ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯರ್‌ ದಂಪತಿಗಳ ಕಾಲುಹಾದಿಯ ಕಿರುಹಾಡು

By Staff
|
Google Oneindia Kannada News

*ಜಾನಕಿ

-1-

‘ಆ ಜಾಗದ ಹೆಸರೇನು?’

‘ಯಾವ ಜಾಗ’

‘ಅದೇ...ನಾವು ಹನಿಮೂನಿಗೆ ಹೋಗಿದ್ವಲ್ಲ’

‘ಓ.. ಅದಾ.. ವೈನಾಡು’

‘ನೀನು ನಿಜವಾಗ್ಲೂ ಅಲ್ಲಿಗೆ ಹೋಗಿದ್ಯಾ’

‘ಹ್ಞೂಂ.. ಹೋಗಿದ್ದೆ’

‘ಇನ್ನು ಮೇಲೆ ಎಲ್ಲಿಗೆ ಹೋಗಬೇಕು ಅಂದ್ಕೊಂಡಿದ್ದಿ..’

‘ಲಬಂಗೋ ಕಾಡಿಗೆ. ಅದೊಂದು ದಟ್ಟ ಅರಣ್ಯಪ್ರದೇಶ. ಎಲ್ಲ ಕಾಡುಪ್ರಾಣಿಗಳೂ ಇರ್ತಾವೆ’

‘ಅದರ ಬಗ್ಗೆ ಹೇಳು..’

‘ಏನು ಹೇಳ್ಲಿ. ಅದು ಮಹಾನದಿಯ ದಡದಲ್ಲಿದೆ. ತುಂಬ ಪ್ರಾಣಿಗಳಿರುತ್ವೆ. ಅಲ್ಲೊಂದು ಪುರಾನಾ ಕೂಟ್‌ ಅನ್ನೋ ಬೆಟ್ಟವಿದೆ. ಅದರ ಮೇಲೊಂದು ಫಾರೆಸ್ಟ್‌ ಗೆಸ್ಟ್‌ ಹೌಸಿದೆ. ಅಲ್ಲಿ ಉಳ್ಕೋತೀನಿ’.

‘ಒಬ್ಬನೇ..’

‘ನೀನು ಬಾರಲ್ಲ... ಜತೆಗೆ’

ಅಷ್ಟು ಮಾತಿಗೆ ಆಕೆ ಎದ್ದು ಹೋಗುತ್ತಾಳೆ. ಮಗುವಿನ ನೀರಿನ ಬಾಟಲು ತರುತ್ತೇನೆ ಅನ್ನುವುದು ನೆಪ. ಆಕೆ ಎದ್ದು ರೈಲಿನ ಬರ್ತ್‌ನಲ್ಲಿಟ್ಟಿದ್ದ ಬ್ಯಾಗಿನ ಹತ್ತಿರ ನಿಲ್ಲುತ್ತಾಳೆ. ಅದೇನು ಬೇಕು ಹೇಳು ಮಹರಾಯಿತಿ, ತಂದುಕೊಡ್ತೀನಿ ಅಂತ ಅವಳ ಪೇಚಾಟ ನೋಡಲಾಗದೆ ಅವನು ಎದ್ದು ಬರುತ್ತಾನೆ. ಆಕೆ ಆಡಲು ಮಾತುಗಳಿಲ್ಲದೆ, ಹೇಳಲು ಸುಳ್ಳುಗಳಿಲ್ಲದೆ, ಏನೋ ಗೊಣಗುತ್ತಾಳೆ. ಅವಳು ಬಂದಿದ್ದು ಮಗುವಿನ ನೀರಿನ ಬಾಟಲಿಗಾಗಿ ಅಲ್ಲ ಅನ್ನೋದು ಅವನಿಗೂ ಗೊತ್ತು. ಆತ ಎದ್ದು ಬರುತ್ತಲೆ ಅವನ ಕಡೆ ತಿರುಗುತ್ತಾಳೆ. ಅವನು ಅವಳನ್ನೇ ನೋಡುತ್ತಾ..

‘ಮಿನಾಕ್ಷಿ’ ಅಂತಾನೆ.

‘ನನ್ನ ಹೆಸರು ಕರೆಯೋದು ಹಾಗಲ್ಲ’ ಅಂತಾಳೆ ಆಕೆ.

‘ಇನ್ನು ಹ್ಯಾಗೆ’

‘ಅದು ತಮಿಳು ಹೆಸರು, ಡಬ್ಬಲ್‌ ಈ’

‘ಮೀನಾಕ್ಷಿ... ಅವಳ ಕಣ್ಣ ಕೆಳಗಿನ ಉಂಗುರವನ್ನು ಸವರುತ್ತಾ ಹೇಳುತ್ತಾನೆ ‘ಇದೇ ಹೆಸರಿನ ಲೆನ್ಸೊಂದು ನನ್ನ ಹತ್ತಿರ ಇದೆ. ಫಿಷ್‌ ಐ ಲೆನ್ಸ್‌’

ಆಕೆ ಕಣ್ಮುಚ್ಚುತ್ತಾಳೆ. ಅವನು ಅವಳ ಹಣೆಗೋ ಕೆನ್ನೆಗೋ ತುಟಿಗೋ ಗಲ್ಲಕ್ಕೋ ಆ ಮೀನಿನಂಥ ಕಣ್ಣಿಗೋ ಒಂದು ಮುತ್ತು ಕೊಡುತ್ತಾನೆ ಅಂದುಕೊಳ್ಳುತ್ತೇವೆ. ಅಷ್ಟು ಹೊತ್ತಿಗೆ ‘ಜರಾ ಸೈಡ್‌ ದೀಜಿಯೇ’ ಅನ್ನುತ್ತಾ ಯಾರೋ ಆ ಕಂಪಾರ್ಟ್‌ಮೆಂಟನ್ನು ದಾಟಿಕೊಂಡು ಹೋಗುತ್ತಾರೆ.

ಅವಳು ಮತ್ತೆ ತಾಯಿಯಾಗುತ್ತಾಳೆ. ಅವನು ಅಪರಿಚಿತನಾಗುತ್ತಾನೆ. ಅವಳೊಳಗಿನ ರಾಧೆ ಕಣ್ಮರೆಯಾಗುತ್ತಾಳೆ, ಯಶೋದೆ ಮಾತ್ರ ಉಳಿಯುತ್ತಾಳೆ.

-2-

A Still from Mr. And Mrs. Iyer ಆಕೆ ಕಲ್ಕತ್ತಾದಲ್ಲಿರುವ ಗಂಡನ ಮನೆಗೆ ಹೊರಟು ನಿಂತಿದ್ದಾಳೆ. ಮಗಳನ್ನು ಒಂಟಿಯಾಗಿ ಕಳಿಸಲು ತಂದೆತಾಯಿಗೆ ಭಯ. ಬಸ್‌ಸ್ಟಾಂಡಿನಲ್ಲಿ ಗೆಳೆಯನೊಬ್ಬ ಸಿಗುತ್ತಾನೆ. ಅವನ ಮಿತ್ರನೂ ಕಲ್ಕತ್ತೆಗೆ ಹೊರಟಿದ್ದಾನೆ. ಅವನಿಗೆ ಕೊಂಚ ನೆರವಾಗುವಂತೆ ಹೆತ್ತವರು ಕೇಳಿಕೊಂಡು ಆಕೆಯನ್ನು ಬಸ್‌ ಹತ್ತಿಸುತ್ತಾರೆ. ಅಲ್ಲಿಂದ ಪ್ರಯಾಣ ಶುರುವಾಗುತ್ತದೆ.

ಇಬ್ಬರು ಹತ್ತಿರವಾಗಲಿಕ್ಕೆ ಎಷ್ಟು ಕಾಲ ಬೇಕು?

ಒಂದು ವರುಷ ? ಒಂದು ಜನುಮ ? ಒಂದು ಗಳಿಗೆ ?

ಅಥವಾ ಇಬ್ಬರು ಆತ್ಮೀಯರಾಗಲಿಕ್ಕೆ ಯಾವ ನೆಪ ಬೇಕು ?

ದೇಶ, ಭಾಷೆ, ಜಾತಿ, ಸೌಂದರ್ಯ, ಕಾಮ, ಪ್ರೇಮ?

ಅವರಿಬ್ಬರೂ ಹೊರಟ ಬಸ್ಸು ಎಲ್ಲೋ ಒಂದು ಕಡೆ ನಿಲ್ಲುತ್ತದೆ. ಅಲ್ಲೆಲ್ಲೋ ಕೋಮು ಗಲಭೆಯಾಗಿದೆ. ಮುಸ್ಲಿಮರನ್ನು ಹಿಂದುಗಳು ಕೊಲ್ಲುತ್ತಿದ್ದಾರೆ. ಆಗ ಆತ ಹೇಳುತ್ತಾನೆ.

‘ನಾನು ನಿಮ್ಮ ಜೊತೆ ಬರೋಕ್ಕಾಗಲ್ಲ.. ನಾನು ಇಲ್ಲಿಂದ ಪಾರಾಗುತ್ತೇನೆ. ನನ್ನನ್ನು ಅವರು ಸುಮ್ಮನೆ ಬಿಡೋಲ್ಲ’

‘ಯಾಕೆ... ನಿನ್ನ ಹೆಸರು ರಾಜಾ ಚೌಧರಿ ಅಲ್ವಾ?’

‘ಹೌದು. ಆದ್ರೆ ಅದು ಗೆಳೆಯರು ಕರೆಯೋ ಹೆಸರು. ನನ್ನ ನಿಜವಾದ ಹೆಸರು ಜಹಾಂಗೀರ್‌ ಚೌಧರಿ. ನಾನೊಬ್ಬ ಮುಸ್ಲಿಂ’

‘ನೀನು ಬಂಗಾಲಿ ಅಂದ್ಕೊಂಡಿದ್ದೆ’

ಅವನು ಕಚ್ಚಿ ಕುಡಿದ ಬಾಟಲಿಯಿಂದ ತಾನೂ ನೀರು ಕುಡಿದಿದ್ದೆ ಅನ್ನುವುದು ನೆನಪಾಗಿ ಅವಳಿಗೆ ಪಶ್ಚಾತ್ತಾಪವಾಗುತ್ತದೆ.

ಆದರೆ ಅವನಿಗೆ ತಪ್ಪಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಅವನು ಅವಳ ಪಕ್ಕ ಕೂರಬೇಕಾಗುತ್ತದೆ. ಹಿಂದು ಉಗ್ರವಾದಿಗಳು ಬಸ್ಸು ಹತ್ತುತ್ತಾರೆ. ಮುದಿ ಮುಸ್ಲಿಂ ದಂಪತಿಗಳನ್ನು ಕೆಳಗಿಳಿಸುತ್ತಾರೆ. ಮತ್ತೊಬ್ಬ ತಾನು ಹಿಂದು ಅಂದಾಗ ಅವನ ಬಟ್ಟೆ ಬಿಚ್ಚಿಸಿ ಖಾತ್ರಿ ಮಾಡಿಕೊಳ್ಳುತ್ತಾರೆ. ಆಕೆ ಥಟ್ಟನೆ ತನ್ನ ಮಗುವನ್ನು ತನ್ನ ಪಕ್ಕ ಕೂತ ಜಹಾಂಗೀರ್‌ ಕೈಯಲ್ಲಿಡುತ್ತಾಳೆ. ಅವರು ಬಂದು ಹೆಸರು ಕೇಳಿದಾಗ ಹೇಳುತ್ತಾಳೆ.

‘ನಾವು ಮಿಸ್ಟರ್‌ ಅಂಡ್‌ ಮಿಸೆಸ್‌ ಅಯ್ಯರ್‌. ನಾನು ಮೀನಾಕ್ಷಿ ಅಯ್ಯರ್‌, ಇವರು ಗಂಡ ಸುಬ್ರಮಣಿ ಅಯ್ಯರ್‌, ಇವನು ಮಗ ಸಂತಾನಂ ಅಯ್ಯರ್‌’.

ಆಕೆ ತಾಯಿ.

ಹೌದಾ ? ಆ ಒಂದು ಸುಳ್ಳಿನಿಂದ ಅವಳು ಅವನಿಗೆ ಮರುಜನ್ಮ ನೀಡಿದ್ದಾಳಾ ? ನಾನು ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು ಎನ್ನುತ್ತಿದ್ದಾಕೆ. ಮಗನಿಗೆ ಸುರೇಶ್‌ ಅಂತ ಹೆಸರಿಡುವ ಆಸೆಯಿದ್ದರೂ ಸಂತಾನಂ ಅಂತ ಹೆಸರಿಟ್ಟಾಕೆ. ಒಬ್ಬ ಮುಸ್ಲಿಂ ಪಕ್ಕ ಕೂರುವುದೇ ತಪ್ಪು ಅಂದುಕೊಂಡಿದ್ದ ಆಕೆಯನ್ನು ಬದಲಾಯಿಸಿದ್ದು ಅವಳೊಳಗಿನ ಯಾವ ಭಾವ? ಎಲ್ಲರನ್ನೂ ಸಲಹುವ ಭೂತಾಯಿಯ ಕರುಣೆಯೇ?

-3-

ಒಂದು ಸಿನಿಮಾ ಮಾಡಬೇಕಾದದ್ದು ಇಷ್ಟೇ; ಮಾಡುವುದು ಇಷ್ಟನ್ನೇ. ಅದು ನಮಗೇ ಗೊತ್ತಿಲ್ಲದ ಹಾಗೆ ನಮ್ಮನ್ನು ಉದಾತ್ತರನ್ನಾಗಿಸುತ್ತದೆ. ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ನಾವು ಕಲೆಯ ಮೂಲಕ ಅಪ್ರಜ್ಞಾಪೂರ್ವಕವಾಗಿ ಎಲ್ಲ ಕಟ್ಟುಪಾಡುಗಳನ್ನೂ ಮೀರುತ್ತೇವೆ. ಆಳದಲ್ಲಿ ನಾವೆಲ್ಲರೂ ಮನುಷ್ಯರು ಎಂಬ ಸತ್ಯ ಮಾತ್ರ ಉಳಿಯುವುದನ್ನು ರೋಮಾಂಚಗೊಳ್ಳುತ್ತಾ ಅನುಭವಿಸುತ್ತೇವೆ. ಒಂದು ಅರ್ಥದಲ್ಲಿ ಯಾವ ವಿರೋಧಾಭಾಸವೂ ಇಲ್ಲದ ಪ್ರಕೃತಿಯ ಒಂದು ಭಾಗವಾಗುತ್ತೇವೆ.

ಅಪರ್ಣಾ ಸೆನ್‌ ನಿರ್ದೇಶಿಸಿದ M್ಟ ಚ್ಞಛ M್ಟಠ ಐಢಛ್ಟಿ ಮಾಡುವುದೂ ಅದನ್ನೇ. ಅದು ನಮ್ಮ ಮೂಲಭೂತ ಆಶೆಗಳನ್ನು ಹತ್ತಿಕ್ಕುತ್ತದೆ. ನಾವು ನಮ್ಮ ಅನುಭವದ ಮೂಲಕ ಕಟ್ಟಿಕೊಂಡಿದ್ದ ಕೋಟೆಯನ್ನು ದಾಟಿ ಒಳಗೆ ಪ್ರವೇಶಿಸುತ್ತದೆ. ಒಂದೇ ಒಂದು ಕ್ಷಣದ ಮಟ್ಟಿಗಾದರೂ ನಾವು ಎಲ್ಲವನ್ನೂ ಮೀರುವಂತೆ ಮಾಡುತ್ತದೆ.

ಅಪರ್ಣಾ ಸೆನ್‌ ಕತೆಗೇ ಅಂಥದ್ದೊಂದು ಶಕ್ತಿಯಿದೆ. ಆ ಇಬ್ಬರು ಅಪರಿಚಿತರ ಪೈಕಿ ಆಕೆಗೆ ಮದುವೆಯಾಗದೇ ಹೋಗಿದ್ದರೆ ಅದು ಪ್ರೇಮವಾಗಬಹುದಿತ್ತು. ಆಕೆ ತಾಯಿಯಾಗದೇ ಇದ್ದಿದ್ದರೆ ಅದು ಮತ್ತೊಂದು ತಿರುವು ಪಡೆಯಬಹುದಾಗಿತ್ತು. ಆದರೆ ಆಕೆ ವಿವಾಹಿತೆ; ತಾಯಿ. ಅವನು ಅಪರಿಚಿತ.

ಬಹುಶಃ ಅದೊಂದು ನಲುವತ್ತೆಂಟು ಗಂಟೆಗಳ ಸಾಂಗತ್ಯ. ಆ ನಲುವತ್ತೆಂಟು ಗಂಟೆಗಳಲ್ಲೇ ಅವಿಸ್ಮರಣೀಯ ಸ್ನೇಹವೊಂದು ಅವರ ನಡುವೆ ಹಬ್ಬುತ್ತದೆ. ಕಣ್ಣೆದುರೇ ನಡೆಯುವ ಕೊಲೆಯನ್ನು ಕಂಡು ಆಕೆ ತತ್ತರಗುಡುತ್ತಾರೆ. ಆತ ಸಂತೈಸುತ್ತಾನೆ. ತನ್ನ ಕೋಣೆಯಾಳಗೆ ಬಿಟ್ಟುಕೊಳ್ಳದೇ ಅವನನ್ನು ಹೊರಗೆ ಮಲಗಿಸಿದ್ದಕ್ಕೆ ಅವಳು ಪಶ್ಚಾತ್ತಾಪ ಪಡುವುದಿಲ್ಲ. ಆದರೆ ಮಾರನೆಯ ದಿನ ಅವಳು ಪುಟ್ಟ ಮಗುವಿನಂತೆ ಅವನ ಕೈ ಹಿಡಕೊಂಡೇ ಮಲಗುತ್ತಾಳೆ. ಅವನು ಅವಳ ಪೊಟೋ ತೆಗೆಯುತ್ತಾನೆ. ಒಂದು ಹೆಸರಿಲ್ಲದ ಸಂಬಂಧ ಅವರನ್ನು ಬೆಸೆಯುತ್ತದೆ. ಅದು ಅವಳ ಸಂಪ್ರದಾಯಸ್ಥ ಹಿನ್ನೆಲೆಯನ್ನೂ ತಾನು ವಿವಾಹಿತೆ ಎಂಬ ಎಚ್ಚರವನ್ನೂ ತನಗೊಬ್ಬ ಮಗನಿದ್ದಾನೆ ಎಂಬ ಪ್ರಜ್ಞೆಯನ್ನೂ ಮೀರಬಹುದಾದ ಮಿತಿಯಲ್ಲೇ ಮೀರುತ್ತದೆ.

ಕೊನೆಯಲ್ಲಿ ಆತ ಅವಳನ್ನು ಕಲ್ಕತ್ತಾ ರೇಲ್ವೇ ಸ್ಟೇಷನ್ನಿನಲ್ಲಿ ಇಳಿಸಿದಾಗ ಅಲ್ಲಿಗೆ ಅವಳ ಗಂಡ ಸುಬ್ರಮಣಿ ಅಯ್ಯರ್‌ ಬಂದಿರುತ್ತಾನೆ. ಅವನಿಗೆ ಆತನನ್ನು ಆಕೆ ಜಹಾಂಗೀರ್‌ ಚೌಧರಿ. ಇವರು ಮುಸ್ಲಿಂ ಎಂದೇ ಪರಿಚಯಿಸುತ್ತಾಳೆ. ಹಾಗೆ ಪರಿಚಯಿಸುವ ಮೂಲಕವೇ ಆತನ ಘನತೆಯನ್ನೂ ತನ್ನ ಪ್ರೀತಿಯನ್ನೂ ತೋರಿಸುತ್ತಾಳೆ. ಆಕೆ ಆತ ಮುಸ್ಲಿಂ ಅನ್ನುವುದನ್ನು ಮುಚ್ಚಿಟ್ಟಿದ್ದರೆ ಅದು ಅವಳ ಕಾಪಟ್ಯವನ್ನು ತೋರುತ್ತಿತ್ತೋ ಏನೋ? ತನ್ನ ಗಂಡನಿಗೆ ತಾನು ಒಬ್ಬ ಮುಸ್ಲಿಂ ಜೊತೆಗೆ ಬಂದೆ ಅನ್ನುವುದನ್ನು ಅರಗಿಸಿಕೊಳ್ಳುವ ಶಕ್ತಿಯಿದೆ ಎಂದು ತೋರಿಸಿಕೊಡುವುದೂ ಅವಳಿಗೆ ಬೇಕಾಗಿತ್ತಾ ?

ಆದರೆ ರೋಮಾಂಚಗೊಳಿಸುವ ಮತ್ತೊಂದು ಗಳಿಗೆ ಈ ಚಿತ್ರದಲ್ಲಿದೆ. ಟ್ರೇನು ತಡವಾಗಿ ಬಂದಿದ್ದರಿಂದ ಎಲ್ಲರಿಗೂ ಗಾಬರಿಯಾಗಿದೆ. ಮೀನಾಕ್ಷಿ ಸಿಕ್ಕಿದ ಸಂತೋಷದಲ್ಲಿ ಮಗ ಅಪ್ಪನಿಗೆ ಫೋನ್‌ ಮಾಡಲು ಹೋಗುತ್ತಾನೆ. ಜಹಾಂಗೀರ್‌ ಚೌಧರಿ, ಮೀನಾಕ್ಷಿಯನ್ನು ಬೀಳ್ಕೊಟ್ಟು ಹೊರಡುತ್ತಾನೆ. ಹೊರಟು ಹತ್ತು ಹೆಜ್ಜೆ ನಡೆದವರು ಮತ್ತೆ ಹಿಂತಿರುಗಿ ಬಂದು ತಾನು ತೆಗೆದ ಅವಳ ಮಗನ ಫೋಟೋಗಳಿರುವ ರೋಲನ್ನು ಆಕೆಯ ಕೈಗಿಡುತ್ತಾನೆ; ‘ಇದು ನಿನಗೆ. ಗುಡ್‌ಬೈ ಮೀನಾಕ್ಷಿ’

ಅವಳ ಹೆಸರನ್ನು ಬೇಕಂತಲೇ ಮೀ..ನಾಕ್ಷಿ ಅನ್ನುತ್ತಾನೆ.

ಆಕೆ ಕಂಬನಿದುಂಬಿದ ಕಣ್ಣುಗಳಿಂದ ಹೇಳುತ್ತಾಳೆ;

‘ಗುಡ್‌ಬೈ...... ಮಿಸ್ಟರ್‌ ಐಯ್ಯರ್‌’.

ಇದನ್ನು ವಿವರಿಸುವುದಕ್ಕೆ ಹೋಗಬಾರದು. ಹಾಗೇನಾದರೂ ಮಾಡಿದರೆ ಅದು ನಮ್ಮ ಅಂತಃಕರಣಕ್ಕೆ ಅನ್ಯಾಯ ಮಾಡಿಕೊಂಡಂತೆ.

-4-

ಈ ಸಾರಿ ಅತ್ಯುತ್ತಮ ಚಿತ್ರ ಎಂದು ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ ಇದು. ಇಂಥದ್ದೊಂದು ಸಿನಿಮಾಕ್ಕೆ ಪ್ರಶಸ್ತಿ ನೀಡುವ ಮೂಲಕ ಅದನ್ನು ನೋಡುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರಕಾಶ್‌ ಝಾ ಸಮಿತಿಗೆ ಕೃತಜ್ಞತೆ ಹೇಳಲೇಬೇಕು. ಪ್ರಶಸ್ತಿಗಳಿಂದ ಚಿತ್ರ ನಿರ್ಮಾಪಕರಿಗೆ ನಿರ್ದೇಶಕರಿಗೆ ಏನೇನೋ ಲಾಭಗಳಾಗುತ್ತವೆ. ಆದರೆ ಒಬ್ಬ ಪ್ರೇಕ್ಷಕನಿಗೆ ಅವುಗಳಲ್ಲಿ ಆಸಕ್ತಿಯಿಲ್ಲ. ಅವನಿಗೆ ಒಂದು ಒಳ್ಳೆಯ ಸಿನಿಮಾ ನೋಡುವ ಅವಕಾಶ ಸಿಗುತ್ತದೆ ಅಷ್ಟೇ.

ರಾಷ್ಟ್ರೀಯ ಭಾವೈಕ್ಯತೆಯನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ ಎಂದು ವಿವರಿಸಹೊರಡುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಹೀಗೆ ಒಂದು ಉದ್ದೇಶ, ಒಂದು ಪ್ರಾಪಗಾಂಡ ಇಟ್ಟುಕೊಂಡು ಹೊರಟ ಚಿತ್ರಗಳು ಎಷ್ಟು ಅಧ್ವಾನವಾಗಿರುತ್ತವೆ ಅನ್ನುವುದನ್ನು ನಾವು ನೋಡಿದ್ದೇವೆ. ಆದರೆ, ಯಾವ ರಾಷ್ಟ್ರೀಯತೆಯನ್ನೂ ಯಾವುದೇ ಸಿದ್ಧಾಂತಗಳನ್ನೂ ಹುಡುಕದೆ ನೋಡಿದಾಗಲೂ ಇದೊಂದು ಕಲಾಕೃತಿಯಾಗಿ ಆಪ್ತವಾಗುತ್ತದೆ. ಒಂದು ಸಣ್ಣಕತೆಯಂತೆ ನಮ್ಮನ್ನು ತಾಕುತ್ತದೆ, ತೇವವಾಗಿಸುತ್ತದೆ.

ಅಪರ್ಣಾ ಸೆನ್‌ ಒಂದೊಂದು ಗಳಿಗೆಗಳನ್ನೂ ಅಮರವಾಗಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕೆಟ್ಟವರು ಇಲ್ಲವೇ ಇಲ್ಲ. ಮುಂದೊಗಲಿಲ್ಲದ ಒಬ್ಬ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಮುದಿ ದಂಪತಿಗಳನ್ನು ಮುಸ್ಲಿಂ ಅಂದುಬಿಡುತ್ತಾನೆ. ಆಮೇಲೆ ಪಶ್ಚಾತ್ತಾಪದಿಂದ ನರಳುತ್ತಾನೆ. ಹಿಂಸೆಯ ಝಳ ಸಹಿಸಲಾರದೆ ಪ್ರತಿಭಟಿಸುವ ಹಾಡುವ ಹುಡುಗಿ ತತ್ತರಿಸುತ್ತಾಳೆ. ಸ್ಪಾಂಡಿಲಿಟಿಸ್‌ ಆದವನೊಬ್ಬ ಮುದಿ ಮುಸ್ಲಿಂ ದಂಪತಿಗಳನ್ನು ಕತ್ತು ಕುಯಿದು ಸಾಯಿಸಿದರಂತೆ ಅನ್ನುವುದನ್ನು ಯಾವ ಭಾವನೆಗಳೂ ಇಲ್ಲದವನಂತೆ ಬಿತ್ತರಿಸುತ್ತಾನೆ.

ಆರಂಭದಲ್ಲಿ ಆತ ತುಟಿಯಾತ್ತಿ ಕುಡಿದ ಬಾಟಲಿನಿಂದ ನೀರು ಕುಡಿದಿದ್ದಕ್ಕೆ ಪಶ್ಚಾತ್ತಾಪ ಪಡುವ ಆಕೆ ನಂತರ ಆತ ಕಚ್ಚಿ ಕುಡಿದ ಬಾಟಲನ್ನೇ ಕೈಗೆತ್ತಿಕೊಂಡು ನೀರು ಕುಡಿಯುತ್ತಾಳೆ. ಅವನ ಹೆಗಲಿಗೆ ತಲೆಯಾನಿಸಿ ಕೂರುತ್ತಾಳೆ. ಅವನು ಸಹಪ್ರಯಾಣಿಕರ ಎದುರು ಅನಿವಾರ್ಯವಾಗಿ ಹೇಳಿದ ತಮ್ಮಿಬ್ಬರ ಕಾಲ್ಪನಿಕ ಹನಿಮೂನಿನ ಪ್ರಸಂಗ ನಿಜವಿರಬಹುದೇ ಎಂದು ನಂಬಲು ಶುರುಮಾಡುತ್ತಾಳೆ. ಆ ಭ್ರಮೆಯನ್ನು ಕಣ್ಣೀರು ತೊಳೆದುಬಿಡುತ್ತದೆ.

ಇಷ್ಟು ಸಾಕು.

-5-

ಕಲೆ ಜೀವನದ ಪ್ರತಿಬಿಂಬ ಅನ್ನುವುದು ಹಳೆಯ ಮಾತು. ಅದು ಹಾಗಲ್ಲ. ಕಲೆ ಎಲ್ಲೋ ಒಂದು ಕಡೆ ಜೀವನವನ್ನು ಮೀರುತ್ತದೆ. ಯಾಕೆಂದರೆ ನಮ್ಮ ಬದುಕಿಗಿರುವ ಕಟ್ಟುಪಾಡು, ಸಣ್ಣತನ, ತೋರಿಕೆ, ನೀತಿವಂತಿಕೆ ಕಲೆಗಿಲ್ಲ . ಕಲೆ ಜೀವನವನ್ನು ದೇವರ ಹಾಗೆ ನೋಡುತ್ತದೆ. ದೇವರಿಲ್ಲದ ಜಗತ್ತಿನಲ್ಲಿ ಪ್ರಕೃತಿಯ ಹಾಗೆ ನೋಡುತ್ತದೆ. ಆಕಾಶದ ಹಾಗೆ ಅದು ನಿಷ್ಪಕ್ಷಪಾತವಾಗಿ ಆವರಿಸುತ್ತದೆ.

ಕಷ್ಟಪಟ್ಟು ಅಪರ್ಣಾ ಸೆನ್‌ಳಿಂದ ಕಳಚಿಕೊಂಡು ನೋಡಿದರೆ ಕಾರ್ಕಳದ ಜ್ಯೋತಿ ಗುರುಪ್ರಸಾದ್‌ ಕವನ ಸಂಕಲನ ‘ಚುಕ್ಕಿ’ ಕಣ್ಣಮುಂದಿದೆ. ಚಂದ್ರನಾಥ್‌ ಅದಕ್ಕೊಂದು ಚೆಂದದ ಮುಖಪುಟ ಬರೆದಿದ್ದಾರೆ. ಕವನ ಸಂಕಲನಕ್ಕೆ ಕಡೆಂಗೋಡ್ಲು ಪ್ರಶಸ್ತಿಯೂ ಬಂದಿದೆ. ಒಂದು ಕವಿತೆಯ ನಾಲ್ಕು ಸಾಲುಗಳು ಹೀಗೆ;

ತಂಗಿಗೆ ಹೇಳುವ ಮಾತು
ಮೊದಲು ನನ್ನಲ್ಲಿ ತಂಗಿ
ಇಡಿಯಾದ ನಂತರ
ಅವಳ ಉಡಿ ತುಂಬುತ್ತದೆ

ನನ್ನಲ್ಲಿ ತಂಗದ ಮಾತು
ಬಾಯಿಮಾತು
ತೂರಿಹೋಗುವುದು ಗಾಳಿಗೆ
ತಂಗಿದ್ದು
ಅವಳಲ್ಲಿ ಮೊಳೆಯುವುದು
ಬೀಜವಾಗಿ ;
ಅ-ಕ್ಷರವಾಗಿ !

ಇಲ್ಲಿಯ ಜಾಣತನ ಮತ್ತು ಸಂವೇದನೆ ಎರಡೂ ಒಂದೇ ಆದಾಗ ಕವಿತೆ ಪೂರ್ಣವಾಗುತ್ತದೆ. ಒಂದು ಕವಿತೆಯಲ್ಲಿ ಇವೆರಡೂ ಒಂದಾಗುವುದು ಕವಿಯ ಕೈಯಲ್ಲಿದೆಯೋ ಓದುಗನ ಕೈಯಲ್ಲಿದೆಯೋ?

ಉತ್ತರ ಹುಡುಕಬೇಕು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)


ಪೂರಕ ಓದಿಗೆ-
ರಾಷ್ಟ್ರ ಪ್ರಶಸ್ತಿ ರೇಸಿನಲ್ಲಿ ಕನ್ನಡ ಯಾಕೆ ಗೆಲ್ಲಲಿಲ್ಲ ?


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X