• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದುವ ಸುಖ, ಬರೆಯುವ ಸುಖ ಮತ್ತು ಮಾತಾಡುವ ಚಟದ ನಡುವೆ...

By Staff
|

*ಜಾನಕಿ

ಹತ್ತಿಪ್ಪತ್ತು ವರುಷಗಳ ಹಿಂದೆ ಯಾರಿಗಾದರೂ ಏನನ್ನಾದರೂ ಹೇಳಬೇಕಾದಲ್ಲಿ ಪತ್ರ ಬರೆಯುತ್ತಿದ್ದೆವು. ಅದಾದ ಸ್ವಲ್ಪ ವರುಷದ ನಂತರ ಫೋನಿನಲ್ಲಿ ಹೇಳುವುದಕ್ಕೆ ಶುರುಮಾಡಿದೆವು. ಆಮೇಲೆ ಪೇಜರ್‌ ಬಂತು. ಮಾತಾಡುವುದಕ್ಕೆ ಇಷ್ಟವೇ ಇಲ್ಲದಿದ್ದರೆ, ಪುರುಸೊತ್ತಿಲ್ಲದಿದ್ದರೆ, ಅಗತ್ಯವಿಲ್ಲದಿದ್ದರೆ ಎಸ್ಸೆಮ್ಮೆಸ್ಸು ಕಳಿಸಬಹುದು. ಸುದೀರ್ಘವಾದ ಸಂದೇಶವಾದರೆ ಇ-ಮೇಲ್‌ ತಲುಪಿಸಬಹುದು.

ಇವೆಲ್ಲದರ ನಡುವೆ ಕನ್ನಡ ಉಳಿಯಬೇಕು ಅಂತಲೋ ಎಲ್ಲರೂ ಕನ್ನಡದಲ್ಲೇ ಮಾತಾಡಬೇಕು ಅಂತಲೋ ನಿರೀಕ್ಷಿಸುವ ನಮ್ಮ ನಿಮ್ಮಂಥವರಿಗೆ ಎದುರಾಗುವ ಸವಾಲುಗಳು ಒಂದೆರಡಲ್ಲ . ಯಾರಿಗಾದರೂ ಏನನ್ನಾದರೂ ಚೆಂದವಾಗಿ, ನಮಗನ್ನಿಸಿದ ಹಾಗೆ, ಕೊಂಚವೂ ಮುಕ್ಕಾಗದಂತೆ ಹೇಳಬೇಕು ಅನ್ನುವ ಪ್ರೇರಣೆಯೂ ಹೆಚ್ಚಿನವರಿಗೆ ಇದ್ದಂತಿಲ್ಲ . ಹೇಗೆ ತಿಳಿಸುತ್ತೇವೆ ಅನ್ನುವುದು ನಗಣ್ಯವಾಗಿ ಆದಷ್ಟೂ ಜರೂರು ಮತ್ತು ಹ್ರಸ್ವವಾಗಿ ತಿಳಿಸುವುದಷ್ಟೇ ಮುಖ್ಯವಾದ ಕಾಲ ಇದು. ಆದ್ದರಿಂದ ;

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ

ನಿಮ್ಮ ಪ್ರೇಮವ ನೀವೇ ಒರೆಯಲಿಟ್ಟು ..

ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ

ಇರುಳಿನಲಿ ಕಾಡುವುದು ನಿಮ್ಮ ಕನಸು..

Fresh Air from Kannada Literary fieldsಎನ್ನುವುದನ್ನು ಇಂಗ್ಲಿಷ್‌ ಎಂಬ ಸರಳ ಭಾಷೆ I miss you darling ಎಂಬಷ್ಟಕ್ಕೇ ಮುಗಿಸುತ್ತದೆ. ಅದಕ್ಕಿಂತ ದೊಡ್ಡ ಅನಾಹುತ ಎಂದರೆ ಪ್ರತಿಯಾಬ್ಬನಿಗೂ ವಿಶಿಷ್ಟವಾದ ಶೈಲಿಯಾಂದನ್ನು ಇದೇ ಇಂಗ್ಲಿಷ್‌ ನಮ್ಮಿಂದ ಕಿತ್ತುಕೊಂಡದ್ದು. ಎಷ್ಟಾದರೂ ಇಂಗ್ಲಿಷ್‌ ನಮ್ಮ ಒಳಗಿನಿಂದ ಹುಟ್ಟಿದ್ದಲ್ಲ . ಹೀಗಾಗಿ ಪ್ರತಿಯಾಬ್ಬರೂ ಕವಿತದ್ದು ಅಷ್ಟನ್ನೇ: I miss you darling ಅದೇ ಕನ್ನಡದಲ್ಲಿ ಪತ್ರ ಬರೆಯುತ್ತಿದ್ದ ದಿನಗಳಲ್ಲಿ ಒಬ್ಬೊಬ್ಬರ ಕಲ್ಪನೆ ಒಂದೊಂದು ರೂಪ ಪಡೆಯುತ್ತಿತ್ತು . ಅವರಿಗೆ ತೋಚಿದ್ದನ್ನು ಅವರವರು ಬರೆಯುತ್ತಿದ್ದರು. ಗೆಳತಿಗೆ ಧನ್ಯತೆ ಹೇಳುವುದನ್ನೂ ಇನ್ಯಾರೋ ಕಲಿಸಿಕೊಡಬೇಕಾಗಿರಲಿಲ್ಲ . ಯಾರೋ ಆಡಿದ ಮಾತುಗಳನ್ನು ನಾವು ಆಡಬೇಕಾಗಿರಲಿಲ್ಲ .

ಹೀಗೆ ಅತ್ಯಂತ ಸುಮಧುರ ಭಾವನೆಗಳನ್ನೂ ಇಂಗ್ಲಿಷ್‌ ತನ್ನ ಅಡಿಯಾಳಾಗಿಸಿಕೊಂಡಿದೆ. ಹೇಗಲಿ, ನಮಗನ್ನಿಸಿದ್ದನ್ನು ರೂಪಕವಾಗಿ ಹೇಳುವಷ್ಟು ಇಂಗ್ಲಿಷನ್ನಾದರೂ ನಾವು ಕಲಿತಿದ್ದೇವಾ ? ಅದೂ ಇಲ್ಲ . ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ಇಂಗ್ಲಿಷ್‌ ಮಾತಾಡುತ್ತಾರಾ ? ಖಂಡಿತಾ ಇಲ್ಲ . ಪ್ರತಿಯಾಬ್ಬರೂ ಬಳಸುವುದು ಅದೇ ಪದಗಳನ್ನು . ಗರಿಗರಿ ನೋಟುಗಳ ಹಾಗೆ ಬೆಚ್ಚಗಿದ್ದ ಇಂಗ್ಲಿಷ್‌ ಪದಗಳೂ ಕೇಳುತ್ತಾ ಕೇಳುತ್ತಾ ಸವಕಲಾಗಿವೆ. ಆ ಸವಕಲು ಪದಗಳನ್ನೇ ನಾವು ಮುಚ್ಚಟೆಯಿಂದ ಜೋಪಾನ ಮಾಡುತ್ತೇವೆ.

Thanks, Sorry ಮುಂತಾದ ಪದಗಳ ಬಗ್ಗೆಯೇ ಆರಂಭದ ದಿನಗಳಲ್ಲಿ ರೇಜಿಗೆಯಿತ್ತು . ಥ್ಯಾಂಕ್ಸ್‌ ಹೇಳುವುದು ನಮ್ಮ ಶೈಲಿಯಲ್ಲ . ಜನಪದರ ಕೃತಜ್ಞತೆ ಅಷ್ಟು ಸುಲಭವಾಗಿ ವ್ಯಕ್ತವಾಗುವುದಿಲ್ಲ . ಆದರೆ ಯಾವಾಗ ಥ್ಯಾಂಕ್ಸು ಎಂಬ ಶಿಷ್ಟಾಚಾರ ಬಂತೋ ಅಲ್ಲಿಗೆ ನಮ್ಮ ಭಾಷೆ ಅರ್ಧ ಸತ್ತಿತು. ಥ್ಯಾಂಕ್ಸ್‌ ಹೇಳುವುದನ್ನು ಸಭ್ಯತೆ ಎಂದರು. ಹಾಗೆ ಹೇಳುವ ಮೂಲಕ ಒಂದು ಸಂಬಂಧವನ್ನೇ ಕೊಂದರು. ಯಾರು ಏನೇ ಉಪಕಾರ ಮಾಡಿರಲಿ ಅದರ ಋಣವನ್ನು ಐದಕ್ಷರದ ಒಂದು ಪದದ ಮೂಲಕ ತೀರಿಸಿಬಿಡಬಹುದು. ಎಂಥ ತಪ್ಪನ್ನೂ ಇನ್ನೊಂದು ಐದಕ್ಷರದ ಪದದ ಮೂಲಕ ಅಳಿಸಿಹಾಕಬಹುದು.

‘ಮಾಹಿತಿ, ತಂತ್ರಜ್ಞಾನ ಮತ್ತು ದೂರಸಂಪರ್ಕ’- ಈ ಮೂರು ಸಂಗತಿಗಳು ನಮ್ಮನ್ನು ಹತ್ತಿರವಾಗಿಸುವ ಬದಲು ದೂರವಾಗಿಸಿವೆ. ಧಾರವಾಡದಿಂದ ಒಂಚೂರು ಆಚೆಗಿರುವ ಗುಳೇದಗುಡ್ಡದಲ್ಲಿರುವ ತಂಗಿ, ಬೆಂಗಳೂರಲ್ಲಿರುವ ಅಕ್ಕನಿಗೊಂದು ಖಾಸಗಿ ಪತ್ರ ಬರೆದು ತನ್ನ ಖುಷಿಯನ್ನೋ ತವಕವನ್ನೋ ಹಂಚಿಕೊಳ್ಳಬಹುದಿತ್ತು . ಆದರೆ ಈಗ ಆ ಖಾಸಗಿತನವೇ ಇಲ್ಲ . ಆಕೆಯ ಮನೆಯಲ್ಲಿ ಫೋನಿದೆ ; ಅಕ್ಕನಿಗೆ ಫೋನ್‌ ಮಾಡಿ ಮಾತಾಡುವ ತಂತ್ರಜ್ಞಾನ ಇದೆ. ಆದರೆ ಮನೆಯ ಎಲ್ಲರ ಮುಂದೆ ಆಕೆ ಮಾತಾಡಬೇಕು. ಬೆರಳ ತುದಿಯಿಂದ ಹೊಮ್ಮುವ ಕಲ್ಪನೆ, ನಾಲಗೆ ತುದಿಯಿಂದಲೂ ಚಿಮ್ಮಬಹುದು ಎಂಬ ನಂಬಿಕೆ ಇದ್ದರೆ ಸರಿ. ಇಲ್ಲದೇ ಹೋದರೆ ಆಕೆ ಹೇಳಬೇಕಾದದ್ದು ಗಂಟಲಲ್ಲೇ ಉಳಿಯುತ್ತದೆ. ಅಲ್ಲದೆ ಒಂದು ಪತ್ರವನ್ನು ಮತ್ತೆ ಮತ್ತೆ ಓದಿ ಸುಖಿಸಬಹುದಾದ ಖುಷಿ, ಅದನ್ನು ಜೋಪಾನವಾಗಿಟ್ಟು ಇನ್ಯಾರಿಗೋ ತೋರಿಸುವ ಸಂಭ್ರಮ ಎಲ್ಲವನ್ನೂ ಫೋನು ಕಸಿದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ‘ಬರಹ’ವಾಗಬೇಕಾದದ್ದು ಮಾತಾಗುತ್ತಿದೆ. ಮಾತಲ್ಲಿ ಸೋರಿಹೋಗುತ್ತಿದೆ.

ಅದಷ್ಟೇ ಅಲ್ಲ ; ನಮ್ಮನ್ನು ಒಂದು ಶಿಸ್ತಿಗೆ ಒಡ್ಡುವ ಸಂಗತಿಗಳಲ್ಲಿ ದುಂಡನೆ ಪತ್ರ ಬರೆಯುವುದು, ಪತ್ರ ಬರೆಯುವ ಮುಂಚೆ ಯೋಚಿಸುವುದು, ಹೇಗೆ ಹೇಳಬೇಕು ಅಂತ ತಲೆಕೆಡಿಸಿಕೊಳ್ಳುವುದು, ನಂತರ ಸ್ಟಾಂಪು ಅಂಟಿಸಿ ಕವರಿಗೆ ತುಂಬಿಸಿ ಪೋಸ್ಟು ಡಬ್ಬಿಗೆ ಹಾಕಿ ಅದು ಯಾವಾಗ ತಲುಪುತ್ತದೆ ಅಂತ ಲೆಕ್ಕವಿಟ್ಟು , ಅವರು ಯಾವಾಗ ಉತ್ತರಿಸಿದರೆ ಅದು ನಮ್ಮನ್ನು ಯಾವಾಗ ತಲುಪುತ್ತದೆ ಎಂದು ಲೆಕ್ಕ ಹಾಕಿ ಆ ದಿನ ಬರದಿದ್ದರೆ ನಾಳೆ ಖಂಡಿತ ಬರುತ್ತೆ ಅಂತ ಸಮಾಧಾನಪಟ್ಟುಕೊಂಡು...

ಇವೆಲ್ಲವನ್ನೂ ಒಂದು ದೂರವಾಣಿ ಕಿತ್ತುಕೊಂಡಿದೆ ಎಂದರೆ ಅದು ಅಭಿವೃದ್ಧಿಗೆ ವಿರುದ್ಧವಾದ ಯೋಚನೆಯಾಗುತ್ತದೆ ಎನ್ನುವವರಿದ್ದಾರೆ. ಆದರೆ, ಸಾಹಿತ್ಯದ ಕುರಿತಾಗಿರುವ ಮೂಲ ಆಸಕ್ತಿ ಕಮರುವಂತೆ ಮಾಡಿದ್ದು ಕೂಡ ಇದೇ ದೂರವಾಣಿ. ಓದುವ ಮತ್ತು ಬರೆಯುವ ಹವ್ಯಾಸವನ್ನೇ ಅದು ಅಳಿಸಿಹಾಕಿದೆ. ತೀರ ಪುಟ್ಟ ಹಳ್ಳಿಗಳ ಮಕ್ಕಳೂ ಈಗ ಪತ್ರ ಬರೆಯುವುದನ್ನು ನಿಲ್ಲಿಸಿದ್ದಾವೆ. ಕೆಲಸದಲ್ಲಿರುವ ಮಗ ತಂದೆ ತಾಯಂದಿರಿಗೆ ಪತ್ರ ಬರೆಯೋದಿಲ್ಲ . ಫೋನ್‌ ಮಾಡುತ್ತಾನೆ. ಫೋನ್‌ ಮಾಡಿದಾಗ ಮನೆಯಲ್ಲಿರುವ ಯಾರಾದರೊಬ್ಬರು ಸಿಕ್ಕರೂ ಸಾಕು, ವರ್ತಮಾನ ಗೊತ್ತಾಗುತ್ತದೆ. ಅಲ್ಲಿಗೆ ಸಂಪರ್ಕ ಮುಗಿಯಿತು.

2.

ಆಧುನಿಕತೆ, ಜಾಗತೀಕರಣ ಮತ್ತು ತಂತ್ರಜ್ಞಾನದ ಪ್ರಭಾವಗಳ ಬಗ್ಗೆ ಹೇಳುವಾಗ ಸಾಮಾನ್ಯವಾಗಿ ಅದು ನಮ್ಮ ಸಂಸ್ಕೃತಿಯ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಚರ್ಚಿಸುತ್ತೇವೆ. ಜಾಗತೀಕರಣ ಹೇಗೆ ಒಂದು ಜಾತಿಯ ಪರವಾಗಿದೆ, ಬುದ್ಧಿವಂತರನ್ನು ಬೆಂಬಲಿಸುತ್ತದೆ ಮತ್ತು ಅಸಮಾನತೆಯನ್ನು ತರುತ್ತದೆ ಅನ್ನುವ ಬಗ್ಗೆ ನಮ್ಮಲ್ಲೇ ಗೊಂದಲಗಳಿವೆ. ಜಾಗತೀಕರಣದ ಒಳಿತು ಕೆಡುಕುಗಳ ಬಗ್ಗೆ ಎರಡೂ ಬಣದವರೂ ಮಾತಾಡುತ್ತಾರೆ. ಅನಂತಮೂರ್ತಿಯವರು ಹೇಳುವ ಆಧುನಿಕತೆಯ ಹಸಿವು ಮತ್ತು ಇನ್ನಿತರರು ಹೇಳುವ ಆಧುನಿಕತೆಯ ಅಜೀರ್ಣ ಸ್ಥಿತಿ ಎರಡನ್ನೂ ಗ್ರಹಿಸಿಕೊಂಡು ಹೊರಡುವ ತೀರ್ಮಾನಗಳ ಬಗ್ಗೆ ಕುತೂಹಲ ಇಟ್ಟುಕೊಳ್ಳೋಣ.

ಅದಕ್ಕಿಂತ ಮುಖ್ಯವಾದದ್ದು ಮತ್ತೊಂದಿದೆ. ಇವತ್ತು ಓದುಗರು ಕಡಿಮೆಯಾಗುತ್ತಿದ್ದಾರೆ ಅನ್ನುವ ಮಾತು ಕ್ಲೀಷೆ ಎಂಬ ಪದದಷ್ಟೇ clicheಯಾಗಿದೆ. ಆದರೆ ನಿಜಕ್ಕೂ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ ಅನ್ನುವುದನ್ನು ಪ್ರಕಟವಾಗುವ ಪುಸ್ತಕಗಳ ಸಂಖ್ಯೆ ತೋರಿಸುತ್ತದೆ. ಒಂದು ಜಿಲ್ಲಾ ಗ್ರಂಥಾಲಯಕ್ಕೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ಹೋಗುತ್ತಾರೆ. ಅಲ್ಲಿರುವ ಪುಸ್ತಕಗಳನ್ನು ಓದುತ್ತಾರೆ. ಇಂಗ್ಲಿಷ್‌ ಪುಸ್ತಕಗಳೂ ಸಾಕಷ್ಟು ಸಂಖ್ಯೆಯಲ್ಲಿ ಕೈ ಬದಲಾಯಿಸಿಕೊಳ್ಳುತ್ತವೆ. ಅದೆಲ್ಲವೂ ನಿಜವೇ. ಆದರೆ ಓದುವ ಪುಸ್ತಕಗಳ ಆಯ್ಕೆಯಲ್ಲೊಂದು ಬದಲಾವಣೆಯಾಗಿದೆ. ಕಾದಂಬರಿಗಳನ್ನು ಓದುತ್ತಿದ್ದವರು ಹೆಚ್ಚಾಗಿ ವಿಚಾರ ಸಾಹಿತ್ಯವನ್ನು ಓದತೊಡಗಿದ್ದಾರೆ. ಸಣ್ಣಕತೆಗಳನ್ನೋ ಕಾವ್ಯವನ್ನೋ ಓದುತ್ತಿದ್ದವರು ‘how to improve your personality’ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಹೇಗೆ, ಪ್ರೀತಿಸುವುದು ಹೇಗೆ, ಮಕ್ಕಳನ್ನು ಬೆಳೆಸುವುದು ಹೇಗೆ- ಎಂಬಿತ್ಯಾದಿ ಪುಸ್ತಕಗಳತ್ತ ಹೊರಳಿದ್ದಾರೆ. ಒಂದು ಅತ್ಯುತ್ತಮ ಪ್ರಬಂಧಕ್ಕಿಂತ ಒಂದು ವರದಿ ಕುತೂಹಲಕರವಾಗಿ ಕಾಣಿಸುತ್ತಿದೆ.

ಆಗಿದ್ದು ಇಷ್ಟೆ ; ಸಾಹಿತ್ಯಕ್ಕಿಂತ ವರ್ತಮಾನ ಮುಖ್ಯ ಅನ್ನುವ ‘ಮಟಿರಿಯಲಿಸ್ಟಿಕ್‌’ ಮನೋಭಾವ ನಮ್ಮದಾಗುತ್ತಿದೆ. ಹಾಗಾದಾಗ ಪುರಾಣಕ್ಕಿಂತ ವರ್ತಮಾನವಷ್ಟೇ ಮುಖ್ಯವಾಗುತ್ತದೆ. ಕಲೆಗಿಂತ ವಿಜ್ಞಾನ ದೊಡ್ಡದಾಗುತ್ತದೆ. ವಿಜ್ಞಾನ ಒಳ್ಳೆಯ ಟೇಪ್‌ ರೆಕಾರ್ಡರ್‌ ನೀಡಬಲ್ಲದು; ಒಳ್ಳೆಯ ಸೀಡಿ ಪ್ಲೇಯರ್‌ ಕೊಡಬಲ್ಲದು. ಆದರೆ ಅದರಲ್ಲಿ ನಾವು ಕೇಳುವ ಹಾಡನ್ನು ಕಲೆಯಷ್ಟೇ ಕೊಡಲು ಸಾಧ್ಯ. ಅದನ್ನು ಇಂಗ್ಲಿಷ್‌ ವ್ಯಾಮೋಹ ಮರೆಸುತ್ತಿದೆ. ತಂತ್ರಜ್ಞಾನದಿಂದ ತುಂಬ ಸುಲಭವಾಗಿ, ಅದ್ಭುತವಾದ ಪುಸ್ತಕ ಮುದ್ರಣ ಸಾಧ್ಯವಾಗಿದೆ. ಆದರೆ ಅತ್ಯುತ್ತಮವಾದ ಪುಸ್ತಕವನ್ನು ಸೂಕ್ಷ್ಮಜ್ಞನಾದ ಲೇಖಕನೇ ಬರೆಯಬೇಕಾಗುತ್ತದೆ.

ಅಷ್ಟಕ್ಕೂ ಕುವೆಂಪು ಬರೆದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಓದಿ ಅದರಲ್ಲಿ ಬರುವ ಹೂವಯ್ಯನ ಪಾತ್ರವನ್ನು ಗ್ರಹಿಸಿಕೊಂಡು ಪ್ರೀತಿಸಿ ಅವನಿಂದ ಒಳ್ಳೆಯತನವನ್ನು ಕಲಿಯುತ್ತಿದ್ದ ದಿನಗಳು ಹೋಗಿವೆ. ಒಬ್ಬ ವ್ಯಕ್ತಿ ತನ್ನ ಸ್ವಾಭಿಮಾನವನ್ನು , ಜೀವನಪ್ರೀತಿಯನ್ನು , ಉಲ್ಲಾಸವನ್ನು ಮತ್ತು ಲವಲವಿಕೆಯನ್ನು ಸಾಮಾನ್ಯವಾಗಿ ಅವನು ಓದಿದ ಸಾಹಿತ್ಯ ಕೃತಿಗಳಿಂದ ಮತ್ತು ಅವನು ಒಡನಾಡಿದ ಓರಗೆಯವರಿಂದ ಕಲಿಯುತ್ತಾನೆ. ಆದರೆ ಈಗ ಎಲ್ಲರೂ ಸ್ಟೀರಿಯೋಟೈಪ್‌ ಆಗಿದ್ದರಿಂದ ವ್ಯಕ್ತಿವ್ಯಕ್ತಿಗೆ ವಿಶಿಷ್ಟವಾದ ಅಂಶಗಳೆಲ್ಲ ಮಾಯವಾಗಿವೆ. ಬೇಂದ್ರೆ, ಕುವೆಂಪು, ಮಾಸ್ತಿ , ಲಂಕೇಶ್‌ ಹೀಗೆ ಒಬ್ಬೊಬ್ಬರನ್ನು ಮೆಚ್ಚುತ್ತಿದ್ದ , ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್‌, ಕಾಳಿಂಗರಾವ್‌, ಅಶ್ವತ್ಥ್‌- ಹೀಗೆ ಒಬ್ಬೊಬ್ಬರ ಬಗ್ಗೆ ಒಬ್ಬೊಬ್ಬರು ವಾದಿಸಿ ಜಗಳವಾಡುತ್ತಿದ್ದ ದಿನಗಳು ಮತ್ತೆ ಬರಲಾರವು. ಈಗ ಎಲ್ಲರಿಗೂ ಒಬ್ಬನೇ ಇಷ್ಟ ; ಹೃತಿಕ್‌ ರೋಷನ್‌ ಮತ್ತು ಎ.ಆರ್‌.ರೆಹಮಾನ್‌. ಓದಲು ಕೂತರೆ ಹ್ಯಾರಿ ಪಾಟರ್‌. ಈ ಹ್ಯಾರಿ ಪಾಟರ್‌ಗಿಂತ ಒಳ್ಳೆಯ ಕತೆಗಳನ್ನು ನಾವು ಚಂದಮಾಮದಲ್ಲೇ ಓದಿದ್ದೆವಲ್ಲ ! ಕನಿಷ್ಠ , ಹತ್ತು ವರ್ಷದ ಹಿಂದೆ ರಾಜ್‌ಕುಮಾರ್‌- ವಿಷ್ಣುವರ್ಧನ್‌ ಅಂತಾದರೂ ಜಗಳವಾಡಬಹುದಿತ್ತು . ಇವತ್ತು ಅಂಥ ಭಿನ್ನಾಭಿಪ್ರಾಯಗಳೇ ಇಲ್ಲ .

ಇಂಗ್ಲಿಷ್‌ ಶಿಕ್ಷಣ ಎಲ್ಲರಿಗೂ ಯೂನಿಫಾರ್ಮು ಮಾತ್ರ ತೊಡಿಸಲಿಲ್ಲ . ಯೋಚನೆಯಲ್ಲಿ ಮಾತಲ್ಲಿ ಚಿಂತನೆಯಲ್ಲಿ ಪ್ರೀತಿಯಲ್ಲಿ ಯೂನಿಫಾರ್ಮಿಟಿಯನ್ನು ಏಕರೂಪತೆಯನ್ನು ಕಲಿಸಿಕೊಟ್ಟಿತು. ಏಕರೂಪತೆ ಒಂದು ದೇಶದ, ಒಂದು ಜನಾಂಗದ ವೈವಿಧ್ಯವನ್ನು ನಾಶ ಮಾಡುತ್ತದೆ. ಪ್ರತಿಭೆಯ ವಿವಿಧ ಸಾಧ್ಯತೆಗಳನ್ನು ಹತ್ತಿಕ್ಕುತ್ತದೆ. ಹೀಗಾಗಿ ಇವತ್ತು ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬ ಕನ್ನಡ ಸಾಹಿತಿ, ಒಬ್ಬ ಕವಿ, ಒಬ್ಬ ಸಂಗೀತಗಾರ, ಒಬ್ಬ ಒಳ್ಳೆಯ ಕಲಾವಿದ ಸೃಷ್ಟಿಯಾಗುತ್ತಾನೆ ಅನ್ನುವ ನಂಬಿಕೆ ಇಲ್ಲ . ಅಲ್ಲಿ ಸೃಷ್ಟಿಯಾಗುವುದು ಹತಾಶೆ ತುಂಬಿದ, ಅವಕಾಶಕ್ಕಾಗಿ ಕಾಯುವ, ತಾನು ದುಡಿಯುವ ಸಂಸ್ಥೆಯ ಕುರಿತ ನಿಷ್ಠೆಗಿಂತ ಸಂಬಳ ಮುಖ್ಯ ಎನ್ನುವ ಒಂದು ಜನಾಂಗ.

ಅದಕ್ಕೆ ಕಾರಣ ಎಲ್ಲರೂ ಮೂಲಭೂತವಾದ ಒಂದು ಗುಣ, ಸೋಮಾರಿತನದ ಸುಖವನ್ನು ಕಳೆದುಕೊಂಡಿರುವುದು. ಬೇಕಿದ್ದರೆ ನೋಡಿ. ಇಂಗ್ಲಿಷ್‌ ಮಾಧ್ಯಮದ ಹುಡುಗರು ಕಟ್ಟೆ ಮೇಲೆ ಕೂತು ಸಿಗರೇಟು ಹಂಚಿಕೊಳ್ಳುತ್ತಾ ಹರಟೆ ಕೊಚ್ಚುವುದಿಲ್ಲ . ರಾಜ್‌ಕುಮಾರ್‌ ಬಗ್ಗೆ ಮಾತಾಡುವುದಿಲ್ಲ . ನಾಟಕ ನೋಡುವುದಿಲ್ಲ . ಸ್ವತಃ ಹಾಡು ಗುನುಗಿಕೊಳ್ಳುವುದೂ ಇಲ್ಲ .

ಯಾಕೆಂದರೆ ಅವರು ಕೇಳಿದ ಓದಿದ ಹಾಡು ಅವರದ್ದಾಗಲಿಲ್ಲ . ಇಂಗ್ಲಿಷ್‌ನ ಷೇಕ್ಸ್‌ಪಿಯರೂ ಅವರಿಗೆ ಸಿಗಲಿಲ್ಲ , ಕನ್ನಡದ ಕಾರಂತರೂ ಸಿಗಲಿಲ್ಲ .

ಈ ಅಬ್ಬೇಪಾರಿಗಳನ್ನು ಮುಂದಿಟ್ಟುಕೊಂಡು ಏನು ಬರೆಯೋಣ ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more