ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 21ರ ಮೇಲೆ ರಿಯಲ್ ಎಸ್ಟೇಟ್ ಢಮಾರ್!

By Prasad
|
Google Oneindia Kannada News

Real estate will plunge after December 21
"ರೀ..." ಎನ್ನುವ ಕೂಗು ಹಿತ್ತಲಲ್ಲಿಂದ ಅಡುಗೆಮನೆ ದಾಟಿ, ಡೈನಿಂಗ್ ಹಾಲ್ ಕ್ರಾಸ್ ಮಾಡಿ, ಮುಂದಿನ ಕೋಣೆಯ ಹೊಸ್ತಿಲು ಜಂಪ್ ಮಾಡಿ ಬಂದು ಕೇಳಿದರೂ ಕೇಳದಂತೆ ಕುಳಿತಿದ್ದ... ಜಗತ್ ಜಿಪುಣರ ಜಿಪುಣ, ಚೀಟಿ ವ್ಯವಹಾರದಲ್ಲಿ ಟೋಪಿ ಹಾಕುವ ನಿಪುಣ, ಕಾಂಚಾಣ ವ್ಯವಹಾರದಲ್ಲಿ ಮಹಾ ಜಾಣ ಸುಬ್ಬರಾವ್ ಅಲಿಯಾಸ್ ಸುಬ್ಬು.

ಇದು ಆಗಲಾರದ ಮಾತೆಂದು ಸುಬ್ಬಿಯೇ ವರಾಂಡಾಕ್ಕೆ ಬಂದು ಪೇಪರ್ ಓದುವುದರಲ್ಲಿ ತಲ್ಲೀನನಾಗಿದ್ದ ಸುಬ್ಬುವಿನ ಕೈಯಿಂದ ಪೇಪರ್ ಕಿತ್ತುಕೊಂಡು "ಅಲ್ಲಿಂದ ಒದರಿದ್ದು ಕೇಳಲಿಲ್ಲೇನು? ಪೇಪರ್ ಓದ್ಕೋತ ಕೂತ್ರ ಮುಗ್ದ ಹೋತು" ಎನ್ನುವ ಅನುದಿನದ ಮಾತಿಗೆ "ಇಲ್ಲ" ಎಂದು ಹೇಳಿ ಸುಬ್ಬು ನಾಟಕವಾಡಿದ್ದ.

"ಪೇಪರ್ ಓದೋದು ಬಿಡ್ರಿ ಮದ್ಲ. ಕೇಳಿದ್ರೇನು, ನಮ್ ಅಬಚಿ ಮಗ ಗೋಪಾಲ ಹೊಸೂರು ರೋಡಿನ್ಯಾಗ ಫ್ಲಾಟ್ ಕೊಂಡಾನಂತ. ಬರೇ 25 ಲಕ್ಷ ರು.ಗೆ ತ್ರಿಬಲ್ ಬೆಡ್ರೂಮ್ ಮನಿ ತೊಗೊಂಡಾನಂತ. ಇಷ್ಟು ಕಡಿಮಿ ರೊಕ್ಕಾಕ ಎಲ್ಲಿ ಶಿಗತದ ಹೇಳ್ರಿ ಈ ಬೆಂಗಳೂರಿನ್ಯಾಗ?" ಎಂದು ಹೇಳಿ ನಾವೂ ಒಂದು ಇಂಥಾ ಫ್ಲಾಟು ಕೊಳ್ಳೋಣವೆಂಬಂತೆ ಸುಬ್ಬಿ ಪೀಠಿಕೆ ಹಾಕಿದ್ದಳು.

"ಹುಚ್ ಮಂಗ್ಯಾ ಇದ್ದಾನವ" ಅಂತ ಹೇಳಿ ಬೇಕಂತಲೆ ಸುಬ್ಬಿ ರಿಲೇಟಿವ್‌ನನ್ನು ಅವಮಾನ ಮಾಡುವಂತೆ ಸುಬ್ಬು ಹೇಳಿ ಸುಬ್ಬಿಯನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದ್ದ.

"ಅವಾ ಯಾಕ್ರೀ ಹುಚ್ ಮಂಗ್ಯಾ ಇದ್ದಾನ? ನೀವು ಇದ್ದೀರಿ ಹುಚ್ ಮಂಗ್ಯಾ. ಹೋದ್ ವರ್ಷಾನ ಹೇಳಿದ್ದೆ. ಅದ ಏರಿಯಾದಾಗ 15 ಲಕ್ಷ ರು. ಶಿಗತಿತ್ತು. ಈಗ ಇನ್ನೂ ತಡಾ ಮಾಡಿದ್ರ, ಮನಿ ತಗೊಳ್ಳೋದು ಕನಸ. ನನ್ ಹಣೆಬರಹ" ಅಂತ ಗೊಣಗಿಕೊಂಡಳು.

"ಎಬಡ ಅಂದ್ರ ಎಬಡಿ ಇದ್ದೀ ನೋಡು. ಡಿಶೆಂಬರ್ 21ರತನಕಾ ತಡಿ. ಆಮೇಲೆ ರಿಯಲ್ ಎಸ್ಟೇಟ್ ರೇಟೆಲ್ಲಾ ಬಿದ್ದುಹೋಗ್ತದ. ಆಮೇಲೆ ತೊಗೊಳ್ಳೋಣಂತ" ಅಂತ ಠೀವಿಯಿಂದ ಸುಬ್ಬು ಹೇಳಿದ.

"ಏನ್ರಿ ಅಂಥಾ ವಿಶೇಷ ಅದ ಡಿಶೆಂಬರ್ 21ರಂದು" ಸುಬ್ಬಿ ಪ್ರಶ್ನಾರ್ಥಕ ಚಿಹ್ನೆಯಾಗಿದ್ದಳು.

"ಅದಕ್ಕ ಹೇಳೋದು ಪೇಪರ್ ಓದಬೇಕು, ಜಗತ್ತಿನ ಆಗುಹೋಗುಗಳನ್ನು ತಿಳ್ಕೋಬೇಕಂತ. ನಿನ್ ಮಡ್ಡ ತಲೀಗೆ ಇಂಥಾದೆಲ್ಲಾ ಎಲ್ಲಿ ಗೊತ್ತಾಗಬೇಕು ಹೇಳು. ಕೇಳಿಲ್ಲೆ ಡಿಶೆಂಬರ್ 21ಕ್ಕ ಪ್ರಳಯ ಆಗ್ಲೀಕತ್ತೇದ ಗೊತ್ತಿಲ್ಲೇನು? ಮುಕ್ಕಾಲು ಭಾಗ ಜಗತ್ತು ಮುಳಿಗಿ ಹೋಗ್ತದಂತ. ಆಮೇಲಿನ್ನೇನು ಬೇಕಾದ್ದಂಥಾ ಸೈಟ್ ತೊಗೋ. ಎಲ್ಲಿ ಬೇಕು ಹೇಳು ಅಲ್ಲೇ ಕೊಡಸ್ತೀನಿ" ಅಂತ ಸುಬ್ಬು ತಾನೇ ಇಡೀ ಜಗತ್ತಿನ ರಾಜ ಎಂಬಂತೆ ಮಾತನಾಡಿದ.

"ಆಹಾ ನೀವೋ, ನಿಮ್ ತಲೀನೋ. ಶೋಕೇಶಿನ್ಯಾಗ ಇಡಬೇಕು. ಅಲ್ರೀ ಜಗತ್ತು ನಾಶವಾದರೆ ನಾವೆಲ್ಲಿ ಬದುಕಿರ್ತೇವಿ?" ಅಂತ ಪ್ರತಿಪಟ್ಟು ಒಗೆದಳು ಸುಬ್ಬಿ.

"ಅಲ್ಲೇ ಇರೋದು ನೋಡು. ಬೆಂಗಳೂರಿನ್ಯಾಗ ಸಮುದ್ರ ಅದನ, ಬೆಂಗಳೂರು ಮುಳಗಲಿಕ್ಕೆ? ಹೋಗ್ಲಿ ಭೂಕಂಪ ಆದ್ರೂ ಇಲ್ಲೇನು ಆಗಂಗಿಲ್ಲ. ಬೆಂಗಳೂರು ಕೆಳಗಿನ ತಳ ಗಟ್ಟಿ ಅದ. ಬೆಂಗಳೂರು ಅಗ್ದೀ ಸುರಕ್ಷಿತ ಅದ" ಅಂತ ಹೇಳಿದ.

"ಯಾರು ಹೇಳಿದ್ರೀ ನಿಮಗ, ಬೆಂಗಳೂರು ಇಡೀ ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ಜಾಗ ಅದ ಅಂತ? ಹೋಗ್ಲಿ ಪ್ರಳಯ ಆಗ್ತಂತಾದ್ರೂ ಏನು ಗ್ಯಾರಂಟಿ. ಯಾವೋ ಹೇಳಿದಾ, ನೀವು ಕೇಳಿದ್ರಿ" ಅಂತ ನೀವೊಬ್ಬ ಜಗತ್ತಿನ ಮಹಾ ಜುಗ್ಗ ಮಾತ್ರ ಅಲ್ಲ ಮಹಾ ಬುದ್ದು ಅಂತ ಲೇವಡಿ ಮಾಡಿದಳು ಸುಬ್ಬಿ.

"ಯಾರು ಯಾಕ ಹೇಳಬೇಕು? ನೋಡಿಲ್ಲೇನು ಟಿವಿದಾಗ ಪ್ರತಿದಿನ ಇದರ ಬಗ್ಗೇನ ಬೊಂಬಡಾ ಹೊಡೀಲಿಕತ್ತಾರ. ಸ್ವಾಮಿಗೋಳಂಥ ಸ್ವಾಮಿಗೋಳು ಪ್ರಳಯ ಆಗಬಾರದು ಅಂತ ಹೋಮಹವನ ಮಾಡ್ಲೀಕತ್ತಾರ. ಮನ್ನೆ ಯಾರೋ ದುಂಡಗಿನ ಭವಿಷ್ಯಕಾರರೊಬ್ಬರು ಲಕ್ಷದೀಪೋತ್ಸವ ಮಾಡದಿದ್ದರ ಪ್ರಳಯ ಆಗೇ ಆಗ್ತದಂತ ಹೇಳಿದ್ದು ಕೇಳಿಯಿಲ್ಲೋ" ಎಂದು ಪಕ್ಕದಮನೆಯವರಿಗೂ ಕೇಳುವಂತೆ ಕೂಗಿದ ಸುಬ್ಬು.

"ಅಯ್ಯ, ಸಾವ್ಕಾಶ ಮಾತಾಡ್ರೀ, ನಿಮ್ಮ ಬಾಯಿಗಿಷ್ಟು... ಕೋಡಿಮಠದ ಶ್ರೀಗಳು ಪ್ರಳಯ ಆಗೋದಿಲ್ಲ ಅಂತ ಅಭಯಹಸ್ತ ನೀಡ್ಯಾರ. ಟಿವಿದಾಗ ನೋಡಿಲ್ಲೇನು?" ಅಂತ ಸುಬ್ಬಿ ಟಾಂಗ್ ನೀಡಿದಳು.

"ಒಬ್ಬೊಬ್ರು ಜ್ಯೋತಿಷಿ ಒಂದೊಂದು ರೀತಿ ಮಾತಾಡ್ತಾರ. ಅವರನ್ನು ಕಂಡ್ರಿ ಇವರಿಗಾಗಂಗಿಲ್ಲ, ಇವ್ರನ ಕಂಡ್ರ ಅವರಿಗಾಗಂಗಿಲ್ಲ. ಅದೆಲ್ಲ ಗೊತ್ತಿಲ್ಲ ಪ್ರಳಯ ಆಗೋದಂತೂ ಗ್ಯಾರಂಟಿ" ಎಂದು ಪಟ್ಟು ಹಿಡಿದ ಸುಬ್ಬು.

"ಹೋಗ್ಲಿ ಇಪ್ಪತ್ತೆಂಟು ಮಂದೀಗೆ ಬಡ್ಡೀಗೆ ರೊಕ್ಕಾ ಕೊಟ್ಟೀರಲ್ಲ. ಅವರೂ ಪ್ರಳಯದಾಗ ಸಿಕ್ಕೊಂಡು ಗೊಟಕ್ ಅಂದ್ರ ಏನು ಮಾಡ್ತೀರಿ? ನಿಮ್ಮ ರೊಕ್ಕಾ ಗೋವಿಂದ ಗೋವಿಂದ" ಎಂದು ಕಿಸಕ್ಕನೆ ನಕ್ಕಳು ಸುಬ್ಬಿ.

"ನಗಬ್ಯಾಡ ನಗಬ್ಯಾಡ. ಅವರು ರೊಕ್ಕಾ ಕೊಡದ ಸತ್ರ ಏನಾತು. ಅವರ ಆಸ್ತೀ ಎಲ್ಲಾ ಅಡಾ ಇಡಿಸಿಕೊಂಡೇನಲ್ಲ. ಎಲ್ಯೋಗ್ತದ ರೊಕ್ಕಾ ಸಿಕ್ಕ ಸಿಗತದ" ಎಂದು ತನ್ನ ಬೆನ್ನು ಸುಬ್ಬು ತಾನೇ ತಟ್ಟಿಕೊಂಡ.

"ಏ ಭಾರೀ ಹ ನೀವು. ಏನರ ಆಗಲಿ. ಪ್ರಳಯ ಆಗಿ ಇದ್ದರ ಇರೋಣು, ಸತ್ತರ ಸಾಯೋಣು. ಅಷ್ಟರೊಳಗ ಕೆಲವೊಂದು ಆಶೆಗಳನ್ನಾದ್ರೂ ತೀರಿಶಿಕೊಂಡುಬಿಡೋಣು ಏನಂತೀರಿ?" ಅಂತ ಮೆತ್ತಗೆ ಕೇಳಿದಳು ಸುಬ್ಬಿ.

"ಏನು ಹೇಳಲಾ ತೀರಿಸೋಣಂತ" ಸುಬ್ಬುವೂ ಮೆತ್ತಗಾಗಿದ್ದ.

"ಪ್ರಳಯ ಆದ್ರ ಮುಂದ ಇರ್ತೇವೋ ಇಲ್ಲೋ, ನಾಳೆ ಹೋಗಿ ಒಂದು ರೇಶ್ಮಿ ಶೀರಿ, ಒಂದು ವಜ್ರದ ನೆಕ್ಲೇಸ್ ಕೊಡಿಶಿಬಿಡ್ರಿ. ಹೆಂಗಿದ್ರೂ ನಿಮ್ಮ ಲೆಕ್ಕಾಚಾರದ ಪ್ರಕಾರ ಪ್ರಳಯ ಆದಮ್ಯಾಲ ನಾವು ಭಾರೀ ಶ್ರೀಮಂತರಾಗೋವ್ರು ಇದ್ದೇವಿ" ಅಂತ ಹೇಳುತ್ತಿದ್ದಂತೆ...

"ಏ ಆಫೀಶಿಗೆ ತಡಾ ಆತು ನಡಿ ನಡಿ" ಎಂದು ಸುಬ್ಬು ಎದ್ದುಹೋಗಿಬಿಟ್ಟ.

(ಓದುಗರಲ್ಲಿ ವಿನಂತಿ : ಪ್ರಳಯದ ಬಗ್ಗೆ ನಿಮ್ಮ ಅನಿಸಿಕೆಯೇನು? ಅಗತ್ತೆ ಅಂತೀರಾ, ಇಲ್ಲ ಅಂತೀರಾ? ನಿಮಗೇನನ್ನಿಸುತ್ತೋ ಅದನ್ನು ಹಾಸ್ಯಧಾಟಿಯಲ್ಲಿ 250ಕ್ಕೂ ಪದಗಳು ಮೀರದಂತೆ ಬರೆದು ನಮಗೆ ಕಳಿಸಿ. ವಿಳಾಸ : [email protected])

English summary
Will the world going to doom on December 21, 2012? As per Subbu, Pralaya will happen on that day and real estate value to plunge after that. If you too are intending to buy any property in Bangalore, wait till doomsday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X