ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ಮಾಡ್ತೀರಿ? ಕಟಗೊಂಡೇವಿ ಅನಭವಿಸಬೇಕ ಇಷ್ಟ!

By ಪ್ರಶಾಂತ ಅಡೂರ, ಹುಬ್ಬಳ್ಳಿ
|
Google Oneindia Kannada News

"ಲೇ ದನಾಕಾಯೋನ, ಹೇಳಿದ್ದ ತಿಳಿತದ ಇಲ್ಲ ನಿನಗ, ಮಂಗ್ಯಾ ಒಯ್ದಂದ. ಎಷ್ಟ ಸರತೆ ಹೇಳಬೇಕ, ಆ ಸುಡಗಾಡ ಟಿ.ವಿ ಬಿಟ್ಟ ಏಳ ಅಂತ" ಅಂತ ನನ್ನ ಹೆಂಡ್ತಿ ಒಮ್ಮಿಕ್ಕಲೇ ಜೋರಾಗಿ ಅಡಗಿ ಮನ್ಯಾಗಿಂದ ಒದರಿದ್ಲು. ಅಕಿ ಒದರೋದ ತಡಾ ನಾ ಗಾಬರಿ ಆಗಿ ಭಡಕ್ಕನ ಎದ್ದೋನ..

'ಏನಾತ, ಹಂಗ್ಯಾಕ ಒದರಿದಿ' ಅಂತ ನಾ ಅಂದರ 'ಅಯ್ಯ ನೀವ ಕೂತಿರೇನ ಟಿ.ವಿ ಮುಂದ, ನಾ ಪ್ರಥಮ ಕೂತಾನ ಅಂತ ತಿಳ್ಕೊಂಡಿದ್ದೆ, ಎಲ್ಲೆ ಹೋತ ಪೀಡಾ ಅದ. ಬೆಳಕ ಹರದರ ಸೆಮಿಸ್ಟರ ಪರೀಕ್ಷಾ ಅದ. ಇಪ್ಪತ್ತನಾಲ್ಕ ತಾಸು ಅಪ್ಪಾ ಮಗಾ ಆ ಸುಡಗಾಡ ಕ್ರಿಕೇಟ ನೋಡ್ಕೊತ ಟಿ.ವಿ ಮುಂದ ಕುಕ್ಕರ ಬಡೀತಿರಿ, ನೀವು ಅಂತು ಅವಂಗ ಏನ ಹೇಳಂಗಿಲ್ಲಾ, ಕೇಳಂಗಿಲ್ಲಾ' ಅಂತ ಒಂದ ಉಸಿರಿನಾಗ ಅಂದ್ಲು.

ಹಂಗ ಅಕಿ ನಮಗ ಒಂದ ತಾಸಿನಿಂದ ಹೇಳಲಿಕತ್ತಿದ್ಲು, ಆ ಟಿ.ವಿ ಬಿಟ್ಟ ಏಳ್ರಿ ಅಪ್ಪಾ ಮಗಾ, ಅವಂಗ ಸ್ವಲ್ಪ ಅಭ್ಯಾಸ ಮಾಡಸರಿ ಅಂತ. ನಾ ಹೂಂ ಹೂಂ... ಇದ ಲಾಸ್ಟ ಓವರ್ ಅನ್ಕೋತ ಇಪ್ಪತ್ತ ಓವರ ನೋಡಿದ್ದೆ. ಅಲ್ಲಾ ಹಂಗ ಅಕಿಗೆ ನಾ ಕೂತಿದ್ದ ಗೊತ್ತಿದ್ದು ಅಕಿ ಮಗಾ ಅಂತ ತಿಳ್ಕೊಂಡ 'ಲೇ ದನಾಕಾಯೋನ, ಹೇಳಿದ್ದ ತಿಳಿತದ ಇಲ್ಲ ನಿನಗ' ಅಂದಿದ್ದ ಒಂದ ಅರ್ಥದಾಗ ಇಬ್ಬರಿಗೂ ಅಂದಂಗ ಅದ. ಹಂಗ ಡೈರೆಕ್ಟ ಅನ್ನಲಿಕ್ಕೆ ಬರಂಗಿಲ್ಲಾ ಅಂತ ಮಗನ ಮ್ಯಾಲೆ ಹಾಕಿ ಬೈದ್ಲು ಇಷ್ಟ. ಅದರಾಗ ನನ್ನ ಮಗ ನಡಕ ಎದ್ದ ಆಟಾ ಆಡಲಿಕ್ಕೆ ಹೋಗಿದ್ದ. ಅಕಿಗೆ ಗೊತ್ತ ಇತ್ತೊ ಇಲ್ಲೋ, ಒಟ್ಟ ಅವನ ಮ್ಯಾಲೆ ಹಾಕಿ ಒದರಿದ್ಲು ಇಷ್ಟ ಮಾತ್ರ ಖರೆ. [ಹುಡಗಿ ಐಕ್ಯೂ ನೋಡಿ ಮದವಿ ಆಗ್ರೀಪಾ ಮತ್ತ!]

Do you face same kind of situation at your home also

ಇದ ಬರೇ ನಮ್ಮ ಮನ್ಯಾಗ ಟಿ.ವಿ. ನೋಡೊ ವಿಷಯಕ್ಕ ಇಷ್ಟ ಸಂಬಂಧ ಪಟ್ಟದ್ದಲ್ಲಾ. ಭಾಳ ಅಷ್ಟ ವಿಷಯ ಹಿಂಗ ಇರ್ತಾವ. ಒಂದ ಮಾತ ಇಬ್ಬಿಬ್ಬರಿಗೆ ಹತ್ತೊ ಹಂಗ ಮಾತೊಡೊದ, ಆ ಮಾತೋಡೊ ಧಾಟಿ ಮ್ಯಾಲೆ ತಿಳ್ಕೊಬೇಕ, ಇದ ನನಗ ಅಂದಿದ್ದ, ಇದ ನನ್ನ ಮಗಗ ಅಂದಿದ್ದ ಅಂತ.

'ಭಾಳ ಶಾಣ್ಯಾ ಇದ್ದಿ ತೊಗೊ, ಹಿಂಗ ಟೈಮ್ ಪಾಸ್ ಮಾಡ. ಒಂದ ಕೆಲಸ ಬ್ಯಾಡ ಬೊಗಸಿ ಬ್ಯಾಡ' ಅಂತ ಅಕಿ ಅಂದರ ಅದ ನನ್ನ ಮಗಗ. ಇದ ಸೆಂಟೆನ್ಸಗೆ ಬರೇ ಒಂದ 'ರ್ರಿ....' ಹಚ್ಚಿ... 'ಭಾಳ ಶಾಣ್ಯಾರ ಇದ್ದಿರಿ ತೊಗೊರಿ, ಹಿಂಗ ಟೈಮ್ ಪಾಸ್ ಮಾಡರಿ. ಒಂದ ಕೆಲಸ ಬ್ಯಾಡ ಬೊಗಸಿ ಬ್ಯಾಡ' ಅಂತ ಅಂದರ ನಂಗ ಅಂದಂಗ. [ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]

'ಲೇ, ಬುದ್ಧಿ ಎಲ್ಲೇ ಇಟ್ಟಿ ಮುಂಜ ಮುಂಜಾನೆ ಎದ್ದ ಆ ಸುಡಗಾಡ ಕಂಪ್ಯೂಟರ್ ಮುಂದ ಕೂತ ಬಿಡ್ತಿಯಲಾ' ನನ್ನ ಮಗಗ ಸಂಬಂಧ ಪಟ್ಟಿದ್ದ. 'ರ್ರಿ. ಬುದ್ಧಿ ಎಲ್ಲೇ ಇಟ್ಟಿರಿ ಮುಂಜ ಮುಂಜಾನೆ ಎದ್ದ ಆ ಸುಡಗಾಡ ಕಂಪ್ಯೂಟರ್ ಮುಂದ ಕೂತ ಬಿಡ್ತಿರಲಾ' ಇದ ನನಗ ಸಂಬಂಧ ಪಟ್ಟಿದ್ದ.

ಹಿಂಗ ಅಕಿ ಅಂದಿದ್ದ ಪ್ರತಿಯೊಂದ ಮಾತು ಆಆ ಸಂದರ್ಭಕ್ಕ ಅವರವರಿಗೆ ಸಂಬಂಧ ಪಟ್ಟದ್ವು. ಕೆಲವೊಮ್ಮೆ ಅಂತು 'ನಿನ್ನ ಹೆಣಾ ಎತ್ಲಿ, ನಿನ್ನ ಸುಟ್ಟಬರ್ಲಿ' ಅಂತೇಲ್ಲಾ ಅನ್ನೋಕಿ ಆಮ್ಯಾಲೆ ನನ್ನ ನೋಡಿ ' ಅಯ್ಯ ನೀವೇನ, ನಾ ಪ್ರಥಮನ ಮೊಬೈಲನಾಗ ಆಡಲಿಕತ್ತಾನ ಅಂತ ತಿಳ್ಕೊಂಡಿದ್ದೆ' ಅಂತ ಮ್ಯಾಲೆ ಸ್ಪಷ್ಟೀಕರಣ ಕೋಡೊಕಿ. ಏನ್ಮಾಡ್ತೀರಿ? ಕಟಗೊಂಡೇವಿ ಅನಭವಿಸಬೇಕ ಇಷ್ಟ.

ನಾವ ಸಣ್ಣೊರಿದ್ದಾಗ ಸಾಲ್ಯಾಗ ಹೇಳ್ತಿದ್ದರಲ್ಲಾ 'ಸಂದರ್ಭದೊಡನೆ ಸ್ಪಷ್ಟಿಕರಿಸಿರಿ' ಅಂತ ಒಂದ ಡೈಲಾಗ ಕೊಟ್ಟ ಇದನ್ನ ಯಾರು, ಯಾರಿಗೆ, ಯಾವಾಗ ಮತ್ತ ಯಾಕ ಹೇಳಿದರು, ಅಂತ ಡಿಟೇಲ್ಸ್ ಬರೀರಿ, ಅದ ರೆಫರನ್ಸ್ ಟು ಕಾಂಟೆಕ್ಸ್ಟ. ಹಂಗ ನಮ್ಮ ಮನ್ಯಾಗ ಅಕಿ ಏನ ಡೈಲಾಗ ಹೊಡಿತಾಳ, ಅದರ ಮ್ಯಾಲೆ ನಾವು ಅದನ್ನ ಅಕಿ ಯಾರಿಗೆ, ಯಾವಾಗ, ಯಾಕ ಅಂದ್ಲು ಅಂತ ವಿಚಾರ ಮಾಡಿ ತಿಳ್ಕೊಬೇಕ. [ಮನಸು ಮನಸು ಒಂದಾದರೆ ಬಾಳೆ ಹೊನ್ನಿನ ತಾವರೆ!]

ಹಂಗ ಅಕಿ ಇದನ್ನ ಕಲತದ್ದ ನಮ್ಮವ್ವನಿಂದ. ನಮ್ಮವ್ವನ ಮಾತು ಮೊದ್ಲಿಂದ ಹಿಂಗ. ಅಕಿ ನನಗ ಅಂತಿದ್ಲೊ ನಮ್ಮಪ್ಪಗ ಅಂತಿದ್ಲೊ, ಅನ್ನೋದ ನಮ್ಮಿಬ್ಬರಿಗೂ ಕ್ಲೀಯರ್ ಇರ್ತಿದ್ದಿಲ್ಲಾ. ಇಬ್ಬರು ಹಿಂಗಾಗಿ ಅಕಿ ಅಂದಿದ್ದಕ್ಕ ನಮಗ ಸಂಬಂಧ ಇಲ್ಲಾ ಅಂತ ತಲಿನ ಕೆಡಸಿಗೊತಿದ್ದಿಲ್ಲಾ, ಕಡಿಕೆ ಅಕಿ ಇಬ್ಬರಿಗೂ ಸೇರಿ... 'ಒಬ್ಬರಿಗೂ ಬುದ್ಧಿ ಇಲ್ಲಾ, ದೊಡ್ಡವರು ಹಂಗ ಸಣ್ಣವರು ಹಂಗ' ಅಂತ ಬಯ್ಯೋಕಿ. ಮುಂದ ನನ್ನ ಮದುವಿ ಆದಮ್ಯಾಲೂ ಆ ಟೈಪ ಡೈಲಾಗ್ ಕಂಟಿನೂ ಇರ್ತಿದ್ವು.

'ಎಂಟಾತ ಇನ್ನರ ಏಳತೀರಿ ಇಲ್ಲೊ ನೋಡ್ರಿ, ಏನ ಮುಗ್ಗಲಗೇಡಿ ಗತೆ ಬೆಳಕ ಹರದರು ಹಾಸಗ್ಯಾಗ ಬೀಳ್ತೀರಿ' ಅಂತ ಅನ್ನೊಕಿ ಅದ ನನಗೊ ನನ್ನ ಹೆಂಡ್ತಿಗೋ ಗೊತ್ತಾಗಲಾರದ ಇಬ್ಬರು ಎದ್ದ ಬಿಡ್ತಿದ್ವಿ. [ಡಬ್ಬ ಮಲ್ಕೊಂಡರ ಕೆಟ್ಟ ಕೆಟ್ಟ ಕನಸ ಬಿಳ್ತಾವ, ಬೆತ್ತಲೆ ಮಲ್ಕೊಂಡರ ದೊಡ್ಡ ಕನಸ ಬೀಳ್ತಾವ!]

ಹಿಂಗ ನಮ್ಮವ್ವ ಹಗಲಗಲ ಅನ್ನೋದನ್ನ್ ಕೇಳಿ ನನ್ನ ಹೆಂಡ್ತಿನೂ ಶುರು ಮಾಡಿದ್ದ. ಹಿಂಗಾಗಿ ನಮ್ಮ ಮನ್ಯಾಗ ಯಾರ ಏನ ಮಾತಾಡಿದರು ಅವನ್ನ ನಾವ 'ಸಂದರ್ಭದೊಡನೆ ಸ್ಪಷ್ಟಿಕರಿಸಿಕೊಂಡ' ತಿಳ್ಕೊಬೇಕ.

ಹಂಗ ಹಿಂತಾವ ಎಲ್ಲಾರ ಸಂಸಾರದಾಗೂ ಇರೊ 'ಸಂದರ್ಭ'ಗಳು ಅವನ್ನ ಸಂದರ್ಭ ತಕ್ಕಂಗ ಸ್ಪಷ್ಟಿಕರಿಸಿಕೊಂಡ ಸಂಸಾರ ನಡಸಿಗೊಂಡ ಹೊಗೊದ ಶಾಣ್ಯಾತನ ಅಂತ, ನಾ ಅಂತೂ ಎಲ್ಲಾ ಸಂದರ್ಭದೊಳಗ ನಮ್ಮವ್ವ ನನ್ನ ಹೆಂಡ್ತಿ ಏನ ಅಂದರೂ, ಇದ ನನಗ ಸಂಬಂಧ ಇಲ್ಲಾ ಅಂತ ನನ್ನ ಅಷ್ಟಕ್ಕ ನಾನ ಸ್ಪಷ್ಟಿಕರಣ ಮಾಡ್ಕೊಂಡ ಹೊಂಟ ಬಿಟ್ಟೇನಿ.

English summary
Do you face same kind of situation at your home also? Wife takes husband and son to task in such a way that, it applies to both. But, both ignore it as if it does not apply to them. Super humor by Prashant Adur, Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X