ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಗೋ ಬಂತು, ಬೆಂಗಳೂರಿನ ಟ್ರಾಫಿಕ್ ಗೆ ಪರಿಹಾರ

By ಕೆಎನ್‌ಬಿ ಶಾಸ್ತ್ರಿ
|
Google Oneindia Kannada News

ನೀವು ಬೆಂಗಳೂರಿನಂಥ ಊರಿನಲ್ಲಿ ಜೀವಿಸುತ್ತಿದ್ದರೆ (ಜೀವ ಇಲ್ಲ ಅಂದ್ರೆ ಇದನ್ನು ಓದುವ ಸಾಧ್ಯತೆಯೇ ಇಲ್ಲ ಬಿಡಿ) ನಿಮಗೆ ಟ್ರಾಫಿಕ್, ಅರ್ಥಾತ್ ವಾಹನ ದಟ್ಟಣೆಯ ಸಮಸ್ಯೆ ಎದುರಿಸಿಯೇ ಇರುತ್ತೀರಿ. ಎಷ್ಟು ಬೇಗ ಹೊರಟರೂ ಸರಿಯಾದ ಸಮಯಕ್ಕೆ ಕಚೇರಿ ತಲುಪಲಾಗದೆ ಮೇಲಧಿಕಾರಿಯಿಂದ (ಫೀಮೇಲ್ ಅಧಿಕಾರಿ ಕೂಡ ಆಗಿರಬಹುದು) ಆಮೇಲೆ ವಾಪಸು ಮನೆಗೆ ಸರಿಯಾಗಿ ತಲುಪಲಾಗದೆ ಮನೆಯವರಿಂದ ಬೈಯಿಸಿ ಕೊಂಡಿರುತ್ತಿರಿ. ಇಷ್ಟೇ ಅಲ್ಲ, ಮದುವೆ ಮನೆಗೆ ಮುಹೂರ್ತದ ಸಮಯಕ್ಕೆ ಹೊರಟರೆ, ಊಟದ ಸಮಯಕ್ಕೆ ತಲುಪುವುದೂ ಅನುಮಾನ. ರಾತ್ರಿ ಊರಿಗೆ ಹೋಗಲು ಬಸ್ಸು ಹಿಡಿಯಲು ಮೆಜೆಸ್ಟಿಕ್ ಗೆ ಹೋಗಬೇಕು ಅಂದರೆ, ನೀವು ಸಂಜೆಯೇ ಹೊರಡಬೇಕು. ಮಧ್ಯೆ ಮಳೆ ಬಂದರೆ, ನಿಮ್ಮ ಮನೆ ದೇವರೂ ಕೂಡ ನಿಮ್ಮನ್ನು ಬಸ್ಸು ನಿಲ್ದಾಣ ತಲುಪಿಸಲಾರ!

ಇರಲಿ ಪಟ್ಟಿ ಮಾಡುತ್ತಾ ಹೋದರೆ, ಸಿಲ್ಕ್ ಬೋರ್ಡ್ ಜಾಮಿಗಿಂತ ದೊಡ್ಡದಾದೀತು. ಆದರೆ ಈ ಸಮಸ್ಯೆಯಿಂದ ಮುಕ್ತಿಯೇ ಇಲ್ಲವೇ? ಎಲ್ಲೋ ಓದು ಕಲಿತ, ದ್ವಿಚಕ್ರ ವಾಹನ ಸವಾರರು ಮಾತ್ರ, ಆಂಬುಲೆನ್ಸ್ ಕಂಡ ಕ್ಷಣ ಅದರ ಹಿಂದೆ ಓಡಿ, ತಮ್ಮ ಗಮ್ಯವನ್ನು ಬೇಗನೆ ಸೇರುತ್ತಾರೆ. ಆದರೆ ಶ್ರೀ ಸಾಮಾನ್ಯನಿಗೆ ಅಂತಹ ಅವಕಾಶ ಎಲ್ಲಿದೆ? ಹಾಗಾಗಿ ನಮ್ಮ ಟೈಮ್ ಪಾಸ್ ತಂಡದ ಏಕ ಸದಸ್ಯ ಪೀಠವು ಹಲವಾರು ಚಿಂತನ - ಮಂಥನ ಸಭೆ ನಡೆಸಿ ಘನತೆವೆತ್ತ ಸರಕಾರಕ್ಕೆ, ಟ್ರಾಫಿಕ್ ಅವ್ಯವಸ್ಥೆ ಸುಧಾರಿಸಲು ಕೆಲವೊಂದು ಮಾರ್ಗೋಪಾಯಗಳನ್ನು ನೀಡುತ್ತದೆ.

These guidelines will solve traffic problem in Bengaluru for ever

ಮೊಟ್ಟ ಮೊದಲನೇದಾಗಿ, ನಗರದಲ್ಲಿ ಸಮಸ್ಯೆ ಉಂಟಾಗೋದು ಸರಕಾರೀ ಬಿಎಂಟಿಸಿ ಬಸ್ಸುಗಳಿಂದ. ಅವು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಅಂದ್ರೆ, ಸಿಗ್ನಲ್ ಗಳಲ್ಲಿ, ಮೇಲು ಸೇತುವೆಗಳಲ್ಲಿ, ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಹಾಗು... ಸಾಮಾನ್ಯವಾಗಿ ರಸ್ತೆ ಮಧ್ಯಭಾಗದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಆ ಬಸ್ಸುಗಳಿಗೆ ಸರಿಯಾದ ನಿರ್ವಹಣೆ ಕೊರತೆ ಇರುವುದೇ ಇದಕ್ಕೆ ಕಾರಣ. ಡೀಸೆಲ್ ದರ ಕಡಿಮೆ ಆಗಿದ್ದರೂ, ಪ್ರಯಾಣ ದರ ಇಳಿಕೆ ಆಗದೆ ಇದ್ದರೂ, ನಿರ್ವಹಣೆ ಮಾತ್ರ ಖೋತಾ.

ಈ ಸಮಸ್ಯೆ ಪರಿಹರಿಸಲು, ಈ ಬಸ್ಸುಗಳನ್ನು ನೇರವಾಗಿ ಅವುಗಳ ಚಾಲಕನಿಗೋ, ಕಂಡಕ್ಟರ್ ಗೋ, ಸರಕಾರವೇ ಸಬ್ಸಿಡಿ ದರದಲ್ಲಿ ಮಾರಿ ಬಿಡಬೇಕು ಅಥವಾ ಬಾಡಿಗೆಗೆ ಕೊಡಬೇಕು. ಪ್ರಯಾಣಿಕರಿಂದ ದುಡ್ಡು ತಗೊಂಡು, ಟಿಕೆಟು ಕೊಡದೆ, ಕೊಟ್ಟರೂ.. ಸರಿಯಾದ ಚಿಲ್ಲರೆ ಕೊಡದೆ ಜನರನ್ನು ಯಾಮಾರಿಸೋದು ಕಡಿಮೆ ಆಗುತ್ತೆ. ಅದೂ ಅಲ್ಲದೆ ಚಾಲಕರು 35 ರುಪಾಯಿಗೆ ಡೀಸೆಲ್ ಮಾರಾಟ ಮಾಡೋದು ಕೂಡ ಕಡಿಮೆ ಆಗುತ್ತೆ. ಹೆಂಗೂ ತಮ್ಮದೇ ವಾಹನ ಅಂತ ಅವರು ಸರಿಯಾಗಿ ನೋಡಿಕೊಳ್ಳುತ್ತಾರೆ. ಅತಿ ಹೆಚ್ಚು ಜನ ಸಂದಣಿ ಇರುವ ಸಮಯದಲ್ಲಿ ನಮಗೆ ಬಸ್ಸು ಸಿಗುವ ಸಾಧ್ಯತೆಯೂ ಹೆಚ್ಚಾಗುತ್ತದೆ.

ಇನ್ನು ಎರಡನೇದು, ಕೆಲವರು ಒಪ್ಪದೇ ನಂಗೆ ದಿಕ್ಕಾರ ಕೂಗಿದರೂ, ಬಹುಸಂಖ್ಯಾತರು ಒಪ್ಪಿಯೇ ಒಪ್ಪುತ್ತಾರೆ. ಅದೇನಪ್ಪಾ ಅಂದ್ರೆ, ನಮ್ಮಲ್ಲಿ ಸಾಕಷ್ಟು ಸಲ ಟ್ರಾಫಿಕ್ ಹದಗೆಡಲು, ಅಪಘಾತಗಳು ಉಂಟಾಗಲು ಮಹಿಳಾ ಚಾಲಾಕಿಯರೇ (ಚಾಲಾಕಿ?) ಕಾರಣ! ಗಾಡಿ ಓಡಿಸ್ತಾ ಇರೋ ಮಹಿಳೆ, ಯಾವಾಗ ಎಡಕ್ಕೆ ಬಲಕ್ಕೆ ತಿರುಗಿಸುತ್ತಾಳೆ, ಯಾವಾಗ ಬ್ರೇಕು ಹಾಕುವಳು ಅಂತ ಬ್ರಹ್ಮನಿಗೂ ಗೊತ್ತಿರುವುದಿಲ್ಲ. ಆಟೋ ಹಿಂದೆ, ಬ್ಯೂಟಿ ಕೂತಿರೋ ಸ್ಕೂಟಿ ಹಿಂದೆ... ಎಲ್ಲಿ ಹೋದರೂ ಹೊಗೆ ಖಚಿತ. ಅದೂ ಅಲ್ಲದೆ, ಸುಂದರ ಯುವತಿ ಕಾರು ಸ್ಕೂಟರ್ ಓಡಿಸ್ತಾ ಇದ್ದಾರೆ, ಸುತ್ತ ಮುತ್ತ ಇರೋ ಎಲ್ಲಾ ಪಡ್ಡೆಗಳಿಗೆ ಹೃದಯ ಬಡಿತ ಹೆಚ್ಚಾಗಿ, ರಸ್ತೆ ಮೇಲೆ ಗಮನ ಕಡಿಮೆ ಆಗಿ, ಸ್ವರ್ಗದ ದಾರಿ ಹಿಡಿತಾರೆ. ಸರ್ಕಾರ ಮಹಿಳೆಯರು ವಾಹನ ಚಾಲನೆ ಮಾಡೋ ಹಂಗೆ ಇಲ್ಲ ಅಂತ ಕಾನೂನು ಮಾಡಕ್ಕೆ ಆಗಲ್ಲ.

These guidelines will solve traffic problem in Bengaluru for ever

ಹಂಗೆನಾದ್ರು ಮಾಡಿದ್ರೆ, ಬುದ್ದಿ ಜೀವಿಗಳು ಟೌನ್ ಹಾಲ್ ಎದುರು "ಅದು ವಾಹನ ಸಂಸ್ಕೃತಿ ಅಂತ ಹೇಳಿ, ಗೋಮಾಂಸ ತಿಂದಂಗೆ... ಕಾರನ್ನೇ ತಿಂದರೂ ಕಷ್ಟ!" ಯಾಕೆ ಅವರಿಗೆ ಕಷ್ಟ ಕೊಡೋದು. ಹಂಗಾಗಿ ವಾರದಲ್ಲಿ ಮೂರುದಿನ ಮಹಿಳೆಯರು, ಮೂರು ದಿನ ಪುರುಷರು ಚಲಾಯಿಸಬೇಕು ಅಂತ ಕಾಯಿದೆ ತರಬೇಕು. ಕನಿಷ್ಠ ವಾರದಲ್ಲಿ ಮೂರು ದಿನ ಗಂಡಂದಿರು ಹಿಂದಿನ ಸೀಟಿನಲ್ಲಿ, ಕುಳಿತು ಆರಾಮಾಗಿ ಕಚೇರಿ ತಲುಪಬಹುದು. ಅದೂ ಅಲ್ಲದೆ, ಸಾಮಾನ್ಯವಾಗಿ ರಸ್ತೆಯಲ್ಲಿ ಕಿರಿ ಕಿರಿ ಆದಾಗ... ಕೊರಳು ಪಟ್ಟಿ ಹಿಡಿದು ಜಗಳ ಕಾಯುವುದನ್ನು ನಾವು ನೋಡಿಯೇ ಇರುತ್ತೀವಿ. ಮುಂದೆ ಇದು, ಹೆಣ್ಣು ಮಕ್ಕಳು ಜುಟ್ಟು ಹಿಡಿದು ಕಿತ್ತಾಡೋದು ನಾವು ನೋಡಬಹುದು. ನಾವು ತಲುಪೋ ಗಮ್ಯ, ತಡ ಆದರೂ, ಮಾರ್ಗ ಮದ್ಯೆ ಮನೋರಂಜನೆಗೆ ಕೊರತೆ ಅಂತೂ ಇರಲ್ಲ. ಹೌದೂ, ಮಿಕ್ಕ 7ನೇ ದಿನ ಯಾರು ಓಡಿಸಬೇಕು ಅಂತ ನಾನು ಹೇಳಿಯೇ ಇಲ್ಲವಲ್ಲ? ಹೋಗ್ಲಿ ಬಿಡಿ, ಯಾರಾದ್ರು ಓಡಿಸ್ಲಿ. ನಾನಂತೂ ಅವತ್ತು ಮನೇಲಿ ಮುಸುಕೆಳೆದು ಮಲಗುವೆ.

ಇನ್ನು ಮೂರನೆಯದು, ನಮ್ಮ ಐಟಿ/ಬೀಟಿನಲ್ಲಿ ಕೆಲಸ ಮಾಡೋ ಸಾಕಷ್ಟು ಜನರಿಗೆ ಮನೆಯಿಂದಲೇ ಕೆಲಸ ಮಾಡೋ ಅವಕಾಶ ಇದೆ. ಆದರೆ ಯೋಚಿಸಿ, ಈ ವ್ಯವಸ್ಥೆಯಿಂದ ನಾವು ಒಂದು ಸಾಮಾಜಿಕ ಅಸಮತೋಲನಕ್ಕೆ ಕಾರಣ ಆಗುತ್ತಾ ಇದ್ದೀವಿ ಅಂತ. ಬೇರೆ ಯಾರಿಗೂ ಸಿಗದಂಥ ಅವಕಾಶ ಅವರಿಗೆ ಮಾತ್ರ ಯಾಕೆ? ನಮ್ಮ ಸರಕಾರೀ ಅಧಿಕಾರಿಗಳಿಗೆ ಯಾಕೆ ಇಲ್ಲ? ಅಕಸ್ಮಾತ್ ನಮ್ಮ ಅಧಿಕಾರಿಗಳಿಗೂ ಸಿಕ್ಕರೆ, ಅವರ ಕಚೇರಿ ಸುತ್ತ ಮುತ್ತ ವಾಹನ ಸಂಚಾರ ಕಡಿಮೆ ಆಗುತ್ತೆ. ಅವರ ಸಹಿ ಬೇಕು ಅಂತ ಅಲೆದಾಡುವ ಸಾಮಾನ್ಯ ಜನ, ನೇರವಾಗಿ ಅಧಿಕಾರಿಯ ಮನೆಗೇ ಹೋಗಿ, ಅಲ್ಲಿಯೇ ಸಹಿ ಹಾಕಿಕೊಂಡು, ಟೇಬಲ್ ಮೇಲೆಯೇ ಕೈ ಬೆಚ್ಚಗೆ ಮಾಡಿ, ಹಿಂತಿರುಗಬಹುದು! ಇದರಿಂದ ಯಾವ ಲೋಕಾಯುಕ್ತದವರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ!

ನಮ್ಮ ಮುಖ್ಯ ಉದ್ದೇಶ ಏನು ಅಂದ್ರೆ, ಅತಿ ಮುಖ್ಯ ಪ್ರದೇಶಗಳಲ್ಲಿ ಜನ ಸಂದಣಿ ಅಥವಾ ವಾನಗಳ ಸಂಖ್ಯೆ ಕಡಿಮೆ ಮಾಡುವುದು. ಉದಾಹರಣೆಗೆ, ನಮ್ಮ ಯುವಜನತೆ ಸುಖ ಹಾಗು ನೆಮ್ಮದಿಗಾಗಿ ಅಲೆದಾಡುವ ಎಂಜಿ ರೋಡು, ರೆಸಿಡೆನ್ಸಿ ರೋಡು, ಕೋರಮಂಗಲ ಇತ್ಯಾದಿ. ವಾರಾಂತ್ಯಗಳಲ್ಲಿ ಅಂತೂ ಈ ಜಾಗಗಳಲ್ಲಿ ಒಂದು ಸಿಗ್ನಲ್ ದಾಟಲು ಗಂಟಾನುಗಟ್ಟಲೆ ಕಾಯಬೇಕು. ಹಾಗಾಗಿ ಕೂಡಲೇ, ಸರ್ಕಾರವು ಅಲ್ಲಿ ಸಿಗುವ ಸೌಲಭ್ಯನ ಜನರಿಗೆ ತಮ್ಮ ತಮ್ಮ ವಾರ್ಡುಗಳಲ್ಲಿ, ಬೀದಿಗಳಲ್ಲಿ ಸಿಗುವ ವ್ಯವಸ್ಥೆ ಮಾಡಬೇಕು.

ಇತ್ತೀಚಿಗೆ ಸಚೀವರೊಬ್ಬರು ಮತ್ತೆ "ಕೊಟ್ಟೆ ಸರಾಯಿ" ಜಾರಿಗೆ ತರುವ ಮಾತು ಆಡುತ್ತಿದ್ದರು. ಇದು ಆಗದೆ ಹೋದರೂ, ಬೆಂಗಳೂರಿನಂತ ಊರಿನಲ್ಲಿ ಎಲ್ಲರಿಗೂ ಕಾಲ್ನಡಿಗೆಯ ದೂರದಲ್ಲಿ ಸಿಗುವ ಹಾಗೆ ಪಬ್ಬು, ಡಿಸ್ಕೋ ಶುರು ಮಾಡಲು ಅನುಮತಿ ಕೊಡಬೇಕು. ಇದರಿಂದ ಜನ, ನಡೆದೇ ಕಾರ್ಯಸ್ಥಾನ ತಲುಪಬಹುದು. ಎಷ್ಟು ಲೇಟು ಆದರೂ ಚಿಂತೆ ಇಲ್ಲ. ಮನೇಲಿ ಕೂಡ ಅಪ್ಪ ಅಮ್ಮಂದಿರಿಗೆ ತಮ್ಮ ಮಗ/ಮಗಳು ಎಲ್ಲಿ ಕುಡಿದು ಕುಣಿತಾ ಇದ್ದಾರೆ ಅಂತ ಗೊತ್ತಿರುತ್ತೆ. ಅಷ್ಟರ ಮಟ್ಟಿಗೆ ಅವರ ಚಿಂತೆ ಕಡಿಮೆ ಆಗುತ್ತೆ! ಅಥವಾ ತನ್ನ ಗಂಡ ಕುಡಿದು, ಮನೆಗೆ ಕೂಗಳತೆಯ ದೂರದಲ್ಲಿ ಇರಬಹುದಾದ ಯಾವುದೋ ಒಂದು ಮೋರಿಯಲ್ಲಿ ಇದ್ದಾನೆ ಅಂತ ಹೆಂಡತಿಗೂ ಗೊತ್ತಿರುತ್ತೆ! ಇದರಿಂದ ಸರಕಾರಕ್ಕೆ ಜಾಸ್ತಿ ದುಡ್ಡು, ಜನಕ್ಕೆ ಪೆಟ್ರೋಲ್ ಉಳಿತಾಯ. ಆ ಉಳಿತಾಯದ ದುಡ್ಡಲ್ಲಿ ಮತ್ತೂ ಒಂದು ಪೆಗ್ಗು ಹೊಡೀಬಹುದು. ಯಾಕೆ ಹೇಳಿದೆ ಅಂದ್ರೆ, ಡಿಸ್ಕ್ ನ ಒಳಗೆ ರಶ್ ಇರಬೇಕೇ ಹೊರತು, ಹೊರಗೆ ರಸ್ತೆ ಮೇಲೆ ಅಲ್ಲ.

ಇಷ್ಟನ್ನು ಮಾಡಿದರೆ ನಮ್ಮ ಟ್ರಾಫಿಕ್ ಸಮಸ್ಯೆ ಸಾಕಷ್ಟು ಕಡಿಮೆ ಆಗುವುದು.

ಇಷ್ಟು ಮಾಡಿದ ಮೇಲೂ ಪುರಸೊತ್ತು ಇದ್ರೆ, ಟ್ರಾಫಿಕ್ ಸಮಸ್ಯೆ ಸರಿಪಡಿಸುವ ಬದಲು, ಎಲ್ಲೋ ಟೀ ಅಂಗಡಿಯ ಮರೆಯಲ್ಲಿ ಕದ್ದು ಕುಳಿತು, ತಮ್ಮ ಕೇಸುಗಳ ಟಾರ್ಗೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ (ಜೇಬು ಭರ್ತಿ ಕಾರ್ಯಕ್ರಮ ಕೂಡ) ಟ್ರಾಫಿಕ್ ಪೊಲೀಸರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಡಬೇಕು! ಆದರೆ ಅದರಿಂದ ಅವರಿಗೆ ಉಂಟಾಗುವ ಗಿಂಬಳದ ನಷ್ಟ ತಡೆಯಲು ಟ್ರಾಫಿಕ್ ಪೊಲೀಸರ ಕ್ಷೇಮಾಭಿವೃದ್ದಿಗೆ ಅಂತ ಒಂದು ನಿಧಿ ಸ್ಥಾಪನೆ ಮಾಡಬೇಕು. ಹೆಲ್ಮೆಟ್ಟು ಹಾಕದೆ, ಸೀಟು ಬೆಲ್ಟು ತೊಡದ ವಾಹನ ಚಲಾವಣೆ ಜಾಸ್ತಿ ಆಗುವ ಮಾರ್ಗಗಳಲ್ಲಿ ಈ ನಿಧಿಯ ಕಾಣಿಕೆ ಹುಂಡಿ ಇಡಬೇಕು. ಖಂಡಿತವಾಗಿಯೂ ನಮ್ಮ ಜನ ಅದಕ್ಕೆ ಕೈಲಿ ಆದಷ್ಟು ಸಹಕಾರ ಕೊಡುವರು.

ಇಷ್ಟು ಹೇಳಿದ ಮೇಲೆ, ರಸ್ತೆಗಳ ಬಗ್ಗೆ ನೀವು ಹೇಳಿಯೇ ಇಲ್ಲ ಅಂತ ದೂರಬೇಡಿ. ಅದೊಂದು ಜೇಡರ ಬಲೆ. ಸಿಮೆಂಟು ಉತ್ಪಾದಕರ ಒತ್ತಾಯಕ್ಕೆ ಮಣಿದು, ಸರ್ಕಾರ ಏನಾದ್ರು ಅದರಲ್ಲಿ ರಸ್ತೆ ಮಾಡಿದರೂ ಸಮಸ್ಯೆ ಪರಿಹಾರ ಆಗೋಲ್ಲ. ಸಿಮೆಂಟು ಒಣಗುವ ಮುಂಚೆಯೇ, ಒಳಚರಂಡಿ ಮಂಡಳಿಯವರೋ, ವಿದ್ಯುತ್ ಇಲಾಖೆಯವರೋ... ಬಂದು ರಸ್ತೆ ಅಗೆಯುವರು. ಹಂಗಾಗಿ ಒಳ್ಳೆ ರಸ್ತೆ ಅನ್ನೋದು ಚಿತ್ರಗಳಲ್ಲಿ ಮಾತ್ರ ಕಾಣಸಿಗುವುದು. ನಮಗೂ-ಅದಕ್ಕೂ, ಸರಿ ವಾಸ್ತು ಹೊಂದಿ ಬರುವುದಿಲ್ಲ ಬಿಡಿ. ನಿಮಗೆ ಅಷ್ಟಕ್ಕೂ, ಸೊಂಟ ನೋವು ಬರುತ್ತೆ ಅಂದ್ರೆ, ಲ್ಯಾಂಡ್ ರೋವರ್ ಎಸ್ ಯು ವಿ ತಗೋಳಿ. ಅದು ಪ್ರಪಂಚದ ಎಂತಾ ಕೆಟ್ಟ ದುರಂತ ಪರಿಸ್ಥಿತಿಲೂ ಚೆನ್ನಾಗಿ ಆರಾಮಾಗಿ ಹೋಗುವುದಂತೆ. ನೋಡಿ, ನಮ್ಮ ಸಾಕಷ್ಟು ಮಂತ್ರಿ ಮಹೋದಯರ ಹತ್ರ ಅಂತಹ ದೊಡ್ಡ ದೊಡ್ಡ ಕಾರುಗಳು ಉಂಟು.

ಇದನ್ನು ಓದಿದ ಮೇಲೆ, ನೀವು ಕೂಡ ನಿಮ್ಮ ಸ್ವಂತ ಮಂಡೆಯಲ್ಲಿ ಬರುವ ಪರಿಹಾರ ಸೂತ್ರಗಳನ್ನು ಕೊಡಬಹುದು. ಹಾಗೆ ಕೊಡುವವರಿಗೆ ಸಿಲ್ಕ್ ಬೋರ್ಡ್ ನಲ್ಲಿ ಟ್ರಾಫಿಕ್ ಜಾಮು ಸಿಗದೇ ಇರಲಿ ಅಂತ ನಮ್ಮ ತಂಡವು ದಯಾಮಯನಾದ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

English summary
Satire by Shastry. Are you Bengaluru resident? Do you travel in bus or use your own vehicle? Then you might have had the taste of traffic. How to ease the traffic congestion? How to reduce air pollution in one go? Here are fantastic suggestions by Shastry to make Bengaluru traffic user friendly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X