• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಷರ ಪ್ರೀತಿಯ ಕುರಿತು ಬಿಡಿ ಬಿಡಿ ಮಾತು

By Staff
|
Google Oneindia Kannada News

*ಜಾನಕಿ

Let new writers write ನಿಜಕ್ಕೂ ಓದುವುದಕ್ಕೆ ತುಂಬ ಪುಸ್ತಕಗಳಿವೆ. ಕಣ್ಣಮುಂದಿರುವ ಪುಸ್ತಕಗಳ ಸಂಖ್ಯೆ ಹೆಚ್ಚಿದಷ್ಟೂ ಒಂದು ಬಗೆಯ ದುಗುಡ ಹೆಚ್ಚಾಗುತ್ತಾ ಹೋಗುತ್ತದೆ. ಅದು ಪುಸ್ತಕದ ಗುಣಮಟ್ಟಕ್ಕಾಗಲೀ ಬೆಲೆಗಾಗಲೀ ಸಂಬಂಧಿಸಿದ್ದಲ್ಲ. ಅದು ಎಂಥ ಅತ್ಯುತ್ತಮ ಪುಸ್ತಕವಾದರೂ ಇನ್ನಾರು ತಿಂಗಳಲ್ಲಿ ಕಣ್ಮರೆಯಾಗಿರುತ್ತದೆ. ಯಾವುದೋ ಗ್ರಂಥಾಲಯದಲ್ಲಿ ಅಡಗಿ ಕುಳಿತಿರುತ್ತದೆ. ಅದನ್ನು ಯಾರೂ ಮುಟ್ಟುವುದಕ್ಕೂ ಹೋಗುವುದಿಲ್ಲ. ಪುಸ್ತಕ ಒಂದು ಅರ್ಥದಲ್ಲಿ ಆಧುನಿಕರಿಗೆ ಅಸ್ಪೃಶ್ಯ.

ವ್ಯಾಸರಾಯ ಬಲ್ಲಾಳರು ಮುಂಬಯಿ ಅನುಭವಗಳನ್ನೆಲ್ಲ ಸೇರಿಸಿ ಮುಂಬಯಿ ದಿನಾಂಕ ಬರೆದಿದ್ದಾರೆ. ಶಾಂತಾದೇವಿ ಕಣವಿ ಬರೆದ ಎಲ್ಲ ಕತೆಗಳೂ ಒಟ್ಟಿಗೇ ಬಂದಿವೆ. ಇವತ್ತಿಗ ರೋಮಾಂಚಗೊಳಿಸುವ ತಿರುಮಲೆ ತಾತಾಚಾರ್ಯ ಶರ್ಮರ ಆತ್ಮಕತೆ ಅವರು ತೀರಿಕೊಂಡು ಮೂವತ್ತು ವರುಷದ ನಂತರ ಹೊರಬರುತ್ತಿದೆ. ಬಿ.ವಿ. ವೈಕುಂಠರಾಜು ತಮ್ಮ ಸಾಹಿತ್ಯಿಕ ಲೇಖನಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಹೊರತಂದಿದ್ದಾರೆ.

ಇವುಗಳಲ್ಲಿ ಬಹಳಷ್ಟು ಹೊಸ ಬರಹಗಳೇನಲ್ಲ. ಅಲ್ಲಲ್ಲಿ ಪ್ರಕಟವಾದ ಕತೆ, ಲೇಖನಗಳ ಸಂಗ್ರಹ. ಇವುಗಳನ್ನು ಕೊಂಡುಕೊಳ್ಳುವುದಕ್ಕೆ ವಿಶೇಷವಾದ ಪ್ರೇರಣೆ ಕೂಡ ಇರುವುದಿಲ್ಲ; ಓದುವುದಕ್ಕೂ. ಹಾಗಿದ್ದರೂ ಪುಸ್ತಕಗಳು ಪ್ರಕಟವಾಗುತ್ತಲೇ ಇವೆ. ಕತೆಗಾರರು ಒಂದು ಕೃತಿ ಹೊರತಂದು ಖುಷಿಗೊಳ್ಳುತ್ತಲೇ ಇದ್ದಾರೆ.

**

ಕಳೆದ ವಾರ ಗುರುಪ್ರಸಾದ ಕಾಗಿನೆಲೆ ಬರೆದ ಕಥಾಸಂಕಲನ ಬಿಡುಗಡೆಯಾಯಿತು. ಅದರಲ್ಲಿದ್ದ ಅಷ್ಟೂ ಕತೆಗಳು ಅದಕ್ಕೂ ಮುಂಚೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಆದರೂ ಅಲ್ಲಿಗೆ ಬಂದ ಯಾರೊಬ್ಬರೂ ಒಂದು ಕತೆಯನ್ನೂ ಓದಿರಲಿಲ್ಲ. ಬಂದ ತಪ್ಪಿಗೆ, ಓದದ ತಪ್ಪೊಪ್ಪಿಗೆಗೆ ಅನೇಕರು ಒಂದೊಂದು ಪ್ರತಿಯನ್ನು ಕೊಂಡುಕೊಂಡರು. ಮತ್ತಾದರೂ ಅದನ್ನು ಓದುತ್ತಾರೆ ಅನ್ನುವುದು ಖಾತ್ರಿಯಿಲ್ಲ.

ಆದ್ದರಿಂದ ಒಬ್ಬ ಲೇಖಕ ಸದ್ಯದ ಪರಿಸ್ಥಿತಿಯಲ್ಲಿ ನೆಚ್ಚಿಕೊಳ್ಳಬೇಕಾದದ್ದು ಒಬ್ಬ ಗೆಳೆಯನನ್ನು ಮಾತ್ರ. ಆ ಗೆಳೆಯ ನಿಜವಾದ ಪ್ರೀತಿಯಿಂದಲೋ ದಾಕ್ಪಿಣ್ಯಕ್ಕೋ ಕತೆಗಳನ್ನು ಓದುತ್ತಾನೆ. ಪ್ರತಿಕ್ರಿಯಿಸುತ್ತಾನೆ. ಅದರಿಂದ ಖುಷಿಪಡುತ್ತಾ, ಮತ್ತೆ ಬರೆಯುವುದಕ್ಕೆ ಬೇಕಾದ ಸ್ಫೂತಿ ಮತ್ತು ಪ್ರೇರಣೆಗಳನ್ನು ಪಡೆದುಕೊಳ್ಳುತ್ತಾ ಲೇಖಕ ಬದುಕಬೇಕಾಗಿದೆ. ಯಾಕೆಂದರೆ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳನ್ನು ಓದುವವರ ಪೈಕಿ ಹೆಚ್ಚಿನವರು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಮಧ್ಯಮವರ್ಗವನ್ನು ಎಂಥ ಪ್ರತಿಭೆಯೂ ಬೆಚ್ಚಿಬೀಳಿಸಲಾರದು. ಹಾಗೇ ಓದುವುದನ್ನು ಒಂದು ರೋಮಾಂಚಕ ಹವ್ಯಾಸವನ್ನಾಗಿಸುವ ಶಕ್ತಿ ನಮ್ಮ ಅನೇಕ ಬರಹಗಾರರಿಗೆ ಇಲ್ಲ. ಅವರು ರೋಚಕತೆಯನ್ನು ಒಂದು ದೌರ್ಬಲ್ಯವೆಂದೂ ಅಪಾರ ಜನಪ್ರಿಯತೆಯನ್ನು ಅವಲಕ್ಷಣವೆಂದೂ ಎಲ್ಲರಿಗೂ ಇಷ್ಟವಾಗುವುದನ್ನು ಅಪಾಯವೆಂದೂ ಭಾವಿಸುತ್ತಾರೆ. ಹೀಗಾಗಿ ಸರಳವಾಗಿ ಹೇಳಿದರೆ, ನೇರವಾಗಿ ಹೇಳಿದರೆ ತಮ್ಮ ಘನತೆಗೆ ಕುಂದುಂಟಾಗುತ್ತದೆ ಎಂದು ತಿಳಿಯುತ್ತಾರೆ.

**

ಕತೆಗಳಿಗೆ ಹೊಸ ವಸ್ತುಗಳೇ ಸಿಗುತ್ತಿಲ್ಲವೇನೋ ಎಂಬಷ್ಟರ ಮಟ್ಟಿಗೆ ನಮ್ಮ ಲೇಖಕರು ಬರಡಾಗಿದ್ದಾರೆ. ಜಾಗತೀಕರಣದ ಬಗ್ಗೆ ಪ್ರಕಟವಾಗುವ ಲೇಖನಗಳಷ್ಟು ಕತೆಗಳು ಬರುತ್ತಿಲ್ಲ. ಕಂಪ್ಯೂಟರ್‌ ಕಲಿತವರು ಕೆಲಸ ಕಳಕೊಂಡ ಸಂಕಟ ಕೂಡ ಕತೆಯಾಗಿ ಹೊರಬರಲಿಲ್ಲ. ಹಿಂದೆಲ್ಲ ವ್ಯಕ್ತಿ ತನ್ನ ಸಣ್ಣಸಣ್ಣ ತಲ್ಲಣಗಳನ್ನು ಕೂಡ ದಾಖಲಿಸುತ್ತಿದ್ದ. ತನ್ನ ಅವಮಾನಗಳನ್ನು ಕತೆಯಾಗಿಸುತ್ತಿದ್ದ. ತನ್ನ ಅನುಮಾನಗಳ ಬಗ್ಗೆ ಬರೆಯುತ್ತಿದ್ದ. ತನ್ನಲ್ಲಿ ಮೂಡಿದ ವಿಷಾದ ಕೂಡ ಒಂದು ಸುಂದರ ಕತೆಯಾಗಿ ರೂಪುಗೊಳ್ಳುತ್ತಿತ್ತು. ಲಂಕೇಶರ ಉಮಾಪತಿಯ ಸ್ಕಾಲರ್‌ಶಿಪ್‌ ಯಾತ್ರೆ, ಅನಂತಮೂರ್ತಿಯ ‘ರುತ್‌ ಅಂಡ್‌ ರಸೆಲ್‌’, ಸದಾಶಿವ ಬರೆದ ‘ಸಿಕ್ಕು’, ಗಿರಡ್ಡಿಯ ‘ಮಣ್ಣು’-ಹೀಗೆ ಎಲ್ಲರನ್ನೂ ಒಳಗೊಳ್ಳುವಂಥ ಕತೆಗಳಿದ್ದವು. ಮಾಯಣ್ಣನ ಕನ್ನಡಿ, ಪಾವೆಂ ಹೇಳಿದ ಕತೆ, ನೆಲಗುಮ್ಮ, ಕ್ಷಿತಿಜ ಮುಂತಾದ ಕತೆಗಳನ್ನು ಮತ್ತೆ ಮತ್ತೆ ಓದಿ ಹಗುರಾಗುತ್ತಿದ್ದ ದಿನಗಳಿದ್ದವು. ಇಂಥದ್ದೊಂದು ಸಂಭ್ರಮವನ್ನು ಇವತ್ತು ಯಾವ ಜಾಗತೀಕರಣ ಕಿತ್ತುಕೊಂಡಿತು? ಯಾವ ಆಧುನಿಕತೆಗೆ ಅದು ಬಲಿಯಾಯಿತು?

ತೀರಾ ಹಳಹಳಿಸಿದರೆ ಅದು ಕೃತಕವಾಗುತ್ತದೆ. ಪುಸ್ತಕ ಬಿಡುಗಡೆಗೆ ಬರುವ ಅದೇ ಮುಖಗಳ ನಡುವೆ ಒಂದಾದರೂ ಯೌವನದ ಜೀವಗಳಿಲ್ಲ. ಒಂದೆರಡು ತರುಣರು ಕಾಣಿಸಿಕೊಂಡರೂ ಅವರು ಒಂದೋ ಲೇಖಕರು, ಇಲ್ಲವೇ ಪತ್ರಕರ್ತರು; ಅನಿವಾರ್ಯ ಮತ್ತು ಅಪರಿಹಾರ್ಯಕ್ಕೆ ಕಟ್ಟುಬಿದ್ದವರು. ಅದು ಬಿಟ್ಟರೆ ವಿದ್ಯಾರ್ಥಿಗಳು ಯಾರೂ ಪುಸ್ತಕ ಬಿಡುಗಡೆಗೆ ಬರುವುದಿಲ್ಲ.

ಅಂದರೆ ಓದುವುದು ಮತ್ತು ಬರೆಯುವುದು ಸದ್ಯದ ಮಟ್ಟಿಗೆ ಮಧ್ಯವಯಸ್ಕರ passion. ಹೊಸ ಹುಡುಗರಿಗೆ ಬೇರೆ ಬೇರೆ ಗೀಳುಗಳಿವೆ.

ಬೇರೆ ಬೇರೆ ಗೀಳುಗಳು, ಚಾಳಿಗಳು, ಹವ್ಯಾಸಗಳು ಇದೀಗ ನಲುವತ್ತು ದಾಟುತ್ತಿರುವ ಎಲ್ಲರಿಗೂ ಇದ್ದವು. ಹಾಗೆ ನೋಡಿದರೆ ಈಗಿನ ಹುಡುಗರಿಗಿಂತ ಪೊಗದಸ್ತಾದ ಚಾಳಿಗಳಿದ್ದವು. ಇಷ್ಟು ಸಮಯ ಕೂಡ ಇರಲಿಲ್ಲ. ಹತ್ತು ಮೈಲಿ ನಡೆದು ಸ್ಕೂಲು ತಲುಪಬೇಕಾದ ಹುಡುಗ, ಮನೆಯಲ್ಲಿ ಕರೆಂಟಿಲ್ಲದೆ ಚಿಮಣಿದೀಪದ ಬೆಳಕಲ್ಲಿ ಓದಬೇಕಾಗಿದ್ದ ಬಾಲಕ, ಒಂದು ಪುಸ್ತಕ ಬೇಕಿದ್ದರೆ ಯಾರ್ಯಾರನ್ನೋ ಕಾಡಿಬೇಡಿ ತರಬೇಕಾಗಿದ್ದ ಆಸಕ್ತ- ಇವತ್ತಿನ ಹುಡುಗರಿಗಿಂತ ಜಾಸ್ತಿ ಓದುತ್ತಿದ್ದ. ಆಧುನಿಕತೆ ಕ್ಯೂರಿಯಾಸಿಟಿಯನ್ನು ಕೊಂದುಹಾಕಿದೆ. ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ. ಎಂಥ ಜ್ಞಾನವೇ ಆಗಲಿ ಇಂಟರ್‌ನೆಟ್ಟಲ್ಲಿದೆ ಎಂಬ ಆತ್ಮವಿಶ್ವಾಸದಲ್ಲಿ ಅವರಿದ್ದಾರೆ.

**

ಕತೆ ಬರೆಯುವುದು, ಸಾಹಿತ್ಯ ಸೃಷ್ಟಿಸುವುದು ಇವತ್ತು ಲ್ಯಾಟಿನ್‌ ಅಮೆರಿಕನ್‌ ದೇಶಗಳ, ಭಾರತದಂಥ ದೇಶಗಳ ಪಾಲಿಗಷ್ಟೇ ಉಳಿದುಕೊಂಡಿದೆ. ಅಮೆರಿಕಾದ ಇತ್ತೀಚಿನ ಕತೆಗಳ ಪುಸ್ತಕಕ್ಕಾಗಿ ಹುಡುಕಾಡಿದರೆ ಇಪ್ಪತ್ತು ವರುಷಗಳ ಹಿಂದೆ ಬರೆದ ಪುಸ್ತಕವನ್ನೇ ಕೊಡುತ್ತಾರೆ. ಕಾದಂಬರಿ ಜಗತ್ತಿನಲ್ಲಿ ಕೆಲವು ಹೆಸರುಗಳು ಉಳಿದುಕೊಂಡಿವೆಯಾದರೂ ಅವರು ಬರೆಯುತ್ತಿರುವುದು ನಡುವಯಸ್ಸು ಸಮೀಪಿಸಿದ ಓದುಗರಿಗಾಗಿಯೇ ಹೊರತು, ತರುಣರಿಗಾಗಿ ಅಲ್ಲ. ಇಂಗ್ಲೆಂಡಿನಲ್ಲಂತೂ ಕವಿತೆಗಳ ಸುದ್ದಿಯೇ ಇಲ್ಲವಂತೆ. ಹೀಗಾಗಿ ಅಕ್ಷರ ಎನ್ನುವುದು ಕ್ರಮೇಣ ತನ್ನ ಶಕ್ತಿಯನ್ನು ಕಳಕೊಳ್ಳುತ್ತಿದೆ ಎಂದು ನಂಬುವುದರಲ್ಲಿ ತಪ್ಪೇನೂ ಇಲ್ಲ.

ಭಾರತವನ್ನೇ ತೆಗೆದುಕೊಂಡರೂ ಬಹುಮಟ್ಟಿಗೆ ಕರ್ನಾಟಕವೇ ವಾಸಿ. ಕೇರಳದಲ್ಲಿ ಒಳ್ಳೆಯ ಕತೆಗಳು, ಕಾದಂಬರಿಗಳು ಬರುತ್ತವಾದರೂ ಕರ್ನಾಟಕದ ವೈವಿಧ್ಯ ಅಲ್ಲಿಲ್ಲ. ಬಂಗಾಲಿ ಸಾಹಿತ್ಯ ಇನ್ನೂ ಠಾಗೂರರ ನೆರಳಿನಿಂದ ಆಚೆ ಬಂದಂತೆ ಕಾಣಿಸುವುದಿಲ್ಲ. ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗುವ ಕವನಗಳನ್ನು ಓದಿದರೆ ಕನ್ನಡದ ಕವಿತೆಗಳೇ ವಾಸಿ. ಕೇರಳದಲ್ಲಿ ಕವಿತೆ ಬರೆಯುವವರೇ ಇಲ್ಲವಾಗಿದ್ದಾರೆ. ಹಾಗೆ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಕಣ್ಣಮುಂದಿರುವವರು- ಒಂದೋ ಅಕ್ಷರದ ಅಗತ್ಯವನ್ನು ಮೀರಿದವರು ಅಥವಾ ಅಕ್ಷರ ಜ್ಞಾನವೇ ಇಲ್ಲದವರು. ಇವರಿಬ್ಬರ ನಡುವೆ ಸಾಹಿತ್ಯ ಉಸಿರಾಡಬೇಕಾಗಿದೆ.

ಬಹುಶಃ ಸಾಹಿತ್ಯವನ್ನು ಆಧುನಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸುವುದಕ್ಕೆ ಯತ್ನಿಸಿದರೆ ಇಷ್ಟವಾಗಬಹುದೋ ಏನೋ? ಆದರೆ ಟೀವಿಯಲ್ಲಿ ಬರುತ್ತಿರುವ ಎಲ್ಲಾ ಧಾರಾವಾಹಿಗಳೂ ಕನ್ನಡ ಸಾಹಿತ್ಯಕ್ಕಿಂತ ನೂರು ವರುಷ ಹಿಂದಿವೆ. ತೀರಾ ಅನಾಗರಿಕವಾಗಿವೆ. ಅವುಗಳಿಗೂ ಸಾಹಿತ್ಯಕ್ಕೂ ಯಾವ ಸಂಬಂಧವೂ ಇಲ್ಲ. ಅಷ್ಟಕ್ಕೂ ಅವುಗಳಿಗೆ ಸಾಹಿತ್ಯವೇ ಬೇಕಾಗಿಲ್ಲ. ಯಾರು ಬೇಕಾದರೂ ಸಂಭಾಷಣೆ ಬರೆದು, ಕತೆ ಬರೆದು ನಿರ್ದೇಶಿಸಬಹುದಾದ ಸಂಗತಿಗಳವು. ಹಿಂದೆ ಒಂದು ಕಾದಂಬರಿ ಚಲನಚಿತ್ರವಾದ ತಕ್ಷಣ ಅದು ಕನಿಷ್ಠ ಸಾವಿರ ಪ್ರತಿ ಮಾರಾಟವಾಗುತ್ತಿತ್ತು. ಉದಾಹರಣೆ ಭಾರತೀಸುತರ ಎಡಕಲ್ಲು ಗುಡ್ಡದ ಮೇಲೆ. ಇವತ್ತು ಕಾದಂಬರಿ ಸಿನಿಮಾ ಆದರೆ ಅದನ್ನು ಸಾವಿರ ಮಂದಿಯೂ ನೋಡುವುದಿಲ್ಲ. ಉದಾಹರಣೆಗೆ ಕೆ.ಟಿ. ಗಟ್ಟಿಯವರ ಕಾರ್ಮುಗಿಲು.

ಇವೆಲ್ಲದರ ನಡುವೆ ನಿಜಕ್ಕೂ ಜನ ಓದುವ ಕತೆಗಳನ್ನು ಕಾದಂಬರಿಗಳನ್ನು ಸಾಹಿತ್ಯ ಎಂದು ಒಪ್ಪುವುದಕ್ಕೆ ಸಾಹಿತ್ಯ ವಲಯ ಸಿದ್ಧವಿಲ್ಲ. ಆ ಮಟ್ಟಿಗೆ ಸಾಹಿತ್ಯ ವಲಯದ ಮಡಿವಂತಿಕೆ ಬದಲಾಗಿಲ್ಲ. ಹಳೆಯ ಕಾಲದಲ್ಲಿದ್ದಂತೆ ಇವತ್ತೂ ಜನಪ್ರಿಯ ಸಾಹಿತಿಗಳೂ ಪ್ರಬುದ್ಧ ಲೇಖಕರೂ ಎರಡು ದ್ವೀಪಗಳಾಗಿಯೇ ಉಳಿದಿದ್ದಾರೆ.

**

ನಮ್ಮೆಲ್ಲರಿಗೂ ಬದುಕುವುದಕ್ಕೊಂದು ಅನ್ಯಪ್ರೇರಣೆಯೂ ಬೇಕಾಗುತ್ತದೆ. ಜೀವಿಸುವ ಅದಮ್ಯ ಆಶೆ ಕೇವಲ ದೈಹಿಕ ಅಗತ್ಯವಲ್ಲ; ಬರಿಯ ಸರ್ವೈವಲ್‌ ಇನ್‌ಸ್ಟಿಂಕ್ಟ್‌ ಅಲ್ಲ. ಅದು ಮಧ್ಯಯುಗದ ಮಂದಿ ಬೆಂಕಿ ಸುತ್ತ ಕುಳಿತು ಬೇಟೆಯಾಡಿ ಬಂದವನು ತಂದ ಮಾಂಸ ತಿನ್ನುತ್ತಾ, ಆತನ ಅನುಭವಗಳನ್ನು ಕೇಳಿಸಿಕೊಂಡು ಸುಖಿಸಿದ್ದು. ನಮ್ಮೆಲ್ಲರೊಳಗಿರುವ ಸರ್ವಾಂತರ್ಯಾಮಿಯಾಗುವ, ಸರ್ವಶಕ್ತನಾಗುವ, ವಿಶ್ವರೂಪಿಯಾಗುವ ಆಸೆಗೆ ಕಾವು ಕೊಡುವಂಥದ್ದು.

ಇಂಥ ಪ್ರೇರಣೆಯನ್ನು ಈ ಕಾಲದ ಹುಡುಗರು ಎಲ್ಲಿಂದ ಪಡೆದುಕೊಳ್ಳುತ್ತಾರೆ. ಅದು ಯಾವ ರೂಪದಲ್ಲಿ ಒದಗುತ್ತದೆ. ಬಹುಶಃ ಅದರ ಅಗತ್ಯವೇ ಇಲ್ಲದೆ ಅವರು ಬದುಕುತ್ತಿದ್ದಾರಾ? ಅದೇ ಕಾರಣಕ್ಕೆ ಶಬ್ದಪ್ರಿಯರಾಗುತ್ತಿದ್ದಾರಾ?

ಮೌನದಲ್ಲಿ, ಒಂಟಿತನದಲ್ಲಿ ಭಯವಿಹ್ವಲರಾಗುತ್ತಾ, ಸಂಕಟಪಡುತ್ತಾ ಬದುಕುತ್ತಿದ್ದಾರಾ?

ಮೌನ ಮತ್ತು ಒಂಟಿತನ ಭೀತಿ ಹುಟ್ಟಿಸುತ್ತವೆ ಎಂಬ ಕಾರಣಕ್ಕೆ ಸದಾ ಶಬ್ದ ಪ್ರಪಂಚದಲ್ಲಿ ಸುತ್ತಾಡುತ್ತಾರಾ?

ಹೊಸಬರು ಕತೆ ಬರೆಯಲಿ.

**

ಚೀನಾ ಕೂಡ ಭಾರತದಂತೆಯೆ ನಂಬಿಕೆಗಳ ಮತ್ತು ಅಪನಂಬಿಕೆಗಳ ನಾಡು. ಚೀನೀ ಕವಿತೆಗಳನ್ನು ಕೆ. ಎಸ್‌.ನ. ಹಿಂದೆ ಅನುವಾದಿಸಿದ್ದರು. ಆದರೆ ಚೀನಿಯರಿಗೆ ಕಾದಂಬರಿಗಳೆಂದರೆ ರೇಜಿಗೆ. ಸುದೀರ್ಘವಾದ ಯಾವುದನ್ನೂ ಅವರು ಓದುವುದಿಲ್ಲ ; ಹಾಗೇ ಜೀವನಕ್ಕೆ ಹತ್ತಿರವಲ್ಲದೇ ಇರುವುದನ್ನು ಕೂಡ. ಹೀಗಾಗಿ ಅವರ ಕತೆಗಳು ಚುಟುಕಾಗಿಯೂ ಚುರುಕಾಗಿಯೂ ಇರುತ್ತವೆ.

ಒಂದು ಪುಟ್ಟ ಉದಾಹರಣೆ;

ಒಬ್ಬ ವೈದ್ಯ ಹಳ್ಳಿಯಲ್ಲಿ ಸಾಯುತ್ತಾ ಬಿದ್ದಿದ್ದ ತರುಣನಿಗೆ ಇಂಜೆಕ್ಷನ್‌ ಚುಚ್ಚಿದ. ಕ್ಷಣಾರ್ಧದಲ್ಲಿ ಆತ ಸತ್ತು ಹೋದ. ತರುಣನ ಮನೆಮಂದಿಯೆಲ್ಲ ವೈದ್ಯನನ್ನು ಸಾಯಿಸಬೇಕು ಅಂತ ನಿರ್ಧರಿಸಿ ಒಂದು ಕೋಣೆಯಲ್ಲಿ ಕೂಡಿಹಾಕಿದರು.

ರಾತ್ರಿ ಅದು ಹೇಗೋ ವೈದ್ಯ ಆ ಸೆರೆಯಿಂದ ತಪ್ಪಿಸಿಕೊಂಡು ಹತ್ತಾರು ಮೈಲಿ ನದಿಯಲ್ಲಿ ಈಜಿ ಮನೆ ಸೇರಿದ. ಮನೆಯಾಳಗೆ ಕಾಲಿಡುತ್ತಿದ್ದಂತೆ ವೈದ್ಯವೃತ್ತಿ ಕಲಿಯುತ್ತಿದ್ದ ಮಗ ದಪ್ಪದಪ್ಪದ ಗ್ರಂಥಗಳನ್ನಿಟ್ಟುಕೊಂಡು ಅಭ್ಯಾಸ ಮಾಡುವುದನ್ನು ನೋಡಿ ಹೇಳಿದ;

ಆ ಪುಸ್ತಕಗಳನ್ನೆಲ್ಲ ಎತ್ತಿಡು ಮಗೂ. ಅವು ಏನಿದ್ದರೂ ಬೇರೆಯವರ ಜೀವ ಉಳಿಸುವುದಕ್ಕೆ. ಆಯುಷ್ಯ ತೀರಿದರೆ ಅವು ಬೇರೆಯವರ ಜೀವ ಉಳಿಸುತ್ತವೆ ಅನ್ನುವ ಖಾತ್ರಿಯೂ ಇಲ್ಲ.

ಆದರೆ ನಮ್ಮ ಜೀವ ಉಳಿಸಿಕೊಳ್ಳೋದಕ್ಕೆ ನೀನು ಕಲಿಯಬೇಕಾದದ್ದು ಬೇರೆಯೇ ಇದೆ. ಹೀಗಾಗಿ ನಿನ್ನ ವೈದ್ಯಕೀಯ ಪಾಠವನ್ನು ಈಜು ಕಲಿಯೋದರಿಂದ ಆರಂಭಿಸು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X