ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲನಾಗ ಯಾವದರ ಕನ್ಯಾ ಇದ್ದರ ನೋಡಪಾ!

By Prasad
|
Google Oneindia Kannada News

ಮೊನ್ನೆ ಮುಂಜ ಮುಂಜಾನೆ ನಾ ಏಳೊ ಪುರಸತ್ತ ಇಲ್ಲದ ನಮ್ಮ ಧಾರವಾಡ ಅಬಚಿ ಬಂದಿದ್ಲು. ಹಂಗ ಅಕಿ ನಮ್ಮ ಮನಿಗೆ ಬರೋದ ಭಾಳ ಅಪರೂಪ. ಹಂತಾದ ಎದ್ದ ಕೂಡಲೇ ಬೆಡ್ ಟೀಗೆ ನಮ್ಮ ಮನಿಗೆ ಬಂದಾಳ ಅಂದರ ಏನೋ ಭಾರಿ ಇಂಪಾರ್ಟೇಂಟ್ ಕೆಲಸ ಇರಬೇಕು ಅಂತ ಅನ್ಕೋಳೊದರಾಗ ನನ್ನ ಹೆಂಡ್ತಿ...

'ರ್ರಿ, ಲಗೂ ಏಳ್ರಿ ಮೌಶಿಗೆ ನಿಮ್ಮ ಕಡೆ ಮಾತೊಡದ ಅದ ಅಂತ' ಅಂತೇಳಿ ನಂಗs ಎಬಿಸಿದ್ಲು. ನಾ ಹಂತಾದ ಏನ ಬಂತಪಾ ಇಕಿಗೆ ನನ್ನ ಕಡೆ ಕೆಲಸ ಅಂತ ಎದ್ದ ಕ್ಯಾಮಾರಿಲೆ ವಿಚಾರ ಮಾಡಿದ್ರ...

'ಏನಿಲ್ಲಪಾ, ನನ್ನ ಮಗಗೂ ಎಲ್ಲೇರ ಒಂದ ಕನ್ಯಾ ನೋಡಿ ಲಗ್ನಾ ಮಾಡ್ತೀಯೊ, ಇಲ್ಲಾ ನಿಂದ ಒಬ್ಬಂದ ಲಗ್ನ ಆಗಿ, ಎರಡ ಮಕ್ಕಳಾದ್ವು ಅಂತ ನಿನ್ನ ತಮ್ಮಂದ ಏನ ಕಾಳಜಿ ಮಾಡಂಗೇಲೇನ್?' ಅಂತ ಅಗದಿ ಮನಸ್ಸಿಗೆ ಹಚಗೊಂಡ ಕೇಳಿದ್ಲು.

ಅಲ್ಲಾ ನಾವ ಇಲ್ಲೇ ಲಗ್ನಾ ಮಾಡ್ಕೊಂಡ ಯಾಕರ ಮಾಡ್ಕೊಂಡೇವೊ ಅಂತ ಮನಸಿಗೆ ಹಚಗೊಂಡರ, ಅಕಿ ತನ್ನ ಮಗಂದ ಲಗ್ನ ಆಗಿಲ್ಲಾಂತ ಮನಸಿಗೆ ಹಚಗೊಂಡಾಳ. ಪಾಪ ಏನ್ಮಾಡ್ತೀರಿ, ಹೆತ್ತ ಕರಳು, ಮಗಾ ತಿಂದ ಉಂಡ ಆರಾಮ ಅಡ್ಡಾಡೋದ ನೋಡಲಿಕ್ಕೆ ಆಗವಲ್ತ. ಅದಕ್ಕ ಅವನ ಕೊರಳಿಗೆ ಒಂದ ಗಂಟ ಹಾಕಲಿಕ್ಕೆ ಒಂದ ಸಮನ ಒದ್ದಾಡಲಿಕತ್ತಾಳ. [ಕನ್ಯಾ ಏನ ಗಿಡದಾಗ ಹುಟ್ಟತಾವ? ಮತ್ತಿನ್ನೇನ! ಬೇಕೇನ?]

Are brides available on Google for brahmin grooms?

ಅದರಾಗ ನಾ ಇವತ್ತ ಲಗ್ನಾ ಮಾಡ್ಕೊಂಡ ಎರಡ ಮಕ್ಕಳನ ಹಡದ ಸಂಸಾರದ ಜಾಡಗೂಡನಾಗ ಸಿಕ್ಕೊಂಡ ಒದ್ಯಾಡೊದರೊಳಗ ಅಕಿದು ಒಂದ ಸ್ವಲ್ಪ ಕೈವಾಡ ಇತ್ತ. ನಾ ಮಾಡ್ಕೊಂಡ ಕನ್ಯಾ ಅಕಿಗೆ ದೂರಿಂದ ಬಳಗ ಆಗಬೇಕಾಗಿತ್ತು. ಹಿಂಗಾಗಿ 'ಮುತ್ತಿನಂಥಾ ಹುಡಗಿ ಇದ್ದಾಳ, ಒಲ್ಲೇ ಅನಬ್ಯಾಡ ನಮ್ಮಪ್ಪಾ' ಅಂತ ಕನ್ಯಾದ್ದ ಫೋಟೊ, ಕುಂಡ್ಲಿ ಎಲ್ಲಾ ಇಕಿನ ತಂದ ಕೊಟ್ಟ, ನನ್ನ ಸಂಸಾರಕ್ಕ ಸಂಚಗಾರ ಕೊಟ್ಟ ಹೋಗಿದ್ಲು. ಹಿಂಗಾಗಿ ಅಕಿ ಪ್ರಕಾರ ಈಗ ಅಕಿ ಮಗನ ಮದವಿ ಮಾಡೋದ ನನ್ನ ಜವಾಬ್ದಾರಿ!

ಎಲ್ಲೇ ಭೆಟ್ಟಿ ಆದರೂ ನನ್ನ ಮಗಗ ಒಂದ ಕನ್ಯಾ ನೋಡ್ರಿ ಅಂತ ಗಂಟ ಬೀಳ್ತಿದ್ಲು. ಮೊನ್ನೆ ರಾಮು ಕಾಕಾ ಸತ್ತಾಗ ಮಾತಾಡಸಲಿಕ್ಕೆ ಹೋದಾಗ ಸಹಿತ ನಂಗ ಸೈಡಿಗ ಕರದ 'ಎಲ್ಲೇರ ವಾದಿಗೆ ಕನ್ಯಾ ನೋಡಿದೇನು' ಅಂತ ಕೇಳಿದ್ಲು. ಏನ್ಮಾಡ್ತೀರಿ. ಪಾಪ ಮಗನ ಲಗ್ನ ಆಗಿಲ್ಲಾ ಅಂತ ಯಾ ಪರಿ ಮನಸ್ಸಿಗೆ ಹಚಗೊಂಡಿದ್ಲು ಅಂತೇನಿ.

ಆತ ಇನ್ನ ಅಕಿ ಅದs ಪುರಾಣ ಶುರು ಮಾಡ್ತಾಳ ಅಂತ ನಾ ಅಕಿಗೆ 'ಏ, ಮೌಶಿ ನೋಡೋಣ ತೊಗೊ, ನೀ ಅಷ್ಟ್ಯಾಕ ಗಡಬಡಿ ಮಾಡ್ತಿ' ಅಂತ ಸಮಾಧಾನ ಮಾಡಲಿಕ್ಕೆ ಹೋದರ ಸಿಟ್ಟಿಗೆದ್ದ ನನಗ ಬೈಲಿಕತ್ಲು, 'ಏ, ದನಾ ಕಾಯೋನ. ಅವಂಗ ಮುವತ್ತಮೂರ ದಾಟಿ ಮುವತ್ತನಾಲ್ಕರಾಗ ಬಿದ್ದ ಒಂದ ವರ್ಷ ಆಗಲಿಕ್ಕೆ ಬಂತ, ಏನ ಸಣ್ಣ ವಯಸ್ಸನ ಅವಂದ' ಅಂತ ನಂಗ ಜೋರ ಮಾಡಿದ್ಲು. [ಹುಡಗಿ ಐಕ್ಯೂ ನೋಡಿ ಮದವಿ ಆಗ್ರೀಪಾ ಮತ್ತ!]

ಹಂಗ ಅಕಿ ಹೇಳೊದ ಖರೇನ, ಪಾಪ ನಮ್ಮ ವಾದಿಗೆ ಐದಾರ ವರ್ಷ ಆಗಲಿಕ್ಕೆ ಬಂತು ಒಂದ ಕನ್ಯಾ ಸಿಗವಲ್ವು. ಇದ್ದ ಬಿದ್ದ ಎಲ್ಲಾ ಕನ್ಯಾಕ್ಕೂ ಸಾಫ್ಟ್ ವೇರ ಇಂಜೀನಿಯರ್ ಬೇಕು. ಮ್ಯಾಲೆ ಬೆಂಗಳೂರ ಪೂಣಾದಾಗ ಇದ್ದ ವರಾನ ಬೇಕು. ಹಂಗ ವಾದಿ ನಮ್ಮಂಗ ಇಲ್ಲೆ ಒಂದ ಲೋಕಲ್ ಕಂಪನಿ ಒಳಗ ಕೆಲಸ ಮಾಡ್ಕೊಂಡ ತಿಂಗಳಾ 20-25 ಸಾವಿರ ಗಳಸ್ತಾನ. ಹಂಗ ಹುಬ್ಬಳ್ಳಿ ಲೇವಲಗೆ 25 ಸಾವಿರ ರಗಡ ಆತ ಖರೇ, ಆದರ ಏನ್ಮಾಡೋದ ಸಾಫ್ಟವೇರ ನೌಕರಿ ಇದ್ದರ ಇಷ್ಟ ನೌಕರಿ ಅಂತ ತಿಳ್ಕೊಂಡಾವ ನಮ್ಮಂದಿ ಕನ್ಯಾ.

Are brides available on Google for brahmin grooms?

ಅಂವಾ ಅಂತೂ ಈ ಕನ್ಯಾದ ಸಂಬಂಧ ಎಷ್ಟ ಬೇಜಾರ್ ಆಗ್ಯಾನ ಅಂದರ.. ಯಾರರ ಯಾವದರ ಕನ್ಯಾ ಗೊತ್ತಾತೇನಲೇ ಅಂತ ಕೇಳಿದರ, 'ನಮ್ಮ ಮಾರಿಗೆ ಯಾ ಮಂಗ್ಯಾಗೊಳ ಮಾಡ್ಕೋತಾರ' ಅಂತ ಸಿಟ್ಟ ಮಾಡತಾನ. ಪಾಪ ಅವನ ಪರಿಸ್ಥಿತಿ ನೋಡಿ ನಮ್ಮ ಅಬಚಿ ಮನಸ್ಸಿಗೆ ಹಚಗೊಂಡ ಕೊರಗಲಿಕತ್ತಾಳ.

ಕಡಿಕೆ ನಾ ಅದು-ಇದು ಹೇಳಿ ಸಮಾಧಾನ ಮಾಡಿದರ ನಮ್ಮ ಅಬಚಿ ನನಗ, 'ಅದೇನ ಗೂಗಲನಾಗ ಕನ್ಯಾ ಇರ್ತಾವಂತಲ್ಲಪಾ, ಅಲ್ಲೇರ ನೋಡಪಾ ಮಾರಾಯಾ, ಬ್ರಾಹ್ಮರದ ಬೇಕಂತಿಲ್ಲಾ, ಒಟ್ಟ ಕನ್ಯಾ ಇದ್ದರ ಸಾಕು' ಅಂದ್ಲು. [ನಮ್ಮ ಮನೆಯವರಿಗೆ Ig Nobel ಅವಾರ್ಡ ಕೊಡರಿ]

ನಾ ಗೂಗಲನಾಗ ಕನ್ಯಾ ಇರ್ತಾವ ಅಂದ ಕೂಡಲೆ ಒಮ್ಮಿಕ್ಕಲೇ ಗಾಬರಿ ಆದೆ. ಹಂಗ ಗೂಗಲನಾಗ ಯಾವಾಗಿಂದ ಕನ್ಯಾ ಸಿಗಲಿಕತ್ತವಪಾ ಅನಸಲಿಕತ್ತ. ಆಮ್ಯಾಲೆ ಕ್ಲೀಯರ್ ಆತ ಅಕಿ ಹೇಳಲಿಕತ್ತಿದ್ದ ಆ ವರಾ-ಕನ್ಯಾ ಡೀಲ ಮಾಡೋ ವೆಬ್ ಸೈಟನಾಗರ ಒಂದ ಕನ್ಯಾ ಹುಡಕಿ ಕೊಡು ಅಂತ ಪಾಪ ಅವಂದೊಂದ ಫೋಟೊ, ಪ್ರೋಫೈಲ ಎಲ್ಲಾ ಹಿಡ್ಕೊಂಡ ಬಂದಿದ್ಲು. ನಾ ಇನ್ನ ಮನಿ ತನಕಾ ಬಂದಾಳಂತ ಅವಂದೊಂದ ಪ್ರೋಫೈಲ ಎಲ್ಲಾದರಾಗೂ ಅಪಡೇಟ್ ಮಾಡಿ ಕಂಟ್ಯಾಕ್ಟ ಐಡಿ ನಂದ ಕೊಟ್ಟ ಇಟ್ಟೇನಿ.

ಆದರೂ ಈ ಕನ್ಯಾಗೊಳದ್ದ ಭಾಳ ಡಿಮಾಂಡ್ ಆಗೇದ ಬಿಡ್ರಿ, ಪಾಪ ನಮ್ಮ ಪೈಕಿ ವರಾ ಒಂದಿಷ್ಟ ಅಂತೂ ಎರಡನೇ ಸಂಬಂಧಕ್ಕೂ ಹೂಂ ಅಂತ ನಿಂತಾವ. ಆದರೂ ಅವಕ್ಕ ಮೂಸ ನೋಡೊರಿಲ್ಲದಂದ ಆಗೇದ.

ಅನ್ನಂಗ ಈ ಕನ್ಯಾಗೋಳದ ನಕರಾ ಅಂದ ಕೂಡಲೇ ನೆನಪಾತ. ಮೊನ್ನೆ ಉತ್ತರ ಭಾರತದ ಒಳಗ ಒಂದ ಕನ್ಯಾ ಲಗ್ನ ದಿವಸ ಗಂಡಗ ಮಗ್ಗಿ ಬರ್ತಾವಿಲ್ಲ ಅಂತ ಚೆಕ್ ಮಾಡಿ ಅವಂಗ ಎರಡರ ಮಗ್ಗಿ ಸಹಿತ ಬರಂಗಿಲ್ಲಾ ಅಂತ ಲಗ್ನಾ ಕ್ಯಾನ್ಸಲ್ ಮಾಡ್ಕೊಂಡ್ಲು ಅಂತ ಸುದ್ದಿ ಬಂದಿತ್ತ! ಏನ್ಮಾಡ್ತೀರಿ? [ಓಣ್ಯಾಗಿನ ಹೆಂಗಸ್ರಿಂದ ಕ್ರಾಸ್ಡ್ ಲೆಗ್ ಮೂವ್ಮೆಂಟ್!]

ಮೊನ್ನೆ ಮತ್ತೊಂದ ಮದುವಿ ಟೈಮ ಒಳಗ ಗಂಡಗ ಫಿಟ್ಸ್ ಬಂತಂತ. ಆ ಪುಣ್ಯಾತ್ಮ ಅಕಿಗೆ ಮೊದ್ಲ ಹೇಳಿದ್ದಿಲ್ಲಾ. ಕರೆಕ್ಟಾಗಿ ಅಕಿಗೆ ಇನ್ನೇನ ತಾಳಿ ಕಟ್ಟಬೇಕಿತ್ತ ಫಿಟ್ಸ್ ಬಂದ ಬಿದ್ದ ಬಿಟ್ಟಾ... ಸರಿ, ಅಕಿ ಅವನ್ನ ದಾವಾಖಾನಿಗೆ ಅಟ್ಟಿ ಅಲ್ಲೆ ಗೆಸ್ಟ ಅಂತ ಬಂದಿದ್ದ ಮತ್ತೊಬ್ಬನ ಕಟಗೊಂಡ್ಲಂತ. ಏನ್ಮಾಡ್ತೀರಿ?

ಹಂಗ ನಾ ಲಗ್ನ ಆಗಿ ಹದಿನೈದ ವರ್ಷದಾಗ ಎಷ್ಟ ಸರತೆ ಮೂರ್ಛೆ ಹೋಗೇನಿ ನಂಗ ಗೊತ್ತ. ನನ್ನ ಪುಣ್ಯಾನೋ ಪಾಪನೋ ಗೊತ್ತಿಲ್ಲಾ ಇನ್ನೂ ಹೆಂಡ್ತಿ ಬಿಟ್ಟ ಹೋಗಿಲ್ಲಾ. ಅಲ್ಲಾ ಆದರೂ ಮಾತ ಹೇಳ್ತೇನಿ, ಹಿಂಗ ಕನ್ಯಾಗೊಳ ಹುಡಗರನ ಆರಿಸಿಗೋತ ಹೊಂಟರ ನಮ್ಮ ಸಂಸ್ಕೃತಿ ಎಲ್ಲೆ ಉಳಿತದ ಅಂತೇನಿ?

English summary
Are brides available on Google for brahmin grooms? If at all available, please let us know! A humorous satire by Prashant Adur, Hubballi. It is true that brahmin brides are demanding software engineers only. Where should the grooms go?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X