• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೊಗಸಾದ ಟೀ ಎಂಬ ರೂಪಕ ಅಲಂಕಾರ

By Staff
|
 • ಜಾನಕಿ
 • ನಾವು, ಕರ್ನಾಟಕದ ಮಂದಿ, ಕಾಫಿ ಪ್ರಿಯರು. ಬಿಸಿಲ ಝಳ ಜೋರಾಗಿರುವ ದಕ್ಷಿಣ ಕನ್ನಡ, ಬಳ್ಳಾರಿಗಳಲ್ಲಿ ಚಹಾ ಕುಡಿಯುವವರು ಹೆಚ್ಚಾಗಿದ್ದಾರಾದರೂ ಕಾಫಿ ಸಜ್ಜನ ಕನ್ನಡಿಗರ ಫ್ಯಾಮಿಲಿ ಪೇಯ! ಮೈಸೂರಿನಲ್ಲಿ ಟೀ ಕುಡಿಯುವುದೇ ಅಪರಾಧ. ಹಾಸನದಲ್ಲೋ ಚಿಕ್ಕಮಗಳೂರಲ್ಲೋ ಚಹಾ ಕುಡಿಯುವವನು ಸಜ್ಜನನಲ್ಲ ಎಂಬ ನಂಬಿಕೆಯೇ ಇದೆ. ಚಹಾ ಕುಡಿಯುವವನು ಶ್ರಮಜೀವಿ ಎಂದೂ ನಿರ್ಧಾರವಾಗಿ ಹೋಗಿದೆ. ಅದ್ಯಾಕೋ ಮೊದಲಿನಿಂದಲೂ ಚಹಾಕ್ಕೆ ಉಳ್ಳವರ ಮನೆಯ ಕಣ್ಮಣಿಯಾಗುವ ಪುಣ್ಯ ಒದಗಿಬರಲೇ ಇಲ್ಲ. ಅದೇನಿದ್ದರೂ ಬೀದಿ ಬದಿಯ ಕೂಸು. ತಳ್ಳುಗಾಡಿಗಳಲ್ಲಿ ಮಾರುವುದಕ್ಕೆ ಅರ್ಹವಾದದ್ದು. ರಸ್ತೆಬದಿಯಲ್ಲಿ ನಿಮಗೆ ಸಾಮಾನ್ಯವಾಗಿ ಕಾಫಿ ಸಿಗುವುದಿಲ್ಲ !

  ಟೀ ಮಾಡುವುದು ಕಾಫಿಯಷ್ಟು ಸುಲಭವಲ್ಲ. ಕಾಫಿ ಡಿಕಾಕ್ಷನ್‌ ಮಾಡಿಟ್ಟುಕೊಂಡು ಹಾಲು ಬೆರೆಸಿ ಯಾವಾಗ ಬೇಕಾದರೂ ಕುಡಿಯಬಹುದು. ಆದರೆ ಟೀ ಹಾಗಲ್ಲ. ಅದನ್ನು ಚೆನ್ನಾಗಿ ಕುದಿಸಿ, ಬಿಸಿಬಿಸಿಯಾಗಿರುವಾಗಲೇ ಕುಡಿಯಬೇಕು. ಸ್ವಲ್ಪ ಹೊತ್ತು ಇಟ್ಟುಬಿಟ್ಟರೂ ಅದರ ಮೇಲೊಂದು ತೆಳ್ಳನೆಯ ಕೆನೆಪರದೆ ಕಟ್ಟಿಕೊಳ್ಳುತ್ತದೆ. ರುಚಿಗೆಡುತ್ತದೆ. ಆದರೆ ಟೀಯನ್ನು ಸಂಭಾವಿತರು ಧಿಕ್ಕರಿಸುವುದಕ್ಕೆ ಇದೊಂದೇ ಕಾರಣ ಇರಲಾರದು. ಅದಕ್ಕೊಂದು ಧಾರ್ಮಿಕವಾದ, ಸಾಂಸ್ಕೃತಿಕವಾದ, ನೈತಿಕವಾದ ಕಾರಣವೂ ಇರಬಹುದೋ ಏನೋ? ಸಂಶೋಧಕರು ಪತ್ತೆ ಮಾಡಬೇಕು.

  George Orwellನೀವು ಗಮನಿಸಿರಬಹುದು; ಹೆಣ್ಣುಮಕ್ಕಳು ಸಾಮಾನ್ಯವಾಗಿ ಚಹಾ ಕುಡಿಯುವುದಿಲ್ಲ. ಅವರದೇನಿದ್ದರೂ ಕಾಫಿ ರಾಗ. ಚಹಾ ಕುಡಿಯುವ ಮಹಿಳೆಯರೂ ಸಾಮಾನ್ಯವಾಗಿ ಶ್ರಮಜೀವಿಗಳೇ. ಹೀಗಿರುವಾಗ ಶ್ರಮಕ್ಕೂ ಚಹಾಕ್ಕೂ ಏನಾದರೂ ಸಂಬಂಧ ಇರಬಹುದೇ? ಅದೂ ಸಂಶೋಧನೆಗೆ ಅರ್ಹ ವಸ್ತು.

  ಟೀ ಕುಡಿಯುವುದಕ್ಕೊಂದು ಧಾರ್ಮಿಕವಾದ ಆಧ್ಯಾತ್ಮಿಕವಾದ ಕಾರಣವೂ ಇರಬಹುದು ಎಂದು ಅನ್ನಿಸಿದ್ದಕ್ಕೆ ಕಾರಣ ಚೀನಾ ಮತ್ತು ಜಪಾನಿನ ಕತೆಗಳಲ್ಲಿ ಬರುವ ಚಹಾದ ಪ್ರಸ್ತಾಪವೂ ಇರಬಹುದು. ಶ್ರೀಲಂಕಾದಲ್ಲೂ ಚಹಾಕ್ಕೇ ಪ್ರಾಧಾನ್ಯ. ಅಚಾನಕ್ಕಾಗಿಯೋ ಏನೋ ಬುದ್ಧನಲ್ಲಿ ನಂಬಿಕೆ ಇಟ್ಟ ದೇಶಗಳೆಲ್ಲ ಚಹಾದ ಬಗ್ಗೆಯೂ ಪ್ರೀತಿ ಇಟ್ಟುಕೊಂಡಿವೆ. ಅಲ್ಲಿಯ ಸಾಹಿತ್ಯದಲ್ಲೂ ಚಹಾದ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. ಥಟ್ಟನೆ ನೆನಪಾಗುವ ಎರಡು ಪ್ರಸಂಗಗಳು ಹೀಗಿವೆ;

  ಒಬ್ಬ ಗುರು. ಅವನ ಹತ್ತಿರ ಶಿಷ್ಯತ್ವ ಸ್ವೀಕರಿಸುವುದಕ್ಕೆ ಒಬ್ಬ ಬರುತ್ತಾನೆ. ಗುರು ಏನನ್ನೂ ಹೇಳಿಕೊಡಬಾರದು. ಶಿಷ್ಯ ಸ್ವಯಂಸ್ಫ್ಪೂರ್ತಿಯಿಂದ ಕಲಿಯಬೇಕು ಅನ್ನುವುದು ನಿಯಮ. ಹೀಗಾಗಿ ಶಿಷ್ಯ ಗುರುವಿನ ಪ್ರತಿಯಾಂದು ನಡವಳಿಕೆಯನ್ನೂ ಗಮನಿಸುತ್ತಾ ಇರುತ್ತಾನೆ.

  ಹೀಗಿರುವಾಗ ಒಮ್ಮೆ ಗುರುವನ್ನು ನೋಡುವುದಕ್ಕೆ ಒಬ್ಬ ಶ್ರೀಮಂತ ಬರುತ್ತಾನೆ. ಗುರುವಿಗೆ ತನ್ನೆಲ್ಲ ಸಂಪತ್ತನ್ನೂ ಸಮರ್ಪಿಸುವುದಾಗಿ ಹೇಳುತ್ತಾನೆ. ಆತ ಮಾತು ಶುರುಮಾಡುತ್ತಿದ್ದಂತೆ ಗುರು ‘ಇವನಿಗೊಂದು ಕಪ್‌ ಟೀ ಕೊಟ್ಟು ಕಳುಹಿಸಿ’ ಅನ್ನುತ್ತಾನೆ.

  ಅದಾದ ಮೇಲೆ ಮತ್ತೊಬ್ಬ ನಾಸ್ತಿಕ ಬರುತ್ತಾನೆ. ಗುರುವನ್ನು ಬೈಯಲು ಶುರುವಿಡುತ್ತಾನೆ. ಆತ ಮಾತು ಶುರುಮಾಡುತ್ತಿದ್ದಂತೆ ಗುರು ‘ಇವನಿಗೊಂದು ಕಪ್‌ ಟೀ ಕೊಟ್ಟು ಕಳುಹಿಸಿ’ ಅನ್ನುತ್ತಾನೆ.

  ಆಮೇಲೊಬ್ಬಳು ವಿಧವೆ ಬರುತ್ತಾಳೆ. ಗಂಡ ತೀರಿಕೊಂಡ ದುಃಖದಲ್ಲಿದ್ದಾಳೆ. ಅವಳು ಗೋಳು ಹೇಳಿಕೊಳ್ಳುತ್ತಿದ್ದಂತೆ ಗುರು ಮತ್ತೆ ಅದೇ ಮಾತು ಹೇಳುತ್ತಾನೆ; ‘ಈಕೆಗೊಂದು ಕಪ್‌ ಟೀ...’.

  ಇದನ್ನೆಲ್ಲ ನೋಡುತ್ತಿದ್ದ ಶಿಷ್ಯನಿಗೆ ಚೋದ್ಯವೆನಿಸುತ್ತದೆ. ಗುರುವನ್ನು ಕೇಳುತ್ತಾನೆ. ನೀವು ನಿಮ್ಮನ್ನು ನೋಡಲು ಬಂದವರಿಗೆಲ್ಲ ಒಂದು ಕಪ್‌ ಟೀ ಕೊಟ್ಟು ಕಳುಹಿಸುತ್ತೀರಲ್ಲ. ಅವರಿಗೆ ಅದರಲ್ಲೇ ಸಮಾಧಾನ ಸಿಕ್ಕವರಂತೆ ಹೊರಟು ಹೋಗುತ್ತಾರಲ್ಲ. ಇದರ ರಹಸ್ಯ ಏನು?

  ಗುರು ಹೇಳುತ್ತಾನೆ;

  ‘ಯಾರಲ್ಲಿ... ಈತನಿಗೊಂದು ಕಪ್‌ ಟೀ ಕೊಟ್ಟು ಕಳುಹಿಸಿ’.

  ಇದನ್ನು ವಿವರಿಸಿದರೆ ಕೆಡುತ್ತದೆ. ಇಂಥದ್ದೇ ಇನ್ನೊಂದು ಕತೆ ಕೇಳಿ;

  ಗುರುವಿನ ಬಳಿಗೆ ಒಬ್ಬ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಬಂದು ತನ್ನ ಬಗ್ಗೆ ಹೇಳಿಕೊಳ್ಳಲು ಆರಂಭಿಸುತ್ತಾನೆ. ‘ಗುರುಗಳೇ.. ನಾನು ಅನೇಕ ಧರ್ಮಗ್ರಂಥಗಳನ್ನು ಓದಿದ್ದೇನೆ. ಶಾಸ್ತ್ರ ಪುರಾಣಗಳನ್ನು ಅರ್ಥಮಾಡಿಕೊಂಡಿದ್ದೇನೆ. ತರ್ಕಶಾಸ್ತ್ರದಲ್ಲಿ ಪರಿಣತಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ವೇದಾಂತದ ವಿವಿಧ ಶಾಖೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ.... ತಾವು ನನಗೆ ಮಹತ್ತರವಾದ ವಿದ್ಯೆ ಕಲಿಸಬೇಕು. ನನ್ನನ್ನು ಜ್ಞಾನಿಯಾಗಿ ಮಾಡಬೇಕು’.

  ಗುರು ಮಾತಾಡುವುದಿಲ್ಲ. ಒಂದು ಜಾಡಿ ಚಹಾ ತರಿಸುತ್ತಾನೆ. ಶಿಷ್ಯತ್ವ ಸ್ವೀಕರಿಸಲು ಬಂದವನ ಮುಂದೆ ಒಂದು ಕಪ್‌ ಇಟ್ಟು ‘ಮೊದಲು ಚಹಾ ಕುಡಿ. ನಂತರ ಮಾತಾಡೋಣ’ ಅನ್ನುತ್ತಾನೆ. ಶಿಷ್ಯ ನೋಡುತ್ತಿರುವಂತೆಯೇ ಜಾಡಿಯಿಂದ ಕಪ್‌ಗೆ ಚಹಾ ಸುರಿಯುತ್ತಾನೆ. ಕಪ್‌ ತುಂಬಿ ಚಹಾ ಹರಿದು ಹೋಗುತ್ತಿದ್ದರೂ ಸುರಿಯುತ್ತಲೇ ಇರುತ್ತಾನೆ.

  ಶಿಷ್ಯ ಎಚ್ಚರಿಸುತ್ತಾನೆ; ಗುರುಗಳೇ ಕಪ್‌ ತುಂಬಿಹೋಗಿ ಚಹಾ ಚೆಲ್ಲುತ್ತಿದೆ. ಇನ್ನೂ ಸುರೀತಾ ಇದ್ದೀರಲ್ಲ.

  ‘ನೀನೂ ಅಷ್ಟೇ. ಈಗಾಗಲೇ ತುಂಬಿಕೊಂಡಿದ್ದೀಯ. ನನಗೆ ಗೊತ್ತಿರುವುದನ್ನು ನಾನೆಲ್ಲಿ ತುಂಬಲಿ. ಮೊದಲು ಖಾಲಿಯಾಗಿ ಬಾ. ಅಮೇಲೆ ನೋಡೋಣಂತೆ’.

  *

  ಜಾರ್ಜ್‌ ಆರ್ವೆಲ್‌ ಹೆಸರಿನಲ್ಲಿ ಬರೆಯುತ್ತಿದ್ದ ಎರಿಕ್‌ ಬ್ಲೇರ್‌ ಚಹಾದ ಬಗ್ಗೆ ಒಂದು ಕುತೂಹಲಕರ ಪ್ರಬಂಧ ಬರೆದಿದ್ದಾನೆ. ಒಬ್ಬ ಲೇಖಕ ಇಂಥ ಸಂಗತಿಗಳ ಬಗ್ಗೆ ಬರೆಯುತ್ತಾನೆ ಅನ್ನುವುದನ್ನು ಇವತ್ತು ನಮ್ಮಲ್ಲಿ ಊಹಿಸಿಕೊಳ್ಳುವುದಕ್ಕೂ ಕಷ್ಟ. ಬಿಜಿಎಲ್‌ ಸ್ವಾಮಿ, ಡಿವಿಜಿ, ಗೊರೂರು ಮುಂತಾದವರು ಇಂಥ ತರಹೇವಾಗಿ ಸಂಗತಿಗಳ ಕುರಿತು ಬರೆಯುತ್ತಿದ್ದರು. ಲಂಕೇಶರ ಟೀಕೆ ಟಿಪ್ಪಣಿಯಲ್ಲಿ ಅಂಥ ವೈವಿಧ್ಯ ಇತ್ತು. ಡಿ. ಆರ್‌. ನಾಗರಾಜ್‌ಗೆ ಆ ಪರಿಯ ವಿಸ್ತಾರ ಸಾಧ್ಯವಿತ್ತು. ಆದರೆ ಶ್ರೇಷ್ಠತೆಯ ವ್ಯಸನಿಗಳಾದವರು ಮತ್ತು ಸಾಹಿತ್ಯ ಎಂದರೆ ಸೃಷ್ಟಿ, ಅದೊಂದು ದೈವಿಕವಾದ ಕ್ರಿಯೆ ಎಂದುಕೊಂಡವರು ಕೇವಲ ಘನಗಂಭೀರ ಸಂಗತಿಗಳ ಕುರಿತು ಬರೆಯುತ್ತಾ ನಿಜಕ್ಕೂ ಖುಷಿಕೊಡುವ ಮತ್ತು ಓದಿಸಿಕೊಳ್ಳುವ ಇಂಥ ವಿಷಯಗಳನ್ನು ಮುಟ್ಟುವುದಕ್ಕೂ ಹೋಗಲಿಲ್ಲ.

  ಆರ್ವೆಲ್‌ ಪ್ರಬಂಧವನ್ನು ಗ್ರಹಿಸಿ ಬರೆದ ಹತ್ತಾರು ಸಾಲುಗಳು ಇಲ್ಲಿವೆ. ಇದು ನಿಮಗೂ ಕುತೂಹಲಕರ ಅನ್ನಿಸಿದರೆ ಒಂದು ಕಪ್‌ ಚಹಾ ಕುಡಿದು ಸಂಭ್ರಮಿಸಿ.

  -ಚಹಾ ಮಾಡುವುದು ಹೇಗೆ ಅನ್ನುವ ಬಗ್ಗೆ ಯಾರೂ ಯಾವ ಮಾಹಿತಿಯನ್ನೂ ನೀಡಿದಂತಿಲ್ಲ. ಚಹಾ ಅನೇಕ ದೇಶಗಳ ನಾಗರೀಕತೆಯ ಜೊತೆ ಬೆಳೆದು ಬಂದ ಪೇಯ. ಐರ್ಲೆಂಡ್‌, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡುಗಳಲ್ಲಿ ಇದಕ್ಕೆ ಯಾವುದೂ ಸರಿಸಾಟಿಯಿಲ್ಲ ಎನ್ನುವುದರ ಜೊತೆಗೆ ಒಳ್ಳೆಯ ಚಹಾ ಮಾಡೋದು ಹ್ಯಾಗೆ ಎಂಬ ವಿಚಾರದ ಕುರಿತು ಸಾಕಷ್ಟು ಕಲಹವೂ ನಡೆದುಹೋಗಿದೆ.

  ನಾನು ನನ್ನದೇ ಅನುಭವದಿಂದ ಒಳ್ಳೆಯ ಶ್ರೇಷ್ಠ ಚಹಾ ಮಾಡೋದು ಹೇಗೆ ಅಂತ ಕಂಡುಕೊಂಡಿದ್ದೇನೆ. ಆ ಬಗ್ಗೆ ಹನ್ನೊಂದು ಗಮನಾರ್ಹ ಅಂಶಗಳನ್ನು ಗುರುತಿಸಿದ್ದೇನೆ. ಇವುಗಳಲ್ಲಿ ಒಂದರೆಡು ಎಲ್ಲರೂ ಒಪ್ಪಬಹುದಾದ ಸಾಮಾನ್ಯ ಹೇಳಿಕೆಗಳು, ನಾಲ್ಕೈದಂತೂ ಖಂಡಿತಾ ವಿವಾದಾಸ್ಪದ ಅಂಶಗಳು.

  1. ಮೊದಲನೆಯದಾಗಿ ಒಳ್ಳೆಯ ಚಹಾ ಬೇಕೆಂದಿದ್ದರೆ ಭಾರತೀಯ ಅಥವಾ ಶ್ರೀಲಂಕಾ ಮೂಲದ ಚಹಾಪುಡಿಯನ್ನೇ ಬಳಸಬೇಕು. ಚೀನಾದ ಟೀಪುಡಿಗೂ ಕೆಲವು ಹೆಗ್ಗಳಿಕೆಗಳಿವೆ ನಿಜ. ಅದು ಅಗ್ಗ, ಹಾಲು ಬೆರೆಸದೇ ಕುಡಿಯಬಹುದು ಎನ್ನುವುದರ ಹೊರತಾಗಿಯೂ ಚೀನಾ ಟೀಪುಡಿಗೆ ನಿಮ್ಮನ್ನು ಕೆರಳಿಸುವ ಶಕ್ತಿಯಿಲ್ಲ. ಅದನ್ನು ಕುಡಿದ ನಂತರ ವಿವೇಕಿಯಾದೆ, ಬಲಶಾಲಿಯಾದೆ ಅಥವಾ ಆಶಾವಾದಿಯಾದೆ ಅಂತಂದುಕೊಳ್ಳಲು ಸಾಧ್ಯವೇ ಇಲ್ಲ. ಯಾರಾದರೂ ಒಳ್ಳೆಯ ಚಹಾ ಕುಡಿದೆ ಕಣಯ್ಯಾ ಎಂದರೆ ಅದು ಇಂಡಿಯನ್‌ ಟೀಯೇ ಆಗಿರಬೇಕು.

  2. ಚಹಾವನ್ನು ಸಣ್ಣ ಪ್ರಮಾಣದಲ್ಲಿ ಮಾಡಬೇಕು. ದೊಡ್ಡ ಹಂಡೆಯಲ್ಲೋ ತಪ್ಪಲೆಯಲ್ಲೋ ಕಾಯಿಸಿಟ್ಟ ಟೀಗೆ ರುಚಿಯಿಲ್ಲ. ಮದುವೆಮನೆಯಲ್ಲೋ, ಸಾರ್ವಜನಿಕ ಸಮಾರಂಭಗಳಲ್ಲೋ ಮಾಡುವ ಚಹಾ ಕಲಗಚ್ಚಿನಂತಿರುತ್ತದೆ. ಸುಣ್ಣದ ನೀರು ಕುಡಿದಂತಿರುತ್ತದೆ. ಚಹಾ ಮಾಡುವ ಪಾತ್ರೆ ಚೀನಾದ್ದೇ ಆಗಿದ್ದರೆ ಒಳ್ಳೆಯದು. ಸ್ಟೀಲು ಅಥವಾ ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಾಡೋ ಟೀಗೆ ಅಂಥ ಸ್ವಾದ ಬರುವುದಿಲ್ಲ.

  3. ಟೀ ತಯಾರಿಸುವ ಮುಂಚೆಯೇ ಟೀಪಾಟನ್ನು ಬಿಸಿ ಮಾಡಿಕೊಳ್ಳಬೇಕು. ಬಿಸಿನೀರಲ್ಲಿ ಅದ್ದಿ ಬೆಚ್ಚಗಾಗಿಸುವುದಕ್ಕಿಂತ ಹಬೆಯ ಮೇಲಿಟ್ಟು ಬಿಸಿಮಾಡುವುದು ಉತ್ತಮ.

  4. ಚಹಾ ಸ್ಟ್ರಾಂಗ್‌ ಆಗಿರಬೇಕು. ಒಂದು ಕಪ್‌ ಚಹಾಕ್ಕೆ ಒಂದು ತುಂಬಿದ ಚಮಚ ಟೀಪೌಡರ್‌ ಸರಿ. ಇಪ್ಪತ್ತು ಪೇಲವ ಚಹಾಕ್ಕಿಂತ ಒಂದು ಸ್ಟ್ರಾಂಗ್‌ ಟೀ ಮೇಲು. ವಯಸ್ಸಾಗುತ್ತಾ ಹೋದ ಹಾಗೆ ಚಹಾ ಪ್ರೇಮಿಗಳು ಹೆಚ್ಚು ಹೆಚ್ಚು ಸ್ಟ್ರಾಂಗ್‌ ಆದ ಚಹಾ ಕುಡಿಯವುದಕ್ಕೆ ಆರಂಭಿಸುತ್ತಾರೆ.

  5. ಚಹಾವನ್ನು ಸೋಸಬಾರದು. ಟೀಪಾಟ್‌ನಿಂದ ನೇರವಾಗಿ ಕಪ್‌ಗೆ ಸುರಿಯಬೇಕು. ಒಂದೆರಡು ಚಹಾ ಸೊಪ್ಪು ಟೀಯಾಳಗೆ ಬಿದ್ದರೂ ಪ್ರಮಾದವೇನಿಲ್ಲ. ಆದರೆ ಸೋಸುವುದಿದೆ ನೋಡಿ; ಮಹಾಪರಾಧ.

  6. ಚಹಾ ಪಾತ್ರೆಯನ್ನು ಕುದಿಯುವ ನೀರಿನ ಬಳಿಗೆ ಒಯ್ಯಬೇಕೇ ಹೊರತು, ಕುದಿಸಿದ ನೀರನ್ನು ಚಹಾಪಾತ್ರೆಯ ಬಳಿಗೆ ತರಕೂಡದು. ಟೀಪಾತ್ರೆಯಾಳಗೆ ಸುರಿಯುವ ನೀರು ಕೊನೆಯ ಕ್ಷಣದ ತನಕವೂ ಕುದಿಯುತ್ತಲೇ ಇರಬೇಕು. ಒಮ್ಮೆ ಕುದಿಸಿದ ನೀರನ್ನು ಮತ್ತೆ ಕುದಿಸಿ ಬಳಸಬಾರದು ಅನ್ನುವುದು ಒಂದು ಮತ. ನನಗದರಲ್ಲಿ ನಂಬಿಕೆಯಿಲ್ಲ.

  7. ಟೀಪಾತ್ರೆಗೆ ಟೀಪುಡಿ ಹಾಕಿ ಕುದಿಯುವ ನೀರು ಹಾಕಿದ ನಂತರ ಅದನ್ನು ಕದಡಬೇಕು. ಪಾತ್ರೆಯನ್ನು ಅಲ್ಲಾಡಿಸಿದರೂ ಸರಿಯೇ. ಆಮೇಲೆ ಚಹಾ ಎಲೆಗಳು ತಳದಲ್ಲಿ ನೆಲೆಗೊಳ್ಳಲು ಬಿಡಬೇಕು.

  8. ಆಳವಿಲ್ಲದ, ಕುಳ್ಳಗಿನ ಕಪ್‌ನಲ್ಲಿ ಟೀ ಕುಡಿಯಬಾರದು. ಆಳದ ಬ್ರೇಕ್‌ಫಾಸ್ಟ್‌ ಕಪ್‌ ವಾಸಿ. ಇದರಲ್ಲಿ ಹೆಚ್ಚು ಚಹಾ ಹಿಡಿಸುತ್ತದೆ. ಸಣ್ಣ ಕಪ್‌ಗಳಲ್ಲಿ ಚಹಾ ಕುಡಿಯುವುದಕ್ಕೆ ಶುರುಮಾಡುವ ಮೊದಲೇ ಅರ್ಧ ತಣ್ಣಗಾಗಿರುತ್ತದೆ.

  9. ಹಾಲು ಬೆರೆಸುವ ಮುನ್ನ ಕೆನೆ ತೆಗೆದಿರಬೇಕು. ಕೆನೆಯಿರುವ ಹಾಲಿನಿಂದಾಗಿ ಚಹಾ ಅಂಟಂಟಂಟಾಗುತ್ತದೆ.

  10. Tea potನಿಂದ ಮೊದಲು ಟೀಯನ್ನು ಕಪ್‌ಗೆ ಸುರಿಯಬೇಕು. ವಿವಾದಾತ್ಮಕ ಅಂಶವೆಂದರೆ ಇದೇ. ಹಲವಾರು ಮಂದಿ ಮೊದಲು ಹಾಲು ಹಾಕಿಕೊಂಡು ಅದರ ಮೇಲೆ ಚಹಾ ಸುರಿಯಬೇಕು ಎಂದು ವಾದಿಸುತ್ತಾರೆ. ನನ್ನ ವಾದವೇ ಸರಿ ಯಾಕೆಂದರೆ ಮೊದಲು ಚಹಾ ಸುರಿದುಕೊಂಡರೆ ಆಮೇಲೆ ಎಷ್ಟು ಬೇಕೋ ಅಷ್ಟು ಹಾಲು ಸುರಿಯಬಹುದು. ಮೊದಲು ತುಂಬಾ ಹಾಲು ಸುರಿದಿಟ್ಟರೆ ಚಹಾ ಕೆಟ್ಟು ಹೋಗುತ್ತದೆ

  11. ಕೊನೆಯದಾಗಿ, ಎಲ್ಲಕ್ಕಿಂತ ಮುಖ್ಯವಾಗಿ, ರಷ್ಯನ್‌ ಶೈಲಿಯ ಚಹಾವೊಂದನ್ನು ಬಿಟ್ಟು ಉಳಿದೆಲ್ಲ ಟೀಯನ್ನೂ ಸಕ್ಕರೆ ಬೆರೆಸದೆ ಕುಡಿಯಬೇಕು. ಈ ಮಟ್ಟಿಗೆ ನಾನು ಅಲ್ಪಸಂಖ್ಯಾತನೇ ಇರಬಹುದು. ಆದರೆ, ಸಕ್ಕರೆ ಬೆರೆಸಿ ಚಹಾದ ಸ್ವಾದವನ್ನು ಕೆಡಿಸುವವರನ್ನು ಚಹಾಪ್ರಿಯರೆಂದು ನಾನು ಹೇಗೆ ಕರೆಯಲಿ? ಚಹಾ ಕಹಿಯಾಗಿಯೇ ಇರಬೇಕು, ಬಿಯರಿನಂತೆ. ಅದಕ್ಕೆ ಸಕ್ಕರೆ ಬೆರೆಸಿಕೊಂಡಿರೋ ನೀವು ರುಚಿಸುವುದು ಟೀಯನ್ನಲ್ಲ, ಸಕ್ಕರೆಯನ್ನು. ಅದರ ಬದಲು ಬಿಸಿನೀರಿಗೆ ಸಕ್ಕರೆ ಬೆರೆಸಿ ಕುಡಿಯೋದು ವಾಸಿ.

  ಕೆಲವರು, ತಮಗೆ ಚಹಾ ಇಷ್ಟವೇ ಇಲ್ಲವೆಂದೂ, ಅದರ ಶಮನಕಾರಿ ಗುಣಗಳಿಗಾಗಿ ಕುಡಿಯುತ್ತೇವೆಂದು ಹೇಳಬಹುದು. ಅಂಥವರು ಸಕ್ಕರೆ ಬೆರೆಸಿಕೊಂಡೇ ಕುಡಿಯಲಿ ಬಿಡಿ. ಆದರೆ, ದಾರಿತಪ್ಪಿದ ಚಹಾಪ್ರಿಯರಿಗೊಂದು ಕಿವಿಮಾತು; ಒಮ್ಮೆ ಸಕ್ಕರೆ ಹಾಕದೆ ಚಹಾ ಕುಡಿದು ನೋಡಿ. ಮುಂದೆಂದೂ ಚಹಾವನ್ನು ಸಕ್ಕರೆ ಬೆರೆಸಿ ನೀವು ಕೆಡಿಸುವುದಕ್ಕೆ ಹೋಗಲಾರಿರಿ.

  ಇಷ್ಟು ಅಂಶಗಳು ಮುಖ್ಯ. ಉಳಿದಂತೆ ಅತಿಥಿಗಳಿಗೆ ಎಂಥ ಪರಿಸರದಲ್ಲಿ ಚಹಾ ಕೊಡುತ್ತೀರಿ, ನೀವು ಎಂಥಾ ಪರಿಸರದಲ್ಲಿ ಚಹಾ ಕುಡಿಯುತ್ತೀರಿ ಅನ್ನುವುದೂ ಮುಖ್ಯ. ಸಾಸರ್‌ನಲ್ಲಿ ಚಹಾ ಕುಡಿಯುವುದು ಅಶ್ಲೀಲ ಎಂದು ಭಾವಿಸುವುದರಿಂದ ಹಿಡಿದು ಚಹಾಸೊಪ್ಪಿನ ವರ್ತನೆಯಿಂದಲೇ ಅತಿಥಿಗಳ ಆಗಮನ ಕಂಡುಹಿಡಿಯುವ ನಿಗೂಢ ನಂಬಿಕೆಗಳೂ ನಮ್ಮಲ್ಲಿವೆ. ಅದೆಲ್ಲ ನಮಗೆ ಬೇಕಾಗಿಲ್ಲ.

  ಆದರೆ ಒಂದಂತೂ ನಿಜ. ನೀವು ಚಹಾ ಪ್ರಿಯರೇ ಆಗಿದ್ದರೆ, ಸಾಲ ಮಾಡಿಯಾದರೂ ನಿಮ್ಮ ಮನೆಯಲ್ಲಿರುವ ಸ್ಟೀಲು ಲೋಟಗಳನ್ನು ಕಟ್ಟಿ ಅಟ್ಟಕ್ಕೆ ಹಾಕಿ, ಒಂದು ಡಜನ್‌ ಒಳ್ಳೆಯ ಚೈನಾವೇರ್‌ ಟೀಕಪ್ಪುಗಳನ್ನು ತಂದಿಟ್ಟುಕೊಳ್ಳಿ.

  ಎಲ್ಲವೂ ಹೇಗೆ ಬದಲಾಗುತ್ತದೆ, ನೋಡಿ!

  ಇದು ಪ್ರಬಂಧದ ಧಾಟಿಯಲ್ಲಿದ್ದರೂ ಪ್ರಬಂಧದ ಮಿತಿಗಳನ್ನು ಮೀರಿದೆ ಅಂತ ನಿಮಗನ್ನಿಸುವುದಿಲ್ಲವೇ?

  (ಸ್ನೇಹಸೇತು- ‘ಹಾಯ್‌ ಬೆಂಗಳೂರ್‌’)

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more