ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತಿನ ಹಾರದಂತೆ ನುಡಿಯುವವರಿಗೆ ಮತ್ತೆರಡು ಮಾತು

By Staff
|
Google Oneindia Kannada News

*ಜಾನಕಿ

George Orwellಮೊದಲು ಈ ನಾಲ್ಕು ಪ್ಯಾರಾಗಳನ್ನು ಓದಿ. ಇವನ್ನು ಬರೆದವರು ಯಾರು ಅನ್ನುವುದನ್ನು ಸದ್ಯಕ್ಕೆ ಗುಪ್ತವಾಗಿಡೋಣ. ಅವರೆಲ್ಲ ಕನ್ನಡದ ಹೆಸರಾಂತ ವಿಮರ್ಶಕರು ಅನ್ನುವುದು ನೆನಪಿರಲಿ, ಸಾಕು.

1. ‘ಈ ತನಕ ಗಮನಿಸಿದ ಹಾಗೆ, ಕನ್ನಡ ಭಾಷೆ-ಲಿಪಿ-ವಾಙ್ಮಯ-ಸಾಹಿತ್ಯ ಹಾಗೂ ಕಲಾವಾಹಿನಿಗಳು, ನೃಪತುಂಗ ಪೂರ್ವದ ಎಂಟು ಹತ್ತು ಶತಮಾನಗಳುದ್ದವೂ ಕನ್ನಡದ ಛಾಯೆ ಚಹರೆಗಳನ್ನೊಡಮೂಡಿಸಿಕೊಳ್ಳುತ್ತ ಒಂದರೊಡನೊಂದು ಬೆರೆತುಕೊಳ್ಳುತ್ತ ಬಂದವು ಮತ್ತು ಪರ್ಯಾಯವಾಗಿ, ಯಾವುದೇ ಸುಸಂಸ್ಕೃತ ಮಾನವ ಸಮುದಾಯಕ್ಕೂ ತಾನು ಸಮನೆಂದುಕೊಳ್ಳಬಹುದಾದ ಕನ್ನಡ ಸಮುದಾಯವಾಹಿನಿಯನ್ನು ರೂಪಿಸಿದವು.’

2.‘ ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯವನ್ನು ಒಟ್ಟಿಗೆ ನೋಡಿದಾಗ ಎದ್ದು ಕಾಣುವ ಸಂಗತಿಯೆಂದರೆ ಪಶ್ಟಿಮದ ಪ್ರಭಾವದ ಹೆಚ್ಚಳ. ಒಂದು ಕಾಲಕ್ಕೆ ವಸಾಹತುವಾದದ ಒತ್ತಡದಲ್ಲಿ ಅನಿವಾರ್ಯವಾಗಿದ್ದ ಈ ಪ್ರಭಾವ ಕಳೆದ ಐವತ್ತು ವರ್ಷಗಳಲ್ಲಿ ಸ್ವತಂತ್ರ ಆಯ್ಕೆಯಾಗಿ ತಲೆದೋರಿದೆ. ಇದರ ಜೊತೆಗೆಯೇ ಈ ಪ್ರಭಾವದಿಂದ ಮುಕ್ತವಾಗಿ ಸ್ವಸಂಸ್ಕೃತಿಯ ಮೂಲಗಳಿಗೆ ಮರಳುವ ಇಚ್ಛೆಯೂ ಪ್ರಬಲವಾಗಿದೆ.’

3.‘ ಕಥನ ಪರಂಪರೆಯ ಮುಖ್ಯ ನಿಯಮವೆಂದರೆ ಸಾತತ್ಯ. ಸಾತತ್ಯದ ತತ್ವವನ್ನು ಸುಲಭವಾಗಿ ಅಲ್ಲಗಳೆಯಲು ಬರುವುದಿಲ್ಲ. ತಂದೆ ಮಗ ಮೊಮ್ಮಗ ಹೀಗೆ ವಂಶಾವಳಿಯಲ್ಲಿ, ಒಬ್ಬ ರಾಜ ಸತ್ತು ಅವನ ಹಿರಿಯ ಮಗ ರಾಜನಾಗುವ ಸಂದರ್ಭದಲ್ಲಿ, ಸೂರ್ಯೋದಯ ಸೂರ್ಯಾಸ್ತಗಳ ಅನಿವಾರ್ಯವಾದ ವ್ಯಾಪಾರದಲ್ಲಿ ಹೀಗೆ ಜೀವನದ ಅನೇಕ ಅವಸ್ಥೆಗಳಲ್ಲಿ ಸಾತತ್ಯದ ತತ್ವ ನಿಯಾಮಕವಾಗಿದೆ.’

4. ಇಲ್ಲಿ ಒಂದು ಮಾತನ್ನು ಒತ್ತಿಹೇಳಬೇಕು. ಅನಂತಮೂರ್ತಿಯವರು ಕೃತಿಯುದ್ದಕ್ಕೂ ಸಫಲವಾಗಿ ತೋರಿಸುವುದು ಅಣ್ಣಾಜಿ ಅಥವಾ ಗೋಪಾಲ ರೆಡ್ಡಿಯವರ ಹಿಪಾಕ್ರಸಿ ಅಲ್ಲ. ಮತ್ತೆ ಸಾಧಾರಣ ನಿಯಮದಂತೆ ಎಲ್ಲ ಮನುಷ್ಯರ ವ್ಯಕ್ತಿತ್ವವೂ ಒಳ್ಳೆಯ-ಕೆಟ್ಟ ಗುಣಗಳ ಮಿಶ್ರಣಗಳಿಂದ ಕೂಡಿರುತ್ತದೆ ಎಂದೂ ಅಲ್ಲ. ಅದಕ್ಕಿಂತ ಮುಖ್ಯವಾಗಿ ಆಳದಲ್ಲೆ, ಈ ಜಗತ್ತಿನ ಸ್ಥಿತಿಯಲ್ಲಿಯೇ ಅಸ್ಥಿತಿ ಇದೆ, ವ್ಯವಸ್ಥೆಯಲ್ಲಿಯೇ ಅವ್ಯವಸ್ಥೆ ಇದೆ ಮತ್ತು ಒಂದು ಇನ್ನೊಂದರ ಬೀಜವಾದ ಕಾರಣ ಒಳಿತು-ಕೆಡಕು, ವ್ಯವಸ್ಥೆ- ಅವ್ಯವಸ್ಥೆ, ಸ್ಥಿತಿ- ಅಸ್ಥಿತಿ ಇವು ಒಂದು ಮತ್ತೊಂದಕ್ಕೆ ಜನ್ಮಕೊಡುತ್ತಾ ಒಂದನ್ನು ಮತ್ತೊಂದು ಬೆಳೆಸುತ್ತಾ, ವಿರೋಧಿಸುತ್ತಾ, ಪೋಷಿಸುತ್ತಾ-ಹೀಗೆ ದ್ವಂದ್ವಾತ್ಮಕವಾಗಿ ಈ ದ್ವಂದ್ವ ಜಗತ್ತಿನಲ್ಲಿವೆ ಎಂಬ, ಮೂಲದಲ್ಲಿ ದಾರ್ಶನಿಕ ರೂಪದ ಸತ್ಯವನ್ನು ಸಾಹಿತ್ಯಿಕವಾಗಿ ಅನಂತಮೂರ್ತಿಯವರು ನಮಗೆ ಸಾಕಾರಪಡಿಸುತ್ತಾರೆ.

ಈ ನಾಲಕ್ಕು ಉದಾಹರಣೆಗಳೂ ಎಷ್ಟು ಕ್ಲಿಷ್ಟವಾಗಿವೆ ಮತ್ತು ಎಷ್ಟೊಂದು ತಿಣುಕಿದರೂ ಏನನ್ನೂ ಹೇಳುವುದಿಲ್ಲ ಅನ್ನುವುದನ್ನು ಗಮನಿಸಿ.

-2-

ಕನ್ನಡದ ಸ್ಥಿತಿಗತಿಯ ಬಗ್ಗೆ ಇವತ್ತು ಮಾತಾಡುವವರೆಲ್ಲರೂ ನಮ್ಮ ಭಾಷೆ ಸವಕಲಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮತ್ತು ಮಮ್ಮಲ ಮರುಗುತ್ತಾರೆ. ರೇಡಿಯೋಸಿಟಿ ಎಫ್ಫೆಮ್‌ 91ನ ನಿರೂಪಕಿಯ ಬಾಯಿಯಿಂದ ಸರಾಗವಾಗಿ ಹೊರಡುವ ಮಾತುಗಳಿಗೆ ನೀರಿಳಿಯದ ಗಂಟಲೊಳ್‌ ಕಡುಬು ತುರುಕಿದಂತೆ ಮಾತಾಡುವ ಕನ್ನಡ ರೇನ್‌ಬೋ ನಿರೂಪಕಿಯ ಮಾತುಗಳನ್ನು ಹೋಲಿಸಿ ಕನ್ನಡ ಕರ್ಣಕಠೋರವಾಗಿದೆ ಅನ್ನುತ್ತಾರೆ. ಕನ್ನಡ ಮಾತಾಡುವವರು ಕಡಿಮೆಯಾಗಿರುವುದೂ ಇಂಗ್ಲಿಷ್‌ ಮತ್ತು ಹಿಂದಿ ಎಲ್ಲರ ನಾಲಗೆಯಿಂದ ಸಲೀಸಾಗಿ ಹೊರಳುತ್ತಿರುವುದೂ ಕನ್ನಡದ ದುಸ್ಥಿತಿಗೆ ಕಾರಣ ಎನ್ನುವವರೂ ಇದ್ದಾರೆ. ಕನ್ನಡವನ್ನು ಉಳಿಸಿಕೊಳ್ಳಬೇಕು ಅನ್ನುವುದು ಒಂದು ಭಾವನಾತ್ಮಕ ಅಗತ್ಯವಷ್ಟೇ ಆಗಿಬಿಟ್ಟಿರೋದರಿಂದ, ಅದೊಂದು ಸರ್ವೈವಲ್‌ನ ಪ್ರಶ್ನೆಯಾಗದೇ ಇರೋದರಿಂದ ಹೀಗಾಗಿದೆ ಎಂದು ಭಾಷೆಯ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶವನ್ನು ತೆರೆದಿಡುವವರೂ ಇದ್ದಾರೆ. ಕನ್ನಡವೇ ಬೇಕು ಎಂದು ಪಟ್ಟು ಹಿಡಿಯುವುದು ವಿದ್ಯುತ್‌ ದೀಪಗಳಿಗಿಂತ ಎಳ್ಳೆಣ್ಣೆಯ ಕಾಲುದೀಪವೇ ಕಣ್ಣಿಗೆ ಒಳ್ಳೆಯದು, ಕಾರಿನಲ್ಲಿ ಹೋಗುವುದಕ್ಕಿಂತ ಸೈಕಲ್ಲಿನಲ್ಲಿ ಪಯಣಿಸುವುದೇ ಆರೋಗ್ಯಕಾರಿ ಎನ್ನುವ ವಾದದಂತೆ ತಮಾಷೆಯಾಗಿಯೂ ಅಪ್ರಾಯೋಗಿಕವಾಗಿಯೂ ಕಾಣಿಸಿದರೆ ಅದಕ್ಕೆ ಕಾರಣ ಬದಲಾಗಿರುವ ನಿಲುವಷ್ಟೇ ಅಲ್ಲ, ಕನ್ನಡವನ್ನು ಬರೆಯುವವರ ನಿರ್ಲಕ್ಪ್ಯ ಕೂಡ.

ಒಬ್ಬ ಲೇಖಕನೋ ಬರಹಗಾರನೋ ಅರ್ಥವಾಗದಷ್ಟು ದಡ್ಡತನದಿಂದ ಕನ್ನಡವನ್ನು ಬಳಸಿದರೆ ಅದರಿಂದ ಇಡೀ ಕನ್ನಡಭಾಷೆಯ ಬಗ್ಗೆಯೇ ನಿರುತ್ಸಾಹ ಮತ್ತು ಅನಾಸಕ್ತಿ ಮೂಡುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ರಾಜಕೀಯ ಮತ್ತು ಆರ್ಥಿಕ ಕಾರಣಗಳೂ ಒಂದು ಭಾಷೆಯನ್ನು ಅವನತಿಯತ್ತ ಒಯ್ಯುತ್ತವೆ. ಜೀವನದಲ್ಲಿ ಸೋಲುಂಡವನು ಕುಡುಕನಾಗುತ್ತಾನೆ, ಕುಡುಕನಾದ್ದರಿಂದ ಮತ್ತಷ್ಟು ಸೋಲುತ್ತಾನೆ ಎಂಬಂತೆ ಕನ್ನಡ ರೇಜಿಗೆ ಹುಟ್ಟಿಸುವ ಮತ್ತು ಹೇಳಬೇಕಾದ್ದನ್ನು ಹೇಳಲಾಗದ ಭಾಷೆಯಾಗಿರುವುದಕ್ಕೆ ನಮ್ಮ ಚಿಂತನೆಗಳು ಅಷ್ಟು ದರಿದ್ರವಾಗಿರುವುದೂ ಚಿಂತನೆ ಅಷ್ಟೊಂದು ದರಿದ್ರವಾಗಿರುವುದಕ್ಕೆ ಭಾಷೆ ಸವಕಲಾಗಿರುವುದೂ ಕಾರಣ ಎನ್ನಬಹುದು. ನಾವು ಬರೆಯುವ ಕನ್ನಡವಂತೂ ಇನ್ನೂ ಹಳೆಯ ಹಳವಂಡಗಳಲ್ಲಿ ಸಿಕ್ಕು ತೊಳಲಾಡುತ್ತಿದೆ. ಓದಬೇಕು ಅನ್ನಿಸುವಷ್ಟು ಗರಿಗರಿಯಾಗಿ ಭಾಷೆಯನ್ನು ಬಳಸುವವರು ಕಡಿಮೆಯಾಗಿದ್ದಾರೆ. ನಮ್ಮ ಮಾತುಗಳು, ಬರಹಗಳು ಹಳೆಯ ರೂಪಕಗಳ, ತೀರಾ ಸವಕಲಾದ ಈಡಿಯಮ್ಮುಗಳ ಭಾರಕ್ಕೆ ಸಿಕ್ಕಿ ನಲುಗುತ್ತಿವೆ.

ನಾವು ಬರೆಯುವಾಗ ಎಂಥ ರೂಪಕಗಳನ್ನೂ ಹೋಲಿಕೆಗಳನ್ನೂ ಬಳಸುತ್ತೇವೆ ಅನ್ನುವುದನ್ನು ನೋಡಿ. ತುಂಬ ಬುದ್ಧಿವಂತನನ್ನು ಈಗಲೂ ಕುಶಾಗ್ರಮತಿ ಅನ್ನುತ್ತೇವೆ. ಹಾಗಂದರೇನು ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಗೊತ್ತಿರುವುದಿಲ್ಲ. ಅದೇ ಆಶ್ರಮಗಳಲ್ಲಿ ಸಂಸ್ಕೃತ ಕಲಿಯುತ್ತಿದ್ದ ಹುಡುಗರಿಗೆ ಕುಶಾಗ್ರಮತಿ ಎಂದಾಕ್ಷಣ ಕುಶ ಅಂದರೆ ದರ್ಬೆ ಅಂತಲೂ ಕುಶಾಗ್ರಮತಿ ಅಂದರೆ ದರ್ಬೆಯ ತುದಿಯಂತೆ ಚೂಪಾದ ಮತಿಯುಳ್ಳವನು ಅನ್ನುವುದೂ ಹೊಳೆಯುತ್ತಿತ್ತು. ದರ್ಬೆಯೂ ಆಶ್ರಮದ ಶಿಕ್ಷಣವೂ ಮಾಯವಾಗುತ್ತಿದ್ದಂತೆ ಆ ಶಬ್ದ ತನ್ನ ಔಚಿತ್ಯವನ್ನೂ ವಿಸ್ತಾರವನ್ನೂ ಚಿತ್ರಕಶಕ್ತಿಯನ್ನೂ ಕಳಕೊಂಡು ನಿಸ್ಸಾರವಾಯಿತು. ಹಾಗೇ ಕರತಲಾಮಲಕ ಅಂದರೆ ಅಂಗೈಯ ನೆಲ್ಲಿಕಾಯಿಯಷ್ಟು ಸ್ವಷ್ಟ ಮತ್ತು ಲೀಲಾಜಾಲ ಎನ್ನುವುದು ಯಾರಿಗಾದರೂ ಅರ್ಥವಾಗಲು ಸಾಧ್ಯವೇ? ಹುಲಿಯ ಭೀತಿಯೇ ಇಲ್ಲದ ನಮ್ಮ ಮೇಲೆ ಅತ್ತದರಿ ಇತ್ತ ಪುಲಿ ಎಂಬ ನುಡಿಗಟ್ಟು ಹೇಗೆ ಪರಿಣಾಮ ಬೀರಲು ಸಾಧ್ಯ? ಬಂದ ದಾರಿಗೆ ಸುಂಕವಿಲ್ಲ ಎನ್ನುವ ಮಾತು ಇವತ್ತು ಹೇಗೆ ಪ್ರಸ್ತುತವಾಗುತ್ತದೆ? ಭಯಗೊಂಡಾಗ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು ಅಂದರೆ ಅವಲಕ್ಕಿ ಕುಟ್ಟುವುದನ್ನು ಎಂದೋ ಮರೆತಿರುವ ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

ಪತ್ರಿಕೆಗಳಲ್ಲಿ...

ನಮ್ಮ ಪತ್ರಿಕೆಗಳಂತೂ ವರ್ಷಗಳಿಂದ ಅರ್ಥವಿಲ್ಲದ ಪದಪುಂಜಗಳನ್ನು ಬಳಸಿಕೊಂಡು ಬರುತ್ತಿವೆ. ಯಾವನೋ ರಾಜಕಾರಣಿ ಗೆದ್ದರೆ ಅದನ್ನು ಚರಿತ್ರಾರ್ಹ ವಿಜಯ ಎಂದು ವರ್ಣಿಸುತ್ತೇವೆ. ಸಂಶೋಧಕರಿಗೆ ಸವಾಲಾಗಿದೆ ಎಂದು ಯಾವುದೋ ಕಾವ್ಯದ ಬಗ್ಗೆ ಬರೆಯುತ್ತಾರೆ. ಸಮರ್ಥ ವ್ಯಕ್ತಿಗೆ ಸೂಕ್ತ ಪ್ರಶಸ್ತಿ ಎಂದು ಪತ್ರಿಕೆಯಾಂದು ಹೆಡ್ಡಿಂಗು ಕೊಡುತ್ತದೆ. ಅರ್ಥಸಾಧ್ಯತೆಗಳನ್ನು ಸೂಚಿಸುವ ಕತೆಗಳು ಎಂದು ಇನ್ಯಾರೋ ಬರೆಯುತ್ತಾರೆ. ಅರ್ಥಸಾಧ್ಯತೆ ಎಂಬ ಪದಕ್ಕೆ ಸಾಹಿತಿಗಳ ವಲಯದಿಂದಾಚೆ ಅರ್ಥವುಂಟೇ? ಇಲ್ಲ ಎಂದು ಒಪ್ಪುವುದಾದರೆ ಹಾಗೇಕೆ ಬರೆಯುತ್ತೀರಿ? ನಿಮ್ಮ ಗುರಿ ಮೂರುಮುಕ್ಕಾಲು ಸಾಹಿತಿಗಳನ್ನು ತಲುಪುದಷ್ಟೇ ಆಗಿದೆಯಾ?

ಇಂಥ ಏನನ್ನೂ ಹೇಳದ ಪದಗಳ ದೊಡ್ಡ ಭಂಡಾರವೇ ನಮ್ಮಲ್ಲಿದೆ. ಮಹತ್ತರ ಸಾಧನೆ, ಅರ್ಥಪೂರ್ಣ ವಿಚಾರಧಾರೆ, ಸ್ಪಷ್ಟಪಡಿಸಿದರು, ಬೇರುಮಟ್ಟದ ಕಾರ್ಯಕರ್ತರು, ತೀವ್ರ ಸ್ವರೂಪದ ರಾಜಕೀಯ ಚಟುವಟಿಕೆ, ಕರೆ ನೀಡಿದರು, ಸ್ಮರಣೀಯ ಸಮಾರಂಭ, ಐತಿಹಾಸಿಕ ಸಮಾವೇಶ, ರಾಜವೈಭವ.... ಹೀಗೆ ಅರ್ಥ ಕಳಕೊಂಡು ಬರಡಾಗಿರುವ ಪದಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇವುಗಳನ್ನು ಬಳಸುವುದರಿಂದ ಒಂದು ವರದಿಗೆ ವರದಿಯ ಸ್ವರೂಪ ಬರುತ್ತದೆ ನಿಜ. ಆದರೆ ಎಲ್ಲ ವರದಿಗಳೂ ಒಂದೇ ಥರ ಓದಿಸಿಕೊಳ್ಳುತ್ತವೆ. ಪ್ರಧಾನಿ ದೇಶಭಕ್ತರಿಗೆ ನೀಡಿದ್ದೂ ಕರೆ, ಜೈಲು ಮಂತ್ರಿ ಅಪರಾಧಿಗಳಿಗೆ ನೀಡಿದ್ದೂ ಕರೆ, ಇಂತಿಂಥಾನಂದರು ದೈವಭಕ್ತರಿಗೆ ನೀಡುವುದೂ ಕರೆ!

ಇಂಥ ಅರ್ಥವಿಲ್ಲದ ಪದಗಳನ್ನು ಅತಿಯಾಗಿ ಬಳಸುವವರು ಇಬ್ಬರು; ಸಾಹಿತ್ಯ ವಿಮರ್ಶಕರು, ಕಲಾವಿಮರ್ಶಕರು ಮತ್ತು ರಾಜಕೀಯ ವರದಿಗಾರರು. ಸಾಹಿತ್ಯ ವಿಮರ್ಶೆಯಲ್ಲಂತೂ ಜೀರ್ಣಿಸಿಕೊಳ್ಳಲಾಗದ ಪದಗಳು ಸಾಲಿಗೆರಡರಂತೆ ಸಿಗುತ್ತವೆ. ಕಲಾವಿಮರ್ಶೆಯ ಒಂದು ಸಾಲು ಓದಿನೋಡಿ;

‘ಸುತ್ತಲಿನ ಎಲ್ಲ ಅನುಭವಗಳನ್ನು ದಕ್ಕಿಸಿಕೊಳ್ಳಲು ಹಾತೊರೆಯುವ ಚನ್ನಬಸವಪ್ಪ ಹುಣಸೇಕಾಯಿ ತೊರಗಲ್ಲ ಇವರ ಗ್ರಹಿಕೆಗಳು ಸಮಕಾಲೀನ. ಆದರೆ ಅಭಿವ್ಯಕ್ತಿಯಲ್ಲಿ ಈ ಗ್ರಹಿಕೆಗಳು ದುಡಿಸಿಕೊಂಡಿರುವ ಮಾಧ್ಯಮದ ನಿರ್ವಹಣೆ ಸಮಕಾಲೀನವಲ್ಲ. ಆಧುನಿಕ ಕಲೆಯ ಅರ್ಥವನ್ನು, ಕಲಾಕೃತಿಗಳ ಬಗೆಗೆ ವಿವರಗಳನ್ನು ಇಂದಿಗೂ ಕೇಳುತ್ತಿರುವ ಸಾಮಾನ್ಯ ಜನರಿಗೆ ಕಲೆ ಎಂದರೆ, ಅದು ನೋಡುಗರಿಗೆ ನೀಡಬಹುದಾದುದು ಎಂದರೆ ಅನುಭವ ಮಾತ್ರ. ಈ ಅನುಭವವನ್ನು ಅನುಭವಿಸುವಿಕೆಯಲ್ಲಿ ವೀಕ್ಷಕರ ಪಾಲು, ಪಾತ್ರಗಳೂ ಗಣನೀಯ. ಚನ್ನಬಸವಪ್ಪ ಹುಣಸೇಕಾಯಿ ತೊರಗಲ್ಲರ ಕೃತಿಗಳು ತೈಲವರ್ಣಗಳ ಜತೆ ಕೊಲಾಜ್‌ ತಂತ್ರವನ್ನೂ ಹಲವು ಕೃತಿಗಳಲ್ಲಿ ತಂದುಕೊಂಡಿದ್ದಾರೆ. ಕಲೆಯ ವ್ಯಾಕರಣ ಮೀರುವ ಉದ್ದೇಶ ಸ್ವಾಗತಾರ್ಹ’.

ಈ ಸಾಲುಗಳಿಂದ ಯಾರ ಬಗ್ಗೆಯಾಗಲೀ, ಯಾವುದೇ ಕಲೆಯ ಕುರಿತಾಗಲೀ ಯಾರಿಗೇ ಆಗಲಿ ಏನಾದರೂ ಅರ್ಥವಾದರೆ ದಯವಿಟ್ಟು ವಿವರಿಸಿ. ಇಂಥ ಕನ್ನಡ ನಿಜಕ್ಕೂ ನಮಗೆ ಬೇಕಾ? ಇಂಥ ಅರ್ಥಹೀನ ಪದಗಳ ಕಂತೆಯನ್ನು ಹೊಸೆಯುವವರನ್ನು ನಾವು ಗೌರವಿಸಬೇಕಾ?

ಕಾಲಕಾಲಕ್ಕೆ ಹೊಸಹೊಸ ಇಮೇಜರಿಗಳನ್ನು ಒಂದು ಭಾಷೆ ಹುಡುಕಿಕೊಳ್ಳಬೇಕು. ಇವತ್ತು ನಮ್ಮ ಮನೆಯಿಂದ ನನ್ನ ಗೆಳೆಯನ ಮನೆಗೆ ಕೂಗಳತೆಯ ದೂರ ಎಂದರೆ ಅದು ಹಳೆಯ ಮಾತು. ಈಗ ಅಕ್ಕಪಕ್ಕ ಮನೆಗಳಿರುತ್ತವೆ. ಕೂಗಳತೆಯಲ್ಲಿ ನೂರಾರು ಮನೆಗಳಿರುತ್ತವೆ. ರೇಡಿಯೋಸಿಟಿಯ ಹಾಡು ಕೇಳಿಕೊಂಡೋ ಕ್ಯಾಸೆಟ್‌ ಹಾಕಿಕೊಂಡೋ ಕಾರಲ್ಲಿ ಹೋಗುವವನು ‘ನನ್ನ ಮನೆಯಿಂದ ಗೆಳೆಯನ ಮನೆಗೆ ಮೂರು ಹಾಡಿನ ದೂರ’ ಎಂದೂ ಬಳಸಬಹುದು.

ಚರಿತ್ರಾರ್ಹ ಗೆಲುವು ಅನ್ನುವ ಮಾತಿನಲ್ಲಿರುವ ನಿರರ್ಥಕತೆ ಗಮನಿಸಿ. ನಮ್ಮ ದೇಶ ಚರಿತ್ರೆಯಿಂದ ದೂರವಾಗಿ ಐವತ್ತು ವರುಷಗಳೇ ಸಂದವು. ಭಾರತದೇಶದ ಚರಿತ್ರೆ ಇನ್ನೂ ಸ್ವಾತಂತ್ರ ಸಂಗ್ರಾಮದಿಂದ ಈಚೆಗೆ ಬಂದಿಲ್ಲ. ಒಂದು ರಾಷ್ಟ್ರ ಪ್ರಜಾಪ್ರಭುತ್ವಕ್ಕೆ ಒಳಪಟ್ಟ ತಕ್ಷಣ ಅದು ಚರಿತ್ರೆಯ ಹಂಗಿನಿಂದ ಮುಕ್ತವಾಗುತ್ತದೆ. ನಂತರ ಅಲ್ಲಿರುವುದು ಕೇವಲ ಸಮಾಜಶಾಸ್ತ್ರ ಮಾತ್ರ. ಹೀಗಾಗಿ 1947, ಆಗಸ್ಟ್‌ 15ರ ನಂತರ ಭಾರತಕ್ಕೆ ಚರಿತ್ರೆಯಿಲ್ಲ. ಹಾಗೆ ನೋಡಿದರೆ ಯಾವ ದೇಶಕ್ಕೂ ಈಗ ಚರಿತ್ರೆಯ ತುರ್ತು ಇದ್ದಂತೆ ಕಾಣುವುದಿಲ್ಲ. ಚರಿತ್ರೆ ಏನಿದ್ದರೂ ರಾಜಮಹಾರಾಜರಿಗೆ ಸಂಬಂಧಿಸಿದ್ದು. ಅಂದಮೇಲೆ ಚರಿತ್ರಾರ್ಹ ವಿಜಯ ಅನ್ನುವುದಕ್ಕೆ ಅರ್ಥವೇ ಇಲ್ಲ.

-3-

ಈಗ ಆರಂಭದಲ್ಲಿ ಕೊಟ್ಟಿರುವ ನಾಲ್ಕೈದು ಪ್ಯಾರಾಗಳನ್ನು ಓದಿನೋಡಿ. ಕನ್ನಡ ಸಾಹಿತ್ಯವನ್ನು ವಿಮರ್ಶೆಯನ್ನು ಓದುವುದಕ್ಕೆ ಕನ್ನಡ ಬಲ್ಲ ಜಾಣರೂ ಯಾಕೆ ಹೆದರುತ್ತಾರೆ ಅನ್ನುವುದು ಗೊತ್ತಾಗುತ್ತದೆ. ಇದು ಸಾಹಿತಿಗಳಿಗೂ ವಿಮರ್ಶಕರಿಗೂ ಗೊತ್ತಿಲ್ಲ ಎಂದೇನಲ್ಲ. ಗೊತ್ತಿದ್ದೂ ಅವರು ಹಾಗೇ ಬರೆಯುವುದಕ್ಕೆ, ಹಾಗೇ ಮಾತಾಡುವುದಕ್ಕೆ ಇಷ್ಟಪಡುತ್ತಾರೆ. ಭಾಷೆಯ ಮೂಲಕ ಮುಚ್ಚಿಕೊಂಡಷ್ಟೂ ತಾವು ದೊಡ್ಡವರು ಎಂದು ಭಾವಿಸುತ್ತಾರೆ.

ದೇವನೂರು ಮಹಾದೇವ ಎಷ್ಟು ಸರಳವಾಗಿ ಬರೆದರು ನೋಡಿ;

‘ನಾನು ಅಕಸ್ಮತ್ತು ಓದಿದವನು. ಹಾಗೇನೇ ಅಕಸ್ಮತ್ತು ಕಥೇನೋ ಕವನಾನೊ ಬರೆದವನು. ಆ ಆಕಸ್ಮಿಕಗಳಲ್ಲಿ ಏನಾರು ಒಂದು ಹಳಿತಪ್ಪಿದ್ದರೆ ನಾನು ಇಲ್ಲಿರ್ತ ಇರಲಿಲ್ಲ. ಎಲ್ಲೋ ನಮ್ಮೂರಲ್ಲೊ ಜೀತಮಾಡ್ತ ಇರಬೇಕಿತ್ತು. ಯಾರ್ದೊ ಹೊಲದಲ್ಲಿ ದುಡೀತಾ ಆ ದುಡಿಮೆಗೆ ನಂಗು ಎಂಥದೂ ಸಂಬಂಧಾನೆ ಇಲ್ದೆ ಇರಬೇಕಿತ್ತು. ಅಂದರೆ ಇಂದು ಇರೊ ಇಪ್ಪತ್ತು ಕೋಟಿ ನನ್ನ ಅಣ್ಣತಮ್ಮಂದಿರ ಥರ ಇರಬೇಕಿತ್ತು. ನಂಗೆ ಅಕ್ಷರ ಗೊತ್ತಿದೆ. ಅದ್ರಿಂದ ಎಲ್ಲಾ ಅಷ್ಟಿಷ್ಟು ನಂಗೂ ಕಾಣ್ತಿದೆ. ಇದ ಕಂಡಾಗ ಒಂದೊಂದು ಸಲ ಅನ್ಸುತ್ತೆ. ಈ ಓದೊ ಚಾನ್ಸೇ ಬರಬಾರದಿತ್ತು. ನಾನು ಹತ್ತು ವರ್ಷದ ಕೆಳಗೇ ಹುಟ್ಟಬೇಕಿತ್ತು. ಆಗ ಓದೊ ಬಾಬತ್ತೆ ಇರ್ತಾ ಇರ್ಲಿಲ್ಲ ಅಂತ.’

-4-

ಇವಿಷ್ಟಕ್ಕೂ ಪ್ರೇರಣೆ ಜಾರ್ಜ್‌ ಆರ್ವೆಲ್‌ ಬರೆದ ಪೊಲಿಟಿಕ್ಸ್‌ ಅಂಡ್‌ ಇಂಗ್ಲಿಷ್‌ ಲ್ಯಾಂಗ್ವೇಜ್‌ ಎಂಬ ಪ್ರಬಂಧ. ಒಂದು ಭಾಷೆ ಯಾಕೆ ಮತ್ತು ಹೇಗೆ ಹಳತಾಗುತ್ತಾ ಹೋಗುತ್ತದೆ ಅನ್ನುವುದನ್ನು ಆತ ಹಂತಹಂತವಾಗಿ ವಿವರಿಸಿದ್ದಾನೆ. ಕೊನೆಯಲ್ಲಿ ಆತ ಸೂಚಿಸುವ ಉಪಾಯಗಳನ್ನು ನಾವೂ ಅಳವಡಿಸಿಕೊಳ್ಳಬಹುದು;

1. ಸಾಮಾನ್ಯವಾಗಿ ಎಲ್ಲ ಕಡೆ ಬಳಕೆಯಾಗಿ ಹಳಸಿಹೋಗಿರುವ ರೂಪಕವನ್ನೋ ಉಪಮೆಯನ್ನೋ ಬಳಸಬೇಡಿ.
2. ಉದ್ದುದ್ದ ಶಬ್ದಗಳ ಬಳಕೆ ಕಡಿಮೆ ಮಾಡಿ.
3. ಒಂದು ಪದವನ್ನು ಕಡಿಮೆ ಮಾಡೋದು ಸಾಧ್ಯವಿದ್ದರೆ ಮಾಡಿ.
4. ಎಲ್ಲರಿಗೂ ಗೊತ್ತಿರುವ ಶಬ್ದದ ಬದಲು ವಿದೇಶಿ ಭಾಷೆಯ ಪದವನ್ನೋ ವೈಜ್ಞಾನಿಕ ಪದವನ್ನೋ ಬಳಸಬೇಡಿ.
5. ಕರ್ತರಿ ಪ್ರಯೋಗ ಸಾಧ್ಯವಿದ್ದೆಡೆ ಕರ್ಮಣಿ ಪ್ರಯೋಗ ಬೇಡ.

ಇವಿಷ್ಟೂ ಸೂಚನೆಗಳು, ನಿಯಮಗಳಲ್ಲ. ಇವನ್ನು ಸಾಧ್ಯವಾದಷ್ಟೂ ಮೀರುವುದಕ್ಕೆ ಯತ್ನಿಸಿ ಅನ್ನುವುದು ನಿಯಮ. ಭಾಷೆಯ ಮುಖ್ಯ ಉದ್ದೇಶ ತಲುಪುವುದು. ತುಂಬ ಸುಲಭವಾಗಿ, ಸರಳವಾಗಿ, ನೇರವಾಗಿ ತೊಟ್ಟು ಕಳಚಿದ ಹೂವು ಹಸಿರುಹುಲ್ಲಿನ ನೆಲಕ್ಕೆ ಇಳಿದಂತೆ ಸರಾಗವಾಗಿ ತಲುಪುದು. ತಲುಪಿ ನೆಲೆಗೊಳ್ಳುವುದು. ನೆಲೆಗೊಂಡು ತನ್ನ ಅರ್ಥವನ್ನು ಬಿಟ್ಟುಕೊಟ್ಟು ನೀಗಿಕೊಳ್ಳುವುದು.

ಆದರೆ ಈಗಾಗುತ್ತಿರುವುದೇನು?

ಪದ ಸುಂದರವಾಗಿರುತ್ತದೆ; ಅರ್ಥವನ್ನು ಮಾತ್ರ ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಅದರೊಳಗೆ ಅರ್ಥವೇ ಇರುವುದಿಲ್ಲ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X