಾರೆ. ಭೀಷ್ಮರಿಗೂ ಇಚ್ಛಾಮರಣಿಯಾಗುವ ವರವೂ ಸಪ್ತ ಚಿರಂಜೀವಿಗಳಿಗೆ ಅಮರತ್ವವೂ ಶಾಪವಾಗಿ ಪರಿಣಮಿಸಿದ್ದಕ್ಕೆ ಸಾಕ್ಷಿ ಮಹಾಭಾರತದಲ್ಲೇ ಸಿಗುತ್ತದೆ. ಇಚ್ಛಾಮರಣಿ ಎನ್ನುವ ಕಲ್ಪನೆಯೇ ಎಷ್ಟು ಪ್ರಖರವಾಗಿದೆ ನೋಡಿ. ಒಬ್ಬ ವ್ಯಕ್ತಿ ತನ್ನ ಸಾವು ಯಾವಾಗ ಘಟಿಸಬೇಕು ಎನ್ನುವುದು ನಿರ್ಧರಿಸಬಹುದಾದ ಶಕ್ತಿ ಅದು. ಇಚ್ಛಾಮರಣ ಆತ್ಮಹತ್ಯೆಯಲ್ಲ; ಅದೊಂದು ನೀಗಿಕೊಳ್ಳುವ ಕ್ರಮ. ನಿರ್ವಾಣಕ್ಕೆ ಹತ್ತಿರವಾದದ್ದು.

ಹಾಗೆ ನೋಡಿದರೆ ಬದುಕಿಗಿಂತ ಸಾರ್ವತ್ರಿಕವಾದದ್ದು ಸಾವು. ಯಾಕೆಂದರೆ ಹುಟ್ಟಿದವರೆಲ್ಲರೂ ಸಾಯುತ್ತಾರೆ. ಹುಟ್ಟಿದವರೆಲ್ಲರೂ ಜೀವಿಸಿರುವುದಿಲ್ಲ. ಸಾವಿನ ಭಯದಲ್ಲಿ ಬದುಕುವುದನ್ನೇ ಮರೆಯುವವರೂ ಇದ್ದಾರೆ. ಆದರೆ ಸಾವು ನಮ್ಮನ್ನು ಭಯವಾಗಿ ಕಾಡುವುದು ಮಧ್ಯವಯಸ್ಸಿನ ನಂತರವೇ. ಅಲ್ಲಿಯ ತನಕ ಅದೊಂದು ತಮಾಷೆಯ ಸಂಗತಿ. ಯಾವತ್ತೋ ಬರುವ ಅತಿಥಿ.

*

ಕುಳಮರ್ವ ವೆಂಕಪ್ಪ ಭಟ್ಟರು ಮರಣೋತ್ತರ ಜೀವನದ ಕುರಿತು ‘ಪುನರ್ಜನ್ಮ’ ಎಂಬೊಂದು ಪುಸ್ತಕವನ್ನು ಸಂಪಾದಿಸಿದ್ದಾರೆ. ಕನ್ನಡದಲ್ಲಿ ಬಂದ ತುಂಬ ಅಪರೂಪದ ಪುಸ್ತಕ ಇದು. ಅಡಿಗರ ಕಾವ್ಯದಲ್ಲಿ ಬರುವ ವ್ಯಕ್ತಮಧ್ಯ, ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕೆಲವು ಸಾಲುಗಳು, ಸಾವಿನ ಕುರಿತ ಪುರಾಣಗಳ ಉಲ್ಲೇಖ, ನಮ್ಮ ಸಾಹಿತ್ಯಪ್ರಕಾರಗಳು-ಹೀಗೆ ಎಲ್ಲವನ್ನೂ ನೆನಪಿಸುವಷ್ಟು ಈ ಸಂಕಲನ ಉಜ್ವಲವಾಗಿದೆ.

ವಾಸಾಂಸಿ ಜೕರ್ಣಾನಿ ಯಥಾ ವಿಹಾಯ।

ನವಾನಿ ಗೃಹ್ಣಾತಿ ನರೋಪರಾಣಿ।।

ತಥಾ ಶರೀರಾಣಿ ವಿಹಾಯ ಜೀರ್ಣಾ-

ನ್ಯನ್ಯಾನಿ ಸಂಯಾತಿ ನವಾನಿ ದೇಹೀ।।

ಮಾನವನು ಹಳೆಯ ವಸ್ತ್ರಗಳನ್ನು ಬಿಚ್ಚಿ ಎಸೆದು ಹೊಸದನ್ನು ತೊಟ್ಟುಕೊಳ್ಳುವಂತೆ ಜೀವಾತ್ಮನು ತನಗೆ ಉಪಾಯಾದ ಆಶ್ರಯವಾಗಿದ್ದ ಜರಾಜೀರ್ಣವಾದ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಪಡಕೊಳ್ಳುತ್ತಾನೆ ಎಂಬ ಬಹು ಪ್ರಸಿದ್ಧವೂ ಪ್ರಚಲಿತವೂ ಆದ ಕಲ್ಪನೆಯಿಂದ ಹಿಡಿದು ‘ಕಸ್ತಂ ಕೋಹಂ ಕುತ ಆಯಾತಃ’ ಎಂಬ ಕಠೋಪನಿಶತ್ತಿನ ಬೀಜ ಪ್ರಶ್ನೆಯ ತನಕ ಎಲ್ಲವನ್ನೂ ವೆಂಕಪ್ಪ ಭಟ್ಟರು ಕೃತಿಯಾಳಗೆ ತರಲು ಯತ್ನಿಸಿದ್ದಾರೆ. ನಾಸ್ತಿಕ ಸಂಪ್ರದಾಯದ ಪ್ರಸಿದ್ಧವಾದ ಶ್ಲೋಕವೂ ಇಲ್ಲಿದೆ;

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ

ತಸ್ಮಾತ್‌ ಸರ್ವಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್‌।।

ಒಮ್ಮೆ ಶರೀರವು ಭಸ್ಮವಾದರೆ ಆಮೇಲೆ ಮತ್ತೊಂದು ಶರೀರ ಎಲ್ಲಿಂದ ತರೋಣ ? ಆದ್ದರಿಂದ ಸಾಲ ಮಾಡಿಯಾದರೂ ಸುಖದಿಂದ ಬದುಕಬೇಕು ಎನ್ನುವುದು ಕೂಡ - ನಮ್ಮ ಚಿಂತನೆ ಎಷ್ಟು ವೈವಿಧ್ಯಮಯ ಅನ್ನುವುದನ್ನು ತೋರಿಸುತ್ತದೆ ತಾನೆ ?

ಸಾವಿನ ಬಗ್ಗೆ ಒಂದು ಸಮಗ್ರವಾದ ಚಿತ್ರಣವನ್ನು ಕಟ್ಟಿಕೊಡುವುದಕ್ಕೆ ವೆಂಕಪ್ಪ ಭಟ್ಟರು ಯತ್ನಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಟ್ಟರು ತಮ್ಮ ಅಭಿಪ್ರಾಯಗಳನ್ನು ಎಲ್ಲೂ ಹೇರಿಲ್ಲ.

ಪ್ರತಿಯಾಂದು ಶ್ಲೋಕದ ವಾಚ್ಯಾರ್ಥವನ್ನಷ್ಟೇ ಕೊಡುವ ಮೂಲಕ, ಅದಕ್ಕೆ ಕಾಲಾನುಕಾಲಕ್ಕೆ ಸೇರಿಕೊಂಡ ವಿಶ್ಲೇಷಣೆಗಳನ್ನು ಸೇರಿಸದೇ ಇರುವ ಮೂಲಕ ಭಟ್ಟರು ತುಂಬ ಮುಕ್ತವಾದ ಓದಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಪುನರ್ಜನ್ಮದ ಕುರಿತು ಋಗ್ವೇದ ಏನು ಹೇಳುತ್ತದೆ, ದೇವಯಾನ ಅಂದರೇನು, ಜನ್ಮಾಂತರದ ರಹಸ್ಯ ನಮ್ಮ ಉಪನಿಷತ್ತುಗಳಲ್ಲಿ ಹೇಗೆ ಪ್ರಕಟಗೊಂಡಿದೆ, ಪರಕಾಯ ಪ್ರವೇಶ ಎಂಬ ಬೆರಗುಗೊಳಿಸುವ ಪ್ರಕ್ರಿಯೆಯ ಬಗ್ಗೆ ಪತಂಜಲಿಯ ಯೋಗಸೂತ್ರದ ನಿರ್ಣಯ ಏನು- ಹೀಗೆ ಭಟ್ಟರು ಎಲ್ಲವನ್ನೂ ಸಮಗ್ರವಾಗಿ ನೋಡಲು ಯತ್ನಿಸಿದ್ದಾರೆ. ಯೋಗವಾಸಿಷ್ಠ, ವ್ಯಾಸ ಭಾಷ್ಯ, ಶೌನಕ ಋಷಿಯ ಮಾತು ಎಲ್ಲವನ್ನೂ ಕ್ರೋಢೀಕರಿಸಿದ್ದಾರೆ. ಹೀಗಾಗಿ ಈ ಕೃತಿಗೆ ತಾನಾಗಿಯೇ ಒಂದು ಘನತೆ ಮತ್ತು ಪರಿಪೂರ್ಣತೆ ಪ್ರಾಪ್ತಿಯಾಗಿದೆ.

ನಾನ್ನೂರ ಅರುವತ್ತು ಪುಟಗಳ ಈ ಪುಸ್ತಕ ಸಾವಿನ ಕುರಿತ ನಮ್ಮ ಜ್ಞಾನವನ್ನು ಹೆಚ್ಚಿಸುವ ಹಾಗೇ ಜೀವನ ಪ್ರೀತಿಯನ್ನೂ ಇಮ್ಮಡಿಸುವಂತಿದೆ ಅನ್ನುವುದೇ ಬೆರಗಿನ ಸಂಗತಿ. ಆಧುನಿಕ ಸಾಹಿತ್ಯದಲ್ಲಿ ಸಾವು ಹೇಗೆ ಕಾಣಿಸಿಕೊಂಡಿದೆ ಅನ್ನುವುದನ್ನೂ ಭಟ್ಟರು ಸೇರಿಸಿಕೊಂಡಿದ್ದರೆ ಇದು ಇನ್ನಷ್ಟು ಸಮಗ್ರವಾಗುತ್ತಿತ್ತು ಅನ್ನುವುದು ಆಸಕ್ತ ಓದುಗರ ಅಸಂಖ್ಯ ದುರಾಸೆಗಳಲ್ಲಿ ಒಂದು. ಎಂಬತ್ತು ದಾಟಿದ ಭಟ್ಟರು ಆಧುನಿಕ ಸಾಹಿತ್ಯದಲ್ಲಿ ಸಾವು ದಾಖಲಾದದ್ದರ ಕುರಿತು ಮತ್ತೊಂದು ಸಂಗ್ರಹ ತರಲಿ.

*

ನಾವು ಸಾಯುತ್ತಾ ಹೋಗುತ್ತೇವೆ. ಪ್ರತಿಯಾಂದು ಹೆಜ್ಜೆಯೂ ನಮ್ಮನ್ನು ಸ್ಮಶಾನದತ್ತ ಒಯ್ಯುತ್ತಿರುತ್ತದೆ. ಪ್ರತಿಯಾಂದು ನಿಮಿಷವೂ ನಮ್ಮನ್ನು ಬದುಕಿನಿಂದ ದೂರವಾಗಿಸುತ್ತಿರುತ್ತದೆ. ಹೀಗಾಗಿ ಪ್ರತಿಯಾಂದು ಕ್ಷಣವನ್ನೂ ನಮ್ಮದು ಎನ್ನುವಂತೆ ಬದುಕೋಣ ಅನ್ನುವುದು ಬದುಕನ್ನು ತೀವ್ರವಾಗಿ ಜೀವಿಸಬೇಕು ಅನ್ನುವವರ ಮತ. ಯಶವಂತ ಚಿತ್ತಾಲರ ‘ಪಯಣ’ ಕತೆಯ ನಾಯಕ ಸಾವು ಬಂದು ಕರೆದಾಗ ಅದಕ್ಕಾಗಿಯೇ ಅಷ್ಟೂ ಹೊತ್ತು ಕಾದಿದ್ದವನಂತೆ ಹೊರಟು ಹೋಗುತ್ತಾನೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮನಸ್ಸು ತುಡಿಯುತ್ತದೆ ಅನ್ನುವಲ್ಲಿಯೂ ಸಾವಿನ ಸೂಕ್ಪ್ಮವಾದ ಹೆಜ್ಜೆ ಸದ್ದು ಕೇಳಿಸುತ್ತದೆ.

ಅಮರತ್ವ ಮನುಷ್ಯನ ಆಶೆ. ಸಾವು ನಾವು ಯಮನಿಗೆ ಕೊಟ್ಟ ಭಾಷೆ. ಕೊಟ್ಟ ಭಾಷೆಗೆ ತಪ್ಪಲಾರೆವು. ಕನಿಷ್ಟ ಅದೊಂದು ವಿಚಾರದಲ್ಲಿ ನಾವು ನಿಯತ್ತಿನವರು. ಕರೆದಾಗ ನಾವು ತುಂಬ ಪ್ರೀತಿಸುವವರನ್ನೂ ಹಸಿಹಸಿಯಾಗಿ ದ್ವೇಷಿಸುವವರನ್ನೂ ಮೊನ್ನೆ ಮೊನ್ನೆ ಕೊಂಡುಕೊಂಡ ಹೊಸ ಮನೆಯನ್ನೂ ಪಕ್ಕದ ಮನೆಯ ಸುಂದರಿಯ ಮುಗುಳು ನಗುವನ್ನೂ ಮಗುವಿನ ಕೆನ್ನೆಯ ಕಚಗುಳಿಯನ್ನೂ ಸಾಲವನ್ನೂ ಸಂಬಳವನ್ನೂ ಮರೆತು ಹೊರಟುಬಿಡುತ್ತೇವೆ.

ಅದು ಅನಿವಾರ್ಯ ಎಂದು ಸುಮ್ಮನಾಗೋಣ. ಆದರೆ ಸಾವು ಅಷ್ಟೊಂದು ಹಠಾತ್ತನೇ ಘಟಿಸುವ ಸಂಗತಿಯಲ್ಲ; ಆಕಸ್ಮಿಕಗಳನ್ನು ಹೊರತುಪಡಿಸಿದರೆ. ನಾವು ಕ್ರಮೇಣ ಸಾಯುತ್ತಾ ಹೋಗುತ್ತೇವೆ. ಅದನ್ನೇ ಅಕೌಂಟೆನ್ಸಿಯಲ್ಲಿ ಡಿಪ್ರಿಸಿಯೇಷನ್‌ ಎಂದು ಹೇಳಲಾಗಿದೆ. ಕನ್ನಡದಲ್ಲಿ ಅದು ಸವಕಳಿ. ಈ ಸವಕಳಿ ಕೇವಲ ದೇಹಕ್ಕಷ್ಟೇ ಸಂಬಂಸಿದ್ದಲ್ಲ. ಮಾನಸಿಕವಾಗಿಯೂ ನಾವು ನಮ್ಮ ಜೀವನ ಪ್ರೀತಿಯ ಒಂದು ಮಗ್ಗುಲಿಗೆ ಹೊರತಾಗುತ್ತಾ ಹೋಗುತ್ತೇವೆ. ನಮ್ಮನ್ನು ರೂಪಿಸಿದ ಒಬ್ಬೊಬ್ಬರೇ ತೀರಿಕೊಂಡಾಗ ನಮ್ಮೊಳಗಿನ ಒಂದು ಭಾಗ ಸಾಯುತ್ತದೆ. ನಮ್ಮ ಪ್ರೀತಿಯ ನಟ, ನಮ್ಮನ್ನು ತಿದ್ದಿದ ಮೇಷ್ಟ್ರು, ನಮ್ಮನ್ನು ಪೊರೆದ ಹೆತ್ತವರು, ನಮ್ಮ ಜೊತೆ ಬೆಳೆದ ಸೋದರ, ಸದಾಕಾಲ ಜೊತೆಗಿದ್ದ ಸಖ ತೀರಿಕೊಂಡಾಗ ಎಲ್ಲೋ ಒಂದು ಕಡೆ ನಾವೂ ತೀರಿಕೊಂಡೆವು ಅನ್ನಿಸುತ್ತದೆ. ತುಂಬ ಆತ್ಮೀಯರು ಸತ್ತಾಗ ನಮಗ್ಯಾರಿಗೂ ನಮ್ಮ ಸಾವನ್ನು ನೆನೆದು ಭಯವಾಗುವುದಿಲ್ಲ. ಬದಲಾಗಿ ಅವನನ್ನು ಕಳಕೊಂಡೆವಲ್ಲ ಎನ್ನಿಸಿ ಮನಸ್ಸು ಮರುಗುತ್ತದೆ.

ಈ ಸಾಲು ಬೇಡವೆಂದರೂ ನೆನಪಾಗುತ್ತದೆ;

Days and moments quickly flying

Blend the living with the dead;

Soon will I and You will be lying

Each within our narrow bed.

ಪ್ರತಿಯಾಂದು ಸಾವಲ್ಲೂ ಇದು ನೆನಪಾಗುತ್ತದೆ. ಅವರ ಬಗ್ಗೆ ಬರೆಯಲು ಕುಳಿತಾಗಲೆಲ್ಲ ‘ಬಾಕಿ ಮೊಕ್ತಾ’ ಎಂದು ಬರೆಯಬೇಕು ಅನ್ನಿಸುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more