ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಹಾ ಅಂಗಡಿ ಮಾಲಿಕರ ಮೇಲೆ ಕೇಂದ್ರ ಬ್ರಹ್ಮಾಸ್ತ್ರ

By ಬಾಲರಾಜ್ ತಂತ್ರಿ
|
Google Oneindia Kannada News

ದೇಶಾದ್ಯಂತ ವ್ಯಾಪಕವಾಗಿ ತಲೆ ಎತ್ತಿ ಜನಪ್ರಿಯತೆ ಪಡೆದು ಕೊಳ್ಳುತ್ತಿರುವ ಚಹಾ ಅಂಗಡಿಗಳ ಮೇಲೆ ಹದ್ದಿನ ಕಣ್ಣು ಇಡಲು ಸರಕಾರ ದಿಢೀರ್ ನಿರ್ಧರಿಸಿದೆ. ಈ ಸಂಬಂಧ ತುರ್ತು ಕ್ಯಾಬಿನೆಟ್ ಮೀಟಿಂಗ್ ಕರೆದಿದೆ.

ಚಹಾ ಅಂಗಡಿಗಳ ಜನಪ್ರಿಯತೆಯಿಂದ ಕಂಗಾಲಾಗಿರುವ ಸರಕಾರ ಅತಿ ಶೀಘ್ರದಲ್ಲಿ ಜಾರಿಗೆ ಬರುವಂತೆ ಅಂಗಡಿಗಳ ಮೇಲೆ ಕೆಲವೊಂದು ನಿರ್ಭಂದ ಹೇರಲು ಮುಂದಾಗಿದೆ. ಪ್ರಾಯೋಗಿಕವಾಗಿ ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಹೊಸ ಕಾನೂನು ಜಾರಿಗೆ ತರಲು ತುರ್ತು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. (ಯಾರಿಗೆ ಬೇಕು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್')

ಚಹಾ ಅಂಗಡಿಗಳ ಜನಪ್ರಿಯತೆಗೆ ಶತಾಯುಗತಾಯು ಕಡಿವಾಣ ಹಾಕಲು, ಸಚಿವ ಸಂಪುಟ ಸಭೆಯಲ್ಲಿ ತೆಗೆದು ಕೊಂಡ ಪ್ರಮುಖ ನಿರ್ಧಾರಗಳು ಇಂತಿವೆ:

1. ಸಿಲಿಂಡರ್ : ಚಹಾ ಅಂಗಡಿ ನಡೆಸುವ ಮಾಲೀಕರಿಗೆ ಸರಕಾರೀ ಸ್ವಾಮ್ಯದ ಅನಿಲ ಕಂಪೆನಿಗಳಿಂದ ಅಡುಗೆ ಅನಿಲ ಸಿಲಿಂಡರ್ ಸರಬರಾಜು ನಿಲ್ಲಿಸಲು ನಿರ್ಧರಿಸಲಾಗಿದೆ. ಚಹಾ ಅಂಗಡಿ ಮಾಲೀಕರಿಗೆ ಇನ್ನು ಮುಂದೆ ಖಾಸಗಿ ಕಂಪೆನಿಗಳೇ ಗತಿ.

2. ಹಾಲು : ಸಂಪುಟದ ಇನ್ನೊಂದು ಪ್ರಮುಖ ನಿರ್ಧಾರದಂತೆ ಚಹಾ ಅಂಗಡಿ ಮಾಲೀಕರಿಗೆ ಇದೇ ಮೊದಲ ಬಾರಿಗೆ ಕಮರ್ಷಿಯಲ್ ದರದಲ್ಲಿ ಹಾಲು ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ, ದಿನವೊಂದಕ್ಕೆ ಐದು ಲೀಟರ್ ಹಾಲು ಮಾತ್ರ ಪೂರೈಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫ್ಯಾಕ್ಸ್ ಮೂಲಕ ಆದೇಶದ ಪ್ರತಿ ರವಾನಿಸಲಾಗಿದೆ.

ಸಂಪುಟ ಸಭೆಯ ಇತರ ನಿರ್ಧಾರಗಳು, ಸ್ಲೈಡಿನಲ್ಲಿ. (ಕೊನೆಯ ಸ್ಲೈಡ್ ತನಕ ಓದಿ..)

ಚಹಾ ಅಂಗಡಿಯ ಸುತ್ತಮುತ್ತ ನಿಷೇಧಾಜ್ಞೆ

ಚಹಾ ಅಂಗಡಿಯ ಸುತ್ತಮುತ್ತ ನಿಷೇಧಾಜ್ಞೆ

3. ನಿಷೇಧಾಜ್ಞೆ : ವ್ಯಾಪಕವಾಗಿ ತನ್ನ ಜನಪ್ರಿಯತೆ ಹೆಚ್ಚಿಸಿ ಕೊಳ್ಳುತ್ತಿರುವ ಚಹಾ ಅಂಗಡಿಯ ಸುತ್ತ ಮುತ್ತ ಬೆಳಗ್ಗೆ ಏಳರಿಂದ ಸಂಜೆ ಐದರವರೆಗೆ ಅನ್ವಯವಾಗುವಂತೆ ಸೆಕ್ಷನ್ 144 ಅಥವಾ ನಿಷೇಧಾಜ್ಞೆ ಜಾರಿಗೆ ತರಲು ಗೃಹ ಸಚಿವಾಲಯ ತನ್ನ ಅಧಿಕಾರಿಗಳ ಜೊತೆ ಚರ್ಚಿಸಲು ಆದೇಶ ನೀಡಲಾಗಿದೆ. ಇದು ಜಾರಿಗೆಯಾದರೆ ಚಹಾ ಅಂಗಡಿಯ ಸುತ್ತಮುತ್ತ ಐದಕ್ಕೆ ಮೇಲ್ಪಟ್ಟು ಜನ ಗುಂಪು ಸೇರುವಂತಿಲ್ಲ.

ನೀರು ಮತ್ತು ಕರೆಂಟಿಗೆ ಸೆಪರೇಟ್ ಮೀಟರ್

ನೀರು ಮತ್ತು ಕರೆಂಟಿಗೆ ಸೆಪರೇಟ್ ಮೀಟರ್

4. ನೀರು ಮತ್ತು ಕರೆಂಟ್ : ಸಂಪುಟದ ನಿರ್ಧಾರದಂತೆ ಚಹಾ ಅಂಗಡಿ ಮಾಲೀಕರು ಇನ್ನು ಮುಂದೆ ನೀರು ಮತ್ತು ಕರೆಂಟಿಗೆ ಪ್ರತ್ಯೇಕವಾದ ಡಿಜಿಟಲ್ ಮೀಟರ್ ಹಾಕಿಸಿಕೊಳ್ಳುವುದು ಕಡ್ಡಾಯ. ಹಾಗೂ ಹೊಸ ಡಿಜಿಟಲ್ ಮೀಟರ್ ಅಳವಡಿಸಿದ ನಂತರ ಯೂನಿಟ್ ಒಂದರ ಬೆಲೆ ಕೈಗಾರಿಕಾ tariff ನಲ್ಲಿ ಭರಿಸ ಬೇಕಾಗುತ್ತದೆ. ಹೊಸ ಮೀಟರ್ ಅಡವಡಿಸಿಕೊಳ್ಳಲು ಒಂದು ವಾರದ ಗಡುವು ನೀಡಲು ನಿರ್ಧರಿಸಲಾಗಿದೆ.

ಚಹಾ ಅಂಗಡಿಗೆ ಲೈಸೆನ್ಸ್ ಅಗತ್ಯ

ಚಹಾ ಅಂಗಡಿಗೆ ಲೈಸೆನ್ಸ್ ಅಗತ್ಯ

5. ಲೈಸೆನ್ಸ್ : ಚಹಾ ಅಂಗಡಿಗಳನ್ನು ಶಾಪ್ ಅಂಡ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯಡಿಯಲ್ಲಿ ತರಲು ವಾಣಿಜ್ಯ ಸಚಿವಾಲಯಕ್ಕೆ ಆದೇಶ ನೀಡಲಾಗಿದೆ. ಹಾಗಾಗಿ, ಇನ್ನು ಮುಂದೆ ಎಲ್ಲಾ ಚಹಾ ಅಂಗಡಿಗಳು shop and establishment ಇಲಾಖೆಯಲ್ಲಿ ಲೈಸೆನ್ಸ್ ಪಡೆಯುವುದು ಕಡ್ಡಾಯ. ಲೈಸೆನ್ಸ್ ಪಡೆಯಲು ಕಟ್ಟ ಬೇಕಾದ ಶುಲ್ಕವನ್ನು ಒಂದು ಲಕ್ಷ ರೂಪಾಯಿಗೆ ನಿಗದಿ ಪಡಿಸಲು ನಿರ್ಧರಿಸಲಾಗಿದೆ. ಲೈಸೆನ್ಸ್ ಪಡೆದ ನಂತರವಷ್ಟೇ ಚಹಾ ಅಂಗಡಿ ನಡೆಸಲು ಅನುಮತಿ.

ಆದಾಯ ತೆರಿಗೆ ದಾಳಿ

ಆದಾಯ ತೆರಿಗೆ ದಾಳಿ

6. ಆದಾಯ ತೆರಿಗೆ : ಲೈಸೆನ್ಸ್ ಪಡೆಯಲು ಚಹಾ ಅಂಗಡಿ ಮಾಲೀಕರು ನಿಶ್ಯಕ್ತರಾಗಿರುತ್ತಾರೆ ಎನ್ನುವ ಆಲೋಚನೆಯಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಆದಾಗ್ಯೂ, ಚಹಾ ಅಂಗಡಿ ತೆರೆಯಲು ಯಾರದರೂ ದೇಣಿಗೆ ನೀಡಿದರೆ ಅಂಥವರ ಮೇಲೂ ಹದ್ದಿನ ಕಣ್ಣಿಟ್ಟು ತದನಂತರ ಅವರುಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಛೂ ಬಿಡಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡಲಾಗಿದೆ.

ಚಹಾ ವಿರುದ್ದ ಜಾಹೀರಾತು

ಚಹಾ ವಿರುದ್ದ ಜಾಹೀರಾತು

7. ಜಾಹೀರಾತು : ಚಹಾ ಅಂಗಡಿಗಳ ಜನಪ್ರಿಯತೆ ತಗ್ಗಿಸಲು ತನ್ನ ಅಧೀನದಲ್ಲಿರುವ ಟಿವಿ ವಾಹಿನಿಗಳ ಮೂಲಕ ಇದರ ವಿರುದ್ದ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲೂ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.

8. ಸರಕಾರದ ನೂತನ ನೀತಿ ಕಟ್ಟುನಿಟ್ಟಾಗಿ ಜಾರಿಗೆ ತಂದು, ಚಹಾ ಅಂಗಡಿಗಳ ಜನಪ್ರಿಯತೆಗೆ ಕಡಿವಾಣ ಹಾಕವುದಕ್ಕೆ ಅಯಾಯ ರಾಜ್ಯಗಳ ಪಕ್ಷದ ಅಧ್ಯಕ್ಷರನ್ನೇ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗಿದೆ. ಮತ್ತು ಇವರುಗಳು ಕೇಂದ್ರದಲ್ಲಿ ಉಪಾಧ್ಯಕ್ಷರಿಗೆ ವರದಿಯನ್ನು ಒಪ್ಪಿಸ ತಕ್ಕದ್ದು ಎಂದು ಸಭೆಯಲ್ಲಿ ಎಂಟಂಶದ ನಿರ್ಧಾರಕ್ಕೆ ಬಂದು ಸಭೆಯಲ್ಲಿ ಬರ್ಖಾಸ್ತು ಗೊಳಿಸಲಾಗಿದೆ.

ಸರಕಾರದ ಸಮರ್ಥನೆ

ಸರಕಾರದ ಸಮರ್ಥನೆ

ಈ ಎಲ್ಲಾ ಕ್ರಮಗಳಿಂದ ಲೋಕಸಭಾ ಚುನಾವಣೆಗೆ ಮುನ್ನ ಚಹಾ ಅಂಗಡಿಗಳ ಮೇಲಿನ ಜನರ ವ್ಯಾಮೋಹ ಮತ್ತು ಜನಪ್ರಿಯತೆ ಕುಗ್ಗಿಸುವ ಮಹದಾಸೆಯನ್ನು ಸರಕಾರ ಹೊಂದಿದೆ. ಜನರ ಆರೋಗ್ಯದ ದೃಷ್ಟಿಯಿಂದ ಸರಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಸಭೆಯ ನಂತರ ಮಾಧ್ಯಮ ವಕ್ತಾರರ ಕಿವಿಗೆ ಹೂ ಇಡುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಆದರೆ ಮಾಧ್ಯಮದವರು ಕಿವಿಗೆ ಹೂ ಇಟ್ಟು ಕೊಳ್ಳದೇ ಪ್ರಶ್ನೆಗಳ ಸುರಿಮಳೆಗೈದಾಗ ಸರಿಯಾದ ಉತ್ತರ ಕೊಡಲು ನುಣುಚಿಕೊಂಡ ವಕ್ತಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ವಿರೋಧ ಪಕ್ಷಗಳು ಕಿಡಿ

ವಿರೋಧ ಪಕ್ಷಗಳು ಕಿಡಿ

ಸರಕಾರದ ಈ ಕ್ರಮದ ವಿರುದ್ದ ಪ್ರಮುಖ ವಿರೋಧ ಪಕ್ಷ ಸರಕಾರ ವಿರುದ್ದ ತಿರುಗಿ ಬಿದ್ದಿದೆ. ಚಹಾ ಅಂಗಡಿಗಳ ಜನಪ್ರಿಯತೆಯನ್ನು ಕಂಡು ಸರಕಾರ ಕಂಗಾಲಾಗಿದೆ, ಸರಿಯಾದ ಮಾರ್ಗದಲ್ಲಿ ಎದುರಿಸಲಾಗದೇ ಇಂತಹಾ ಹೇಡಿತನದ ನಿರ್ಧಾರಕ್ಕೆ ಸರಕಾರ ಮುಂದಾಗಿದೆ ಎಂದು ಲೇವಡಿ ಮಾಡಿದೆ. ನೀವು ಏನು ಕಾನೂನು ಜಾರಿಗೆ ಬಂದರೂ ಜನತೆ ಚಹಾ ಕುಡಿಯದೇ ಇರುವುದಿಲ್ಲ, ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಭಯಂಕರ ವಿಶ್ವಾದ ಮಾತನ್ನು ಪ್ರಮುಖ ವಿರೋಧ ಪಕ್ಷದ ವಕ್ತಾರರು ಅಭಿಪ್ರಾಯ ಪಟ್ಟಿದ್ದಾರೆ.

(ಚಹಾ ಅಂಗಡಿಯ ಜಾಗದಲ್ಲಿ ನಮೋ ಎಂದು ಸೇರಿಸಿ ಓದುವುದು ಮತ್ತು ಇದೊಂದು ದುರುದ್ದೇಶವಿಲ್ಲದ ವಿಡಂಬನಾತ್ಮಕ ಲೇಖನವಾಗಿದೆ)

English summary
Humor article on Government restriction to open the Tea Shop across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X