ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಸರಕಾರದ ಹೊಸ ’ವೈರಾಗ್ಯ ಭಾಗ್ಯ’ ಯೋಜನೆ!

By ಬಾಲರಾಜ್ ತಂತ್ರಿ
|
Google Oneindia Kannada News

ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬರೀ 'ಭಾಗ್ಯ'ಳದ್ಡೇ ಕಾರುಬಾರು. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಯೋಜನೆಯಡಿಯಲಿ ಬರುವ ಬಡವ, ಬಲ್ಲಿದ, ಕಾಳಸಂತೆಕೋರ ಫಲಾನುಭವಿಗಳು 'ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ ಉದಾಹರಣೆಗಳು ಬಹಳಷ್ಟಿದ್ದರೂ ಸಿದ್ದರಾಮಯ್ಯನವರಿಗೆ ಹೊಸದೊಂದು 'ಭಾಗ್ಯ' ಕರುಣಿಸುವ ಯೋಚನೆ ಬಂದಿದೆ ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಈ ಜೀವ ಮತ್ತು ಈ ಅಧಿಕಾರವನ್ನು ಶಾಶ್ವತವಾಗಿ ಕಂಡವರಾರು? ಜನರಿಗೆ ಮಾಡುವುದು ಇದ್ದಿದ್ದೇ, ಇದ್ದಷ್ಟು ದಿನ ನಮ್ಮ ಜನಗಳ ಜೊತೆಗೆ ರಾಜಕೀಯವನ್ನೇ ನಂಬಿಕೊಂಡಿರುವವರಿಗೆ ಒಸಿ ಒಳ್ಳೆಯದನ್ನು ಮಾಡೋಣ ಎನ್ನುವ ಯೋಚನೆ ಇದ್ದಕ್ಕಿದ್ದಂತೆ ಮೊನ್ನೆ ದೀಪಾವಳಿ ಅಮವಾಸ್ಯೆ ರಾತ್ರಿಯಲ್ಲಿ ಸಿದ್ದುಗೆ ಬಂದಿತ್ತಂತೆ.

ಯೋಚನೆ ಬಂದಿದ್ದೇ ತಡ ಬಲಿಪಾಡ್ಯದ ದಿನ ಬೆಳ್ಳಂಬೆಳಗ್ಗೆ ಎದ್ದಿದ್ದೇ ತನ್ನ ಆಪ್ತರನ್ನು ಬ್ರೇಕ್ ಫಾಸ್ಟ್ ಮೀಟಿಂಗಿಗೆ ಸಿದ್ದು ಕರೆಸಿ, ರಾಜಕೀಯವನ್ನೇ ನಂಬಿದ ಜೀವಗಳು ಈ ರಾಜ್ಯದಲ್ಲಿ ಬೇಕಾದಷ್ಟಿವೆ. ಕಾರಣಾಂತರದಿಂದ ಮೂಲೆಗುಂಪಾಗಿ ವೈರಾಗ್ಯದಿಂದ ಬದುಕುತ್ತಿರುವುದನ್ನು ಕಂಡರೆ ಹೊಟ್ಟೆ ಚುರುಗುಟ್ಟುತ್ತಪ್ಪಾ..ಇವರಿಗೆ ನಾನು ಅಧಿಕಾರದಿಂದ ಇಳಿಯುವ ಮುನ್ನ ಏನಾದರೂ ಒಳ್ಳೆದನ್ನು ಮಾಡಬೇಕು ಎಂದು ತನ್ನ ಪರಮಾಪ್ತರಲ್ಲಿ ಭಿನ್ನವಿಸಿಕೊಂಡರಂತೆ.

ನಿಮ್ಮ ಮುಂದಲೋಚನೆ ಮತ್ತು ದೂರಾಲೋಚನೆಯಲ್ಲಿ ಏನೋ ಮರ್ಮ ಅಡಗಿದೆ. ಆದರೆ ಈ ಯೋಜನೆಯನ್ನು ಬರೀ ಕೈ ಪಕ್ಷದವರಿಗೆ ನೀಡಿದರೆ ಸರಿ ಬರಕಿಲ್ಲಾ. ಒಂದು ವೇಳೆ ಬರೀ ನಮ್ಮವರಿಗೆ ಮಾಡಿದರೆ ಕಮಲದ ಪಕ್ಷದವರು ಸುಮ್ನಿರಾಕಿಲ್ಲಾ ಮತ್ತು ಮೊದಲೇ ನಿಮ್ಮನ್ನು ಕಂಡು ಗುರ್ರ್ ಅನ್ನುತ್ತಿರುವ ದೇವೇಗೌಡ್ರು ಮುಕ್ಕಿಬಿಟ್ಟಾರು ಎಂದು ಪರಮಾಪ್ತರು ಸಿದ್ದು ಕಿವಿಗೆ ಊದಿದರಂತೆ.

A humorous article on Siddaramaiah Vairagya Bhagya Yojane

ಏನೂಂತ ಹೇಳ್ತೀರಾಪ್ಪಾ, ಅದು ಹೇಗೆ ಸಾದ್ಯ. ನಾನೇ ಕಾಂಗ್ರೆಸ್ ಪಕ್ಷ ಸೇರುವ ಮುನ್ನ ತೆನೆಹೊತ್ತ ಪಕ್ಷದಲ್ಲಿ ಮೂಲೆಗುಂಪಾಗಿರ್ಲಿಲ್ವಾ? ಇದು ಬರೀ ನಮ್ಮ ಪಕ್ಷದವರಿಗಲ್ಲಾ 'ಇದು ಎಲ್ಲಾ ಪಕ್ಷದಲ್ಲಿ ಹಲವಾರು ಕಾರಣಗಳಿಂದ ಮೂಲೆಗುಂಪಾಗಿರುವ ರಾಜಕಾರಣಿಗಳಿಗೆ' ಎಂದರಂತೆ.

ಸಿದ್ದು ಹೊಸ ಐಡಿಯಾಗೆ ಎಲ್ಲರೂ ಜೈ ಅಂದಿದ್ದೂ ಆಯ್ತು. ಎಲ್ಲರೂ ಸಹಮತ ನೀಡಿದ್ದಕ್ಕೆ ಸಂತಸಗೊಂಡ ಸಿದ್ರಾಮಣ್ಣ ನಾಳೆ ಮಾಡುವ ಕೆಲಸವನ್ನು ಇಂದೇ ಮಾಡು ಎಂದು ದೊಡ್ಡವರು ಹೇಳಿಲ್ವೇ? ಮೊದಲು ಈ ಹೊಸ ಯೋಜನೆಗೆ ಭಾಗ್ಯ ಹೆಸರು ಕೊನೆಯಲ್ಲಿ ಬರುವಂತೆ ಒಂದು ಸೂಕ್ತ ಹೆಸರು ಸೂಚಿಸಿ ಎಂದ್ರಂತೆ. ಪರಮಾಪ್ತರು ಸೂಚಿಸಿದ ಹೆಸರು ಒಪ್ಪಿಗೆಯಾಗದ ಕಾರಣ ಹೊಸ ಯೋಜನೆಗೆ "ವೈರಾಗ್ಯ ಭಾಗ್ಯ' ಎಂದು ಸ್ವತಃ ಸಿದ್ದುವೇ ನಾಮಕರಣ ಮಾಡಿದರಂತೆ.

ಈ ವೈರಾಗ್ಯ ಭಾಗ್ಯ ಯೋಜನೆಯಡಿಯ ಫಲಾನುಭವಿಗಳನ್ನು ಅಂತಿಮಗೊಳಿಸಲು ಕೆಲವೊಂದು parameter ಪಟ್ಟಿ ಮಾಡಿಕೊಂಡು ಒಂದೆರಡು ದಿನ ಬಿಟ್ಟು ಬನ್ನಿ ಎಂದು ಸಿದ್ದು ಸಭೆ ಬರ್ಖಾಸ್ತುಗೊಳಿಸಿ, ಎರಡು ದಿನಗಳ ನಂತರ ಮತ್ತೆ ಸಭೆ ಸೇರಿ ಚರ್ಚೆಗೆ ಕೂತು, ರಾಜಕೀಯದಲ್ಲಿ ಮೂಲೆಗುಂಪಾದವರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸೋಣ ಎನ್ನುವ ನಿರ್ಧಾರಕ್ಕೆ ಬರಲಾಯಿತಂತೆ.

1. ಕುಟುಂಬ ರಾಜಕಾರಣದಿಂದ ಸಿಡಿದೆದ್ದು ನಂತರ ಮೂಲೆಗುಂಪಾಗಿರುವವರು, 2. ಅಪ್ಪ ಮಕ್ಕಳ ರಾಜಕಾರಣದಿಂದ ಬೇಸತ್ತು ಪಕ್ಷದಿಂದ ಹೊರಬಂದು ನಂತರ ಮೂಲೆಗುಂಪಾದವರು, 3. ಹೈಕಮಾಂಡ್ ಸಂಸ್ಕೃತಿಯಿಂದ ಬೇಸತ್ತು ಮೂಲೆಗುಂಪಾದವರು ಮತ್ತು 4. ರಿಸಾರ್ಟ್ ರಾಜಕಾರಣ ಮಾಡಿ ನಂತರ ಮೂಲೆಗುಂಪಾದವರು ಹೀಗೆ ನಾಲ್ಕು ವಿಭಾಗಗಳನ್ನು ಮಾಡಿ ಸಂಬಂಧಪಟ್ಟ ರಾಜಕಾರಣಿಗಳನ್ನು ಅಯಾಯ ವಿಭಾಗಕ್ಕೆ ಸೇರಿಸಲು ನಿರ್ಧರಿಸಲಾಯಿತಂತೆ.

ಇದರಲ್ಲಿ ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲಿ ಇರುವುದರಿಂದ ಕಡಿಮೆ ಅನುದಾನ ನೀಡಲು ಮತ್ತು ಅಪ್ಪ ಮಕ್ಕಳ ರಾಜಕಾರಣದಿಂದ ಮೂಲೆಗುಂಪಾದ ರಾಜಕಾರಣಿಗಳಿಗೆ ಹೆಚ್ಚಿನ ಅನುದಾನ ನೀಡಲು ಸಿದ್ದು ಆಪ್ತರ ಸಭೆಯಲ್ಲಿ ನಿರ್ಧರಿಸಲಾಯಿತಂತೆ.

ವೈರಾಗ್ಯ ಭಾಗ್ಯ ಯೋಜನೆಡಿಯಲ್ಲಿ ಪ್ರಮುಖವಾಗಿ ರಾಜಕಾರಣಿಗಳು ಬಯಸುವ ನಗರದ ಹೊರ ವಲಯದಲ್ಲಿ 40X30 ಅಥವಾ 60X40 ನಿವೇಶನ, ಮನೆ ಕಟ್ಟಲು ಸಿಎಂ ನಿಧಿಯಿಂದ ಗರಿಷ್ಠ 50 ಲಕ್ಷದವರೆಗೆ ಬಡ್ಡಿರಹಿತ ಹಿಂದಿರುಗಿಸ ಬೇಕಾದ ಸಾಲ, ನಿಗಮ ಮಂಡಳಿಯ ಅಧಿಕಾರಿಗಳ ಜೊತೆಗೆ ವರ್ಷಕೊಮ್ಮೆ ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸ, ಫಿಲಂ ವೀಕ್ಷಿಸಲು ಐಪ್ಯಾಡ್, ರಾಜಧಾನಿಗೆ ಆಗಮಿಸಲು ರಾಜಹಂಸ ಪ್ರಯಾಣ ಭತ್ಯೆ (ವೊಲ್ವೋ ಬಸ್ಸುಗಳಲ್ಲಿ ಅಗ್ನಿ ಅವಗಢ ಹೆಚ್ಚಾಗುತ್ತಿರುವುದರಿಂದ), ಇತ್ಯಾದಿ.. ಇತ್ಯಾದಿಗಳನ್ನು ಪ್ರಮುಖವಾಗಿ ಈ ಯೋಜನೆಯ ಅನುದಾನದ ಪಟ್ಟಿಯಲ್ಲಿ ಸೇರಿಸಲು ಸಿದ್ದು ಮತ್ತು ಅವರ ಆಪ್ತರು ನಿರ್ಧರಿಸಿದರಂತೆ.

ಮುಂದಿನ ಕ್ರಮವಾಗಿ ಸರ್ವಪಕ್ಷಗಳ ಸಭೆ ಕರೆದು ಇದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಂತರ ರಾಜ್ಯಪಾಲರ ಅನುಮೋದನೆಗೆ ಕಳುಹಿಸೋಣ. ಅಲ್ಲಿಂದ ಅಪ್ರೂವಲ್ ಬಂದ ಮೇಲೆ ಮುಂದಿನ ಬಜೆಟಿನಲ್ಲಿ ಸಾವಿರ ಕೋಟಿ ಮೀಸಲಿಡಲು ಸಿದ್ದು ನಿರ್ಧರಿಸಿದರಂತೆ.

ಆದರೆ ಶಾದಿ ಭಾಗ್ಯ ಮತ್ತು ಮೂಢನಂಬಿಕೆ ನಿಷೇಧ ಕಾಯ್ದೆಗೆ ಜನರಿಂದ ವಿರೋಧ ವ್ಯಕ್ತ ವಾಗುತ್ತಿರುವ ಹಿನ್ನಲೆಯಲ್ಲಿ ಸಿದ್ದು ಅವರ ಮಹತ್ವಾಕಾಂಕ್ಷೆಯ 'ವೈರಾಗ್ಯ ಭಾಗ್ಯ' ಸ್ಕೀಂ ಘೋಷಣೆಗೆ ಸದ್ಯಕ್ಕೆ ಪೂರ್ಣ ವಿರಾಮ ಬಿದ್ದಿದಿಯಂತೆ ಎನ್ನುವ ಈ ಲೇಖನ ಸುಮ್ಮನೆ ಕಾಲೆಳೆಯುವ, ತರ್ಲೆ ಮತ್ತು ಕಪೋಕಲ್ಪಿತ ಲೇಖನವಾಗಿದ್ದು, ಯಾರೂ ಅನ್ಯಥಾ ಭಾವಿಸಬಾರದು ಎನ್ನುವುದು ನಮ್ಮ ಕೋರಿಕೆ.

English summary
A humorous article on Karnataka Chief Minister Siddaramaiah Vairagya Bhagya Yojane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X