ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪು ಬಣ್ಣದ ಕಾಫಿ ಕಪ್ಪು ವಿಧಿವಶವಾದ ಪ್ರಸಂಗ

By Prasad
|
Google Oneindia Kannada News

Humor : Death of a coffee cup
ಇತ್ತೀಚಿನ ದಿನಗಳಲ್ಲಿ ಸಾಫ್ಟ್‌ವೇರ್‌ಗಳು ಹೋಗಲಿ, ಸರಕಾರಿ ಕಚೇರಿಗಳು ಕೂಡ ಕೆಲಸದ ಕಾರ್ಖಾನೆಗಳಂತಾಗಿವೆ. ಗಡಿಯಾರ ನೋಡಿ ಕೆಲಸ ಮಾಡುತ್ತಿದ್ದ ಕಾಲ ಎಂದೋ ಕಾಲವಾಗಿದೆ. ಸರಕಾರಿ ಕಚೇರಿಗಳೇ ಹೀಗಾದ ಮೇಲೆ ಖಾಸಗಿ ಕಂಪನಿಗಳೆಂದ ಮೇಲೆ ಕೇಳಬೇಕೆ? ಸದಾ ಕೆಲಸ ಕೆಲಸ ಮತ್ತು ಕೆಲಸ. ಇಂದಿನ ಕಾಲದಲ್ಲಿ ಎಷ್ಟು ದುಡಿದರೂ ಕಡಿಮೆಯೆ. ಕಂಪ್ಯೂಟರಿನ ಮೇಲೆ ಕಣ್ಣಿಟ್ಟು ಕೆಲಸದ ಆಳಕ್ಕಿಳಿದರೆ ಸಮಯದ ಪರಿವೆಯೇ ಇರುವುದಿಲ್ಲ.

ಹಾಗೆಂದ ಮಾತ್ರಕ್ಕೆ ಇಲ್ಲಿ ತಮಾಷೆಗಳಿಗೇನೂ ಬರವಿರುವುದಿಲ್ಲ. ಅವರಿವರನ್ನು ಗೋಳು ಹೊಯ್ದುಕೊಳ್ಳುವುದು, ಇವರವರ ಕಾಲು ಎಳೆಯುತ್ತಿರುವುದು ನಡೆದೇ ಇರುತ್ತದೆ. ಇನ್ನು ಬಾಸ್‌ಗೆ ಹಾಸ್ಯ ಪ್ರಜ್ಞೆ ಇದ್ದರಂತೂ ಮುಗಿದೇ ಹೋಯಿತು. ಅಲ್ಲಿ ತಮಾಷೆಯ ಸಂಗತಿಗಳಿಗೆ ಬರವಿರುವುದಿಲ್ಲ. ಸ್ವಲ್ಪ ಸಿಲ್ಲಿ ಅನಿಸಿದರೂ, ಖಾಸಗಿ ಕಂಪನಿಯೊಂದರಲ್ಲಿ ಸಹೋದ್ಯೋಗಿಗಳ ನಡುವೆ ನಡೆದ ಮಜವಾದ ಮತ್ತು ಹಾಸ್ಯಭರಿತವಾದ ಮಾತುಗಳ ಸರಣಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ತಲೆಬಗ್ಗಿಸಿ ಮಾಡುತ್ತಿರುವ ಕೆಲಸದ ನಡುವೆ ಇಂತಹ ಸಂಗತಿಗಳೂ ನಡೆಯುತ್ತಿರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಈಗ ಅನೇಕ ಕಂಪನಿಗಳಲ್ಲಿ ಪ್ಲಾಸ್ಟಿಕ್‌ಗೆ ಗುಡ್ ಬೈ ಹೇಳಲಾಗಿದೆ. ಹಾಗಾಗಿ, ಒಂದಾನೊಂದು ಕಾಲದಲ್ಲಿ ವಿತರಿಸುತ್ತಿದ್ದ ಮತ್ತು ನಂತರ ಚರಂಡಿ ಸೇರಿ ಪರಿಸರ ಮಾಲಿನ್ಯ ಮಾಡುತ್ತಿದ್ದ ಪ್ಲಾಸ್ಟಿಕ್ ಬಾಟಲಿ ಮತ್ತು ಚಹಾ, ಕಾಫಿ ಹೀರುವ ಕಪ್ಪುಗಳ ಬದಲಿಗೆ ಅವರೇ ಕಪ್ ತಂದಿಟ್ಟುಕೊಂಡು, ಕುಡಿದಾದ ಮೇಲೆ ಸ್ವಚ್ಛವಾಗಿ ತೊಳೆದಿಡುವುದು ವಾಡಿಕೆಯಾಗಿದೆ. ಹೀಗೇ ಒನ್ ಬ್ಯಾಡ್ ಡೇ ಕಾಫಿ ಹೀರಲೆಂದು ತಂದಿಟ್ಟುಕೊಂಡಿದ್ದ ಕೆಂಪು ಬಣ್ಣದ ಮಗ್ ಟೇಬಲ್ ಮೇಲಿಂದ ಜಾರಿಬಿದ್ದು ಇಪ್ಪತ್ತೆಂಟು ಚೂರುಗಳಾಗಿ ದಿಕ್ಕುದಿಕ್ಕಿಗೆ ಚೆಲ್ಲಾಪಿಲ್ಲಿಯಾಯಿತು.

ಕಂಪನಿಯ ನೌಕರರ ಚರ್ಚೆಯಾಗಿ ಇರುವ ಇಂಟ್ರಾನೆಟ್ಟಿನಲ್ಲಿ ಚರ್ಚೆ ಶುರುವಾಯಿತು. ಇಂಟ್ರಾನೆಟ್ಟಿನಲ್ಲಿ ಕಾಫಿ ಮಗ್ ಮಾಲಿಕರು ಹೀಗೊಂದು ತಮಾಷೆಯ ಸಂದೇಶ ರವಾನಿಸಿದರು. ಸಂದೇಶ ಇಂಟ್ರಾನೆಟ್ಟಿನಲ್ಲಿ ರವಾನೆಯಾಗಿದ್ದೇ ತಡ ಕನ್ನಡ ಪ್ರೇಮಿ ಉದ್ಯೋಗಿಗಳಿಂದ ಸಂತಾಪ ಸೂಚಕ ಸಂದೇಶಗಳು ರವಾನೆಯಾಗಲು ಪ್ರಾರಂಭವಾದವು. ನೆಟ್ಟಿನಲ್ಲಿಯೇ ಜೀವ ಕಳೆದುಕೊಂಡ ಕಪ್ಪಿಗೆ ಅಂತ್ಯ ಸಂಸ್ಕಾರವಾಯಿತು, ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಯಿತು. ಹಾಸ್ಯರಸದಿಂದ ತುಂಬಿ ತುಳುಕುತ್ತಿದ್ದ ಕೆಲ ನುಡಿಗಳು ಇಲ್ಲಿವೆ, ಓದಿರಿ.

ಗಜೇಂದ್ರ : "ಸುದೀರ್ಘ ಸಮಯದಿಂದ ಬಳಲುತ್ತಿದ್ದ ಕಾಫಿ ಕಪ್ ಒಂದು ಇಂದು ಮೇಜಿನ ಮೇಲಿನಿಂದ ಬಿದ್ದು ಚೂರು ಚೂರಾಗಿ ವಿಧಿವಶವಾಯಿತು ಎಂದು ತಿಳಿಸಲು ವಿಷಾದಿಸುತ್ತೇವೆ!"

ಕೃಷ್ಣ : "ಯಾವಾಗ ಅದರ ಅಂತ್ಯ ಸಂಸ್ಕಾರ? ಅದಕ್ಕೆ ಹೋಗುತ್ತೀರಾ?"

ಬಾಲವೇಣು : "ಅಂತ್ಯ ಸಂಸ್ಕಾರಕ್ಕೆಲ್ಲ ಹೋಗಲಾಗುವುದಿಲ್ಲ, ಒಂದು ನಿಮಿಷದ ಮೌನಾಚರಣೆ ಸಾಕು, ಏನಂತೀರಾ?"

ಸೀಮಾ : "ಅಯ್ಯೋ! ಪಾಪ ಬಿಗಿ ಕಾವಲಿದ್ದರೂ ಈ ರೀತಿ ಆಯ್ತಲ್ಲ. ಛೇ! ಅಂದ ಹಾಗೆ ಅದು ವಿಧಿವಶವಾಗುವುದಕ್ಕೆ ಕಾರಣಕರ್ತರು ಯಾರು?"

ಪ್ರಕಾಶ : "ಕಪ್ಪನ್ನು ಸರಿಯಾಗಿ ತೊಳೆಯದೆ ಅದರ ಮೇಲೆ ದಿನಾ ನಡೆಯುತ್ತಿದ್ದ ಅತ್ಯಾಚಾರದಿಂದ ಬೇಸತ್ತು ಕಪ್ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದೆ ಅಂತ ಕಾಣತ್ತೆ."

ಸೀಮಾ : "ಈ ಅಪವಾದವನ್ನು ವಿಧಿವಶವಾದ ಕಪ್ ಎಂದೂ ಸಹಿಸುವುದಿಲ್ಲ."

ಕೃಷ್ಣ : "ಸ್ವಯಂಕೃತ ಅಪರಾಧವೆಂದು ಕಾಣುತ್ತದೆ."

ತರುಣ್ : "ವಿಧಿಬರಹ ಎಂಥ ಘೋರ, ಕಪ್ಪು ದೂರ ದೂರ"

ಅಮರನಾಥ : "ಪ್ರಕರಣದ ಸಮಗ್ರ ತನಿಖೆಯನ್ನು 'ಸಿಬಿಐ ಲಕ್ಷ್ಮಿನಾರಾಯಣ'ಗೆ ಒಪ್ಪಿಸಿ, ಧನ್ಯರಾಗಿ!"

ಚಂದು : "ಏಕಾಗ್ರತೆಯಿಂದ, ತನ್ಮಯನಾಗಿ, ತದೇಕಚಿತ್ತದಿಂದ ಕೆಲಸ ಮಾಡುತ್ತಿದ್ದ ನನ್ನನ್ನು ಆ ಭಯಾನಕ ಗ್ಲಾಸ್ ಬಿದ್ದ ಸದ್ದು ಬೆಚ್ಚಿಬೀಳಿಸಿತು!"

ಕೃಷ್ಣ : "ಏಕಾಗ್ರತೆಗೆ ಭಂಗ ತಂದವರಿಗೆ ಶಾಪ ಹಾಕಬೇಡಿ...ಆಕಸ್ಮಿಕ ಅಪರಾಧವಲ್ಲ. ಏನಂತೀರಾ ಚಂದು?"

ಗಜೇಂದ್ರ : "ಅಮರನಾಥ ಅವರೆ, ಪಾಪ ಕಪ್‌ ಆತ್ಮಕ್ಕಾದರೂ ಶಾಂತಿ ಸಿಗಲಿ ಬಿಡಿ, ಸಿಬಿಐ ತನಿಖೆ ಎಂದರೆ ಸುಮ್ಮನೇನಾ?"

ಬಾಲವೇಣು : "ಹೋಗ್ಲಿ ಬಿಡ್ರೀ.. ತಲೆ ಕೆಡಿಸ್ಕೋಬೇಡಿ. ಮೃತರ ಗೌರವಾರ್ಥ ವೈಕುಂಠ ಸಮರಾಧಾನೆ ಮಾಡಿ ಎಲ್ಲರಿಗೂ ಒಂದು ಊಟ ಹಾಕ್ಸಿಬಿಡಿ."

ಸಿದ್ಲಿಂಗು : "ಊಟದ ಮಾತು ಆಮೇಲೆ. ಕಪ್ಪಿಗೆ ಅನ್ಯಾಯವಾಗಿದೆ. ಸತ್ಯಕ್ಕೆ ನ್ಯಾಯ ಸಿಗಬೇಕೆಂದರೆ 'ಸಿಬಿಐ ಲಕ್ಷ್ಮಿನಾರಾಯಣ'ರಿಂದ ಸಮಗ್ರ ತನಿಖೆಯಾಗಲೇಬೇಕು. ನಂತರ: ಎಲ್ಲರಿಗೂ ಒಂದು ಊಟ ಹಾಕ್ಸಿಬಿಡಿ."

ಗಜೇಂದ್ರ : "ಇನ್ನೂ ಅಂತ್ಯ ಸಂಸ್ಕಾರವೇ ಆಗಿಲ್ಲ. ಆಗಲೇ ಊಟಕ್ಕೆ ಸಿದ್ದರಾಗಿದ್ದೀರಲ್ಲ? ಮೊದಲು ಕಪ್ಪಿನ ಸಂಬಂಧಿಕರನ್ನು ಕರೆಸಿ. ಊಟ ಹಾಕಿಸಿರೆಂದು ಅವರನ್ನೇ ಕೇಳೋಣ."

ಬಾಲವೇಣು : "ಮಗಳನ್ನು ಮದುವೆ ಮಾಡಿ ಕೊಟ್ಟ ಮೇಲೆ, ಆಕೆ ಯಾವತ್ತಿದ್ದರೂ ಗಂಡನ ಮನೆಯ ಆಸ್ತಿ."

ದಿನೇಶ : "ಕಪ್ಪು ಕಪ್ಪು ಎಂದೇಕೆ ಕೊರಗುವಿರೋ.... ಹೋಗ್ಲಿ ಬಿಡಿ ಕಪ್ಪಿಗೆ ಒಂದು ಅಂತ್ಯ ಸಂಸ್ಕಾರ ಮಾಡೋಣ ಬನ್ನಿ."

English summary
If you think employees in software companies work like a machine? Think twice. There will not be dearth of humor. You may call it humorous or silly, here is an incident which may tickle your rib. Read this satire : Death of a coffee cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X