ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಲೋಕನ: ದೈನಂದಿನ ಬದುಕು, ಸಿನಿಮಾ, ಸಾಹಿತ್ಯದಲ್ಲಿ ಹಾಸ್ಯ

By ಪ್ರಕಾಶ ರಾಜಗೋಳಿ, ಬೆಂಗಳೂರು
|
Google Oneindia Kannada News

''ನಗುವು ಸಹಜದ ಧರ್ಮ
ನಗಿಸುವದು ಪರಧರ್ಮ
ನಗುತ ಕೇಳುತ ನಗಿಸುವದತಿಶಯ ಧರ್ಮ'' - ಡಿ ವಿ ಜಿ
ಯಾಂತ್ರೀಕ್ರತ ಏಕತಾನದ ಬದುಕಿನಲ್ಲಿ ಹಾಸ್ಯ ಇದ್ದರೆ ಜೀವನ ಚೆನ್ನ. ನಾಳೆ ಹೇಗೋ ಏನೋ ಅನ್ನುತ್ತಾ ಇಂದಿನ ರಸ ನಿಮಿಷಗಳ ಸ್ವಾದ ತೆಗೆದುಕೊಳ್ಳದೆ ಎಷ್ಟೋ ಸಲ ನಾವು ವಂಚಿತರಾಗುತ್ತೇವೆ.
ಪ್ರಸ್ತುತ ಸಂದರ್ಭಗಳಲ್ಲಿ ಪ್ರತಿಯೊಂದು ಲೆಕ್ಕಾಚಾರದ ಬದುಕಾಗಿ ಮಾರ್ಪಟ್ಟಿದೆ. ನಾವು ಮಾರ್ಕ್ಸ್(Exam marks)ವಾದಿಗಳಾಗಿ ಜೀವನದ ರಸಮಯ ನಿಮಿಷಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ದೈನಂದಿನ ಜೀವನದಲ್ಲಿ ನಗದೆ ಲಾಫ್ಟರ್ ಕ್ಲಬ್ಬಿಗೆ ಹೋಗಿ ದುಡ್ಡು ನೀಡಿ ನಗುವ ಪರಿಪಾಠ ಬಂದಿರುವದು ಎಂತ ವಿಪರ್ಯಾಸ ಅಲ್ಲವೇ? ಹಾಸ್ಯವು ನಗೆಹನಿಯಾಗಿ, ಚುಟುಕು, ಹರಟೆ, ಅಣಕ, ಪ್ರಹಸನವಾಗಿ ಪತ್ರಿಕೆಗಳ 'ಉಳಿದ' ಪುಟಗಳನ್ನು ತುಂಬಿಸುವ ಸಾಹಿತ್ಯವಾಗಿ, ಓದುಗರಿಗೆ ಲೈಟ್ ರೀಡಿಂಗನ್ನು ಒದಗಿಸುವ ಅನಿವಾರ್ಯತೆಯ ಸ್ಥಾನವನ್ನು ಪಡೆದಿದೆ.

ವೇದ, ಉಪನಿಷತ್ತು, ಪುರಾಣ, ಪುಣ್ಯಕತೆಗಳ ಚೌಕಟ್ಟಿನಲ್ಲಿ ಬೆಳೆದು ಬಂದ ಜೀವನ ಶೈಲಿಯಲ್ಲಿ ಹಾಸ್ಯಕ್ಕೆ ಅಷ್ಟೊಂದು ಪ್ರಾಧಾನ್ಯತೆ ಇರಲಿಲ್ಲ. ಹಿಂದಿನವರ ಕಟ್ಟುಪಾಡಿನ ಪಾಲನೆಯಿಂದಲೋ ಇಲ್ಲ ದೈವೀ ಭಯದಿಂದಲೋ ಹಾಗೆ ಇರಬಹುದು. ಆದರೆ ಬರುಬರುತ್ತಾ ನವಿರು ಹಾಸ್ಯಕ್ಕೆ ಇಂಬು ದೊರೆಯತೊಡಗಿತು.

ತ್ರಿಲೋಕ ಸಂಚಾರಿ ನಾರದ ಮಹರ್ಷಿ ದೇವತೆಗಳ ಬಗ್ಗೆ ಆಡುವ ಮಾತುಗಳು ನವಿರು ಹಾಸ್ಯಕ್ಕೆ ಎಡೆ ಮಾಡಿ ಕೊಟ್ಟವು. ಏನೇ ಹೇಳಿ ಭಾರತೀಯರು ನಮ್ಮ ದೇವಾನುದೇವತೆಗಳ ಬಗ್ಗೆ, ಅವರ ಜೀವನ ಶೈಲಿ, ಆಚಾರ ವಿಚಾರಗಳ ಬಗ್ಗೆ ಸ್ತುತಿ ಮಾಡುತ್ತಲೇ ಕಿಚಾಯಿಸುತ್ತೇವೆ. ಭಕ್ತರ ತಿಳಿ ಹಾಸ್ಯಕ್ಕೆ ದೇವರು ಮೆಚ್ಚುವದೂ ಉಂಟು. ನಾವು ಪ್ರಥಮ ವಂದ್ಯ ಗಣೇಶನನ್ನು ಚಿತ್ರಗಳಲ್ಲಿ, ಹಾಡುಗಳಲ್ಲಿ, ಲೇಖನಗಳಲ್ಲಿ, ಜೋಕ್ಸ್ ಗಳಲ್ಲಿ ಬಳಸಿಕೊಂಡಷ್ಟು ಬೇರೆ ದೇವರುಗಳ ಬಳಕೆ ಆಗಿಲ್ಲ ಎನ್ನಬಹುದು.

ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ಅಷ್ಟದಿಗ್ಗಜರಲ್ಲಿ ಒಬ್ಬನಾಗಿದ್ದ ತೆನಾಲಿ ರಾಮ ದೇವತೆ ಪ್ರತ್ಯಕ್ಷಳಾದಾಗ ಅವಳ ಬಗ್ಗೆ ಹಾಸ್ಯ ಮಾಡಿದರೂ ದೇವತೆ ಹಾಸ್ಯ ಕವಿಯ ಆಶೀರ್ವಾದ ನೀಡಲಿಲ್ಲವೇ? (ಸಾವಿರ ಮುಖದ ದೇವಿಯೇ ಶೀತವಾದರೆ ಎಲ್ಲ ಮೂಗುಗಳನ್ನು ಹೇಗೆ ಸಂಭಾಳಿಸುವೆ?)

ದಾಸರ ಪದಗಳಲ್ಲಿ ಅಲ್ಲಲ್ಲಿ ಸ್ವಲ್ಪ ಹಾಸ್ಯದ ಎಳೆಗಳು ಸಿಗುತ್ತವೆ. "ಡೊಂಕು ಬಾಲದ ನಾಯಕರೆ ನೀವೆನೂಟವ ಮಾಡಿದಿರಿ?" - ಪುರಂದರದಾಸರು

ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮ ಪ್ರಾಧಾನ್ಯತೆ ಪಡೆದ ಹಾಗೆ ಹಾಸ್ಯ ಸಾಹಿತ್ಯಕ್ಕೆ, ಹಾಸ್ಯ ಪ್ರಸಂಗಗಳಿಗೆ, ಹಾಸ್ಯ ಕಲಾವಿದರಿಗೆ ಉತ್ತೇಜನ ಸಿಗುತ್ತಾ ಬಂತು.

ತೀರಾ ಸಾಮಾನ್ಯ ವ್ಯಕ್ತಿಗಳನ್ನು ಜಗದ್ವಿಖ್ಯಾತಿಗೆ ಮುಟ್ಟಿಸುವ ತಾಕತ್ತು ಹಾಸ್ಯಕ್ಕಿದೆ. ಇತ್ತೀಚಿನ ಯಾವುದೇ ಪ್ರಮುಖ ಕಾರ್ಯಕ್ರಮಗಳಾದ್ರೂ ಹಾಸ್ಯಕ್ಕೆ ಸ್ವಲ್ಪ ಸಮಯ ಮೀಸಲಿಡುವ ಪರಿಪಾಠ ಆರಂಭವಾಗಿದೆ. ಇದು ಒಳ್ಳೆಯ ಬೆಳವಣಿಗೆ. ಪ್ರತಿ ವರ್ಷದ ಮೇ ತಿಂಗಳ ಮೊದಲ ರವಿವಾರದಂದು ವಿಶ್ವ ಹಾಸ್ಯ ದಿನವನ್ನು ಆಚರಿಸಲಾಗುತ್ತದೆ. ಹಾಸ್ಯ ಒಂದು ದಿನದ ಆಚರಣೆಗೆ ಸೀಮಿತವಾಗಿದ್ದಲ್ಲ, ಪ್ರತಿ ದಿನ, ಕ್ಷಣ ಹಾಸ್ಯ ಬದುಕಿಗೆ ಅವಶ್ಯ...

ವಿಶಿಷ್ಟ ಹಾಸ್ಯ ಶೈಲಿ

ವಿಶಿಷ್ಟ ಹಾಸ್ಯ ಶೈಲಿ

ತಮ್ಮ ವಿಶಿಷ್ಟ ಹಾಸ್ಯ ಶೈಲಿಯಿಂದ ಸಮಾಜದ ವಿಶೇಷವಾಗಿ ರಾಜಕಾರಣಿಗಳ ಓರೆಕೋರೆಗಳನ್ನು ತಿದ್ದಿದ ಮಾಸ್ಟರ್ ಹಿರಣ್ಣಯ್ಯ ಅವರ "ಲಂಚಾವತಾರ" ನಾಟಕ ಮರೆಯಲಾದೀತೇ?

ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಬೆಳೆಯಲು ಕನ್ನಡ ನಿಯತ ಕಾಲಿಕೆಗಳ ಕೊಡುಗೆಯೂ ಅಪಾರ. ನಿಗದಿತ ಅಂಕಣಗಳಲ್ಲದೆ ವರ್ಷಕ್ಕೊಂದು ಹಾಸ್ಯದ ಬಗೆಗಿನ ವಿಶೇಷಾಂಕ ಪ್ರಕಟಿಸುವದು ಹಾಸ್ಯಕ್ಕಿರುವ ಮಹತ್ವ ತಿಳಿಸುತ್ತದೆ. ಓದುಗರ ಒಳಗೊಳ್ಳುವಿಕೆಯ ಮಹತ್ತರ ಉದ್ದೇಶದೊಂದಿಗೆ ಆರಂಭವಾದ ಪ್ರಶ್ನೋತ್ತರ ಪುಟಗಳು ಕೆಲ ಸಾಪ್ತಾಹಿಕಗಳ ಪ್ರಮುಖ ಭಾಗವಾಗಿದ್ದು ಇತಿಹಾಸ. "ನೀವು ಕೇಳಿದಿರಿ?" ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಬೀಚಿಯವರ ಮೊನಚು, ಹಾಸ್ಯದ ಉತ್ತರಗಳಿಗೆ ಮಾರುಹೋಗದವರಿಲ್ಲ.

ಜಗದ್ವಿಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಆರ್ ಕೆ ಲಕ್ಷ್ಮಣ್ ಅವರಿಗೆ ಬುನಾದಿ ನೀಡಿದ್ದು ನಮ್ಮ ಕನ್ನಡದ "ಕೊರವಂಜಿ" ಪತ್ರಿಕೆ ಎನ್ನುವದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ ಅಲ್ಲವೇ?
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಎಲ್ಲ ಭಾಗಗಳಲ್ಲೂ ಪ್ರಕಟಗೊಂಡ ಪತ್ರಿಕೆಗಳು ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಬೆಳೆಯಲು ತಮ್ಮದೇ ಆದ ಕೊಡುಗೆ ನೀಡಿವೆ.

ಹಾಸ್ಯ, ಕೆಲವೊಮ್ಮೆ ಅಪಹಾಸ್ಯ ಅಥವಾ ಸಭ್ಯತೆಯ ಎಲ್ಲೆ ಮೀರುವ ದ್ವಂದ್ವಾರ್ಥ ಸಂಭಾಷಣೆಗಳಿಂದ ಕೂಡಿದ ಕೆಲವೊಂದು ನಾಟಕಗಳು ಇಂದಿಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಾಲ್ತಿಯಲ್ಲಿವೆ. ಇವು ಕೆಲ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿವೆ ಎನ್ನಬಹುದು. ಕನ್ನಡದ ಕೆಲ ಚಲನಚಿತ್ರಗಳೂ ಈ ಸಾಲಿಗೆ ಸೇರುತ್ತವೆ. ಲೇಖನ, ನಾಟಕ, ಸಿನೆಮಾಗಳ ಜೊತೆಗೆ ಹಾಡುಗಳು, ಹನಿಗವನಗಳು ಮತ್ತು stand up comedy ಕಾರ್ಯಕ್ರಮಗಳು ತಮ್ಮದೇ ಆದ ಕೊಡುಗೆ ಸಲ್ಲಿಸುತ್ತಿವೆ.

ಇನ್ನು ಜೋಕ್ಸ್ ಪುಸ್ತಕಗಳು, ಸಂಗ್ರಹಗಳೂ ಸಹ ನಮ್ಮ ಬದುಕಿನ ದುಗುಡಗಳನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತವೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬರುತ್ತಿದ್ದ ಕುಶವಂತ್ ಸಿಂಗ್ ರ ಜೋಕ್ಸ್ ಯಾರು ತಾನೇ ಮರೆಯಲು ಸಾಧ್ಯ? ಲಂಕೇಶ ಪತ್ರಿಕೆಯ ತುಂಟಾಟ ಅಂಕಣ ಮತ್ತು ನೀಲುವಿನ ಹನಿಗವನಗಳು ಅಂದಿನ ಪ್ರಮುಖ ಆಕರ್ಷಣೆ ಆಗಿದ್ದವು. ಸ್ಮಾರ್ಟ್ ಫೋನ್ ಗಳು ಇಲ್ಲದಿದ್ದಾಗ ರಸ್ತೆ ಇಲ್ಲವೇ ರೈಲು ಪ್ರಯಾಣಕ್ಕೆ ಒಳ್ಳೆಯ ಸಂಗಾತಿಗಳಾಗಿ ಈ ಜೋಕ್ ಪುಸ್ತಕಗಳು ಇದ್ದವು.

ಕನ್ನಡ ಸಾಹಿತ್ಯದಲ್ಲಿ ಹಾಸ್ಯ

ಕನ್ನಡ ಸಾಹಿತ್ಯದಲ್ಲಿ ಹಾಸ್ಯ

ಕನ್ನಡದಲ್ಲಿ ಹಾಸ್ಯ ಸಾಹಿತಿಗಳು ಅನೇಕರು ಆಗಿ ಹೋಗಿದ್ದಾರೆ ಮತ್ತು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ಪ್ರಮುಖರು ಅಂದ್ರೆ
1 ಕುವೆಂಪು(ಅಜ್ಜಯ್ಯನ ಅಭ್ಯಂಜನ, ಬೊಮ್ಮನಹಳ್ಳಿ ಕಿಂದರಿಜೋಗಿ),
2 ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಅಮೇರಿಕದಲ್ಲಿ ಗೊರೂರು),
3 ಕೈಲಾಸಂ - ತಂಜಾವೂರು ಪರಮಶಿವ ಕೈಲಾಸಂ (ಅಮ್ಮಾವ್ರ ಗಂಡ, ಬಂಡ್ವಾಳ್ವಿಲ್ಲದ್ಬಡಾಯಿ),
4 ಪು ತಿ ನ - ಪುರೋಹಿತ ತಿರುನಾರಾಯಣ ನರಸಿಂಹಾಚಾರ್,
5 ಜಿ ಪಿ ರಾಜರತ್ನಂ(ರತ್ನನ ಪದಗಳು),
6 ಎನ್ ಕೆ (ನಾನೀ ಕಾಕಾ) - ರೇಡಿಯೋ ನಾಟಕಗಳು,
7 ರಾಶಿ (ಡಾ. ಶಿವರಾಮ್) ಕೊರವಂಜಿ ಪತ್ರಿಕೆ,
8 ನಾ ಕಸ್ತೂರಿ (ಅನರ್ಥಕೋಶ),
9 ಸಿ ಪಿ ಕೆ - ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್,
10 ಲಾಂಗೂಲಾಚಾರ್ಯ (ಪಾ ವೆಂ ಆಚಾರ್ಯ) ಪದಾರ್ಥ ಚಿಂತಾಮಣಿ,
11 ವಾಯ್ ಎನ್ ಕೆ - ವೈ ಎನ್ ಕೃಷ್ಣಮೂರ್ತಿ (ವಂಡರ್ ಕಣ್ಣು),
12 ಬೀChi (ಬೆಳ್ಳಿ ತಿಮ್ಮನ ಸೃಷ್ಟಿಕರ್ತ),
13 ಅ ರಾ ಮಿತ್ರ (ಆರತಕ್ಷತೆ, ಬೆಸ್ಟ್ ಆಫ್ ಅ ರಾ ಮಿತ್ರಾ0,
14 ಎಂ ಎಸ್ ಸುಂಕಾಪುರ(ಜೀವನದಲ್ಲಿ ಹಾಸ್ಯ, ಕನ್ನಡ ಸಾಹಿತ್ಯದಲ್ಲಿ ಹಾಸ್ಯ),
15 ಪರ್ವತವಾಣಿ - ಪರ್ವತವಾಡಿ ನರಸಿಂಗರಾಯರು - ಅನುರಾಗ ಅರಳಿತು ಚಿತ್ರದಲ್ಲಿ ನಟಿಸಿದ್ದಾರೆ,
16 ಟಿ.ಸುನಂದಮ್ಮ (ಜಂಬದ ಚೀಲ, ಪೆಪ್ಪರಮೆಂಟು),
17 ಎಂ ಎಸ್ ನರಸಿಂಹಮೂರ್ತಿ (ವಿಶ್ವ ಮತ್ತು ವಿಶಾಲು ಪಾತ್ರಗಳ ಸೃಷ್ಟಿಕರ್ತ),
18 ಬೇಲೂರು ರಾಮಮೂರ್ತಿ (ಸಮಗ್ರ ಹಾಸ್ಯ),
19 ಭುವನೇಶ್ವರಿ ಹೆಗಡೆ (ಮುಗುಳು ಅಂಕಣಕಾರ್ತಿ),
20 ಸಂಪಟೂರು ವಿಶ್ವನಾಥ (ಹಾಸ್ಯ ಚಟಾಕಿ),
21 ಎಸ್ ಎನ್ ಶಿವಸ್ವಾಮಿ - ಸೇಲಂ ನಂಜುಂಡಯ್ಯ ಶಿವಸ್ವಾಮಿ (ನಗೆ ಬುಗ್ಗೆ), ಇತ್ಯಾದಿ

ಭಾರತದ ಖ್ಯಾತ ವ್ಯಂಗ್ಯ ಚಿತ್ರಕಾರರು

ಭಾರತದ ಖ್ಯಾತ ವ್ಯಂಗ್ಯ ಚಿತ್ರಕಾರರು

1. ಶಂಕರ್ (ಶಂಕರ್ಸ್ ವೀಕ್ಲೀ),
2. ಆರ್ ಕೆ ಲಕ್ಷ್ಮಣ್( ಟೈಮ್ಸ್ ಆಫ್ ಇಂಡಿಯಾ),
3. ವಿಜಯನ್, ರಾಜಿಂದರ್ ಪುರಿ (ದಿ ಸ್ಟೇಟ್‌ಸ್ಮನ್),
4. ಉನ್ನಿ, ರವಿಶಂಕರ್ (ದಿ ಇಂಡಿಯನ್ ಎಕ್ಸ್‌ಪ್ರೆಸ್),
5. ಅಬು ಅಬ್ರಹಾಂ (ಬ್ಲೀಜ್, ದಿ ಬಾಂಬೆ ಕ್ರಾನಿಕಲ್),
6. ಸುಧೀರ್ ತೈಲಾಂಗ್ (ಹಿಂದೂಸ್ತಾನ್ ಟೈಮ್ಸ್),
7. ಕೇಶವ, ಸುರೇಂದ್ರ (ದಿ ಹಿಂದು),
8. ಅಜಿತ್ ನಿನಾನ್(ಇಂಡಿಯಾ ಟುಡೇ),
9. ಆರ್ ಪ್ರಸಾದ್(ಔಟ್ಲುಕ್),
10. ಸಿ ಜೆ ಏಸುದಾಸನ್ (ಮಲೆಯಾಳಿ ಪತ್ರಿಕೆಗಳು),
11. ಮಾರಿಯೋ ಮಿರಾಂಡ(ದಿ ಇಲ್ಯೂಸ್ಟ್ರೇಟೆಡ್ ವೀಕ್ಲೀ ಆಫ್ ಇಂಡಿಯಾ)
12. ಬಿ ವಿ ರಾಮಮೂರ್ತಿ, ಬಿ ಜಿ ಗುಜ್ಜಾರಪ್ಪ ಉರ್ಫ್ ಗುಜ್ಜಾರ್, ಜೇಮ್ಸ್ ವಾಜ಼್ (ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ),
13. ನರೇಂದ್ರ, ಕಾಂತೇಶ ಬಡಿಗೇರ (ಸಂಯುಕ್ತ ಕರ್ನಾಟಕ),
14. ಹರಿಣಿ, ಪ್ರಕಾಶ್ ಶೆಟ್ಟಿ (ತರಂಗ, ಉದಯವಾಣಿ, ತುಷಾರ),
15. ಪಿ ಮಹಮ್ಮದ್ (ವಿಜಯ ಕರ್ನಾಟಕ)
16. ಮನೋಜ್ ಕುರೀಲ್, ಮಂಜುಲ್, ಪೊನ್ನಪ್ಪ, ಸುಧೀರ್ ದರ್
17. ಪಂಜು ಗಾಂಗುಲಿ, ಸತೀಶ್ ಶೃಂಗೇರಿ, ದಿನೇಶ ಕುಕ್ಕುಜಡ್ಕ,
18. ಸತೀಶ್ ಆಚಾರ್ಯ,
19. ಹುಬ್ಳೀಕರ್ (ಪ್ರಜಾಮತ), ದತ್ತಾತ್ರಿ, ಎಂ.ಎನ್, ಪದ್ಮನಾಭ, ಜನಾರ್ಧನಸ್ವಾಮಿ
20. ಬಿ ಜಿ ಎಲ್ ಸ್ವಾಮಿ (ಡಿ ವಿ ಜಿ ಅವರ ಮಗ)
21. ಬಾಳ್ ಠಾಕ್ರೆ ಮತ್ತು ರಾಜ್ ಠಾಕ್ರೆ
ಹನಿಗವನಗಳ ರಾಜ, ಚುಟುಕು ಚಕ್ರವರ್ತಿ, ಚುಟುಕು ಕವಿ ಎಚ್(ಹಟ್ಟಿಕುದ್ರು) ಡುಂಡಿರಾಜ್ ಅವರದ್ದೇ ಒಂದು ತೂಕ.

ಕನ್ನಡದಲ್ಲಿ ಸ್ಟಾಂಡ್ ಅಪ್ ಕಾಮೆಡಿ

ಕನ್ನಡದಲ್ಲಿ ಸ್ಟಾಂಡ್ ಅಪ್ ಕಾಮೆಡಿ

ಕನ್ನಡದಲ್ಲಿ ಸ್ಟಾಂಡ್ ಅಪ್ ಕಾಮೆಡಿ ಪ್ರಕಾರವನ್ನು ಜಗದ್ವಿಖ್ಯಾತ ಗೊಳಿಸಿದ ಪ್ರಮುಖರು: ಎಂ ಎಸ್ ನರಸಿಂಹಮೂರ್ತಿ, ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿ, ರಿಚರ್ಡ್ ಲೂಯಿಸ್, ಭಜಂತ್ರಿ, ಸುಧಾ ಬರಗೂರು, ಇಂದುಮತಿ ಸಾಲಿಮಠ, ಪ್ರೊ. ಕೃಷ್ಣೇಗೌಡ, ಮಿಮಿಕ್ರಿ ದಯಾನಂದ, ಯಶವಂತ ಸರದೇಶಪಾಂಡೆ, ವಾಯ್ ವಿ ಗುಂಡೂರಾವ್, ಮುಖ್ಯಮಂತ್ರಿ ಚಂದ್ರು, ಕಾರ್ತಿಕ್ ಪತ್ತಾರ್, ನಾಗರಾಜ್ ಕೋಟೆ, ಅಸಾದುಲ್ಲಾ ಬೇಗ್

ದಿ ವೀಕ್ ದಟ್ ವಾಸ್ ನಾಟ್, ಕಪಿಲ್ ಶರ್ಮ ಶೋ, ಮಜಾ ಟಾಕೀಸ್, ಮಜಾ ಭಾರತ, ಕಾಮೆಡಿ ಕಿಲಾಡಿಗಳು, ಊರ ಉಸಾಬರಿ ಮುಂತಾದ ಕಾರ್ಯಕ್ರಮಗಳು ಸಿಲ್ಲಿ ಲಲ್ಲಿ, ಪಾಪ ಪಾಂಡು, ದಂಡ ಪಿಂಡಗಳು, ಶ್ರೀಮಾನ್ ಶ್ರೀಮತಿ ತರಹದ ಧಾರಾವಾಹಿಗಳು ನಮ್ಮಲ್ಲಿ ನಗೆ ಉಕ್ಕಿಸಿ ಜೀವನದ ಜಂಜಡಗಳಿಗೆ ವಿರಾಮ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದೇ ಹೇಳಬೇಕು.

ಇಂಗ್ಲೀಷಿನಲ್ಲಿ ಬರುವ ಕಾಮೆಡಿ ಸೆಂಟ್ರಲ್, ಫಾಕ್ಸ್ ಕಾಮೆಡಿ ಟಿವಿ ಚಾನೆಲ್ಲುಗಳು ಹೆಸರುವಾಸಿಯಾಗಿವೆ. ಕನ್ನಡದಲ್ಲಿ ಹಾಸ್ಯಕ್ಕಾಗಿಯೇ ಉದಯ ಕಾಮೆಡಿ ಎನ್ನುವ ಚಾನೆಲ್ ಇದೆ. ತೆಲುಗಿನಲ್ಲಿ ಜೆಮಿನಿ ಕಾಮೆಡಿ, ಮಲಯಾಳಂ ನಲ್ಲಿ ಸೂರ್ಯ ಕಾಮೆಡಿ ಚಾನೆಲ್ಲುಗಳಿವೆ.

ಇಂಗ್ಲಿಷಿನಲ್ಲಿ ವರ್ಷಾನುಗಟ್ಟಲೆ ಪ್ರಸಾರಗೊಳ್ಳುವ ಕೆಲ ಪ್ರಮುಖ ನಗೆ ಧಾರಾವಾಹಿಗಳೆಂದರೆ ಫ್ರೆಂಡ್ಸ್, ಟು ಅಂಡ್ ಆ ಹಾಫ್ ಮೆನ್, ದಿ ಆಫೀಸ್, ದಿ ಬಿಗ್ ಬ್ಯಾಂಗ್ ಥೆರಿ, ಸೈನ್‌ಫೀಲ್ಡ್, ಸೌತ್ ಪಾರ್ಕ್, ಮಾಡರ್ನ್ ಫ್ಯಾಮಿಲೀ, ಶಿಟ್ಸ್ ಕ್ರೀಕ್ & ಪಾರ್ಕ್ಸ್ ಅಂಡ್ ರೆಕ್ರೇಷನ್ ಮುಂತಾದವು.

ಹಿಂದಿಯಲ್ಲಿ ಬರುತ್ತಿದ್ದ ನುಕ್ಕಡ್, ದೇಖ್ ಭಾಯಿ ದೇಖ್, ತೂ ತೂ ಮೈ ಮೈ, ಉಲ್ಟಾ ಪುಲ್ಟಾ, ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ, ವಾಗಲೇ ಕಿ ದುನಿಯಾ ಮುಂತಾದ ನಗೆ ಧಾರಾವಾಹಿಗಳನ್ನು ಮರೆಯಲು ಹೇಗೆ ಸಾಧ್ಯ?

ಹಾಸ್ಯದೊಂದಿಗೆ ಉತ್ತಮ ಸಂದೇಶ ನೀಡುವ ಕಾರ್ಟೂನ್ ಚಾನೆಲ್ಲುಗಳು ಮಕ್ಕಳಿಗೆ ಮುದ ನೀಡುತ್ತವೆ. ಪ್ರಮುಖವಾದವೆಂದರೆ ಪೋಗೋ, ನಿಕ್, ಕಾರ್ಟೂನ್ ನೆಟ್‌ವರ್ಕ್, ಕನ್ನಡ ಚಿಂಟು ಇತ್ಯಾದಿ. "ಟಿಂಕಲ್" ಕಾಮಿಕ್ಸ್ ನಿಯತಕಾಲಿಕೆಯನ್ನು ಮರೆಯಬಹುದೇ?

ನಾಟಕ, ಸಿನಿಮಾಗಳಲ್ಲಿ ಹಾಸ್ಯ

ನಾಟಕ, ಸಿನಿಮಾಗಳಲ್ಲಿ ಹಾಸ್ಯ

ನಾಟಕ (ಕಂಪನಿ ನಾಟಕ, ರೇಡಿಯೋ ನಾಟಕ ಇತ್ಯಾದಿ), ಯಕ್ಷಗಾನ, ಲಾವಣಿ, ದೊಡ್ಡಾಟ, ಪಾರಿಜಾತ, ಕೋಲಾಟದ ಪದ್ಯ, ಮದುವೆಯ ಹಾಡು, ವೀರಗಾಸೆ, ಬಯಲಾಟಗಳಲ್ಲಿ ಬರುವ ಹಾಸ್ಯ ಪಾತ್ರಗಳದ್ದು ಒಂದು ತೂಕ ಬೇರೆಯದೇ ಆಗಿರುತ್ತದೆ.

ಯಾವುದೇ ಸಿನೆಮಾ ತೆಗೆದುಕೊಂಡರೂ ಅಲ್ಲಿನ ಹಾಸ್ಯಗಾರರ ಪಾತ್ರ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರದೇ ಇರುವದಿಲ್ಲ. ನಾವು ಖ್ಯಾತ ನಟ ನಟಿಯರನ್ನು ಎಷ್ಟು ನೆನಪೀಡುತ್ತೇವೆಯೋ ಅಷ್ಟೇ ಹಾಸ್ಯ ಪಾತ್ರಧಾರಿಗಳನ್ನೂ ನೆನಪೀಡುತ್ತೇವೆ.

ಖ್ಯಾತ ಹಾಸ್ಯ ಕಲಾವಿದರು: ಚಾರ್ಲಿ ಚ್ಯಾಪ್ಲಿನ್, ಮಿಸ್ಟರ್ ಬೀನ್ (ರೋವನ್ ಅಟ್ಕಿನ್‌ಸನ್), ಮೆಹಮೂದ್, ಟುನ್ ಟುನ್, ಜಾನಿ ಲಿವರ್, ರಾಜು ಶ್ರೀವಾಸ್ತವ , ಅನುಪಮ ಖೇರ್, ಪರೇಶ್ ರಾವಲ್, ಅರ್ಚನಾ ಪೂರನ್ ಸಿಂಗ್, ಬಾಲಕೃಷ್ಣ, ದ್ವಾರಕೀಶ, ನರಸಿಂಹರಾಜು, ಎನ್ ಎಸ್ ರಾವ್, ಕಾಶೀನಾಥ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ರೇಖಾ ದಾಸ್, ಧೀರೇಂದ್ರ ಗೋಪಾಲ್, ಜಗ್ಗೇಶ್, ಕೋಮಲ್, ಸಾಧು ಕೋಕಿಲ, ದೊಡ್ಡಣ್ಣ, ರಂಗಾಯಣ ರಘು, ಟೆನ್ನಿಸ್ ಕೃಷ್ಣ, ಸಿಹಿ ಕಹಿ ಚಂದ್ರು, ಬ್ಯಾಂಕ್ ಜನಾರ್ಧನ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಚಿಕ್ಕಣ್ಣ, ಕುರಿ ಪ್ರತಾಪ್ ಮುಂತಾದವರು ತಮ್ಮ ಹಾಸ್ಯ ಪಾತ್ರಗಳಿಂದ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.

ಕನ್ನಡದ ಕೆಲ ಹಾಸ್ಯ ಪ್ರಧಾನ ಚಿತ್ರಗಳನ್ನು ನೆನಪಿಸುವದಾದರೆ...ಗುರು ಶಿಷ್ಯರು, ಗಣೇಶನ ಮದುವೆ, ಗೋಲ್‌ಮಾಲ್ ರಾಧಾಕೃಷ್ಣ, ಕುರಿಗಳು ಸಾರ್ ಕುರಿಗಳು / ಕೋತಿಗಳು ಸಾರ್ ಕೋತಿಗಳು, ಅಧ್ಯಕ್ಷ, ನೋಡಿ ಸ್ವಾಮಿ ನಾವಿರೋದು ಹೀಗೆ, ಹಳ್ಳಿ ಮೇಷ್ಟ್ರು, ರಾಮ ಭಾಮಾ ಶ್ಯಾಮ , ಮಸ್ತ್ ಮಜಾ ಮಾಡಿ, ಗಣೇಶ್ ಸುಬ್ರಮಣ್ಯ

ನಗೆಯ ಪ್ರಕಾರಗಳು

ನಗೆಯ ಪ್ರಕಾರಗಳು

1. ಮುಗುಳ್ನಗೆ : ನಗೆ, ನಸುನಗೆ, ಮುಗುಳುನಗೆ, ಮಂದಹಾಸ, ಕಿರುನಗೆ, ಮಂದಸ್ಮಿತ
2. ಅಟ್ಟಹಾಸ : ಬಿರುನಗು,ಗಹಗಹಿಸಿ ನಗು,ಅಬ್ಬರದ ನಗು,ಕೇಕೆ ಹಾಕಿ ನಗು
3. ದೇಶಾವರಿ : ಹೆಚ್ಚಾಗಿ ರಾಜಕಾರಣಿಗಳು ಬಳಸುವ ನಗೆ
4. ಕುಹಕ ನಗೆ :
5. ಪರಿಹಾಸ ನಗೆ: ಉಪಹಾಸ, ತಮಾಷೆ,ಮಜಾ, ಕುಚೇಷ್ಟೆ,ಗೇಲಿ,ನಕಲಿ
6. ವ್ಯಂಗ್ಯನಗೆ : ಅಣಕ, ವಿಡಂಬನ, ವಿಪರ್ಯಾಸ, ಕಟಕಿ (ಕಟಕಿ ಮಾತು), ಕೊಂಕು
7 ನಿಷ್ಕಳಂಕನಗೆ / ಮುಗ್ಧನಗೆ
8 ಕಣ್ಣಂಚಿನ ನಗೆ,
9 ಮೊಗದಗಲ ನಗೆ,
10 ಸಂಕೋಚದ / ನಾಚಿಕೆಯ ನಗೆ,
11 ರಸಿಕ ನಗೆ / ಒಲವಿನಾಸ,
12 ವಿರಹದ ಹಾಸ,
13 ಅಸಂಬದ್ಧ ನಗೆ
14 ದ್ವಂದ್ವಾರ್ಥ ಸಂಬಂಧಿ ನಗೆ

ಹಾಸ್ಯಕ್ಕೆ ಮೀಸಲಾದ ಪತ್ರಿಕೆಗಳು.

ಹಾಸ್ಯಕ್ಕೆ ಮೀಸಲಾದ ಪತ್ರಿಕೆಗಳು.

ಕೊರವಂಜಿ (ಅಪರಂಜಿ-ಅಂತರ್ಜಾಲ ಪತ್ರಿಕೆಯಾಗಿ ಮಾರ್ಪಾಡು), ವಿಕಟ ವಿನೋದಿನಿ, ವಿನೋದ, ನಗುವನಂದ ಇವು ಹಾಸ್ಯಕ್ಕೆ ಮೀಸಲಾದ ಪತ್ರಿಕೆಗಳು.
ದೃಶ್ಯ ಮಾಧ್ಯಮ ಪ್ರಾಮುಖ್ಯತೆ ಪಡೆಯುವ ಮೊದಲು ಕ್ಯಾಸೆಟ್ಟುಗಳ ಮೂಲಕ ಹಾಸ್ಯ ಕ್ಷೇತ್ರಕ್ಕೆ ಕನ್ನಡದಲ್ಲಿ ತಮ್ಮ ಪಾಲು ಸಲ್ಲಿಸಿದ್ದಾರೆ. ಕೆಲ ಪ್ರಮುಖರೆಂದರೆ ಶಂ ಭು ಬಳಿಗಾರ್ (ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಗೋಧಿ ಹುಗ್ಗಿ ಗಂಗಯ್ಯ), ಹಾಸ್ಯ ಅಪಹರಣ, ಹಾಸ್ಯೋತ್ಸವ - ಮಿಮಿಕ್ರಿ ದಯಾನಂದ್, ದೇವಲೋಕದಲ್ಲಿ ದತ್ತು - ಮಾಸ್ಟರ್ ಹಿರಣ್ಣಯ್ಯ,

ಜೋಕ್ಸ್ ಸಂಬಂಧಿ ಪುಸ್ತಕಗಳನ್ನು ಹೊರತು ಪಡಿಸಿ ಕೆಲ ಪ್ರಮುಖ ಪುಸ್ತಕಗಳನ್ನು ನೆನಪಿಸಬೇಕೆಂದ್ರೆ
ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣ - ನಕಲಿ ನಾರಣಪ್ಪನಿಗೆ ನಗಿಸುವುದೇ ನಿರಂತರ ಹವ್ಯಾಸ
ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ
ನಾಡಕರ್ಣಿಯವರ ‘ಹಾಸ್ಯದ ಲಾಸ್ಯ' ಒಂದು ಉತ್ತಮ ಹಾಸ್ಯ ಸಾಹಿತ್ಯ ಕೃತಿ
ಬೀಚಿಯವರ ಬೆಳ್ಳಿ ತಿಮ್ಮನ ಕುರಿತಾದ ಹಲವಾರು ಪುಸ್ತಕಗಳು
ನಕ್ಕಾಂವ ಗೆದ್ದಾಂವ, ನಗ್ತಾ ನಲಿ ಅಳ್ತಾ ಕಲಿ - ಗಂಗಾವತಿ ಪ್ರಾಣೇಶ್
ಪೊಲೀಸ್ ಜೀವನದಲ್ಲಿ ಹಾಸ್ಯ - ಡಾ. ಡಿ ವಿ ಗುರುಪ್ರಸಾದ್
ಆಸ್ಪತ್ರೆಯಲ್ಲಿ ಹಾಸ್ಯ - ಡಾ. ಲೀಲಾವತಿ ದೇವದಾಸ್
ಸಮಯಾಭಾವದಿಂದ ಎಲ್ಲ ಪುಸ್ತಕಗಳ ಪಟ್ಟಿ ಮಾಡುತ್ತಿಲ್ಲ.
ಕನ್ನಡದ ಗಾದೆ ಮಾತುಗಳಲ್ಲಿ ನಾವು ಹಾಸ್ಯವನ್ನು ಕಾಣಬಹುದು. ಹೆಚ್ಚಿನ ಗಾದೆಗಳು ತಮ್ಮ ಧರ್ಮ, ಜಾತಿ ಅಥವಾ ಪಂಗಡಗಳ ಹೆಚ್ಚುಗಾರಿಕೆ ಹೇಳಲು ಬಹುಪಾಲು ಮೀಸಲಿವೆ. ಹೀಗಾಗಿ ಅವುಗಳನ್ನು ಕೈ ಬಿಡಲಾಗಿದೆ. ಕೆಲ ಗಾದೆಗಳು ವ್ಯಕ್ತಿಗಳ ಶಕ್ತಿ ಸಾಮರ್ಥ್ಯ, ಅಂಗಾಂಗಳ ವರ್ಣನೆಯಲ್ಲಿ ಮತ್ತೊಬ್ಬರ ತೆಗಳಿಕೆಗೆ ಮೀಸಲಾಗಿವೆ. ಅವುಗಳನ್ನು ಸಹ ಕೈಬಿಟ್ಟಿದ್ದೇನೆ. ಇನ್ನೂ ಕೆಲ ನಿರುಪದ್ರವಿ ಗಾದೆಗಳನ್ನು ನೋಡುವದಾದರೆ.

ಸಾಯ್ತೀನಿ ಸಾಯ್ತೀನಿ ಅನಕೋತ ಸಾವಿರ ಕೋಳಿ ತಿಂದನಂತೆ. ಮೊಲ ಎದ್ದಾಗ ನರಿಗೆ ಬೇಧಿ ಬಂದಿತ್ತಂತೆ. ಎಂದೂ ಇಲ್ಲದ ಮಾಣಿ ಅಮಾವಾಸ್ಯೆ ದಿನ ಓದೋಕೆ ಕೂತ. ಬಿದ್ರೂ ಮೀಸ್ ಮಣ್ಣಾಗಲಿಲ್ಲ ಅಂದಂತೆ. ಅಜ್ಜ! ಮದುವೆ ಅಂದ್ರೆ ನನಗೋ ಅಂದ
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ. ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ.
ನಗುವಿನ ಪ್ರಯೋಜನೆಗಳು

ನಗುವಿನ ಪ್ರಯೋಜನೆಗಳು

1. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
2. ನೋವನ್ನು ನಿವಾರಿಸುತ್ತದೆ
3. ಸಂಬಂಧಗಳನ್ನು ವೃದ್ಧಿಸುತ್ತದೆ / ಬಾಂಧವ್ಯ ಬೆಸೆಯುತ್ತದೆ
4. ಸಾಮಾಜಿಕ ಮನ್ನಣೆ ಸಿಗುತ್ತದೆ
5. ನಗು ಕೇಲೋರಿಗಳನ್ನು ಕರಗಿಸುತ್ತದೆ / ದೇಹದ ತೂಕ ಇಳಿಸಬಹುದು
6. ಹೃದಯದ ಆರೋಗ್ಯ ವೃದ್ಧಿಸುತ್ತದೆ
7. ನಗುವಿನಿಂದ ನಿರಾಳ ಭಾವ ಮೂಡುತ್ತದೆ
8. ಸಂಭಾಷಣೆಗಳಲ್ಲಿ ಹಗುರತೆ ನಿರ್ಮಾಣ
9. ಗ್ರಾಹಕ ಸ್ನೇಹಿ ವಹಿವಾಟು / ವ್ಯಾಪಾರ ವೃದ್ಧಿ
10. ಒಟ್ಟಿನಲ್ಲಿ ದೀರ್ಘಾಯುವಿಗೆ ದಾರಿಯಾಗುತ್ತದೆ
ಚಾರ್ಲಿ ಚಾಪ್ಲಿನ್ ಹೇಳಿರುವಂತೆ "A day without laughter is a day wasted" ಎನ್ನುವಂತೆ ನಗು ನಗುತ ಹೊಸ ವರ್ಷವನ್ನು ಸ್ವಾಗತಿಸೋಣ ಮತ್ತು ವರ್ಷ ಪೂರ್ತಿ ನಗುತ, ನಗಿಸುತ ಇರೋಣ.
"ಬಳಸಿದಂತೆಲ್ಲಾ ಬೆಳೆಯುವ ಅಕ್ಷಯ ಪಾತ್ರೆ "ನಗು" ಅಂತ ಬೀಚಿ ಹೇಳಿದ್ದಾರೆ ಅದೇ ರೀತಿ ನಾವೂ ಕೂಡ ನಗುತ್ತಾ ನಗಿಸುತ್ತಾ ಜೀವನ ಸಾಗಿಸೋಣ ಎನ್ನುತ್ತಾ ಹಾಸ್ಯಾವಲೋಕನಕ್ಕೆ ಪೂರ್ಣ ವಿರಾಮ ನೀಡುತ್ತೇನೆ.

English summary
How Comedy or Humor become part of Kannada Films, Literature and day to day life, What is the use of humor, Know more...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X