ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಿಣಿಗಳ ಜಾತಿ ರಾಜಕೀಯದ ವಿಡಂಬನೆ

By *ಬಾಲರಾಜ್ ತಂತ್ರಿ
|
Google Oneindia Kannada News

ಐದು ವರ್ಷದ ಅಧಿಕಾರವಧಿಯಲ್ಲಿ ಸೀಟುಗಳಲ್ಲಿ ಖೋಖೋ ಆಡುತ್ತಿರುವ ರಾಜಕಾರಣಿಗಳೀಗ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ವೋಟು ಹಾಕಿದ ತಪ್ಪಿಗೆ ಮತದಾರ ತೆಪ್ಪಗೆ ಕುಳಿತುಕೊಂಡಿದ್ದಾನೆ.

ವೋಟು ಹಾಕಿದ ಮತದಾರರ ಹಿತದೃಷ್ಟಿಯನ್ನು ಅರಿಯದೆ, ರಾಜ್ಯದ ಅಭಿವೃದ್ದಿಗೆ ಸ್ಪಂದಿಸದೇ ಜಾತಿ ಆಧಾರಿತ ಹೇಸಿಗೆ ರಾಜಕೀಯ ನಡೆಯುತ್ತಿರುವ ಈ ಸಂದರ್ಭದಲ್ಲಿ , ದೂರದೂರವಾಗಿರುವ ಎರಡು ಬಣಗಳನ್ನು ಒಟ್ಟಾಗಿಸಲು, ಪಕ್ಷದ ಮಾನ ಮರುವಾದೆ ಉಳಿಸಿಕೊಳ್ಳಲು ಹೈಕಮಾಂಡ್ ಈ ರೀತಿಯ ಸಂಧಾನ ಸೂತ್ರ ಮುಂದಿಟ್ಟರೆ ಹೇಗೆ ಎನ್ನುವ ಒಂದು ಹಾಸ್ಯ ವಿಡಂಬನೆ.. ಅಷ್ಟೇ..

ತಾರಕ್ಕೇರಿರುವ ರಾಜ್ಯ ಭಿನ್ನಮತೀಯ ಚಟುವಟಿಕೆಗೆ ಮಂಗಳ ಹಾಡಲು ಕೊನೆಗೂ ಹೈಕಮಾಂಡ್ ಮನಸು ಮಾಡಿದ್ದು ರಾಜಧಾನಿಗೆ ತನ್ನ ಇಬ್ಬರು ದೂತರನ್ನು ಕಳುಹಿಸಿದ್ದಾರೆ. ಆಡಳಿತ ಪಕ್ಷದ ಗುಂಡ ಮತ್ತು ವಿರೋಧ ಬಣದ ತಿಮ್ಮನ ಮತ್ತು ಅವರ ಬೆಂಬಲಿಗರನ್ನು ಪ್ರತ್ಯೇಕವಾಗಿ 21ಸುತ್ತು ಮಾತುಕತೆ ನಡೆಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿ ಇಬ್ಬರು ದೂತರು ದೆಹಲಿಗೆ ತೆರಳಿದ್ದಾರೆ.

ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಸಂಧಾನ ಸೂತ್ರದೊಂದಿಗೆ ಮತ್ತೆ ರಾಜ್ಯ ರಾಜಧಾನಿಗೆ ವಾಪಾಸ್ ಆಗಿದ್ದಾರೆ. ಗುಂಡ ಮತ್ತು ತಿಮ್ಮನ ಬಣಕ್ಕೆ ಹೈಕಮಾಂಡ್ ನೀಡಿದ ಸಂಧಾನ ಸೂತ್ರ ಮತ್ತು ಎಲ್ಲಾ ಖಾತೆಗಳನ್ನು ಹರಿದು ಹಂಚಿದ್ದು ಹೀಗೆ:

1. ಎರಡೂ ಬಣದ ತಲಾ ಐವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಕೆ. ಹಾಗಾಗಿ ರಾಜ್ಯದ ಆರು ಕೋಟಿ ಮಹಾಜನತೆಗೆ ಇನ್ನು ಮುಂದೆ ಒಟ್ಟು ಹತ್ತು ಉಪಮುಖ್ಯಮಂತ್ರಿಗಳನ್ನು ಕಾಣುವ ಮಹಾಯೋಗ.

2. ಸಾರಿಗೆ ಖಾತೆಯನ್ನು KSRTC ಮತ್ತು BMTC ಎಂದು ಇಬ್ಬಾಗ ಮಾಡಿ, ಕ್ರಮವಾಗಿ ತಿಮ್ಮ ಮತ್ತು ಗುಂಡನ ಬಣಕ್ಕೆ ನೀಡಲಾಗಿದೆ. ಆಯಾಯ ಖಾತೆಗೆ ಸಂಬಂಧ ಪಟ್ಟ ಭಡ್ತಿ, ಹಿಂಬಡ್ತಿ, ವರ್ಗಾವಣೆ, ಲಾಭ ಮತ್ತು ನಷ್ಟ ಆಯಾಯ ಬಣಕ್ಕೆ ಸೇರಿದ್ದು. ಇದಕ್ಕೆ ಯಾರೂ ಮೂಗು ತೂರಿಸುವಂತಿಲ್ಲ ಎಂದು ವರಿಷ್ಠರು ಕಟ್ಟಪ್ಪಣೆ ಮಾಡಿದ್ದಾರೆ.

3. ವಿತ್ತ ಖಾತೆ ನಿಭಾಯಿಸಲು ಇಬ್ಬರು ಸಚಿವರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಕೃಷಿ ಬಜೆಟ್ ಮತ್ತು ಲಕ್ಷ ಕೋಟಿಗೂ ಮೇಲಿನ ಆಯವ್ಯಯ ಬಜೆಟ್ ಮಂಡನೆಯನ್ನು ಯಾವ ಬಣದ ಸಚಿವರು ಮಂಡಿಸ ಬೇಕೆನ್ನುವುದನ್ನು ವರಿಷ್ಟರ ಸಮ್ಮುಖದಲ್ಲಿ, ಮಾಧ್ಯಮಗಳ ನೇರ ಪ್ರಸಾರದ ಮೂಲಕ ಟಾಸ್ ಹಾಕಿ ನಿರ್ಧರಿಸಲಾಗುವುದು. ಎರಡೂ ಬಣಗಳು ಈ ಸೂತ್ರಕ್ಕೆ ಸಮ್ಮತಿಸಿವೆ.

4. ಗಣಿ ಖಾತೆಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದು. ಬಳ್ಳಾರಿ, ಸಂಡೂರು, ಹೊಸಪೇಟೆ, ಚಿತ್ರದುರ್ಗ ಒಂದು ಭಾಗವಾದರೆ ರಾಜ್ಯದ ಉಳಿದೆಲ್ಲಾ ಭಾಗಗಳು ಇನ್ನೊಂದು. ಗುಂಡನ ಬಣಕ್ಕೆ ಬಳ್ಳಾರಿ ಮತ್ತು ಆಸುಪಾಸಿನ ಭಾಗ ನೀಡಿದ್ದಕ್ಕೆ ತಿಮ್ಮನ ಬಣ ತೀವ್ರ ವಿರೋಧ ವ್ಯಕ್ತ ಪಡಿಸಿತು.

ಮತ್ತೆ 21 ಸುತ್ತು ಮಾತುಕತೆ ನಡೆಸಿದ ವರಿಷ್ಠರು 20:20 ಸೂತ್ರದ (ಅಂದರೆ ಮೊದಲ ಇಪ್ಪತ್ತು ತಿಂಗಳು ಒಬ್ಬರು ನಂತರ ಇನ್ನೊಂದು ಬಣದವರು) ಮೂಲಕ ಈ ಖಾತೆಯ ಸಮಸ್ಯೆಯನ್ನು ಪರಿಹರಿಸಿಕೊಂಡರು.

5. ಮುಜರಾಯಿ ಖಾತೆಯನ್ನು ಕರಾವಳಿ ಕರ್ನಾಟಕ ವ್ಯಾಪ್ತಿಯ ದೇವಾಲಯಗಳು ಮತ್ತು ರಾಜ್ಯದ ಉಳಿದ ಭಾಗ ದೇವಾಲಯಗಳು ಎಂದು ಬೇರ್ಪಡಿಸಲು ಸೂತ್ರ ಮುಂದಿಟ್ಟಾಗ ಎರಡೂ ಬಣ ತೀವ್ರ ವಿರೋಧ ವ್ಯಕ್ತ ಪಡಿಸಿತು. ಶಾಪಗ್ರಸ್ತ ಈ ಖಾತೆಯ ಸಹವಾಸವೇ ಬೇಡ ಎಂದು ಎರಡೂ ಬಣಗಳು ಹಠ ಸಾಧಿಸಿದರಿಂದ ವರಿಷ್ಠರು ಬೇರೆ ದಾರಿ ಕಾಣದೆ ಆ ಖಾತೆಯನ್ನು ತನ್ನ ಸುಪರ್ದಿಯಲ್ಲೇ ಉಳಿಸಿಕೊಂಡಿತು.

6. ಕೃಷಿ ಖಾತೆಯನ್ನು ಇಬ್ಭಾಗಿಸಿ ಮುಂಗಾರು ಮಳೆಯ ನಂತರ ಮತ್ತು ಹಿಂಗಾರು ಮಳೆಯ ನಂತರ ಎಂದು ಪ್ರತ್ಯೇಕಿಸಿ ಗುಂಡ ಮತ್ತು ತಿಮ್ಮನ ಬಣಕ್ಕೆ ಹಂಚಲಾಯಿತು.

7. ಕ್ರೀಡಾ ಖಾತೆಯನ್ನು ಹರಿದು ಹಂಚಿ ಕ್ರಿಕೆಟ್ ಮತ್ತು ಇತರ ಕ್ರೀಡೆ ಎಂದು ಪ್ರತ್ಯೇಕಿಸಲಾಗಿದೆ. ಲಾಭದಾಯಕ ಕ್ರಿಕೆಟ್ ಖಾತೆಯನ್ನು ಯಾರಿಗೆ ನೀಡಬೇಕು ಎನ್ನುವುದಕ್ಕೆ ರಾಜ್ಯದ ಮಾಜಿ ಕ್ರಿಕೆಟ್ ಆಟಗಾರರ ಸಮಿತಿಯೊಂದನ್ನು ನೇಮಿಸಿ, ಆ ಸಮಿತಿಯ ಶಿಫಾರಸಿನ ಮೇಲೆ ಕ್ರಿಕೆಟ್ ಖಾತೆಯನ್ನು ಯಾರಿಗೆ ನೀಡ ಬೇಕೆಂದು ನಿರ್ಧರಿಸಲಾಗುವುದು.

ಎರಡೂ ಬಣದ ಕನಿಷ್ಠ 11 ಮಂದಿಗೆ ಬ್ಯಾಟ್ ಹಿಡಿಯಲಾದರೂ ಬರಬೇಕೆನ್ನುವ ಮೂಲ ನಿಯಮವನ್ನು ಹೈಕಮಾಂಡ್ ವಿಧಿಸಿದೆ.

8. ನೀರಾವರಿ ಇಲಾಖೆಯನ್ನು ಮುಖ್ಯಮಂತಿಗಳಿಗೆ ವಹಿಸಲಾಗಿದೆ. ರಾಜ್ಯದೆಲ್ಲಡೆ ಮಳೆಯೇ ಇಲ್ಲದಿರುವುದರಿಂದ ಈ ಖಾತೆಗೆ ಇಬ್ಬರು ಸಚಿವರನ್ನು ನೇಮಿಸುವುದು ರಾಜ್ಯದ ಹಿತ ದೃಷ್ಟಿಯಿಂದ ಒಳ್ಳೇದಲ್ಲ ಎನ್ನುವ ತೀರ್ಮಾನಕ್ಕೆ ವರಿಷ್ಠರು ಬಂದಿದ್ದಾರೆ.

9. ಅಬಕಾರಿ ಖಾತೆಯನ್ನು ಬಿಯರ್ ಮತ್ತು ಬಿಯರೇತರ ಎಂದು ವಿಭಾಗಿಸಲಾಗಿದೆ. ಬಿಯರ್ ಖಾತೆಯನ್ನು ಗುಂಡನ ಬಣಕ್ಕೆ ವಹಿಸಲಾಗಿದೆ. ಸಾಲದ ಸುಳಿಯಲ್ಲಿ ಇದ್ದರೂ ಗುಂಡನ ಬಣಕ್ಕೆ ಈ ಖಾತೆ ಲಭಿಸಬೇಕೆಂದು ಲಿಕ್ಕರ್ ಉದ್ಯಮಿಯೊಬ್ಬರು ಭಾರೀ ಲಾಭಿ ನಡೆಸಿದ್ದಾರೆ ಎಂದು ತಿಮ್ಮನ ಬಣ ಆರೋಪಿಸಿ ರಂಪ ರಾಮಾಯಣ ಮಾಡಿದೆ.

10. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಅಡುಗೆ ಅನಿಲ ಮತ್ತು ಇತರ ಖಾತೆಯಾಗಿ ಇಬ್ಭಾಗಿಸಲಾಗಿದೆ. ಈಗಿರುವ ಅಡುಗೆ ಅನಿಲ ಬುಕ್ಕಿಂಗ್ ಪದ್ದತಿಗೆ ತಿದ್ದುಪಡಿ ತಂದರೆ ಮಾತ್ರ ಆ ಖಾತೆ ವಹಿಸಲು ಸಿದ್ದ ಎಂದು ಎರಡೂ ಬಣಗಳು ಪಟ್ಟು ಹಿಡಿದಿದ್ದರಿಂದ ವರಿಷ್ಠರು ಇದಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಿದರು.

ಹೈಕಮಾಂಡ್ ಈ ಸೂತ್ರಕ್ಕೆ ಎರಡೂ ಬಣಗಳು ಸಮ್ಮತಿಸಿ ವಿಜಯೋತ್ಸವ ಆಚರಿಸಿದೆ. ಎರಡೂ ಬಣದ ಎಲ್ಲಾ ಶಾಸಕರುಗಳು ಸಚಿವರಾಗಿರುವ ಹಿನ್ನಲೆಯಲ್ಲಿ ಸಚಿವರುಗಳು ಅವರವರ ಬೆಂಬಲಿಗರು/ಅಭಿಮಾನಿಗಳಿಗೆ ಅರಮನೆ ಮೈದಾನದಲ್ಲಿ ಭರ್ಜರಿ ಬಾಡೂಟ ಆಯೋಜಿಸಿದೆ.

ಸರಿಯಾದ ಸಮಯದಲ್ಲಿ ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ಇದರ ಆಮಂತ್ರಣದ ತಲುಪದೇ ಇದ್ದ ಪಕ್ಷದಲ್ಲಿ ಇದನ್ನೇ ಆಮಂತ್ರಣ ಎಂದು ತಿಳಿದು ಬಂದು ತಿಂದು ತೇಗುವುದು ಎಂದು ಎಲ್ಲಾ ಸಚಿವರುಗಳು ಒಗ್ಗಾಟ್ಟಾಗಿ ಹೇಳಿಕೆ ನೀಡಿದ್ದಾರೆ.

English summary
A humor on caste politics of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X