ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಅಡುಗೆ ಗಂಡಸರೇ ಮಾಡಬೇಕು, ಹೆಂಡತಿ ಇಲ್ಲದಾಗ!

By ಕೆಎನ್ಬಿ ಶಾಸ್ತ್ರೀ
|
Google Oneindia Kannada News

ಹೆಂಡತಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ತವರಿಗೋ, ಮತ್ತಾವದೋ ಊರಿಗೆ ಹೋಗುತ್ತಾಳೆಂದರೆ ಕೆಲ ಗಂಡಂದಿರಿಗೆ ಏನೋ ಖುಷಿ, ಉಳಿದವರು ಮಾತ್ರ ದುಃಖವಾದಂತೆ ತೋರಿಸಿಕೊಳ್ಳುತ್ತಾರಷ್ಟೆ. ಹೆಂಡತಿ ಹೊಸ್ತಿಲು ದಾಟುತ್ತಿದ್ದಂತೆ ಹೊಟ್ಟೆಯಲ್ಲಿ ಅದೆಂಥದೋ ರೋಮಾಂಚನ. ಅದೇನೇ ಇರಲಿ, ಮಡದಿ ಮಾತಿಗೆ ತಕ್ಕಂತೆ ತಾಳ ಹಾಕುವ ನಿಮ್ಮ ಹೊಟ್ಟೆ ತಾಳ ಹಾಕದೆ ಇರುತ್ತದಾ? ಸಮಸ್ತ ಗಂಡಂದಿರ ಸಮಸ್ಯೆಗೆ ಇಲ್ಲಿ ಸೂಪರ್ ಐಡಿಯಾ ಇದೆ. ಮುಂದುವರಿಯುವ ಮುನ್ನ, ನೆನಪಿನಲ್ಲಿಡಿ, ಕಡ್ಡಾಯವಾಗಿ ಗಂಡು ಜೀವಿಗಳು ಮಾತ್ರ ಓದಬೇಕಾಗಿ ವಿನಂತಿ.

ಬನ್ನಿ, ಇಲ್ಲಿದೆ ನೋಡಿ ಹೊಚ್ಚಹೊಸ ರುಚಿ, ಹಾರ್ಲಿಕ್ಸ್ ದೋಸೆ ಮಾಡುವ ವಿಧಾನ! ಹೌದು ಹಾರ್ಲಿಕ್ಸ್ ದೋಸೆನೇ. ಅದ್ಯಾಕೆ ಹಂಗೆ ಕಣ್ಣು ಬಾಯಿ ಬಿಡುತ್ತೀರಿ. ಕೆಳಕಂಡ ಮಾರ್ಗಸೂಚಿ ಅನುಸರಿಸಿ. ಮಾಡಿರಿ, ತಿನ್ನಿರಿ ಹಾಗು ಆನಂದಿಸಿ.

ನಿಮ್ಮ ಕಾಟ ಸಹಿಸಲಾರದೋ ಅಥವಾ ಊರಿನಲ್ಲಿ ಕಾರ್ಯಕ್ರಮ ಇದೆಯೆಂದೋ ಹೆಂಡತಿ ತವರಿಗೆ ಹೋಗುತ್ತಾಳೆ. ತಾನು ಇಲ್ಲದೆ ಮನೆ ನಡೆಯುವುದೇ ಇಲ್ಲ, ನೀವು ಊಟ ತಿಂಡಿ ಎಲ್ಲಾ ಬಿಟ್ಟು ಸೊರಗಿ, ನಿರಾಶ್ರಿತರ ತರ ಆಗುತ್ತೀರಿ ಎಂದು ಭಾವಿಸಿರುವ ಆಕೆ, ಒಂದಿಷ್ಟು ದೋಸೆ ಹಿಟ್ಟು, ಏನೋ ಒಂದು ಗೊಜ್ಜು ಮಾಡಿ ಫ್ರಿಜ್ ಗೆ ಹಾಕಿರುತ್ತಾಳೆ. ತಾವು ಕೂಡ ಆಕೆ ಹೋಗುತ್ತಿರುವ ಸಂತೋಷದಲ್ಲಿ ಎಲ್ಲಾ ಸಹಿಸಿ ಕೊಂಡಿರುತ್ತೀರಿ. [ಆರಡಿ ನೀತು ಹುಯ್ದ ಹನ್ನೆರಡಡಿ ಬೃಹತ್ ದೋಸೆ]

Just celebrate the absence of wife with Horlicks Dosa

ಆದರೆ ಸಮಸ್ಯೆ ಶುರು ಆಗುವುದೇ ನಂತರ.

ಸ್ವಾತಂತ್ರ ಸಿಕ್ಕ ಖುಶಿಯಲ್ಲಿ ಸ್ನೇಹಿತರೊಂದಿಗೆ ಪಾನಘೋಷ್ಠಿ ಮಾಡಿ ಚಂದ್ರ ಕೂಡ ಮುಳುಗುವ ಸಮಯಕ್ಕೆ ಮನೆಗೆ ಬರ್ತಿರಿ. ಹೊಟ್ಟೆ ಕವ ಕವ ಅನ್ನುತ್ತಿರುತ್ತದೆ. ಆದ್ರೆ ಅದೇ ಉದ್ದಿನ ದೋಸೆ ಹಿಟ್ಟುಬೇರೆ ಇಲ್ಲ! ಚಿಂತೆ ಬೇಡ, ನಾನು ಅದಕ್ಕೆ ಪರಿಹಾರ ಸೂಚಿಸುತ್ತೇನೆ.

ಮೊದಲು ಫ್ರಿಜ್ ನಿಂದ ದೋಸೆ ಹಿಟ್ಟು ಹೊರ ತೆಗೆಯಿರಿ. ಅದಕ್ಕೆ ಒಂದು ಸೌಟು ಹಾಕಿ ಚೆನ್ನಾಗಿ ಕದಡಿ. ಆಮೇಲೆ ಅಲ್ಲೇ ನಿಮ್ಮ ಮನೆಯವರು ಬಿಗ್ ಬಝಾರ್ ನಲ್ಲಿ ಕಡಿಮೆಗೆ ಸಿಕ್ಕಿತು ಅಂತ ತಂದು, ಆದರೆ ಉಪಯೋಗಿಸದೆ ಮಿಕ್ಸಿ ಹಿಂಭಾಗ ಇಟ್ಟ, ನಾನ್ ಸ್ಟಿಕ್ ಪುಟ್ಟ ಬಾಣಲೆ ತೆಗೆದುಕೊಳ್ಳಿ. [ಬಾಯಲ್ಲಿ ನೀರೂರಬಹುದು, ಇದು ನೀರುದೋಸೆ!]

ಸ್ಟವ್ ಅನ್ನು ಸಣ್ಣ ಉರಿಯಲ್ಲಿ ಇಟ್ಟು, ಅದರ ಮೇಲೆ ಬಾಣಲೆಯನ್ನ ಕುಕ್ಕಿ, ಅದಕ್ಕೆ ನಾಕು ಚಮಚೆ ಎಣ್ಣೆ ಹಾಕಿ. (ಅಡುಗೆ ಎಣ್ಣೆ ಮಾರ್ರೆ, ಅದು ಅಲ್ಲೇ ಎಲ್ಲೋ ಇರುತ್ತೆ. ಸ್ವಲ್ಪ ನೋಡಿ) ಅಕಸ್ಮಾತ್ ಕಣ್ಣಿಗೆ ಸಾಸಿವೆ, ಉದ್ದು ಕಂಡರೆ... ಎರಡನ್ನೂ 18-20 ಹಾಕಿ. ಆಮೇಲೆ ಸಾಸಿವೆ ನಿಮ್ಮ ಮೇಲೆ ಪೂರಾ ಸಿಡಿಯುವ ಮುನ್ನ, ನಾಕು ಸೌಟು ಹಿಟ್ಟು ಹಾಕಿ.

ಈಗ ಅತಿ ಮುಖ್ಯ ಘಟ್ಟ.

ಅಲ್ಲೇ ಅರೆಯಲ್ಲಿ ಇರುವ ಹಾರ್ಲಿಕ್ಸ್ ತೆಗೆದುಕೊಳ್ಳಿ. ನಾಕು ಚಮಚ ಪುಡಿಯನ್ನು ದೋಸೆಯ ಮೇಲೆ ಉದುರಿಸಿ. ಈ ಕಾರ್ಯವನ್ನು ಅತ್ಯಂತ ನಾಜೂಕಾಗಿ ಮಾಡಬೇಕಾಗಿ ಕಳಕಳಿಯ ಪ್ರಾರ್ಥನೆ. ಸಿಗರೇಟಿನ ಹೊಗೆಯನ್ನು ಉಂಗುರ ಉಂಗುರವಾಗಿ ಬಿಡಲು ಬೇಕಾದ ಕಲೆ, ತಣ್ಣನೆಯ ಬಿಯರ್ ಕುಡಿಯುವಾಗ ಇರುವ ತನ್ಮಯತೆ ಅಥವಾ ಆಫೀಸಿನಲ್ಲಿ ಹೊಸದಾಗಿ ಬಂದಿರುವ ಹಾಟ್ ಹುಡುಗಿಯನ್ನು ನೋಡುವಾಗ ಇರುವ "ಏಕಾಗ್ರತೆ" ಇಲ್ಲಿ ಬೇಕಾಗುತ್ತದೆ! [ತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ]

ಹಾಗಾಗಿ ಹಾರ್ಲಿಕ್ಸ್ ಪುಡಿ, ಉಂಡೆಯಾಗಿ ಬೀಳದಂತೆ ಎಚ್ಚರ ವಹಿಸಿ. ನಂತರ ಪ್ಲೇಟ್ ನಲ್ಲಿ ಬಾಣಲೆ ಮುಚ್ಚಿ, ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಲು ಬಿಡಿ.

ಇಷ್ಟರಲ್ಲಿ ನಿಮ್ಮ ಹಳೆ ಗೆಳತಿ ಏನಾದ್ರೂ ಮೆಸೇಜು ಮಾಡಿದ್ದಾಳಾ ಗಮನಿಸಿ. ಆದ್ರೆ ಹೆಂಡತಿದು ಎರಡು ಮಿಸ್ಡ್ ಕಾಲ್ ಹಾಗು ಎರಡು ಮೂರು ಮೆಸೇಜುಗಳು ಇರುತ್ತದೆ. "ಇವತ್ತು ಕಾವೇರಿ ನೀರು ಬರುತ್ತೆ, ಹಿಡಿದಿಡಿ. ಹೊರಗೆ ಗಿಡಕ್ಕೆ ನೀರು ಹಾಕಿ" ಅಂತೆಲ್ಲಾ ಆದೇಶ ಇರುತ್ತದೆ. ಆದ್ರೆ ಉತ್ತರಿಸುವ ಗೋಜಿಗೆ ಹೋಗದೆ ತೆಪ್ಪಗೆ ವಾಪಸು ಅಡುಗೆ ಮನೆಗೆ ಬಂದು ಸ್ಟವ್ ಆರಿಸಿ. ಅಷ್ಟಕ್ಕೂ ಉತ್ತರಿಸಲೇಬೇಕೆಂದಿದ್ದರೆ ನಿಮ್ಮಿಷ್ಟ!

ಆಮೇಲೆ ಒಂದು ತಟ್ಟೆಗೆ ದೊಸೆಯನ್ನ ಸ್ಥಳಾಂತರ ಮಾಡಿ, ಅದಕ್ಕೆ ಒಂದಿಷ್ಟು ತುಪ್ಪ, ಜೇನುತುಪ್ಪ ಹಾಕಿಕೊಂಡು ಜಮಾಯಿಸಿ. ರುಚಿಯಾಗಿ ಇರುತ್ತೆ. ಇಲ್ಲದೆ ಇದ್ದಲ್ಲಿ ನಿಮ್ಮ ಹೆಂಡತಿ ಮಾಡಿರುವ ಹಿಟ್ಟು ಸರಿಯಿಲ್ಲ ಎಂದು ಭಾವಿಸಿ. ಸಾಮಾನ್ಯವಾಗಿ ಹಾರ್ಲಿಕ್ಸ್ ರುಚಿಯಾಗೆ ಇರುತ್ತದೆ.

ಇದೇ ಮಾರ್ಗದಲ್ಲಿ ನೀವು ದೋಸೆಯ ಮೇಲೆ ಕೊಂಪ್ಲಾನ್, ಬೂಸ್ಟ್, ಬೌರ್ನ್ವಿಟ ಇತ್ಯಾದಿಗಳನ್ನೂ ಪ್ರಯೋಗಿಸಬಹುದು, ಹಿಟ್ಟು ಖಾಲಿ ಆಗುವವರೆಗೆ. ಹೆಂಡತಿ ಬರುವವರೆಗೆ ಬಾಣಲೆ ತೊಳೆಯಬೇಕು ಅಂತೇನಿಲ್ಲ. ಆದ್ರೆ ತಿಂದ ಮೇಲೆ ಕೈ ಮಾತ್ರ ಮರೆಯದೆ ತೊಳೆಯಿರಿ!

ಸರ್ವೇ ಜನಾಃ ಸುಖಿನೋ ಭವಂತು. [ಆಸೆಯ ದೋಸೆ ತಿನ್ನಲು ಹೋಗಿ ಮಣ್ಣಾದ ಮೀಸೆ!]

English summary
It is a celebration time when wife is not at home, for some husbands. Others just pretend to be obedient husbands. If such occasion comes what you should do? Just celebrate it with Horlicks Dosa. How to prepare this delicious recipe? Shastry explains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X