ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ವತ್ಥ - ರಾಗ ರಥದಲ್ಲಿ ದೂರ ತೀರ ಯಾನ

By Staff
|
Google Oneindia Kannada News

*ಜಾನಕಿ

1

ಅಲೆ ಬಂದು ಕರೆಯುವುದು
ನಿನ್ನೊಲುಮೆಯರಮನೆಗೆ ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ
ಕಾಣುವುದು ನಿನ್ನೊಲುಮೆ ಒಳಗುಡಿಯ ಮೂರ್ತಿ ಮಹಿಮೆ...

ಈ ಸಾಲುಗಳನ್ನು ಓದುತ್ತಿದ್ದರೆ ಆಗುವ ಪರಿಣಾಮವೇ ಬೇರೆ. ಸಿ.ಅಶ್ವತ್ಥರ ಹರೆಯದ ಕಂಠದಲ್ಲಿ ಕೇಳುತ್ತಿದ್ದರೆ ಉಂಟಾಗುವ ಅನುಭೂತಿಯೇ ಬೇರೆ. ಕೆ.ಎಸ್‌.ನರಸಿಂಹ ಸ್ವಾಮಿ ಇದನ್ನು ಅಶ್ವತ್ಥರು ಹಾಡಲೆಂದೇ ಬರೆದರೋ ಎನ್ನಿಸುವಂಥ ಏಕೋಭಾವ ಹಾಡು ಮತ್ತು ಹಾಡಿದವರ ನಡುವಿದೆ. ಅಲೆಯಿಡುವ ಮುತ್ತಿನಲೆ ಅನ್ನುವಾಗ ಅಶ್ವತ್ಥರ ಸ್ವರ ಪುಳಕಗೊಳ್ಳುತ್ತದೆ. ಆ ಸ್ವರರೋಮಾಂಚನ ಆ ಸಾಲಿಗಿರುವ ಅನೇಕ ಅರ್ಥಗಳನ್ನು ಒಮ್ಮಿಂದೊಮ್ಮೆಗೇ ಹೊಳೆಯಿಸುತ್ತದೆ. ಕಾಣದ ಕವಿ ಬರೆದ ಹಾಡೊಂದು ಸ್ವರವಾಗಿ ಪಡಿಮೂಡಿದಾಗ ಇಂಥ ರೋಮಾಂಚನಗಳು ಹುಟ್ಟದಿದ್ದರೆ ಗಾಯಕ ಹಾಡುವುದೇ ವ್ಯರ್ಥ. ಹಾಡಿನ ಅರ್ಥವನ್ನು ವಿಸ್ತರಿಸುವ ಯತ್ನವನ್ನು ಗಾಯಕ ಮಾಡಬೇಕು. ಕವಿಯ ಸಾಲಲ್ಲಿರುವ ಆ್ಯಂಬಿಗ್ವಿಟಿಯನ್ನು ಮೊದಲು ಹಾಡುಗಾರ ಕಾಣುವುದಕ್ಕೆ ಸಾಧ್ಯವಾಗಬೇಕು. ಸೂಕ್ಷ್ಮಜ್ಞನಾದ ಕವಿಯ ಒಂದು ಕವಿತೆಯನ್ನು ರಸಿಕನಿಗೆ ದಾಟಿಸುವ ಹರಿಗೋಲಾಗಬೇಕಾದ ಸ್ವರ ಸಂಯೋಜಕ ತಳವೊಡೆದ ದೋಣಿಯಾಗಿಬಿಟ್ಟರೆ ದೂರತೀರಯಾನ ಸಾಧ್ಯವೇ ಇಲ್ಲ.

C. Ashwathಸಿ.ಅಶ್ವತ್ಥ್‌ಗೆ ಅಂಥ ದೂರತೀರಯಾನ ಸಾಧ್ಯವಾಗಿದೆ ಅನ್ನುವ ಬಗ್ಗೆ ಅನುಮಾನ ಬೇಕಿಲ್ಲ. ಇವತ್ತು ಭಾವಗೀತೆಗಳನ್ನು ಗುನುಗುವ ಪ್ರತಿಯಾಬ್ಬರೂ ಅಶ್ವತ್ಥ್‌ ಸಂಯೋಜಿಸಿದ ರಾಗದಲ್ಲೇ ಹಾಡುತ್ತಾರೆ. ಏಕತಾನತೆಯನ್ನೂ ಪ್ರಿಯವಾಗುವಂತೆ ಮಾಡುವ ಶಕ್ತಿ ಕೇವಲ ಸಮಾಜಮುಖಿ ಪ್ರತಿಭೆಗಳಿಗೆ ಮಾತ್ರ ಇರುತ್ತದೆ. ಉದಾಹರಣೆಗೆ ಅನಕೃ ಅವರ ಕತೆಗಳ ಏಕತಾನತೆಯಲ್ಲೂ ಒಂದು ಥರದ ಬಿರುಸಿತ್ತು. ಹಿರಣ್ಣಯ್ಯನವರ ನಾಟಕದ ಏಕತಾನತೆಯಲ್ಲೊಂದು ರೋಷವಿದೆ. ಹೀಗಾಗಿ ಆ ಮಾತುಗಳ ಮೊನಾಟನಸ್‌ ಗುಣವನ್ನು ಸಾತ್ವಿಕ ಮತ್ತು ಸಾಮಾಜಿಕ ಸಿಟ್ಟು ತಿಳಿಗೊಳಿಸುತ್ತದೆ. ಹೀಗಾಗಿ ಅವರು ಹೇಳಿದ್ದನ್ನೇ ಹೇಳುತ್ತಿದ್ದರೂ ಆಪ್ಯಾಯಮಾನ ಅನ್ನಿಸುತ್ತಿದೆ. ಅಂಥ, ಮೊನಾಟನಿಯನ್ನು ಮೀರುವ ಶಕ್ತಿ ಅಶ್ವತ್ಥರ ರಾಗಸಂಯೋಜನೆಗೂ ಇದೆ. ಯಾಕೆಂದರೆ ಅದು ಜನಪ್ರಿಯತೆ ಮತ್ತು ಶ್ರೇಷ್ಠತೆಯ ನಡುವಿನ ಹಾದಿಯಲ್ಲಿ ಸಾಗುತ್ತದೆ. ಶ್ರೇಷ್ಠತೆಯನ್ನು ನಿಗ್ರಹಿಸಿಕೊಳ್ಳಲಾರದ ಜನಪ್ರಿಯತೆಯನ್ನು ನಿರಾಕರಿಸಲಾರದ ಮಂದಿಗೆ ಅಶ್ವತ್ಥ್‌ ಅತ್ಯುತ್ತಮ ಆಯ್ಕೆ. ಹಾಗೇ ಲಕ್ಷ್ಮೀನಾರಾಯಣ ಭಟ್ಟರೂ ಕೂಡ.

ಏನೇ ಆದರೂ ಇವತ್ತಿನ ಸುಗಮ ಸಂಗೀತ ಜಗತ್ತನ್ನು ವಿಶಾಲಗೊಳಿಸಿದವರು ಸಿ.ಅಶ್ವತ್ಥ. ಅವರನ್ನು ಹತ್ತಿರದಿಂದ ಕಂಡವರಿಗೆ ಅವರು ಅಪಾರ ಜೀವನೋತ್ಸಾಹದ ಅಸಾಮಿ. ಸುಮ್ಮ ಸುಮ್ಮನೆ ಸಿಟ್ಟಾಗುವ, ಸಿಟ್ಟಾದಾಗ ಹಾರಾಡುವ, ಇಷ್ಟವಾದಾಗ ಕರಡಿಯಂತೆ ಮುದ್ದಾಡಿ ಮುಜುಗರಗೊಳಿಸುವ, ಚಿತ್ತಾದಾಗ ಅದ್ಭುತವಾಗಿ ಹಾಡಿ ರಂಗೇರಿಸುವ ವಿಚಿತ್ರ ಪ್ರತಿಭೆ ಅವರಿಗುಂಟು. ಅಶ್ವತ್ಥ್‌ ಹಾಡಿದರೆ ಸಾಕು ಒಂದು ಕವಿತೆ ತನ್ನೆಲ್ಲ ಅರ್ಥವನ್ನು ಬಿಚ್ಚಿಡುತ್ತದೆ ಅಂತ ಅವರನ್ನು ಪ್ರೀತಿಸುವವರು ಹೇಳುತ್ತಾರೆ. ಹೀಗಾಗಿ ಅಶ್ವತ್ಥ್‌ ರಾಗ ಸಂಯೋಜಿಸಿ ಹಾಡುವುದು ಒಂದು ಕವಿತೆಯ applied criticism- ಅನ್ವಯಿಕ ವಿಮರ್ಶೆಗೆ ಸಮ ಎನ್ನುವವರೂ ಇದ್ದಾರೆ. ಹಾಗಂತ ಸ್ವತಃ ಅಶ್ವತ್ಥ್‌ ಕೂಡ ನಂಬಿದ್ದಾರೆ. ಅವರ ಮುಂದೆ ಅಸಂಖ್ಯಾತ ಸಾಹಿತಿಮಿತ್ರರು ನಮ್ಮ ಕವನವನ್ನು ನೀವೇ ಹಾಡಬೇಕು ಅಂತ ದುಂಬಾಲು ಬೀಳುವುದೂ ಇದೆ. ಒಂದಂತೂ ಸತ್ಯ. ಅಶ್ವತ್ಥರು ಹಾಡಿ ಜನಪ್ರಿಯಗೊಳಿಸದೇ ಹೋಗಿದ್ದರೆ ಇವತ್ತು ಬಹುತೇಕ ಕವಿಗಳ ಕವನಗಳು ಅವರ ಲೈಬ್ರಿ ಬಿಟ್ಟು ಆಚೆ ಬರುತ್ತಿರಲಿಲ್ಲ . ಉದಾ- ಜಿಎಸ್ಸೆಸ್‌.

2.

ಸುಗಮ ಸಂಗೀತಕ್ಕೆ ಅಂತ ಸುದೀರ್ಘ ಪರಂಪರೆಯೇನೂ ಇಲ್ಲ. ಇಂಗ್ಲಿಷ್‌ ಗೀತೆಗಳ ಪ್ರಭಾವದಿಂದ ಕನ್ನಡ ಕಾವ್ಯದ ಬಿಗಿಯು ನಸುವೇ ಸಡಲಿದಾಗ ಕಾವ್ಯ ತನ್ನ ಬಂಧ ಮತ್ತು ಅರ್ಥವನ್ನು ತೆಳುವಾಗಿಸಿಕೊಂಡಾಗ ಸುಗಮ ಸಂಗೀತ ಕಣ್ತೆರೆಯಿತು ಎಂದು ಊಹಿಸಬಹುದು. ಯಾಕೆಂದರೆ ಸುಗಮ ಸಂಗೀತದಲ್ಲಿ ಮೊದಲು ಹಾಡಿದವರೆಲ್ಲ ಆರಿಸಿಕೊಂಡದ್ದು ರಮ್ಯಮಾರ್ಗದ ಗೀತೆಗಳನ್ನೇ. ಅದಕ್ಕೂ ಮುಂಚೆ ದಾಸರ ಪದಗಳನ್ನು ಶಾಸ್ತ್ರೀಯ ಸಂಗೀತದ ಪಂಜರದಿಂದ ಹೊರತರಲು ಯತ್ನಿಸಿದವರೂ ಒಂದು ರೀತಿಯಲ್ಲಿ ಅದನ್ನು ಸುಗಮಗೊಳಿಸಲು ಯತ್ನಿಸಿದ್ದುಂಟು. ‘ಮಾಡು ಸಿಕ್ಕದಲ್ಲಾ ಮಾಡಿನ ಗೂಡ ಸಿಕ್ಕದಲ್ಲಾ’ ಅಂತ ಕಾಳಿಂಗರಾಯರು ಹಾಡಿದಾಗ ದಾಸರ ಪದಕ್ಕೂ ದೈವಿಕತೆಯನ್ನು ನಿರಾಕರಿಸುವ ಗುಣ ಮತ್ತು ಮೀರುವ ಶಕ್ತಿ ಇದೆ ಅಂತ ಗೊತ್ತಾಯಿತು.

ಅಶ್ವತ್ಥರ ಕಟ್ಟಾ ಆರಾಧಕರು ಕಾಳಿಂಗರಾಯರನ್ನು ಸುಗಮ ಸಂಗೀತದ ಪ್ರವರ್ತಕ ಪುರುಷ ಅಂತ ಕರೆಯುವುದನ್ನು ಅಷ್ಟಾಗಿ ಒಪ್ಪುವುದಿಲ್ಲ. ಆ ಕಾಲದಲ್ಲಿ ಕಾಳಿಂಗ ರಾಯರು ತಮ್ಮ ಮಿತಿಯಲ್ಲಿ ಕೆಲವು ಕವಿತೆಗಳನ್ನು ಹಾಡಿ ಜನಪ್ರಿಯಗೊಳಿಸಿರಬಹುದು. ಆದರೆ ಅವುಗಳು ಸುಗಮ ಸಂಗೀತದ ಸ್ವರೂಪಕ್ಕಿಂತ ಹೆಚ್ಚಾಗಿ ವೃತ್ತಿ ನಾಟಕಗಳ ಹಾಡುಗಳ ದಾಟಿಯಲ್ಲೇ ಇವೆ ಅನ್ನುತ್ತಾರೆ. ಆ ನಂತರ ಬಂದ ಮೈಸೂರು ಅನಂತಸ್ವಾಮಿ ಬೆರಗುಗೊಳಿಸುವಂತೆ ಹಾಡಿದರು. ಕಾಳಿಂಗರಾಯರ ಗಾಯನದಲ್ಲಿ ತಪ್ಪಿಸಿಕೊಂಡಿದ್ದ ಕೆಲವು ಭಾವಗಳು ಅನಂತಸ್ವಾಮಿ ಸಂಯೋಜನೆಯಲ್ಲಿ ಮತ್ತೆ ಸಂಗಮಿಸಿದವು. ಕಾವ್ಯದ ಅರ್ಥವನ್ನು ವಿಸ್ತರಿಸುವುದಕ್ಕಿಂತ ಕಾವ್ಯದ ಬೆರಗನ್ನು ಥಟ್ಟನೆ ಬೆಳಗಿಸುವುದೇ ಗಾಯಕ ಮತ್ತು ಸ್ವರ ಸಂಯೋಜಕನ ಗುರಿಯಾಗಿರಬೇಕು ಅಂತ ಅನಂತಸ್ವಾಮಿ ನಂಬಿಕೊಂಡಂತಿತ್ತು. ಹೀಗಾಗಿಯೇ ಅವರ ಸಂಯೋಜನೆಯಲ್ಲಿ ಒಂದು ರೀತಿಯ ಸರಾಗ ಮತ್ತು ಥಟ್ಟನೆ ನಿಂತು ಒಮ್ಮೆ ಕಣ್ಣರಳಿಸಿ ಹೇಗೆ ಎಂದು ಪ್ರಶ್ನಿಸಿ ಸಾಗುವ ಗುಣವಿದೆ. ಆ ಅರ್ಥದಲ್ಲಿ ಅವರದು ಗಜಲ್‌ಗಳನ್ನು ಅನುಸರಿಸಿದ ಸಂಯೋಜನೆ. ಗಜಲ್‌ಗಳೂ ಅಷ್ಟೇ. ತೆಳುವಾಗಿ ಸಾಗುತ್ತಾ ಇದ್ದಕ್ಕಿದ್ದಂತೆ ಒಂದು ಸತ್ಯವನ್ನು ಹೇಳಿ ಬೆರಗಾಗಿಸುವ ರಚನೆಗಳು.

ಇವರೆಲ್ಲರಿಗಿಂತ ಭಿನ್ನವಾಗಿ ಸ್ವರ ಸಂಯೋಜನೆ ಮಾಡಿದ, ಶಾಸ್ತ್ರೀಯತೆಯ ಚೌಕಟ್ಟಿನಿಂದ ಒಂಚೂರೂ ಅತ್ತಿತ್ತ ಸುಳಿಯದ ಎಚ್‌. ಕೆ. ನಾರಾಯಣ, ಟಿ. ಆರ್‌. ಶ್ರೀನಿವಾಸನ್‌, ಶ್ಯಾಮಲಾ ಭಾವೆ ಮುಂತಾದವರಿದ್ದಾರೆ. ಡಿ.ವಿ.ಜಿ.ಯವರ ‘ಏನೇ ಶುಕಭಾಷಿಣಿ’ ಎಂಬ ಒಂದೇ ಹಾಡಿಗೆ ರಾಗ ಸಂಯೋಜಿಸಿದ್ದಕ್ಕಾಗಿಯೇ ಶ್ರೀನಿವಾಸನ್‌ ಅವರನ್ನು ಜೀವನಪೂರ್ತಿ ನೆನಪಿಸಿಕೊಳ್ಳಬಹುದು. ‘ಹತ್ತು ವರುಷದಾ ಹಿಂದೆ ಮುತ್ತೂರ ತೇರಿನಲಿ’ ಎನ್ನುವ ಗೀತೆಯನ್ನು ನಾಸ್ಟಾಲ್ಜಿಯಾ ಅನುಭವ ಬರುವಂತೆ ಹಾಡಿದವರು ಶ್ಯಾಮಲಾ ಭಾವೆ. ಆದರೆ ಅವರೆಲ್ಲರೂ ಸುಗಮ ಸಂಗೀತಕ್ಕೇ ನಿಷ್ಠರಾಗಿ ಉಳಿಯಲಿಲ್ಲ. ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡರು ಅನ್ನುವುದು ಗೌರವಯುತ ಪದ. ಆದರೆ ಅಶ್ವತ್ಥರೊಬ್ಬರೇ ಸುಗಮ ಸಂಗೀತವನ್ನು ತೊರೆದು ಜೀವಿಸುವುದಕ್ಕೆ ಯತ್ನಿಸಿದವರಲ್ಲ. ಅವರ ಪ್ರತಿಭೆ ವಿಸ್ತಾರವಾದದ್ದು ಸುಗಮ ಸಂಗೀತದ ಪರಿಧಿಯಾಳಗೇ. ಹೀಗಾಗಿ ಒಂದು ಕವಿತೆಯ ಎಲ್ಲಾ ಮಗ್ಗುಲುಗಳನ್ನೂ ಸ್ಪರ್ಶಿಸಿ ನೋಡುವುದು ಅವರಿಗೆ ಸಾಧ್ಯವಾಯಿತು. ಒಂದು ರೀತಿಯಲ್ಲಿ ಅವರು ‘ಆಶು ಸ್ವರಸಂಯೋಜಕ’. ತಾವೇ ಸ್ವರ ಸಂಯೋಜಿಸಿ ಹಾಡಿದ ಗೀತೆಗಳನ್ನೇ ಅವರು ಇವತ್ತು ಮತ್ತೊಂದು ಅರ್ಥ ಹೊಳೆಯುವಂತೆ ಹಾಡಬಲ್ಲರು. ಬೇರೆಯವರ ಸಂಗೀತ ನಿರ್ದೇಶನದಲ್ಲಿ ಪೇಲವವಾಗಿ ಕಂಡ ಗೀತೆಗಳು ಅಶ್ವತ್ಥರ ಸ್ಪರ್ಶದಲ್ಲಿ ತನ್ನ ಸಂಪೂರ್ಣ ಅರ್ಥವನ್ನು ಬಿಟ್ಟುಕೊಟ್ಟದ್ದೂ ಉಂಟು.

ಒಂದು ಉದಾಹರಣೆ: ‘ನೀ ಹಿಂಗ ನೋಡಬ್ಯಾಡ ನನ್ನ’. ಆ ಹಾಡಿನಲ್ಲಿ ಬರುವ ‘ಮಲಗಿರುವ ಕೂಸು ಮಲಗಿರಲಿ ಅಲ್ಲಿ ಮುಂದಿನದು ದೇವರ ಚಿತ್ತ. ನಾ ತಡೀಲಾರೆ ಅದು ಯಾಕ ನೋಡತೀ ಮತ್ತ ಮತ್ತ ನೀ ಇತ್ತ...’ ಎಂಬ ಸಾಲುಗಳನ್ನು ಕೇಳಿ ಕಣ್ಣು ಮಂಜಾಗದಿದ್ದರೆ ಆಮೇಲೆ ಅಶ್ವತ್ಥರನ್ನು ದೂರಿ.

3.

ಅಶ್ವತ್ಥ್‌ ವಿಜ್ಞಾನದ ವಿದ್ಯಾರ್ಥಿ. ಕಲಿತದ್ದು ಹಿಂದುಸ್ತಾನಿ. ಹಾಗಾಗಿಯೇ ಅವರಿಗೆ ಒಂದು ರಾಗವನ್ನು ವಿಸ್ತರಿಸುವುದು ಸಾಧ್ಯವಾಗಿರಬೇಕು. ಕನ್ನಡ ಸಾಂಸ್ಕೃತಿಕ ಲೋಕದ ಜೊತೆ ಅವರ ಒಡನಾಟ ಗಮನಿಸಿದರೆ ಬೆರಗಾಗುತ್ತದೆ. ಹತ್ತೂಕ್ಕೂ ಹೆಚ್ಚು ಸಿನಿಮಾಗಳು ಕೇವಲ ಅಶ್ವತ್ಥರಿಂದಾಗಿಯೇ ಗೆದ್ದಿವೆ. ‘ಕಾಕನಕೋಟೆ’, ‘ನಾಗಮಂಡಲ’, ‘ಸಂತ ಶಿಶುನಾಳ ಶರೀಫ’, ‘ಚಿನ್ನಾರಿಮುತ್ತಾ’ , ‘ಮೈಸೂರ ಮಲ್ಲಿಗೆ’ ಸಿನಿಮಾಗಳ ಯಶಸ್ಸು ಪೂರ್ತಿಯಾಗಿ ಅಶ್ವತ್ಥರಿಗೇ ಸಲ್ಲಬೇಕು. ಅವರು ಸಂಗೀತ ನೀಡಿದ ಪ್ರತಿ ಚಿತ್ರದ ಒಂದು ಹಾಡಾದರೂ ಇವತ್ತಿಗೂ ಜನಪ್ರಿಯವಾಗಿವೆ.

ಅಶ್ವತ್ಥ ಶುದ್ಧ ರಾಗದ ದಾಸರೇನಲ್ಲ . ಅವರಿಗೆ ರಾಗದ ನಿಷ್ಠೆಗಿಂತ ಎಫೆಕ್ಟು ಮುಖ್ಯ ಅನ್ನುವವರಿದ್ದಾರೆ. ಆದರೆ ಭೀಮ್‌ಪಲಾಸ್‌ ರಾಗದ ‘ರಾಯರು ಬಂದರು ಮಾವನ ಮನೆಗೆ’ ಶುದ್ಧ ಹರಿಕಾಂಬೋಧಿಯಲ್ಲಿ ಸಂಯೋಜಿಸಿದ ‘ಒಂದಿರುಳು ಕನಸಿನಲಿ’, ವಕುಲಾಭರಣದಲ್ಲಿರುವ ‘ಬಳೆಗಾರ ಚೆನ್ನಯ್ಯ’ ಚಕ್ರವಾಕದ ‘ಮೋಹದ ಹೆಂಡತಿ ತೀರಿದ ಬಳಿಕ’, ಕಾಮವರ್ಧಿನಿ ರಾಗದಲ್ಲಿ ಮೂಡಿದ ‘ದೀಪವು ನಿನ್ನದೆ’ ಮಧ್ಯಮಾವತಿ ರಾಗದ ‘ಕೋಡಗನ ಕೋಳಿ ನುಂಗಿತ್ತಾ ’- ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಈ ಶುದ್ಧ ರಚನೆಗಳಷ್ಟೇ ಮಿಶ್ರ ಪಹಾಡಿಯ ‘ಸಿರಿಗೆರೆಯ ನೀರಿನಲಿ’ ಕೂಡ ಜನಪ್ರಿಯವಾಗಿದೆ ಎನ್ನುವುದೇ ಅಶ್ವತ್ಥರ ವೈವಿಧ್ಯಕ್ಕೆ ಸಾಕ್ಷಿ.

4.

ರಾಗದಷ್ಟೇ ದ್ವೇಷ ಕೂಡ ಅಶ್ವತ್ಥರಿಗೆ ಪ್ರಿಯ. ಹಿಂದೆ ತನ್ನನ್ನು ರೇಗಿಸಿದ ಲಂಕೇಶರನ್ನು ನಡುರಸ್ತೆಯಲ್ಲಿ ಠಳಾಯಿಸುತ್ತಾ ಅಟಕಾಯಿಸಿದ್ದನ್ನು ಈಗಲೂ ಅಶ್ವತ್ಥರ ಮಿತ್ರರು ನೆನಪಿಸಿಕೊಂಡು ನಗುತ್ತಾರೆ. ರಾಮಚಂದ್ರ ಶರ್ಮರನ್ನು ಬಹಿರಂಗವಾಗಿ ‘ತಲೆಕೆಟ್ಟ ಕವಿ’ ಅಂತ ಕರೆದವರು ಅವರು. ಈಗಲೂ ಸಿಟ್ಟು ಬಂದರೆ ರಾತ್ರೋ ರಾತ್ರಿ ಕಾರು ಹತ್ತಿ ತಮ್ಮನ್ನು ಬೈದವರ ಮನೆಗೆ ಹೋಗಿ ಅವರನ್ನು ಝಾಡಿಸಿ ಬರುತ್ತಾರೆ.

ಇನ್ನೊಬ್ಬರ ಪ್ರತಿಭೆಗೆ ಅಶ್ವತ್ಥ್‌ ಕಿಂಚಿತ್ತೂ ಗೌರವ ಕೊಡುವುದಿಲ್ಲ ಎನ್ನುವುದು ಅವರ ಕುರಿತು ಇರುವ ಆಕರ್ಷಕ ಆರೋಪಗಳಲ್ಲಿ ಒಂದು. ಸಿಟ್ಟಿನ ಮಟ್ಟಿಗೆ ಶಿವರಾಮಕಾರಂತರಿಗೆ ಅಶ್ವತ್ಥ್‌ ಸರಿಸಾಟಿ. ಕೆಲವೊಮ್ಮೆ ಕವಿ ಹೇಳದ ಅರ್ಥಗಳನ್ನೂ ತನ್ನ ಸ್ವರ ಸಂಯೋಜನೆ ಹೊರಡಿಸುತ್ತದೆ ಎಂದು ಕೂಡ ಅವರು ಭಾವಿಸುವುದು ಉಂಟು. ಹೀಗಾಗಿ ಕವಿ ಮತ್ತು ಕಾವ್ಯ ಹಿಂದಾಗಿ ಅಶ್ವತ್ಥ್‌ ಗಾಯನವೇ ಮುಂದಾಗಿ ಬಿಡುತ್ತದೆ.

ತಾರಕದಲ್ಲಿ ಹಾಡುತ್ತಾರೆ ಅನ್ನುವ ಆರೋಪವನ್ನು ಅಷ್ಟೇ ಜೋರಾಗಿ ಮಾತಾಡಿ ನಿರಾಕರಿಸುವ ಶಕ್ತಿಯೂ ಅಶ್ವತ್ಥರಿಗೆ ಇದೆ. ಅವರ ಮುಂದೆ ಮಾತಿಗೆ ಕೂತವರು ಸ್ತಂಭೀಭೂತರು. ಎದುರು ಮಾತಾಡಿದರೆ ಶತ್ರುಗಳಾಗುವ ಅಪಾಯ ಇಲ್ಲದಿಲ್ಲ. ಅಪಾರ ಹಾಸ್ಯ ಪ್ರಜ್ಞೆಯೂ ಕುಹಕವೂ ವ್ಯಂಗ್ಯವೂ ಮೇಳೈಸಿದ ಅಸೀಮ ವ್ಯಕ್ತಿ ಎಂದು ಅವರ ಶತ್ರುಗಳೂ ಅಶ್ವತ್ಥರನ್ನು ಕುರಿತು ಭಯ ಪಡುತ್ತಾರೆ.

ಹಾಡಿನ ಅರ್ಥವನ್ನೇ ಕೆಡಿಸುವ ಶಕ್ತಿಯೂ ಅಶ್ವತ್ಥರಿಗೆ ಇದೆ ಎಂದು ಹೇಳುವವರೂ ಇದ್ದಾರೆ. ಉದಾಹರಣೆಗೆ ‘ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ’ ಹಾಡಿನಲ್ಲಿ ಬರುವ ಈ ಸಾಲನ್ನು ನೋಡಿ -

‘ಅತ್ತ ಯಾರೋ ಹೋದ, ಇತ್ತ ಯಾರೋ ಬಂದ ಕಡೆಗೆಲ್ಲ ಕಣ್ಣು ಬಿದ್ದು...’
ಇದನ್ನು ಅಶ್ವತ್ಥ್‌ ರಾಗಕ್ಕೆ ಅಳವಡಿಸಿದ್ದು ಹೀಗೆ -
‘ಅತ್ತ ಯಾರೋ ಹೋದ , ಇತ್ತ ಯಾರೋ ಬಂದss
ಕಡೆಗೆಲ್ಲ ಕಣ್ಣು ಬಿದ್ದು...’

ಶತ್ರುಗಳಷ್ಟೇ ಮಿತ್ರರನ್ನೂ ಸಂಪಾದಿಸಿರುವ ಅಶ್ವತ್ಥರು ಅಪಾತ್ರರನ್ನೂ ಅನಗತ್ಯವಾಗಿ ಎತ್ತರಕ್ಕೇರಿಸುವುದುಂಟು. ಹೀಗಾಗಿ ಅವರ ಅತ್ಯುತ್ತಮ ರಾಗ ರತ್ನಮಾಲಾ ಪ್ರಕಾಶ್‌, ಅತಿ ಕೆಟ್ಟ ರಾಗಸಂಯೋಜನೆ ಮುದ್ದುಕೃಷ್ಣ ಎನ್ನುವವರಿದ್ದಾರೆ. ಆದರೆ ಅತಿರೇಕಕ್ಕೆ ಹೋದಾಗಲೇ ಅತ್ಯುತ್ತಮವಾದದ್ದೂ ಹೊರಹೊಮ್ಮುತ್ತದೆ ಎಂದು ನಂಬಿರುವ ಅನೇಕರಿಗೆ ಅಶ್ವತ್ಥ್‌ ಮತ್ತೊಂದು ಉದಾಹರಣೆ.

ನಾಡಿದ್ದು ಭಾನುವಾರ, ಜೂನ್‌ 8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ದಿನವಿಡೀ ಅಶ್ವತ್ಥರದೇ ರಾಜ್ಯಭಾರ. ಅವರ ಶಕ್ತಿ ಮತ್ತು ಮಿತಿಗಳನ್ನು ಆ ಕಾರ್ಯಕ್ರಮವೇ ಬಿಚ್ಚಿಡಲಿ.

ಮುಂದಿನದು ದೇವರಾ... ಚಿತ್ತ !

(ಸ್ನೇಹ ಸೇತು- ‘ಹಾಯ್‌ ಬೆಂಗಳೂರು’)


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X