ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2012ಗೆ ’ಎಂಡ ಆಫ್ ದ ವರ್ಲ್ಡ್’ ಆಗಿದ್ದರs?

By ಪ್ರಶಾಂತ ಕೆ. ಅಡೂರ, ಹುಬ್ಬಳ್ಳಿ
|
Google Oneindia Kannada News

First anniversary of Doomsday, 21st December
ಇವತ್ತ ಮುಂಜಾನೆ ಏಳೊ ಪುರಸತ್ತ ಇಲ್ಲದ ನನ್ನ ಹೆಂಡತಿ "ರ್ರಿ, ಇವತ್ತ ತಾರಿಖ ಎಷ್ಟು?" ಅಂದ್ಲು. ಹಂಗ ಅಕಿ ನಾರ್ಮಲಿ ಡೇಟ ಬಗ್ಗೆ ತಲಿಕೆಡಸಿಗೊಳ್ಳೊದ ಒಂದು ಅಕಿ ಡೇಟ ಇದ್ದಾಗ ಇಲ್ಲಾ ಏಳನೇ ತಾರಿಖಿಗೆ ಇಷ್ಟ, ಅದು ನನ್ನ ಪಗಾರ ಕ್ರೇಡಿಟ್ ಆತೊ ಇಲ್ಲೊ ಅಂತ ಕೇಳಲಿಕ್ಕೆ. ಅವ್ಯಾರಡ ಬಿಟ್ಟರ ಅಕಿ ಬ್ಯಾರೆ ಯಾ ಡೇಟನು ತಲಿ ಮ್ಯಾಲೆ ಎತ್ತಿ ಕ್ಯಾಲೆಂಡರನಾಗ ನೋಡದೋಕಿ ಅಲ್ಲಾ. ಹಂತಾಕಿ ಯಾಕ ಇವತ್ತ ಎದ್ದ ಒಮ್ಮಿಂದೊಮ್ಮಿಲೆ ಡೇಟ ಕೇಳಿದ್ಲಲೇ, ನಾ ಏನರ ಇವತ್ತ ಅಕಿಗೆ ಡೇಟ ಕೊಟ್ಟ ಗಿಟ್ಟಿದ್ನೇ ಇಲ್ಲಾ ಅಕಿದ ಏನರ ಡೇಟ ಇತ್ತೇನ ಅಂತ.

"ಇವತ್ತ ಇಪ್ಪತ್ತೊಂದ, ಯಾಕ ನಿಂದೇನರ ಇವತ್ತ ಡೇಟ ಇತ್ತೇನ?" ಅಂದೆ.

"ರ್ರಿ, ಹೋಗರಿ ಏನ ಅಸಂಯ್ಯ ಮಾತಾಡ್ತೀರಿ. ಇವತ್ತ ಡಿಸೆಂಬರ್ 21 ಅಲಾ, ಹಂಗೇನರ ಮಾಯನ್ ಕ್ಯಾಲೆಂಡರ ಪ್ರಕಾರ ಹೋದ ವರ್ಷ ಡಿಸೆಂಬರ್ 21ಕ್ಕ ಜಗತ್ತ ಮುಳಗಿ ಹೋಗಿತ್ತಂದರ ಇವತ್ತ ಎಲ್ಲಾರದು ವರ್ಷಾಂತಕ ಇರತಿತ್ತು" ಅಂದ್ಲು.

ಥೂ, ಮುಂಜಾ ಮುಂಜಾನೆ ಎದ್ದ ಏನ ಮಾತಾಡ್ತಾಳೊ ಏನೋ ಸಂಬಂಧ ಇಲ್ಲಾ ಸಾಟಿಲ್ಲಾ, ಸೀದಾ ವರ್ಷಾಂತಕಕ್ಕ ಹೊಂಟಳು ಅಂತ. [ಕಳೆದ ವರ್ಷ ಪ್ರಕಟವಾದ ಲೇಖನ]

"ಲೇ, ಹಂಗ ಜಗತ್ತ ಮುಳಗಿತ್ತಂದರ ಎಲ್ಲಾರೂ ಹೋಗಿರ್ತಿದ್ದರು, ವರ್ಷಾಂತಕಾ ಯಾರ ನಿಮ್ಮಜ್ಜ ಮಾಡತಿದ್ನೇನ?" ಅಂತ ನಾ ಅಂದರ.

"ಅಯ್ಯ, ಒಂದಿಷ್ಟ ನಿಮ್ಮಂಥಾ ಶಾಣ್ಯಾ ಮಂದಿ ಹಡಗದಾಗ ಓಡಿ ಹೋಗಿ ಉಳ್ಕೊಂಡಿರತಿದ್ದರಲಾ, ಅವರ ಮಾಡತಿದ್ದರು" ಅಂದ್ಲು. ಹಕ್ಕ.. ನನಗ ಹಡಗದಾಗ ಜಗಾ ಸೀಟ ಸಿಗ್ತದ ಅಂತ ಇಕಿಗೆ ಗ್ಯಾರಂಟಿ ಇತ್ತ ಅಂತ ಖುಷಿ ಅನಸ್ತು, ಅಷ್ಟರಾಗ...

"ಅಲ್ಲರಿ ಆದರು ಹಂಗ ಸುಮ್ಮನ ವಿಚಾರ ಮಾಡ್ರಿ, 2012ಗೆ ಎಂಡ್ ಆಫ್ ದಿ ವರ್ಲ್ಡ ಆಗಿದ್ದರ ಈ ವರ್ಷ ಏನೇನ ಆಗ್ತಿದ್ದಿಲ್ಲಾ?" ಅಂತ ಅಕಿ ಶುರು ಮಾಡಿದ್ಲು. ಅದ ಏನೋ ಅಂತಾರಲಾ ಉದ್ಯೋಗಿಲ್ಲದ ಶಿಂಪಿಗ್ಯಾ ತನ್ನ ಹೆಂಡ್ತಿ ಬ್ಲೌಸಿನ ಹುಕ್ಕ್ ಕಿತ್ತಿ ಕಿತ್ತಿ ಹಚ್ಚತಿದ್ದನಂತ ಹಂಗ ಇಕಿ ಮುಂಜ ಮುಂಜಾನೆ ಶುರು ಮಾಡಿದ್ಲು.

"ಏನ ಆಗ್ತಿತ್ತ, ನಂಬದ ಹದಿಮೂರನೇ ವರ್ಷದ್ದ ಅನಿವರ್ಸರಿ ಆಗ್ತಿದ್ದಿಲ್ಲಾ.. ನಮ್ಮ ಸಂಸಾರ ಅಲ್ಲಿಗೆ ಆಟಾ-ಗುಟಾ ಜೈ ಆಗ್ತಿತ್ತ" ಅಂತ ನಾ ಅಂದರ...

"ರ್ರಿ, ಹಂಗ ನಾನು ನಿಮ್ಮ ಜೊತಿ ಹಡಗದಾಗ ಬಂದಿರತಿದ್ದೆ... ಅಲ್ಲೇ ಹಡಗದಾಗ ಅನಿವರ್ಸರಿ ಮಾಡ್ಕೊಬಹುದಿತ್ತ ಬಿಡ್ರಿ. ನೀವೇನ ನನ್ನ ಬಿಟ್ಟ ಒಬ್ಬರ ಹೋಗತಿದ್ದರೇನ?" ಅಂದ್ಲು.

ಅಲ್ಲಾ, ಇಕಿನ್ಯಾರ ಹಡಗದಾಗ ಕರಕೊಂಡ ಹೋಗ್ತಿದ್ದರು ಅಂತೇನಿ, ಹಂಗ ನನ್ನs ಕರಕೊಂಡ ಹೋಗ್ತಿದ್ದರೋ ಇಲ್ಲೊ ಅದ ಗ್ಯಾರಂಟಿ ಇದ್ದಿದ್ದಿಲ್ಲಾ. ಏನೋ ಚುರು ಪಾರ ಕನ್ನಡದಾಗ ಬರಿತೇನಿ ಅಂತ ಕರಕೊಂಡ ಹೋದರ ಹೋಗಬೇಕಿತ್ತು. ಹಂತಾದರಾಗ ಇಕಿನು ತನ್ನ ಸೀಟ ರಿಸರ್ವ ಮಾಡೊಕಿದ್ಲ ಕಾಣತದ.

ಅಲ್ಲಾ ಇಗ್ಯಾಕ ಆ ವಿಷಯ ಬಿಡ್ರಿ... ಜಗತ್ತ ಮುಳಗಿಲ್ಲಾ ಅಂದ ಮ್ಯಾಲೆ ಯಾಕ ತಲಿಕೆಡಸಿಗೊಳ್ಳೊದು ಅಂತ ನಾ ಸುಮ್ಮನಾದೆ. ಆದರ ನನ್ನ ಹೆಂಡತಿ ಇನ್ನು ಅದ ಗುಂಗಿನಾಗ ಇದ್ದಳು.

"ಅಲ್ಲರಿ, ನಾ ಹೇಳೋದನ್ನ ನೀವು ಒಂದ ಸ್ವಲ್ಪ ಗ್ಲೊಬಲಿ ಥಿಂಕ್ ಮಾಡರಿ... ಹಂಗ 2012ಕ್ಕ ಜಗತ್ತ ಮುಳಗಿದ್ದಿಲ್ಲಾಂದರ ಸಚಿನ ತೆಂಡುಲ್ಕರ ರಿಟೈರ್ಡ ಆಗತಿದ್ದಿಲ್ಲಾ, ನೆಲ್ಸನ್ ಮಂಡೇಲಾ ಸಾಯಿತಿದ್ದಿದ್ದಿಲ್ಲಾ...vಹಂಗ ವಿಚಾರ ಮಾಡ್ರಿ" ಅಂದ್ಲು.

ಹಕ್ಕ ಗ್ಲೋಬಲಿ ಥಿಂಕ ಮಾಡಬೇಕಂತ, ಲಗ್ನ ಆದಾಗಿಂದ ಅಕಿನ ನಮ್ಮ ಗ್ಲೋಬ್ ಅಂತ ಅಕಿ ಸುತ್ತಹರಿತಿರಬೇಕಾರ ಮತ್ತ ಇನ್ನೇನ ತಲಿ ಗ್ಲೋಬಲ್ ಥಿಂಕ್ ಮಾಡಬೇಕ ಅಂತೇನಿ. ಅಲ್ಲಾ ಹಂಗ ಅಕಿ ಬ್ಯಾರೆದ ವಿಚಾರ ಮಾಡಲಿಕ್ಕೆ ಅಕಿ ಬಿಟ್ಟರ ಹೌದಲ್ಲ?

ನಾ ಮತ್ತು ತಲಿ ಕೆಟ್ಟ, "ನಿನ್ನ ಮಗನ ಮುಂಜವಿ ಮಾಡೋದ ತಪ್ಪತಿತ್ತ, ನಂದ ಒಂದ ಮೂರ ಲಕ್ಷ ರೂಪಾಯಿ ಉಳಿತಿತ್ತು" ಅಂದೆ.

"ಅಯ್ಯ.. ಅದ್ಯಾಕ ಮುಂದಾದರು ಮಾಡಬೇಕಾಗ್ತಿತ್ತ್ ತೊಗೊಳ್ರಿ, ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ಮುಂದಿನ ಪೀಳಗಿಗೆ ಉಳಿಬೇಕೊ ಬ್ಯಾಡೊ?" ಅಂತ ನನಗ ಕೇಳಿದ್ಲು.

ಅಲ್ಲಾ, ಏನ ಅಗದಿ ನಾವ ಒಬ್ಬರ ಶಂಕರಾಚಾರ್ಯರ ವಂಶಸ್ಥರು, ನಾವು ದಿನಾ ಶಂಕಾ ಊದಿದರಿಷ್ಟ ನಮ್ಮ ಸಂಪ್ರದಾಯ, ಸಂಸ್ಕೃತಿ ಮುಂದ ವರಿತದ ಅನ್ನೋರಗತೆ ಮಾತಾಡ್ತಾಳ. ನಮ್ಮ ದೋಸ್ತರ ನೋಡಿದ್ರ 'ಲೇ, ಬ್ರಾಹ್ಮರ ಹಾದಿ ಬಿಟ್ಟಿದ್ದಕ್ಕ ಇವತ್ತ ಜಗತ್ತ ಹಳ್ಳಾ ಹಿಡದ ಪ್ರಳಯ ಆಗೊಹಂಗ ಆಗಿದ್ದ ಮಕ್ಕಳ' ಅಂತ ಏನಿಲ್ಲದ ಹೋಯ್ಕಿತಿರ್ತಾರ ಅಂತ ನಾ ಸುಮ್ಮನಾದೆ. ನನ್ನ ಹೆಂಡತಿ ಅಲ್ಲಿಗೆ ಸುಮ್ಮನ ಕೂಡಲಿಲ್ಲಾ ಹಂಗ ಮುಂದವರಿಸಿ...

"ಅಲ್ಲಾ, ಹಂಗ ಜಗತ್ತ ಮುಳಗಿತ್ತಂದರ ನಮ್ಮ ಮಾವನೋರದ ಕಣ್ಣಿಂದ ಆಪರೇಶನ್ ಮಾಡಸೋದ ಉಳಿತಿತ್ತ" ಅಂದ್ಲು. ಅಲ್ಲಾ ನಮ್ಮಪ್ಪಂದ ಹದಿನೈದ ಸಾವಿರ ರೂಪಾಯದ್ದ ಕಣ್ಣಿನ ಆಪರೇಶನ್ ಇಕಿ ಕಣ್ಣಾಗ ಎಷ್ಟ ಒತ್ತತದ ಅಂತೇನಿ.

"ಹಂಗ, ನಿಮ್ಮಪ್ಪಂದ ಅರವತ್ತ ವರ್ಷದ ಶಾಂತಿನು ತಪ್ಪತಿತ್ತ... ನಿಮ್ಮಜ್ಜಂದ ಉದಕ ಶಾಂತಿನು ತಪ್ಪತಿತ್ತ.. ಈಗ ಸಾಕ್ ಮುಗಸ. ಈಗೇನ ಜಗತ್ತ ಮುಳಗಿಲ್ಲಾ, ನಾವೇನ ಹಡಗದಾಗ ಹೊಂಟಿಲ್ಲಾ. ಸುಳ್ಳ ಮುಂಜ ಮುಂಜಾನೆ ಎದ್ದ ತಲಿ ತಿನ್ನಬ್ಯಾಡ. ಹಂಗ ನಿನ್ನ ಕಟಗೊಂಡಾಗಿಂದ ನನ್ನ ಜಗತ್ತ ಮುಳಗೆ ಹೋಗೇದ" ಅಂತ ನಾ ಒಂದ ಉಸರನಾಗ ಬೈದೆ.

"ಅಯ್ಯ, ಅದಕ್ಯಾಕ ಅಷ್ಟ ಸಿಟ್ಟಗಿ ಏಳ್ತೀರಿ...ಏನೋ 2012ಕ್ಕ ವರ್ಲ್ಡ ಎಂಡ ಆಗಿದ್ದರ ಅಂತ ವಿಚಾರ ಮಾಡಿದೆ ಇಷ್ಟ... ಅಲ್ಲಾ ಹಂಗ ಖರೇನ ಜಗತ್ತ ಮುಳಗಿದ್ದರ ನಿಶ್ಚಿಂತ ಇರತಿತ್ತ.... ನಂಗೂ ನಿಮ್ಮನ್ನ ಕಟಗೊಂಡ ಜೀವನ ಬ್ಯಾಸರಾಗಿ ಹೋಗೇದ..... ನಿಮ್ಮ ಕಡೆ ದಿನಾ ಒಂದಕ್ಕೂ ಒದರಿಸಿಗೊಳ್ಳೊದರ ತಪ್ಪತಿತ್ತ.... ಈ ಸುಡಗಾಡ ಸಂಸಾರದಾಗಿನ ಒಣಾ ಜಂಜಾಟರ ತಪ್ಪತಿದ್ವು" ಅಂತ ಮೂಗ ತಿರುವಿ ಬಚ್ಚಲಮನಿಗೆ ಹೋದ್ಲು.

ಅಲ್ಲಾ ಹೆಂತಾ ಸ್ವಾರ್ಥ ಹೆಣ್ಣಮಗಳ ಅಂತೇನಿ, ತನಗ ಜೀವನ ಬ್ಯಾಸರ ಆದರ ಇಡಿ ಜಗತ್ತ ಮುಳಗಲಿ ಅಂತಾಳಲಾ. 'ನಾ ಇರಲಿ ಬಿಡಲಿ ಈ ಜಗತ್ತ ಸದಾ ನಗ-ನಗತಾ ಇರಲಿ, ಗಂಡಾ ಮಕ್ಕಳು ಅವರರ ಆರಾಮ ಇರಲಿ' ಅನ್ನೊ ಭಾವನೆನ ಇಲ್ಲಲಾ ಇಕಿಗೆ ಅಂತ ನಂಗ ಖರೇನ ಕೆಟ್ಟ ಅನಸ್ತ...

ಅಲ್ಲಾ, ಹಂಗ ಖರೇನ ಜಗತ್ತೇನರ ಮುಳಗಿದ್ದರ ಇವತ್ತ ನಾ ಇದನ್ನ ಬರಿತಿದ್ದಿಲ್ಲಾ, ನೀವ ಓದತಿದ್ದಿಲ್ಲಾ ಆ ಮಾತ ಬ್ಯಾರೆ... ಆದರು ನಾವ ಜೀವನದಾಗ ಒಂದೊಂದ ಸರತೆ ಹಂಗ ಆಗಿದ್ದರ- ಹಿಂಗ ಆಗಿದ್ದರ ಅಂತ ಅನ್ಕೋತೇವಿ ಅಲಾ ಹಂಗ ಖರೇನ ಜಗತ್ತ ಮುಳಗಿ ಬಿಟ್ಟಿದ್ದರ ಅಂತ ಅನ್ಕೊಂಡ ನನ್ನ ಹೆಂಡತಿ ಒಂದ ಸ್ವಲ್ಪ ವಿಚಾರ ಮಾಡಿ ಮುಂಜ ಮುಂಜಾನೆ ಎದ್ದ ಇಬ್ಬರದು ಮೂಡ ಹಾಳ ಮಾಡಿದಳು.

English summary
First anniversary of Doomsday, 21st December. Had the world ended on 21st December 2012 what would have happened? A humorous write up by Prashanth Adur, Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X