ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಂಬನೆ : ಬಕೆಟ್ ಹಿಡಿಯಲು ಗೊತ್ತಿಲ್ಲದ ಡೀಸೆಂಟ್ ರಾಜಕಾರಣಿ!

By ರಾಜಕಾರಣಿ
|
Google Oneindia Kannada News

ಆತ್ಮೀಯರಾದ ನನ್ನ ಎಲ್ಲಾ ಮತದಾರ ಬಂಧುಗಳಿಗೆ....

ಕೊನೆಗೂ ಪ್ರಜಾಪ್ರಭುತ್ವದ ಅಸ್ತಿತ್ವದಲ್ಲಿ ಚುನಾವಣಾ ಎಂಬ ಅತಿದೊಡ್ಡ ರಾಜಕೀಯ - ಪ್ರಜಾತಾಂತ್ರಿಕ ಹಬ್ಬಕ್ಕೆ ತೆರೆ ಬಿದ್ದಂತಾಯ್ತು. ಆ ಪಕ್ಷದವರು ಈ ಪಕ್ಷದವರು ಸಾಮಾನ್ಯ ಪ್ರಜಾ ಮಹಾಪ್ರಭುಗಳ ಮನೆಯ ಬಾಗಿಲ ಕಡೆ ಕುಚೇಲನಂತೆ ಮುಖ ಮಾಡಿ ಮತ ಯಾಚಿಸುವ ಕಾಲ ಮುಗಿಯಿತು. ಪ್ರತೀ 5 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ನಾಮ ಹಾಕುವವರು, ಹಾಕಿಸಿಕೊಂಡವರು, ಹಾಕಿಸಿಕೊಳ್ಳುವವರ ಸಂಖ್ಯೆ ಮಾತ್ರ ಗಣನೀಯವಾಗಿ ಏರುತ್ತಾ ಇದೆ. ಇವರಲ್ಲಿ ನಾನು ಕೂಡ ಒಬ್ಬ.

ನಮ್ಮದು ಒಂಥರಾ ಬ್ಯುಸಿನೆಸ್ ಇದ್ದಂತೆ, ಕೆಲವರು ಕುಟುಂಬ ಸಮೇತ ಬ್ಯುಸಿನೆಸ್ ಮಾಡಿದ್ರೆ ಮತ್ತೆ ಕೆಲವರು.. ಕುಟುಂಬಕ್ಕೆ ಮಾತ್ರ ಸೀಮಿತವಾಗಿಡದೆ ಮಾಸು, ಕ್ಲಾಸು, ಪೀಪಲ್ಸು ಅಂತಾ ಎಕ್ಸ್ಟೆಂಡ್ ಮಾಡ್ತಾ ಇರ್ತಾರೆ. ಆದ್ರೆ ಜನ ಮಾತ್ರ ಇದನ್ನ "ಛೇ.. ಬರಗೆಟ್ಟ ರಾಜಕಾರಣ, ಅದಕ್ಕಿಂತಲೂ ದರಿದ್ರವಾದ ರಾಜಕಾರಣಿಗಳು, ಇವರಿಗೆಲ್ಲಾ ಜಸ್ಟ್ ಅಧಿಕಾರ ಮಾತ್ರ ಬೇಕು"! ಅಂತ ಕೆಟ್ಟದಾಗಿ ಹೇಳ್ತಾರೆ.

ಉಪ್ವಾಸ ಸತ್ಯಾಗ್ರಹ ಮಾಡೋವಾಗ ಯಾವ ಹೋಟೆಲ್ ಹತ್ರ ಮಾಡಾಣ, ಕೈ ಎತ್ತಿ..ಉಪ್ವಾಸ ಸತ್ಯಾಗ್ರಹ ಮಾಡೋವಾಗ ಯಾವ ಹೋಟೆಲ್ ಹತ್ರ ಮಾಡಾಣ, ಕೈ ಎತ್ತಿ..

ಬಟ್ ಅದೆಲ್ಲ ಸುಳ್ಳು! ನಂಗೆ ಪಾಲಿಟಿಕ್ಸ್ ನಲ್ಲಿ ಕುರ್ಚಿನೂ ಬೇಕು ಜೊತೆಗೆ ನಿಮ್ಮ ಪ್ರೀತಿ ವಿಶ್ವಾಸನೂ ಬೇಕು. ಇಲ್ಲಾಂದ್ರೆ ನಾನ್ ಹೇಗೆ ಸರ್ವೈವ್ ಮಾಡೋಕ್ ಸಾಧ್ಯ.. ಹೇಳಿ!

Political Satire : Please dont blame for electing, I am a decent politician

ನಾನು ತುಂಬಾ ಡೀಸೆಂಟ್ ರಾಜಕಾರಣಿ.. ನಂಗೆ ಬಕೆಟ್ ಹಿಡಿಯೋಕೆ ಗೊತ್ತಿಲ್ಲ. ಆದ್ರೆ ಕಂಡವರ ಕೆಲಸದ ಮೇಲೆ ನನ್ ಹೆಸರಿನ ಸೀಲ್ ಹಾಕೋಕೆ ಚೆನ್ನಾಗ್ ಬರುತ್ತೆ. ಅಷ್ಟೇ ಅಲ್ಲ ಬೇಕಾದ್ರೆ ನನ್ ವಿರೋಧಿಗಳ ಕಾಲ್ ಎಳೆದು, ಅವರಿಗೆ ಗೊತ್ತಿಲ್ಲದೇ ಸ್ಕ್ಯಾಮ್ ಮಾಡಿ ಸಿಕ್ಕಿಹಾಕಿಸಿ, ಹೈಕಮಾಂಡ್ ತಲೆಗೆ ಮಂಕ್ ಬೂದಿ ಎರಚಿ ಅಧಿಕಾರ ಗಿಟ್ಟಿಸಿಕೊಳ್ಳೋ ಟೆಕ್ನಿಕ್ ಕೂಡ ಬರುತ್ತೆ.

"ನಿನ್ನನ್ನು ಸಂತೋಷವಾಗಿಟ್ಟು ಕೊಂಡವರನ್ನು ನೆಮ್ಮದಿಯಾಗಿರಲು ಎಂದಿಗೂ ಬಿಡಬೇಡ" ಎನ್ನೋದು ನಮ್ಮಂಥ ರಾಜಕಾರಣಿಗಳ ಫಿಲಾಸಫಿ... ಬಾಹರ್ ಸೇ ಹಮ್ ದುಷ್ಮನ್ ಹೈ.. ಮಗರ್ ಅಂದರ್ ಗೆ ನಾವು ಸೇಮ್ ಟು ಸೇಮ್. ಪಾರ್ಲಿಮೆಂಟ್ ನಲ್ಲಿ ಚಪ್ಲಿ ಹಾಕ್ತೀವಿ, ನ್ಯೂಸ್ ಪೇಪರ್ರು(ಸರ್ಕಾರಿ) ಹರೀತೀವಿ.. ರಾತ್ರಿ ಆದಾಗ ಒಂದೇ ಪ್ಲೇಟ್ ನಲ್ಲಿ ಬಿರಿಯಾನಿ ತಿಂತೀವಿ.. ಎಣ್ಣೆನೂ ಹೊಡೀತೀವಿ.. ಅರೇ.. ಮಾ.....ಕಸಮ್... ಪಾಲಿಟಿಕ್ಸ್ ನಲ್ಲಿ ಎಲ್ಲವೂ ನಡೆಯುತ್ತೆ. ಇಲ್ಲಿ ಲಾಜಿಕ್ಕು ಇಲ್ಲ ಮ್ಯಾಜಿಕ್ಕು ಇಲ್ಲ.. ಬರೀ ಟೆಕ್ನಿಕ್ಕು ಜೊತೆಗೆ ಗಾಂಧೀಜೀ (ನೋಟು) ಸಪೋರ್ಟ್ ಇದ್ರೆ ಸಾಕು...

ಕಲರ್ ಕಲರ್ ಕಾಗೆ, ಇದು ಚುನಾವಣಾ ಪ್ರಚಾರದ ಬಗೆ..!ಕಲರ್ ಕಲರ್ ಕಾಗೆ, ಇದು ಚುನಾವಣಾ ಪ್ರಚಾರದ ಬಗೆ..!

ನೀವು ಶ್ರೀಸಾಮಾನ್ಯ ಜನ, ಅದಕ್ಕೇ ನಿಮಗೆ ಗೊತ್ತಾಗಲ್ಲ ಅನ್ನೋದು ನಮ್ಮ ದಡ್ಡತನವಾದ್ರೆ... ನಾವು ಹಾಕೋ ಬಿಸ್ಕತ್ ಅನ್ನು ಹಿಂದೂ ಮುಂದು ನೋಡದೆ ಕೈ ಚಾಚಿ ತಗೋಳೋ ನಿಮ್ಮದು ಬರೀ ಮೊಂಡುತನ...

Political Satire : Please dont blame for electing, I am a decent politician

ಬರೀ ಸಾವಿರ ರುಪಾಯಿಗೆ ನೀವು ನಿಮ್ಮ ಹಕ್ಕನ್ನ ಮಾರ್ತೀರಾ.. ನಾವು ಆ ಸಾವಿರದ ಮೇಲೆ ಮತ್ತೆರಡು ಸೊನ್ನೆ ಸುತ್ತಿ ನಿಮ್ಮ ಮೇಲೆ ತೆರಿಗೆ, ಬೆಲೆ ಏರಿಕೆ ಅಂತ ನಾಮ ಹಾಕಿಸ್ತೀವಿ... ಕೊನೆಗೆ ಅದರಿಂದ ಬರೋದನ್ನೇ ಕೊಳ್ಳೆ ಹೊಡೀತೀವಿ... ಇದು ಒಂಥರಾ ಪೋಲಿ(ಟ್ರಿಕ್) ಸೈಕಲ್.. ಐ ಮೀನ್ ಬಲಗೈನಿಂದ ಹೋದ ದುಡ್ಡು ಮತ್ತೆ ಡಬಲ್ ಆಗಿ ಎಡಗೈಗೆ ಬರುವಂತೆ ಮಾಡುವ ಚುನಾವಣಾ ಚಕ್ರ... ಇದು ಪಕ್ಕಾ ಇನ್ವೆಸ್ಟ್ ಮೆಂಟ್ ಕಣ್ರೀ..

ಅದ್ಯಾರೋ ದೊಡ್ಡವರು ಹೇಳಿದ್ದಾರಲ್ಲಾ... ಉಳ್ಳವರಿಂದ ಕಿತ್ತು ಇಲ್ಲದವರ ಕೈಗೆ ನೀಡು ಅಂತ... ಇದನ್ನೇ ನಮ್ಮ ಸ್ಟೈಲ್ ನಲ್ಲಿ ಹೇಳೋದಾದ್ರೆ ... ಉಳ್ಳವರಿಂದ ಕಿತ್ತು ಇಲ್ಲದವರಿಗೆ ನೀಡುವುದರ ಜೊತೆಗೆ ನಿನ್ನ ಜೇಬನ್ನು ತುಂಬಿಸೋ ಮಂಕುತಿಮ್ಮ...

ಈ ಪಾಲಿಟಿಕ್ಸ್ ಒಂಥರಾ ಸ್ಟ್ರಾಟೆಜಿಕ್ ಮ್ಯಾನೇಜ್ ಮೆಂಟ್ ಇದ್ದ ಹಾಗೆ, ಬಂಡಾಯ ಶಮನ, ಬೇಡಿಕೆ, ಪೂರೈಕೆ, ಓಲೈಕೆ, (ಕು)ತಂತ್ರಗಾರಿಕೆ, ರೆಸಾರ್ಟ್ ನಿಂದ ಹಿಡಿದು ಸ್ಕ್ಯಾಮ್ ವರೆಗೆ ಇದೆಲ್ಲಾ ಸರಿಯಾದ್ರೆ ಮುಂದಿನ ಎಲೆಕ್ಶನ್ ವರೆಗೂ ನೋ ಟೆನ್ಷನ್!

Political Satire : Please dont blame for electing, I am a decent politician

ಒಂದ್ ಸೀಕ್ರೆಟ್ ಹೇಳ್ತೀನಿ ಕೇಳಿ,

ಉದಾಹರಣೆಗೆ.. ಸರ್ಕಾರಕ್ಕೆ ಬರೋ ನಮ್ಮಂಥವರು ಆ ಪಕ್ಷಕ್ಕೆ ಈ ಪಕ್ಷಕ್ಕೆ ಬಕೆಟ್ ಹಿಡಿದು, ಸೂಟ್ ಕೇಸ್ ಕೊಟ್ಟು ಅಧಿಕಾರಕ್ಕೆ ಬರೋಕೆ ಸೈಕಲ್ ಹೊಡೆದು, ಕೊನೆಗೆ ಪ್ರಮಾಣ ವಚನ ಬೊಗಳಿದ ನಂತರ ಅಪ್ಪಿತಪ್ಪಿ ಆಯೋಗ ನಮ್ಮ ಬಳಿ ಖಜಾನೆ ಲೆಕ್ಕ ಕೇಳಿದ್ರೆ ಸಾಕು ಬೆವರಿಳಿಯುತ್ತೆ! ಹೋಗ್ಲಿ ಬಿಡಿ ಅದೆಲ್ಲಾ ಸರಿ ಮಾಡಿ ಬರೋವಷ್ಟರಲ್ಲಿ... ಇನ್ನೊಂದ್ ಸಮಸ್ಯೆ.. ಅಲ್ಲೊಬ್ಬ ಎಂಟೆದೆ ತೋರಿಸ್ತಾ ನಂಗೆ ಕೊಟ್ಟಿಲ್ಲ ಅಂದ್ರೆ, ಮತ್ತೊಬ್ಬ ನಾನ್ ಸುಮ್ಮನೆ ಇರೋದಿಲ್ಲ ಅಂತಾ ಬೊಬ್ಬೆ ಹೊಡೀತಾನೆ... ಈ ಕಡೆ.. ನಾಯಕರೇ... ನಮ್ಮವ್ರಿಗೆ ಏನಾದ್ರ ಕೊಡ್ರೀಯಪ್ಪಾ.. ಭಾಳ ಚಲೋ ಕೆಲಸ ಮಾಡ್ಯಾನ.. ಅವ್ನ್ ಜೋಬ್ನಾಗ ಒಂದ್ ಕುರ್ಸಿ ಇಲ್ಲಂದ್ರ ಕೈ ತುಂಬಾ ರೊಕ್ಕ ಕೊಟ್ರ ಚಂದಾ ಅಂತಾ ಅಭಿಮಾನಿಗಳು ತಮ್ಮ ಹಠಕ್ಕೆ ನಿಂತ್ ಬಿಡ್ತಾರ, ಇವೆರಡರ ಮಧ್ಯೆ ಮಂತ್ರಿಗಳೇ ..ಜಾತಿ ..ಅದೂ ಇದೂ .. ಅಂತಾ ಟಾಂಗ್ ಕೊಡೊ ಖಾವಿ(ದಿ)ಧಾರಿಗಳು..

ಜನ ಅಂದುಕೊಂಡ ಹಾಗೆ ರಾಜಕೀಯ ಅಷ್ಟೊಂದು ಸುಲಭದ ತುತ್ತಲ್ಲಾ.. ರಾಜಕಾರಣ ಅನ್ನೋದು ಕಬ್ಬಿಣದಿಂದ ಪಾಲಿಶ್ ಮಾಡಿರುವ ಚಿನ್ನದ ಕಡಲೆ... ಅದನ್ನ ನುಂಗಿದವರಿಗಿಂತಲೂ ನುಂಗದೆ ಲಾಭ ಪಡೆದವರೇ ಹೆಚ್ಚು.

ಹೆಸರಲ್ಲೇ ನೋಡಿ ವಿಶೇಷತೆ ಇರೋದು ರಾಜ"ಕಾರಣ" ಅಂತ. ಕಾರಣಾಂತರಗಳಿಂದ ಅಧಿಕಾರಕ್ಕೆ ಬಂದವನ ಸಂತಸ ಒಂದೆಡೆ ಆದರೆ.. ಕಾರಣಾಂತರವಾಗಿ ಎದುರಾಳಿಯನ್ನ ಅಧಿಕಾರದಿಂದ ಹೊರಗಟ್ಟುವ ಸಾಹಸ ಮತ್ತೊಂದೆಡೆ.. ಇವೆರಡರ ನಡುವೆ ಕಾರಣಗಳೇ ಇಲ್ಲದೆ ಬಯಸದೆ ಬಂದ ಭಾಗ್ಯವನ್ನು ಓಲೈಸಿಕೊಳ್ಳುವ ಶತಪ್ರಯತ್ನ ಮತ್ತೊಂದೆಡೆ... ಕಥೆ ಇಲ್ಲಿಗೆ ನಿಂತಿಲ್ಲಾ ಬಾಸ್!

ಟ್ವಿಸ್ಟ್ ಅಂದ್ರೆ ಇದು... ಹಾಳಾಗ್ ಹೋಗ್ಲಿ ಅಂತ ನೀವು ನಮ್ಮನ್ನ ಅಧಿಕಾರಕ್ಕೇನೋ ತಂದ್ರಿ... ನಾವ್ ಸುಮ್ನೆ ಇರದೇ.. ಇದನ್ನ ಪ್ರಜಾಪ್ರಭುತ್ವದ ಅತಿ ದೊಡ್ಡ ಜಯ ಅಂತ ಒಂದ್ ಕಣ್ಣಿಗೆ ಕೃತಜ್ಞತೆಯ ಬೆಣ್ಣೆ ಸವರಿ... ಮತ್ತೊಂದು ಕಣ್ಣಿಗೆ "ಇಷ್ಟೆಲ್ಲಾ ಆಗಿದ್ದು ನಿಮ್ಮಿಂದ.. ಸರಿಯಾಗಿ ಓಟ್ ಮಾಡಿ ನಮ್ಮಣ್ಣ ಗೆಲ್ಸೋ ಧೈರ್ಯ ಮಾಡಿಲ್ಲ.. ನಾವೇನ್ ಮಾಡೋಕ್ ಆಗುತ್ತೆ.. ಅದು ನಿಮ್ಮ ಕರ್ಮ" ಅಂತ ದ್ವೇಷದ ಎಣ್ಣೆ ಸುರಿದ್ ಬಿಟ್ವಿ.

ಒಟ್ಟಾರೆ ಯಾವುದೋ ಜಾಹೀರಾತಿನಲ್ಲಿ ಹೇಳಿದಂತೆ... ಉಳಿದವನೇ ಮಹಾಶೂರ ಅನ್ನೋ ಹಾಗೆ.. "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಅಧಿಕಾರಕ್ಕೆ ಏರಿದವನೇ ಮಹಾ ನಾಯಕ" ಅಂದ್ರಾಯ್ತು ಬಿಡಿ.

ಇಷ್ಟೆಲ್ಲಾ ಸರ್ಕಸ್ ಮಾಡಿದ್ರೂ.. ಒಂದ್ ಮಾತ್ ನಿಜಾ ಕಣ್ರೀ... ನಾವೇನೇ ಮಾಡಿದ್ರು ನಿಮ್ ಕೈಗೆ ಸಿಗೋದು 5 ವರ್ಷದ ನಂತ್ರನೇ.. ಆದ್ರೆ 5 ವರ್ಷಕೊಮ್ಮೆ ನಮ್ಮಂಥ ನಾಲಾಯಕ್ ಮಂದಿಯನ್ನ ಆಯ್ಕೆ ಮಾಡೋಕೆ ಪ್ರಜಾಪ್ರಭುತ್ವ ಎಂಬ ಚೌಕಟ್ಟಿನಲ್ಲಿ ಮತ ಹಾಕುವ ಅಧಿಕಾರವನ್ನ ಹೊಂದಿರುವ ನೀವು ನಿಜಕ್ಕೂ ಗ್ರೇಟ್ ಕಣ್ರೀ ..

ಮತ ಹಾಕ್ತೀರೋ, ಬಹಿಷ್ಕಾರ ಮಾಡ್ತೀರೋ ಅಥವಾ ಮಂಗಳಾರತಿ ತೆಗೀತೀರೋ ಅದು ನಿಮಗೆ ಬಿಟ್ಟದ್ದು... ನಿಮ್ಮ ಒಂದು ಅಮೂಲ್ಯವಾದ ವಿವೇಚನಾ ಶಕ್ತಿಯನ್ನ ಕ್ಷುಲ್ಲಕ ಕಾರಣಕ್ಕೆ ಬಲಿ ಕೊಡ್ತಿರೋದರಿಂದನೇ ನಮ್ಮಂಥ ಕೀಳು ಮಟ್ಟದ ರಾಜಕಾರಣಿಗಳು ಇಂದಿಗೂ ಗಟ್ಟಿಯಾಗಿ ನಿಂತಿರೋದು..

ಎಲ್ಲಿವರೆಗೂ ಈ ರೀತಿ ರಾಜಕೀಯ ದೊಂಬರಾಟ ನಡಿಯುತ್ತೋ, ಎಲ್ಲಿವರೆಗೂ ನೀವು ನಿಮ್ಮ ವಿವೇಚನಾ ಶಕ್ತಿಯನ್ನು ಮರೆತು ಅದನ್ನ ಅಪಮೌಲ್ಯಕ್ಕೆ ದೂಡುತ್ತೀರೋ ಅಲ್ಲಿವರೆಗೂ ನಾವಂತೂ ನಿಮಗೆ ಚಿರ ಋಣಿಯಾಗಿರುತ್ತೇವೆ.

ಯಾಕೆಂದರೆ ನಾನೊಬ್ಬ ವಿನಯ ಸಂಪನ್ನನಾದ ರಾಜಕಾರಣಿ... ನಿಮ್ಮ ಕೃಪಾಕಟಾಕ್ಷ ಸದಾ ನಮ್ಮ ಮೇಲಿರಲಿ... ಇದೆ ನನ್ನ ಕೊನೆಯ ಮಾತು.

ಇತಿ ನಿಮ್ಮ ಪ್ರೀತಿಯ
ರಾಜಕಾರಣಿ

English summary
Political Satire and soliloquy of a politician. Please don't blame for electing, I am a decent politician.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X