ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀ ನಿಮ್ಮನ್ನ ಕೇಳೋದು ಮಿಡ್‌ವೈಫ್ ಅಂದ್ರೇನ್ರೀ!

By ಪ್ರಶಾಂತ ಕೆ. ಅಡೂರ, ಹುಬ್ಬಳ್ಳಿ
|
Google Oneindia Kannada News

ನಿನ್ನೆ ಸಂಜಿಮುಂದ ಕಟ್ಟಿ ಮ್ಯಾಲೆ ಕೂತ ನನ್ನ ಹೆಂಡತಿ ಒಮ್ಮಿಂದೊಮ್ಮಿಲೆ "ರ್ರಿ, ಮಿಡವೈಫ್ ಅಂದರೇನ್ರಿ" ಅಂತ ಒದರಿದ್ಲು. ನಾ ಇಕಿಗೆ ಒಮ್ಮಿಂದೊಮ್ಮೆಲೆ ಇದ್ಯಾಕ ನೆನಪಾತಪಾ ಅಂತ ನೋಡಿದ್ರ ಇಕಿ ಕಟ್ಟಿ ಮ್ಯಾಲೆ ಕಾಲ ಮ್ಯಾಲೆ ಕಾಲ ಹಾಕ್ಕೊಂಡ ಕೂತ ಇಂಗ್ಲೀಷ ಪೇಪರ ಓದಲಿಕತ್ತಿದ್ಲು.

ನಂಗ ಖರೇನ ಇಕಿ ಇಂಗ್ಲೀಷ ಪೇಪರ ಓದೊದ ನೋಡಿ ಎದಿ ಧಸಕ್ಕ ಅಂತ. ಅಲ್ಲಾ ದಿವಸಾ ಮನಿಗೆ ಬರೋ ಕನ್ನಡ ಪೇಪರ ಛಂದಾಗಿ ಓದೊಕಿ ಅಲ್ಲಾ, ಹಂತಾದ ಹೊರಗ ನಾಲ್ಕ ಮಂದಿಗೆ ಕಾಣೊಹಂಗ ಕೂತ ಇಂಗ್ಲೀಷ ಪೇಪರ ಓದಲಿಕತ್ತಾಳಲಾ, ಯಾರರ ನೋಡಿದವರ ಏನ ಇಕಿ ಭಾರಿ ಲಿಟರೇಟ, ದಿವಸಾ ಇಂಗ್ಲೀಷ ಪೇಪರ ಓದತಾಳ ಅಂತ ತಿಳ್ಕೋತಾರ ಅಂತ ತಿಳ್ಕೊಂಡಾಳೊ ಏನೊ ಅಂತ ನಂಗ ಸಿಟ್ಟ ಬಂತ.

ಅಲ್ಲಾ ಹಂಗ ನಮ್ಮ ಮನಿಗೆ ಬರೋದ ಕನ್ನಡಾ ಪೇಪರ ಇಷ್ಟ ಆದರ ಅವತ್ತ ಏನೋ ಬೈಮಿಸ್ಟೇಕ್ ಪೇಪರ ಹಾಕೊಂವಾ ಕನ್ನಡಾ ಪೇಪರ ಜೊತಿ ಇಂಗ್ಲೀಷ ಪೇಪರ ಒಗದ ಹೋಗಿದ್ದಾ. ಇಕಿ ಅದನ್ನ ಸ್ಟೈಲ ಆಗಿ ಹಿಡಕೊಂಡ ಬರೇ ಚಿತ್ರಾ ನೋಡ್ಕೋತ ಕೂತಾಕಿ, ಹಂತಾದರಾಗ ಎಲ್ಲಾ ಬಿಟ್ಟ ಈಕಿಗೆ ಮಿಡ್ ವೈಫ ಎಲ್ಲೇ ಕಾಣತಪಾ ಅಂತ ನಾ ವಿಚಾರ ಮಾಡೊದರಾಗ ಮತ್ತೊಮ್ಮೆ ಜೋರಾಗಿ "ರ್ರಿ...ಮಿಡವೈಫ್ ಅಂದರೇನ್ರಿ.. ನಾ ಒದರಿದ್ದ ಕೇಳಸಂಗಿಲ್ಲಾ?" ಅಂತ ಒದರಿದ್ಲು.

Wish midwives on International Midwife Day

ನಾ ತಲಿ ಕೆಟ್ಟ ಇಕಿ ಏನ ಮಿಡವೈಫ್ ಹಚ್ಚ್ಯಾಳಲೇ ಅಂತ ಹಂಗ ಚಾಸ್ಟಿಗೆ "ಏ, ಹುಚ್ಚಿ, ಅಷ್ಟು ಗೊತ್ತಾಗಂಗಿಲ್ಲಾ, ಮಿಡವೈಫ ಅಂದರ ನಡಕಿನ ಹೆಂಡತಿ" ಅಂದೆ. ಪಾಪ ಅಕಿಗೇನ ಗೊತ್ತ? ನಾ ಹೇಳಿದ್ದ ಖರೇ ಅಂತ ತಿಳ್ಕೊಂಡಂತ ಕಾಣತದ ಖೋಡಿ. [ಓಣ್ಯಾಗಿನ ಹೆಂಗಸ್ರಿಂದ ಕ್ರಾಸ್ಡ್ ಲೆಕ್ ಮೂವ್ಮೆಂಟ್!]

"ಅದ.... ನಂಗ ಅನಸ್ತ, ಈ ಫಾರೇನ್ ಮಂದಿ ಎರೆಡೆರಡ- ಮೂರ-ಮೂರ ಕಟಗೊಂಡಿರ್ತಾವ ಅದಕ್ಕ ನಡಕಿನೋಕಿಗೆ ಮಿಡವೈಫ್ ಅಂತಾರ ಅಂತ" ಅಂತ ಅಂದ್ಲು. ಅಕಿ ಮಾತ ಕೇಳಿ ನಾ ಹಣಿ- ಹಣಿ ಬಡ್ಕೊಂಡೆ, ಅಕಿ ಶಾಣ್ಯಾತನಕ್ಕಲ್ಲ ಮತ್ತ, ನನ್ನ ಹಣೇಬರಹಕ್ಕ.

"ಲೇ, ಹುಚ್ಚಿ.. ಹೆಂಡ್ತಿ ಒಳಗು ನಡಕಿನೊಕಿ, ಒಂದನೇದೊಕಿ, ಲಾಸ್ಟಿನೋಕಿ ಅಂತ ಇರ್ತಾರ ಖರೆ ಆದರ ಮೊದ್ಲಿನೋಕಿದು ಲಾಸ್ಟನೋಕಿದ ಬಿಟ್ಟ ಬರೇ ನಡಕಿನೋಕಿದ ಡೇ ಮಾಡ್ತಾರೇನಲೇ? ಹಂಗ ಮಾಡಿದರ ಇನ್ನ ಇಬ್ಬರು ಗಂಡಂದ ಹೆಣಾ ಹೊರಂಗಿಲ್ಲೇನಲೇ" ಅಂತ ಬೈದ ಮಿಡವೈಫ ಅಂದರ 'ಸೂಲಗಿತ್ತಿ'. ಹಂಗ ಬಾಣಂತನ ಮಾಡೋರು, ಹಡಿಲಿಕ್ಕೆ ಹೆಲ್ಪ ಮಾಡೋರಿಗೂ ಮಿಡವೈಫ ಅಂತಾರ ಅಂತ ತಿಳಿಸಿ ಹೇಳಿದೆ.

ಅಲ್ಲಾ ಇಕಿ ಹಂತಾಪರಿ ಮಿಡವೈಫ ಬಗ್ಗೆ ಏನ ಓದ್ಲಿಕತ್ತಾಳ ಅಂತ ನೋಡಿದ್ರ ಇಂಗ್ಲೀಷ್ ಪೇಪರ ಸಪ್ಲಿಮೆಂಟ ಒಳಗ international midwives dayದ ಮ್ಯಾಲೆ ಒಂದ ಆರ್ಟಿಕಲ್ ಬಂದಿತ್ತ ಇಕಿ ಅದರ ಹೆಡ್ಡಿಂಗ್ ಓದಿ ಮಿಡವೈಫ್ ಬಗ್ಗೆ ನಂಗ ಜೀವಾ ತಿನ್ನಲಿಕತ್ತಿದ್ಲು.

ಅಷ್ಟರಾಗ ಇಕಿ "ಹಂಗರ ನಮ್ಮ ಅತ್ತೆಯವರು ಒಂದ ಟೈಪ ಮಿಡವೈಫ ಇದ್ದಂಗ ಅನ್ನರಿ" ಅಂದ್ಲು.
"ಯಾಕವಾ, ಎಲ್ಲಾ ಬಿಟ್ಟ ನಮ್ಮವ್ವನ್ನ ಮ್ಯಾಲೆ ಬಂದಿ?" ಅಂತ ನಾ ಕೇಳಿದರ...

"ಮತ್ತೇನ ಯಾರರ ಹಡದರ ಸಾಕ, ಸಂಬಂಧ ಇರಲಿ ಬಿಡಲಿ, ಕುಂಚಗಿ-ದುಬಟಿ ಹೊಲದ ಕೊಡ್ತಾರ, ಆಳ್ವಿ ಉಂಡಿ, ಅಂಟಿನ ಉಂಡಿ, ಕೇರ ಅಡಿಕಿ ಮಾಡಿ ಮಾಡಿ ಡಬ್ಬಿ ತುಂಬಿಸಿ ತುಂಬಿಸಿ ಕಳಸ್ತಾರ. ಹಡದೋರ ಮನ್ಯಾಗಿನವರ ಫೊನ್ ಮಾಡಿದರ ಸಾಕ, ತಾಸ ಗಟ್ಟಲೇ ಅವರಿಗೆ ಬಾಣಂತನ ಹೆಂಗ ಮಾಡಬೇಕು ಅಂತ ಮೊಬೈಲನಾಗ ಕನ್ಸಲ್ಟನ್ಸಿ ಕೊಡ್ತಾರ ಅಂದ ಮ್ಯಾಲೆ ನಿಮ್ಮವ್ವನು ಒಂಥರಾ ಮೊಬೈಲ ಮಿಡವೈಫ್ ಇದ್ದಂಗ ಅಲಾ" ಅಂದ್ಲು.

ಖರೇನ. ಅಕಿ ಹಂಗ ಹೇಳಿದ್ದ ನನಗ ಖರೆ ಅನಸ್ತ. ನಮ್ಮವ್ವ ತನಗ ಪರಿಚಯ ಇದ್ದೋರ ಯಾರರ ಹಡದರ ಸಾಕ ಅವರಿಗೆ ಬಾಣಂತನದ್ದ ಎಲ್ಲಾ ಡಿಟೇಲ್ಸ್ ಮೊಬೈಲನಾಗ ಹೇಳ್ತಾಳ. ಹಂಗ ಕೈ ಕಾಲ ಗಟ್ಟೆ ಇದ್ದರ ಈಕಿನ ಬಾಣಂತನಕ್ಕ್ ಹೋಗ್ತಿದ್ಲೋ ಏನೋ. ಒಂಥರಾ ನಮ್ಮವ್ವ ಬಾಣಂತನ ವಿಷಯದಾಗ ವಿಕಿಪಿಡಿಯಾ ಇದ್ದಂಗ ಅನ್ನರಿ. [ಗಂಡ ಹೆಂಡತಿ ಜೋಕ್ಸ್]

ಆದರೂ ಇವತ್ತ ನಮ್ಮಲ್ಲೆ ಹಡದರ ಬಾಣಂತನಾ ಮಾಡೋರ ಸಿಗವಲ್ಲರಾಗ್ಯಾರ, ಬಂಧು ಬಳಗದಾಗ ದೂರ ಹೋತ ರೊಕ್ಕಾ ಕೊಟ್ಟರು ಬಾಣಂತನಾ ಮಾಡೋರ ಸಿಗವಲ್ಲರು. ಅರ್ಧಕ್ಕ ಅರ್ಧಾ ಮಂದಿ ಇವತ್ತೇನ ಬರೇ ಒಂದ ಹಡಿಲಿಕತ್ತಾರಲಾ ಅವರ ಇನ್ನೊಂದ ಹಡದರ ಬಾಣಂತನಾ ಮಾಡೋರ ಸಿಗಂಗಿಲ್ಲಾ ಅಂತ ಇನ್ನೊಂದ ಹಡಿವಲ್ಲರು. ಅದರಾಗ ಈಗ ಮದ್ಲಿನಗತೆ ಹುಡಗಿ ತವರಮನಿಯವರ ಮುತವರ್ಜಿ ವಹಿಸಿ ಬಾಣಂತನ ಮಾಡಂಗಿಲ್ಲ ಬಿಡರಿ. ಕಾಟಚಾರಕ್ಕ ಒಂದ ಬಾಣಂತನಾ ಮಾಡಿ ಇನ್ನು ಎರಡ ತಿಂಗಳ ಆಗೋದರಾಗ 'ಪಾಪ ನಿನ್ನ ಗಂಡ ಒಂದ ಬೇಯಿಸಿಗೊಂಡ ತಿನ್ನಬೇಕು, ನೀ ಬೆಂಗಳೂರಿಗೆ ಹೋಗೆಬಿಡ, ಬೇಕಾರ ನಾನ ಅಲ್ಲೇ ಬಂದ ನಿನ್ನ ಜೊತಿ ಇರ್ತೇನಿ' ಅಂತ ತವರ ಮನಿಯಿಂದ ಅಟ್ಟೆ ಬಿಡ್ತಾರ.

ಇನ್ನ್ ಒಂದನೇ ಕೂಸ ಹಿಂಗ ಒಂದ ಚೂರ ದೊಡ್ಡದಾಗಿ ಅಂಬೇಗಾಲ ಇಡಲಿಕತ್ತದ ಅಂತ ಗೊತ್ತಾಗೊದ ತಡಾ ಹುಡಗಿ ಅವ್ವಾ ಹಗರಕ ತನ್ನ ಮಗಳ ಕಿವ್ಯಾಗ "ಎಲ್ಲೇರ ನಿಮ್ಮ ಅತ್ತಿ ಮಾತ ಕೇಳಿ ಇನ್ನೊಂದ ಪ್ಲ್ಯಾನ ಮಾಡಿ-ಗಿಡಿರಿ, ಮೊದ್ಲ ತುಟ್ಟಿ ಕಾಲ ಛಂದಾಗಿ ಒಂದನ್ನ ಜೋಪಾನ ಮಾಡ್ರಿ" ಅಂತ... ಇಲ್ಲಾ "ನಮ್ಮವ್ವಾ... ಒಂದ ಬಾಣಂತನ ಮಾಡೋದರಾಗ ರಗಡ ಆಗೇದ, ನಂಗsರ ಕೂತರ ಏಳಲಿಕ್ಕೆ ಆಗಂಗಿಲ್ಲಾ, ಎದ್ದರ ಕೂಡಲಿಕ್ಕೆ ಆಗಂಗಿಲ್ಲಾ. ನಂದ ಬಾಣಂತನ ಮಾಡಿಸಿಗೊ ಪ್ರಸಂಗ ಬಂದದ. ನೀ ಹೆಣ್ಣೊಂದ ಆಗಲಿ ಅಂತ ಮತ್ತೇಲ್ಲರ ಇನ್ನೊಂದ ಹಡದ ಗಿಡದಿ" ಅಂತೇಲ್ಲಾ ಊದಿರತಾಳ.

ಅಲ್ಲಾ, ಹಂಗ ಇತ್ತೀಚಿಗೆ ಇನ್ನೊಂದ ಹಡಿಯೋದ ಹಡಿಯೋರಿಗೆ ಬೇಕಾಗಿರಂಗಿಲ್ಲಾ ಇನ್ನ ಬಾಣಂತನ ಮಾಡೊರಿಗಂತೂ ದೂರದ ಮಾತ. ಆದರೂ ಏನ ಅನ್ನರಿ ನಮ್ಮಂದಿ ಬರಬರತ ಎಲ್ಲಾ ಮರಕೋತ ಹೊಂಟಾರ, ಹಳೆ ಪದ್ಧತಿ, ಸಂಪ್ರದಾಯ ಯಾರಿಗೂ ಬೇಕಾಗಿಲ್ಲಾ, ಎಲ್ಲಾ ಮಾಡರ್ನೈಸೇಶನ್ ಹೆಸರಿಲೆ ಬದಲಾಗಲಿಕತ್ತಾವ. ಹಂಗ ಈ ಬಾಣಂತನ, ಬಾಣಂತಿ, ಸೂಲಗಿತ್ತಿ ಅಂದರ ಮಿಡವೈವ್ಸ್ ಎಲ್ಲಾ ಮಾಯ ಆಗಲಿಕತ್ತಾರ.

ಈಗೀನವರಿಗೆ ಬಾಣಂತನ ಮಾಡಿಸಿಗೊಳ್ಳೊದ ಗೊತ್ತಿಲ್ಲಾ ಇನ್ನ ಬಾಣಂತನ ಮಾಡೋದ ಅಂತೂ ದೂರದ್ದ ಮಾತ. ಹಿಂಗ ಮುಂದವರದರ ಎಲ್ಲೆ ನಾವೇಲ್ಲಾ ಅಗ್ಗಿಷ್ಟಗಿ ಅಂದರೇನು, ಶಗಣಿ ಕುಳ್ಳ ಅಂದರೇನು, ಬಾಣಂತಿ ಕೋಣಿ ಅಂದರ ಏನು, ಕೂಸಿನ್ನ ನೋಡಬೇಕಾರ ಕಾಲ ತೊಳ್ಕೊಂಡ ಯಾಕ ಹೋಗಬೇಕು, ಕುಸು- ಬಾಣಂತಿ ಹಿಂತಾ ಬ್ಯಾಸಗಿ ಒಳಗು ಯಾತ ತಲಿಗೆ ಕಟಗೋಬೇಕು, ಅಂಟಿನ ಉಂಡಿ ಯಾಕ ತಿನ್ನಬೇಕು....ಅನ್ನೋದನ್ನ ಎಲ್ಲಾ ಮರತ ಬಿಡ್ತೇವಿ ಅನಸ್ತದ.

ಇದನ್ನೆಲ್ಲಾ ನಾವ ಮುಂದನು ಉಳಿಸಿಗೊಂಡ ಹೋಗಬೇಕು ಅಂದರ ನಮ್ಮವ್ವನಂಥಾವರು ಇನ್ನು ಇರಬೇಕಾರ, ಅಂದರ ಇನ್ನೂ ಗಟ್ಟಿ ಇರಬೇಕಾರ ಅವರ ಕಡೆ ಹೇಳಿ-ಕೇಳಿ, ಅವರ ಮಾಡೋದನ್ನ ನೋಡಿ ನಮ್ಮ ಜನರೇಶನವರು ಕಲ್ಕೋಬೇಕು. ಇಲ್ಲಾ ಎಲ್ಲಿ ಬಾಣಂತನಾ ಬಿಡ ಅಂತ ಸುಮ್ಮನ ಹಡೇಯೊದ ಬಿಡೋ ಪ್ರಸಂಗ ಬಂದರು ಬರಬಹುದು! ಅಲ್ಲಾ ಈಗ ಏನಿಲ್ಲದ ಹಡಿಯೋದ ಒಂದು ಮುಂದ ಅದು ಎಲ್ಲೆ ಬಾಣಂತನ ಮಾಡಲಿಕ್ಕೆ ಯಾರು ಸಿಗಲಿಲ್ಲಾ ಅಂತ ಬಂದ ಆಗ್ತದೋ ಅಂತ ಅನಸಲಿಕತ್ತದ. ಆದರು ಇವತ್ತ ಇಂಟರ್ನ್ಯಾಶನಲ್ ಮಿಡವೈವ್ಸ ಡೇ ಅಂದರ 'ಅಂತರಾಷ್ಟ್ರೀಯ ಸೂಲಗಿತ್ತಿಯರ ದಿವಸ' ಅಂತ ಕೇಳಿ ನಂಗರ ಖರೇನ ಭಾಳ ಖುಷಿ ಅನಸ್ತು.

ಒಂದ ಸರತೆ ನನ್ನ ಬಾಣಂತನ ಅಂದರ ನಮ್ಮವ್ವ ನನ್ನ ಹಡದಾಗ ಅಕಿ ಬಾಣಂತನ ಮಾಡಿದವರನ ನೆನಿಸಿಗೊಂಡ ದೇವರ ಅವರ ಆತ್ಮಕ್ಕ ಶಾಂತಿ ಕೊಡಲಿ ಅಂತ ಬೇಡ್ಕೊಂಡ ಈ ಲೇಖನಾ ಇಲ್ಲಿಗೆ ಮುಗಸ್ತೇನಿ. ಹಂಗ ನಿಮ್ಮ ಬಾಣಂತನ ಮಾಡಿದವರು ಯಾರರ ಇನ್ನು ಇದ್ದರ ಅವರಿಗೆ ಒಂದ ಸರತೆ ವಿಶ್ ಮಾಡಿಬಿಡರಿ. ಪಾಪ ಅವರು ಒಂದ ಸ್ವಲ್ಪ ಖುಶ್ ಆಗ್ತಾರ.

ಅನ್ನಂಗ ಇನ್ನೊಂದ ಭಾಳ ಇಂಪಾರ್ಟೆಂಟ್ ಹೇಳೋದ ಮರತೆ, ಫಾರೆನ್ನದಾಗ ಈ ಮಿಡವೈಫ ಗಂಡಸರು ಇರ್ತಾರಂತ. ಬಹುಶಃ ಹಡೇಯೊರು ನಾವ, ಬಾಣಂತನ ಮಾಡೋರು ನಾವ ಅಂತ ಹೇಳಿ ಹೆಣ್ಣಮಕ್ಕಳ ಕೋರ್ಟಿಗೆ ಹೋಗಿ ಗಂಡಸರಿಗೂ ಬಾಣಂತನ ಮಾಡಲಿಕ್ಕೆ ಹಚ್ಚಿರಬೇಕ. ಅಲ್ಲಾ ನಾವು ಬಾಣಂತನ ಕಲಿಯೋದ ಛಲೋ ಬಿಡ್ರಿ, ಪಾಪ ನಮ್ಮ ಹೆಣ್ಣಮಕ್ಕಳಿಗೆ ಎರೆಡು ನೀವ ಮಾಡ ಅಂದರ ಹೆಂಗ. ಅದಕ್ಕ ಇನ್ನಮ್ಯಾಲೆ ಗಂಡಸರು ಬಾಣಂತನ ಮಾಡ್ತೇವಿ ಅಂತ ಹೇಳಿ ಹೆಣ್ಣಮಕ್ಕಳಿಗೆ ಹಡಿಲಿಕ್ಕೆ ಎನಕರೇಜ ಮಾಡಬೇಕ ಅನಸ್ತದ. ನೀವೇನಂತರಿ?

English summary
May 5th is observed as International Midwife Day. Let's salute these people who help mother and child during child birth. Now-a-days there is dearth of midwives all over. Read this humorous as well as serious write up on midwives by Prashant Adur from Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X